Daily Archives: September 5, 2013

ದಲಿತರು ಮತ್ತು ಉದ್ಯಮಶೀಲತೆ : ಈ ವಿಚಾರಗಳ ಬಗ್ಗೆಯೂ ಚರ್ಚೆಯಾಗಲಿ

– ಎನ್.ರವಿಕುಮಾರ್, ಶಿವಮೊಗ್ಗ

“ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕೀರ್ಣ-ಸಂವಾದ ನಿಜಕ್ಕೂ ಇಂದಿನ ಅಗತ್ಯವಾಗಿದೆ. ದಲಿತರಿಗೆ ಶಿಕ್ಷಣದ ಜೊತೆಗೆ ಜಾಗತಿಕ ಮತ್ತು ಆರ್ಥಿಕ ಪ್ರಪಂಚದ ಅರಿವನ್ನು ಮೂಡಿಸುವ ಅಗತ್ಯತೆ ಇದ್ದೇ ಇದೆ. ಜಾತಿಯ ತಾರತಮ್ಯ ಔದ್ಯೋಗಿಕ ಜಗತ್ತಿನಲ್ಲಿ ಯಥಾ ರೀತಿ ಭಿನ್ನ ಸ್ವರೂಪಗಳಲ್ಲಿ ದೊಡ್ಡ ಪಿಡುಗಾಗಿ ದಲಿತ ಉದ್ಯಮಿಗಳನ್ನು ಕಾಡುತ್ತಿವೆ. ಆರ್ಥಿಕ ಸಂಪನ್ಮೂಲ ನೆರವು ನೀಡುವ ಆರ್ಥಿಕ ಸಂಸ್ಥೆಗಳು (ಬ್ಯಾಂಕ್‌ಗಳು) ಯಾರ ಕೈಯಲ್ಲಿವೆ ಎಂಬುದನ್ನು ನಾವು ಯೋಚಿಸಬೇಕಾಗಿದೆ.

ಆರ್ಥಿಕ ಶಕ್ತಿಯ ಕ್ರೋಢೀಕರಣ ಕೂಡ ಜಾತಿಯ ನೆಲೆಯಲ್ಲಿಯೆ ಆರಂಭವಾದದ್ದು ಎಂಬುದನ್ನು ಚರಿತ್ರೆ ಸ್ಪಷ್ಟ ಪಡಿಸುತ್ತದೆ. 1987 ರ ಅವಧಿಯಲ್ಲಿ ಅಂದಿನ ಕೇಂದ್ರದ ಹಣಕಾಸು ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರು ದಲಿತರು, ಹಿಂದುಳಿದ ವರ್ಗಗಳಿಗೆ ಮೈಕ್ರೊ ಸಾಲ (ಪೂಜಾರಿ ಸಾಲ) ಯೋಜನೆ ರೂಪಿಸುವ ಮೂಲಕ vartamaana-sahamata-invitationಈ ಸಮುದಾಯಗಳನ್ನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗಳ ಮೆಟ್ಟಿಲು ಹತ್ತಿಸಿದರು. ಇಂದು ಪರಿಸ್ಥಿತಿ ಬದಲಾಗಿದೆ ನಿಜ, ಆದರೆ ಭೂಮಿ, ಬಂಡವಾಳದ ಸಮಸ್ಯೆಗಳು ದಲಿತರು, ಹಿಂದುಳಿದ ವರ್ಗಗಳಲ್ಲಿನ ಉದ್ಯಮಶೀಲತೆಯನ್ನು ಹತ್ತಿಕ್ಕುತ್ತಿವೆ. ಇನ್ನೂ ಮಾರುಕಟ್ಟೆಯನ್ನು ಆವರಿಸಿಕೊಂಡಿರವ ಸಂತತಿಗಳು ಒಬ್ಬ ಯಶಸ್ವಿ ಉದ್ಯಮಶೀಲನಾಗುವಲ್ಲಿ ದಲಿತನನ್ನು ಹೈರಾಣಗೊಳಿಸುವ ಸಾಧ್ಯತೆಗಳು ಜಾತಿ ಜಿದ್ದಿನ ಮತ್ತೊಂದು ಸ್ವರೂಪವೆ ಆಗಿರುತ್ತದೆ.

ದಲಿತರು ಕಾರ್ಮಿಕರಾಗಿರುವುದನ್ನೆ ಬಯಸುವ ಔದ್ಯೋಗಿಕ ಕ್ಷೇತ್ರದ ಬಹುಸಂಖ್ಯಾತ ಕುಳಗಳು ಮಾಲೀಕನಾಗುವ ಹಾದಿಗೆ ಅಡ್ಡಗೋಡೆಗಳನ್ನು ಕಟ್ಟುತ್ತಲೆ ಇರುತ್ತವೆ. ಇಂದು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ವಿರೋಧಿಸುವ ಶಕ್ತಿಗಳೆ ದಲಿತರಲ್ಲಿನ ಉದ್ಯಮಶೀಲತೆಯನ್ನೂ ಸಹಿಸುವುದಿಲ್ಲ. ಸರ್ಕಾರಗಳು ದಲಿತರು, ಹಿಂದುಳಿದವರ್ಗಗಳಿಗಾಗಿ ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳನ್ನು ದಕ್ಕಿಸಿಕೊಳ್ಳುವುದು ದುಸ್ತಃರವಾಗಿದೆ. ಇಂದು ಮಾಧಮ ಕ್ಷೇತ್ರ ಕೂಡ ಉದ್ಯಮವಾಗಿ ಬೆಳೆಯತೊಡಗಿದ್ದು ಸಾಮಾಜಿಕ ಹೊಣೆಗಾರಿಕೆಗಿಂತ ವ್ಯಾಪಾರಿ ಮನೋಭಾವ ಹೆಚ್ಚು ಆಕ್ರಮಿಸಿಕೊಳ್ಳತೊಡಗಿರುವುದು ಅಪಾಯಕಾರಿ ಎನಿಸುತ್ತದೆ. ಈ ಕ್ಷೇತ್ರದಲ್ಲೂ ದಲಿತರು ಉದ್ಯಮಿಯಾಗಿ ಪೈಪೋಟಿ ನಡೆಸುವುದು ಕಷ್ಟಕರ.

ಇಂದು ದಲಿತರಲ್ಲೂ ಔದ್ಯೋಗಿಕ ಜ್ಞಾನದ ಕೊರತೆ ಇಲ್ಲ, ಬೇಕಿರುವುದು ಬಂಡವಾಳ, ಭೂಮಿ ಮತ್ತು ಜಾತಿ ಮುಕ್ತ ಮಾರುಕಟ್ಟೆ ಮಾತ್ರ. ಈ ನಿಟ್ಟಿನಲ್ಲಿ ಸರ್ಕಾರಗಳು ದಲಿತರಲ್ಲಿನ ಉದ್ಯಮಶೀಲತೆಯನ್ನು ಜಾಗತಿಕ ಮಟ್ಟದಲ್ಲಿ ಕಾಯುವ ಕೆಲಸವನ್ನು ಕರ್ತವ್ಯದಂತೆ ಮಾಡಬೇಕಿದೆ. ಈ ಸಂಗತಿಗಳ ಬಗ್ಗೆ ಯೂ ಸೆ. 7 ರಂದು ಹಾಸನದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮಂಥನ ನಡೆಯಲಿದೆ ಎಂಬ ಭರವಸೆ ನನಗಿದೆ.