Daily Archives: September 2, 2013

ದಲಿತರು ಮತ್ತು ಉದ್ಯಮಶೀಲತೆ…

ಸ್ನೇಹಿತರೇ,

ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆಶಯದಂತೆ ವರ್ತಮಾನ.ಕಾಮ್ ಬಳಗ ಇತರೆ ಸಮಾನಮನಸ್ಕ ಗುಂಪು ಮತ್ತು ಸಂಘಟನೆಗಳ ಜೊತೆಗೂಡಿ ರಾಜ್ಯದ ಹಲವು ಕಡೆ ಸಂವಾದ ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಮೊದಲ ಕಾರ್ಯಕ್ರಮ ಹಾಸನದಲ್ಲಿ ಇದೇ ಶನಿವಾರ (07-09-2013) ನಡೆಯುತ್ತಿದೆ. ವಿಷಯ: “ದಲಿತರು ಮತ್ತು ಉದ್ಯಮಶೀಲತೆ”.

ದಲಿತರು ಉದ್ಯಮಿಗಳಾಗಬೇಕೆ ಬೇಡವೆ, ಅವರೂ ಅಂತಿಮವಾಗಿ ಬಂಡವಾಳಶಾಹಿಯ ಶೋಷಕವರ್ಗದ ಪಾಲುದಾರರಾಗಬೇಕೆ, ಎನ್ನುವುದರಿಂದ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಉದ್ಯಮಿಗಳಾಗಲು ಇರುವ ಅಡೆತಡೆಗಳೇನು, ಬಂಡವಾಳ ಹೂಡಿಕೆ ಯಾರಿಂದ, ಇತ್ಯಾದಿ ವಿಷಯಗಳ ಬಗ್ಗೆ ಇಂದು ದೇಶದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಅನೇಕ ದಲಿತರು ಉದ್ಯಮಿಗಳಾಗಿ ಯಶಸ್ಸನ್ನೂ ಪಡೆಯುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಸರ್ಕಾರ ಮತ್ತು ಸಮಾಜದಲ್ಲಿ ಆಗಬೇಕಾದ ನೀತಿನಿರೂಪಣೆಗಳು, ಸುಧಾರಣೆಗಳು, ಮನಸ್ಥಿತಿಯ ಬದಲಾವಣೆ, ಇತ್ಯಾದಿಗಳ ಬಗ್ಗೆ ಮತ್ತು ಉದ್ಯಮಿಗಳಾಗಿ ಪರಿವರ್ತಿತರಾಗುವ ದಲಿತರ ಮೇಲಿರುವ ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಮಾಜ ಅವರಿಂದ ಬಯಸುವ ಅತಿಯಾದ ಜವಾಬ್ದಾರಿತನ ಮತ್ತು ನೈತಿಕತೆ, ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಸಂವಾದಗಳು ಆಗಬೇಕಿದೆ. ಅಂತಿಮವಾಗಿ ಉದ್ಯಮಕ್ಷೇತ್ರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವರ್ತಮಾನ.ಕಾಮ್ ಹಾಸನದ “ಸಹಮತ ವೇದಿಕೆ”ಯ ಜೊತೆಗೂಡಿ ಈ ಕಾರ್ಯಕ್ರಮ ಆಯೋಜಿಸಿದೆ. vartamaana-sahamata-invitationಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿದ ಮತ್ತು ದಲಿತಪರ ಹೋರಾಟಗಾರ ಕೆ.ಟಿ..ಶಿವಪ್ರಸಾದ್ ವಹಿಸುತ್ತಾರೆ. ಸಾಹಿತಿಗಳೂ, ಮಾಜಿ ವಿಧಾನಪರಿಷತ್ ಸದಸ್ಯರೂ, ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ಎಲ್.ಹನುಮಂತಯ್ಯನವರು ಮತ್ತು ಉದ್ಯಮಿಗಳೂ, Dalit Indian Chamber of Commerce & Industry (DICCI)ಯ ರಾಜ್ಯಾಧ್ಯಕ್ಷರೂ ಆದ ರಾಜಾ ನಾಯಕರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸನ್‌‌ರು, ನಮ್ಮ ವರ್ತಮಾನ.ಕಾಮ್ ಬಳಗದ  ಬಿ.ಶ್ರೀಪಾದ್ ಭಟ್ಟರೂ ಸಹ ಬರಲಿದ್ದಾರೆ.

ಹಾಸನದ “ಸಹಮತ ವೇದಿಕೆ”ಯ ಬಗ್ಗೆ ಒಂದೆರಡು ಮಾತು. ಹಾಸನದಲ್ಲಿರುವ ಕೆಲವು ಸಮಾನಮಸ್ಕ ಸ್ನೇಹೊತರು ಸೇರಿ ಕಟ್ಟಿಕೊಂಡಿರುವ ಈ ವೇದಿಕೆ ಅವರೇ ಹೇಳುವಂತೆ: “ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ ‘ಸಹಮತ ವೇದಿಕೆ’ ಸಾಹಿತ್ಯ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ.” ಅವರ ಇತ್ತೀಚಿನ ತಿಂಗಳುಗಳ ಕಾರ್ಯಕ್ರಮಗಳ ವಿವರಗಳು ಅವರ ಬ್ಲಾಗಿನಲ್ಲಿ ಇವೆ (sahamathasana.blogspot.in). ಪ್ರಾಮಾಣಿಕರೂ, ಬದ್ಧತೆಯುಳ್ಳ ಸಮಾಜಮುಖಿಗಳೂ ಆದ “ಸಹಮತ ವೇದಿಕೆ”ಯ ಸ್ನೇಹಿತರೊಡನೆಗೂಡಿ ವರ್ತಮಾನ.ಕಾಮ್‌ನ ಈ ತರಹದ ಮೊದಲ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ನಿಜಕ್ಕೂ ಸಂತೋಷವಿದೆ.

ಇನ್ನು ಇದೇ ಸಂದರ್ಭದಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು. ದಯವಿಟ್ಟು ಬರೆಯಿರಿ ಎಂದು ನಮ್ಮ ಬಳಗದ ಲೇಖಕರಲ್ಲಿ ಮತ್ತು ಓದುಗರಲ್ಲಿ ವಿನಂತಿಸುತ್ತೇನೆ. ಹಾಗೆಯೇ, ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿ. ಮತ್ತು, ಸಂವಾದದಲ್ಲಿ ನಿಮ್ಮ ಪರವಾಗಿ ಏನಾದರೂ ಪ್ರಶ್ನೆಗಳನ್ನು ಎತ್ತಬೇಕಿದ್ದಲ್ಲಿ ಅವನ್ನೂ ಕಾಮೆಂಟ್‌ ರೂಪದಲ್ಲಿ ಹಾಕಿ. ಅವನ್ನು ಕಾರ್ಯಕ್ರಮದಲ್ಲಿ ಮತ್ತು ಸಂವಾದದಲ್ಲಿ ಪಾಲ್ಗೊಂಡವರಿಗೆ ತಲುಪಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಸಂಪಾದಕ, vartamaana.com