ನಿಡ್ಡೋಡಿ ಯೋಜನೆಗೆ ಸಿಂಧ್ಯಾ ಬ್ರೇಕ್

– ಚಿದಂಬರ ಬೈಕಂಪಾಡಿ

ನಿಡ್ಡೋಡಿ ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಜನ ಮಾಡುತ್ತಿರುವ ಹೋರಾಟಕ್ಕೆ ಜಯ ಸಿಕ್ಕಿದೆ ಅಂದುಕೊಳ್ಳಬೇಕಾಗಿಲ್ಲ ತಕ್ಷಣಕ್ಕೆ ಆದರೆ ಜಯದ ನಿರೀಕ್ಷೆ ಇಟ್ಟುಕೊಳ್ಳುವುದಕ್ಕೆ ಕಾರಣಗಲಿವೆ. ಕೇಂದ್ರ ಇಂಧನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಇಂಥ ಭರವಸೆ ನೀಡಿದ್ದಾರೆನ್ನುವ ಸುದ್ದಿ ಇಂದು ಮಾಧ್ಯಮಗಳಲ್ಲಿ ಹರಿದಾಡಿರುವುದರಿಂದ ಇಂಥಾ ಆಶಾವಾದ ಹುಟ್ಟಿಕೊಳ್ಳಲು ಕಾರಣವಾಗಿದೆ.

ಮಾಧ್ಯಮದಲ್ಲಿ ಬಂದಿರುವ ಸುದ್ದಿಯನ್ನು ಗಣನೆಗೆ ತೆಗೆದುಕೊಂಡರೆ ‘ಜನರಿಗೆ ಬೇಡವಾದರೆ ಯೋಜನೆ ಕೈಗೊಳ್ಳುವುದಿಲ್ಲ, ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲಾಗುವುದು’. ಮೊದಲು ಸಚಿವರು ಈ ಕೆಲಸ ಮಾಡಲಿ. ಯುವ ಸಚಿವ ಸಿಂಧ್ಯಾ ಅವರು ಆಡಿರುವ ಮಾತಿನಲ್ಲಿ ಬೇಸರವಿದೆ. ಇದಕ್ಕೆ ಹೊಣೆ ಪ್ರತಿಭಟನೆ ಮಾಡುತ್ತಿರುವ ಜನರಲ್ಲ.

ನಿಡ್ಡೋಡಿಯಲ್ಲಿ ಯೋಜನೆ ಸ್ಥಾಪಿಸಲು ಸ್ವಾಧೀನ ಪಡಿಸಿಕೊಳ್ಳುವ ಭೂಮಿಯನ್ನು ಸಚಿವರು ಖುದ್ದು ನೋಡಿದರೆ ಅಲ್ಲಿ ಯೋಜನೆ ಮಾಡಲು ಶಿಫಾರಸು ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. save-niddodiಯಾಕೆಂದರೆ ಆ ಪರಿಸರವೇ ಅಂಥ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಹಚ್ಚ ಹಸಿರಿನಿಂದ ನಳನಳಿಸುವ ಭತ್ತ, ತೆಂಗು, ಕಂಗು, ಬಾಳೆ ತೋಟಗಳು, ಜುಳು ಜುಳು ಹರಿಯುವ ನೀರಿನ ತೊರೆಗಳನ್ನು ನಾಶಮಾಡಿ ದೇಶಕ್ಕೆ ಬೆಳಕು ಕೊಡಲು ಮುಂದಾಗಿದ್ದವರು ಯಾರಿರಬಹುದು ಎನ್ನುವ ಕುತೂಹಲ ಅವರಿಗೂ ಬರಬಹುದು.

ಯಾರೋ ಮಾಡಿದ ಯೋಜನೆ ಜನೋಪಯೋಗಿಯಾದರೆ ಅದರ ಕ್ರೆಡಿಟ್ ತನ್ನದೇ ಎನ್ನುವ ರಾಜಕಾರಣಿಗಳು ನಿಡ್ಡೋಡಿ ಯೋಜನೆಗೆ ತಾವೇ ಮೂಲಪುರುಷ ಎಂದು ಎದೆತಟ್ಟಿ ಹೇಳಿಕೊಳ್ಳಲು ಯಾಕೆ ಮುಂದೆ ಬರುವುದಿಲ್ಲ?
ನವಮಂಗಳೂರು ಬಂದರು, ಹೆದ್ದಾರಿ, ಕೊಂಕಣ ರೈಲ್ವೇ ಯೋಜನೆಯನ್ನು ತಮ್ಮ ಸಾಧನೆಯೆಂದು ಹೇಳಿಕೊಳ್ಳಲು ಅದೆಂಥಾ ಉತ್ಸಾಹ ರಾಜಕಾರಣಿಗಳಿಗೆ. ಕೇಂದ್ರ ಸರ್ಕಾರದ ನಿಡ್ಡೋಡಿ ಯೋಜನೆ ಜನಪರವಾಗಿದ್ದರೆ ಅದರ ಕೀರ್ತಿಗಾಗಿ ಎಷ್ಟೆಲ್ಲ ಜನ ಬಾವುಟ ನೆಟ್ಟು ತಮ್ಮ ಪ್ರತಿಮೆ ಸ್ಥಾಪಿಸಿಕೊಳ್ಳಲು ಬಯಸುತ್ತಿದ್ದರು ಅನ್ನಿಸುವುದಿಲ್ಲವೇ?

ಈಗ ಅವರು ಮೌನವಾಗಿದ್ದಾರೆ, ಯಾಕೆಂದರೆ ಜನರಿಗೆ ಮೂಲಪುರುಷರ ಮಾಹಿತಿ ಗೊತ್ತಾದರೆ ತಮ್ಮ ಭವಿಷ್ಯವೇ ಕಮರಿಹೋಗಬಹುದು ಎನ್ನುವ ಭಯ ಕಾಡದಿರದು. ಆದರೆ ನಿಡ್ಡೋಡಿ ಯೋಜನೆ ಕೇಂದ್ರದಲ್ಲಿ ಕುಳಿತವರಿಗೆ ಕನಸಿಗೆ ಗೋಚರಿಸಲು ಸಾಧ್ಯವಿಲ್ಲ. ಇಂಥ ಯೋಜನೆಗೆ ಭೂಮಿಯನ್ನು ಗುರುತಿಸಿ ಶಿಫಾರಸು ಮಾಡಿರಲೇ ಬೇಕು. ಬಹುಕಾಲದ ಅಧ್ಯಯನದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸಾಕಷ್ಟು ಹೋಂವರ್ಕ್ ಮಾಡಿಯೇ ಕೇಂದ್ರಕ್ಕೆ ಈ ಯೋಜನೆ ಕಳುಹಿಸಲಾಗಿದೆ. ತಮ್ಮ ಕಾಲಬುಡದಲ್ಲೇ ಇಂಥ ಘನಘೋರ ಜನವಿರೋಧಿ ಯೋಜನೆ ಅಸ್ತಿತ್ವಕ್ಕೆ ಬರುತ್ತಿರುವುದನ್ನು ಗುರುತಿಸಲಾಗದಂಥ ದಡ್ಡರೂ ನಮ್ಮವರು ಎನ್ನುವುದು ಜೀರ್ಣಿಸಿಕೊಳ್ಳಲಾಗದ ಸತ್ಯ.

ಅಂದಹಾಗೆ ನಿಡ್ಡೋಡಿ ಯೋಜನೆ ರದ್ಧಾದ ಘೋಷಣೆ ಹೊರಬಿದ್ದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು, ಮೈಲೇಜ್‌ಗಾಗಿ ರಾಜಕಾರಣಿಗಳು ಮುಂದಾಗುವ ಅಪಾಯವೂ ಇದೆ. ಒಂದು ರಾಜಕೀಯ ಪಕ್ಷದ ಹೋರಾಟ ಇದಾಗಿರಲಿಲ್ಲ. ಎಲ್ಲ ಪಕ್ಷದವರು ಮುಕ್ತವಾಗಿ ಮಾತನಾಡಿದ್ದಾರೆ. ಆದ್ದರಿಂದ ಇದೊಂದು ಜನವಿರೋಧಿ ಯೋಜನೆ, ಜನರ ಪ್ರಯತ್ನದಿಂದ ಇಲ್ಲಿಂದ ತೊಲಗಿತು ಅಂದುಕೊಳ್ಳುವುದು ಸೂಕ್ತವಲ್ಲವೇ?

Leave a Reply

Your email address will not be published. Required fields are marked *