Daily Archives: August 23, 2013

ಮಾಧ್ಯಮ ಲೋಕದಲ್ಲಿ ದಲಿತರ ಹಾಡು-ಪಾಡು

– ಎನ್. ರವಿಕುಮಾರ್, ಶಿವಮೊಗ್ಗ

ಮಾಧ್ಯಮಲೋಕದಲ್ಲಿನ ಜಾತಿ ತಾರತಮ್ಯ ಬಗ್ಗೆ ಸಂಶೋಧನೆ ನಡೆಸಿದ ಮಾಧ್ಯಮಗಳ ಕುರಿತಾದ ವೆಬ್‌ಸೈಟ್ “The Hoot” ಹೊಸ ಸಂಗತಿಗಳನ್ನು ಬಯಲು ಮಾಡಿತು ಎನ್ನುವುದಕ್ಕಿಂತ ಶಿಕ್ಷಣದ ತಳಹದಿಯ ಮೇಲೆ ಬೆಳವಣಿಗೆಯಾಗಿದೆ ಎನ್ನಬಹುದಾದ ವೈಚಾರಿಕತೆ ಸಮಾನತೆ ಎಂಬುದು ಜಾತಿ ವೈಷಮ್ಯದ ರಾಡಿಯಲ್ಲಿ ಇನ್ನಷ್ಟು ಹುದುಗಿ ಹೋಗಿದೆ ಎಂಬ ವಾಸ್ತವಿಕ ಸಂಗತಿಗೆ ಕನ್ನಡಿ ಹಿಡಿದಂತಿದೆ.

ಭಾರತ ದೇಶದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿನ ಜಾತಿ ಆಧಾರಿತ ತಾರತಮ್ಯ ಅಕ್ಷರ ಲೋಕದ ಪ್ರಜ್ಞಾಪೂರ್ವಕ ಕ್ರೀಯೆಯಲ್ಲದೆ ಇನ್ನೇನು ಎಂದು ಕೇಳಬಹುದು. ಚಿಂತಕ,ಸಾಮಾಜಿಕ ಸಂಶೋಧಕ ಏಜಾಜ್ ಅಶ್ರಫ್ ಅವರು ತಮ್ಮ ಸಂಶೋಧನೆಯಲ್ಲಿtv-media ಕಂಡುಕೊಂಡಂತೆ ಮಾಧ್ಯಮ ಲೋಕದಲ್ಲಿನ ದಲಿತರ ಸ್ಥಾನಮಾನಗಳು ಶ್ರೇಣಿ ವ್ಯೆವಸ್ಥೆಯ ಕೆಳಗಿನ ಸ್ಥಾನಗಳೆ ಆಗಿವೆ. ಕಾರಣ ಇಲ್ಲಿ ಪ್ರತಿಭೆ, ಸಾಮರ್ಥ್ಯ, ಬದ್ಧತೆಗಿಂತ ಜಾತಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇಂದು ಮಾಧ್ಯಮ ಸಂಸ್ಥೆಗಳು ನೇಮಕಾತಿ ಸಂದರ್ಭದಲ್ಲಿ ಜಾತಿ ಸೂಚಕ ಹೆಸರುಗಳ ಆಧಾರದ ಮೇಲೆ ಮಣೆ ಹಾಕುವುದಿಲ್ಲ ಎನ್ನಲು ಸಾಧ್ಯವೇ? ಭಾಷಾ ಮಾಧ್ಯಮಗಳಲ್ಲಿ ಅತಿ ಹೆಚ್ಚು ದಟ್ಟೈಹಿಸಿರುವ ಜಾತಿಯತೆ ದಲಿತರನ್ನು ನೆಲೆ ನಿಲ್ಲದಂತಹ ಸನ್ನಿವೇಶವನ್ನು ಸೃಷ್ಟಿಸುತ್ತಲೆ ಇದೆ.

ದಲಿತ ಸಮುದಾಯ ಶಿಕ್ಷಣಕ್ಕೆ ಮೈವೊಡ್ಡಿಕೊಳ್ಳುತಿದ್ದಂತೆ ಸ್ವಾಭಿಮಾನ ಗಟ್ಟಿಯಾಗುತ್ತಿದೆ. ಬಂಡಾಯದ ಧ್ವನಿ, ಹಕ್ಕುಗಳ ಕೇಳುವಿಕೆ ದೊಡ್ಡ ಸದ್ದು ಮಾಡುತ್ತಿದೆ. ಇದರ ಪರಿಣಾಮವೆ ಒಂದು ಕಾಲದಲ್ಲಿ ದಲಿತರ ದೈಹಿಕ ಜೀತ , ಗುಲಾಮಗಿರಿತನ ಇಂದು ಬಹುಪಾಲು ಕಡಿಮೆಯಾಗಿದೆ ಎನ್ನಬಹುದು. ಆದರೆ ಇಂದು ಶೋಷಣೆಯ , ದೌರ್ಜನ್ಯದ ಸ್ವರೂಪಗಳು ಬದಲಾಗಿವೆ. ದೈಹಿಕ ದೌರ್ಜನ್ಯಕ್ಕೆ ಬದಲಾಗಿ ದಲಿತರನ್ನು ಬೌದ್ಧಿಕ ಜೀತಕ್ಕೆ ತಳ್ಳಲಾಗುತ್ತಿದೆ. ದರ್ಪ,ಬಲ ಪ್ರಯೋಗದ ಬದಲಾಗಿ ನಯ-ನಾಜೂಕಿನಿಂದಲೆ ದಲಿತರನ್ನು ಮುಖ್ಯವಾಹಿನಿಯಿಂದ ದೂರವಿಡುವ ಸಂಚು ನಡೆದಿದೆ. ಅದು ಮಾಧ್ಯಮ ಕ್ಷೇತ್ರದಲ್ಲೂ ನಡೆಯುತ್ತಿದೆ. ಬೌದ್ಧಿಕ ದಾಹದ ತವಕದಲ್ಲಿರುವ ದಲಿತರಿಂದ ಮಾಧ್ಯಮಲೋಕದಲ್ಲಿನ ಜಾತಿಯ ಕ್ಷುದ್ರ ಮನಸ್ಸುಗಳು ಬೌದ್ಧಿಕ ಗುಲಾಮಗಿರಿತನವನ್ನೆ ನಿರೀಕ್ಷಿಸುತ್ತದಲ್ಲದೆ ಶ್ರೇಣಿ ವ್ಯವಸ್ಥೆಯ ಮೂಂಚೂಣಿ ಸ್ಥಾನ – ಮಾನಕ್ಕೇರದಂತೆ ನೋಡಿಕೊಳ್ಳಲಾಗುತ್ತಿದೆ. ನಿರ್ಧಾರ ಕೈಗೊಳ್ಳಬೇಕಾದ ಸ್ಥಾನದಲ್ಲಿ (Decision maker) ಮೇಲ್ಜಾತಿಯವರೆ ಇರುವುದು ದಲಿತರು ಅಷ್ಟು ಸುಲಭವಾಗಿ ಮೇಲೆಳಲು ಬಿಡುವುದಿಲ್ಲ ಎಂಬುದು ಬಹಿರಂಗ ರಹಸ್ಯವೆ.

ಇದರ ಹಿಂದೆ ಜಾತಿಯ ಪೂರ್ವಾಗ್ರಹ ಪೀಡಿತ ಮನೋಸ್ಥಿತಿಃ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ಅಲ್ಲೆಗೆಳೆಯುವಂತಿಲ್ಲ ಅಲ್ಲವೇ? ಇದು ದಲಿತ ಪತ್ರಕರ್ತರ ಅಂತಃಸ್ಥೈರ್ಯವನ್ನೆ ಕುಂದಿಸಿಬಿಡುತ್ತಿದೆ. ಜಾತಿಯ ಪ್ರಭಾವಳಿ ಯ ಮುಂದೆ ದಲಿತ ಪತ್ರಕರ್ತನ ಪ್ರತಿಭೆಯನ್ನು ಮಂದಗೊಳಿಸಲಾಗುತ್ತದೆ. (ದಿ ಹೂಟ್ ಸಂಶೋಧನೆಯಲ್ಲಿ ಕಂಡು ಬಂದಂತೆ ದಲಿತ ನಾಯಕರ ಚರ್ಚೆಗಳು ಬಂದಾಗ ಆ ದಲಿತ ನಾಯಕರ ವೈಫಲ್ಯಗಳನ್ನು ಜಾತಿಯೊಂದಿಗೆ ಜೋಡಿಸಿ ಆಡಿಕೊಳ್ಳುವುದು.)  prajavaniಸಾಮಾಜಿಕ ಸಂಘರ್ಷದ ಫಲವಾಗಿ ನಡೆಯುವ ಕ್ರೈಂ ಗಳು, ದಲಿತ ಪರ ಸಂವಾದ, ಚರ್ಚೆ, ಹೋರಾಟಗಳು ದಲಿತ ಪತ್ರಕರ್ತನನ್ನು ಉದ್ದೀಪನಗೊಳಿಸುವುದರಲ್ಲಿ ಆಶ್ಚರ್ಯಪಡುವಂತದ್ದೇನಿಲ್ಲ. ಅದು ಯಾವುದೇ ಮಾಧ್ಯಮಕ್ಕೆ ಸುದ್ಧಿಯ ಸರಕು ಆಗಲಿದೆ. ಆದರೆ ಅದನ್ನು ನಿರ್ಧರಿಸುವವ ಮಾಧ್ಯಮಗಳು ಮೇಲ್ಜಾತಿಯವರ ಕೈಯಲ್ಲೆ ಇರುವುದು ದಲಿತ ಪತ್ರಕರ್ತನ ಶ್ರಮ ಮತ್ತು ಪ್ರತಿಭೆಯ ಸಾವಿಗೆ ಕಾರಣವಾಗುತ್ತದೆ.

ಇನ್ನು ಮಾಧ್ಯಮಕ್ಕೆ ಬೇಕಾಗಿರುವ ಭಾಷಾ ಕೌಶಲ್ಯದಲ್ಲಿ ದಲಿತರು ಹಿಂದುಳಿಯಲು ತಳವಿಲ್ಲದ ಶಿಕ್ಷಣದ ಕಳಪೆ ಗುಣಮಟ್ಟವೆ ಕಾರಣ ಎಂಬ ಅಭಿಪ್ರಾಯಗಳು ಸಂಶೋಧನೆಯಲ್ಲಿ ಕೇಳಿ ಬಂದಿವೆ. ನಿಜ ಎನ್ನಬಹುದಾದರೂ ಅದಕ್ಕೆ ಕಾರಣ ಜಾತಿ ತಾರತಮ್ಯವೇ ಆಗಿದೆ. ಜಾತಿ ಶ್ರೇಣಿಕರಣದ ಜೊತೆಗೆ ಅಕ್ಷರ ಶ್ರೇಣಿಕರಣ ಕೂಡ ಆಗಿದೆ ಎಂಬುದನ್ನು ಮರೆ ಮಾಚುವಂತಿಲ್ಲ. ಸಂವಿಧಾನದ ಫಲದಿಂದ ದಲಿತರು ಶಾಲೆಗಳಿಗೆ ಹೋಗುವಂತಹ ಆಡಳಿತಾತ್ಮಕ ಕ್ರಾಂತಿಕಾರಿ ಬದಲಾವಣೆಯಾಯಿತು. ದಲಿತರಿಗೆ ಶಾಲೆಗಳಿಗೆ ಪ್ರವೇಶ ಸಿಕ್ಕಿತೆ ವಿನಃ, ಮೇಸ್ಟ್ರುಗಳ ತಲೆಗೆ ಪ್ರವೇಶ ಸಿಗಲಿಲ್ಲ. ಅಲ್ಲದೆ ಮನು ಶಿಕ್ಷಣ ಹಾಗೂ ಕಾನ್ವೆಂಟ್ ಶಿಕ್ಷಣದಿಂದ ಗಜಮಾರು ದೂರದ ಸರ್ಕಾರಿ ಕೊಟ್ಟಿಗೆ ಶಾಲೆಗಳ ಶಿಕ್ಷಣ ಯಾರ ನಡುವೆ ಹಂಚಿಕೆಯಾಗಿದೆ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.

ಅಕ್ಷರ ಶ್ರೇಣಿಕರಣದಲ್ಲಿ ಭೂಮಿ, ಬಂಡವಾಳ, ಅಧಿಕಾರ ಯಾವಾಗಲೂ ಮುಂದಿನ ಬೆಂಚುಗಳಲ್ಲಿರುತ್ತದೆ. ಮೇಸ್ಟ್ರುಗಳು ಮೊದಲ ವರ್ಗದವರೆ ಆಗಿದ್ದರಿಂದ ಕೊನೆ ಬೆಂಚಿನ ದಲಿತರನ್ನು ಕೈಹಿಡಿದು ತಿದ್ದುವವರು ಯಾರು? ಈಗಿರುವಾಗ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಎಲ್ಲಿಂದ? ಇಂದು ಮೇಲ್ಜಾತಿಯ ಮೂರು ತಲೆಮಾರುಗಳು ಐಎಎಸ್, ಐಪಿಎಸ್, ಐಎ‌ಫ್ಎಸ್ ನಂತಹ ಹುದ್ದೆಗಳನ್ನು ಅನುಭವಿಸಿ ನಿವೃತ್ತಿ ಹೊಂದುತ್ತಿರುವಾಗ ದಲಿತ ಸಮುದಾಯದ ಮೊದಲನೆ ತಲೆಮಾರು ಶಿಕ್ಷಣದ ಅಂಗಳದಲ್ಲಿ ಈಗಿನ್ನೂ ತೆವಳುತ್ತಿದೆ. ಮಹಾರಾಷ್ಟ್ರದ ಸಾಹು ಮಹಾರಾಜರು, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆ ಶಿಕ್ಷಣ ಮತ್ತು ಭೂಮಿ ನೀಡಿದ್ದರ ಫಲ ದಲಿತರಲ್ಲಿ ಸಂವಿಧಾನಕ್ಕೆ ಮುಂಚೆ ಶಿಕ್ಷಣದ ಶಕೆ ಆರಂಭವಾಯಿತು. ಆದರೆ ಆರಂಭದ ಕಾಲ ಘಟ್ಟದಲ್ಲಿಯೇ ದಲಿತರಿಗೆ ಶಿಕ್ಷಣ ಮತ್ತು ಭೂಮಿ ಕೈಗೆ ಸಿಕ್ಕಿದ್ದರೆ ಇಂದಿನ ಅಸಮಾನತೆಯ ಸೋಂಕಿಗೆ ಎಂದೊ ಚಿಕಿತ್ಸೆ ಸಿಕ್ಕಿರುತ್ತಿತ್ತು. ಭಾಷಾ ಕೌಶಲ್ಯಕ್ಕೆ ಗುಣಮಟ್ಟದ ಶಿಕ್ಷಣದ ಭದ್ರ ತಳಹದಿ ಇರಬೇಕೆ ಹೊರತು ಶಿಕ್ಷಣದ ಪಾರಂಪರಿಕ ಇತಿಹಾಸವಲ್ಲ ಎಂಬುದನ್ನು ಇಂದು ಅಕ್ಷರ ಲೋಕದಲ್ಲಿರುವ devanurದೇವನೊರು ಮಹಾದೇವ, ಸಿದ್ದಲಿಂಗಯ್ಯ. ಮೊಗಳ್ಳಿಗಣೇಶ ಸೇರಿದಂತೆ ಅನೇಕರು ಸಾಕ್ಷಿಯಾಗಿದ್ದಾರೆ. ತಳವಿಲ್ಲದ ಶಿಕ್ಷಣದ ಕೊರತೆ ದಲಿತ ಪತ್ರಕರ್ತರಲ್ಲಿನ ದೋಷಕ್ಕೆ ಕಾರಣ ಎಂಬ ವಿಶ್ಲೇಷಣೆಗಳ ಹಿಂದೆ ದಲಿತರಲ್ಲೆ ಹೋರಾಟ ಮನೋಭಾವದ ಕುಸಿತ ಎನ್ನಬಹುದು.

ಇಂದು ದಲಿತರು ಮಾಧ್ಯಮಲೋಕದತ್ತ ಆಕರ್ಷಿತರಾಗುತ್ತಿರುವುದರ ಹಿಂದೆ ಒಂದು ವೈಚಾರಿಕ ತುಮುಲವಿದೆ. ಸಾಮಾಜಿಕ ಅಸಮಾನತೆ ವಿರುದ್ಧ ದ ಸೈದ್ಧಾಂತಿಕ ಹೋರಾಟ ಮತ್ತು ಮಾನವೀಯ ಹಕ್ಕುಗಳ ಪ್ರತಿಪಾದನೆಗೆ ಮಾಧ್ಯಮಗಳು ಕಣವಾಗಲಿವೆ ಎಂಬ ಭರವಸೆ ಹೆಪ್ಪಗಟ್ಟಿರುತ್ತದೆ.(Many Dalits enter the media because they believe it can empower their community. But discrimination against them is rampant in the Hindi and language Media.) ಅಸಮಾನತೆ ಈ ಉತ್ಸಾಹವನ್ನು ಆಪೋಶನ ಮಾಡಲು ಹೆಚ್ಚು ದಿನ ಬೇಕಾಗುವುದಿಲ್ಲ. ಪತ್ರಕರ್ತರಾದ ವಡ್ಡರ್ಸೆ ರಘುರಾಮಶೆಟ್ಟರು ತಮ್ಮ ಮುಂಗಾರು ಪತ್ರಿಕೆಗೆ ದಲಿತರು , ಹಿಂದುಳಿದವರ್ಗದವರನ್ನೆ ಅಡಿಗಲ್ಲಾಗಿಸಿದ್ದರು. ಮಾಧ್ಯಮಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಯೆ ಆಗಿತ್ತು. ಲಂಕೇಶ್ ಸಹ ಇದೇ ಹಾದಿಯಲ್ಲಿ ದಲಿತ ಬರಹಗಾರರಿಗೆ ವೇದಿಕೆ ಕಲ್ಪಿಸಿದ್ದರು.

ಮಾಧ್ಯಮ ಕ್ಷೇತ್ರ ಇಂದು ಉದ್ಯಮವಾಗಿ ಬೆಳೆಯುತ್ತಿರುವ ಸನ್ನಿವೇಶದಲ್ಲಿ ಬಂಡವಾಳ-ಆದಾಯದ ಲೆಕ್ಕಾಚಾರಗಳು ಮುಖ್ಯವಾಗುವುದರ ಜೊತೆಗೆ ಜಾತಿ ಆಧಾರಿತ ಲಾಭವನ್ನು ಗುಣಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ವೇತನ ಆಧಾರಿತ ನೌಕರಿ ನಡೆಸುವ ದಲಿತ ಪತ್ರಕರ್ತರ ಸ್ಥಿತಿ-ಗತಿಗಳು ಒಂದೆಡೆಯಾದರೆ, ಭಾಷಾ ಮಾಧ್ಯಮದಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕವಾಗಿ ಪತ್ರಿಕೆಗಳನ್ನು ನಡೆಸುವ ದಲಿತರು ಮತ್ತು ಹಿಂದುಳಿದ ವರ್ಗಗಳು (ಸಂಪಾದಕರು ಅಥವಾ ಪ್ರಕಾಶಕರು) ಮೂಲಭೂತವಾಗಿ ಓದುಗ ವಲಯದಲ್ಲಿಯೆ ಜಾತಿತಾರತಮ್ಯವನ್ನು ಎದುರಿಸುತ್ತಿದೆ. dalitsinmediaಇವುಗಳ ನಡುವೆ ಜಾತಿ ಲಾಭಿಯಿಲ್ಲದೆ ತಮ್ಮ ಪ್ರತಿಭೆ, ಶೈಕ್ಷಣಿಕ ಸಾಮರ್ಥ್ಯದಿಂದಲೆ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಓಬಿಸಿಗಳು ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ದಲಿತ ಪತ್ರಕರ್ತರ ಕೌಟುಂಬಿಕ, ಆರ್ಥಿಕ ಸ್ಥಿತಿಗತಿಗಳು ಆತನನ್ನೆ ಅವಲಂಬಿಸಿರುವಾಗ ತನ್ನ ಕಾರ್ಯಕ್ಷೇತ್ರದಲ್ಲಿನ ಜಾತಿ ತಾರತಮ್ಯ ಆತನನ್ನು ಘಾಸಿಗೊಳಿಸಿದೆ. ಇಂತಹ ಸಂಕಷ್ಟಗಳಲ್ಲೂ ದಲಿತರ ಪ್ರತಿಭೆ ಮೇಲ್ವರ್ಗದವರಿಗೆ ಸವಾಲುಗಳನ್ನು ಒಡ್ಡುತ್ತಿವೆ. ಪಾರಂಪರಿಕ ಶತೃತ್ವದ (Vendetta) ಹಗೆಯಲ್ಲಿ ಕುದಿಯುತ್ತಿರುವ ಮೇಲ್ವರ್ಗದ ಹಿತಾಸಕ್ತಿಗಳು ಹೋಗು ಎನ್ನಲಾಗದೆ ಹೊಗೆ ಇಟ್ಟರು ಎಂಬಂತೆ ಮಾಧ್ಯಮ ಕ್ಷೇತ್ರದಲ್ಲಿ ದಲಿತರನ್ನು ಹೊರದೂಡುವ ಸನ್ನಿವೇಶವನ್ನು ಸೃಷ್ಟಿಸುತ್ತಲೆ ಇವೆ. ಈ ಕಾರಣಗಳೆ ದಲಿತರು ಮಾಧ್ಯಮ ಕ್ಷೇತ್ರದಲ್ಲಿ ಮುಂದುವರೆಯ ಬೇಕೆ, ಬೇಡವೇ ಎಂಬ ಚಿಂತನೆಗೀಡು ಮಾಡಿವೆ.

ಸಮಾನ ಸಮಾಜದ ಸಾಂಘಿಕ ಹಿತ ಬಯಸುವ ಮಾಧ್ಯಮ ಕ್ಷೇತ್ರ ತನ್ನ ಒಡಲಲ್ಲಿ ಜಾತಿಯ ವಿಷ ವೃಕ್ಷಕ್ಕೆ ನೀರುಣಿಸತೊಡಗಿದೆ. ‘ದಿ ಹೂಟ್’ಗಾಗಿ ಚಿಂತಕ, ಲೇಖಕ ಏಜಾಜ್ ಅಶ್ರಫ್ ಅವರು ನಡೆಸಿದ ಸಂಶೋಧನೆ ಇದನ್ನೆ ಒತ್ತಿ ಹೇಳಿದೆ.