ಶಕ್ತಿ ಕೇಂದ್ರಗಳ ಒಡೆಯುವಿಕೆಯ ಸಂಕ್ರಮಣ ಕಾಲ

– ಬಿ.ಶ್ರೀಪಾದ ಭಟ್

“ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.” – ಸಾದತ್ ಹಸನ್ ಮಂಟೋ

ಇಂದು ಇಂಡಿಯಾ ದೇಶವು ತನಗರಿವಿಲ್ಲದಂತೆಯೇ ನಿಧಾನವಾಗಿ ಫ್ಯಾಸಿಸಂನ ಸ್ವರೂಪಕ್ಕೆ, ಅರಾಜಕತೆಯ ತೆಕ್ಕೆಗೆ ಜಾರಿಕೊಳ್ಳುತ್ತಿದೆ. ಬೌದ್ಧಿಕವಾಗಿ ದಾರಿದ್ರ್ಯಗೊಂಡಿರುವ ಬಹುಪಾಲು ಮಾಧ್ಯಮಗಳು ಈ ಫ್ಯಾಸಿಸಂನ ಆಳ ಅಗಲಗಳನ್ನು ಅರಿಯದೆಯೇ ಅಭಿವೃದ್ಧಿಯ ನೆಪದಲ್ಲಿ ಕೇವಲ ಸಂಕುಚಿತ ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತ ಒಂದು ನಿರ್ದಿಷ್ಟ ಮೇಲ್ವರ್ಗಗಳ, ಮಧ್ಯಮವರ್ಗದ ಜೀವನ ಕ್ರಮವನ್ನೇ, ಅವರ ಏಕರೂಪಿ ಸಂಸ್ಕೃತಿಯನ್ನೇ ಇಂಡಿಯಾದ ಐಡೆಂಟಿಟಿಯೆಂದು ವಾದಿಸುತ್ತಿವೆ. ಆಮ್ ಆದ್ಮಿಯ ಕುರಿತಾಗಿ ಮಾತನಾಡುತ್ತಲೇ ಈ ಉದ್ದಿಮೆದಾರರು ಮತ್ತು ಮಾಧ್ಯಮಗಳು ಒಂದಾಗಿ ದೇಶದ ಬಡವನ ವಿರುದ್ಧ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಯಾವುದೇ ಜನಪರ ಕಾರ್ಯಕ್ರಮಗಳನ್ನು ಅಭಿವೃದ್ಧಿ ವಿರೋಧಿ ಎಂದು ವಾದಿಸುತ್ತಾರೆ.

ಈ ಕೇಂದ್ರೀಕೃತಗೊಂಡ ಕಾರ್ಪೋರೇಟ್ ಗುಂಪು ಯಾವುದೇ ಬಗೆಯ ಜನಪರ ಸಣ್ಣ ಯೋಜನೆಗಳನ್ನು ಉಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ತಮ್ಮ ಸ್ವಹಿತಾಸಕ್ತಿಗಾಗಿ ಸರ್ಕಾರಗಳೊಂದಿಗೆ ಬಹಿರಂಗವಾಗಿಯೇ ಡೀಲ್‌ಗಳನ್ನು ಮಾಡಿಕೊಂಡ ಈ ಕಾರ್ಪೋರೇಟ್ ವಲಯ ಆ ಡೀಲ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಬಹುಪಾಲು ಮಾಧ್ಯಮಗಳನ್ನು ಬಳಸಿಕೊಂಡು ಅವನ್ನು ತನ್ನ ಉಕ್ಕಿನ ಹಿಡಿತದಲ್ಲಿರಿಸಿಕೊಂಡಿತು.

ಕಳೆದ ಕೆಲವು ತಿಂಗಳಿಂದ ಈ ಮಾಧ್ಯಮಗಳ ವರ್ತನೆಗಳನ್ನು ಗಮನಿಸಿದರೆ ಇವರ ಅಮಾನವೀಯ ವರ್ತನೆಗಳಿಗೆ ಉತ್ತರ ಸಿಗುತ್ತದೆ. Food Security Billಅಹಾರ ಭದ್ರತೆ ಮಸೂದೆ ಬೇಡ, ಕೋಮುವಾದ ವಿರೋಧಿ ಮಸೂದೆ ಬೇಡ, ಭೂ ಸ್ವಾಧೀನ ಮಸೂದೆ ರೈತ ವಿರೋಧಿ, ಹೀಗೆ ಎಲ್ಲಾ ಬಗೆಯ ಜನಪರವಾದ ಪ್ರಗತಿಪರ ಯೋಜನೆಗಳ ವಿರುದ್ಧ ವಿಷ ಕಾರುತ್ತಿದ್ದಾರೆ. ಸಂಪೂರ್ಣವಾಗಿ ಕಾರ್ಪೋರೇಟ್‌ಗಳ ಹಿಡಿತದಲ್ಲಿರುವ ಈ ಮಾಧ್ಯಮಗಳ ವರ್ತನೆ ದೇಶದ ವಿಕೇಂದ್ರೀಕರಣದ ವ್ಯವಸ್ಥೆಗೆ, ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಂತ ಮಾರಕವಾದುದು. ಸಮುದಾಯವಾಗಿ, ಸಣ್ಣ ಸಣ್ಣ ವಿಕೇಂದ್ರಿಕೃತ ಯೋಜನೆಗಳ ಮೂಲಕ ದೇಶವನ್ನು ಕಟ್ಟುವುದನ್ನು ಇವರೆಲ್ಲ ಓಬೀರಾಯನ ಕಾಲದ, ಚಾಲ್ತಿಯನ್ನು ಕಳೆದುಕೊಂಡ ಸಮಾಜವಾದಿ ಚಿಂತನೆಗಳೆಂದು ನಿರಾಕರಿಸುತ್ತಿರುವ ರೀತಿ ಅಪಾಯಕಾರಿಯಾದದ್ದು.

ಕಡೆಗೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ವೈಫಲ್ಯಗಳ ನಡುವೆಯೂ ಆಹಾರ ಭದ್ರತೆ ಮಸೂದೆಯನ್ನು ಜಾರಿಗೆ ತಂದು (ಅನೇಕ ಮಿತಿಗಳ ನಡುವೆಯೂ) ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿಯೊಬ್ಬ ಪ್ರಜೆಗೆ, ಪ್ರತಿ ತಿಂಗಳಿಗೆ ಕನಿಷ್ಟ 5 ಕೆ.ಜಿ.ಧಾನ್ಯ, ಅಕ್ಕಿ, ಬೇಳೆ, ಗರ್ಭಿಣಿ ಮತ್ತು ಬಾಣಂತಿ ಹೆಂಗಸರಿಗೆ ಪ್ರತಿ ತಿಂಗಳು ರೂ. 1000 ಸಹಾಯಧನ (6 ತಿಂಗಳವರೆಗೆ), ಪ್ರತಿಯೊಂದು ಮಗುವಿಗೂ ಮೂರು ವರ್ಷಗಳವೆರೆಗೆ ಪೌಷ್ಟಿಕ ಆಹಾರ, ಹೀಗೆ ಅನೇಕ ಜನಪರ ಆಶಯಗಳನ್ನು ಒಳಗೊಂಡ ಈ ಆಹಾರ ಭದ್ರತೆ ಮಸೂದೆಯ ಮೂಲಕ ದೇಶದ ಸುಮಾರು ಶೇಕಡ 67 ರಷ್ಟು ಜನಸಂಖ್ಯೆಗೆ ಖಾಯಂ ಆಗಿ ಸಬ್ಸಿಡಿ ರೂಪದಲ್ಲಿ ಧಾನ್ಯ ಕಾಳುಗಳು ಮತ್ತು ಅಕ್ಕಿ, ಬೇಳೆ ಸಿಗುವಂತೆ ಮತ್ತು ಅವರ ದಿನಿತ್ಯದ ಹೊಟ್ಟೆ ತುಂಬುವಂತೆ ಕಾನೂನನ್ನು ರೂಪಿಸಬಹುದೆಂದು ಒತ್ತಾಯಿಸುತ್ತಿದ್ದಾರೆ, ಅಲ್ಲದೆ ಇಂಡಿಯಾದಲ್ಲಿ ಆಹಾರ ಉತ್ಪಾದನೆಯ ಕೊರತೆ ಎಂದಿಗೂ ಕಾಡಿಲ್ಲ. ಇಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿಗೆ ಬೆಳೆಯುತಿದ್ದೇವೆ. food-security-wasted-grainsಆದರೆ ಅದನ್ನು ನಿರ್ವಹಿಸಲು, ವಿತರಿಸಲು ಸೋತಿದ್ದೇವೆ. ಬೆಳೆದ ಧಾನ್ಯ, ಅಕ್ಕಿ, ಬೇಳೆಗಳನ್ನು ತಿಂಗಳುಗಟ್ಟಲೆ ಸಂಗ್ರಸಿಡಲು ಸುರಕ್ಷಿತ ವ್ಯವಸ್ಥೆ ನಮ್ಮಲಿಲ್ಲ. ಹೀಗಾಗಿಯೇ ಟನ್‌ಗಟ್ಟಲೆ ಆಹಾರ ಧಾನ್ಯಗಳು ಕೊಳೆತು ಹೋಗುತ್ತವೆ. ಮತ್ತೊಂದು ಕಡೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟತೆ. ಇದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಮುಖ್ಯವಾಗಿ ಸಣ್ಣ ರೈತರು ತಾವು ಬೆಳೆದ ಧಾನ್ಯಕ್ಕೆ ಕನಿಷ್ಟ ಬೆಂಬಲ ಬೆಲೆಗೆ ಧಕ್ಕೆ ಬರದಂತೆ ಎಚ್ಚರವಹಿಸಬೇಕು.

ಈ ಹಿನ್ನೆಲೆಯಲ್ಲಿ ಈ ಆಹಾರ ಭದ್ರತೆ ಮಸೂದೆಯನ್ನು ಭವಿಷ್ಯದ ಹೂಡಿಕೆಯಾಗಿ (Future Investment) ನೋಡಬೇಕೆಂಬ ಕನಿಷ್ಟ ಅರಿವಿಲ್ಲದೆ ಬಹುಪಾಲು ಮಾಧ್ಯಮಗಳು ಮತ್ತು ಮಧ್ಯಮ, ಮೇಲ್ವರ್ಗದ ಜನತೆ ಇದನ್ನು ಒಂದು ಖರ್ಚನ್ನಾಗಿ ನೋಡುತ್ತಿದ್ದಾರೆ. ಇದನ್ನು ಜಾರಿಗೊಳಿಸಲು ದೇಶದ ಎಲ್ಲ ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ವಿರೋಧಿಸುತ್ತಿವೆ. ರೂಪಾಯಿ ಅಪಮೌಲ್ಯದ ಗುಮ್ಮನನ್ನು ಹುಟ್ಟು ಹಾಕಿವೆ. ಇನ್ನೇನು ಭಾರತ ವರ್ಲ್ಡಬ್ಯಾಂಕ್‌ನ ಮುಂದೆ ಮಂಡಿಯೂರಬೇಕಾಗುತ್ತದೆ ಎಂದು ಅಪಪ್ರಚಾರ ನಡೆಸುತ್ತಿವೆ. ಅನಗತ್ಯವಾಗಿ ಭಯದ, ಹತಾಶೆಯ ವಾತಾವರಣವನ್ನು ಫ್ಯಾಬ್ರಿಕೇಟ್ ಮಾಡುತ್ತಿವೆ.

ಈ ಆಹಾರ ಭದ್ರತೆ ಮಸೂದೆಯಿಂದ ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ಖರ್ಚಾಗುತ್ತದೆ. ಅಂದರೆ ವಾರ್ಷಿಕ ಜಿಡಿಪಿಯ ಶೇಕಡ 1.2 ರಷ್ಟು ಮಾತ್ರ. ಆದರೆ ಭಾರತದ ಕಾರ್ಪೋರೇಟ್ ವಲಯಗಳು ಸುಮಾರು 12 ಸಾವಿರ ಕೋಟಿಯಷ್ಟು ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳುತ್ತವೆ (ಶ್ ! ಯಾರೂ ಕೇಳಬೇಡಿ), ಈ ಕಾರ್ಪೋರೇಟ್ ವಲಯಗಳಿಗೆ ದೊರಕುವ ಇಂಧನ ವಿನಾಯ್ತಿ ಸುಮಾರು 1 ಲಕ್ಷ ಕೋಟಿ (ಇದನ್ನು ಚರ್ಚಿಸುವ ಹಾಗಿಲ್ಲ, ದೊಡ್ಡವರಿಗೆ ಸಂಬಂಧಿಸಿದ್ದು!!), ಇನ್ನು ವಿಜಯ್ ಮಲ್ಯರಂತಹ ವಂಚಕರು ಸರ್ಕಾರಕ್ಕೆ ಹಾಕುವ ಪಂಗನಾಮ ನೂರಾರು ಕೋಟಿ!! ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ಮತ್ತೇನಾದರೂ ವಿನಾಯ್ತಿಗಳಿವೆಯೇ ಎಂದು ಬೇರೆ ಬಕಪಕ್ಷಿಯಂತೆ ಕಾದು ಕುಳಿಯುತ್ತಾರೆ ಈ ವರ್ಗಗಳು. ಇವರ ಈ ಬಗೆಯ ತೆರಿಗೆ ವಿನಾಯ್ತಿಗಳು, ವಂಚನೆಗಳು ಇನ್ನೂ ನೂರಾರಿವೆ. ಇದಲ್ಲದೆ ಈ ಕಾರ್ಪೋರೇಟ್ ವರ್ಗಗಳು ಶಾಸಕಾಂಗ ಮತ್ತು ಕಾರ್ಯಾಂಗಗಳೊಂದಿಗೆ ಮಿಲಕಾಯಿಸಿ ಹುಟ್ಟುಹಾಕಿದ ನೂರಾರು ಹಣಕಾಸು ಅವ್ಯವಹಾರಗಳು, ಹಗರಣಗಳು ಆ ಮೂಲಕ ಸರ್ಕಾರಕ್ಕೆ ಸಾವಿರಾರು ಕೋಟಿಯ ವಂಚನೆಗಳನ್ನು ಮರೆಯಲು ಸಾಧ್ಯವೇ?

ಆದರೆ ಸ್ವತಃ ಈ ಕಾರ್ಪೋರೇಟ್ ವಲಯಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳ ಮೊತ್ತದ ಅಸಲು ಸಾಲವನ್ನು ಮತ್ತು ಅವುಗಳ ಮೇಲಿನ ಬಡ್ಡಿಯನ್ನು ವರ್ಷಗಟ್ಟಲೆ ಪಾವತಿಸದೆ ಆ ಮೂಲಕ ದೇಶದ ಹಣಕಾಸಿನ ಸಮತೋಲನವನ್ನೇ ಹದಗೆಡಿಸಿ ತಮ್ಮ ದುಷ್ಟತನವನ್ನು ತೋರಿಸುತ್ತಿವೆ. ಸರ್ಕಾರಗಳು ಇವರನ್ನು ಪ್ರಶ್ನಿಸಲು ಧೈರ್ಯ ಮಾಡುತ್ತಿಲ್ಲ. ಆದರೆ ಬಡವರಿಗೆ ಸಬ್ಸಿಡಿ ಮಟ್ಟದಲ್ಲಿ ಆಹಾರ ಧಾನ್ಯಗಳು ಹಂಚಿದಾಕ್ಷಣ ಇನ್ನೇನು ಮುಳುಗಿಹೋಯಿತೆಂದು ಅಪಪ್ರಚಾರ ನಡೆಸುತ್ತವೆ ಈ ಭ್ರಷ್ಟ, ಅಮಾನವೀಯ ಗುಂಪು. ಇಂತಹ ಸ್ವಾರ್ಥ, ಹಿಂಸಾತ್ಮಕ ವ್ಯವಸ್ಥೆಯನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೇ?

ತೊಂಬತ್ತರ ದಶಕದಲ್ಲಿ ಜಾಗತೀಕರಣಕ್ಕೆ ಸಂಪೂರ್ಣವಾಗಿ ಒಡ್ಡಿಕೊಂಡ ಇಂಡಿಯಾ ದೇಶ ಇಪ್ಪತ್ತೆರಡು ವರ್ಷಗಳ ನಂತರ ಇಂದು ತನ್ನ ಅತ್ಯುತ್ತಮ, ಜೀವಪರ ಮೂಲಧಾರೆಗಳು ಮತ್ತು ಸೂಕ್ಷ್ಮವಾದ ಜೀವಸಂಕುಲ ಮತ್ತು ಅವುಗಳ ಸರಪಣಿ, ನದಿಗಳು ಎಲ್ಲವೂ ನಾಶಗೊಂಡು ಇಂದು ಬಂಜರುಗೊಂಡು ನಿಂತಿವೆ. ಗ್ರಾಮೀಣ ಬದುಕು ಸಂಪೂರ್ಣವಾಗಿ ನಿರ್ಜೀವಗೊಂಡು ಶಕ್ತಿಹೀನವಾಗಿದ್ದರೆ, ನಗರಗಳು ಸುಖಲೋಲುಪ್ತತೆಯಲ್ಲಿ ವಿಕಾರಗೊಂಡಿವೆ. starved-peopleಏಕೆಂದರೆ ಅಧಿಕಾರಿ ವರ್ಗ ಮತ್ತು ಪ್ರಭುತ್ವ ಜಾಗತೀಕರಣವನ್ನು ಕೇವಲ ಒಂದು ಉಪಭೋಗ ಪ್ರಕ್ರಿಯೆಯಾಗಿ ಪರಿಗಿಣಿಸಿರುವುದು. 1991 ರಿಂದ ಇಲ್ಲಿಯವರೆಗೂ ಕಳೆದ ಇಪ್ಪತ್ತೆರೆಡು ವರ್ಷಗಳಲ್ಲಿ ಇಂಡಿಯಾದ ಎಲ್ಲಾ ಸರ್ಕಾರಗಳು ಮತ್ತು ಮಧ್ಯಮ ಮತ್ತು ಮೇಲ್ವರ್ಗಗಳು ಈ ಜಾಗತೀರಣವನ್ನು ಸುಖಲೋಲುಪ್ತ, ವಿಲಾಸೀಜೀವನಕ್ಕೆ ತೆರೆದ ಹೆಬ್ಬಾಗಿಲಾಗಿ ಪರಿವರ್ತಿಸಿ ಕೇವಲ ಶೇಕಡ 15 ರಿಂದ 20 ರಷ್ಟಿರುವ ಈ ವರ್ಗಗಳು ಇಂಡಿಯಾ ದೇಶವನ್ನೇ ಕೊಳ್ಳುಬಾಕ ಸಂಸ್ಕೃತಿಗೆ ದೂಡಿಬಿಟ್ಟವು. ಜಾಗತೀಕರಣವಿರಲಿ ಇಲ್ಲದಿರಲಿ, ಮುಕ್ತ ಆರ್ಥಿಕ ನೀತಿ ಇರಲಿ, ಇಲ್ಲದಿರಲಿ ಮೂಲಭೂತವಾಗಿ ಪ್ರಜಾಪ್ರಭುತ್ವದ ದೇಶವೊಂದರ ಆರ್ಥಿಕ ನೀತಿ ವ್ಯವಸಾಯ ಮತ್ತು ಎಲ್ಲ ಬಗೆಯ ಸಣ್ಣ ಕೈಗಾರಿಕ ವಲಯಗಳ ಉತ್ಪಾದನೆಯ ಮೇಲೆ ಮತ್ತು ಅವುಗಳ ವ್ಯಾಪಾರ ಸರಪಣಿಗಳ ಮೇಲೆ ಅವಲಂಬಿತವಾಗಿರಬೇಕೆಂಬ ಮೂಲನೀತಿಯನ್ನೇ ತಿರಸ್ಕರಿಸಿ ಶೇಕಡ 20 ರಷ್ಟು ಜನತೆಯ ಕೊಳ್ಳುವಿಕೆಯನ್ನೇ, ಅವರ ಈ ಕೊಳ್ಳುವಿಕೆಯ ಸಾಮರ್ಥ್ಯವನ್ನೇ ದೇಶದ ಆರ್ಥಿಕ ಪ್ರಗತಿಗೆ ಮಾನದಂಡವಾಗಿ ಬಳಸಿಕೊಂಡಿತು. ಅದನ್ನೇ ಜಿಡಿಪಿ ಎಂದು ಬಿಂಬಿಸಿತು.

ಇದರ ಫಲವಾಗಿ ದೇಶದ ಕೇವಲ ಶೇಕಡ 15 ರಿಂದ 20 ರಷ್ಟು ಜನಸಂಖ್ಯೆಯ ಬಳಿ ಮಾತ್ರ ಈ ಕೊಳ್ಳುವಿಕೆಯ ಸಾಮರ್ಥ್ಯ ಕೇಂದ್ರೀಕೃತಗೊಂಡಿತು. ಅದರ ಫಲವೇ ಈ ಕೊಳ್ಳುಬಾಕುತನದ ವಿಷವೃತ್ತಕ್ಕೆ ಸಿಲುಕಿಕೊಂಡ ಈ ವರ್ಗಗಳು ಬಕಾಸುರನಂತೆ ಬದುಕತೊಡಗಿದರೆ ಅವರ ಈ ಹೊಟ್ಟೆಬಾಕುತನವನ್ನು ತಣಿಸಲು ಕೇಂದ್ರ ಸರ್ಕಾರವು ಆಮದಿನ ಮೇಲಿನ ಹಿಡಿತವನ್ನು, ಕರಗಳನ್ನು ಸಡಿಲಿಸಿ ಮುಕ್ತ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟಿತು. ಇದರ ಫಲವಾಗಿ ದೇಸಿ ಸರಕಿನ ಉತ್ಪಾದನೆಯ ಪ್ರಮಾಣ ಕ್ರಮೇಣವಾಗಿ ಕುಂಠಿತಗೊಂಡು ಆಮದು ವಸ್ತುಗಳು ನಮ್ಮ ಮನೆ ಬಾಗಿಲ ಬಳಿಗೆ ಬಂದು ಬೀಳತೊಡಗಿದವು. ಜಾಗತೀಕರಣದ ಆರಂಭದಲ್ಲಿ ದೇಸಿ ಸರಕುಗಳ ರಫ್ತನ್ನು ಅಭೂತಪೂರ್ವವಾಗಿದೆ ಎಂದು ಉತ್ಪ್ರೇಕ್ಷಿತಗೋಳಿಸಿ, ಸ್ವತಃ ಸರ್ಕಾರಗಳೇ ಇದನ್ನು ಪುಷ್ಟೀಕರಿಸಲು ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ತೋರಿಸಿದವು. ನೋಡಿ ಈ ದೇಸಿ ರಫ್ತು ನೀತಿ ಇದೇ ವೇಗದಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದು ಆಮದಿನ ಪ್ರಮಾಣವನ್ನು ಮೀರಿ ದೇಶಕ್ಕೆ ವಿದೇಶಿ ವಿನಿಮಯದ ಮೂಲಕ ಹಣಕಾಸು ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೂಸಿ ಬಿಟ್ಟಿತು. ಆದರೆ ಇದೇ ಸರ್ಕಾರ ಮತ್ತೊಂದು ಕಡೆ ದೇಸಿ ಉತ್ಪಾದನೆಗೆ ಪೂರಕವಾಗುವಂತಹ, expensive-wedding-banquetsದೇಸಿ ಸರಕುಗಳು ದೇಶದಲ್ಲಿಯೇ ಮಾರಾಟಗೊಳ್ಳುವಂತಹ ವಿಕೇಂದ್ರಿಕೃತ ಸಣ್ಣ ಕೈಗಾರಿಕ ಯೋಜನೆಗಳನ್ನು ನಿಷ್ಕ್ರಿಯೆಗೊಳಿಸಿ ಭಾರಿ ಕೈಗಾರಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿ ಇಡೀ ಸಂಪತ್ತಿನ ವಹಿವಾಟು ಮರಳಿ ಕೆಲವೇ ಪ್ರತಿಷ್ಟಿತ, ಶ್ರೀಮಂತ ಮನೆತನಗಳಿಗೆ, ಕಂಪನಿಗಳಿಗೆ ಸೀಮಿತವಾಗುವಂತೆ ಆರ್ಥಿಕ ನೀತಿಯನ್ನು ಜಾರಿಗೊಳಿಸಿತು. ಇದರಿಂದಾಗಿ ಸಣ್ಣ ಕೈಗಾರಿಕೆಗಳು ತಮ್ಮದೇ ಬ್ರಾಂಡಿನ ಸರಕನ್ನು ಉತ್ಪಾದಿಸಿ ಅದನ್ನು ಮಾರುಕಟ್ಟೆ ಮಾಡುವ, ರಫ್ತು ಮಾಡುವ ಸಾಧ್ಯತೆಗಳೇ ನಾಶಗೊಂಡು ದೇಶದ ಸಣ್ಣ ಕೈಗಾರಿಕ ವಲಯ ಕೇವಲ ಜಾಬ್ ವರ್ಕಗಳ ಮಟ್ಟಕ್ಕೆ ಸೀಮಿತಗೊಂಡು ಕ್ರಮೇಣ ನಾಶಗೊಂಡಿತು.

ಉದಾಹರಣೆಗೆ ತೊಂಬತ್ತರ ದಶಕದಲ್ಲಿ ಮತ್ತು ಕಳೆದ ದಶಕದಲ್ಲಿ ಉಚ್ಷ್ರಾಯ ಸ್ಥಿತಿಯಲ್ಲಿದ್ದ ಗಾರ್ಮೆಂಟ್ ವಲಯವನ್ನು ಗಮನಿಸಿ. ಇಲ್ಲಿನ ಕಂಪನಿಗಳು ಆಧುನಿಕ ರೆಡಿಮೇಡ್ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದವು. ಆದರೆ ಅವನ್ನು ತಮ್ಮ ಬ್ರಾಂಡ್‌ನಲ್ಲಿ ಮಾರಲಿಕ್ಕಲ್ಲ. ಬದಲಾಗಿ ವಿದೇಶಿ ಕಂಪನಿಗಳಿಗೆ ಜಾಬ್ ವರ್ಕ ರೂಪದಲ್ಲಿ ಮಾರಲಿಕ್ಕೆ. ಇದನ್ನು ಕೈಗಾರಿಕೆಯ ಭಾಷೆಯಲ್ಲಿ ಹೊರಗುತ್ತಿಗೆ (Out Sourcing) ಎಂದು ಕರೆಯುತ್ತಾರೆ. ನಮ್ಮಲ್ಲಿಂದ ಅತ್ಯಂತ ಕನಿಷ್ಟ ಬೆಲೆಯಲ್ಲಿ ಈ ಬಟ್ಟೆಗಳನ್ನು ಕೊಂಡುಕೊಂಡ ಈ ವಿದೇಶಿ ಕಂಪನಿಗಳು ನಂತರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ, ತಮ್ಮ ಬ್ರಾಂಡ್‌ನ ಹೆಸರಿನಲ್ಲಿ ಮರಳಿ ನಮಗೇ ಮಾರಾಟ ಮಾಡುತ್ತವೆ. ಇದರ ಫವಾಗಿ ನಮ್ಮ ದೇಸಿ ಕಂಪನಿಗಳು ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ರಫ್ತು ಮಾಡಿದರೆ ಮರಳಿ ನಮ್ಮ ವ್ಯವಸ್ಥೆಯೇ ಈ ವಿದೇಶಿ ಕಂಪನಿಗಳಿಂದ ಅದರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ ಆಮದು ಮಾಡಿಕೊಳ್ಳುತ್ತವೆ. ಇದು ನಮ್ಮ ವಿದೇಶಿ ವಿನಿಮಯದ ನೀತಿ!

ಇಲ್ಲಿ ಕೇವಲ ಹಣಕಾಸಿನ ಲಾಭನಷ್ಟದ ಅಂಶ ಮಾತ್ರವಿಲ್ಲ. ಮಹಿಳಾ ಕಾರ್ಮಿಕರ ಶೋಷಣೆಯಿದೆ. ಅವರ ಘನತೆಯನ್ನೇ ನಾಶಮಾಡಲಾಗಿದೆ. ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಕೆಲಸದ ಭದ್ರತೆಯಿಲ್ಲ. ಅದೇ ರೀತಿಯಾಗಿ ಯಾವುದೇ ಕಾರುಗಳ, autopartsದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಕರು ಹೊರಗುತ್ತಿಗೆದಾರರೆಂದೇ (Sub contractors) ಪರಿಗಣಿಸಲ್ಪಡುತ್ತಾರೆ. ಅವರಿಗೆ ತಾವು ತಯಾರಿಸುವ ವಾಹನದ ಬಿಡಿಭಾಗಗಳ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಅದೆಲ್ಲ ಕೇವಲ ಜಾಬ್ ವರ್ಕ ಮಾತ್ರ!! ಒಮ್ಮೆ ಮಾರುಕಟ್ಟೆ ಕುಸಿದರೆ ಈ ಎಲ್ಲ ಕಂಪನಿಗಳು ಮುಚ್ಚಬೇಕಾಗುತ್ತವೆ. ಏಕೆಂದರೆ ಸಾಮರ್ಥ್ಯವಿದ್ದರೂ ತಮ್ಮದೇ ಬ್ರಾಂಡಿನ ಹೆಸರಿನಲ್ಲಿ ಬಿಡಿಭಾಗಗಳನ್ನು ತಯಾರಿಸಿ ಮಾರಲು ನಮ್ಮಲ್ಲಿನ ಕಂಪನಿಗಳಿಗೆ ಅಧಿಕಾರವಿರುವುದಿಲ್ಲ. ಏಕೆಂದರೆ ಅವುಗಳ ತಂತ್ರಜ್ಞಾನವನ್ನು, ಡಿಸೈನ್‌ನನ್ನು ಪೇಟೆಂಟ್ ಮಾಡಿಕೊಂಡಿರುತ್ತವೆ ವಿದೇಶಿ ಕಂಪನಿಗಳು.

ಇದು ಕೇವಲ ಉದಾಹರಣೆಯಷ್ಟೆ. ಇಂತಹ ಸಾವಿರಾರು ದುರಂತಗಳಿವೆ. ಇಂತಹ ಹಳಿ ತಪ್ಪಿದ ಆರ್ಥಿಕ ನೀತಿಗಳಿಂದ ಜಾಗತೀಕರಣದಿಂದ ಪುನಶ್ಚೇತನಗೊಳ್ಳಬಹುದಾದಂತಹ ಸಣ್ಣ ಕೈಗಾರಿಕೆಗಳ ಬೆನ್ನೆಲುಬನ್ನೇ ಮುರಿದು ಹಾಕಿದೆ ನಮ್ಮ ಸರ್ಕಾರ. ಕಡೆಗೆ ಈ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಭದ್ರತೆಯು ಅನಗತ್ಯವಾಗಿ ಸೆನ್ಸೆಕ್ಸ್‌ಗೆ ತಳುಕು ಹಾಕಿಕೊಂಡು ಅದರ ಏರಿಳಿತಗಳೇ ದೇಶದ ಆರ್ಥಿಕ ಭದ್ರತೆಯ ನಾಡಿಮಿಡಿತವೆಂಬಂತೆ ಇಡೀ ಹುಸಿ ವ್ಯವಸ್ಥೆಯೇ ರೂಪುಗೊಂಡಿದ್ದು ನಮ್ಮ ದೇಶದ ದುರಂತ ಅಧ್ಯಾಯವೇ ಸರಿ. ಇದರ ಫಲವಾಗಿ ಸ್ವಾವಲಂಬನೆಯ ಮೂಲಭೂತ ಸ್ವರೂಪವೇ ಕುರೂಪಗೊಂಡು ಕಳೆದ ಇಪ್ಪತ್ತು ವರ್ಷಗಳಲ್ಲಿ ಇಡೀ ಸಣ್ಣ ಕೈಗಾರಿಕ ವಲಯವೇ ನಾಶಗೊಂಡಿದೆ. ಇನ್ನು ಇಲ್ಲಿನ ವ್ಯವಸಾಯ ವೃತ್ತಿಯನ್ನು ನಾಶಗೊಳಿಸಿರುವುದರ ಕುರಿತಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಇದರ ಫಲವೇ ಇಂದಿನ ಆರ್ಥಿಕ ಸ್ಥಿತಿ.

ಈ ಆರ್ಥಿಕ ನೀತಿಯ ಹಿಪೋಕ್ರೆಸಿಯನ್ನು ಗಮನಿಸಿ. ಒಂದು ಕಡೆ ಮಧ್ಯಮ ವರ್ಗಕ್ಕೆ ಸರಕುಗಳನ್ನು ಕೊಳ್ಳಲು, ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಸರ್ಕಾರವು ಅನೇಕ ಆಮಿಷಗಳನ್ನು ರೂಪಿಸುತ್ತದೆ. ಈ ಕೊಳ್ಳುಬಾಕುತನಕ್ಕೆ ಬಲಿಬಿದ್ದ ಈ ವರ್ಗಗಳು ನಿರಂತರವಾಗಿ ಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಕೊನೆಯೇ ಇಲ್ಲ. ಈ ಕೊಳ್ಳುವಿಕೆಯನ್ನು ಸರಿತೂಗಿಸಲು ಸರ್ಕಾರವು ಅಮದು ನೀತಿಯನ್ನು ಹುರಿದುಂಬಿಸುತ್ತದೆ. ಅನೇಕ ವೇಳೆ ಸ್ವತಃ ದುಪ್ಪಟ್ಟು ಬೆಲೆ ತೆತ್ತು ಆಮದು ಮಾಡಿಕೊಳ್ಳುತ್ತದೆ. ಉದಾಹರಣೆಗೆ ತೈಲದ ಆಮದು. ಅದರ ಖರ್ಚು ಮತ್ತು ಬಂಗಾರದ ಆಮದಿನ ಖರ್ಚು ಇಂದಿನ ರುಪಾಯಿಯ ಕುಸಿತಕ್ಕೆ ಮೂಲಭೂತ ಕಾರಣಗಳು.

ಮತ್ತೊಂದು ಕಡೆ ಮುಖ್ಯವಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿಯುತ್ತಿರುವುದಕ್ಕೆ ಆತಂಕಪಡಬೇಕಾಗದ ಅಗತ್ಯವೇ ಇಲ್ಲ. Rupee-vs-dollarಅದರ ಬದಲಾಗಿ ಇಂದಿನ ಡಾಲರ್‌ನ ಎದುರು ರೂಪಾಯಿಯ ಕುಸಿತದಿಂದಾಗಿ ವಿದೇಶಿ ಸರಕುಗಳ ಆಮದು ಕಡಿಮೆಯಾಗಿ ನಮ್ಮಲ್ಲಿನ ದೇಸಿ ವಸ್ತುಗಳ ಖರೀದಿ ಹೆಚ್ಚಾಗುತ್ತದೆ. ಹಾಗಾಗುವಂತೆ ಅಂದರೆ ನಮ್ಮಲ್ಲಿನ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗುವಂತೆ ಆ ಮೂಲಕ ಉತ್ಪಾದನೆಗೊಂಡ ದೇಸಿ ಸರಕುಗಳು ಹೆಚ್ಚು ಮಾರಲ್ಪಡುವಂತೆ ಸರ್ಕಾರವು ಸ್ಪಷ್ಟ ಆರ್ಥಿಕ ನೀತಿಯನ್ನು ರೂಪಿಸಬೇಕು. ಆ ಮೂಲಕ ದೇಸಿ ಸರಕುಗಳ ಬಳಕೆಯ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚುವರಿ ವಸ್ತುಗಳನ್ನು ರಫ್ತು ಮಾಡಬಹುದು.ಈ ಮೂಲಕ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬಹುದು. ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಬಹುದು. ಆ ಮೂಲಕ ಸಮಾಜದ ಎಲ್ಲ ಸ್ಥರದ ವರ್ಗಗಳಿಗೂ ಉದ್ಯಮಪತಿಗಳಾಗುವ ಅವಕಾಶ ದೊರಕಿಸಿ ಇಡೀ ಉದ್ಯಮವನ್ನೇ ವಿಕೇಂದ್ರಿಕರಣಗೊಳಿಸಬಹುದು. ಇದೇ ಸಂದರ್ಭವನ್ನು ಬಳಸಿಕೊಂಡು ಮೊಟ್ಟಮೊದಲು ಮಧ್ಯಮವರ್ಗಗಳ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಬಹುದು. ಆ ಮೂಲಕ ಸಂಪನ್ಮೂಲದ ಹಂಚಿಕೆಯನ್ನು ಸಮಾನ ಮಟ್ಟದಲ್ಲಿ ಅಂದರೆ ಸರ್ವರಿಗೂ ಸಮಬಾಳು ನೀತಿಯ ಹತ್ತಿರಕ್ಕೆ ಕೊಂಡೊಯ್ಯಬಹುದು. ಇದು ಇಂದಿನ ಸಂದರ್ಭದಲ್ಲಿ ಯಾವುದೇ ಸರ್ಕಾರವು ಕೈಗೊಳ್ಳಬಹುದಾದ ತೀರಾ ಸರಳೀಕೃತ ಗ್ರಹಿಕೆಯ ಸಮಾಜವಾದದ ಆರ್ಥಿಕ ನೀತಿ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಖಂಡಿತ ಅಗತ್ಯ. ಆದರೆ ಇದಾಗುತ್ತಿಲ್ಲ. ಕೇವಲ ಹುಸಿ ಆರ್ಥಿಕ ಅರಾಜಕತೆಯನ್ನು ಹುಟ್ಟು ಹಾಕುತ್ತಿದ್ದಾರೆ.

ದೇಶದ ಶೇಕಡ 10 ರಷ್ಟಿರುವ ಉಳ್ಳವರ ಈ ವರ್ಗಗಳು ಈ ಸಾಮಾಜಿಕ ನ್ಯಾಯದ, ಸಮಾನತೆಯ ನೀತಿಗಳಗನ್ನು ಹತ್ತಿಕ್ಕಲು ತಮ್ಮಲ್ಲಿ ವಿಟೋ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಪರಸ್ಪರ ಅನುಮೋದನೆಯೊಂದಿಗೆ ಸಮಾಜವನ್ನು ಕಟ್ಟಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳುವಂತಹ ನ್ಯಾಯವಂತಿಕೆಯೂ ಜೊತೆಗೂಡಬೇಕೆಂಬ ಸಮತಾವಾದದ ಆಶಯಗಳ ಹಿನ್ನೆಲೆಯಲ್ಲಿ ನಿಮ್ಮ “ವೆಲ್‌ಫೇರ್ ಸ್ಟೇಟ್” ಅರ್ಥಾತ್ “ಕಲ್ಯಾಣ ರಾಜ್ಯ”ದಲ್ಲಿ ನಮ್ಮ ವೆಲ್‌ಫೇರ್‌ನ ಪ್ರಮಾಣ ಎಷ್ಟಿದೆ ಎಂದು ದೇಶದ ಬಡವರು, ತಳ ಸಮುದಾಯಗಳು, ಆದಿವಾಸಿಗಳು ಪ್ರಶ್ನಿಸಿದರೆ ಈ ಉಳ್ಳವರು ಅದನ್ನು ನೀನು ದುಡಿದು ತಿನ್ನಯ್ಯಾ ಎಂದು ವಿವೇಚನೆಯಿಲ್ಲದೆ ಅಮಾನವೀಯತೆಯಿಂದ ಮಾತನಾಡುವಷ್ಟರ ಮಟ್ಟಿಗೆ ದೇಶದ ಕಾನ್ಸಿಯಸ್ ಅತ್ಮವಿನಾಶಕವಾಗಿದೆ. ಸಂಕುಚಿತಗೊಳ್ಳುತ್ತಿದೆ. SEZಆರ್ಥಿಕ ಪುನಶ್ಚೇತನದ ಸೋಗಿನಲ್ಲಿ ಯಾವುದೇ ಪೂರ್ವ ಯೋಜನೆ, ವಿವೇಚನೆ, ಸಾಮಾಜಿಕ ಬದ್ಧತೆಗಳಿಲ್ಲದೆ ನಮ್ಮ ಸರ್ಕಾರವು ವಿಶೇಷ ಆರ್ಥಿಕ ವಲಯವನ್ನು (SEZ) ರೂಪಿಸಿ ಬಡವರ ಜಮೀನನ್ನು ಕಿತ್ತುಕೊಂಡು ಉದ್ದಿಮೆದಾರರಿಗೆ ಅತ್ಯಂತ ಕನಿಷ್ಟ ಬೆಲೆಯಲ್ಲಿ ಮಾರಲು ಹೊರಟಾಗ ಯಾವ ಮಾನವಿಲ್ಲದೇ ಅದನ್ನು ಕಬಳಿಸಲು ಹೊರಟ ಈ ಕಾರ್ಪೋರೇಟ್ ವರ್ಗಗಳಿಗೆ ತಾವು ಬಡಜನರ ದುಡಿದು ತಿನ್ನುವ ಅವಕಾಶವನ್ನು ಸಹ ಕಿತ್ತುಕೊಳ್ಳುತಿದ್ದೇವೆ ಎಂಬಂತಹ ಕನಿಷ್ಟ ನ್ಯಾಯ ಪ್ರಜ್ಞೆಯಿಲ್ಲದೆ, ಉಲ್ಟಾ ಬಡವರಿಗೆ ದುಡಿದು ಬದುಕಲಿಕ್ಕೆ ಹೇಳುತ್ತಿದ್ದಾರೆ. ಆದರೆ ತಮ್ಮ ಈ ದುರಹಂಕಾರಕ್ಕೆ ನಂದಿಗ್ರಾಮ್, ರಾಯಗಡ್, ದಾದ್ರಿ, ಮುಂಡರಿಗಿಗಳಲ್ಲಿ ತಕ್ಕ ಶಾಸ್ತಿ ಅನುಭವಿಸಿದ್ದಾರೆ. ಅಲ್ಲೆಲ್ಲಾ ಬಡವರ ಜಮೀನು ಕಬಲಿಸಲು ಹೋಗಿ ಸರಿಯಾಗಿಯೇ ಹೊಡೆತ ತಿಂದಿದ್ದಾರೆ. ಈ ಶಕ್ತಿ ಕೇಂದ್ರಗಳನ್ನು ಒಡೆಯಲು ಇದು ಸಕಾಲ. ಇದು ನಿರಂತರವಾಗಿರುವಂತೆ ನೋಡಿಕೊಳ್ಳಬೇಕಾಗಿದೆ.

One comment

  1. ಕಾರ್ಮಿಕರ ಶೋಷಣೆಗೆ ನಮ್ಮ ಹೆಚ್ಚುತ್ತಿರುವ ಜನಸಂಖ್ಯೆ ಪ್ರಧಾನ ಕಾರಣ. ಒಂದು ವಸ್ತು ಅಥವಾ ತರಕಾರಿ ಮಿತಿ ಮೀರಿ ಉತ್ಪಾದನೆಯಾದರೆ ಅದರ ಬೆಲೆ ಕುಸಿಯುತ್ತದೆ ಹಾಗೂ ಉತ್ಪಾದನೆಯ ಕೊರತೆ ಉಂಟಾದರೆ ಬೆಲೆ ತನ್ನಿಂದ ತಾನೇ ಹೆಚ್ಚಾಗುತ್ತದೆ. ಇದೇ ರೀತಿ ಕಾರ್ಮಿಕರು ಮಿತಿ ಮೀರಿದ ಸಂಖ್ಯೆಯಲ್ಲಿ ಲಭ್ಯವಾಗುತ್ತಿದ್ದರೆ ಅವರಿಗೆ ದೊರೆಯುವ ವೇತನವೂ ಕಡಿಮೆಯಾಗುತ್ತದೆ. ಏಕೆಂದರೆ ಬಂಡವಾಳಗಾರರಿಗೆ ದುಡಿಯಲು ಕಡಿಮೆ ಸಂಬಳದಲ್ಲಿ ಯಥೇಚ್ಛ ಜನ ದೊರೆಯುತ್ತಾರೆ. ಹೆಚ್ಚು ವೇತನ ಕೇಳಿದರೆ ಅವರನ್ನು ತೆಗೆದು ಹಾಕಿದರೆ ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧ ಇರುವ ಅಪಾರ ಜನ ಲಭ್ಯವಾಗುತ್ತಾರೆ ಏಕೆಂದರೆ ದುಡಿಯುವ ಜನರಿಗೆ ಇದು ಹೊಟ್ಟೆಪಾಡಿನ ಪ್ರಶ್ನೆ. ಮುಕ್ತ ಆರ್ಥಿಕ ನೀತಿಯಲ್ಲಿ ಹೆಚ್ಚಿನ ಪೈಪೋಟಿ ಇರುವ ಕಾರಣ ಕಡಿಮೆ ಬೆಲೆಗೆ ಹೆಚ್ಚಿನ ಗುಣಮಟ್ಟದ ವಸ್ತು/ಸರಕು ಉತ್ಪಾದನೆ ಮಾಡಿದವರು ಮಾಡುವವರು ಮಾತ್ರ ಗೆಲ್ಲಲು ಸಾಧ್ಯ. ಹೀಗಾಗಿ ಕಡಿಮೆ ಸಂಬಳಕ್ಕೆ ದುಡಿಸುವುದು ಮುಕ್ತ ಆರ್ಥಿಕ ನೀತಿಯ ಪ್ರಧಾನ ಲಕ್ಷಣ.

    ಮುಕ್ತ ಆರ್ಥಿಕ ನೀತಿ ಹಾಗೂ ಖಾಸಗೀಕರಣದಿಂದಾಗಿ ಇಂದು ಬೇಡಿಕೆ ಇರುವಷ್ಟು ಉತ್ಪಾದನೆ ಸಾಧ್ಯವಾಗಿದೆ. ಇಲ್ಲವಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಒಂದು ಕಾಲದಲ್ಲಿ ಫೋನ್ ಕನೆಕ್ಷನ್ ಬೇಕಿದ್ದರೆ ಅಥವಾ ಒಂದು ವಾಹನ ಕೊಳ್ಳಬೇಕಿದ್ದರೆ ಅದಕ್ಕಾಗಿ ಬುಕ್ ಮಾಡಿ ತುಂಬಾ ಸಮಯ ಕಾಯಬೇಕಾಗಿತ್ತು. ಖಾಸಗೀಕರಣ ಬಂಡ ನಂತರ ಅಂಥ ಕಾಯುವಿಕೆ ಇಲ್ಲ. ಸರಕುಗಳು ಕಡಿಮೆ ಹಾಗೂ ಸ್ಪರ್ಧಾತ್ಮಕ ಬೆಲೆಗೆ ಜನಸಾಮಾನ್ಯನಿಗೂ ಲಭ್ಯ. ಇಂದು ಹಳ್ಳಿಯ ಅತ್ಯಂತ ಕೆಳ ಆರ್ಥಿಕ ಮಟ್ಟದ ಮನುಷ್ಯನಲ್ಲೂ ಮೊಬೈಲ್ ಫೋನ್ ಇದೆ ಎಂದರೆ ಅದಕ್ಕೆ ಕಾರಣ ಖಾಸಗೀಕರಣವೇ ಆಗಿದೆ. ಇದರಿಂದಾಗಿ ಇಂದು ಪ್ರತಿಯೊಬ್ಬ ಮನುಷ್ಯನಿಗೂ ಸಂಪರ್ಕ ಸುಲಭ ಸಾಧ್ಯವಾಗಿದೆ.

    ಸಮಾಜವಾದ/ಸಮತಾವಾದ ಅಪ್ಪಿಕೊಂಡ ದೇಶಗಳು ಹಿಂದೆ ಬಿದ್ದಿವೆ. ಖಾಸಗೀಕರಣ, ಉದಾರೀಕರಣ, ಮುಕ್ತ ಅರ್ಥಿಕ ನೀತಿ ಅಪ್ಪಿಕೊಂಡ ದೇಶಗಳು ಸಮತಾವಾದ/ಸಮಾಜವಾದ ಅಳವಡಿಸಿಕೊಂಡ ದೇಶಗಳಿಗಿಂಥ ಬಡತನ ನಿವಾರಣೆ, ಜನರ ಅರ್ಥಿಕ ಮಟ್ಟ ಸುಧಾರಿಸುವಲ್ಲಿ ಬಹಳ ಮುಂದೆ ಹೋಗಿವೆ. ಸಮತಾವಾದ/ಸಮಾಜವಾದ ಯಶಸ್ವಿಯಾಗಬೇಕಾದರೆ ಮಾನವ ಸಮಾಜದಲ್ಲಿ ಪ್ರಬುದ್ಧ ಚಿಂತನಶೀಲ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು ಆದರೆ ಸಮಾಜದಲ್ಲಿ ಪ್ರಬುದ್ಧ, ಚಿಂತನಶೀಲ ಜನರ ಸಂಖ್ಯೆ ಬಹಳ ಕಡಿಮೆ ಇದೆ. ಹೀಗಾಗಿ ಸಹಜವಾಗಿಯೇ ಸಮತಾವಾದ/ಸಮತಾವಾದ ಸೋಲುತ್ತದೆ. ನಿಸರ್ಗ ನಿಯಮಗಳ ಅನುಸಾರ ಮನುಷ್ಯನಿಗೆ ಹೆಚ್ಚಿನದನ್ನು ಸಾಧಿಸಬೇಕಾದರೆ ಅದು ತನ್ನದು ಎಂಬ ಭಾವನೆ ಬರಬೇಕು ಆಗ ಅವನು ಹೆಚ್ಚಿನ ಸಾಧನೆ, ಶ್ರಮ ವಹಿಸಿ ಕೆಲಸ ಮಾಡುತ್ತಾನೆ. ಯಾವುದು ಸಮುದಾಯದ್ದೋ , ಸರಕಾರದ್ದೋ ಆಗಿರುತ್ತದೋ ಆಗ ಸಾಮಾನ್ಯ ಮನುಷ್ಯನಲ್ಲಿ ಉದಾಸೀನತೆ ಬೆಳೆಯುತ್ತದೆ. ತನಗೆ ಹೇಗಿದ್ದರೂ ಸಂಬಳ ಬರುತ್ತದಲ್ಲ, ಯಾಕೆ ಹೆಚ್ಚಿನ ಕೆಲಸ ಮಾಡಬೇಕು ಎಂಬ ಧೋರಣೆ ಬೆಳೆಯುತ್ತದೆ. ಹೀಗಾದಾಗ ದಕ್ಷತೆ ಕುಂದುತ್ತದೆ. ಸಾರ್ವಜನಿಕ ವಲಯದ ಉದ್ದಿಮೆಗಳು, ಸಂಸ್ಥೆಗಳು ನಷ್ಟಕ್ಕೊಳಗಾಗಲು, ಸರಕಾರದ ಯೋಜನೆಗಳು ಯಶಸ್ವಿಯಾಗದಿರಲು ಇದುವೇ ಪ್ರಧಾನ ಕಾರಣ.

Leave a Reply to Ananda Prasad Cancel reply

Your email address will not be published.