ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ : ಗಂಗೆ, ಗೌರಿ,.. ಭಾಗ–8

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು

ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಶಾಲೆಯಿಲ್ಲದ ದಿನಗಳಲ್ಲಿ ದಿನಪೂರ್ತಿ ಬಯಲಲ್ಲಿರುತ್ತಿದ್ದ ನಮ್ಮ ನಿತ್ಯದ ನಿಗಧಿತ ಕಾಯಕವೆಂದರೆ ದನಮೇಯಿಸುವುದೇ ಆಗಿತ್ತು. ಬೆಳಗಿನ ಕಾಯಕದಲ್ಲಿ ಏರುಪೇರಾದರೂ ಇಳಿಹೊತ್ತಿನಲ್ಲಿಯ ಈ ಅವಕಾಶವನ್ನು ನಾವುಗಳು ಮಿಸ್‌ಮಾಡಿಕೊಳ್ತಿರಲಿಲ್ಲ. ಯಾಕೆಂದರೆ ತೆರೆದ ವಿಶಾಲವಾದ ಬಯಲಿನಲ್ಲಿರುವ ಗದ್ದೆಗಳೇ ಲಗೋರಿ ಮತ್ತಿತರ ಆಟಗಳ ಅಂಗಣವಾಗಿ ಆಕ್ಷೇಪಣಾರಹಿತವಾಗಿ ಒದಗಿಬರುತ್ತಿದ್ದ ಘಳಿಗೆಯದು.ಹೊತ್ತುಮುಳುಗಲು ಇನ್ನೇನು ಘಳಿಗೆ ಹೊತ್ತಿದೆ ಎನ್ನುತ್ತಿರುವಂತೆ ಅಥವಾ ಬಯಲಿನಲ್ಲಿ ಆಟವಾಡುತ್ತಾ ಮೈಮರೆಯುತ್ತಿದ್ದ ನಮ್ಮ ಆಟಗಳಿಗೆ ಬ್ರೇಕ್‌ಬೀಳುವ ಹೊತ್ತು ಕರೆಯುವ ಹಸುಗಳಿಗಾಗಿ ತಾಯಂದಿರುಗಳು ಹಸಿಹುಲ್ಲನ್ನು ಸಂಗ್ರಹಿಸಿಕೊಂಡು ಬರುತ್ತಿದ್ದ ದೃಶ್ಯ ಅಂದು ಸಾಮಾನ್ಯವಾಗಿತ್ತು. ಅಮ್ಮಂದಿರ ಸೊಂಟದಲ್ಲಿನ ಹುಲ್ಲಬುಟ್ಟಿಗಳನ್ನು Cows-pastureನೋಡುತ್ತಿದ್ದಂತೆಯೇ ಕರೆಯುವ ಹಸುಗಳು ಅಥವಾ ಮುದ್ದಿನ ಎಳೆಗರುಗಳು ಚಂಗುಹಾರಿಕೊಳ್ಳುತ್ತಾ ಬೆನ್ನಟ್ಟುತ್ತಿದ್ದುವು. ಅಮ್ಮಂದಿರಿಗೂ ಇದು ಬೇಸರದ ಸಂಗತಿಯಲ್ಲ. ಅವರುಗಳು ಸಂಭ್ರಮವನ್ನೇ ಅನುಭವಿಸುತ್ತಿದ್ದರು. ನಮ್ಮಮ್ಮನೂ ಹರ್ಲಿಹುಲ್ಲನ್ನೋ, ನೆಲಗೊಣ್ಣೆಯನ್ನೋ ಮಟ್ಟ್ಹುಲ್ಲನ್ನೋ ಕಿತ್ತು ಹೊಳೆಯಲ್ಲಿ ತೊಳೆದು ಕುಕ್ಕೆಯಲ್ಲಿಹಾಕಿ, ಸೊಂಟದ ಮೇಲೇರಿಸಿಕೊಂಡು ಬರುತ್ತಿದ್ದ ಆ ದಿನಗಳಲ್ಲಿ ಶಾಲೆಯಿಲ್ಲದ ಹೊತ್ತು ಬಯಲಲ್ಲಿ ದನ ಮೇಯಿಸಿಕೊಂಡು ಲಗೋರಿ ಆಡುತ್ತಿದ್ದ ಸರದಿ ನನ್ನದಾಗಿರುತ್ತಿತ್ತು. ನಮ್ಮ ಅಮ್ಮನ ಹುಲ್ಲಹೆಡಿಗೆ ನೋಡುತ್ತಿದ್ದಂತೆಯೇ ಕೊಂಗಾಟದ ಕುಣಿತ ಕುಣಿದು ಸೊಂಟದೆತ್ತರದಲ್ಲಿಯೇ ಬಾಯಿಗೆ ಸಿಕ್ಕುತ್ತಿದ್ದ ಕುಕ್ಕೆಯ ಹುಲ್ಲನ್ನು ಮುಕ್ಕಲು ನಮ್ಮ ಹಸುಗಳಾಗಿದ್ದ ಕೆಂಪಿ, ಬುಡ್ಡಿಯರುಗಳು ಓಡುತ್ತಿದ್ದವು. ಈ ದನಗಳು ಓಡಿಬರುತ್ತಿದ್ದಂತೆಯೇ ನನ್ನಮ್ಮ ಅವುಗಳಿಗೆ ಕೈತುತ್ತು ತಿನಿಸುವಂತೆ ಅವುಗಳ ಬಾಯಿಗೆ ನಾಲ್ಕೆಳೆ ಹುಲ್ಲು ಇರಿಸಿ, ಕೆಚ್ಚಲಿಂದ ಹಾಲೆಳೆಯುವ ಹೊತ್ತು ಅವುಗಳೆದುರು ಕ್ಯಾಡಬರಿ ಚಾಕಲೇಟು ಇಡುವಂತೆ ಇಡಲೇಬೇಕಾಗಿದ್ದ ಹುಲ್ಲನ್ನು ಜೋಪಾನವಾಗಿ ಉಳಿಸಿಕೊಂಡು ಬಯಲಿನಿಂದ ದಾಟಿಹೋಗಲು ಹರಸಾಹಸಪಡುತ್ತಿದ್ದಳು. ನಮ್ಮ ಹಾಗೂ ಅಮ್ಮನ ಅಕ್ಕರೆಯಲ್ಲಿ ಮಿಂದ ಇವುಗಳನ್ನು ಕೆಲವೊಮ್ಮೆ ಹೀಗೆ ಓಡಿಬಂದಾಗ ಹತ್ತಿರಬರುವುದಕ್ಕೇ ಅವಳು ಬಿಡುತ್ತಿದ್ದುದಿಲ್ಲ. ಕೊಂಗಾಟದ ಬೈಗುಳ ಬೈಯ್ದು ಮೂಗು ಮುಚ್ಚಿಕೊಳ್ಳುತ್ತಾ, ದೂರವೇ ಉಳಿಯುವಂತೆ ಸಣ್ಣ ಕೋಲು ಹಿಡಿದು ಗದರುತ್ತಾ ದೂರದಿಂದಲೇ ನಾಲ್ಕೆಳೆ ಹುಲ್ಲನ್ನು ನಾಯಿಗೆ ಎಸೆಯುವಂತೆ ಎಸೆದು ಪಾರಾಗುತ್ತಿದ್ದಳು. ಯಾಕೆಂದರೆ ಅವು ಅವಳಿಗೂ, ನಮಗೂ ಗೊತ್ತಿರುವಂತೆ ಹುಲ್ಲನ್ನಷ್ಟೇ ತಿನ್ನುವವುಗಳಾಗಿರಲಿಲ್ಲ.ಅವುಗಳ ಅಹಾರ ಬಹುಮಾದರಿಯದಾಗಿತ್ತು. ಯಾರ್‍ಯಾರೋ ತಿನ್ನುವ ಏನೇನೋ ಆಹಾರಗಳು, ಆಹಾರಗಳೇ ಆಗಿದ್ದರೂ ಕೇಳುವ ಕಿವಿ, ಅನುಭವಿಸುವ ಮೈ ಒಲ್ಲೆಯೆನ್ನುವುದು ಉಂಟಲ್ಲವೇ? ಒಲ್ಲೆಯೆಂದರೂ ನಿಜವನ್ನೂ ಒಪ್ಪಿಕೊಳ್ಳಬೇಕಲ್ಲವೇ?ಅವು ನಮ್ಮ ಹಸುಗಳಲ್ಲವೇ?

ಹುಲ್ಲು ತಿನ್ನುವ ಸಂಗತಿಯೊಂದಿಗೆ ತಗಲು ಹಾಕಿಕೊಂಡ ಹಸು ಹುಲ್ಲನ್ನು ಮಾತ್ರ ತಿನ್ನುತ್ತದೆಯೆ ಎಂದು ಕೇಳಿದರೆ ಉತ್ತರ ಏನೆನ್ನಬೇಕು? cows-garbageಪವಿತ್ರವಾದ ಗೋವು ಪವಿತ್ರವೂ, ಶುದ್ಧವೂ ಆದ ಹುಲ್ಲನ್ನು ಮಾತ್ರ ತಿನ್ನುತ್ತದೆ ಎಂದು ಹೇಳುವವರಿದ್ದರೆ ಒಂದೋ ಅವರ ಉದ್ದೇಶವನ್ನು ಅನುಮಾನಿಸಬೇಕು ಇಲ್ಲವೇ ಅವರ ಲೋಕಾನುಭವಕ್ಕೆ ಕನಿಕರಪಡಬೇಕು. ಯಾಕೆಂದರೆ ಹಸುವನ್ನು ಶುದ್ಧ ಸಸ್ಯಾಹಾರಿ ಎಂದು ವರ್ಗೀಕರಿಸುವುದೂ ಪೂರ್ಣ ಪ್ರಮಾಣದಲ್ಲಿ ಸರಿಯೆನಿಸಲಾರದು. ಯಾವೊಂದು ಪ್ರಾಣಿ ಸಮುದಾಯವೂ ಮುಖ್ಯಾಹಾರದಲ್ಲಿ ಸಮಾನತೆ ತೋರಬಹುದಲ್ಲದೆ, ಇಡಿಯ ಆ ಜೀವಸಮುದಾಯವೇ ಆಹಾರದಲ್ಲಿ ಏಕರೂಪಿಯಾಗಿ ವರ್ತಿಸುತ್ತದೆ ಎಂಬ ತರ್ಕ ತಳಬುಡವಿಲ್ಲದ ತರ್ಕವೇ ಸರಿ. ಎಲ್ಲವೂ ಹುಲ್ಲು ತಿನ್ನುತ್ತವೆ ಎಂಬಲ್ಲಿ ಅನುಮಾನವಿಲ್ಲ. ಆದರೆ ತರಾವರಿ ಆಹಾರಾಸಕ್ತಿಯಿರುವ ಹಸುಗಳು ಒಂದು ತಿನ್ನುವುದನ್ನೇ ಮತ್ತೊಂದು ತಿಂದೇ ತಿನ್ನುತ್ತದೆ ಎಂದು ಪ್ರಮೇಯ ಕಟ್ಟಲು ಸಾಧ್ಯವಿಲ್ಲ. ನಾಡಾಡಿ ಹೋರೆಮ್ಮೆ, ಹಸು ಕರುವಿನ ಆಹಾರ ಲೋಕವು ಮನುಷ್ಯರ ಹೇಲಿನಿಂದ ತೊಡಗಿ, ಕರುಹಾಕುವ ವೇಳೆಯ ಮಾಸು (ಕಸ),ಅವುಗಳದ್ದೇ ಕರುಗಳ ವಿಸರ್ಜನೆಯಾದ ಕಂದಿ, ಒಣಗಿದ ಮೂಳೆ, ಮಣ್ಣು, ಬಟ್ಟೆ, ಕಂಬಳಿ, ಪ್ಲಾಸ್ಟಿಕ್‌ಡಬ್ಬ, ಹೊಗೆಸೊಪ್ಪು, ಕಾಸರಕನ (ಕಾಯೆರ್) ಬೀಜ, ಗೊಬ್ಬರಗಳ ತನಕವೂ ವಿಸ್ತರಿತವಾಗಿದೆ ಎಂದರೆ ಅನೇಕರು ಹುಬ್ಬೇರಿಸಬಹುದು, ಕೆಲವರಿಗೆ ಅಸಹ್ಯ ಅನಿಸಬಹುದು. ಇನ್ನು ಕೆಲವರು ಸುತರಾಂ ಒಪ್ಪದೆಯೂ ಇರಬಹುದು. ಯಾಕೆಂದರೆ ಶುದ್ಧವಾದ (?) ಹಾಲುಕೊಡುವ ಹಸು, ಪವಿತ್ರವಾದ ಭಾವನೆಯ ಹೂರಣವಾಗಿರುವ ಹಸು ಚಿ ಕೊಳಕನ್ನೆಲ್ಲಾ ತಿನ್ನುತ್ತದೆ ಎಂಬುದು ಕಣ್ಣೆದುರು ಕಾಣಬಾರದ ಸತ್ಯ. ಆದರೂ ಅವು ಅದನ್ನು ಹಿಂದಿನಿಂದ ತಿನ್ನುತ್ತಿದ್ದವು ಮತ್ತು ಈಗಲೂ ತಿನ್ನುತ್ತಿವೆ. ಪದವಿ ಮುಗಿಸುವತನಕ ಮತ್ತು ಆ ಮೇಲೂ ಕೂಡ ಇಂತಹ ಹಸುಗಳನ್ನು ಹಟ್ಟಿಯಲ್ಲಿ ಕಟ್ಟುವವೇಳೆ ಅವುಗಳ ಮೂತಿ ತಗುಲಿದಾಗ ಮೈಯೆಲ್ಲಾ ಹೇಸಿಕೊಂಡು ಸ್ನಾನದ ಮೇಲೆ ಮತ್ತೆ ಸ್ನಾನಮಾಡಿದ ಅನುಭವ ನನಗಿದೆ.

ಮನುಷ್ಯರ ಸೆಗಣಿ ಹೋರೆಮ್ಮೆ, ಹಸು, ಎತ್ತುಗಳೆಲ್ಲವುದರ ಬಹಳ ಪ್ರಿಯವಾದ ಆಹಾರಗಳಲ್ಲೊಂದು. ಆದರೆ ಎಲ್ಲವೂ ಶತಸಿದ್ಧವಾಗಿ cows-garbage-paperಇದನ್ನು ತಿಂದೇ ತೀರುತ್ತವೆ ಎನ್ನುವುದು ಅಪಚಾರವಷ್ಟೇ ಅಲ್ಲ ಸುಳ್ಳು ಕೂಡಾ ಆಗುತ್ತದೆ. ನಮ್ಮ ಹಟ್ಟಿಯಲ್ಲಿ ನಾನು ಕಂಡಂತೆ ಶೇ.80 ರಷ್ಟು ಜಾನುವಾರುಗಳು ಹೇಲುಬಾಕಗಳು. ಕೆಲವಂತೂ ಇದನ್ನು ತಿನ್ನುವುದಕ್ಕಾಗಿಯೇ ವಿಶೇಷ ತಂತ್ರ ಮಾಡುತ್ತಿದ್ದವು. ನಮ್ಮ ಮನೆಯಲ್ಲಿ ಕೆಂಪಿ ಅಂತ ಒಂದು ದನ ಬಹಳ ವರ್ಷಗಳವರೆಗೂ ಇತ್ತು. ಹತ್ತಿಂಚು ಉದ್ದದ ಮುಂದಕ್ಕೆ ಬಾಗಿದ ಎರಡು ಕೋಡುಗಳಿಂದ ಇದು ಕೆಲವೊಮ್ಮೆ ನಮಗೆ ಆತಂಕವನ್ನೂ ಉಂಟುಮಾಡುತ್ತಿತ್ತು. ಇದರ ಮೈಬಣ್ಣ ಅತ್ಯಂತ ಸೊಗಸು. ಜಾಜಿಕೆಂಪು ಬಣ್ಣದ ಈ ಹಸುವಿನ ಬೆಳ್ಳನೆಯ ಮುಸುಡಿಯ ಮೇಲೆ ಕಪ್ಪುಮಚ್ಚೆಗಳಿದ್ದವು. ಹೆಚ್ಚು ಹರಾಮಿಯೂ ಅಲ್ಲದ, ತೊಂಡು ಮೇಯುವ ಕೆಟ್ಟಸ್ವಭಾವದ್ದೂ ಅಲ್ಲದ ಈ ಹಸುವಿಗೆ ಇದೊಂದು ಕೆಟ್ಟಚಾಳಿಯಿತ್ತು. ಇದಕ್ಕೆಂದೇ ಮೇವಿಗೆ ಬಿಡುವುದಕ್ಕಾಗಿ ಕೊರಳುಬಳ್ಳಿ ತಪ್ಪಿಸಿ ಹಟ್ಟಿಯಿಂದ ಹೊರಗೆ ಎಬ್ಬುವಾಗಲೇ ಉಳಿದವುಗಳಿಗಿಂತ ಮುಂದೆ ಹೊರಟು, ತನ್ನ ಇಷ್ಟದ ಒಣಕುತಿಂಡಿ ಸಿಕ್ಕುವ ಪರಿಚಿತ ಜಾಗಕ್ಕೆ ನುಗ್ಗಿ ಬಿಡುತ್ತಿತ್ತು. ಸಾರ್ವತ್ರಿಕವಾಗಿ ಶೌಚಾಲಯರಹಿತ ಹಳ್ಳಿಯಾಗಿದ್ದ, ಆಂಶಿಕವಾಗಿ ಈಗಲೂ ಹಾಗೆಯೇ ಇರುವ ನಮ್ಮೂರಿನಲ್ಲಿ ಇದಕ್ಕೇನೂ ಬರಗಾಲವೂ ಇರಲಿಲ್ಲ. ಈ ಜಾಗಗಳಲ್ಲಿ ಕಾಲು ಹಾಕಲು ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದ್ದ ನಮಗೆ ಆ ಪ್ರಕ್ರಿಯೆಯನ್ನು ತಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಇದೇ ತೆರನಾದ ವರ್ತನೆಯನ್ನು ಹಟ್ಟಿಗೆ ಎಬ್ಬುವಾಗಲೂ ಪುನರಾವರ್ತಿಸುತ್ತಿದ್ದ ಚಂದದ ಮೈಬಣ್ಣದ ಈ ಹಸು ಗೋಧೂಳಿಯಲ್ಲಿ ಉಳಿದವುಗಳಂತೆ ಹಟ್ಟಿಗೆ ಬಾರದೇ ಗ್ವಾಯ್‌ಒಳಾಲ್(ಗೇರುತೋಟ)ಗೆ ನುಗ್ಗಿ ತನ್ನ ಕೆಲಸ ನಿರ್ವಹಿಸುತ್ತಿತ್ತು. ಕೆಂಪಿಯೂ ಸೇರಿದಂತೆ ಅನೇಕ ಜಾನುವಾರುಗಳು ಶೌಚಾಲಯವೇ ಇಲ್ಲದೇ ಎಲ್ಲೆಂದರಲ್ಲಿ ಅವತರಿಸುತ್ತಿದ್ದ ಈ ಮಲಿನದ ಕುರುಹೂ ಸಿಕ್ಕದಂತೆ ನೆಕ್ಕಿ ಬಿಡುತ್ತಿದ್ದವು. ಕಣ್ತಪ್ಪಿ ಉಳಿದುದನ್ನು ಒಣಕಲು ತಿಂಡಿ ತಿನ್ನುವಂತೆ ತಿನ್ನುತ್ತಿದ್ದವು. ಇದೇ ಸ್ಥಿತಿ ಬೇಸಿಗೆಯ ಕಾಲದಲ್ಲಿ ಹೊಳೆಗೆ ಮತ್ತು ಹೊಳೆಯಿಂದ ಹೋರೆಮ್ಮೆಗಳನ್ನು ಎಬ್ಬಿಕೊಂಡು ಬರುತ್ತಿದ್ದ ತೋಡಿನಲ್ಲಿಯೂ ಎದುರಾಗುತ್ತಿತ್ತು. ಲೋಕಕ್ಕೆ ತೋರದಂತೆ ಮರೆಯಿರುವ ಈ ಜಾಗ ಮಬ್ಬು ಹೊತ್ತಿನಲ್ಲಿ ಆಪ್ಯಾಯಮಾನವಾದ ಶೌಚಕ್ರಿಯೆಯ ತಾಣವಾಗುತ್ತಿದ್ದುದರಿಂದ ಜಾನುವಾರುಗಳನ್ನು ಈ ಜಾಗೆಯ ಮೂಲಕ ಎಬ್ಬಿಕೊಂಡು ಬರುವಾಗ ನಾವು ಯಾರೂ ಅವುಗಳ ಹಿಂದೆ ಬರುತ್ತಿರಲಿಲ್ಲ. ಹಾಗಾಗಿ ದೂರನಿಂತು ಹೈ, ಹೋ . . ಎಂದು ಬೊಬ್ಬಿಡುವ ನಮ್ಮ ಕೂಗಿಗೆ ಅವು ಕ್ಯಾರೆ ಅನ್ನದೆ ಅವುಗಳ ಪಾಡಿಗೆ ಓಣಿ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗುತ್ತಿದ್ದವು. ಹಾಗಾಗಿ ಹಟ್ಟಿಯಲ್ಲಿ ಇವುಗಳನ್ನು ಕಟ್ಟುವವೇಳೆ ಮೈ ಕೈ ತಾಗದಂತೆ ಸರ್ಕಸ್ ಮಾಡುವ ಜತೆಗೂ ಉಸಿರನ್ನು ಬಿಗಿಹಿಡಿದುಕೊಂಡು ಬೈಯ್ದುಕೊಳ್ಳುತ್ತಾ ಅವುಗಳ ಕೊರಳಿಗೆ ದಾಂಬು (ಹಗ್ಗ) ಸಿಕ್ಕಿಸುತ್ತಿದ್ದೆವು.

ಇನ್ನು ಕೆಲವು ಜಾನುವಾರುಗಳ ಆಹಾರದ ಆಯ್ಕೆ ಮತ್ತು ಬಯಕೆಯೇ ವಿಚಿತ್ರ ತೆರನಾಗಿದೆ. ನಮ್ಮ ಮನೆಯಲ್ಲಿದ್ದ ಬುಡ್ಡಿ ಎಂಬ ಹೆಸರಿನ ಹಸು ಕಾಸರಕದಕಾಯಿ ಆಗುವ ವೇಳೆ ಅದರ ಹಣ್ಣು ಮತ್ತು ಬೀಜ ತಿನ್ನಲು ಹುಡುಕಾಡುತ್ತಿತ್ತು. ಇದರ ಪರಿಣಾಮವಾಗಿ ಹೀಗೆ ತಿಂದಾಗಲೆಲ್ಲಾ ಅದು ಕೊಡುತ್ತಿದ್ದ ಹಾಲು ಕಾಸರಕನ ಬೀಜದ ಕಹಿಯಂಶ ತೋರಿಸುತ್ತಿತ್ತು. ಅದು ಕಾಸಾನ್(ಕಾಯೆರ್) ಹಣ್ಣುಬೀಜ ತಿಂದುದನ್ನು ಕಾಣದೆಯೂ ಅದರ ಹಾಲಿನ ಮೂಲಕ ಅದು ನಿನ್ನೆ ಏನನ್ನು ತಿಂದಿತ್ತು ಎಂಬುದನ್ನು ಗುರುತಿಸುತ್ತಿದ್ದೆವು. ಹಾಗೆಯೇ ಶೇ. 90ಕ್ಕೂ ಮಿಕ್ಕಿದ ಹಸು-ಎಮ್ಮೆಗಳು ಕರುಹಾಕುವಾಗ ಬೀಳುವ ತಮ್ಮದೇ ದೇಹದ ಮಾಸು (ಕಸ) ತಿನ್ನಲು ಹಪಹಪಿಸುತ್ತವೆ. cows-garbageಹೀಗೆ ತಿಂದರೆ ಹಾಲು ಖೋತಾ ಆಗುತ್ತದೆ ಎಂಬ ನಂಬುಗೆಯ ಮೇರೆಗೆ ಅವು ಅದನ್ನು ತಿನ್ನದಂತೆ ಕಾಯುತ್ತಾರೆ. ರಾತ್ರಿವೇಳೆ ಕರುಹಾಕಿದರೆ ತಿನ್ನದಿರಲಿ ಎಂದು ಎಚ್ಚರಿಕೆವಹಿಸಿ ಎರಡೆರಡು ಕಡೆಯಿಂದ ಹಗ್ಗ ಕಟ್ಟಿದರೂ ಕೆಲವು ಹಸುಗಳು ಏನಾದರೂ ಸರ್ಕಸ್ ಮಾಡಿ ತಿಂದುಬಿಡುತ್ತವೆ. ಅಷ್ಟೇ ಅಲ್ಲದೆ ಕರುಹಾಕಿದಾಗ ಕರುವಿನ ಮೈಮೇಲಿನ ಪೊರೆಯನ್ನು ಕೆಲವು ಹಸುಗಳು ನೇರವಾಗಿಯೇ ನೆಕ್ಕಿ ಸಾಫು ಮಾಡುತ್ತವೆ. ಇನ್ನು ಕೆಲವು ಹಸುಗಳಿಗೆ ಹಾಗೆ ನೆಕ್ಕಲಿ ಎಂದು ಕರುವಿನ ಮೈಮೇಲೆ ಭತ್ತದ ತೌಡುಹಾಕಬೇಕಾಗುತ್ತದೆ. ತಮ್ಮದೇ ಕರುಗಳ ಕಂದಿಯನ್ನು ಸಹಜವಾಗಿಯೇ ತಾಯಿಹಸು ಮತ್ತು ಎಮ್ಮೆಗಳು ತಿನ್ನತ್ತವೆ. ಕರುಹಾಕಿದ ವೇಳೆಯಲ್ಲಿ ಕರುಗಳ ಕಾಲಿನ ಎಳೆಗೊರಸುಗಳ ಮೇಲ್ಪದರವನ್ನು ಉಗುರಿನಿಂದಲೋ, ಹಲ್ಲುಕತ್ತಿಯಿಂದಲೋ ಚಿವುಟಿತೆಗೆದು ಅದನ್ನು ತಾಯಿಹಸು/ಎಮ್ಮೆಗೇ ಕೊಡುತ್ತಾರೆ. ಹಾಗೆಯೇ ಕರುಗಳು ಮಣ್ಣು ತಿನ್ನುವುದು ಸಾಮಾನ್ಯ. ಕೆಲವೊಮ್ಮೆ ಈ ಚಾಳಿ ದೊಡ್ಡವಾದ ಮೇಲೂ ಮುಂದುವರೆಯಬಹುದು.

ಈ ಮೇಲಣ ವಿಲಕ್ಷಣ ಆದರೆ ಸಹಜ ಆಹಾರಾಸಕ್ತಿಗಳಲ್ಲದೆ ಇನ್ನು ಕೆಲವೊಂದು ಕಡೆ ಉಳುವ ಜಾನುವಾರುಗಳಿಗೆ ಚೆನ್ನಾಗಿ ಮೈಬರಲಿ ಎಂಬ ಉದ್ದೇಶದಿಂದ ಅವುಗಳು ಬಾಯರು ಕುಡಿಯುವ ಬಾಣೆಗೆ ರಾತ್ರಿ ಉಚ್ಚೆ ಹೊಯ್ದು ಅವು ಕುಡಿಯುವಂತೆ ಮಾಡುವುದುಂಟು. ಈ ರೂಢಿ ಅಧಿಕವಾಗಿ ಕಾಣುವುದು ಕೋಣಗಳಿಗೆ ಸಂಬಂಧಿಸಿದಂತೆ. ಉಳುವ ವೇಳೆ ಉಳುವಾತನೇ ಉಳುಮೆ ನಿಲ್ಲಿಸಿ ಅವುಗಳ ಬಾಯಿಗೆ ಉಚ್ಚೆ ಹೊಯ್ಯುವ ರೂಢಿಯನ್ನು ನಾನೂ ಸಾಮಾನ್ಯವಾಗಿ ಕಂಡಿದ್ದೇನೆ. ಹೀಗೆ ಮೂತ್ರ ಕುಡಿದ ಜಾನುವಾರುಗಳು ಆ ರೂಢಿಯಿಲ್ಲದವರ cattle-feedಮನೆಗೆ ಹೋದಾಗ ಮೈತೆಗೆಯುತ್ತವೆಯೆಂದೂ ಹೇಳಲಾಗುತ್ತದೆ. ಆ ಕಾರಣಕ್ಕಾಗಿ ಈ ಮೂತ್ರ ಕುಡಿಸುವ ರೂಢಿಯನ್ನು ಯಾರೂ ಮುಕ್ತವಾಗಿ ಹೇಳಿಕೊಳ್ಳೋದಿಲ್ಲವಂತೆ. ಉಳುವ ಜಾನುವಾರುಗಳ ಖರೀದಿಯಲ್ಲಿ ಅವುಗಳ ಮೈಗೆ (ದಪ್ಪಕ್ಕೆ) ಪ್ರಾಶಸ್ತ್ಯ ನೀಡುವುದರಿಂದ ಇದೊಂದು ಗೌಪ್ಯತಂತ್ರ. ಆಹಾರಕ್ಕೆ ಸಂಬಂಧಿಸಿದಂತೆ ಈ ವಾಸ್ತವದ ಅರಿವಿನ ನಡುವೆಯೂ ಮೀನು ತಿಂದು ತೊಳೆದ ಪಾತ್ರೆಯ ನೀರನ್ನಾಗಲೀ, ಮೀನು ಕುದಿಸಿದ ಪಾತ್ರೆಯ ನೀರನ್ನಾಗಲೀ ಜಾನುವಾರುಗಳ ಬಾಯರಿಗೆ ಸೇರಿಸುವುದಿಲ್ಲ. ಅವು ಮೂಳೆಯನ್ನು ಕಡಿಯುವುದು, ಮಾಸು ತಿನ್ನುವುದರ ಅರಿವಿದ್ದೂ, ತಾವು ತಿನ್ನುವ ಮಾಂಸದ ಸಾರಿನ ಉಳಿಕೆಯನ್ನು ಅವುಗಳು ತಿನ್ನುವ ಆಹಾರದೊಂದಿಗೆ ಸೇರಿಸುವುದಿಲ್ಲ. ಆದರೆ ತರಕಾರಿ ಸಾರು, ಅಕ್ಕಿ, ಅನ್ನದ ನೀರನ್ನು ಧಾರಾಳವಾಗಿ ಸೇರಿಸಿ ನೀಡುತ್ತಾರೆ. ತಾವು ತಿನ್ನಲು ಕೊಡದೆಯೂ ಕೊಳಕನ್ನು ತಿನ್ನುವ ಹಸುಗಳ ಬಾಯಿಯನ್ನು ಶಾಸ್ತ್ರಗ್ರಂಥಗಳೇ ಅಪವಿತ್ರ ಎಂಬ ಅರ್ಥದಲ್ಲಿ ಹೇಳಿದ ಉಲ್ಲೇಖಗಳು ಸ್ಮೃತಿ, ಪುರಾಣದ ಓದುಗರಿಗೆ ಬರವಣಿಗೆಯ ಮೂಲಕ ಪರಿಚಿತವಾದದು. ಆದರೆ ಜನಸಾಮಾನ್ಯರಿಗೆ ಜೀವನಾನುಭವದ ಮೂಲಕವೇ ಆ ಹೇಳಿಕೆಗಳ ನಿಖರವಾದ ಕಾರಣಗಳು ದಕ್ಕಿವೆ. ಈ ತರಾವರಿ ಆಹಾರಾಸಕ್ತಿಯನ್ನು ಕಣ್ಣಾರೆ ಕಂಡೂ ಅವರಿಗೆ ಹಸುಗಳನ್ನು ಹೇಸದೆಯೇ ಪ್ರೀತಿಸುವುದು ಹೇಗೆಂದು ಗೊತ್ತಿದೆ. ಹಾಗೆ ಯಾಕೆ ಪ್ರೀತಿಸುತ್ತೇವೆ ಎಂಬುದೂ ಗೊತ್ತಿದೆ. ಅದು ಹಾಕುವ ಸೆಗಣಿ, ಎಳೆಯುವ ನೇಗಿಲು, ಕೊಡುವ ಹಾಲು ಎಲ್ಲವೂ ಅವರ ಅನ್ನವೇ ಅಲ್ಲವೇ?

(ಮುಂದುವರೆಯುವುದು…)

Leave a Reply

Your email address will not be published. Required fields are marked *