ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ
ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ (10)

ದೇವಲೋಕದ ಅಮೃತ ಫಲವೆಂಬಂತೆ ನಂಬುವ ತೆಂಗಿನಮರದಿಂದ ಎಳನೀರು, ತೆಂಗಿನಕಾಯಿಗಳನ್ನು ಕೊಯ್ಯುವುದಲ್ಲದೆ ಸೇಂದಿ (ಮೂರ್ತೆ) ಇಳಿಸಲೂ ಬಳಸುತ್ತಾರೆ. ತೆಂಗಿನ ಸುಳಿಕೊರಕ (ಗೊಬ್ಬರದ ಕಪ್ಪುಹುಳ) ಹುಳುಗಳನ್ನು ಕೊಂದರೆ ಹತ್ತು ದೇವಸ್ಥಾನ ಕಟ್ಟಿದಷ್ಟು ಪುಣ್ಯ ಎಂದೆನ್ನುತ್ತಲೇ, ಸತ್ತ/ಜೀವಂತವಿದ್ದ ಅದೇ ತೆಂಗಿನಮರವನ್ನು ಕತ್ತರಿಸಿ ಮನೆಯ ಪಕಾಸೆ, ಜಂತಿಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ತೆಂಗಿನ ಕಾಯಿ ತಲೆಮೇಲೆ ಬಿದ್ದು ಸತ್ತರೆ ಪುಣ್ಯ ಎಂಬ ನಂಬಿಕೆಯ ನಡುವೆಯೇ ಮೂತ್ರ ವಿಸರ್ಜನೆಯನ್ನು ತೆಂಗಿನ ಬುಡದಲ್ಲಿಯೇ ಮಾಡಿದರೆ ಪ್ರಶಸ್ತವೆಂದೂ ನಂಬುತ್ತಾರೆ!. ಅದನ್ನು ಕಲ್ಪವೃಕ್ಷ ಎನ್ನುತ್ತಲೇ Indian-Cow-calfಈ ಮಾದರಿಯ ಸಂಬಂಧಗಳನ್ನು ಜನ ತಮ್ಮ ದೈನಿಕದ ಬದುಕಿನಲ್ಲಿ ಕಟಿಕೊಳ್ಳಬಲ್ಲರು. ನೇಗಿಲನ್ನು ದೇವರೆಂದೇ ಆರಾಧಿಸಿಯೂ ಹಳತಾಗಿ ಉಳಲು ಅಸಾಧ್ಯವಾದಾಗ ದೀಪಾವಳಿಯ ಎಣ್ಣೆನೀರಸ್ನಾನದ ಒಲೆಗೆ ಉರುವಲಿನಂತೆ ಬಳಸಿಕೊಳ್ಳಬಲ್ಲರು. ಉಳುಮೆ ಮಾಡುವ ಜಾನುವಾರಿಗೆ ಬಾಸುಂಡೆ ಬರುವಂತೆ ಬಾರಿಸಿಯೂ ಅರ್‍ಹೂಡಿ ಬರುವಾಗ ಅದರ ಸಿರಿಪಾದವನ್ನು ತೊಳೆಯಬಲ್ಲರು ಮತ್ತು ಮಳೆಗಾಲದ ನೇಜಿಯ ಕೊನೆಗೆ ತಮ್ಮಂತೆಯೇ ಅದಕ್ಕೂ ಬರ್ಜರಿಯಾದ ಮರದತೊಗಟೆಯ ಚಗರು ಬೆರೆಸಿದ ಗಂಜಿ ಹಾಕಿ ರಜಾ ನೀಡಬಲ್ಲರು. ಬೆಳೆದು ನಿಂತ ಕದಿರನ್ನು ಉತ್ಸವದಂತೆ ಹೊತ್ತು ತರುವ ಅದೇ ಜನ ಭತ್ತದ ಒಡ್ಡು ಮಾಡುವಲ್ಲಿ ಅದನ್ನು ಕಾಲಡಿಯೇ ಮೆಟ್ಟಿತುಳಿಯಬಲ್ಲರು. ಪಂಪನ ಆದಿಪುರಾಣದ ಕೊನೆಯಲ್ಲಿ ಈ ಧಾನ್ಯ ಸಂಗತಿಗೆ ಸಂಬಂಧಿಸಿದ ವಿವೇಕಿಗಳನ್ನು,ಸಂಸ್ಕಾರವಂತರನ್ನು ಭರತ ಕಂಡುಕೊಂಡನೆಂಬ ಸಂದರ್ಭವೊಂದಿದೆ ಎನ್ನಲಾಗಿದೆ. ಅಲ್ಲಿ ಮೊಳಕೆಯೊಡೆದ ಧಾನ್ಯಗಳನ್ನು ಮೆಟ್ಟಿಕೊಂಡು ಬರಲಾರದ ಕೆಲವು ವಿವೇಕಿಗಳು ಭರತನಲ್ಲಿಗೆ ಬರಲಾಗದೆ ದೂರವೇ ನಿಂತರಂತೆ! ಈ ವಿವೇಕಿಗಳು ಖಂಡಿತ ಧಾನ್ಯದ ಒಡನಾಟವಿದ್ದವರು ಖಂಡಿತಾ ಆಗಿರಲಾರರು. ಯಾಕೆಂದರೆ ಕೃಷಿಕನೊಬ್ಬ ಈ ಮೊಳಕೆಯನ್ನು ಸದಾಕಾಲವೂ ಪೂಜಿಸುತ್ತಲೇ ಕೂರಲಾರ. ಈ ವಿವೇಕದ ಜೊತೆಗೆ ಆತನಲ್ಲಿ ಇನ್ನೂ ಒಂದು ವಿವೇಕವಿರುತ್ತದೆ. ಅದು ಮೆಟ್ಟಬೇಕಾದಾಗ, ಮುಟ್ಟಬೇಕಾದಾಗ ಎಲ್ಲವನ್ನೂ ದಾಟಿ ಮುಂದುವರೆಯುವಂತೆ ಪ್ರಚೋದಿಸಬಲ್ಲದು. ಅದು ಆತನ ಹೊಟ್ಟೆಯ ಹಸಿವು ಕಲಿಸಿದ ವಿವೇಕ! ಈ ವಿವೇಕವೇ ಆತನ ದಾರಿದೀಪ. ಅದು ಗದ್ದೆಯನ್ನು ಪೂಜಿಸುತ್ತದೆ, ಅದೇ ಗದ್ದೆಯ ಒಡಲು ಸೀಳಿ ಬೆತ್ತಲುಗೊಳಿಸಿ ಬಿತ್ತುತ್ತದೆ. ಉಪಯೋಗದ ನೆಲೆಯ ಭೌತಿಕ ಜಗತ್ತನ್ನು ಸರಿಯಾಗಿಯೇ ವಿವರಿಸಿಕೊಂಡ ಜನಸಾಮಾನ್ಯರ ವಿವೇಕದ ಬೆಳಕಿಗಷ್ಟೇ ಸಾಧವಾಗುವ ಆಹ್ವಾನ-ವಿಸರ್ಜನದ ತಾತ್ವಿಕಭಿತ್ತಿಯೂ ಇದರೊಳಗಿದೆ ಎಂಬುದನ್ನು ಮರೆಯಬಾರದು.

ತಾವು ಬಳಸುವ ವಸ್ತುವನ್ನು ಯಾವಾಗ ಪೂಜಿಸಬೇಕು, ಹೇಗೆ ಬಳಸಬೇಕು ಎಂಬ ವ್ಯಾವಹಾರಿಕ ಸಂವಿಧಾನ ಹೊಂದಿರುವ ಕೃಷಿಕರಿಗೆ indian-cowತಾವು ಸಾಕುತ್ತಿರುವ ಗೋವೊಂದನ್ನು ಲಾಭದಾಯಕವಾಗಿ ಎಷ್ಟು ಕಾಲ ಇರಿಸಿಕೊಳ್ಳಬಹುದೆಂಬುದರ ಲೆಕ್ಕಾಚಾರವಿರುತ್ತದೆ. ಅದೇ ರೀತಿ ಅವುಗಳನ್ನು ಮಾರಲೇಬೇಕಾದ ಲೌಖಿಕ ಒತ್ತಡದ ನಡುವೆ ಯಾವ ವಯೋಮಾನದ, ಯಾವ ಗುಣಮಟ್ಟದ ಹಸುವನ್ನು ಯಾರು ಖರೀದಿಸಬಲ್ಲರು ಎಂಬ ಅರಿವೂ ಇರುತ್ತದೆ. ತಾನು ಮಾರುವುದು ಯಾಕೆ ಎಂಬುದು ಅರ್ಥವಾಗುವವನಿಗೆ ಇನ್ನೊಬ್ಬ ಕೊಂಡುಕೊಳ್ಳುತ್ತಾನೆಂದರೆ ತನಗೆ ಅನುಪಯುಕ್ತವಾದುದು ಆತನಿಗೆ ಉಪಯುಕ್ತವಾಗುವ ದಾರಿಯು ಎಂತಹುದು ಎಂಬುದೂ ಗೊತ್ತಿರುತ್ತದೆ. ಆದರೆ ಕೃಷಿಕರ ಜಗತ್ತಿನಲ್ಲಿ ಉಳಿದ ಕುರಿ, ಕೋಳಿಗಳ ಸಾಕಣೆಯ ಜತೆಗಿರದ ವಿಲಕ್ಷಣ ಸಂಬಂಧವೊಂದು ಈ ಜಾನುವಾರುಗಳ ಜತೆಗಿರುತ್ತದೆ. ಸಾಕುತ್ತಲೇ ಮೈಸವರುತ್ತಲೇ ಕುರಿ, ಕೋಳಿಗಳನ್ನು ಕಣ್ಣೆದುರಿಗೆ, ಕೊಂದು ತಿನ್ನುವುದು ಅವರಿಗೆ ಜೀವ-ಕರುಣೆ ಇಂತಹ ಯಾವ ಸಂಗತಿಯನ್ನು ಉದ್ದೀಪಿಸಬೇಕಾಗಿಲ್ಲ. ಆದರೆ ಹಸು-ಎಮ್ಮೆಗಳ ಜೊತೆಗಿನ ಸಂಬಂಧದ ಸ್ವರೂಪವನ್ನು ಹೀಗೆ ಸರಳವಾಗಿ ಅವರು ತೂಗಿಕೊಳ್ಳಲಾರರು. ಈ ಜಾನುವಾರುಲೋಕದ ಜೊತೆಗೆ ಅವರೊಳಗೆ ರೂಢಿಪ್ರಜ್ಞೆಯ ಮೂಲಕ ಭಾವನೆಯ ಆಳಕ್ಕೆ ಬೇರು ಬಿಟ್ಟ ಸಂಬಂಧದ ತಂತು ಒಂದಿರುತ್ತದೆ. ಅದರ ಪ್ರಭಾವದಿಂದಾಗಿ ತಾವು ಸಾಕಿ, ತಾವೇ ತಿನ್ನದ ಗೋವಿಗೆ ಸಂಬಂಧಿಸಿದಂತೆ ಸಾಗಹಾಕುವ ವೇಳೆ ಒಂದು ಸಣ್ಣ ಪಾಪಪ್ರಜ್ಞೆಯೂ ಕಾಡುವಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಅವರಿರುತ್ತಾರೆ ಎಂಬುದೂ ದಿಟ. ಜಾನುವಾರನ್ನು ಯಾರಿಗೇ ಮಾರುವುದಿರಲಿ, ತನ್ನ ಹಟ್ಟಿಯಿಂದ ಹೊರಹೊಡಿಸುವಾಗ ಹಣಕ್ಕಾಗಿ ತನ್ನ ಮಕ್ಕಳಂತಿರುವ ಬಂಧುತ್ವವೊಂದನ್ನು ಕಳೆದುಕೊಳ್ಳುವ ಸಂಕಟ ಅನುಭವಿಸದ ಕೃಷಿಕ ಪ್ರಾಯಶಃ ಇರಲಾರ. ತಾವೇ ಹೆರಿಗೆ ಮಾಡಿ, ತಾವೇ ಕೈತುತ್ತು ಹಾಕಿ, ತಾವೇ ಮೈತೊಳೆದು ಮಕ್ಕಳಂತೆ(?) ಸಾಕಿದವುಗಳೆನ್ನುವ ಭಾವನಾತ್ಮಕ ಸಂಬಂಧಗಳ ಕಾರಣದ ಸಂಕಟ ಅದು. ಪರಂಪರೆಯಿಂದ ಬಂದ ಕಥನಗಳು ಮತ್ತು drought-dead-cowತಾನೇ ಸಾಕಿದ್ದರ ಜೊತೆಗಿನ ಒಡನಾಟದ ಮೂಲಕ ಕಟ್ಟಿಕೊಂಡ ನಿಶ್ಚಿತ ಸಂಬಂಧಗಳನ್ನೆಲ್ಲಾ ನಿರಾಕರಿಸಿ ಮಾರಿ ಕೈತೊಳೆದುಕೊಳ್ಳುವ ಸಣ್ಣತನ ತನ್ನದೆನ್ನುವುದರಿಂದ ಹುಟ್ಟುವ ಪಾಪಪ್ರಜ್ಞೆಯದು. ಭೌತಿಕ ವ್ಯಾವಹಾರಿಕ ಸತ್ಯದ ನಡುವೆ ನುಸುಳಿಕೊಳ್ಳುವ ಈ ವಿಲಕ್ಷಣ ಸಂಬಂಧದ ಪರಿಣಾಮವಾಗಿ ಜಾನುವಾರುಗಳ ವಿಕ್ರಯವು ಸಾಕಿದಾತನಲ್ಲಿ ಒಂದು ಬಗೆಯ ಕೊಲೆಗಡುಕತನದ ಪಾಪಪ್ರಜ್ಞೆಯ ಭಾವವನ್ನೂ ಉದ್ದೀಪಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈ ಪಾಪಾತ್ಮಸ್ಥಿತಿಯನ್ನು ಬಹುವಾಗಿ ಅನುಭವಿಸುವವನು ಕೃಷಿಕನಾಗಿರುವ ಜೊತೆಗೆ ಮಧ್ಯಮ ಇಲ್ಲವೇ ಕೆಳಮಧ್ಯಮವರ್ಗಕ್ಕೆ ಸೇರಿದವನೂ ಆಗಿರುತ್ತಾನೆ. ಅಷ್ಟೇ ಅಲ್ಲದೆ ಆತ ಈ ದೇಶದ ಸಾಮಾನ್ಯ ಮಧ್ಯಮವರ್ಗವನ್ನು ಆಕ್ರಮಿಸಿಕೊಂಡಿರುವ ಕರ್ಮಸಿದ್ಧಾಂತದ ಹಿಡಿತ, ಪ್ರಭಾವಗಳಿಗೆ ಪಕ್ಕಾದವನೂ ಆಗಿರುತ್ತಾನೆ. ವರ್ತಮಾನದ ದುಸ್ಥಿತಿಯನ್ನು ತನ್ನ ಪೂರ್ವದ ಕರ್ಮಫಲವೆಂದು ನಂಬುತ್ತಾ, ತದನಂತರದ ಬದುಕಿನ ಪಾಪಗಳ ಕುರಿತು ಸದಾ ಆತಂಕದಲ್ಲಿಯೇ ಇರುವ ಮಧ್ಯಮವರ್ಗದ ಎಲ್ಲಾ ಗುಣದೋಷಗಳೂ ಈತನಲ್ಲಿರುತ್ತವೆ. ಆಯ್ಕೆಯಲ್ಲದ ಕೃಷಿಬದುಕಿನ ಹುಟ್ಟು ಮತ್ತು ವರ್ತಮಾನದಲ್ಲಿ ಅನುಭವಿಸುತ್ತಿರುವ ಭೌತಿಕ ದುರವಸ್ಥೆಯನ್ನು ಪುರಾಕೃತಕರ್ಮದ ಬಳುವಳಿಯಾಗಿಯೂ, ಆ ಕರ್ಮ ನಿಮಿತ್ತವಾದ ಈ ಬಾಳಿನ ಹೊಣೆಗಾರ ತಾನೇ ಎನ್ನುವಂತೆಯೂ ಆತ್ಮನಿಂದೆಯಲ್ಲಿ ನಿಂತುಬಿಡುವ, ಆತ್ಮದ ಆಚೆಗೆ ಪಾಪದ ಹೊಣೆಯನ್ನು ಗುರುತಿಸಲಾರದ ವರ್ಗಕ್ಕೆ ಸೇರಿದವನೀತ. ವರ್ತಮಾನದ ಸ್ಥಿತಿಗಾಗಿ ಹೀಗೆ ಗತದ ಹೊಣೆಹೊತ್ತುಕೊಳ್ಳಬೇಕಾದ ಅನಿವಾರ್‍ಯತೆಯಿಂದ ಪಾರಾಗಲಾರದ ಸಂಕಟದ ನಡುವೆಯೂ, ಸಾಕಿದ ಜೀವವನ್ನು ಕನಿಕರವಿಲ್ಲದೆ ಮಾರಬೇಕಾದ ವರ್ತಮಾನದ ಸ್ಥಿತಿಯಿಂದಾಗಿ ಮುಂದಿನ ಬಾಳಿನ ಪಾಪದ ಬುತ್ತಿಯನ್ನು ಬಲಿದುಕೊಳ್ಳುತ್ತಿದ್ದೇನೆ ಎಂಬ ತೊಳಲಾಟಕ್ಕೆ ಗುರಿಯಾಗುವವನಿವನು. ಹೀಗೆ ವ್ಯಕ್ತಿಗತ ನೆಲೆಯಲ್ಲಿ ಪಾಪದ ಹೊಣೆಹೊತ್ತು ಕೊರಗಿನಲ್ಲಿರುವವನೀತ. ಅಷ್ಟೇ ಅಲ್ಲದೆ ಈ ಕೊರಗಿನಿಂದ ಪಾರಾಗುವ ನಿರೀಕ್ಷೆ ಹೊಂದಿದವನೂ ಆಗಿ, ಪಾಪಚಕ್ರದಿಂದ ಪಾರುಗಾಣುವ ದಾರಿಕಾಣದೆ ಹತಾಶೆಯ ಮನಸ್ಥಿತಿಯಲ್ಲಿರುವವನೂ ಹೌದು.

ಕರ್ಮಚಕ್ರದ ಈ ಬದಲಾಗದ ನಿರಂತರತೆಗೆ ಸಿಕ್ಕಿ ಘಾಸಿಗೊಳಗಾಗುವ ಸಮುದಾಯದೊಳಗಿನ ಪಾಪಪ್ರಜ್ಞೆಯ ತೊಳಲಾಟ ಮತ್ತು ಅದರಿಂದ ಪಾರಾಗುವ ದಾರಿಕಾಣದೆ ಉಂಟಾಗುವ ಹತಾಶೆಗಳು ಸಮುದಾಯವನ್ನು ದಿಕ್ಕುತಪ್ಪಿಸುವ ಬಾಹ್ಯಶಕ್ತಿಯೊಂದರ ಉದ್ದೇಶಿತ ಕಾರ್‍ಯಯೋಜನೆಗೆ ಹಾಳತವಾಗಿ ಒದಗಿ ಬರುತ್ತವೆ. ಪಾಪಪ್ರಜ್ಞೆಯ ಹೊಣೆಗಾರಿಕೆಯಲ್ಲಿ ಸಣ್ಣಗೆ ನರಳುವ ಸಾಮಾನ್ಯರು ಕೊಡಮಾಡಿದ ಈ ಸಣ್ಣ ಜಾಗವನ್ನೇ ತನ್ನ ಶಕ್ತಿ ರಾಜಕಾರಣದ ಅಂಗಣವನ್ನಾಗಿ ಸ್ಥಾಪಿತ ಯಜಮಾನ್ಯವು ಬಳಸಿಕೊಳ್ಳುತ್ತದೆ. ರೈತನ ದುಸ್ಥಿತಿಗೆ ಇಡಿಯ ಸಾಮಾಜಿಕ ವ್ಯವಸ್ಥೆಯಲ್ಲಿನ ಆರ್ಥಿಕ ಅಸಮತೋಲನದ ಜೊತೆಗಿನ ಇತರ ಕಾರಣಗಳನ್ನು ಶೋಧಿಸಿ ತೋರುವ ವಾಸ್ತವಿಕ ಮಾರ್ಗಕ್ಕೆ ಬದಲಾಗಿ ಅದು ಬೇರೊಂದು ದಾರಿಯನ್ನು ಹಿಡಿಯುತ್ತದೆ. ರೈತನ ಅಸಹಾಯಕತೆಯ ಕ್ಷಣವು ಅವನ ಪಾಪೋತ್ಪಾದನೆಯ ಕ್ಷಣವಾಗಿ ಮಾರ್ಪಡುವ ಮೂಲ ಕಾರಣ ಆರ್ಥಿಕ ಆಮಿಷವೆಂದೂ, ಹಸುವನ್ನು ಸಾಕಿ ಹಸುವಿನಂತಾದ ಮುಗ್ದನನ್ನು ವಂಚನೆಯ ಬಲೆಯಲ್ಲಿ ಕೆಡವಿಹಾಕಲಾಗಿದೆಯಂತಲೂ ಅದು ವಾದಿಸುತ್ತದೆ. ತನಗೆ ನಿಜವಾಗಿಯೂ ಇಲ್ಲದ ನೆಲೆಯನ್ನು ಇರುವಂತೆ ನೋಡಿಕೊಳ್ಳುವ ಸಲುವಾಗಿಯೇ ಹೀಗೆ ಖರೀದಿದಾರರನ್ನು ಅದು ಅಪರಾಧೀಕರಣಕ್ಕಿಳಿಸಿ ರಾಕ್ಷಸೀಕರಣ ಮಾಡುತ್ತದೆ. ಪಾಪಾತ್ಮನಲ್ಲದವನಲ್ಲಿ ಪಾಪಾತ್ಮದ ಕುರಿತಾದ ಪಶ್ಚಾತ್ತಾಪ ಹುಟ್ಟಿಸುವ ಈ ಆರ್ಥಿಕ ಆಮಿಷದ ನಿವಾರಣೆಗೆ ತಾನು ಪೂರ್ಣ ನಾಯಕತ್ವವನ್ನು ವಹಿಸುವುದಾಗಿ ಹೇಳುತ್ತದೆ. ಹೀಗೆ ಸಾಮಾನ್ಯರ ದೈನಿಕದ ಬದುಕಿನ ಸಂದರ್ಭದಲ್ಲಿ ಸಿಗುವ ಇಂತಹ ಚಿಕ್ಕ ಚಿಕ್ಕ ಅವಕಾಶಗಳನ್ನೇ ತಮ್ಮ ಬೆಚ್ಚನೆಯ ಗೂಡನ್ನಾಗಿ ಸ್ಥಾಪಿತ ಯಜಮಾನಿಕೆ ಮಾರ್ಪಡಿಸಿಕೊಳ್ಳುತ್ತದೆ. brahma-cow-indiaಇಂತಹ ಸೂಕ್ಷ್ಮವಾದ ನೆಯ್ಗೆಯಲ್ಲಿರುವ ಮೂಕಪ್ರಾಣಿಯ ಕುರಿತಾದ ಕರುಣೆಯ ಪುಟ್ಟನೆಲೆಯಲ್ಲಿಯೇ ತನ್ನ ಯಶಸ್ಸಿನ ಬೀಜವನ್ನು ನೆಟ್ಟು ಹೆಮ್ಮರವಾಗಿಸಿದ ಸ್ಥಾಪಿತ ಯಜಮಾನಿಕೆ ಕೊಲೆಯ ಕಾರಣನಾದೆ ಎಂಬ ಕೃಷಿಕನ ಸ್ವ ಕರ್ಮದ ಹೊಣೆಗಾರಿಕೆಯನ್ನು ಅನ್ಯ ಮೂಲದಲ್ಲಿ ತೋರಿಸಿ, ರೈತನಿಗೆ ಪಾಪ ಮುಕ್ತಿಯ ನಿರುಮ್ಮಳತೆಯನ್ನು ನೀಡುತ್ತದೆ. ರೈತಾಪಿ ವರ್ಗ ಹಸುವನ್ನು ಯಂತ್ರವಾಗಿ ಬಳಸಿಯೂ, ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅದು ಮಾಡಬೇಕಾದ ಕೆಲಸವನ್ನು ಅದರ ಪರವಾಗಿಯೇ ತಾನು ಮಾಡುತ್ತಿರುವಂತೆ ನಂಬಿಸುತ್ತದೆ. ಹಸುವನ್ನು ವಿಕ್ರಯಿಸುವವನು ಸಾಕುವವನ ಬಡತನವನ್ನು ಬಳಸಿಕೊಂಡು ಅವನ ಭಾವನೆಗಳನ್ನು ಅತಿ ವ್ಯವಸ್ಥಿತವಾಗಿ ಧಮನಿಸುತ್ತಿದ್ದಾನೆ ಎಂಬ ವಿಚಾರವನ್ನು ವೈಚಾರಿಕ ಆಕೃತಿಯಾಗಿ ಗಟ್ಟಿಗೊಳಿಸುತ್ತಾ ಹೋಗುತ್ತದೆ. ಹೀಗೆ ಅಶಿಕ್ಷಿತ ಮತ್ತು ಅರೆಶಿಕ್ಷಿತ ಸಮುದಾಯಕ್ಕೆ ತಮ್ಮ ಪಾಪದ ಹೊಣೆಗಾರಿಕೆಯಿಂದ ಪರಿಹಾರ ನೀಡಿದ ಭ್ರಮೆಯನ್ನು ಉಂಟುಮಾಡುವ ಮುಲಕ ಈ ಸಾಂಸ್ಥಿಕ ಶಕ್ತಿಕೇಂದ್ರ ಮತ್ತಷ್ಟು ಸಾಮೀಪ್ಯವನ್ನು ಸಾಧಿಸುತ್ತದೆ.

ಈ ತಂತ್ರಯೋಜನೆ ಹಸುವಿನ ಉಳಿದೆಲ್ಲಾ ಆಯಾಮದ ಚರ್ಚೆಯನ್ನು ನಿವಾರಿಸಿ ಅದನ್ನು ಆಹಾರವಾಗಿ ಬಳಸುವ ಸಮಸ್ಯೆಯನ್ನು ಮಾತ್ರ ಮುನ್ನೆಲೆಗೆ ತರುತ್ತದೆ. ಇದು ವಾಸ್ತವಿಕವಾಗಿ ಜೀವಾತ್ಮ-ಹತ್ಯೆ-ವಧೆ-ಪಾಪಗಳೆಂಬ ಪರಿಭಾಷೆಗಳ ಚಕ್ರದಲ್ಲಿ ನಿರ್ದಿಷ್ಟವಾದ ಆಹಾರಕ್ರಮವೊಂದನ್ನು ಆಹಾರದ ಬದಲಾಗಿ ಆಕ್ರಮಣವೆಂಬ ಸಂಕಥನದಲ್ಲಿ ಬಂಧಿಸುವ ರಾಜಕಾರಣ. ಹಸಿವು ಆಹಾರಗಳ ಈ ರಾಜಕಾರಣದ ಪರಿಭಾಷೆಯು ಇಲ್ಲಿಗೆ ನಿಲ್ಲಲಾರದು. ಇದು ಮುಂದುವರೆದು ಸೂಕ್ಷ್ಮವಾಗಿ ಸಸ್ಯೇತರ ಮೂಲವನ್ನು ಆಹಾರ ಮಾದರಿಯ ಆಕರವಾಗಿ ಬಳಸುವ ಒಂದು ವಿಶಾಲ ಸಮುದಾಯವನ್ನೇ ರಾಕ್ಷಸೀಕರಣದ ಆವರಣದಲ್ಲಿ ಕಟ್ಟುವ ಕೆಲಸವನ್ನು ಚುರುಕುಗೊಳಿಸುತ್ತದೆ. ಇದರ ತಾಜಾ ಉದಾಹರಣೆಯಾಗಿಯೇ ಆಹಾರ ಸಂಸ್ಕೃತಿಯ ಬಹಿಷ್ಕೃತ ಮಾದರಿಯೆಂದು EGGS 2ವಾದಿಸಿ ಸರ್ಕಾರಿ ಶಾಲೆಯಲ್ಲಿ ಓದುವ ಬಡಮಕ್ಕಳ ಅನ್ನದ ತಟ್ಟೆಗೆ ಬೀಳಬಹುದಾಗಿದ್ದ ಮೊಟ್ಟೆಯಂತಹ ಪೌಷ್ಟಿಕ ಆಹಾರವನ್ನು ಅಪಹರಿಸಿದ್ದ ಬಗೆಯನ್ನು ನೆನೆದುಕೊಳ್ಳಬಹುದು. ಹೀಗೆ ಈ ಸಂಕಥನದ ವಿಸ್ತರಣೆಯಿಂದ ಅನ್ನವೊಂದು ಆಹಾರವಾಗುವ ಬದಲು ಅನ್ಯಗೊಂಡು ಸಾಂಸ್ಕೃತಿಕವಾಗಿ ಬಹಿಷ್ಕೃತ ಮಾದರಿಯಾಗುತ್ತದೆ. ಬಹಿಷ್ಕೃತವಾದುದನ್ನು ತಿಂದವರನ್ನು ಪಾರಂಪರಿಕ ಸಮಾಜ ಹೇಗೆ ಅಂಚಿಗೆ ಸರಿಸಿದೆಯೋ, ಅಂತೆಯೇ ಹೊಸಕಾಲದ ರಾಜಕೀಯ ಅಧಿಕಾರ ಕೇಂದ್ರದಿಂದಲೂ ಇವರನ್ನು ಅಂಚಿಗೆ ಸರಿಸುವುದೇ ಈ ಸ್ಥಾಪಿತಶಕ್ತಿಯ ಆತ್ಯಂತಿಕ ಗುರಿ. ಅದೆಲ್ಲವನೂ ಸಾಧಿಸಲು ಈ ಹಸು-ಎಮ್ಮೆಗಳ ಜಗತ್ತಿನ ಕಾರ್‍ಯಯೋಜನೆಗಳು ಪೂರಕವಾಗಿ ಒದಗಿ ಬರುತ್ತವೆ ಎಂಬುದನ್ನು ಗಮನಿಸಬೇಕು.

ಈಗಾಗಲೇ ಮೇಲೆ ಹೇಳಿದಂತೆ ಜಾನುವಾರುಗಳ ಕುರಿತ ಇಡಿಯ ರಾಜಕೀಯ ಸಂಕಥನಕ್ಕೆ ಜಾನುವಾರು ಜಗತ್ತಿನ ಇತರ ಸಮಸ್ಯೆಗಳು ಆದ್ಯತೆಯ ಪ್ರಶ್ನೆಗಳಲ್ಲ. ಹಾಗೊಂದು ವೇಳೆ ಅವುಗಳನ್ನು ಮುನ್ನೆಲೆಗೆ ತಂದು ಸಂಪನ್ಮೂಲವನ್ನು ಉಳಿಸುವುದೇ ಅದರ ಆದ್ಯತೆಗಳಾಗಿದ್ದ ಪಕ್ಷದಲ್ಲಿ, ಹಸು-ಎಮ್ಮೆಗಳ ಈ ಜಾನುವಾರು ಜಗತ್ತು ದೊಡ್ಡ ಸಂಖ್ಯೆಯಲ್ಲಿ ಕರಗುತ್ತಿರುವ ಈ ಹೊತ್ತಿನಲ್ಲಿ ಅಮೃತಸದೃಶವಾದ ಒಂದು ಲೀಟರ್ ಹಾಲು ತೆಗೆಯಲು ರೈತನಿಗೆ ಬೀಳುತ್ತಿರುವ ಖರ್ಚೆಷ್ಟು? ಆದರೆ ಆತ ನಿಜಕ್ಕೂ ಪಡೆಯುತ್ತಿರುವುದೆಷ್ಟು? ನಮ್ಮದೇ ನೆಲದೊಡಲಿನಿಂದ ತೆಗೆಯಲು ಅನುಮತಿಸಿದ ಒಂದು ಲೀಟರ್ ಖನಿಜಯುಕ್ತವೆನ್ನಲಾಗುವ ನೀರಿಗೆ ಎಷ್ಟು ಬೆಲೆಪಡೆಯಲು ಅನುಮತಿಸಲಾಗಿದೆ? ನಮ್ಮದೇ ಕಡಲಿನ ಉಪ್ಪನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ, ಅದರ ಮೇಲೆ ತೆರಿಗೆ ಸಲ್ಲದೆಂದು ಉಪವಾಸ ಕುಳಿತ ಗಾಂಧೀಜಿಯವರ ಹೋರಾಟದಿಂದ ಸ್ವಾತಂತ್ರ್ಯ ಪಡೆದ ಇದೇ ದೇಶ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಂದು ಒಂದು ಕೆ.ಜಿ ಉಪ್ಪನ್ನು ಎಷ್ಟು ದರದಲ್ಲಿ ಮಾರಲು ಅನುಮತಿ ನೀಡಿದೆ? ಇದೆಲ್ಲದರ ಜೊತೆಗೆ ನಮ್ಮದೇ ನಿಸರ್ಗ ಸಂಪತ್ತನ್ನು ಬಳಸುವ ದೇಶದ ಕುಭೇರರಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುತ್ತಿರುವ ತೆರಿಗೆ ರಿಯಾಯಿತಿಗಳೆಷ್ಟು? ಎಂಬ ಪ್ರಶ್ನೆಗಳು ಮುಖ್ಯವಾಗುತ್ತಿದ್ದವು. ಇವುಗಳ ಬಗೆಗೆ ಚಕಾರವೆತ್ತದೆ ರೈತನ ದುಡಿಮೆಯ ಫಲವನ್ನು ಅಡ್ಡಾದಿಡ್ಡಿ ದರಕ್ಕೆ ಕಸಿದುಕೊಂಡು, ಆತನಿಂದ ಹೊಣೆಗಾರಿಕೆಯನ್ನು ನಿರೀಕ್ಷಿಸುವ ನಾಗರಿಕ ಸಮಾಜಕ್ಕೆ ರೈತನ ಸಮಸ್ಯೆಯ ನಿಜವಾದ ಅರಿವಾಗಲೀ, ಸಹಾನುಭೂತಿಯಾಗಲೀ ಇದೆಯೇ? ರೈತನಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ವಿಮೆಯ ಸೌಲಭ್ಯದ ವ್ಯಾಪ್ತಿಗೆ ಎಷ್ಟೊಂದು ಹಸುಗಳು ಒಳಪಟ್ಟಿವೆ? ಇದಕ್ಕೆಲ್ಲಾ ರೈತರ ಅಜ್ಞಾನವಷ್ಟೇ ಕಾರಣವೇ? cows-killed-by-droughtಬರಗಾಲದ ಹೊತ್ತಿನಲ್ಲಿ ಕುಡಿಯಲು ನೀರನ್ನೂ ಪಡೆಯದೆ ಸಾಯುವ ಜಾನುವಾರುಗಳು ಎಷ್ಟಿವೆ? ಅತ್ಯಂತ ಸಂಪದ್ಪರಿತವಾದ ನಾಟಿತಳಿ ಹಸುಗಳನ್ನು ದಾನವಾಗಿಯೂ ಸ್ವೀಕರಿಸದಿರುವಾಗ ಅದನ್ನು ಸಾಕಬೇಕಾದವರು ಯಾರು? ಹಸುವೆಂದರೆ ಬರಿಯ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾದುದೇ? ಅದನ್ನು ಕೇಂದ್ರವಾಗಿರಿಸಿದ ಇನ್ನಿತರ ಉದ್ಯಮಗಳನ್ನು ಹೇಗೆ ವಿವರಿಸಿಕೊಳ್ಳಬೇಕು? ಆದಾಯ ಮತ್ತು ಯಜಮಾನಿಕೆಗಳ ಮಾಧ್ಯಮವಾಗಿ ದುಡಿಸಲ್ಪಟ್ಟಿರುವ ಜಾನುವಾರುಗಳ ಜಗತ್ತನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಯಾರ ಮೇಲಿದೆ? ಈ ಹೊಣೆಗಾರಿಕೆಯನ್ನು ಯಾರಿಂದ ನಿರೀಕ್ಷಿಸಲಾಗುತ್ತಿದೆ? ಯಾರ ಮೇಲೆ ಹೊರಿಸಲಾಗುತ್ತಿದೆ? ಚಲನೆ ಕಳೆದುಕೊಂಡು ಅಪ್ರಸ್ತುತಗೊಳ್ಳುತ್ತಾ ಕಣ್ಣೆದುರಿನಿಂದ ಮಾಯವಾಗುತ್ತಿದ್ದರೂ, ಭಾವನೆಯಲ್ಲಿ ಲಂಗರು ಹಾಕಿ ನಿಲ್ಲುವುದರಿಂದ ಹಸು ಮತ್ತು ಅದರ ಜೊತೆಗಿನ ಪಾರಂಪರಿಕವಾದ ಜ್ಞಾನ-ಮೌಲ್ಯಗಳನ್ನೊಳಗೊಂಡ ಸಾಂಸ್ಕೃತಿಕ ಜಗತ್ತು ಉಳಿಯುತ್ತದೆಯೇ? ಒಂದು ಸಾಂಸ್ಕೃತಿಕ ಸಂದರ್ಭವು ಜಡತ್ವಕ್ಕೆ ತಳ್ಳಲ್ಪಡುವುದರಿಂದ ಸಮಾಜದ ಮನಸ್ಥಿತಿಯ ಮೇಲೆ ಉಂಟಾಗುವ ಪರಿಣಾಮವೆಂತಹದು? ಇಂತಹ ಸಾಲು ಸಾಲು ಪ್ರಶ್ನೆಗಳನ್ನು ಅವರ ಎದುರಿಗಿಡಬೇಕಾಗಿದೆ.

ಈ ಎಲ್ಲಾ ಹುನ್ನಾರಗಳನ್ನು ನಿರಸನಗೊಳಿಸಿ ಹಸುಸಾಕುವವರಿಗೆ ಗೌರವದ ಬದುಕಿನ ಜೊತೆಗೆ ನಮಗೆ ನಿಜಕ್ಕೂ ಬೇಕಾದ ತಳಿಗಳು ಉಳಿಯಬೇಕಾದರೆ ಅದನ್ನು ಸಾಕುವವರು ಪ್ರಜ್ಞಾವಂತರಾಗಬೇಕು. ದನ ಮೇಯಿಸುವುದು ಯಾತಕ್ಕೂ ಬೇಡದ ಉದ್ಯೋಗವೆಂಬ ಹಣೆಪಟ್ಟಿ ತೊಲಗಿ ಅದೊಂದು ಗೌರವ ತರುವ ಕಾಯಕವೆನಿಸುವ ವಾತಾವರಣ ಮೂಡಬೇಕು. ಭಾವನೆ ಮತ್ತು ಅಸಹಾಯಕತೆಯ ಮೇಲೆ ಯಜಮಾನಿಕೆ ಚಲಾಯಿಸಬಹುದಾದ ಅವಕಾಶ ಇಲ್ಲವಾಗಬೇಕು. cow-decorated-festivalವಾಸ್ತವವನ್ನು ಇರುವಂತೆಯೇ ವಿವರಿಸಿಕೊಳ್ಳಬಹುದಾದ ಸಾಂಸ್ಕೃತಿಕ ವಾತಾವರಣ ಸಿದ್ಧಗೊಳ್ಳಬೇಕು. ಆದರೆ ಜನರನ್ನು ಶಿಕ್ಷಣದ ಆವರಣಕ್ಕೆ ತಾರದೆಯೇ ಹುನ್ನಾರಗಳನ್ನು ಅರ್ಥೈಸಿಕೊಳ್ಳುವ ಅರಿವಿನ ಜಗತ್ತು ಅಸಾಧ್ಯವಾಗುತ್ತದೆ. ಈ ಅರಿವಿನ ಜಗತ್ತು ಸಾಧ್ಯವಾದಾಗ ಅವರೇ ತಮ್ಮದೆಂದು ಭಾವಿಸಿಕೊಂಡ ಪಾಪದ ನೆಲೆಗಳಾಗಲೀ, ಕಾರಣರೆಂದು ಭ್ರಮಿಸಿದ ‘ಅನ್ಯ’ತ್ಪದ ಕಲ್ಪನೆಯಾಗಲೀ ನಿರಸನಗೊಂಡು ತಾವು ತಮ್ಮ ಮೇಲೆ ಹೇರಿಕೊಂಡ ನಾಯಕತ್ವವನ್ನು ತಾವೇ ನಿರಾಕರಿಸುವಂತಾಗುತ್ತದೆ. ಹಾಗಾದಾಗ ಮಾತ್ರ ಹುನ್ನಾರಗಳಿಗೆ ಸಮ್ಮತಿಯ ಮುದ್ರೆಯೊತ್ತಿದ ಜನಸಾಮಾನ್ಯರೇ ಪ್ರತಿರಾಜಕಾರಣದ ನಿಜದ ನಾಯಕರಾಗಿ ಸ್ಥಾಪಿತ ಯಜಮಾನ್ಯವನ್ನು ನಿರಾಕರಿಸಿ ದೈನಿಕವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಸ್ಥಿತಿಯೊಂದು ಸಾಧ್ಯವಾಗದೇ ಇರುವಲ್ಲಿಯವರೆಗೆ, ಹಿಂದಣೆ-ಮುಂದಣೆಗಳೆಂಬ ಹಟ್ಟಿಯ ಅವಯವಗಳಲ್ಲಿ ಹಿಂದಣೆ-ಮುಂದಣೆಗಳು ತುಂಬುವ-ಖಾಲಿಯಾಗುವ ಈ ನಿರಂತರತೆಯ ಕೊಂಡಿ ಸರಿದುಹೋಗಿ ಕೆಂಪಿ, ಬುಡ್ಡಿ, ಕಾಳಿ, ಬೆಳ್ಳು, ಕೆಂಪಣ್ಣರ ಉಪಸ್ಥಿತಿ ನಾಪತ್ತೆಯಾಗುತ್ತಾ ಸಾಗುತ್ತದೆ. ಅಚ್ಚು ಹಾಕಿಕೊಟ್ಟ ಧರಣಿಮಂಡಲ, ಕಾಳಿಂಗ, ಕೊಳಲು, ಗಂಗೆ, ತುಂಗೆಯರ ಜಪವಷ್ಟೇ ನಮ್ಮದಾಗಿ, ಲೋಹದ ರೂಪದ ಮೋಹದ ಗೋವು ಉಚ್ಚೆಹಾರಿಸುವ, ಜೀವ ತುಂಬಿದ ಹಸುಗಳನ್ನು ಕೊಂದು ಮುಗಿಸುತ್ತದೆ.

One thought on “ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ

  1. Ananda Prasad

    ಉಪಯೋಗಿಯಲ್ಲದ ದನಗಳನ್ನು ಮಾಂಸಕ್ಕಾಗಿ ತಿನ್ನುವವರು ಕೊಂಡು ಹೋದರೆ ಇಡೀ ಗೋವಿನ ಸಂತತಿಯೇ ನಾಶವಾಗಿ ಹೋಗಲಿದೆ ಎಂದೂ ಇದನ್ನು ತಡೆಯುವ ಗುತ್ತಿಗೆಯನ್ನು ತಾವು ತೆಗೆದುಕೊಂಡಿದ್ದೇವೆ ಎಂದೂ ಕೆಲವು ಹಿಂದೂ ಸಂಘಟನೆಗಳು ಹುಯಿಲೆಬ್ಬಿಸಿ ಕೃಷಿಕರು ತಮಗೆ ಉಪಯೋಗಿಯಲ್ಲದ ದನ, ಗಂಡು ಕರುಗಳನ್ನು ಮಾರಾಟ ಮಾಡದಂತೆ ಅಡ್ಡಿ ಪಡಿಸುತ್ತಿವೆ. ಇದರ ಹಿಂದಿರುವ ರಾಜಕೀಯ ಅರಿಯದ ಅಮಾಯಕ ಹಿಂದೂಗಳು ಇಂಥ ಸಂಘಟನೆಗಳನ್ನು ಬೆಂಬಲಿಸಿ ತಮ್ಮ ತಲೆಯ ಮೇಲೆ ತಾವೇ ಕಲ್ಲು ಹೊತ್ತು ಹಾಕಿಕೊಳ್ಳುತ್ತಿದ್ದಾರೆ. ಗೋವಿನ ಸಂತತಿ ನಾಶವಾಗುವ ಯಾವುದೇ ಅಪಾಯ ಇಲ್ಲವೇ ಇಲ್ಲ. ಇದೆಲ್ಲ ಗೋಮುಖವ್ಯಾಘ್ರಗಳ ರಾಜಕೀಯ ಆಟವೇ ಹೊರತು ಮತ್ತೇನಲ್ಲ. ಉಪಯೋಗ ಇಲ್ಲದ, ಸಾಕಲಾಗದ ಗೋವುಗಳನ್ನು ಮಾತ್ರವೇ ಕೃಷಿಕರು ಮಾರಾಟ ಮಾಡುತ್ತಾರೆಯೇ ಹೊರತು ಉಪಯುಕ್ತ ಗೋವನ್ನು ಯಾವುದೇ ಕೃಷಿಕನೂ ಮಾರಾಟ ಮಾಡುವುದಿಲ್ಲ. ಇದನ್ನು ತಡೆಯಲು ಯಾವುದೇ ಕಾನೂನಿನ ಅಗತ್ಯವೂ ಇಲ್ಲ. ಮಾರುಕಟ್ಟೆ ಸೂತ್ರವಾದ ಬೇಡಿಕೆ ಹಾಗೂ ಪೂರೈಕೆಗೆ ಹೊಂದಿಕೊಂಡು ಗೋವಿನ ಸಂತತಿ ಬೆಳೆಯುತ್ತಲೇ ಇರುತ್ತದೆ. ಉಪಯೋಗ ಇಲ್ಲದ ಗಂಡು ಕರುಗಳು ಅಥವಾ ಎತ್ತುಗಳು ಕಸಾಯಿ ಹೋಗುತ್ತವೆ. ಇದು ನಿಸರ್ಗ ನಿಯಮ. ಇದನ್ನು ತಪ್ಪಿಸಬೇಕಾದ ಅಗತ್ಯ ಇಲ್ಲ. ಉಳುಮೆಗೆ ಎತ್ತುಗಳು ಅಗತ್ಯ ಎಂದಾದರೆ ಅವುಗಳನ್ನು ಕೃಷಿಕ ಮಾರುವ ಸಾಧ್ಯತೆಯೇ ಇಲ್ಲ. ಎಲ್ಲಿ ಉಳುಮೆಗೆ ಎತ್ತುಗಳ ಅಗತ್ಯ ಇಲ್ಲವೋ ಅಂಥ ಕಡೆ ಗಂಡು ಕರು/ಎತ್ತುಗಳನ್ನು ಸಾಕಲು ಆ ಬ್ರಹ್ಮನೇ ಬಂದರೂ ಸಾಧ್ಯವಿಲ್ಲ.

    ಗೋವಿನ ಸಂತತಿ ನಾಶವಾಗುವ ಅಪಾಯ ಇರುವುದು ಕೆಲವು ದೇಶೀಯ ತಳಿಗಳಲ್ಲಿ ಮಾತ್ರ. ಅವುಗಳ ರಕ್ಷಣೆಗೆ ಕ್ರಮ ಕೈಗೊಂಡರೆ ಧಾರಾಳ ಸಾಕು.

    Reply

Leave a Reply

Your email address will not be published. Required fields are marked *