ರಂಗಸಮಾಜದ ಸದಸ್ಯರ ಜವಾಬ್ದಾರಿ

– ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಂಗಾಯಣ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣ ಕಲಾವಿದರ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರ ಗರಡಿಯಲ್ಲಿ ಪಳಗಿ, ಕಾರ್ಯ ನಿರ್ವಹಿಸಿ, ಅಭಿನಯಿಸಿರುವ ಈ ನಟನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಅವರು ರಂಗಭೂಮಿಗೆ ಸಂಬಂಧಿಸಿದ ಅನೇಕ ಜ್ಞಾನಶಿಸ್ತುಗಳ ಬಗೆಗೆ ಪಡೆದಿರುವ ಅನುಭವವನ್ನು ರಂಗಭೂಮಿಯ ಕಡೆಗೆ ತಿರುಗಿಸಬೇಕಾದ ಕೆಲಸ ಅಗತ್ಯವಾಗಿ ಹಾಗೂ ತುರ್ತಾಗಿ ಆಗಬೇಕಿದೆ.

ಈ ಕಲಾವಿದರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು. ರಂಗಾಯಣದ Kalamandira_Mysoreಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರೊಡನೆ ಇವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಕಲಾವಿದರ ಅನುಭವ ಹೊಸ ರಂಗಾಯಣಗಳ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಕಲಾವಿದರ ಅನುಭವದ ಮೂಲಕ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣಗಳ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. ಈಗಿರುವ ಈ ಎಲ್ಲ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಿವೃತ್ತಿಯ ನಂತರ ರಂಗಾಯಣಗಳಲ್ಲಿ ನಿರ್ವಾತ ಉಂಟಾಗಬಾರದು. ಇವರ ನಿರ್ಗಮನದ ತರುವಾಯ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರ ಪಡೆಯನ್ನು ಸಜ್ಜುಗೊಳಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಹಿರಿಯ ಕಲಾವಿದರನ್ನು ಹೊಸ ರಂಗಾಯಣಗಳ ನಿರ್ದೇಶಕರ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಬಹುದು. ಈ ನುರಿತ ಕಲಾವಿದರ ಸೇವಾಹಿರಿತನವನ್ನು ಮಾನದಂಡವಾಗಿಟ್ಟುಕೊಂಡು, ಅವರಿಗೆ ಸರದಿಯ ಪ್ರಕಾರ ನಿರ್ದೇಶಕ ಸ್ಥಾನದ ಜವಾಬ್ದಾರಿಯನ್ನು ನೀಡಬಹುದು. ಹೊಸ ರಂಗಾಯಣಗಳ ನಿರ್ದೇಶಕರ ನೇಮಕಾತಿ ಸಮಯದಲ್ಲಿ ರಂಗಾಯಣದ ಹಿರಿಯ ಕಲಾವಿದರನ್ನೂ ಪರಿಗಣಿಸಬೇಕಾಗಿದೆ. ಏಕೆಂದರೆ, ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗಾ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಈ ಮೂಲಕ ಇಷ್ಟು ದಿನಗಳ ಅವರ ನಿರಂತರವಾದ ರಂಗಭೂಮಿಯ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಿದಂತಾಗುತ್ತದೆ.

ಈ ಹಿಂದಿನ ಸರ್ಕಾರವು ಸಾಂಸ್ಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವೆಂದರೆ, ರಂಗಾಯಣ ಕಲಾವಿದರ ವರ್ಗಾವಣೆ. ಆದರೆ ಈ ಹೊಸ ರಂಗಸಮಾಜದ ಸದಸ್ಯರು ಅದನ್ನು ರದ್ದುಗೊಳಿಸಿ ಅಚಾತುರ್ಯವೆಸಗಿದ್ದಾರೆ. ಮೈಸೂರಿನ ಕೆಲವು ಬುದ್ಧಿಜೀವಿಗಳು, ಸಾಹಿತಿ, ಕಲಾವಿದರು ಹಾಗೂ ಪ್ರೇಕ್ಷಕರು ತಾವು ಹಾಗೂ ರಂಗಾಯಣದ ಕಲಾವಿದರು ಸಾಯುವವರೆಗೂ ಮೈಸೂರಿನಲ್ಲೇ ನೆಲೆನಿಲ್ಲುವ, ಆ ಮೂಲಕ ಅವರ ನಟನೆ, ಅನುಭವ ಎಲ್ಲಿಯೂ ಬಳಕೆಯಾಗದಂತೆ, ಮತ್ತಾರಿಗೂ ಅವರ ಅಭಿನಯವನ್ನು ವೀಕ್ಷಿಸುವ ಅವಕಾಶ ಲಭಿಸದಂತೆ ಹುನ್ನಾರಗಳನ್ನು ಹೂಡುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಂಗಸಮಾಜದ ಸದಸ್ಯರು ಕಾರ್ಯನಿರ್ವಹಿಸಬೇಕಾಗಿದೆ.

ಈಗಾಗಲೇ ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಕ್ರಿಯಾಶೀಲವಾಗಿದ್ದಾರೆ. ಈಗಿರುವ ರಂಗಾಯಣದ ನಿಯಮಾವಳಿಗಳಿಗೆ ಕೂಡ ಇದೇ ಸಮಯದಲ್ಲಿ ಸೂಕ್ತ ತಿದ್ದುಪಡಿ ತರುವ ಮೂಲಕ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಆಗ ಬಾಹ್ಯ ಒತ್ತಡಗಳು ಇಲ್ಲವಾಗುತ್ತವೆ.

ರಂಗಾಯಣದ ಮುಂದಿನ ಬಿಕ್ಕಟ್ಟುಗಳು:

ರಂಗಾಯಣದ ಮುಂದಿನ ನಿರ್ದೇಶಕರಾರು? ಎಂಬ ಪ್ರಶ್ನೆ ಈಗ ಮತ್ತೆ ರಂಗಭೂಮಿ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸ ಒದಗಿಸಿದೆ. ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಪರಸ್ಪರರನ್ನು ಬೆಂಬಲಿಸುವ ಅನೇಕ ಗುಂಪುಗಳು – ಅನೇಕ ಬಗೆಯಲ್ಲಿ ಕ್ರಿಯಾಶೀಲವಾಗಿವೆ. ರಂಗಾಯಣದ ಈಚಿನ ಮೂವರು ನಿರ್ದೇಶಕರು – ಬಿ.ಜಯಶ್ರೀ ಅವರ ರಾಜೀನಾಮೆ, ಪ್ರೊ.ಲಿಂಗದೇವರು ಹಳೆಮನೆಯವರ ಅಕಾಲಿಕ ನಿಧನ ಹಾಗೂ ಡಾ.ಬಿ.ವಿ.ರಾಜಾರಾಂ ಅವರನ್ನು ಸರ್ಕಾರವು ವಜಾಗೊಳಿಸಿದ ಕ್ರಮಗಳಿಂದ – ಈ ಮೂವರೂ ಅಕಾಲದಲ್ಲಿ ಹುದ್ದೆ ತೊರೆಯುವಂತಾದುದು ಪ್ರಸ್ತುತ ಸನ್ನಿವೇಶ ನಿರ್ಮಾಣಕ್ಕೆ ಕಾರಣ.

ಇದುವರೆಗಿನ ರಂಗಾಯಣದ ನಿರ್ದೇಶಕರ ಪಟ್ಟಿಯನ್ನು ಗಮನಿಸಿದಾಗ ಎದ್ದು ಕಾಣುವ ಅಂಶವೆಂದರೆ; ಎನ್.ಎಸ್.ಡಿ. ಪದವೀಧರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದಾರೆ. ಪ್ರೊ.ಲಿಂಗದೇವರು ಹಳೆಮನೆಯವರು ಹಾಗೂ ಬಿ.ವಿ.ರಾಜಾರಾಂರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಎನ್.ಎಸ್.ಡಿ., ಪದವೀಧರರೆ ಆಗಿದ್ದಾರೆ. ಇದನ್ನು ಗಮನಿಸಿದಾಗ, ರಂಗಸಮಾಜದ ಸದಸ್ಯರು ಈ ಅರ್ಹತೆಯನ್ನು ಅಲಿಖಿತ ನಿಯಮವನ್ನಾಗಿ ಅನುಸರಿಸಿರುವಂತೆ ತೋರುತ್ತದೆ. ರಂಗಾಯಣದ ಕ್ರಿಯಾಶೀಲತೆಯನ್ನು ಅನೇಕ ಹಂತಗಳಲ್ಲಿ ವಿಸ್ತರಿಸುವ ಕೆಲಸವನ್ನು ಈ ಪದವೀಧರರು ಮಾಡಿದ್ದಾರೆ. ಈಗಲಾದರೂ ರಂಗಸಮಾಜವು ಆಯ್ಕೆಯಲ್ಲಿ ಅಂತಿಮಪಟ್ಟಿ ಕಳಿಸುವಾಗ ಈ ಬಗೆಯ ಅಲಿಖಿತ ನಿಯಮಗಳು ಇನ್ನೆಷ್ಟು ದಿನ ಅಗತ್ಯ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ರಂಗಸಮಾಜದ ಸದಸ್ಯರು ಕರ್ನಾಟಕದ ರಂಗಭೂಮಿಯಲ್ಲಿ ದೀರ್ಘಾವಧಿಯಿಂದ ತೊಡಗಿಕೊಂಡಿದ್ದಾರೆ. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವ ಮೂಲಕ ರಂಗಭೂಮಿಯ ಚರಿತ್ರೆ, ಆಧುನಿಕ ವಿದ್ಯಮಾನ, ಅಧಿಕಾರ ಹಾಗೂ ಅದರ ಸಾಂಸ್ಥಿಕ ರೂಪಗಳು ಅದು ತರುವ ಒತ್ತಡಗಳನ್ನು ಅರಿಯದವರೇನೂ ಅಲ್ಲ. ಅವರು ಈ ಎಲ್ಲ ಸಮಸ್ಯೆಗಳ ನಡುವೆಯೂ ರಂಗಾಯಣದ ಸ್ಥಾಪನೆ, ಅದರ ಧ್ಯೇಯೋದ್ದೇಶಗಳನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಅರ್ಹರನ್ನು ಆಯ್ಕೆ ಮಾಡಬೇಕಾಗಿದೆ.

ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಂಗಸಮಾಜವು ಹೆಸರುಗಳನ್ನು ಸೂಚಿಸುವಾಗ ನಿರ್ದೇಶಕರಾಗಿ ಹೆಸರಾದವರನ್ನು ಮತ್ತು ಅವರ ರಂಗಭೂಮಿಯ ಆಸಕ್ತಿ, ತೊಡಗುವಿಕೆ, ರಂಗಾಯಣದ ಆಡಳಿತವನ್ನು ನಿರ್ವಹಿಸುವ ಸಾಧ್ಯತೆ ಇತ್ಯಾದಿ ವಿಷಯಗಳನ್ನೂ ಗಮನದಲ್ಲಿರಿಸಿಕೊಂಡು ಮೂವರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುತ್ತಿತ್ತು. ಈ ಬಾರಿಯೂ ಈ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕಾಗಿರುವುದು ರಂಗಸಮಾಜದ ಮೊದಲ ಜವಾಬ್ದಾರಿ. ಆ ಮೂಲಕ ಈ ಪಟ್ಟಿಯಲ್ಲಿ ಯೋಗ್ಯರಾದವರು ಮಾತ್ರ ಉಳಿದುಕೊಳ್ಳುವ ಆಯ್ಕೆ ಮಾಡುವುದು ಎರಡನೇ ಜವಾಬ್ದಾರಿಯಾಗಿದೆ.

ಆದರೆ ರಂಗಸಮಾಜವು ಸೂಚಿಸಿದ ಹೆಸರುಗಳನ್ನು ಇತ್ತೀಚೆಗೆ ಮೈಸೂರು, ಶಿವಮೊಗ್ಗ ಹಾಗೂ ಧಾರವಾಡದ ರಂಗಾಯಣಗಳಿಗೆ ಪರಿಗಣಿಸದಿರುವುದು ಗೊತ್ತಾಗಿದೆ. ಹಾಗಾದರೆ ರಂಗಾಯಣಕ್ಕೆ ರಂಗಸಮಾಜವೇಕೆ ಬೇಕು? ರಂಗಸಮಾಜದ ಅಸ್ತಿತ್ವವಿರುವುದು ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ. ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುವಲ್ಲಿ. ಅದು ಮುಂದೆ ರಂಗಾಯಣದ ಅಸ್ತಿತ್ವದ ಸ್ಥಿತ್ಯಂತರಗಳಿಗೂ ಕಾರಣವಾಗುತ್ತದೆ. ಆದ್ದರಿಂದ, ರಂಗಾಯಣದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಂದ ಬರುತ್ತಿರುವ, ಮುಂದೆ ಬರಬಹುದಾದ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯವನ್ನು ರಂಗಭೂಮಿಯೇ ಒದಗಿಸುತ್ತದೆ. ರಂಗಭೂಮಿಯ ಒಡನಾಟವು ಈ ಬಗೆಯ ವಿವೇಕವನ್ನು ಕಲಿಸಿರುತ್ತದೆ. ಆದಾಗ್ಯೂ, ಸಾಂದರ್ಭಿಕವಾಗಿ ಪ್ರಭುತ್ವದ ಒತ್ತಡಗಳು ಈ ವಿವೇಕವನ್ನು ಹೊಸಕಿ ಹಾಕಿ-ತನಗೆ ಬೇಕಾದವರನ್ನು ಆರಿಸುವಂತಾಗಬಾರದು. ಪ್ರಭುತ್ವದ ಒತ್ತಡಕ್ಕೆ ಮಣಿಯುವುದಾದಲ್ಲಿ ರಂಗಸಮಾಜದ ಅಗತ್ಯವೇನಿದೆ?

ಇದುವರೆಗೆ ರಂಗಾಯಣದ ನಿರ್ದೇಶಕರಾಗಿರುವವರು ದಕ್ಷಿಣ ಕರ್ನಾಟಕದ ವ್ಯಾಪ್ತಿಯವರು, ಹವ್ಯಾಸಿ ರಂಗಕರ್ಮಿಗಳು, ನಿರ್ದೇಶಕರು. ಆದರೆ, ಉತ್ತರ ಕರ್ನಾಟಕದ ರಂಗಕರ್ಮಿಗಳು, ವೃತ್ತಿ ರಂಗಕರ್ಮಿಗಳು, ರಂಗಭೂಮಿಯ ತಂತ್ರಜ್ಞರು ಹಾಗೂ ನಾಟಕಕಾರರು ರಂಗಾಯಣದ ನಿರ್ದೇಶಕರಾಗಿಲ್ಲ. ರಂಗ ಸಮಾಜದ ಸದಸ್ಯರುಗಳು ಈ ಅನೇಕ ಅಂಶಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಬೇಕಾಗಿದೆ. ಸಾಮಾಜಿಕ ನ್ಯಾಯದ ದೃಷ್ಟಿಯನ್ನು ಪರಿಗಣಿಸಿದ್ದಾದಲ್ಲಿ ಈಗಿನ ಆಕಾಂಕ್ಷಿಗಳ ಪಟ್ಟಿಯು ಅರ್ಧಕ್ಕಿಳಿಯುತ್ತದೆ. ಈ ಮಾನದಂಡಗಳನ್ನು ಅನುಸರಿಸಿದಲ್ಲಿ ರಂಗಾಯಣದ ಘನತೆಯೂ ಹೆಚ್ಚುತ್ತದೆ.

2 comments

  1. Rangasamaja members have an urgent task to accomplish. Regional feelings, mere NSD graduation, insufficient work in rangamaadhma must not find way in their suggestions. Let an able person, capable of building an institution like Rangayana, be chosen rather than those who lobby.

  2. rangayanada kalavidara bagge heliddu sari ide adare avaru hage maduva manassu hondadiddaga yaru enu madalu aguvadilla yembudannu dharwadakke bandaga a kalavidaru torisiddare

Leave a Reply

Your email address will not be published.