ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್ : ಗಂಗೆ, ಗೌರಿ,.. ಭಾಗ–6

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್

ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್

ಹಸುವಿನ ಬಗೆಗೆ ಮಾತಾಡುವುದು ಸುಲಭ, ಆದರೆ ಸಾಕುವುದು ಖಂಡಿತಾ ಸುಲಭದ ಕೆಲಸವಲ್ಲ. ಕಂಡವರ ಬೈಗುಳ ತಿನ್ನದೆ, ಆದಾಯ ಮತ್ತು ಬಂಡವಾಳಕ್ಕೆ ಖೋತಾ ಬಾರದಹಾಗೆ ನಿಭಾಯಿಸಿಕೊಂಡುಹೋಗುವಲ್ಲಿ ಸಾಕಷ್ಟು ಕಸರತ್ತು ನಡಸಬೇಕಾಗುತ್ತೆ. ಅಮತಹ ಕಸರತ್ತುಗಳಲ್ಲಿ ಕೋಣ/ಎತ್ತುಗಳ ಬೀಜ ಒಡೆಯುವುದೂ ಒಂದು. ಕೊಬ್ಬಿದ ಕೋಣ,ಎತ್ತುಗಳನ್ನು ಸಕಾಲದಲ್ಲಿ ಬೀಜ ಒಡೆಯದೆ ಹೋದರೆ ಅಪಾಯದ ಜತೆಗೆ ಅವು ನಿರುಪಯುಕ್ತವೂ ಆಗುತ್ತವೆ. ಶೀಲ ಮಾಡುವುದು ಅಥವಾ ಬೀಜ ಒಡೆಯುವುದೆಂದರೆ ಒಂದು ಹೆರಿಗೆ ಮಾಡಿಸಿ ಬಾಣಂತಿ ಸಾಕಿದಷ್ಟು ಸಂಕಟದ ಕೆಲಸ. bulls-castrationಕೈಕಾಲುಕಟ್ಟಿ ಕೆಡೆದು ಇಕ್ಕುಳಗೋಲಿಗೆ ಅವುಗಳ ಕಾಳಿ/ಬೀಜ ಸಿಕ್ಕಿಸಿಕೊಂಡು ನಯವಾದ ಮತ್ತೊಂದು ಕೋಲಿನಿಂದ ನಯವಾಗಿಯೇ ಹೊಡೆದು ಹುಡಿಮಾಡುವ ಮೂಲಕ ನಡೆಸುವ ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಅವುಗಳ ಒದ್ದಾಟ ಕೇಳಬಾರದು. ಈ ಸಂದರ್ಭದಲ್ಲಿ ತರಡಿ(ವೃಷಣ)ನಲ್ಲಿ ಆಗುವ ಗಾಯ,ಆ ಗಾಯದ ಮೇಲೆ ಕೂರುವ ನೊಣ ಮತ್ತು ತಾಗುವ ಸಗಣಿಯಿಂದಾಗಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಹುಳ-ನೆತ್ತರು-ಕಾಗೆಯಕಾಟ-ಕೋಣದ ಸಂಕಟ ಇವುಗಳಿಂದ ಸಾಕಿದವರ ಪಜೀತಿ ಹೇಳತೀರದು. ಹಾಗೆಯೇ ಬೀಜ ಒಡೆಯುವಾಗಲೇ ಅವುಗಳ ಕೊಬ್ಬು ಕರಗಿಸುವ ಸಲುವಾಗಿ ಕಾದ ಕಬ್ಬಿಣದ ಸಲಾಕೆಯಿಂದ ಹಿಂಬಾಗಕ್ಕೆ ಎಳೆಯುವ ಬರೆ/ಚಾಟು ಯಿಂದಲೂ ಅವು ನರಕಯಾತನೆ ಅನುಭವಿಸುತ್ತವೆ. ಹಟ್ಟಿಯಲ್ಲಿ ಕುಳಿತು ಕಾಗೆ ಬಾರದ ಹಾಗೆ ಸ್ವಲ್ಪ ಜಾಗ್ರತೆ ಮಾಡದೇ ಹೋದರೆ ಶೀಲ ಮಾಡಿಸಿದವರು ಶೀಲವಾಗುವ ಸಾಧ್ಯತೆಗಳು ಇರುತ್ತವೆ. ಇಷ್ಟೆಲ್ಲಾ ಸರ್ಕಸ್ಸುಗಳನ್ನು ಮಾಡದೇ ಹೋದರೆ ನೇಗಿಲನ್ನು ಮದರ್ ಇಂಡಿಯಾ ಸಿನೆಮಾದಂತೆ ಅಪ್ಪ-ಅಮ್ಮನ ಹೆಗಲಿಗೋ,ಮಕ್ಕಳ ಹೆಗಲಿಗೋ ಇಡಬೇಕಾಗುತ್ತದೆ.

ಹಸುಗಳನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಂತೆ ಅವು ಸಾಧು ಪ್ರಾಣಿಗಳು. ಈ ಸಾಧು ಎಂಬ ಪದಕ್ಕೆ ಅಂತಹ ಅರ್ಥ ಸಾಧ್ಯತೆಯ ಶಕ್ತಿಯಿದೆಯೋ ಎನೋ ಗೊತ್ತಿಲ್ಲ? ಸಾಕುವವರ ಪಾಲಿಗೆ ಎಲ್ಲಾ ಹಸುಗಳಿಗೂ ಈ ಏಕರೂಪಿಯಾದ ಸಾಧು ಎನ್ನುವ ಮುಗ್ದ,ನಿರುಪದ್ರವಿ ಎಂಬಿತ್ಯಾದಿ ಅರ್ಥ ಬರುವ ಪದ ಸಾರಾಸಗಟಾಗಿ ಅನ್ವಯಿಸುವುದು ಕಷ್ಟ. ಒಂದುವೇಳೆ ಅನ್ವಯವಾಗುತ್ತದೆ ಎಂದು ಅವರು ಬಾಯಲ್ಲಿ ಹೇಳಿದರೂ ಕಾರ್ಯರೂಪದಲ್ಲಿ ಹಾಗಿಲ್ಲವೆಂಬುದು ಸತ್ಯ. ಅದಲ್ಲವಾದರೆ ಅವುಗಳ ಮೇಲೆ ಬಯಲಿನಲ್ಲಿಯೇ ಬಂದೀಖಾನೆಯಲ್ಲಿಟ್ಟಂತೆ ಆಡ್ಬಳ್ಳಿ, ಕುಂಟೆ, ಕಾಲು-ಕುತ್ತಿಗೆಗೆ ಬಳ್ಳಿ ಇತ್ಯಾದಿ ನಿರ್ಬಂಧದ ಪ್ರಯೋಗಗಳನ್ನು ಮಾಡುತ್ತಿರಲಿಲ್ಲ. ವಿಶೇಷವೆಂದರೆ ಈ ಬಹುಮಟ್ಟಿನ ನಿರ್ಬಂಧಗಳು ಹೆಣ್ಣು ಜಾತಿಯ ಹಸುಗಳಿಗೇ ಲಗಾವಾಗುತ್ತಿರುವುದು. ‘ಕಟ್ಬಳ್ಳಿಕುಟ್ದೊಣ್ಣಿ’ ಎಂಬ ನುಡಿಕಟ್ಟೊಂದು ನಮ್ಮಲ್ಲಿ ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವುದು. ಎತ್ತಲೂ ಹೋಗದ ಹಾಗೆ ಹಗ್ಗಹಾಕಿ ಮೇವಿಗೆ ಕಟ್ಟುವ ಇಲ್ಲವೇ ಕಟ್ಟಿದಲ್ಲಿಯೇ ಹಿಡಿಹುಲ್ಲು ಹಾಕಿ ಅಲ್ಲಿಯೇ ನಿರ್ಬಂಧಕ್ಕೊಳಪಡಿಸುವ ಕ್ರಮವಿದೆ. ಇದು ಸರಳವಾದ ಶಿಕ್ಷೆ. ಆದರೆ ಇದಕ್ಕಿಂತ ಉಗ್ರವಾದದು ಕೊರಳಿಗೆ ಕುಂಟೆಕಟ್ಟುವುದು (ನಮ್ಮ ನಡುವೆ ಬಹಳ ಉಡಾಫೆ ಮಾಡುವವನಿಗೆ ಮದುವೆ ಮಾಡುವುದನ್ನು ಹೀಗೆ ಕರೆಯುತ್ತಾರೆ). ಹಸುವಿನ ಉಡಾಫೆಯ ತೀವ್ರತೆಯನ್ನು ಆಧರಿಸಿ, tied-cowಅದರ ಸ್ವಭಾವಾನುಸಾರ ಹೀಗೆ ಕಟ್ಟಲಾಗುವ ಕೊರಡಿನ ಗಾತ್ರದಲ್ಲಿ ವೈವಿಧ್ಯವಿರುತ್ತದೆ. ಈ ಕುಂಟೆ ಕಟ್ಟಿದ ಮೇಲೆಯೂ ಹಾರಾಡುವ ಹಸುಗಳು ಕಾಲಿಗೆ ಏಟು ಮಾಡಿಕೊಳ್ಳುವ, ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸ್ಥಿತಿಯೂ ಉಂಟು. ಸಾಮಾನ್ಯವಾಗಿ ಕುಂಟೆ ಕಟ್ಟಲಾಗುವ ಹಸು ಸಾಧುವಾಗಿರುವುದಿಲ್ಲ. ಈ ಹರಾಮಿಗಳು ಯಾರ್‍ಯಾರದೋ ಗದ್ದೆಗೆ ನುಗ್ಗಲು ಬೇಲಿ ತೂರಿಕೊಂಡು ಹೋಗುವಾಗ, ದರೆ ಹಾರುವಾಗಲೆಲ್ಲಾ ಈ ಕುಂಟೆಯಿಂದಾಗಿಯೇ ಅವಗಡಕ್ಕೆ ತುತ್ತಾದುದೂ ಇದೆ. ಯಾಕೆಂದರೆ ಬೆಳೆಗೆ ನುಗ್ಗಿದ ಹಸುವನ್ನು ಪಿಶಾಚಿಯನ್ನು ಅಟ್ಟಿಸಿಕೊಂಡು ಬಂದಂತೆ ಬರುವವರೇ ಹೆಚ್ಚು ವಿನಹಾ, ಯಾರೊಬ್ಬರೂ ‘ಅಮ್ಮಾ ತಾಯಿ ಗೋಮಾತೆ ನಮ್ಮನ್ನು ಕಾಪಾಡು’ ಎಂದು ಕೈ ಮುಗಿದು ಸತ್ಕರಿಸಿ ಕಳುಹಿಸಿದ ಉದಾಹರಣೆಯಿಲ್ಲ. ಹೊಟ್ಟೆಗೆ ಬೀಳುವ ಪೆಟ್ಟಿಗೆ ಮನೆಯ ಹಸುವನ್ನೇ ದಂಡಿಸುವವರು, ಮಿಕ್ಕವರ ಹಸುವನ್ನು ಬಿಟ್ಟಾರೆ.? ಪಶುವೇನ ಬಲ್ಲುದು ಹಸುರೆಂದಳಸುವುದು ಎಂದು ಬಸವಣ್ಣನೇ ಹೇಳಿ ಮುಗಿಸಿದ್ದಾರೆ. ಎಳಸುವ ಹಸುವನ್ನು ಅಯ್ಯೊ ಪಾಪ ಆಸೆಪಟ್ಟಿತು, ಮೂಕಪ್ರಾಣಿಯೆಂಬ ಕರುಣೆಯೊಂದಿಗೆ ಕಾಣಬೇಕೆಂಬ ಬೋಧನೆಯನ್ನೇನೋ ಕೊಡಬಹುದು. ಆದರೆ ಅದು ಪ್ರಾಯೋಗಿಕವೇ? ಹಸುವೆಂದ ತಕ್ಷಣ ಸಾಕುವವರ ಪಾಲಿಗೆ ನಮ್ಮ ಮನೆಯಹಸು ತಾವುಬೆಳೆದಬೆಳೆ ಎಂಬ ಸಹಜ ಭಾವವಿದೆಯೇ ವಿನಹಾ ಸಾರ್ವತ್ರಿಕವಾದ ಒಂದು ಪಡಿಯಚ್ಚು ಇಲ. ಬೆಳೆದ ಬೆಳೆ, ಸಾಕುವ ಹಸುವೆಲ್ಲ ದೇವೆರೆನ್ನಲು ಸಾಧ್ಯವಾಗುವುದು ಬೆಲೆಬೆಳೆಯದ ಮತ್ತು ಒಂದೂ ಹಸುಸಾಕದವರಿಗಿರಬಹುದೋ ಏನೋ?

ಕುಂಟೆ ಕಟ್ಟುವುದರಿಂದಲೂ ನಿಯಂತ್ರಿಸಲಾರದಷ್ಟು ಹರಾಮಿಗಳಾದ ಹಸುಗಳಿಗೆ (ಹೆಚ್ಚಾಗಿ ಎಮ್ಮೆಗಳಿಗೆ) ಮುಂದಿನ ಕಾಲು ಕುತ್ತಿಗೆಗೆ ಸೇರಿಸಿ ಹಗ್ಗ ಕಟ್ಟಿ ತಲೆಎತ್ತಿ ನಡೆಯುವುದಿರಲಿ, ಮೂರೆ ಕಾಲಿನ ನಡಿಗೆಯ ಸರ್ಕಸ್ ಆಗುವಂತೆ ಮಾಡುವ ವಿಶೇಷಶಿಕ್ಷಾ ಕ್ರಮವೊಂದಿದೆ. ಹೀಗೆ ಬಳ್ಳಿ ಹಾಕಿದಾಗಲೂ ಬಿಟ್ಟು ಮೇಯಿಸುವ ವೇಳೆ ಕುಂಟಿಕೊಳ್ಳುತ್ತಲೇ ಬೆಳೆಗೆ ಬಾಯಿಟ್ಟು ಬೆನ್ನಿಗೆ ಬೀಳುವ ಏಟು ತಿಂದುಕೊಂಡು ಅವುಗಳು ಕುಂಟುತ್ತಾ ಓಡುವಾಗ ಅನುಭವಿಸುವ ಸಂಕಟವನ್ನು ನೋಡಬೇಕು. ಇದು ನೋಡುಗರಿಗೆ, ಸಾಕದವರಿಗೆ ಹಿಂಸೆಯೆನಿಸುತ್ತದೆ. ಆದರೆ ಈ ಹಿಂಸೆಯಿಲ್ಲದೆ ಅವುಗಳನ್ನು ಸಾಕುವುದೇ ದುಸ್ತರವೆಂಬುವುದೂ ಅಷ್ಟೇ ನಿಜ. ಮೂಗುದಾರ ಮತ್ತು ಅದಕ್ಕೆ ಹಾಕುವ ಹಗ್ಗ ಸಾಮಾನ್ಯವಾಗಿ ಕಾಣುವ ಶಿಕ್ಷೆ. ಇನ್ನು ಪಕ್ಕದ ಗದ್ದೆಯಲ್ಲಿ ಬೆಳೆಯಿದ್ದು ಉಳುಮೆ ಮಾಡಬೇಕಾದ ಸಂದರ್ಭದಲ್ಲಿ ಮತ್ತು ಬೆಳೆಗದ್ದೆಯ ಅಂಚನ್ನು ಹಾದು ಉಳುವ ಜಾನುವಾರುಗಳನ್ನು ಕೊಂಡೊಯ್ಯಬೇಕಾದ ಸಂದರ್ಭದಲ್ಲಿ ಅವುಗಳು ಬೆಳೆಗೆ ಬಾಯಿ ಹಾಕದಂತೆ ಕುಕ್ಕೆ ಕಟ್ಟುವ ಅಥವಾ ಬಾಯಿತೆರೆಯದಂತೆ ಹಗ್ಗ ಕಟ್ಟುವ ಪದ್ಧತಿಯಿದೆ. ಸಾದುಪ್ರಾಣಿಗೆ ಈ ಮಾದರಿಯ ಶಿಕ್ಷೆಗಳ ಅಗತ್ಯವಿದೆಯೇ?

ಕಲ್ಲಿನದೇವರೂ ಬೇಡುವ ಹಾಲು ‘ಅಮೃತಸದೃಶ’! ಅಂತಹ ಹಾಲನ್ನು ಕೊಡುವ ಹಸು ದೇವಲೋಕದ ಕಾಮಧೇನು ಎಂದೆಲ್ಲಾ ಅಂಬೋಣಗಳಿವೆಯಾದರೂ ಯಾವ ಹಸುವೂ ನನಗೆ ತಿಳಿದ ಮಟ್ಟಿಗೆ ತಂಬಿಗೆ ತೆಗೆದುಕೊಂಡು ಹೋದ ತಕ್ಷಣ ಜರ್ರನೆ ಹಾಲು ಸುರಿಸಿಬಿಡುವುದಿಲ್ಲ. ಹುತ್ತಕ್ಕೆ ಹಾಲೆರೆದಂತೆ ಹಸುವಿಗೆ ಲಗತ್ತುಗೊಂಡ ಜನಪದ ಐತಿಹ್ಯಗಳು ಹೇರಳವಾಗಿ ಸಿಗುತ್ತವೆಯಾದರೂ ಅದು ಹಾಲು ಸೂಸುವ ಸಹಜ ಪ್ರವೃತ್ತಿ ತೋರುವುದು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಎಳೆಯ ಕರುವಿಗೆ ಮಾತ್ರ. ಹಟ್ಟಿಗೆ ಕರೆಯಲು ಹೋಗುವ ಮುನ್ನ ಅದರ ಎದುರಿಗಿಷ್ಟು ಹಸಿಹುಲ್ಲು ಹರವಿಕೊಂಡು, ಕೆಚ್ಚಲು ತೊಳೆದು, ಬೆನ್ನು ಚಪ್ಪರಿಸಿ ಒಂದಿಷ್ಟು ಹೊತ್ತು ಎಳೆದ ಮೇಲೆಯೇ ಅದು ಹಾಲಿಳಿಸುವುದು.ಅದೂ ಸೀದ ಸಾದಾ ಹಸುವಾದರೆ ಮತ್ತು ಅದರ ಮನಸ್ಸಿಗೆ ನೆಮ್ಮದಿಯೆನಿಸಿದರೆ. ಅದರ ಮನಸ್ಸಿಗೆ ನೆಮ್ಮದಿ ಎನಿಸದಿದ್ದರೆ ಎಷ್ಟೇ ಎಳೆದರೂ ಹಾಲಿಳಿಸದೇ ಹೋಗಬಹುದು. brahma-cow-indiaಇಂತಹ ವಿಫಲಯತ್ನವನ್ನು ಬೆನ್ನು ಬೆನ್ನಿಗೆ ಮಾಡಿ ಸೋತಮೇಲೆ ಹಾಲುಕೊಡದ ತಪ್ಪಿಗೆ ಅದರ ಬೆನ್ನಿಗೆ ಎರ್ರಾಬಿರ್ರಿ ಹೊಡೆದು ಭಯಕ್ಕೊಳಪಡಿಸಿ ಹಾಲು ಕಸಿದು ತರುತ್ತಿದ್ದುದನ್ನು ನಾನೇ ಕಂಡಿದ್ದೇನೆ. ಮಾತ್ರವಲ್ಲ ಹಾಲು ಕೊಡದ ಹಸುವಿನ ಎದುರು ದೊಣ್ಣೆಹಿಡಿದು ಕುಳಿತು ಹೆದರಿಸಿ ಹಾಲು ಕರೆಯಲು ಸಹಕರಿಸಿದ್ದೇನೆ. ಕರುಸತ್ತ ದಿನವೂ ಸತ್ತ ಕರುವನ್ನು ಹಸುವಿನ ಎದುರಿಗಿಟ್ಟು ತೋರಿಸಿ ಅಂತಿಮ ದರ್ಶನಕ್ಕೆ ದಾರಿಮಾಡಿಕೊಟ್ಟು ಹಾಡಿಗೆ ಎಳೆದುಹಾಕಿ ಬಂದ ಬೆನ್ನಿಗೆ, ಅದರ ಕೆಚ್ಚಲು ತೂಕ ಇಳಿಸುವುದನ್ನು ಮರೆಯುವುದಿಲ್ಲ. “ಕರುಸತ್ತ ಬೇಗೆಯಲಿ ನಾ ಬೇಯುತ್ತಿದ್ದರೆ, ಮರುಕವಿಲ್ಲದೆ ಸತ್ತ ಕರುವ ತಂದು, ತಿರುತಿರುಗಿ ಮುಂದಿಟ್ಟು ಹಾಲು ಕರೆವೆ ನೀನು-ನೀನಾರಿಗಾದೆಯೋ?” ಎಂದು ಹಾಡಿದ ಡಿ.ಎಲ್.ಎನ್. ಅವರ ಕಾವ್ಯದ ಸಾಲುಗಳನ್ನು ವಾಸ್ತವವೆನ್ನದೆ ಬೇರೆ ದಾರಿಯಿದೆಯೇ? ಹಾಗಾಗಿ ಹಸು ಕಾಳಿಂಗನ ಸಿಪಾಯಿಶಿಸ್ತಿನ ಹಸುಗಳ ಹಾಗೆ ಕರೆದಾಕ್ಷಣ ಬಂದು ಬಿಂದಿಗೆ ತುಂಬುವಂತೆ ಹಾಲು ಸೂಸುವುದಲ್ಲ. ಬದಲಾಗಿ ಬಿಳಿಯ ದ್ರವವಾಗಿ ಪರಿವರ್ತಿತವಾದ ಅದರ ಕರುವಿಗಾಗಿರುವ ತ್ಯಾಜ್ಯವನ್ನು ನಾವು ಕಸಿಯುವುದು. ಬಹುಶ: ಈ ಕಸಿಯುವಿಕೆ ಬದುಕಿಗೆ ಅನಿವಾರ್‍ಯವೂ ಹೌದೇನೋ? ಈ ಅನಿವಾರ್‍ಯದ ಕಸಿಯುವಿಕೆ ಹಸಿವಿನ ಕೆಚ್ಚಲ ಮೇಲೆ ಪೂರ್ಣ ಸ್ವಾಮ್ಯವನ್ನು ಸ್ಥಾಪಿಸಿ ಅದರ ಕರುವಿನ ಆಹಾರದ ಹಕ್ಕು, ಹಸುವಿನಿಂದ ಅದು ನಿರೀಕ್ಷಿಸುವ ಪ್ರೀತಿಯನ್ನೂ ಕಸಿಯುತ್ತದೆ.

ನಮ್ಮ ಸ್ವತ್ತನ್ನು ಇನ್ನೊಬ್ಬರು ಅಪಹರಿಸುವುದು ಕಳವು. ಆದರೆ ಕಳವಿನ ಕುರಿತಾದ ನಿರ್ವಚನ ಇಷ್ಟನ್ನೇ ಹೇಳುವುದಿಲ್ಲ. ಕಳವು ಎನ್ನುವುದಕ್ಕೆ ಒಂದೊಂದು ಕಾಲದೇಶ ಪರಿಸರದಲ್ಲಿ ಒಂದೊಂದು ಅರ್ಥವಿರುತ್ತದೆ. ಕೆಲವೊಮ್ಮೆ ನಮ್ಮದನ್ನೇ ನಮಗೆ ಬೇಕಾದವರಿಗೆ ನಾವೇ ಕೊಡುವುದು ಕಳವಿನ ಅಪರಾಧಕ್ಕೆ ಸಮನಾಗುತ್ತದೆ. ಹಸುವು ತನ್ನ ಕರುವಿಗೆ ತನ್ನ ಕೆಚ್ಚಲಹಾಲನ್ನೇ ನಮ್ಮ ಅನುಮತಿ ವಿನಹಾ ಕುಡಿಯಗೊಟ್ಟು ಮುಕ್ತಸ್ವಾತಂತ್ರ್ಯವನ್ನನುಭವಿಸುವುದೂ ಕಳವುಅಪರಾಧವಾಗುವುದು ಈ ನಿರ್ವಚನದ ಮೇರೆಗೇ ಇರಬೇಕು!? ನ್ಯಾಯ,ನೀತಿ, ಅಪರಾಧ ಇವೆಲ್ಲವೂ ಯಜಮಾನಿಕೆಯ ಭಾಷಾರೂಪಗಳೇ ಅಲ್ಲವೇ? ಹಾಗಾಗಿ ಹಸುವಿನ ಚಟುವಟಿಕೆಯೂ ಮಾನವಲೋಕದ ನಿಯಮದ ಮೆರೆಗೆ ಕಳ್ಳತನದ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದಾಯಿತು. ಯಾವಾಗ ಹಸು ತನ್ನಿಂದ ಕಸಿಯುವ ಹಾಲನ್ನು ಪೂರ್ತಿಯಾಗಿ ಸಾಕಿದವರಿಗೆ ದಕ್ಕಲು ಬಿಡದೆ, ಒಂದಿಷ್ಟು ಕೆಚ್ಚಲಲ್ಲಿಯೇ ಉಳಿಸಿಕೊಂಡು ತಮ್ಮ ಮುದ್ದುಕರುಗಳಿಗೆ ಕದ್ದು ಕುಡಿಸುತ್ತದೆಯೋ ಆಗ ಅದು ಕಳ್ಳದನವಾಗುತ್ತದೆ. ಅದರ ವರ್ತನೆ ನಿಯಮಬಾಹಿರವೆನಿಸುತ್ತದೆ. ಇದನ್ನು ತಡೆಯುವ ಸಲುವಾಗಿಯೇ ಕೆಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಹೀಗೆ ಕಳ್ಳಟವಾಡುವ ಹಸುವಿನ ಕೈಗೆ ಕರುಗಳು ಸಿಕ್ಕದ ಹಾಗೆ ತಮ್ಮ ಸುಪರ್ದಿಯಲ್ಲಿಯೇ ಕರುಗಳನ್ನು ಕಣ್ಗಾವಲಿನಲ್ಲಿಯಿಟ್ಟುಕೊಳ್ಳುವುದು ಸಾಮಾನ್ಯ ಕ್ರಮ. ಸ್ವಲ್ಪ ಬೆಳೆದು ದೊಡ್ಡದಾದ ಕರುಗಳನ್ನು ಹುಲ್ಲು ತಿನ್ನಲು ಹೊರಗೆ ಬಿಡಬೇಕಾಗಿ ಬಂದಾಗ ಅಲ್ಲಿ ತಾಯಿಯೊಂದಿಗೆ ‘ಕಳ್ಳಸಂಬಂಧ’?ಹೊಂದದ ಹಾಗೆ ಅದರ ಮೂತಿಗೆ ಚುಳ್ಳಿ ಕಟ್ಟುವ ಕ್ರಮವೊಂದಿದೆ. ಚೂಪಾದ ತುದಿಗಳುಳ್ಳ ಕೋಲನ್ನು ತ್ರಿಕೋನಾಕಾರದಲ್ಲಿ ಸೇರುವಂತೆ ಕಟ್ಟಿ ಅದನ್ನು ಕರುವಿನ ಮೂಗಿನ ನೇರಕ್ಕೆ ಹೊರಸೂಸುವಂತೆ ಕಟ್ಟುವ ಮೂಲಕ ಕೆಚ್ಚಲಿಗೆ ಬಾಯಿಕ್ಕುವ ಮೊದಲೇ ಚುಳ್ಳಿಯಿಂದ ಕೆಚ್ಚಲು ಚುಚ್ಚುವಂತಾಗಿ ಕುಡಿಸಲು ಬಂದ ಹಸುವೇ ಜಾಡಿಸುವಂತೆ ಮಾಡುವ ವಿಶಿಷ್ಠ ಪ್ರಯೋಗವಿದು.ತನ್ನ ಹಕ್ಕನ್ನು ಪಡೆಯಲು ಬರುವ ಕರುವಿಗೆ ಕೊಡಲೆಂದು ನಿಂತ ಹಸುವೇ ಕೊಡಲಾಗದ ಸಂಕಟವನ್ನು ಅನುಭವಿಸುವಂತೆ ಮಾಡುವ ವಿಶಿಷ್ಟಶಿಕ್ಷಾಕ್ರಮವಿದು!

ಇಷ್ಟೆಲ್ಲಾ ಶಿಕ್ಷೆ ಕೊಡುವವರನ್ನು ಕಟುಕರೆನ್ನಬೇಕೆ? ಅವರಿಗೆ ತಾವು ಸಾಕುವ ಗೋವಿನ ಬಗೆಗೆ ಭಾವನೆಗಳೇ ಇಲ್ಲವೇ? ಖಂಡಿತಾ ಇಲ್ಲ. ಆದರೆ ಕರುವಿನ ಬಾಲ್ಯದ ಆಹಾರವನ್ನೇ ನಿಸರ್ಗಕ್ಕೆ ವಿರುದ್ಧವಾಗಿ ಕಸಿಯುವ ಅಪರಾಧವನ್ನು ಮಾಡಿ ಅರಿವಿರುವ ರೈತರು ಎಂದೂ ಗೋವಿನ ಬಗೆಗೆ ಉಪನ್ಯಾಸ ನೀಡುವುದಿಲ್ಲ. ಅವರ ಬಾವನೆಗಳು ವ್ಯಾವಹಾರಿಕ ಸತ್ಯವನ್ನೂ ಅರಗಿಸಿಕೊಂಡಿವೆ ಅಷ್ಟೆ. ಹಾಗಾಗಿಯೇ ಉಪಯೋಗದ ಚಕ್ರಕ್ಕಿಂತ ಆಚೆಗಿರುವ ಹಸು ಕರುವನ್ನು ವಿಕ್ರಯಿಸುವುದಾಗಲೀ, ಒಂದು ಹಸುವಿನ ಬದಲಿಗೆ ಮತ್ತೊಂದು ಹಸುವನ್ನು ತರುವುದಾಗಲೀ ಅವರಿಗೆ ವ್ಯಾವಹಾರಿಕ ಸತ್ಯ. ಅಲ್ಲಿ ಭಾವನೆಯೇ ಇಲ್ಲವೆಂದೇನೊ ಅಲ್ಲ. ಖಂಡಿತವಾಗಿಯೂ ಅವರೊಂದಿಗೆ ಭಾವನೆಯ ಬಹುದೊಡ್ಡ ಕೋಶವೇ ಇರುತ್ತದೆ. ಅನೇಕಬಾರಿ ಕರೆಯುವ ಇಲ್ಲವೇ ಉಳುವ ಹಸುವನ್ನು ಕೊಟ್ಟು ಊಟವನ್ನೇ ಮಾಡಲಾಗದ ಸಂಕಟವನ್ನು ಅನುಭವಿಸುವುದಿದೆ. ಹಟ್ಟಿಯಲ್ಲಿ ಖಾಲಿಯಾದ ಹಸು-ಕೋಣಗಳು ಮನೆಯನ್ನೂ ಖಾಲಿಯೆನ್ನುವ ಶೂನ್ಯಭಾವಕ್ಕೆ ತಳ್ಳುವುದುಂಟು. Cows-pastureಅಲ್ಲಿ ಮೆಚ್ಚಿನ ಪ್ರತೀಹಸುವನ್ನೂ ಮನೆಮಕ್ಕಳಂತೆ ಸಾಕಿ ಹಗ್ಗಹಾಕಿ ಕೊಡುವ ವೇಳೆ ಅತ್ತು ಮೈಸವರುವ ಭಾವನೆಯ ಒತ್ತಡವಿರುತ್ತದೆ. ಈ ಭಾವನಾತ್ಮಕ ಸಂಬಂಧ ಬರಿಯ ಹಸುಗಳ ಮೇಲಷ್ಟೇ ಅಲ್ಲ. ಜೀವಗಳನ್ನು ಪ್ರೀತಿಸುತ್ತಾ, ಜೀವಗಳನ್ನೇ ನಂಬಿಕೊಂಡ ಗೆಯ್ಮೆಯ ಬದುಕಿಗೆ ಸಾಕುವ ನಾಯಿ,ಬೆಕ್ಕುಗಳ ಮೇಲೆಯೂ ಅಷ್ಟೇ ಪ್ರಮಾಣದ ಭಾವನಾತ್ಮಕ ಸಂಬಂಧವಿರುತ್ತದೆ. ಉದಾಹರಣೆಗೆ ಕೋಳಿಅಂಕಕ್ಕಾಗಿ ಕೋಳಿಸಾಕುವವರು ಎಷ್ಟೋ ಮಂದಿ ತಾವು ಸಾಕಿದ ಕೋಳಿಯನ್ನು ಕೊಂದು ತಿನ್ನುವುದಿಲ್ಲ. ಅದೇ ಮಂದಿ ಕೋಳಿ ಅಂಕವಾಡುತ್ತಾರೆ. ಕೋಳಿಅಂಕದ ಕೋಳಿಯ ರುಚಿಯ ಬಗೆಗೆ ಉಪನ್ಯಾಸವನ್ನೇ ನೀಡಬಲ್ಲಷ್ಟು ರುಚಿಸಂಸ್ಕಾರವುಳ್ಳವರಾಗಿರುತ್ತಾರೆ. ಆದರೆ ಅವರು ಸಾಕಿದ ಕೋಳಿ ಅವರಿಗೆ ತಿನಿಸಾಗಿ ಕಾಣಿಸುವುದಿಲ್ಲ. ಆದರೆ ಈ ನಿಯಮವನ್ನು ಅವರು ಎಲ್ಲಾ ಕೋಳಿಗಳ ಮೇಲಾಗಲೀ, ಎಲ್ಲಾ ಮನುಷ್ಯರ ಮೇಲಾಗಲೀ ಹೇರಲಾರರು ಮತ್ತು ಹೇರಲಾಗದು. ಹಾಗಾಗಿ ಭಾವನೆಯ ಜತೆಗೆ ಅಲ್ಲಿ ಬದುಕಿನ ಸವಾಲು ಇದೆ. ‘ಹಾಲೂ….’ ಎಂದು ಹಸಿದು ಕೂಗುವ ಮಕ್ಕಳ ಕೂಗು ಇದೆ. ಕೆಚ್ಚಲ ಹಾಲೆಲ್ಲವನ್ನೂ ಹಸುವು ತನ್ನ ಕರುವಿಗೆ ಕುಡಿಸುವುದಾದರೆ ಸಾಕಬೇಕಾದರೂ ಯಾಕೆ? ಅದೇನು ಧರ್ಮಛತ್ರವೇ? ಹಸುವನ್ನು ಸಾಕುವುದೇ ಹಾಲಿಗೆ ಮತ್ತು ನೇಲಿಗೆ(ನೇಗಿಲಿಗೆ) ಎಂಬುದನ್ನು ಎಷ್ಟು ಅಲ್ಲಗಳೆದರೂ ವಾಸ್ತವ ಅಲ್ಲವೇ?

ಪ್ಯಾಕೇಟ್ ಹಾಲು ಕುಡಿದು, ಮೈತುಂಬಾ ಬಟ್ಟೆಹೊದ್ದು, ದೂಳು ಕಾಣದೆ ಬದುಕುವ ಜನ ಯೋಚಿಸುವ ಹಾಗೆ ಯೊಚಿಸಿದರೆ ಈ ಶಿಕ್ಷೆ, ನಿರ್ಬಂದ ಇವೆಲ್ಲದರಲ್ಲಿ ಅನಾಗರಿಕ/ಅಮಾನವೀಯವಾದ ಜಗತ್ತೊಂದು ಕಾಣಿಸಬಹುದು. ಆದರೆ ಈ ಅನಾಗರಿಕರಿಗೆ ಪ್ರಕೃತಿ-ಬದುಕು-ಸಂಘರ್ಷ-ಸಂಕಟಗಳ ಅರಿವಿದೆ.ಅವರೆಂದೂ ಅನುತ್ಪಾದಕವಾದುದನ್ನು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆಂದಾಗಲೀ, ಹೊತ್ತುಕೊಳ್ಳಿ ಎಂದಾಗಲೀ ಹೇಳಲಾರರು. ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಪೌಷ್ಟಿಕವಾದ ಆಹಾರ ಒದಗಿಸಲಾರದ ಈ ಜನ ಹಸುಕರುಗಳ ಮೂಲಕ ಬದುಕಿನ ಏಣಿಯನ್ನು ಕಾಣಬಲ್ಲ್ಲರೇ ವಿನಹಾ ಗರ್ಭಗುಡಿಯ ದೇವರನ್ನೊಂದೇ ಅಲ್ಲ. ಹಾಗಾಗಿ ಅವರಿಗೆ ಮೇವಿಕ್ಕುತ್ತಾ ಕೋಳಿಯ ಕಾಲಿಗೆ ಕೈಹಾಕಿ ಸಾರಿನ ಸರಕು ಮಾಡುವುದು ರೂಢಿಯಿದೆ. ಹಾಲು ಕೊಡದ ಹಸುವಿನ ಬೆನ್ನಿಗೆ ಬಾರಿಸಿ ಹಾಲು ಕಸಿಯಲೂ ಗೊತ್ತಿದೆ. ಅದೇ ಸಂದರ್ಭದಲ್ಲಿ ಅವರಲ್ಲಿ ಈ ವಾಸ್ತವಗಳ ಅರಿವಿನ ಜೊತೆಗೆ ಪ್ರೀತಿಯಿಂದ ಅವುಗಳ ಮೈದಡವಿ ಬದುಕಿನ ಸಮೃದ್ಧಿಯನ್ನು ಕಾಣುವ ಗುಣವೂ ಇದೆ. ಇಂದಿಗೂ ಮನೆಗೆ ಹೋದಾಗಲೆಲ್ಲಾ ಹಾಲಿನ ಯಂತ್ರವೇ ಆಗಿದ್ದರೂ ಆ ಮೂಕಪ್ರಾಣಿಗಳ ಮೈಸವರಿದಾಗ ಒಂದು ಸಂತೋಷವಿದೆ. ಅವುಗಳ ಮೂತಿಯ ಎದುರು ಹುಲ್ಲು ಹಿಡಿದು ತಿನ್ನಲು ಕೊಡುವಾಗ ಆಗುವ ಮಾತಿಗೆ ನಿಲುಕಲಾರದ ಸಂತೃಪ್ತಿಯಿದೆ. ಕೃಷಿಜೀವನವಂತೂ ತನ್ನ ದೈವವನ್ನು ಕಟ್ಟಿಕೊಳ್ಳುವುದೇ ಆಹ್ವಾನ-ವಿಸರ್ಜನದ ಈ ದಾರಿಯಲ್ಲಿ. ಬೇಕಾದಾಗ ದೇವರಾಗಿಸಿಕೊಂಡು ಪೂಜಿಸಿ ಮರುಕ್ಷಣದಲ್ಲಿ ಲೋಕಸತ್ಯದ ಅಗತ್ಯಾನುಸಾರವಾಗಿ ವ್ಯವಹರಿಸಲು ಏನುಮಾಡಬೇಕೋ ಅದನ್ನು ಮಾಡಲು ಅನುವು ಮಾಡಿಕೊಳ್ಳುವ ದಾರಿಯದು. ಬದುಕಿನ ಹೋರಾಟದಲ್ಲದು ಅವರಿಗೆ ಅನಿವಾರ್‍ಯವೂ ಹೌದು.

(ಮುಂದುವರೆಯುವುದು…)

2 comments

  1. ಸಾಕಿದ ದನವನ್ನು ಮಾರುವುದು ಕೃಷಿಕರ ಮೂಲಭೂತ ಹಕ್ಕು. ಈ ಹಕ್ಕನ್ನೇ ಈಗ ಹಸುವಿನ ಹೆಸರಿನಲ್ಲಿ ರಾಜಕೀಯ ನಡೆಸುವ ಮೂಲಭೂತವಾದಿಗಳು ಕೃಷಿಕರ ಕೈಯಿಂದ ಕಸಿದುಕೊಳ್ಳಲು ಹವಣಿಸುತ್ತಿದ್ದಾರೆ. ಇಂಥ ಮೂಲಭೂತವಾದಿ ರಾಜಕೀಯ ಪಕ್ಷಗಳಿಗೆ ಓಟು ಹಾಕಿ ಬೆಳೆಸುವುದರಿಂದ ಹಿಂದೆ ಇದ್ದ ಪಾಳೇಗಾರಿಕೆಯ ದಬ್ಬಾಳಿಕೆ ಮರಳಿ ಬಲಗೊಂಡು ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಹಸುವಿನ ಹೆಸರಿನಲ್ಲಿ ರಾಜಕೀಯ ನಡೆಸುವ ಗೋಮುಖವ್ಯಾಘ್ರಗಳ ಹುನ್ನಾರವನ್ನು ಎಚ್ಚತ್ತ ಕೃಷಿಕರು ಸಂಘಟಿತರಾಗಿ ದಬ್ಬಾಳಿಕೆ ನಡೆಸುವ ಮೂಲಭೂತವಾದಿ ಸಂಘಟನೆಗಳನ್ನು ಹಿಮ್ಮೆಟ್ಟಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಮುಂದಾಗಬೇಕಾಗಿದೆ. ಇಲ್ಲದೆ ಹೋದರೆ ಪಾಕಿಸ್ತಾನದಲ್ಲಿ ಯಾವ ರೀತಿ ಮೂಲಭೂತವಾದಿ ಸಂಘಟನೆಗಳ ಕೈ ಮೇಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ರೀತಿಯಲ್ಲಿ ನರಳುತ್ತಿದೆಯೋ ಅದೇ ರೀತಿ ಇಲ್ಲಿಯೂ ಆದೀತು. ನಮ್ಮ ಕೃಷಿಕರಲ್ಲಿ ತಮ್ಮ ಮೂಲಭೂತ ಹಕ್ಕಾದ ದನಗಳನ್ನು ತಮಗೆ ಸರಿಯಾದ ಮೌಲ್ಯ ನೀಡುವವರಿಗೆ ಮಾರುವ ಸ್ವಾತಂತ್ರ್ಯವನ್ನು ಮೂಲಭೂತವಾದಿಗಳು ಕಸಿಯುತ್ತಿರುವಾಗ ಎಚ್ಚತ್ತುಕೊಂಡು ಅವರನ್ನು ಹಿಮ್ಮೆಟ್ಟಿಸ ಬೇಕೆಂಬ ಜಾಗೃತಿ ಮೂಡದೆ ಇರುವುದು ಭವಿಷ್ಯದಲ್ಲಿ ಮೂಲಭೂತವಾದಿಗಳ ದಬ್ಬಾಳಿಕೆಗೆ ತಾವೇ ಕೊರಳು ಒಡ್ಡಿದಂತೆ ಆಗುತ್ತದೆ ಎಂಬ ಎಚ್ಚರ ಮೂಡಬೇಕಾಗಿದೆ.

  2. ಕತ್ತಿ ತಲವಾರು ಝಳಪಿಸಿ, ಹಟ್ಟಿಯಲ್ಲಿರೋ ಲಕ್ಷ ಬೆಲೆಬಾಳುವ ದನಗಳನ್ನು ಸಾಗಿಸುವವರಿಗೂ ತಣ್ಣನೆ ಕುಳಿತು ಫೇಸ್ ಬುಕ್, ಬ್ಲಾಗುಗಳಲ್ಲಿ ತಮ್ಮ ಹುಸಿಜಾತ್ಯತೀತವಾದದ ಕತ್ತಿ ಝಳಪಿಸುವವರಿಗೂ ಯಾವುದೇ ವ್ಯತ್ಯಾಸವಿಲ್ಲ, ಅವರ ಮಾತಿನ ಅಪ್ರಾಮಾಣಿಕತೆಯ ನಾತವನ್ನೂ ಅವರೇ ಆಸ್ವಾದಿಸಿಕೊಳ್ಳಲಿ!

Leave a Reply

Your email address will not be published.