ಆ ರಾತ್ರಿ ಚಿನು ಎಲ್ಲಿದ್ದಳು ?

– ಬಿ. ಶ್ರೀಪಾದ ಭಟ್

ಎಂಬತ್ತರ ದಶಕದಲ್ಲಿ ದೂರದರ್ಶನ ಪ್ರತಿ ಶುಕ್ರವಾರ ರಾತ್ರಿಯಂದು ಭಾರತೀಯ ಭಾಷೆಗಳ ಕ್ಲಾಸಿಕ್ ಸಿನಿಮಾಗಳನ್ನು ಪ್ರದರ್ಶಿಸುತ್ತಿತ್ತು. ಆಗ ಕಾಲೇಜು ವಿಧ್ಯಾರ್ಥಿಗಳಾಗಿದ್ದ ನಾವೆಲ್ಲ ನೋಡಿದ್ದ ಹಲವಾರು ಶ್ರೇಷ್ಠ ಚಿತ್ರಗಳಲ್ಲಿ “ಏಕ್ ದಿನ್ ಪ್ರತಿದಿನ್” ಸಿನಿಮಾ ಕೂಡ ಒಂದು. ನಮಗೆಲ್ಲ ಭಾರತೀಯ ಸಿನಿಮಾರಂಗದ ಹೊಸ ಲೋಕವನ್ನೇ ತೋರಿಸಿದ ದೂರದರ್ಶನವನ್ನು ನಮ್ಮ ತಲೆಮಾರು ಮರೆಯಲು ಸಾಧ್ಯವೇ ಇಲ್ಲ.

“ಏಕ್ ದಿನ್ ಪ್ರತಿದಿನ್” 1979ರಲ್ಲಿ ತೆರೆಕಂಡ, ಮೃಣಾಲ್ ಸೇನ್ ನಿರ್ದೇಶನದ ಬೆಂಗಾಲಿ ಸಿನೆಮಾ. Ek_Din_Pratidin_DVD_coverಬೆಂಗಾಲಿ ಲೇಖಕ ಅಮಲೇಂದು ಚಕ್ರವರ್ತಿ ಅವರ ಸಣ್ಣ ಕತೆಯನ್ನಾಧರಿಸಿ ಮೃಣಾಲ್‌ದ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರ ಕತೆ ಸ್ಥೂಲವಾಗಿ ಹೀಗಿದೆ: ಎಪ್ಪತ್ತರ ದಶಕದಲ್ಲಿ ಕೊಲ್ಕತ್ತ ( ಆಗಿನ ಕಲ್ಕತ್ತ) ದಲ್ಲಿ ವಾಸಿಸುತ್ತಿರುವ ಏಳು ಜನ ಸದಸ್ಯರ ಮಧ್ಯಮವರ್ಗದ ಕುಟುಂಬ. ಇದರಲ್ಲಿ ತಂದೆ, ತಾಯಿ ಮತ್ತು ಐವರು ಹೆಣ್ಣು ಮಕ್ಕಳು ಮತ್ತಿಬ್ಬರು ಗಂಡು ಮಕ್ಕಳು. ಇಡೀ ಕುಟುಂಬದ ಹೊರೆ ಹೊತ್ತುಕೊಂಡಿದ್ದು ಹಿರಿಯಕ್ಕ ಚಿನು (ಮಮತಾ ಶಂಕರ್). ಕಛೇರಿಯೊಂದರಲ್ಲಿ ಕೆಲಸ ಮಾಡುತ್ತ ತನ್ನ ಉಳಿದ ಆರು ಜನರ ಬದುಕನ್ನು ನಿಭಾಯಿಸುತ್ತಿರುತ್ತಾಳೆ ಹಿರಿಯಕ್ಕ ಚಿನು. ಅದರೊಂದು ದಿನ ರಾತ್ರಿಯಾದರೂ ಹಿರಿಯಕ್ಕ ಚಿನು ಮನೆಗೆ ಮರಳುವುದಿಲ್ಲ. ಬಹುಶಃ ಕಛೇರಿಯಲ್ಲಿ ಹೆಚ್ಚಿದ ಕೆಲಸದಿಂದಾಗಿ ತಡವಾಗಬಹುದೆಂದು ಕುಟುಂಬದ ಇತರೆ ಮಂದಿ ಭಾವಿಸಿರುತ್ತಾರೆ. ಕಿರಿಯ ತಂಗಿ ಮಿನು ( ಅದ್ಭುತವಾಗಿ ನಟಿಸಿದ್ದಾಳೆ. ಹೆಸರು ಮರೆತಿದೆ) ಅಕ್ಕನ ಆಫೀಸಿಗೆ ಫೋನ್ ಮಾಡಿದಾಗ ತನ್ನಕ್ಕ ಆಫೀಸಿನಲ್ಲಿ ಇರದಿರುವುದು ಗೊತ್ತಾಗಿ ಕಳವಳಪಡುತ್ತಾಳೆ.

ನಿಶ್ಚಿಂತೆಯಿಂದ ಇದ್ದ ಈ ಕುಟುಂಬವು ಕ್ಷಣ ಮಾತ್ರದಲ್ಲಿ ಆತಂಕಕ್ಕೆ ದೂಡಲ್ಪಡುತ್ತದೆ. ತೀವ್ರ ದುಗುಡದಿಂದ ಅಪ್ಪ ಬಸ್ ಸ್ಟಾಪಿನ ಬಳಿ ಬಂದು ಕಡೆಯ ಬಸ್ ಬರುವವರೆಗೂ ಕಾಯುತ್ತಾನೆ. ಆದರೆ ಮಗಳು ಕಾಣುವುದಿಲ್ಲ. ಇಡೀ ಅಪಾರ್ಟಮೆಂಟಿನಲ್ಲಿ ಚಿನುವಿನ ನಾಪತ್ತೆಯ ಸುದ್ದಿ ಕ್ಷಣ ಮಾತ್ರದಲ್ಲಿ ಹಬ್ಬುತ್ತದೆ. ನೆರೆಹೊರೆಯ ಜನ ತಲೆಗೊಬ್ಬರಂತೆ ಮಾತನಾಡಲಾರಂಬಿಸುತ್ತಾರೆ. ಕೆಲವರು ಸಹಾನುಭೂತಿಯಿಂದ, ಕೆಲವರು ಕುಹುಕದಿಂದ, ಬಹುಪಾಲು ಜನ ವಿಚಿತ್ರವಾದ ಮಾತುಗಳಿಂದ ಇಡೀ ಘಟನೆಯನ್ನು ವಿಶ್ಲೇಷಿಸುತ್ತಾರೆ. ಇದನ್ನು ಮೃಣಾಲ್‌ದ ಅತ್ಯಂತ ಸಂಯಮದಿಂದ ಆದರೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕಡೆಗೆ ಪೋಲೀಸರಿಗೂ ದೂರು ನೀಡಲಾಗುತ್ತದೆ. ನಾಪತ್ತೆಯಾದ ಚಿನುವಿನ ತಮ್ಮ ಮತ್ತವನ ಸ್ನೇಹಿತನೊಂದಿಗೆ ಕಡೆಗೆ ಹತಾಶೆಯಿಂದ ಶವಾಗಾರಕ್ಕೆ ತೆರಳಿ ತನ್ನಕ್ಕ ಶವವನ್ನು ಹುಡುಕುತ್ತಾನೆ. ಮತ್ತೊಂದು ಕಡೆ ಚಿನುವಿನ ಚಹರೆಯನ್ನು ಹೋಲುವ ಮಹಿಳೆಯೊಬ್ಬಳು ಅಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾಳೆಂದು ಸುದ್ದಿ ತಿಳಿದು ಆಕೆಯ ಅಪ್ಪ ಕೂಡಲೆ ಆಸ್ಪತ್ರೆಗೆ ಧಾವಿಸುತ್ತಾನೆ. ekdin-pratidinಆದರೆ ಆಕೆ ತನ್ನ ಮಗಳಲ್ಲವೆಂದು ಖಚಿತವಾದ ನಂತರ ಅರ್ಧ ನಿರಾಸೆ, ಇನ್ನರ್ಧ ನಿರಾಳತೆಯಿಂದ ಮನೆಗೆ ಮರಳುತ್ತಾನೆ. ಚಿನುವಿನ ಕುಟುಂಬವು ಇಡೀ ರಾತ್ರಿಯನ್ನು ಆತಂಕ, ತಲ್ಲಣಗಳಿಂದ ಎದುರಿಸುತ್ತದೆ. ಮರುದಿನದ ಮುಂಜಾನೆಯ ನಸುಕತ್ತಲಿನಲ್ಲಿ ಕುಟುಂಬದ ಕಿರಿಯ ಹೆಣ್ಣುಮಗಳು ಕಾಣೆಯಾಗಿದ್ದ ಚಿನು ನಿಧಾನವಾಗಿ ಮೆಟ್ಟಿಲೇರುತ್ತ ಬರುತ್ತಿರವುದನ್ನು ಗುರುತಿಸಿ ಸಂತೋಷದಿಂದ ಕಿರುಚುತ್ತ ಇಡೀ ಕುಟುಂಬವನ್ನು ಎಚ್ಚರಿಸುತ್ತಾಳೆ. ಮೆಟ್ಟಲೇರಿ ಬರುತ್ತಿದ್ದ ಮಗಳನ್ನು ಕುಟುಂಬದ ಸದಸ್ಯರು ಮಾತನಾಡಿಸದೇ ವಿಲಕ್ಷಣ ಮೌನದಲ್ಲಿ, ಹೇಳಿಕೊಳ್ಳಲಾಗದ ಶಂಕೆಯಲ್ಲಿ, ಹೊಯ್ದಾಟದ ಮನಸ್ಸಿನಲ್ಲಿ ಎದುರುಗೊಳ್ಳುತ್ತಾರೆ. ಹಿಂದಿನ ರಾತ್ರಿ ಎಲ್ಲಿದ್ದೆ ಎಂದು ಕೇಳಲಾಗದೆ ವಿಚಿತ್ರ ತೊಳತಾಟದಲ್ಲಿರುತ್ತದೆ ಚಿನುವಿನ ಕುಟುಂಬ. ಆಗ ಅಪಾರ್ಟಮೆಂಟಿನ ಮಾಲೀಕ ಎಂದಿನಂತೆ ಅಪ್ಪನನ್ನು ದಬಾಯಿಸುತ್ತಾ ಇದು ಮರ್ಯಾದಸ್ಥರು ಇರುವ ಜಾಗವೆಂತಲೂ ಈ ಕೂಡಲೇ ನಿಮ್ಮ ಕುಟುಂಬ ಇಲ್ಲಿಂದ ಜಾಗ ಬದಲಿಸಬೇಕೆಂತಲೂ ತಾಕೀತು ಮಾಡುತ್ತಾನೆ. ಕಡೆಗೆ ಇದಾವುದಕ್ಕೂ ಮೈಟ್ ಮಾಡದ ಚಿನುವಿನ ಹಾಗೂ ಕುಟುಂಬದ ಅಮ್ಮ ಎಂದಿನಂತೆ ತನ್ನ ದಿನನಿತ್ಯದ ಮನೆಗೆಲಸವನ್ನು ಶುರು ಮಾಡುವದರೊಂದಿಗೆ ಈ ಸಿನಿಮಾ ಮುಗಿಯುತ್ತದೆ.

’ಏಕ್ ದಿನ್ ಪ್ರತಿದಿನ್’ ಮೃಣಾಲ್ ಸೇನ್ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈ ಚಿತ್ರಕ್ಕಾಗಿ 1980 ರಲ್ಲಿ ಅತ್ಯುತ್ತಮ ನಿರ್ದೇಶಕನೆಂದು ರಾಷ್ಟ್ರ ಪ್ರಶಸ್ತಿ ಗಳಿಸುತ್ತಾರೆ.

ಅವರ ಈ ಮುಂಚಿನ ಮಹತ್ವದ ಚಿತ್ರಗಳಾದ ಪ್ರತಿನಿಧಿ, ಭುವನ್ ಶೋಮ್, ಏಕ್ ಅಧೂರಿ ಕಹಾನಿ, ಮೃಗಯಾಗಳಿಗೆ ಹೋಲಿಸಿದರೆ ಕಥಾ ಹಂದರದಲ್ಲಿ ಅತ್ಯಂತ ಸರಳವಾದ ಆದರೆ ಸಂವೇದನೆಯ ಮಟ್ಟದಲ್ಲಿ ಇವೆಲ್ಲಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಸಿನಿಮಾ ಏಕ್ ದಿನ್ ಪ್ರತಿದಿನ್. mrinal-senಇಂಡಿಯಾದ ಬದಲಾಗುತ್ತಿರುವ ನಗರ, ಈ ಬದಲಾವಣೆಯ ಮೂಲಧಾತು ನಗರಗಳ ವಾಣಿಜ್ಯೀಕರಣ ಮತ್ತು ಈ ಅನಿರೀಕ್ಷಿತ ಬದಲಾವಣೆಗಳೊಂದಿಗೆ ನೇರವಾಗಿ ಮುಖಾಮುಖಿಯಾಗುತ್ತಿರುವ ನಗರದ ಎಪ್ಪತ್ತರ ದಶಕದ ಮಧ್ಯಮ ವರ್ಗ, ಇವೆಲ್ಲವನ್ನು ಕೇಂದ್ರವಾಗಿಟ್ಟುಕೊಂಡು ಮೊಟ್ಟ ಮೊದಲಬಾರಿಗೆ ಮೃಣಾಲ್‌ದ ನಿರ್ದೇಶಿಸಿದ ಸಿನಿಮಾ ಇದು. ಕಥಾ ನಾಯಕಿ ಆ ಒಂದು ರಾತ್ರಿ ಎಲ್ಲಿದ್ದಳು ಎಂಬುದನ್ನೇ ಗೌಣವಾಗಿಸಿ ಅದು ಅವಳ ವೈಯುಕ್ತಿಕ ಬದುಕು ಎಂದು ಪರೋಕ್ಷವಾಗಿ ಆದರೆ ಅತ್ಯಂತ ಘನತೆಯಿಂದ ತೋರಿಸುತ್ತಾರೆ ಮೃಣಾಲ್‌ದ. ಇಲ್ಲಿ ಅವರು ಕೇಂದ್ರೀಕರಿಸುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರದ ಮಧ್ಯಮ ವರ್ಗದ ಹಿಪೋಕ್ರೆಸಿ, ಆಧುನಿಕ ಶಿಕ್ಷಣವನ್ನು ಪಡೆದೂ ಜಡಗಟ್ಟಿದ ಮನಸ್ಸನ್ನು ಕಳೆದು ಹಾಕಲು ನಿರಾಕರಿಸುವ ಈ ವರ್ಗಗಳ ಕ್ಷುದ್ರತೆ ಮತ್ತು ತಾನು ಪರಂಪರೆಯನ್ನು ಪಾಲಿಸುತ್ತಿರುವ ಭಾರತೀಯ ನಾರಿಯೋ ಅಥವಾ ಬದಲಾವಣೆಗೆ ತೆತ್ತುಕೊಂಡ ಈ ಶತಮಾನದ ಮಾದರಿ ಹೆಣ್ಣೋ ಎಂಬುದರ ಕುರಿತಾಗಿ ದಿಟ್ಟತೆಯನ್ನು ಪ್ರದರ್ಶಿಸುವ ಮನೋಭೂಮಿಕೆಗಳ ಹುಡುಕಾಟದಲ್ಲಿರುವ ಹೊರಗೆ ದುಡಿದು ಕುಟುಂಬವನ್ನು ಸಾಕುವ ಅವಿವಾಹಿತ ಹೆಣ್ಣುಮಗಳು.

ಚಿತ್ರದ ಕ್ಲೈಮಾಕ್ಸ ಅನ್ನು ನೋಡಿ. ಕಡೆಗೆ ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಹತಾಶೆಯಿಂದ ದೂಷಿಸಿಕೊಳ್ಳುತ್ತಿರುತ್ತಾರೆ. ತಮಗೆಲ್ಲ ದುಡಿದು ಹಾಕುತ್ತಿರುವ ಚಿನುವಿನ ಕುರಿತಾಗಿ ನಾವ್ಯಾರು ಗಮನವೇ ಹರಿಸಿಲ್ಲ, ಅವಳಿಗೇನು ಮಾಡಿದ್ದೇವೆ? ಎಂಬ ಪಾಪ ನಿವೇದನೆಯಲ್ಲಿರುತ್ತಾರೆ. ಆಗ ಕೂಡಲೆ ಹೊರಗಡೆ ಕಾರು ಭರ್ರನೆ ಬಂತು ನಿಂತ ಶಬ್ದ ಕೇಳಿಸುತ್ತದೆ. (ಇದು ದೌರ್ಜ್ಯನ್ಯದ, ಅಧಿಕಾರದ, ದೈಹಿಕ ಹಲ್ಲೆಯ ಸಂಕೇತವೇ??) ಕೂಡಲೆ ಕುಟುಂಬದ ಕಿರಿಯ ಹುಡುಗಿ ಬಾಗಿಲ ಬಳಿ ಧಾವಿಸುತ್ತಾಳೆ. ಮನೆ ಪ್ರವೇಶಿಸುವ ಚಿನು ‘ನೀವೆಲ್ಲ ರಾತ್ರಿಯೆಲ್ಲ ಮಲಗಲಿಲ್ಲವೇ?’ ಎಂದು ನಿರ್ಲಿಪ್ತಳಾಗಿ ಪ್ರಶ್ನಿಸುತ್ತಾಳೆ.

ಆದರೆ ಚಿತ್ರ ಬಿಡುಗಡೆಯ ನಂತರ ಬಹುತೇಕ ಪ್ರೇಕ್ಷಕರು ಮೃಣಾಲ್‌ದ ಅವರನ್ನು ಪ್ರಶ್ನಿಸುವುದು ಚಿನು ಆ ರಾತ್ರಿ ಎಲ್ಲಿದ್ದಳು? ಇದಕ್ಕೆ ಉತ್ತರಿಸುತ್ತಾ ಮೃಣಾಲ್‌ದ ಹೇಳುತ್ತಾರೆ, “ಹಿಂದೆ ವೇಟಿಂಗ್ ಫಾರ್ ಗೋಡೋ ನಾಟಕವನ್ನು ಬರೆದ ನಾಟಕಕಾರ ಬೆಕೆಟ್‌ನನ್ನು ಕೂಡ ಹೀಗೆಯೇ ಪ್ರಶ್ನಿಸಿದ್ದರು, ಯಾರಿಗಾಗಿ ಕಾಯುತ್ತಿರುವುದು? ಯಾರು ಈ ಗೋಡೋ? ಅದಕ್ಕೆ ಬೆಕೆಟ್ ಹೇಳಿದ್ದು ನನಗೆ ಗೊತ್ತಿದ್ದರೆ ನಾನದನ್ನು ನಾಟಕದಲ್ಲಿ ಹೇಳುತ್ತಿರಲಿಲ್ಲವೇ!! ಹಾಗೆಯೇ ಚಿನು ಆ ರಾತ್ರಿ ಎಲ್ಲಿದ್ದಳೆಂದು ನನಗೆ ಗೊತ್ತಿದ್ದರೆ ನಾನು ಹೇಳುತ್ತಿರಲಿಲ್ಲವೇ!!”

ಅದರೆ ಇಡೀ ಚಿತ್ರಕ್ಕೆ ಒಂದು ನಿಜವಾದ ಭಾಷ್ಯೆ ಬರೆವುದು ಮತ್ತು ಇಡೀ ಚಿತ್ರದ ದಿಟ್ಟತೆ ಮತ್ತು ಹೆಣ್ಣಿನ ಆತ್ಮ ಗೌರವವು ತನ್ನ ಮೇರುತನವನ್ನು mrinal-sen2ಮುಟ್ಟುವ ಕ್ಷಣವೆಂದರೆ ಅಲ್ಲಿಯವರೆಗೂ ಅನಾರೋಗ್ಯದಿಂದ ನರಳುತ್ತ ಹಿನ್ನೆಲೆಯಲ್ಲಿ ಉಳಿದುಕೊಳ್ಳುವ ಕುಟುಂಬದ ತಾಯಿ ( ಮೃಣಾಲ್‌ದ ಪತ್ನಿ ಗೀತಾ ಸೇನ್) ಕ್ಲೈಮಾಕ್ಸಿನಲ್ಲಿ ಧಿಡೀರನೆ ಮುನ್ನಲೆಗೆ ಬಂದು ಇದಾವುದು ತನಗೆ ಸಂಬಂಧವಿಲ್ಲವೆಂಬಂತೆ ತನ್ನ ಮುಂಜಾವಿನ ಕಾರ್ಯಗಳಲ್ಲಿ ತೊಡಗುವುದರ ಮೂಲಕ ಇದು ನನ್ನ ಬದುಕು ಇದಕ್ಕೆ ನಾನೇ ಯಜಮಾನಿ, ಹಾಗೇಯೇ ಚಿನು ರಾತ್ರಿ ಎಲ್ಲಿದ್ದಳೆಂಬುದು ಅವಳ ವೈಯುಕ್ತಿಕ ಬದುಕು, ಅದಕ್ಕೆ ಅವಳು ಮಾತ್ರ ಯಜಮಾನಿ, ಅದನ್ನು ಪ್ರಶ್ನಿಸಲು ನಮಗಾರಿಗೂ ಹಕ್ಕಿಲ್ಲ ಎಂದು ಮೌನವಾಗಿಯೇ ಒಂದು ಶಬ್ದವನ್ನಾಡದೇ ಇಡೀ ವ್ಯವಸ್ಥೆಗೆ ದಿಟ್ಟ ಉತ್ತರ ನೀಡುತ್ತಾಳೆ. ಇಲ್ಲಿಯೇ “ಏಕ್ ದಿನ್ ಪ್ರತಿದಿನ್” ಗೆಲ್ಲುವುದು. ಇದೇ ಅದರ ಮಾನವೀಯತೆ. ಇದೇ ನಿರ್ದೇಶಕನ ಜೀವಪರ ಮನಸ್ಸು.

ಇದು ಈಗ ಮತ್ತೆ ನೆನಪಾಗಲಿಕ್ಕೆ ಕಾರಣ ಮೊನ್ನೆ ಮುಂಬೈನಲ್ಲಿ ಜರುಗಿದ ಮತ್ತೊಂದು ಅತ್ಯಾಚಾರದ ಪ್ರಕರಣವನ್ನು ಕೇಳಿದಾಗ, ಓದಿದಾಗ. ಇಂತಹ ಹತ್ತಾರು ಅತ್ಯಾಚಾರದ ಪ್ರಕರಣಗಳು ಇಂದು ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ಹಳ್ಳಿಗಳ, ಪಟ್ಟಣಗಳ ಮಟ್ಟದಲ್ಲಿ ನಡೆಯುವ india-rapeಅತ್ಯಾಚಾರಗಳು ಬೆಳಕಿಗೇ ಬರುತ್ತಿಲ್ಲ. ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಜಡ್ಡುಗಟ್ಟಿದೆಯೆಂದರೆ ಮಾಧ್ಯಮಗಳು ಯಾವುದಾದರೊಂದು ಅತ್ಯಾಚಾರದ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು. ಆಗಲೇ ನಾವು ಕೂಡ ಸ್ಪಂದಿಸುವುದು. ಆಗಲೇ ಮೂಲೆ ಸೇರಿದ್ದ ನಮ್ಮ ಮೊಂಬತ್ತಿಗಳು ಬೆಳಕು ಕಾಣುವುದು. ಇಲ್ಲದಿದ್ದರೆ ನಮ್ಮ ಪುಟ ತಿರುವಿ ನೋಡಿ ಮನಸ್ಥಿತಿ ನಿರಂತರವಾಗಿರುತ್ತದೆ. ಮಧ್ಯಮವರ್ಗದ ಈ ಅಮಾನವೀಯ ಹಿಪೋಕ್ರಸಿಯೇ ಇಂದಿಗೂ ನಮ್ಮನ್ನು ಕಾಡುತ್ತಿರುವುದು. ಇಂದು ಪ್ರತಿ ಅತ್ಯಾಚಾರದ ಸಂದರ್ಭದಲ್ಲೂ ಚಿನು ನಮ್ಮನ್ನು ಕಾಡತೊಡಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಚಿನುವಿನಂತೆಯೇ ಮೌನಕ್ಕೆ ಶರಣಾಗಬೇಕಾಗುತ್ತದೆ. ಅತ್ಯಾಚಾರಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ, ಅದನ್ನು ತಡೆಗಟ್ಟಲು ಮಾರ್ಗೋಪಾಯಗಳ ಕುರಿತಾಗಿ ಆ ಕ್ಷಣಕ್ಕೆ ನೂರಾರು ಚರ್ಚೆಯಾಗುತ್ತದೆ. ಮತ್ತೆ ಕಾನೂನು ವೈಫಲ್ಯ, ವೋಟ್ ಬ್ಯಾಂಕ್ ರಾಜಕಾರಣ, ಲೈಂಗಿಕ ಅನಾಗರಿಕತೆಯನ್ನು ಹುಟ್ಟು ಹಾಕುವ ಸಾಮಾಜಿಕ ಹಾಗೂ ಮಾನಸಿಕ ಸ್ಥಿತಿ ಒಟ್ಟಲ್ಲಿ ಎಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆಯೇ?

ಆದರೆ ನಗರೀಕರಣದ ಅಪಾಯಕಾರಿ ಬದುಕು ಮತ್ತು ಇದಕ್ಕೆ ಮೂಲಭೂತ ಕಾರಣಕರ್ತರಾದ ನಾವು, ಇದರ ಕುರಿತಾಗಿ ಚರ್ಚೆ ಆಗುತ್ತಿಲ್ಲ. stop-rapes-bombayಅತ್ಯಂತ ಸಂಕೀರ್ಣಗೊಳ್ಳುತ್ತಿರುವ, ಮಾನಗೆಡುತ್ತಿರುವ ಇಂದಿನ ಬದುಕನ್ನು ನಾವೇ ಸ್ವತಃ ಕಟ್ಟಿಕೊಂಡಿದ್ದು. ನಾವು ಕಟ್ಟಿದ ಈ ಕೊಳ್ಳುಬಾಕ ಸಂಸ್ಕೃತಿಯಿಂದಲೇ ಅತ್ಯಾಚಾರಿಗಳು ಹುಟ್ಟಿಕೊಳ್ಳುತ್ತಾರೆ. ಸಹಜವಾಗಿಯೇ ಇವರೆಲ್ಲ ಲುಂಪೆನ್ ಗುಂಪಿನಿಂದ ಬಂದವರಾಗಿರುತ್ತಾರೆ. ವ್ಯವಸ್ಥೆಯೊಂದರಲ್ಲಿ ಉಳ್ಳವರು ಮತ್ತು ಮತ್ತು ನಿರ್ಗತಿಕರ ನಡುವಿನ ಕಂದಕ ದೊಡ್ಡದಾದಷ್ಟು ಈ ಲುಂಪೆನ್ ಗುಂಪು ಬೆಳೆಯುತ್ತಾ ಹೋಗುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಇತರ ವಸ್ತುಗಳಂತೆಯೇ ಹೆಣ್ಣು ಸಹ ಒಂದು ಕಮಾಡಿಟಿ ಅಷ್ಟೇ. ಹೆಣ್ಣು ಭ್ರೂಣಾವಸ್ಥೆಯಲ್ಲಿದ್ದಾಗ ಹತ್ಯೆ ಮಾಡುವ ನಾಗರಿಕ ಸಮಾಜ ಬೆಳೆದ ನಂತರ ಎಡನೇ ದರ್ಜೆಯ ನಾಗರಿಕಳನ್ನಾಗಿರುಸುತ್ತದೆ. ಆಗಲೇ ಆಕೆಯನ್ನು ಕೇವಲ ಒಂದು ಭೋಗದ ವಸ್ತುವಾಗಿ ನೋಡಲು ಶುರು ಮಾಡುವುದು. ಟಿವಿ, ಫ್ರಿಜ್ ಕೊಂಡಂತೆ, ವರ್ಷಕ್ಕೊಮ್ಮೆ ಬದಲಾಯಿಸುವಂತೆ ಹೆಣ್ಣನ್ನು ಕೊಳ್ಳಲು, ಬದಲಾಯಿಸಲು ಪ್ರಯತ್ನಿಸುತ್ತದೆ ಈ ನಾಗರೀಕತೆ. ಅತ್ಯಾಚಾರದ ದೈಹಿಕ ಕ್ರೌರ್ಯ ಒಂದು ಕಡೆಯಾದರೆ ಮುಂದೇನು? ಮನೆಯ ಮಾಲೀಕ ಇದು ಮರ್ಯಾದಸ್ಥರು ವಾಸಿಸುವ ಸ್ಥಳವೆಂದು ಗೊಣಗಲು ಶುರು ಮಾಡಿದಾಗ ನಮ್ಮ ನೂರಾರು ಚಿನುಗಳು ಮುಂದೇನು ಮಾಡಬೇಕು??

Leave a Reply

Your email address will not be published. Required fields are marked *