ಜಾನುವಾರು ಜಾನಪದ ಮತ್ತು ಐಬುಗಳು : ಗಂಗೆ, ಗೌರಿ,.. ಭಾಗ–9

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಹಟ್ಟಿಯಲ್ಲಿಯೇ ಹುಟ್ಟಿದವುಗಳು ಹಣೆಬರಹ. ಆದರೆ ತಂದು ಕಟ್ಟಿಕೊಳ್ಳುವವುಗಳು ಹೀಗೆ ಹಣೆಬರಹದಂತೆ ಬಂದು ತಗುಲಿಕೊಳ್ಳದಂತೆ ಜಾಗರೂಕತೆ ವಹಿಸುವುದಲ್ಲವೇ? ಅಂದಮೇಲೆ ಅದಕ್ಕಾಗಿ ಗ್ರಹಗತಿಗಳ ಲೆಕ್ಕಾಚಾರ, ಗುಣ ನಡತೆಯ ವಿಶ್ಲೇಷಣೆ ಎಲ್ಲವೂ ಇರಬೇಕು. ಹೀಗೆ ದನ ಎಮ್ಮೆಗಳನ್ನು ಸಾಕುವುದೆಂದರೆ ಅಲ್ಲೊಂದು ಒಳಿತು ಕೆಡುಕುಗಳ ಲೆಕ್ಕಾಚಾರವಿರುವ ಲಕ್ಷಣ ಶಾಸ್ತ್ರದ ಜಾನಪದ ಜಗತ್ತೂ ಇರುತ್ತದೆ. ಹಸುಕೊಳ್ಳುವಾಗ ಅದರ ನಾಲ್ಕುಕಾಲು, ಒಂದು ಬಾಲ, ಎರಡುಕಣ್ಣು, ಕಿವಿಗಳಷ್ಟೇ ಗಣಿಸಲ್ಪಡುವುದಲ್ಲ. handicapped-cowನಾಲ್ಕು ಕಾಲಿನ ಎರಡು ಕಿವಿಯ ಎಲ್ಲಾ ಜಾನುವಾರುಗಳು ವಿಕ್ರಯಯೋಗ್ಯ, ಪಾಲನಾಯೋಗ್ಯವೆಂಬ ಸ್ಥಿತಿಯಿಲ್ಲ. ಹೇಗೆ ಮದುವೆ ಮುಂಜಿಗಳಲ್ಲಿ ಗುಣಕೂಟ, ಯೋನಿಕೂಟ, ಅಂಗಾರಕ ಇನ್ನೂ ಏನೇನನ್ನೋ ನೋಡುವ ಕ್ರಮವಿರುವಂತೆ ಜಾನುವಾರಗಳ ವಿಲೇವಾರಿಯಲ್ಲಿಯೂ ಅವುಗಳ ದೇಹರಚನೆ, ಚಾಳಿ, ಆರೋಗ್ಯಾದಿಗಳನ್ನಾಧರಿಸಿದ ಒಂದು ಜಾನಪದ ಪಶುಮೀಮಾಂಸೆಯಿದೆ. ಈ ವಿವೇಚನಾಶಾಸ್ತ್ರ ಒಪ್ಪುವ ಮತ್ತು ನಿರಾಕರಿಸುವ ಸಂಗತಿಗಳನ್ನಾಧರಿಸಿ ಹಸುಗಳ ವಿಕ್ರಯನಡೆಸಲಾಗುತ್ತದೆ. ಈ ಪಶುಮೀಮಾಂಸೆಯ ಮೂಲಕ ಐಬುಗಳೆಂಬಂತೆ ನಿರೂಪಿತವಾದ ಸಂಗತಿಗಳೊಂದಿಗೆ ತುಳುಕು ಹಾಕಿಕೊಂಡ ಹಸುಗಳನ್ನು ಹಟ್ಟಿಯಲ್ಲಿ ಕಟ್ಟಿಕೊಳ್ಳುವುದೇ ಅನಿಷ್ಟದಾಯಕವೆಂಬಂತೆಯೂ ನಂಬಿಕೊಂಡಿರುವ ಜಾನಪದರಿಗೆ ಅವರ ಬದುಕು ಹಸುನುಮಾಡುವ ಸಲ್ಲಕ್ಷಣದ ಹಸುವಷ್ಟೇ ಬೇಕು ವಿನಹಾ ಹಸುವೆಂಬ ರೂಹುವಲ್ಲ.

ನನಗೆ ತಿಳಿದಿರುವ ಅಲ್ಪಮಾಹಿತಿಯನ್ನಾದರಿಸಿ ಹೇಳುವುದಿದ್ದರೆ ದೇಹ ರಚನೆಗೆ ಸಂಬಂಧಿಸಿ ಬಳಕೆಯಲ್ಲಿರುವ ಕುಂಟುಮೂಳೆ, ಚೋಂಕುಬಾಲ, ಕಂಟ್‌ಬಾಲ, ಇಳ್‌ಗೋಡು, ದಾಸ್‌ಹುಂಡ್, ಕತ್ರಿಸುಳಿ, ನೇತ್ರ್‌ಬೆಳು, ಚಕ್ರ್‌ಕೋಡ್, ಕಳ್ಕ್‌ಬಾಯಿ ಇತ್ಯಾದಿಗಳು ಒಳ್ಳೆಯ ಚಹರೆಗಳಲ್ಲ. ದೈಹಿಕ ಅಸಾಮರ್ಥ್ಯತೆಯ ಭಾಗವಾಗಿ ಜೀನಬಾವು ಸೆಡಿಗಾಲು ಇತ್ಯಾದಿಗಳು ಅನುಕೂಲಕರವಲ್ಲ. ನಡತೆ/ಚಾಳಿಯ ಭಾಗವಾಗಿ ಕಳಿಹಾಕುವುದು, ನೊಗಮುರದ್ದ್, ನೇಲ್‌ನೊಗದ ಜೊತೆಗೆ ಹಟ್ಟಿಗ್ ಹೊಗ್ಗದ್, ಹಾರ್‍ಸ್ಕಹೋಪ್ದ್, ಹೆಜ್‌ಮಣ್‌ತೆಗುದ್ ಇತ್ಯಾದಿಗಳು ಒಳ್ಳೆಯ ಚಾಳಿಯಲ್ಲ. ಇವೆಲ್ಲವನ್ನೂ ಐಬುಗಳೆಂದೇ ಜಾನುವಾರು ಜಾನಪದದಲ್ಲಿ ಗುರುತಿಸಲಾಗುತ್ತದೆ. ಈ ಪರಿಭಾಷೆಗಳ ಮೂಲಕವಾಗಿ ಜಾನುವಾರುಗಳ ಕಾರ್ಯಕ್ಷಮತೆಯ ಜತೆಗೆ ಇಷ್ಟಾನಿಷ್ಟ ಪ್ರಯೋಜನಗಳನ್ನು ವಿವರಿಸುವ ಈ ‘ಜಾನುವಾರು ಜಾನಪದ ಸಂವಿಧಾನ’ ಹಸುವಿನ ವಯಸ್ಸು ಮತ್ತು ದುಡಿಯುವ ಶಕ್ತಿಯನ್ನು ಮೀರಿಯೂ ಅದನ್ನು ಇಟ್ಟ್ಟುಕೊಳ್ಳಬೇಕಾದುದೋ, deformed-cowಇಲ್ಲ ಹಟ್ಟಿಯಿಂದ ಹೊರಗಿಡಬೇಕಾದದೋ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಹಸುವೊಂದನ್ನು ಕೊಡಲೇಬೇಕಾದ ಸಂದರ್ಭವನ್ನು ಕೇವಲ ಅದರ ವಯಸ್ಸು, ಗೊಡ್ಡುತನಗಳಷ್ಟೇ ನಿರ್ಧರಿಸುವುದಲ್ಲ. ಅದೊಂದು ಅನುಪಯುಕ್ತವಲ್ಲದ ಹಂತದಲ್ಲಿಯೂ ತನ್ನ ಐಬಿನ ಕಾರಣದಿಂದಾಗಿ ಸಾಕಿದವನ ಪಾಲಿಗೆ ಅಪಾಯಕಾರಿ ಸರಕಾಗಿ ಭಾವಿತವಾಗಲೂಬಹುದು. ಹಟ್ಟಿಯಲ್ಲಿ ಹಸುವಿರಬೇಕೆಂದು ಹಂಬಲಿಸುವ ಜನ ಈ ಐಬಿರುವ ಹಸು ಹಟ್ಟಿಯ ಹೊದ್ದುಹೋಕಿನಲ್ಲಿಯೇ ಇರಬಾರದೆಂಬ ಗಾಢವಾದ ನಂಬುಗೆಯನ್ನು ಹೊಂದಿರುವುದರಿಂದ ಹಸುವಿನ ಕೊಳ್ಳುವಿಕೆ ಕೊಡುವಿಕೆಗಳಲ್ಲಿ ಐಬುಗಳಿಗೆ ಪ್ರಮುಖ ಜಾಗವಿದೆ.

ಜಾನುವಾರುಗಳನ್ನು ಕೊಳ್ಳುವಾಗ ದೇಹರಚನೆ, ಬಣ್ಣ ಕೋಡುಗಳ ಸ್ವರೂಪ, ಮೈಮೇಲಿನ ರೊಮಗಳ ಸುಳಿ(ಸುರುಳಿ)ಗಳ ಸ್ವರೂಪಗಳನ್ನು ಅನುಭವಸ್ಥರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕೆಲವೊಮ್ಮೆ ಕೊಂಡುಕೊಳ್ಳುವವನಿಗೆ ಇದರ ಅರಿವಿಲ್ಲದೆ ಹೋದರೆ ಅವನು ಕೊಂಡುಕೊಂಡು ಬೆಪ್ಪಾದ ಮೇಲೆ ಅವುಗಳನ್ನು ಯಾರಿಗಾದರೂ ಸಾಗಹಾಕಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ. ಯಾಕೆಂದರೆ ಐಬುಗಳು ಅಷ್ಟೊಂದು ಪರಿಣಾಮಕಾರಿಯಾದ ನೆಲೆಯಲ್ಲಿ ಪ್ರಭಾವಬೀರಬಲ್ಲ ರೀತಿಯಲ್ಲಿ ನಂಬುಗೆಯ ಭಾಗವಾಗಿವೆ. ತಲೆಯ ಮೇಲಿನ ಉದ್ದನೆಯ ಬಿಳಿನಾಮ (ದಾಸ್‌ಹುಂಡು) ಕೊಂಡವನಗಂಟಿಗೆ ಪಂಗನಾಮವೆಂದೂ, ನೆತ್ರಬೆಳು (ರಕ್ತಕೆಂಪಿನ ಮಿಶ್ರಣದ ಬಿಳುಪು) ಯಜಮಾನನ ನೀರುಬಾರದ ಕಣ್ಣಲ್ಲಿ ನೆತ್ತರು ತರಿಸುತ್ತದೆ ಎಂದೂ ನಂಬುತ್ತಾರೆ. ಮೂರು ಹುರಿ ಮೂಳೆಗಳು ಕೂಡುವ ಜಾಗದಲ್ಲಿನ ಕುಂಟುಮೂಳೆ(ಕಿರುಗಾತ್ರದ ಮೂಳೆ), ಚಕ್ರಕೋಡು/ವೃತ್ತ್ತಾಕರದ ಕೋಡು, ಚೋಂಕ್ಬಾಲಗಳು ಹಸುವಿನ ಮೌಲ್ಯಕ್ಕೆ ಬಹುದೊಡ್ಡ ಹೊಡೆತ ಕೊಡುತ್ತವೆ. ಇನ್ನು ಚಾಳಿಗೆ ಸಂಬಂಧಿಸಿದಂತೆ ಉಳುವ ವೇಳೆಯಲ್ಲಿ ನೇಗಿಲು-ನೊಗಸಮೇತ ಪೇರಿಕೀಳುವ ಜಾನುವಾರುಗಳು ಹಾಗೆ ಓಡುವಾಗ ನೊಗಮುರಿದರೆ, ಇಲ್ಲವೇ ಅವುಗಳು ಹಾಗೆಯೇ ಹಟ್ಟಿಗೆ ಪ್ರವೇಶ ಮಾಡಿದ್ದರೆ ಹಟ್ಟಿಯನ್ನೇ ಉಳುವುದಕ್ಕಾಗಿ, ಎತ್ತುಬೀಜವನ್ನು ನಾಶಮಾಡಲಿಕ್ಕಾಗಿ ಬಂದವುಗಳೆಂಬಂತೆ ಭಾವಿಸುವುದರಿಂದ ಇಂತಹವುಗಳನ್ನು ಕಟ್ಟಿಕೊಳ್ಳಲೇಬಾರದೆಂಬ ದೃಢವಾದ ನಂಬುಗೆಯಿದೆ. ಹಾಗೆಯೇ ಜೇನುಬಾವು, ಸೆಡಿಕಾಲು(ಚಳಿಗಾಲದಲ್ಲಿ ನಡೆಯಲು ಎಳೆದಂತಾಗುವ ಕಾಲಿನ ರೋಗ) ಇತ್ಯಾದಿಗಳು ಋಣಾತ್ಮಕ ಐಬುಗಳೇ ಆಗಿವೆ.

ಇವುಗಳಲ್ಲಿ ಕೆಲವು ಐಬುಗಳು ಹಸುವಿನ ಮೌಲ್ಯಕ್ಕೆ ಪೆಟ್ಟುಕೊಟ್ಟು ಸಾಕಿದವನಿಗೆ ಮೂರುಕಾಸಿನ ಬೆಲೆಸಿಗದಂತೆ ಮಡಿದರೆ, ಇನ್ನು ಕೆಲವು ಐಬುಗಳು ಆ ಇಡಿಯ ಜೋಡಿಯನ್ನೋ, ಒಂಟಿ ಹಸುವನ್ನೋ ಸಂಪೂರ್ಣ ನಿರಾಕೃತ ಸರಕಾಗಿಸುತ್ತವೆ. ಒಂದುವೇಳೆ ಬುದ್ಧಿವಂತ ದಲ್ಲಾಳಿಗಳ ಮೂಲಕ ಉಳುವ ಇನ್ನಾರಿಗಾದರೂ ವಿಕ್ರಯ ಮಾಡಿದರೆ ಕೊಂಡವರು ಐಬಿನ ಸಮಾಚಾರ ತಿಳಿದ ಮೇಲೆ ಅದನ್ನೊಂದು (ತನಗೆ ಕೊಟ್ಟವರ) ಘೋರ ಅಪರಾಧ/ವಂಚನೆಯಾಗಿಯೇ ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ಲಕ್ಷಣಮೀಮಾಂಸೆಯ ಕಿಂಚಿತ್ ಪರಿಚಯವಿರುವವರು ಈ ತೆರನಾದ ಹಸುಗಳನ್ನು ಧರ್ಮಕ್ಕೆ ಕೊಟ್ಟರೂ ಬೇಡವೆಂಬಂತೆ disabled-cowಸಾರುವಂತಾಗುವುದರಿಂದ ಅವುಗಳು ಯಾರ ಹಟ್ಟಿಯಲ್ಲಿರುತ್ತವೋ ಆ ಹಟ್ಟಿಯವನು ಕೊಡುವ ದಾರಿಕಾಣದೆ, ಉಳಿಸಿಕೊಳ್ಳಲಾರದೆ ಅತೀವ ಸಂಕಟ ಅನುಭವಿಸಿದ ಉದಾಹರಣೆಗಳಿವೆ. ಬಹುಶಃ ಪಶುವೊಂದನ್ನು ಉಪಯುಕ್ತ ಮತ್ತು ಅನುಪಯುಕ್ತವೆಂಬ ತೀರ್ಪಿಗೆ ಒಳಪಡಿಸುವ ಮುನ್ನವೇ ಇಂತಹ ಸಂದಿಗ್ದಗಳಿರುವುದರಿಂದ ಹಸುವೆಂಬುದನ್ನು ಏಕರೂಪಿ ಮಾದರಿಯಲ್ಲಿ, ಪವಿತ್ರತೆ, ಉಪಯುಕ್ತ, ಮುಗ್ಧ, ದೇವತೆಗಳ ಆವಾಸ ಎಂದೆಲ್ಲಾ ಪರಿಭಾವಿಸಲಾಗದು. ಹಾಗಾಗಿ ಸಹಜವಾಗಿಯೇ ಐಬಿರುವ ಹಸುಗಳನ್ನು ಈ ಜಾನಪದಮೀಮಾಂಸಾ ಆವರಣದಿಂದ ಹೊರಗಿರುವವರು, ಇಲ್ಲವೇ ಈ ಕಲ್ಪನೆಗಳ ಇರುವಿಕೆಯನ್ನೇ ನಿರಾಕರಿಸಿದವರು ಅಥವಾ ಮಾಂಸವಾಗಿ ಪರಿವರ್ತಿಸಿಕೊಳ್ಳಬಲ್ಲವರು ಮಾತ್ರ ಖರೀದಿಸಲು ಸಾಧ್ಯ.

ಬಹುಶ ರೈತನೊಬ್ಬ ತನ್ನ ಹಸುವನ್ನು ಇನ್ನೊಬ್ಬನಿಗೆ ಮಾರುವಾಗಲೆಲ್ಲಾ ಆತನ ಕಣ್ಣೆದುರಿರುವುದು ತನ್ನ ಜೀವಿತಕ್ಕೆ ನೆಲೆಯಾಗಬಲ್ಲ ಮೂಲಧನ. ಕೆಲವು ಐಬುಗಳ ಮೂಲಕ ಹತ್ತು ಸಾವಿರ ಬೆಲೆಬಾಳುವ ಜೋಡನ್ನು ಐದು ಸಾವಿರಕ್ಕೂ ಕೇಳುವವರಿಲ್ಲದಾದಾಗ, ತಾನೇ ಸ್ವಯಂ ಕಟ್ಟಿಕೊಂಡು ಸಾಕಲಾಗದಾದಾಗ ಐದಕ್ಕಿಂತ ಹೆಚ್ಚಿನ ದರ ಸಿಕ್ಕುತ್ತದೆ ಅಂತನಿಸಿದ ಗಿರಾಕಿಗೆ ಕೊಡಲಾರದ ಸಂದರ್ಭದಲ್ಲಿ ನಿಶ್ಚಿತವಾಗಿಯೂ ಅವನ ಹಟ್ಟಿ ,ಕೈ, ಮೆದುಳು ಎಲ್ಲವೂ ಬರಿದಾಗುತ್ತದೆ. ಬಾಲದಲ್ಲಿ ಬಿಳಿಯ ಉಂಗುರಾಕಾರದ ರಚನೆಯಿರುವ ಕರುವೊಂದು ಹಟ್ಟಿಯಲ್ಲಿರುವಷ್ಟು ದಿನವೂ ‘ಒಡು’ (ಉಡ) ವಂತಹ ಅನಿಷ್ಟ ಸಂಗತಿಯೊಂದು ತನಗೆ ತಗುಲಿಹಾಕಿಕೊಂಡಿದೆ ಎಂಬಲ್ಲಿ ನೆಮ್ಮದಿ ಹೇಗೆ ಸಾಧ್ಯ? ಮುದಿ ಹಾಗೂ ಒಳ್ಳೆಯ ಲಕ್ಷಣವಿಲ್ಲದ ಕೆಟ್ಟ ಐಬಿನ ಹಸುಗಳನ್ನೆಲ್ಲಾ ರೈತನ ತಲೆಗೆ ಕಟ್ಟಿ ನೀನು ಇವುಗಳನ್ನೆಲ್ಲಾ ಸಾಕಲೇಬೇಕು ಎಂಬ ಫರ್ಮಾನು ಏನಾದರೂ ಹೊರಟಲ್ಲಿ ಇಡಿಯ ಕೃಷಿ ಬದುಕಿನ ಜೀವನಕ್ರಮವೇ ಒಂದು ವಿರುದ್ಧ ದಿಕ್ಕಿನ ಬೆಳವಣಿಗೆಗೆ ಕಾರಣವಾಗಲಿದೆ. ಮನುಷ್ಯರ ಜಾತಕ ಹಿಡಿದು ಅವರ ಯೋಗಾಯೋಗ ಫಲ ಹೇಳಿ ನಂಬಿಸುವವರು, ಅಮೇರಿಕಾದ ಅಣ್ಣನ ವಿಶ್ವವ್ಯಾಪಾರ ಕಟ್ಟಡದ ಪುನರ್‌ನಿರ್ಮಾಣಕ್ಕೂ ವಾಸ್ತುವಿನ ಜ್ಞಾನ, deformed-calfನಂಬುಗೆ ಹರಿಸುವವರು, ರೈತರ/ಜಾನಪದರ ನಂಬುಗೆಯ ‘ಜಾನುವಾರು ಜಾನಪದ’ವನ್ನು ಅವೈಜ್ಞಾನಿಕ ಎನ್ನಲಾದೀತೇ? ಜ್ಯೋತಿಷ್ಯವನ್ನು ವಿಜ್ಞಾನವೆಂದು ಪಂಚಕಜ್ಜಾಯದ ತರಹ ಹಂಚಲಾಗುತ್ತಿರುವ ಕಾಲದಲ್ಲಿ ಜಾನುವಾರುಗಳಿಗೆ ಸಂಬಂಧಿಸಿದ ಜಾನಪದಲಕ್ಷಣ ಮೀಮಾಂಸೆಯನ್ನು ಹೇಗೆ ನಿರಾಕರಿಸಲಾಗುತ್ತದೆ? ಹಸುಕಟ್ಟಿಕೊಂಡವರು ಕಟ್ಟಿದ ಈ ಲಕ್ಷಣಮೀಮಾಂಸೆಗೆ ಜೀವನಾನುಭವದ ಹಿನ್ನೆಲೆಯೂ ಇದ್ದಿರಲೇಬೇಕಲ್ಲವೇ? ಜೀವನಾನುಭವಗಳ ಹಿನ್ನೆಲೆಯಲ್ಲಿ ಬೆಳೆದುಬಂದ ಈ ನಂಬಿಕೆಯ ಜೀವನಕ್ರಮವನ್ನು ಸ್ವಲ್ಪ ಆಪ್ತತೆಯಿಂದ ನೋಡಿದಲ್ಲಿ ಪವಿತ್ರಗೋವೊಂದು ಯಾವ ಹಟ್ಟಿಗಳಲ್ಲಿ ಯಾವ್ಯಾವ ಕಾರಣಕ್ಕಾಗಿ ಅಪವಿತ್ರವಾಗುತ್ತದೆ ಎಂಬ ಅರಿವು ಖಂಡಿತಾ ದಕ್ಕುತ್ತದೆ. ಯಾಕೆಂದರೆ ಅದು ಒಂದೇ ಏಟಿಗೆ ಆರಾಧನೆ ಮಾಡಿಯೋ, ಉಪಯೋಗ ಮಾಡಿಯೋ ಬಿಡಬಹುದಾದ ಸಂಗತಿಯಲ್ಲ. ಅದೊಂದು ಸಂಕೀರ್ಣವಾದ ಪ್ರತ್ಯೇಕಲೋಕ. ಏಕರೂಪಿಯಲ್ಲದ ಈ ಜಗತ್ತಿನಲ್ಲಿ ಅವರವರ ಗೋವು ಅವರವರೇ ಕಟ್ಟಿಕೊಳ್ಳತಕ್ಕಂತಹ ನೆಲೆಯಲ್ಲಿರುತ್ತದೆ.ಸಾರ್ವತ್ರಿಕವಾದ ಗೋಸಂಕಥನದ ಮೂಲಕ ಪವಿತ್ರೀಕರಿಸಲ್ಪಟ್ಟ ಅದರ ಅಂತರಿಕಜಗತ್ತು ಛಿದ್ರೀಕರಣಕ್ಕೆ ಒಳಗಾದುದೆಂಬುದನ್ನು ಸಾವಧಾನವಾಗಿ ಗಮನಿಸಬೇಕಾಗುತ್ತದೆ.

One thought on “ಜಾನುವಾರು ಜಾನಪದ ಮತ್ತು ಐಬುಗಳು : ಗಂಗೆ, ಗೌರಿ,.. ಭಾಗ–9

  1. Nagabushana

    maanya jayaprakash ravare, nimma ee lekhana maleyannu Odi ondu vishishta anubhava mattu anubhoothige olagaagiruve endu nimage thilisalu bayasuthene. ondu jeevamanada, ondu samskruthiya hagu ondu jana samudayada mouleekaranavagi nimma lekhanavu prasthutavenisuttade.
    ee kindiyalli (badalu needalu) kannadada aksharagalannu balasalu nanage baarade iruvudakkagi vishadisuthene, kannadada akshara balasalu kalitha mele punaha nimmage bareyuthene.

    Reply

Leave a Reply

Your email address will not be published. Required fields are marked *