ದಲಿತರು ಮತ್ತು ಉದ್ಯಮಶೀಲತೆ…

ಸ್ನೇಹಿತರೇ,

ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆಶಯದಂತೆ ವರ್ತಮಾನ.ಕಾಮ್ ಬಳಗ ಇತರೆ ಸಮಾನಮನಸ್ಕ ಗುಂಪು ಮತ್ತು ಸಂಘಟನೆಗಳ ಜೊತೆಗೂಡಿ ರಾಜ್ಯದ ಹಲವು ಕಡೆ ಸಂವಾದ ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಮೊದಲ ಕಾರ್ಯಕ್ರಮ ಹಾಸನದಲ್ಲಿ ಇದೇ ಶನಿವಾರ (07-09-2013) ನಡೆಯುತ್ತಿದೆ. ವಿಷಯ: “ದಲಿತರು ಮತ್ತು ಉದ್ಯಮಶೀಲತೆ”.

ದಲಿತರು ಉದ್ಯಮಿಗಳಾಗಬೇಕೆ ಬೇಡವೆ, ಅವರೂ ಅಂತಿಮವಾಗಿ ಬಂಡವಾಳಶಾಹಿಯ ಶೋಷಕವರ್ಗದ ಪಾಲುದಾರರಾಗಬೇಕೆ, ಎನ್ನುವುದರಿಂದ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಉದ್ಯಮಿಗಳಾಗಲು ಇರುವ ಅಡೆತಡೆಗಳೇನು, ಬಂಡವಾಳ ಹೂಡಿಕೆ ಯಾರಿಂದ, ಇತ್ಯಾದಿ ವಿಷಯಗಳ ಬಗ್ಗೆ ಇಂದು ದೇಶದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಅನೇಕ ದಲಿತರು ಉದ್ಯಮಿಗಳಾಗಿ ಯಶಸ್ಸನ್ನೂ ಪಡೆಯುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಸರ್ಕಾರ ಮತ್ತು ಸಮಾಜದಲ್ಲಿ ಆಗಬೇಕಾದ ನೀತಿನಿರೂಪಣೆಗಳು, ಸುಧಾರಣೆಗಳು, ಮನಸ್ಥಿತಿಯ ಬದಲಾವಣೆ, ಇತ್ಯಾದಿಗಳ ಬಗ್ಗೆ ಮತ್ತು ಉದ್ಯಮಿಗಳಾಗಿ ಪರಿವರ್ತಿತರಾಗುವ ದಲಿತರ ಮೇಲಿರುವ ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಮಾಜ ಅವರಿಂದ ಬಯಸುವ ಅತಿಯಾದ ಜವಾಬ್ದಾರಿತನ ಮತ್ತು ನೈತಿಕತೆ, ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಸಂವಾದಗಳು ಆಗಬೇಕಿದೆ. ಅಂತಿಮವಾಗಿ ಉದ್ಯಮಕ್ಷೇತ್ರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವರ್ತಮಾನ.ಕಾಮ್ ಹಾಸನದ “ಸಹಮತ ವೇದಿಕೆ”ಯ ಜೊತೆಗೂಡಿ ಈ ಕಾರ್ಯಕ್ರಮ ಆಯೋಜಿಸಿದೆ. vartamaana-sahamata-invitationಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿದ ಮತ್ತು ದಲಿತಪರ ಹೋರಾಟಗಾರ ಕೆ.ಟಿ..ಶಿವಪ್ರಸಾದ್ ವಹಿಸುತ್ತಾರೆ. ಸಾಹಿತಿಗಳೂ, ಮಾಜಿ ವಿಧಾನಪರಿಷತ್ ಸದಸ್ಯರೂ, ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ಎಲ್.ಹನುಮಂತಯ್ಯನವರು ಮತ್ತು ಉದ್ಯಮಿಗಳೂ, Dalit Indian Chamber of Commerce & Industry (DICCI)ಯ ರಾಜ್ಯಾಧ್ಯಕ್ಷರೂ ಆದ ರಾಜಾ ನಾಯಕರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸನ್‌‌ರು, ನಮ್ಮ ವರ್ತಮಾನ.ಕಾಮ್ ಬಳಗದ  ಬಿ.ಶ್ರೀಪಾದ್ ಭಟ್ಟರೂ ಸಹ ಬರಲಿದ್ದಾರೆ.

ಹಾಸನದ “ಸಹಮತ ವೇದಿಕೆ”ಯ ಬಗ್ಗೆ ಒಂದೆರಡು ಮಾತು. ಹಾಸನದಲ್ಲಿರುವ ಕೆಲವು ಸಮಾನಮಸ್ಕ ಸ್ನೇಹೊತರು ಸೇರಿ ಕಟ್ಟಿಕೊಂಡಿರುವ ಈ ವೇದಿಕೆ ಅವರೇ ಹೇಳುವಂತೆ: “ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ ‘ಸಹಮತ ವೇದಿಕೆ’ ಸಾಹಿತ್ಯ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ.” ಅವರ ಇತ್ತೀಚಿನ ತಿಂಗಳುಗಳ ಕಾರ್ಯಕ್ರಮಗಳ ವಿವರಗಳು ಅವರ ಬ್ಲಾಗಿನಲ್ಲಿ ಇವೆ (sahamathasana.blogspot.in). ಪ್ರಾಮಾಣಿಕರೂ, ಬದ್ಧತೆಯುಳ್ಳ ಸಮಾಜಮುಖಿಗಳೂ ಆದ “ಸಹಮತ ವೇದಿಕೆ”ಯ ಸ್ನೇಹಿತರೊಡನೆಗೂಡಿ ವರ್ತಮಾನ.ಕಾಮ್‌ನ ಈ ತರಹದ ಮೊದಲ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ನಿಜಕ್ಕೂ ಸಂತೋಷವಿದೆ.

ಇನ್ನು ಇದೇ ಸಂದರ್ಭದಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು. ದಯವಿಟ್ಟು ಬರೆಯಿರಿ ಎಂದು ನಮ್ಮ ಬಳಗದ ಲೇಖಕರಲ್ಲಿ ಮತ್ತು ಓದುಗರಲ್ಲಿ ವಿನಂತಿಸುತ್ತೇನೆ. ಹಾಗೆಯೇ, ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿ. ಮತ್ತು, ಸಂವಾದದಲ್ಲಿ ನಿಮ್ಮ ಪರವಾಗಿ ಏನಾದರೂ ಪ್ರಶ್ನೆಗಳನ್ನು ಎತ್ತಬೇಕಿದ್ದಲ್ಲಿ ಅವನ್ನೂ ಕಾಮೆಂಟ್‌ ರೂಪದಲ್ಲಿ ಹಾಕಿ. ಅವನ್ನು ಕಾರ್ಯಕ್ರಮದಲ್ಲಿ ಮತ್ತು ಸಂವಾದದಲ್ಲಿ ಪಾಲ್ಗೊಂಡವರಿಗೆ ತಲುಪಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಸಂಪಾದಕ, vartamaana.com

 

5 comments

  1. ದಲಿತರು, ಹಿಂದುಳಿದವರು ಮುಂದೆ ಬರಬೇಕಾದರೆ ಅವರು ಉದ್ಯಮ ರಂಗದಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಂಡು ತಮ್ಮವರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು. ಯಶಸ್ವೀ ಉದ್ಯಮಿಯಾಗಳು ಉನ್ನತ ವಿದ್ಯಾಭ್ಯಾಸವೇನೂ ಬೇಕಾಗಿಲ್ಲ. ಒಳ್ಳೆಯ ಯೋಚನಾಶಕ್ತಿಯಿದ್ದು ಹೊಸ ಕ್ಷೇತ್ರಗಳನ್ನು ಅನ್ವೇಷಿಸುವ, ಸಾಮಾಜಿಕ ಸಂವಹನ ಕಲೆಯಲ್ಲಿ ಮುಂದೆ ಇರುವವರು (ಅಂದರೆ ಬಾಯಿಯ ಬಲದಲ್ಲಿ) ಒಳ್ಳೆಯ ಉದ್ಯಮಿಯಾಗಬಲ್ಲರು. ಇದು ಎಲ್ಲರಲ್ಲೂ ಇರುವುದಿಲ್ಲ. ಸಂಪತ್ತಿನ ಉತ್ಪಾದನೆಗೆ ಉದ್ಯಮ ರಂಗದಲ್ಲಿ ದಲಿತರು, ಹಿಂದುಳಿದವರು ತೊಡಗದೆ ಮೀಸಲಾತಿಯಿಂದಲೇ ಅವರನ್ನು ಮೇಲಕ್ಕೆ ಎತ್ತಲು ಖಾಸಗೀಕರಣ, ಜಾಗತೀಕರ ಗೊಂಡಿರುವ ಜಗತ್ತಿನಲ್ಲಿ ಸಾಧ್ಯವಿಲ್ಲ. ಪ್ರವಾಹ ಖಾಸಗೀಕರಣ, ಜಾಗತೀಕರಣ, ಉದಾರೀಕರಣದ ದಿಕ್ಕಿನಲ್ಲಿ ಇದೆ. ಇದರ ವಿರುದ್ಧ ದಿಕ್ಕಿನಲ್ಲಿ ಈಜಲು ಸಾಧ್ಯವೇ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ಪ್ರವಾಹದ ಜೊತೆ ಸಾಗುವುದು ಇಂದು ಅನಿವಾರ್ಯ. ಯಶಸ್ವೀ ದಲಿತ ಉದ್ಯಮಿಗಳು ಮಾಧ್ಯಮ ರಂಗದಲ್ಲಿಯೂ ಕಾಲಿಟ್ಟು ತಮ್ಮ ಛಾಪನ್ನು ಮೂಡಿಸಬೇಕಾಗಿದೆ. ಇದುವರೆಗೆ ದಲಿತ ಉದ್ಯಮಿಗಳು ಮಾಧ್ಯಮ ರಂಗದಲ್ಲಿ ಕಾಣಿಸಿಕೊಂಡಿಲ್ಲ. ದಲಿತರ ಸರ್ವತೋಮುಖ ಉನ್ನತಿಗಾಗಿ ಅವರು ಮಾಧ್ಯಮ ರಂಗಕ್ಕೂ ಇಳಿಯಬೇಕಾದ ಅಗತ್ಯ ಇದೆ. ಅಂಬೇಡ್ಕರ್ ಚಿಂತನೆಗಳನ್ನು, ಆದರ್ಶಗಳನ್ನು ಯಶಸ್ವೀ ದಲಿತ ಉದ್ಯಮಿಗಳು ಸದಾ ನೆನಪಿನಲ್ಲಿ ಇಟ್ಟು ಶ್ರಮಿಸಬೇಕಾದ ಅಗತ್ಯ ಇದೆ. ಪುರೋಹಿತಶಾಹೀ ಚಿಂತನೆಗಳಿಂದ ದಲಿತ ಉದ್ಯಮಿಗಳು ಪ್ರಭಾವಿತರಾಗದೆ ದಲಿತರನ್ನು ವೈಚಾರಿಕತೆಯೆಡೆಗೆ ನಡೆಸುವ ದಾರಿದೀಪವಾಗಬೇಕು. ಬಹುತೇಕ ದಲಿತೇತರ ಮುಂದುವರಿದ ಜಾತಿಗಳ ಉದ್ಯಮಿಗಳು ಪುರೋಹಿತಶಾಹೀ ಚಿಂತನೆಯಿಂದ ಹೊರಬರದೆ ಇರುವ ಕಾರಣ ನಮ್ಮ ದೇಶದಲ್ಲಿ ವೈಚಾರಿಕತೆಯನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಬಹುತೇಕ ಮಾಧ್ಯಮ ಕ್ಷೇತ್ರ ದಲಿತೇತರ ಮುಂದುವರಿದ ಜಾತಿಗಳ ಹಿಡಿತದಲ್ಲಿರುವ ಕಾರಣ ಮಾಧ್ಯಮ ಕ್ಷೇತ್ರದಲ್ಲಿ ಮೂಢನಂಬಿಕೆಗಳ ಪ್ರಸಾರ ಸರ್ವೇಸಾಮಾನ್ಯವಾಗಿದೆ.

  2. ದಲಿತರು ುದ್ಯಮ ಕ್ಷೇತ್ರದಲ್ಲಿ ತೋಡಗಿ ಅಭಿವೃದ್ದಿ ಯಾಗಬೇಕು ಎನ್ನುವ ಚಿಂತಕರಿಗೆ ಮೂದಲಿಗೆ ನನ್ನ ನಮಸ್ಕಾರಗಳು.
    ದಲಿತರು ಯಾಕೆ ಉದ್ಯಮ ಕ್ಷೇತ್ರಕ್ಕೆ ತೋಡಗುತ್ತಿಲ್ಲ ೆನ್ನುವುದಕ್ಕೆ ಮೋದಲ ಸಮಸ್ಯೆ ಬಂಡಾವಳ. ಿದಕ್ಕೆ ನೀವು ಬಂಡವಾಳ ಬ್ಯಾಂಕ್ ಸಾಲ ಸೌಲಭ್ಸ ನೀಡುತ್ನಿದೆ ಎಂದು ಹೇಳಬಹುದು ಇರಲಿ ಸಾಲ ಪಡೆದು ಉದ್ಯ ಮ ಆರಂಭಿಸಿದರು ಬಹುರಾಷ್ಟೀಯ ಕಂಪನಿಗಳ ನಡುವೆ ದಲಿತರು ಸ್ಪಧೆ೵ ನಡೆಸಲು ಸಾಧ್ಯವೇ ? ೆಷ್ಟು ಮಂದಿ ಸಣ್ಣ ಕೈಗಾರಿಕೆಯ ುುದ್ಯಮದಾರರು ಲಾಭದಾಯಕದಲ್ಲಿದ್ದಾರೆ ?ೆಷ್ಟು ಮಂದಿ ದಲಿತರು ಇನ್ನೂ ಜೀತದಿಂದ ವಿಮುಕ್ತಿ ಹೋಂದಿಲ್ಲ ಿಂತಹ ಸನ್ನಿವೇಶದಲ್ಲಿ ಎಲ್ಲಿ ಆವರು ಉದ್ಯಮದಲ್ಲಿ ತೋಡಗಿಸಿಕೋಳ್ಳಲು ಸಾಧ್ಯ ?

  3. ದಲಿತರು ಆರ್ಥಿಕವಾಗಿ ಅಭಿವೃದ್ದಿ ಯಾಗಲು ಉದ್ಯಮದಲ್ಲಿ ತೊಡಗಿಸಿಕೂಳ್ಳ್ಕಬೇಕು ಎಂದು ಚಿಂತನೆ ನಡೆಸುತ್ತಿರುವ ೆಲ್ಲ಻ ಚಿಂತಕರಿಗೆ ನನ್ನ ನಮಸ್ಕಾರಗಳು. ಮೂದಲು ದಲಿತರು ಉದ್ಯಮ ತೆರೆಯಲು ಮುಖ್ಯ ವಾಗಿ ಅವರಲ್ಲಿ ಬಂಡಾವಳದ ಕೊರತೆ ಇದೆ. ಇದಕ್ಕೆ ನೀವು ಹೇಳಬಹುದು ಬ್ಯಾಂಕ್ ಸಾಲ ಸೌಲಭ್ಯ ನೀಡುತ್ನಿತದೆ ಎಂದು ಇರಲಿ ಸಾಲ ಪಡೆದು ಉದ್ಯಮ ಆರಂಭಿಸಿದರು ಇವರು ಬಹುರಾಷ್ಟೀಯ ಕಂಪನಿಗಳಿಗೆ ಪೈಪೋಟಿ ನಡೆಸಲುಸಾಧ್ಯವೇ ? ರಾಷ್ಟ್ರ ದಲ್ಲಿ ಎಷ್ಟು ಸಣ್ಣ ುದ್ಯಮಗಳು ಲಾಭದಾಯಕವಾಗಿದೆ ? ಅದಕ್ಕೆ ದಲಿತರು ಉದ್ಯಮದಲ್ಲಿ ತೂಡಗಿಸಿಕೂಂಡಿಲ್ಲ. ಕೆಲವೇ ಮಂದಿ ದಲಿತರು ಸ್ವಲ್ಪಮಟ್ಟಿಗೆ ಮುಂದುವರೆದಿರಬಹುದು ಆದರೆ ಶೇ 75 ಜನರು ಇನ್ನೂ ಜೀತದಿಂದ ವಿಮುಕ್ತರಾಗಿಲ್ರಲ. ಿತ್ತೀಚಿನ ವಿದ್ಯಾವಂತರು ನಿರುದ್ಯೋಗಿಗಳಾಗಿ ಬಡತನದಲ್ಲಿ ಬದುಕು ನಡೆಸುತ್ತಿದ್ದಾರೆ ಆವರು ಎಲ್ಲಿ ಉದ್ಯಮ ಮಾಡಲು ಸಾಧ್ಯ ? ಬ್ಬ್ಯಾಂಕ್ಯ್ ಎಂತಹವರಿಗೆ ಸಾಲ ನೀಡುತ್ತಿದೆ ಎಂಬುದನ್ನು ಮೂದಲು ಗಮನಿಸಬೇಕು

  4. ಹಾಸನದಲ್ಲಿ ನಡೆಯಲಿರುವ ‘ದಲಿತರು ಮತ್ತು ಉಧ್ಯಮಶೀಲತೆ’ ವಿಚಾರ ಸಂಕಿರಣ ಮತ್ತು ಸಂವಾದಕ್ಕೆ ಅಧ್ಯಕ್ಷರಾಗಿರುವ ಕೆ.ಟಿ.ಶಿವಪ್ರಸಾದರಿಗೆ ಈ ಬಗ್ಗೆ ವಿಚಾರಿಸಿದೆ. ಆಗತಾನೇ ಮೈಸೂರಿನಿಂದ ಬಂದಿದ್ದ ಕೆ.ಟಿ., ತನ್ನ ತಮ್ಮಂದಿರು ನಡೆಸುತ್ತಿರುವ ‘ಕಾರ್ಲೆ’ ಉಧ್ಯಮದ ಬಗ್ಗೆ ಹೇಳತೊಡಗಿದರು. ಇವೆಲ್ಲಾ ಅವರು ಅಧ್ಯಕ್ಷ ಭಾಷಣದಲ್ಲಿ ಹೇಳಬಹುದಾದ್ದರಿಂದ ನಾನು ಇಲ್ಲಿ ಹೇಳಲು ಹೋಗುವುದಿಲ್ಲ. ಇದೊಂದು ಹೇಳದಿರದೆ ಇರಲಾಗದು. ನಾನು ಯಾವತ್ತೂ ಇದರ ಬಗ್ಗೆ ಯೋಚಿಸಿರಲಿಲ್ಲ. ‘ದಲಿತರು ಹೋಟೆಲ್ ಉಧ್ಯಮವನ್ನು ನಡೆಸಿ ಯಶಸ್ವಿಯಾಗಬಹುದೇನಯ್ಯಾ?’ ಕೆ.ಟಿ. ಕೇಳಿದರು. ನಾನು ದಂಗಾದೆ. ನನ್ನ ಮುಂದೆ ‘ಶಿವಳ್ಳಿ ಬ್ರಾಹ್ಮಣರ’ ‘ಉಡುಪಿ ಬ್ರಾಹ್ಮಣರ’ ‘ಕಾಮತರ’ ‘ ‘ಆಯ್ಯಂಗಾರರ’ ಬ್ರಾಂಡ್ ಗಳು ಮೂಡಿ ದಲಿತರು ಇವರ ಮುಂದೆ ಯಾವ ಬ್ರಾಂಡ್ ಇಟ್ಟು ಯಶಸ್ವಿಯಾಗಬಹುದೆಂದು ಯೋಚಿಸಿ ದಿಗಿಲಾಯಿತು. ನಿನ್ನ ವಿಚಾರಗಳನ್ನು ಕೇಳಿದರೆ ಮುಂದೆ ಯಾರೂ ನಿನ್ನನ್ನು ವಿಚಾರಗೋಷ್ಳಿಗಳಿಗೆ ಕರೆಯುವುದಿಲ್ಲ ಪ್ರಸಾದ್ ಎಂದೆ. ಬಳ್ಳಾರಿವರೆಗೆ ಟ್ಯಾಕ್ಸಿ ಫೇರ್ ಕೊಟ್ಟು ಕರಿತಾರಲಯ್ಯಾ ಮತ್ತೇ? ಎಂದರು.

  5. ದಲಿತರು ಉದ್ಯಮ ಸ್ಥಾಪಿಸಲು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲ ನೀಡದಿದ್ದರೆ ಈಗಾಗಲೇ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ದಲಿತ ಉದ್ಯಮಿಗಳು ಅದಕ್ಕಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿ ಉದ್ದಿಮೆ ಸ್ಥಾಪಿಸಲು ಮುಂದೆ ಬರುವ ದಲಿತರಿಗೆ ಸಾಲ ಸೌಲಭ್ಯ ಹಾಗೂ ಮಾರ್ಗದರ್ಶನ ನೀಡುವ ಹಾಗೂ ಮಾರುಕಟ್ಟೆ ಕ್ಷೇತ್ರದಲ್ಲಿ ಸಹಾಯ ಮಾಡಲು ಮುಂದಾಗಬಹುದು. ಉದ್ದಿಮೆ ಕ್ಷೇತ್ರದಲ್ಲಿ ಈಗಾಗಲೇ ಕೆಲವು ದಲಿತ ಉದ್ಯಮಿಗಳು ಯಶಸ್ವಿಯಾಗಿದ್ದಾರೆ. ಅವರು ಹೇಗೆ ಉದ್ದಿಮೆಯನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ ಎಂಬ ಬಗ್ಗೆ ಅಧ್ಯಯನ ಮಾಡಿ ಅದರಂತೆ ಉಳಿದವರೂ ಮುನ್ನಡೆಯಲು ಆಲೋಚಿಸಬಹುದಾಗಿದೆ. ದಲಿತರ ಉದ್ಯಮ ಹಾಗೂ ಸ್ವಉದ್ಯೋಗಕ್ಕೆ ನೆರವು ನೀಡಲು ಸರಕಾರ ಒಂದು ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸಬಹುದು.
    ಕೋಳಿ ಸಾಕುವ ಫಾರ್ಮುಗಳನ್ನು ನಡೆಸುವುದು, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ ಫಾರ್ಮುಗಳನ್ನು ನಡೆಸುವುದು, ಆಡು ಸಾಕಣೆ, ಅಣಬೆ ಬೆಳೆಸುವುದು ಹೀಗೆ ಸಣ್ಣ ಪ್ರಮಾಣದಲ್ಲಿ ಶುರು ಮಾಡಿ ನಿಧಾನವಾಗಿ ಅನುಭವ ಹಾಗೂ ಲಾಭಾಂಶ ಕೂಡುತ್ತಾ ಹೋದಂತೆ ಅದನ್ನು ವಿಸ್ತರಿಸಬಹುದು. ಅದೇ ರೀತಿ ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕವಾಗಿ ಮುಂದೆ ಬಂದ ದಲಿತರು ಇಂಥ ಉದ್ದಿಮೆಗಳನ್ನು ಸ್ಥಾಪಿಸಿ ದಲಿತರಿಗೆ ಉದ್ಯಮದಲ್ಲಿ ಉದ್ಯೋಗ ನೀಡಲು ಮುಂದೆ ಬರಬಹುದು.

Leave a Reply

Your email address will not be published.