Daily Archives: September 18, 2013

ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

– ಎಮ್.ಸಿ.ಡೋಂಗ್ರೆ

2014 ರ ನಂತರದ ಭಾರತಕ್ಕೆ ಈಗಿನ ಗುಜರಾತಿನ ಮುಖ್ಯಮಂತ್ರಿಯಾಗಿರುವ ಶ್ರೀ ನರೇಂದ್ರ ಮೋದಿಯವರೇ ಸರಿಯಾದ ನಾಯಕನೆಂದೂ, ಹಾಗೂ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಅತ್ಯುನ್ನತವಾದ ಸರ್ವಾಂಗೀಣ ಏಳಿಗೆಯನ್ನು (ಗುಜರಾತ್ ಮಾದರಿಯಲ್ಲಿ) ಹೊಂದುವುದು ಶತಸ್ಸಿದ್ದ ಎಂದೂ ಬಿಂಬಿಸಲಾಗುತ್ತಿದೆ. ದೇಶದ ನಗರ ಕೇಂದ್ರದ ಯುವಜನರು ಮೋದಿಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿಯೂ ಸಹ ಸ್ವಲ್ಪ ಮಟ್ಟಿನ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನೂ ಸಹ ನೋಡಬಹುದಾಗಿದೆ. ಮೋದಿಯನ್ನು “ಅಭಿವೃದ್ಧಿಯ ಹರಿಕಾರ”ನೆಂದು ಬಿಂಬಿಸಲಾಗುತ್ತಿದ್ದೆಯೇ ವಿನಹ, ಅವರ ರಾಜಕೀಯ ಹಾಗೂ ವೈಚಾರಿಕ ಹಿನ್ನೆಲೆಯನ್ನು ಮರೆಮಾಚಲಾಗುತ್ತಿದೆ. ಮೋದಿಯ ಹೆಸರಿನ ಮೇಲೆ ಬಿ.ಜೆ.ಪಿ.ಗೆ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತಿದೆಯೇ ವಿನಹ, ಬಿ.ಜೆ.ಪಿ.ಯಿಂದ ಮೋದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ನಗರ ಕೇಂದ್ರದ ಮಧ್ಯಮ ವರ್ಗಕ್ಕೆ ಸೇರಿರುವ ಅನೇಕ ಮಂದಿ ಯುವಕರು, ಶ್ರೀಮಂತ ವರ್ಗದ ಅನೇಕ ಮಂದಿ, Narendra_Modiಮೋದಿಯ ನಾಯಕತ್ವದ ಅಗತ್ಯ ದೇಶಕ್ಕೆ ಬಹಳವಿದೆಯೆಂದು ಹೇಳಲಾರಂಭಿಸಿದ್ದಾರೆ. ಈಗಿನ ನಮ್ಮ ಪ್ರಧಾನಿಯನ್ನು ಒಬ್ಬ “ಜೋಕರ್”ನಂತೆ ಸುಶಿಕ್ಷಿತರ ಮನಸ್ಸಿನಲ್ಲಿ ಮೂಡಿಸುವಲ್ಲಿ ಸಂಘ ಪರಿವಾರ ಸ್ವಲ್ಪ ಸಫಲತೆಯನ್ನು ಕಂಡುಕೊಂಡಿದೆ. ಮೊನ್ನೆಯ ಒಂದು ಸಂದರ್ಶನದಲ್ಲಿ ಬಿ.ಜೆ.ಪಿ.ಯ ನಾಯಕರಲ್ಲೊಬ್ಬರಾಗಿರುವ ಶ್ರೀ ಅರುಣ್ ಶೌರಿಯವರು ಮಾನ್ಯ ಮನಮೋಹನ ಸಿಂಗ್‌ರವರನ್ನು “ಒಬ್ಬ ಬೇಜವಾಬ್ದಾರಿ ಪ್ರಧಾನ ಮಂತ್ರಿ”ಯೆಂದೇ ನೇರವಾಗಿ ಪ್ರತಿಪಾದಿಸಿಯೂ ಆಗಿದೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇವೆರಡೂ ಪಕ್ಷಗಳು ಮೋದಿಯನ್ನು ಒಬ್ಬ “ಕೋಮುವಾದಿ” ಎಂದು ಬಿಂಬಿಸುವಲ್ಲಿ ಮಗ್ನವಾಗಿದ್ದಾವೆಯೇ ವಿನಹ, ಮೋದಿಯ ಕುರಿತು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜಿನ ಹಿಂದಿರುವ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಸೋಲುತ್ತಿವೆ.

ಗುಜರಾತಿನಲ್ಲಿ ಎಂತಹ ಅಭಿವೃದ್ಧಿಗಳಾಗಿವೆ, ಅದರಲ್ಲಿ ಮೋದಿಯ ಪಾತ್ರ ಅಥವಾ ಕಾಣಿಕೆಯಾದರೂ ಎಷ್ಟು ಎಂಬುದರ ಕುರಿತು ನೈಜ ಚಿತ್ರಣವನ್ನು ಎಲ್ಲಿಯವರೆಗೆ ನಾವು ಜನಮನದಲ್ಲಿ ಮನದಟ್ಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಕುರಿತು ಕುತೂಹಲ, ಮತ್ತು ಮೆಚ್ಚುಗೆ ಇದ್ದೇ ಇರುತ್ತದೆ. ಮೋದಿ ಕೋಮುವಾದಿಯೋ ಅಥವಾ ಅಲ್ಲವೋ ಎಂಬುದು ಜನರಿಗೆ ಈಗ ಮುಖ್ಯವಾದ ಅಂಶವೇ ಅಲ್ಲ. ಜನಸಾಮಾನ್ಯರು ತಮ್ಮ ನಾಯಕನಲ್ಲಿ ಚತುರ ಮಾತುಗಾರಿಕೆಯನ್ನು, ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವ ವ್ಯಕ್ತಿತ್ವವನ್ನು, ಹಾಗೂ ಆತ್ಮವಿಶ್ವಾಸದ ಲಕ್ಷಣಗಳನ್ನು ನೋಡಬಯಸುತ್ತಾರೆ.

ಹಾಗಿದ್ದಲ್ಲಿ ಮೋದಿಯ ನಾಯಕತ್ವದಲ್ಲಿ ಗುಜರಾತಿನ ಸಾಧನೆಗಳಾದರೂ ಏನು? ಎಂಬುದನ್ನು ಅವಲೋಕಿಸುವುದು ಬಹಳ ಅಗತ್ಯವೆನಿಸುತ್ತದೆ.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-1 : ಬಿ.ಜೆ.ಪಿ.ಯ ಆಳ್ವಿಕೆಯಲ್ಲಿ :

ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ (ಅಂದರೆ ಸುಮಾರು 15 ವರ್ಷಗಳಿಂದ) ಆಳುತ್ತ ಬಂದಿದೆ. ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಶ್ರೀ ಕೇಶುಭಾಯ್ ಪಟೇಲರಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿ.ಜೆ.ಪಿ.ಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದನ್ನು ತಿಳಿಯಬಹುದು.

ಮೋದಿಯ ಆಡಳಿತ ಅವಧಿ ಆರಂಭಗೊಂಡಿದ್ದು 2002-03 ನೇ ಇಸವಿಯಿಂದ. ಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧಿ ದರ gujarath16.25 %. ಭಾರತದ ವಾರ್ಷಿಕ ಅಭಿವೃದ್ಧೀ ದರ 14%. ಭಾರತದ ಈ ಒಟ್ಟು ಅಭಿವೃದ್ಧೀ ದರವನ್ನು ಲೆಖ್ಖ ಹಾಕುವಾಗ ಅದರಲ್ಲಿ ಗುಜರಾತಿನಂತಹ ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳೂ ಸೇರಿರುತ್ತವೆ ಹಾಗೂ ಕಳಪೆ ಪ್ರದರ್ಶನ ನೀಡುವ ರಾಜ್ಯಗಳೂ ಸೇರಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯವು ಭಾರತಕ್ಕಿಂತ ಅಭಿವೃದ್ಧೀ ದರದಲ್ಲಿ ಕೇವಲ 2..25% ಹೆಚ್ಚಿನ ಅಭಿವೃದ್ದಿ ದರವನ್ನು ತೋರಿಸುತ್ತಿರುವುದು ದೊಡ್ಡ ಮಾತೇನಲ್ಲ.

ಇಲ್ಲಿ ನೀಡಿರುವ ಅಂಕಿ-ಅಂಶಗಳ ಕುರಿತು ಒಂದು ಮಾತು.

  1. ಇಲ್ಲಿಯ ಅಂಕಿ-ಅಂಶಗಳು ಭಾರತದ ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹೊರತರುವ “Handbook of Statistics of Indian Economy”ಎಂಬ ಕಿರುಹೊತ್ತಿಗೆಯ ಆಧರಿಸಿ ನೀಡಲಾಗಿದೆ.
  2. ಅಭಿವೃದ್ಧೀ ದರವನ್ನು ಹೇಳುವಾಗ “ಸಾಮಾನ್ಯ ಸರಾಸರಿ”ಯನ್ನು ತೆಗುಕೊಳ್ಳಲಾಗಿದೆ.
  3. ರಾಜ್ಯದ ಅಭಿವೃದ್ಧಿ ದರವನ್ನು ಹೇಳುವಾಗ “Net State Domestic Product at Factor Cost” ನಲ್ಲಿ ಹೇಳಲಾಗಿದೆ. Factor Cost ನ್ನು ಯಾಕೆ ತೆಗೆದುಕೊಂಡಿದ್ದೇವೆ ಎಂದರೆ ಆಗ ಎಲ್ಲ ಲೆಕ್ಕಾಚಾರದ ಮೇಲೆ ಬೆಲೆ ಏರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯಾಸದ ಕೆಲಸ ತಪ್ಪುತ್ತದೆ ಎಂಬ ಕಾರಣಕ್ಕೆ. Net State Domestic Product ಅಂದರೆ ಒಂದು ರಾಜ್ಯದ ಒಂದು ವರ್ಷದ ಜಿ.ಡಿ.ಪಿ. ಮೈನಸ್ ಆ ರಾಜ್ಯದ ನಿವೇಶನ, ವಾಹನಗಳು, ಯಂತ್ರೋಪಕರಣಗಳು ಇತ್ಯಾದಿ Capital Goods ಗಳಲ್ಲಿ ಆದ “ಡೆಪ್ರಿಷಿಯೇಷನ್”.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-2 : ಬಿ.ಜೆ.ಪಿ.ಯೇತರ ಪಕ್ಷಗಳ ಆಳ್ವಿಕೆಯಲ್ಲಿ :

  1. 1998-99 ರ ಮೊದಲು ಗುಜರಾತನ್ನು ಕಾಂಗ್ರೆಸ್ ಸರ್ಕಾರವೇ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡೆಸುತ್ತ ಬಂದಿದೆ. ಗುಜರಾತಿನ ಈಗಿನ ಆರ್ಥಿಕ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದೇ ಅಲ್ಲಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೆಂಬುದನ್ನು ನಾವು ಮರೆಯಬಾರದು. (1994-95 ರಿಂದ 1998-99 ರವರೆಗೆ ಗುಜರಾತಿನಲ್ಲಿ ರಾಜಕೀಯ ಅಸ್ಥಿರತೆಯಿತ್ತು. ಅನೇಕ ಮಂದಿ ಮುಖ್ಯಮಂತ್ರಿಗಳು ಈ ಅವಧಿಯಲ್ಲಿ ಆಗಿ ಹೋಗಿದ್ದು, ಈ ಒಂದು ಕಾಲಘಟ್ಟವನ್ನು ನಮ್ಮ ಅಧ್ಯಯನದಿಂದ ಹೊರಗಿಡುತ್ತಿದ್ದೇವೆ.)
  2. 1990-91 ರಿಂದ 1993-94 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಶ್ರೀ ಚಿಮನ್ ಭಾಯಿ ಪಟೇಲರಿದ್ದರು. Reliance-Gujarathಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧೀ ದರ 16.75 % ಇತ್ತು!!. ಅಂದರೆ ಮೋದಿಯ ಕಾಲದಲ್ಲಿರುವ ಅಭಿವೃದ್ಧೀ ದರಕ್ಕಿಂತಲೂ ಹೆಚ್ಚು!!.
  3. 1980-81 ರಿಂದ 1989-90 ರ ಅವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಮಾನ್ಯ ಮಾಧವಸಿಂಗ್ ಸೋಳಂಕಿ. ಇವರ ಆಳ್ವಿಕೆಯಲ್ಲಿ ಗುಜರಾತ್ ವಾರ್ಷಕ್ಕೆ 14.8 % ವೇಗದಲ್ಲಿ ಬೆಳೆಯುತ್ತಿತ್ತ್ತು. ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಕಲ್ಪನೆಯೇ ಇಲ್ಲದಿದ್ದ ಕಾಲ ಅದಾಗಿತ್ತು. ಆಂತಹ ಕಾಲಘಟ್ಟದಲ್ಲೇ ಶೇಕಡಾ 14.8 ರ ದರದಲ್ಲಿ ಅಭಿವೃದ್ಧಿ ಗುಜರಾತಿನಲ್ಲಿ ಆಗಿತ್ತು ಎಂದಾದಲ್ಲಿ ಮೋದಿಯ ಈಗಿನ 16.25% ಅಭಿವೃದ್ಧಿ ದರ ಬಡಾಯೀ ಕೊಚ್ಚಿಕೊಳ್ಳುವುದಕ್ಕೆ ಯೋಗ್ಯವಲ್ಲ. ಮೋದಿಯವರು ತನ್ನ ಮೊದಲು ಇದ್ದ ಅಭಿವೃದ್ಧೀ ದರವು ಕೆಳಗಿಳಿಯದಿರುವಂತೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ಖಂಡಿತವಾಗಿಯೂ ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.

ಮೋದಿಯ ಆಗಮನದ ಮೊದಲೇ:

ಗುಜರಾತ್ ಮೊದಲಿನಿಂದಲೂ ನಮ್ಮ ದೇಶದ ಬಹು ದೊಡ್ಡ ವ್ಯಾಪಾರ ಕೇಂದ್ರ. ಹರಪ್ಪ-ಮೊಹೆಂಜೋದಾರೋ ನಾಗರಿಕತೆಯ ಕಾಲದಿಂದಲೂ ಸಹ ಗುಜರಾತ್ ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಪದ್ಭರಿತ ರಾಜ್ಯಗಳ ತುಲನೆಯಲ್ಲಿ 1985 ರಿಂದಲೇ ಗುಜರಾತ್ 3 ನೇ ಸ್ಥಾನದಲ್ಲಿದೆ.

  1. ಗುಜರಾತಿನಲ್ಲಿ ಒಟ್ಟು 18028 ಹಳ್ಳಿಗಳಿದ್ದು ಅವುಗಳಲ್ಲಿ 17940 ಹಳ್ಳಿಗಳು 1991 ರಲ್ಲೇ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯನ್ನು ಪಡೆದಿದ್ದವು.
  2. ಗುಜರಾತಿನ ರಸ್ತೆಗಳಲ್ಲಿ 85% ರಸ್ತೆಗಳು ಮೋದಿ ಬರುವುದಕ್ಕಿಂತಲೂ ಮೊದಲೇ ಸಿಮೆಂಟ್ ರಸ್ತೆಗಳಾಗಿದ್ದವು.
  3. ಪ್ರಪಂಚದ ಅತಿ ದೊಡ್ಡ ಹಡಗುಗಳನ್ನು ಒಡೆಯುವ ಯಾರ್ಡ್, ಅಂಬಾನಿಯವರ ಜಾಮ್ ನಗರದ ಕಚ್ಚಾ ತೈಲ ಶುದ್ಧೀಕರಣ ಫ಼ಾಕ್ಟರಿ ಇವೆಲ್ಲ ಮೋದಿ ಬರುವ ಮೊದಲೇ ಗುಜರಾತಿನಲ್ಲಿ ಅಸ್ತಿತ್ವದಲ್ಲಿದ್ದವು.
  4. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ 45% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿತ್ತು.
  5. ಭಾರತದ ಹಡಗುಗಳ ಮೂಲಕ ನಡೆಯುವ ಸರಕು-ಸಾಗಣೆಯ 18% ಗುಜರಾತಿನಿಂದ ಮೋದಿ ಬರುವ ಮೊದಲೇ ನಡೆಯುತ್ತಿತ್ತು.
  6. ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದ 23% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  7. ನಮಗೆ ಬೇಕಾಗಿರುವ ನೈಸರ್ಗಿಕ ಅನಿಲದಲ್ಲಿ 30% ಅನಿಲ ಗುಜರಾತಿನಿಂದ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  8. ನಮ್ಮ ದೇಶಕ್ಕೆ ಅಗತ್ಯವಾಗಿರುವ ಔಷಧಿಗಳಲ್ಲಿ 26% ಔಷಧಿಗಳೂ, 78% ಉಪ್ಪು ಹಾಗೂ 98% ಸೋಡಾ ಆಷ್ ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿದ್ದವು.

ಮೋದಿಯ ಗುಜರಾತ್ v/s ಬೇರೆ ಕೆಲವು ರಾಜ್ಯಗಳು :

2002-03 ರಿಂದ ಮೋದಿಯವರ ಆಡಳಿತ ಗುಜರಾತಿನಲ್ಲಿ ನಡೆಯುತ್ತಿದ್ದು ಗುಜರಾತ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸುತ್ತಿಲ್ಲ ಇದಕ್ಕೆಲ್ಲ ಮಾನ್ಯ ಮೋದಿಯವರ “ಸಮರ್ಥ ನಾಯಕತ್ವ”ವೇ ಕಾರಣ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಗುಜರಾತ್ ರಾಜ್ಯದಷ್ಟೆ ಪ್ರಮಾಣದಲ್ಲಿ(ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು) ಬೇರೆ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವುಗಳ ಕಡೆಗೆ ಒಂದು ಸಲ ನಮ್ಮ ಗಮನವನ್ನು ನೀಡೋಣ.

  1. ಮಹಾರಾಷ್ಟ್ರ ರಾಜ್ಯ: ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 15.5%.
    • ( ಅ) ಮಹಾರಾಷ್ಟ್ರದ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 54 ಪಟ್ಟು ಹೆಚ್ಚಾಗಿದೆ.
    • (ಆ) ಗುಜರಾತಿನ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 56 ಪಟ್ಟು ಹೆಚ್ಚಾಗಿದೆ.

    ಇದನ್ನು ಗಮನಿಸಿದಾಗ ಮಹಾರಾಷ್ಟ ರಾಜ್ಯದ ಸಾಧನೆಗಳು ಗುಜರಾತಿನ ಸಾಧನೆಗೆ ಬಹಳ ಸಮೀಪದಲ್ಲೇ ಇದೆ.

  2. ಹರಿಯಾಣಾ ರಾಜ್ಯ : 04/2005 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 18%
  3. ಆಂಧ್ರಪ್ರದೇಶ ರಾಜ್ಯ: 05/2004 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 16%
  4. ಇನ್ನು ಜಿ.ಡಿ.ಪಿ.ಯ ಲೆಕ್ಕ ಹಾಕಿದಾಗ ಇಡೀ ದೇಶದಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಬರುತ್ತದೆ.
  5. ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರ್ಯಾಣಾದಲ್ಲಿ ರೂ. 78781/-, ಮಹಾರಾಷ್ಟ್ರದಲ್ಲಿ ರೂ. 74072/- ಆದರೆ ಗುಜರಾತಿನಲ್ಲಿ ರೂ. 63961/-.

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ :

ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳನ್ನು ತಿಳಿಯುವ ಮೊದಲು ಗುಜರಾತಿನ ಈಗಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು.

  1. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ.
  2. 5 ವರ್ಷಕ್ಕೂ ಕಮ್ಮಿ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ 44.6% ಮಕ್ಕಳು ಸತ್ವಯುತ ಆಹಾರವಿಲ್ಲದೇ ಗುಜರಾತಿನಲ್ಲಿ ನರಳುತ್ತಿದ್ದಾವೆ.
  3. ಗುಜರಾತಿನ ಮಕ್ಕಳಲ್ಲಿ 70% ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ.
  4. ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ಮಾತ್ರ ದಿನಗೂಲಿಯನ್ನು ಗುಜರಾತ್ ಸರ್ಕಾರ ಕೊಡುತ್ತಿದೆ.
  5. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ 2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರೀ ಉದ್ಯೋಗದಲ್ಲಿದ್ದಾರೆ.
  6. ಗುಜರಾತಿನಲ್ಲಿ ಅತೀ ಕಡಿಮೆ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಬಹಳ ನಿಕೃಷ್ಟವಾಗಿರುತ್ತದೆ.
  7. ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ 0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005 !
  8. ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ modi-GIMಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL.ಕಾರ್ಡ್‌ನ್ನು ನೀಡಲಾಗುವುದು!!.
  9. ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ, ಅನೇಕ ಉದ್ದಿಮೆಗಳಿಗೆ ಅಲ್ಲಿ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಅವುಗಳಲ್ಲಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ.
  10. ನಮ್ಮ ದೇಶಕ್ಕೆ ಇಲ್ಲಿಯವರೆಗೆ ಹರಿದುಬಂದಿರುವ FDI ನಲ್ಲಿ ಕೇವಲ 5% ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ 6% ಈ.FDI ನ್ನು ತಮ್ಮದಾಗಿಸಿದ್ದರೆ, ಮಹಾರಾಷ್ಟ್ರಾದವರು 35% ತಮ್ಮೆಡೆಗೆ ಸೆಳೆದಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.

ಗುಜರಾತಿನ ಕೃಷಿ :- ಸತ್ಯ ಮತ್ತು ಮಿಥ್ಯ

ನರೇಂದ್ರ ಮೋದಿಯ ಅಭಿಮಾನಿಗಳು ನರೇಂದ್ರಮೋದಿಯವರಿಂದ ಗುಜರಾತಿನ ಕೃಷಿ ಬಹಳವಾಗಿ ಬೆಳೆದಿದೆ. ಕೃಷಿಯಲ್ಲಿ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂದೆಲ್ಲ ಹೊಗಳಲು ಆರಂಭಿಸಿದ್ದಾರೆ.

ಮೋದಿಯೂ ಸಹ ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಇತರ ಕಡೆಯಲಿ ಭಾಷಣ ಮಾಡುವಾಗ ಈಗ ಭಾರತದ guj-agricultureಕೃಷಿಕ್ಷೇತ್ರದಲ್ಲಿ ನಾವೇ ನಂಬರ್ 1 ಎಂದೆಲ್ಲ ಸುಳ್ಳುಗಳನ್ನೂ ಹೇಳಿಯಾಗಿದೆ. ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ.

2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ಗುಜರಾತ್ ಸರ್ಕಾರವು ಪ್ರತಿ ವರ್ಷ ತನ್ನ ಆರ್ಥಿಕ ಸ್ಥಿತಿ-ಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಈ ರೀತಿ ಪ್ರಕಟಿತ ಮಾಹಿತಿಯ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇವೆ. ಆಗ ಮಾತ್ರ ಎಲ್ಲರಿಗೂ “ಈ ಮೋದಿ ಎನ್ನುವವ ಎಂತಹ ಸುಳ್ಳುಗಾರ” ಎಂಬುದು ಮನದಟ್ಟಾಗುತ್ತದೆ.

ವರ್ಷ ಆಹಾರಧಾನ್ಯಗಳು (ಲಕ್ಷ ಟನ್‌ಗಳಲ್ಲಿ) ಎಣ್ಣೆಕಾಳುಗಳು (ಲಕ್ಷ ಟನ್‌ಗಳಲ್ಲಿ) ಹತ್ತಿ ಬೆಳೆ(ಲಕ್ಷ ಬೇಲ್‌ಗಳಲ್ಲಿ)
1996-97 60.89 38.02 28.18
1997-98 61.13 38.65 34.17
1998-99 60.38 38.81 40.03
1999-2000 44.37 18.26 21.45
2000-01 31.84 17.37 12.82
2001-02 52.54 37.46 16.84
2002-03 43.95 18.77 18.39
2003-04 67.36 58.55 42.79
2004-05 51.53 28.99 55.40
2005-06 61.41 47.34 65.12
2006-07 61.10 28.46 87.87
2007-08 82.06 46.99 78.76
2008-09 63.45 39.32 82.75
2009-10 56.05 30.10 74.01
2010-11 100.71 51.42 98.25
2011-12 92.57 50.53 103.75

1996-97 ರಿಂದ 2004-05 ರವರೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದರ ವಾರ್ಷಿಕ ಸರಾಸರಿ 5.65% ಇತ್ತು, ಅದೀಗ 6.47% ಆಗಿದೆ.

ಗುಜರಾತಿನ ಕೃಷಿಯಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ಕೆಲವು ಕಾರಣಗಳನ್ನು ಪಟ್ಟಿಮಾಡಬಹುದು:

  1. ಸರ್ದಾರ್ ಸರೋವರ ಆಣೆಕಟ್ಟಿನಿಂದ ಗುಜರಾತಿನ ಅನೇಕ ಭಾಗಗಳಿಗೆ 2002 ರಿಂದ ನೀರು ಲಭ್ಯವಾಗಲಾರಂಭಗೊಂಡಿದ್ದು.
  2. Bt ಹತ್ತಿಯನ್ನು ಬೆಳೆಸುತ್ತಿರುವುದು
  3. ಮೈನರ್ ಇರಿಗೇಷನ್‌ಗಳ ಆಳವಡಿಕೆ
  4. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಸಾವಿರಾರು ಚೆಕ್-ಡ್ಯಾಮ್ ಗಳ ರಚನೆ
  5. ಸಣ್ಣ-ಸಣ್ಣ ಯಾಂತ್ರಿಕ ಉಪಕರಣಗಳ ಬಳಕೆ
  6. ಒಳ್ಳೆಯ ಸಾರಿಗೆ ಸೌಕರ್ಯಗಳು
  7. ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಗೆ 3-ಫೇಸ್ ವಿದ್ಯುತ್ ಸರಬರಾಜು

ಮುಗಿಸುವ ಮೊದಲು:

ಗುಜರಾತಿನಲ್ಲಿ ಮೋದಿ ಆಳ್ವಿಕೆಯಲ್ಲಿ ನಗರದ ಮಧ್ಯಮ ವರ್ಗದ ಜನರು ಅನೇಕ ಸೌಲಭ್ಯಗಳಿಂದ, middleclass-indiaಅಭಿವೃದ್ಧಿಯ ಫಲವನ್ನು ಆನಂದಿಸುತ್ತ ಇದ್ದಾರೆಯೇ ವಿನಹ ಅಲ್ಲಿಯ ಆದಿವಾಸಿಗಳ ಹಾಗೂ ದಲಿತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಫಲವತ್ತಾದ ಭೂಮಿಯನ್ನು ಉದ್ಯಮಪತಿಗಳಿಗೆ ನೀಡುತ್ತಿರುವುದರ ವಿರುದ್ಧ ಈಗಾಗಲೇ ಗುಜರಾತಿನ ಗ್ರಾಮ-ಗ್ರಾಮಗಳಲ್ಲಿ ಸಂಘಟಿತ ರೈತರಿಂದ ಪ್ರತಿರೋಧ ಬಲಗೊಳ್ಳುತ್ತಿದೆ. ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ. ಯು.ಪಿ.ಎ. ಸರ್ಕಾರದಿಂದ ನಿರೀಕ್ಷಿತ ಅನುಕೂಲತೆಗಳು ಸುಲಭವಾಗಿ ದೊರೆಯಲಾರದು ಎಂದು ಮನಗಂಡಿರುವ ಬಂಡವಾಳಶಾಹಿಗಳು ಈಗ ಮೋದಿಯನ್ನು “ದೇಶದ ಪ್ರಧಾನಿ”ಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮೋದಿಯ ಸುಳ್ಳುಗಳನ್ನು ಬಯಲು ಮಾಡಬೇಕು, ಮೋದಿಯ ಕೊಳಕು ಕೋಮುವಾದವನ್ನು ಹಿಮ್ಮೆಟ್ಟಿಸುವಲ್ಲಿ ಸಂಘಟಿತ ಹಾಗೂ ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಬೇಕು.