ಯುವ ರಾಜೇಂದ್ರಸಿಂಗ್ ಕಂಡ ನೀರಿನ ಕನಸು

– ರೂಪ ಹಾಸನ

2001 ರ ಮ್ಯಾಗೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್, ‘ವಾಟರ್ ಮ್ಯಾನ್ ಆಫ್ ರಾಜಸ್ಥಾನ್’ ಎಂದೇ ಪ್ರಸಿದ್ಧರು. ರಾಜಸ್ಥಾನದ ನೀರಿನ ಮನುಷ್ಯ! 1959 ರಲ್ಲಿ ಉತ್ತರಪ್ರದೇಶದಲ್ಲಿ ಹುಟ್ಟಿ ಬೆಳೆದ ಜಮೀನ್ದಾರೀ ಮನೆತನದ ರಾಜೇಂದ್ರಸಿಂಗ್‌ಗೂ, rajendra-singh1ನೀರಿಲ್ಲದ ಮರುಭೂಮಿ ರಾಜಸ್ಥಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ! ಖಂಡಿತಾ ಯುವಜನರು ಕನಸು ಕಂಡರೆ, ಆ ಕನಸನ್ನು ನನಸು ಮಾಡಲು ಸತತ ಪರಿಶ್ರಮ, ಶ್ರದ್ಧೆಯಿಂದ ಭೂಮಿ ಮುಟ್ಟಿ ಪ್ರಯತ್ನಿಸಿದರೆ…….ಎಲ್ಲವೂ ಸಾಧ್ಯ ಎನ್ನುತ್ತಾರೆ ರಾಜಸ್ಥಾನದ ನೀರಿನ ಹರಿಕಾರ ರಾಜೇಂದ್ರಸಿಂಗ್.

1974 ರ ಒಂದು ದಿನ ರಾಜೇಂದ್ರಸಿಂಗ್ ಅವರಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅವರ ಮನೆಗೆ ಬಂದ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ರಮೇಶ್ ಶರ್ಮ ಅವರ ಭೇಟಿ, ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ತಮ್ಮೊಂದಿಗೆ ಹಳ್ಳಿಯ ಶುಚಿತ್ವದ ಮತ್ತು ಮದ್ಯವ್ಯಸನ ಮುಕ್ತಿಗಾಗಿ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದ ರಮೇಶ್ ಶರ್ಮ ಅವರು, ರಾಜೇಂದ್ರ ಅವರ ಎಳೆಯ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದರು. ಇದರೊಂದಿಗೆ 1975 ರಲ್ಲಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಪ್ರತಾಪ್‌ಸಿಂಗ್ ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು, water-man-rajendra-singhಜೊತೆಗೇ ಅದೇ ಸಂದರ್ಭದಲ್ಲಿ ಬಂದ ತುರ್ತುಪರಿಸ್ಥಿತಿ, ತರುಣ ರಾಜೇಂದ್ರ ಅವರು ತೀವ್ರವಾಗಿ ಮತ್ತು ಸ್ವತಂತ್ರವಾಗಿ ಪ್ರಜಾಪ್ರಭುತ್ವದ ವಿವಿಧ ಆಯಾಮಗಳ ಕುರಿತು ಯೋಚಿಸುವಂತಹ ಪ್ರಭಾವವನ್ನು ಬೀರಿದವು. ತದನಂತರ ಆಯುರ್ವೇದ ವೈದ್ಯನಾಗಿ ಪದವಿ ಪಡೆದರೂ, ಜಯಪ್ರಕಾಶ್ ನಾರಾಯಣ್ ಅವರು ಯುವಕರಿಗಾಗಿ ಪ್ರಾರಂಭಿಸಿದ್ದ ‘ಛಾತ್ರ ಯುವ ಸಂಘರ್ಷ ವಾಹಿನಿ’ ಎಂಬ ವಿದ್ಯಾರ್ಥಿ ಹೋರಾಟ ಸಂಘಟನೆಗೆ ಸೇರಿ ಯುವಶಕ್ತಿಯಿಂದ ಸಮಾಜ ಬದಲಾವಣೆಯ ತುರ್ತನ್ನು ರೂಢಿಸಿಕೊಳ್ಳತೊಡಗಿದರು.

ಸಮಾಜ ಸೇವೆಯ ಧ್ಯೇಯದೊಂದಿಗೆ, 1980 ರಲ್ಲಿ ರಾಷ್ಟ್ರೀಯ ಶಿಕ್ಷಣಪ್ರಚಾರ ಸಮಿತಿಯ ಸ್ವಯಂಸೇವಕನಾಗಿ ಸರ್ಕಾರಿ ಕೆಲಸಕ್ಕಾಗಿ ಸೇರಿಕೊಂಡರು. ಅದರದ್ದೇ ಭಾಗವಾಗಿ ವಯಸ್ಕರಿಗೆ ಶಿಕ್ಷಣ ನೀಡುವ ಸಲುವಾಗಿ ರಾಜಸ್ಥಾನದ ದೌಸಾ ಜಿಲ್ಲೆಗೆ ಹೋಗಬೇಕಾಯ್ತು. ಆಗಲೇ ‘ತರುಣ ಭಾರತ ಸಂಘ’ಕ್ಕೆ ಸೇರಿ, ಅದರ ಸಕ್ರಿಯ ಕಾರ್ಯದರ್ಶಿಯಾಗಿ ಯುವಕರಿಗೆ ಮತ್ತು ಸಂಘಕ್ಕೆ ಸ್ಪೂರ್ತಿದಾಯಕವಾಗಿ ಹಲವಾರು ಆಮೂಲಾಗ್ರ ಬದಲಾವಣೆಗಳನ್ನು ತಂದರು. ಯುವಕರ ಸಂಘಟನೆಗಾಗಿ ಹಳ್ಳಿಯಿಂದ ಹಳ್ಳಿಗೆ ಪ್ರವಾಸ ಮಾಡಿದ್ದು ಅವರ ಬದುಕಿನ ಒಂದು ಮಹತ್ವದ ಮೈಲಿಗಲ್ಲು ಎನ್ನಬಹುದು. ಇದು ಅವರು ಜನಪರವಾಗಿ ಯೋಚಿಸಲು ಮತ್ತು ಯೋಜಿಸಲು ಸಹಕಾರಿಯಾಯ್ತು. ಜನರ ನೆಲಮೂಲದ ಸಮಸ್ಯೆಗಳ ಅರಿವು ಯುವ ರಾಜೇಂದ್ರರ ಮನಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ಆದರೆ ತಾವಿರುವ ಸರ್ಕಾರಿ ಹುದ್ದೆ ತಮ್ಮ ಮುಕ್ತ ಮನಸ್ಥಿತಿಗೆ, ಚಟುವಟಿಕೆಗೆ ಸರಿಹೊಂದುವುದಿಲ್ಲವೆಂದೆನಿಸಿ 1984 ರಲ್ಲಿ ಕೆಲಸವನ್ನು ಬಿಟ್ಟು, ತಮ್ಮ ಬಳಿಯಿದ್ದ ವಸ್ತುಗಳನ್ನೆಲ್ಲಾ ಮಾರಿ, ತಮ್ಮ ನಾಲ್ಕು ಮಿತ್ರರೊಡಗೂಡಿ ಬಸ್ ಏರಿ ರಾಜಸ್ಥಾನದ ಮೂಲೆಯ ಆಳ್ವಾರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದು ತಲುಪಿದಾಗ ಅವರಿಗೆ ಕೇವಲ 26 ವರ್ಷ! rajendra-singh-check-damಅಲ್ಲಿ ಅವರು ಆಯುರ್ವೇದ ವೈದ್ಯವೃತ್ತಿ ಆರಂಭಿಸಿದರು. ಅವರ ಗೆಳೆಯರು ಸಾಕ್ಷರತಾ ಪ್ರಚಾರವನ್ನು ಆರಂಭಿಸಿದರು. ರಾಜೇಂದ್ರಸಿಂಗ್ ಅವರ ಜೊತೆಗೇ ಜನಪರ ಕೆಲಸಗಳನ್ನೂ!

ಆಳ್ವಾರ್ ಜಿಲ್ಲೆ ಒಂದೊಮ್ಮೆ ಹಸಿರಿನಿಂದ ಕೂಡಿ, ಧಾನ್ಯಗಳ ಮಾರಾಟಕ್ಕೆ ಪ್ರಸಿದ್ಧವಾಗಿತ್ತು. ಆದರೆ ರಾಜೇಂದ್ರಸಿಂಗ್ ಇಲ್ಲಿಗೆ ಬಂದ ಕಾಲದಲ್ಲಿ ಅದೊಂದು ಶುಷ್ಕವಾದ ಮರುಭೂಮಿಯಾಗಿತ್ತು. ಅರಣ್ಯನಾಶ ಮತ್ತು ಗಣಿಗಾರಿಕೆ ನೀರಿನ ಮೂಲಗಳನ್ನೇ ನಾಶಮಾಡಿತ್ತು. ಅಂತರ್ಜಲ ಭೂಮಿಯಾಳಕ್ಕೆ ಇಳಿದುಹೋಗಿತ್ತು. ಪಾರಂಪರಿಕ ಚೆಕ್ ಡ್ಯಾಂ [ಜೋಹಡ್] ವ್ಯವಸ್ಥೆಗಳನ್ನು ನಿರ್ಲಕ್ಷಿಸಿದ್ದ ಜನರು ಆಧುನಿಕ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದರು. ನೀರಿನ ತೀವ್ರ ಕೊರತೆಯಿಂದ ಇಡೀ ಜಿಲ್ಲೆಯನ್ನು ‘ಡಾರ್ಕ್ ಝೋನ್’ [ಕಪ್ಪು ಪ್ರದೇಶ]ವೆಂದು ಘೋಷಿಸಲಾಗಿತ್ತು. ರಾಜೇಂದ್ರಸಿಂಗ್ ಅವರಿಗೆ ನೀರಿನ ಸಮಸ್ಯೆಯ ತೀವ್ರತೆ ಅರ್ಥವಾಯ್ತು. ಇದೇ ಸಂದರ್ಭದಲ್ಲಿ ಹಳ್ಳಿಯೊಂದರ ಮುಖ್ಯಸ್ಥ ಮಂಗೂಲಾಲ್ ಪಟೇಲ್ ‘ರಾಜಾಸ್ಥಾನದಲ್ಲಿ ಶಿಕ್ಷಣಕ್ಕಿಂತಾ ನೀರಿನ ಸಮಸ್ಯೆ ತುಂಬಾ ದೊಡ್ಡದು’ ಎಂದು ಹೇಳಿದ ಮಾತು ಇವರ ಬದುಕಿನ ಮಹತ್ವದ ತಿರುವಿಗೆ ಕಾರಣವಾಯ್ತು.

ವಿದ್ಯಾವಂತನೆಂಬ ಹಮ್ಮಿನಿಂದ ಬದಲಾವಣೆಯ ಉಪದೇಶ ಕೊಡುವುದಕ್ಕಿಂತಾ ಮಣ್ಣು ಮುಟ್ಟಿ ಜನರ ಜೊತೆಗೆ ಬೆರೆತು ಕೆಲಸ ಮಾಡುವುದರಿಂದ ಮಾತ್ರ ಆಮೂಲಾಗ್ರ ಬದಲಾವಣೆ ಸಾಧ್ಯ ಎಂದು ನಿಶ್ಚಯಿಸಿ ಜೋಹಡ್‌ಗಳ ಮರು ನಿರ್ಮಾಣದಲ್ಲಿ ತೊಡಗಿದರು. ಇವರ ನಾಲ್ಕು ಗೆಳೆಯರು ಈ ಕೆಲಸ ತಮ್ಮಿಂದ ಸಾಧ್ಯವಿಲ್ಲವೆಂದು ಇವರನ್ನು ಬಿಟ್ಟು ಹೋದರು. ಇದರಿಂದ ಎದೆಗುಂದದ ರಾಜೇಂದ್ರ ಅವರು ಹಳ್ಳಿ ಹಳ್ಳಿಗಳಲಿ ಯುವಜನರನ್ನು ಸಂಘಟಿಸಿ ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿದರು. ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದರು. ಮಳೆ ನೀರು ಸಂಗ್ರಹ ಮತ್ತು ಅದರ ವ್ಯವಸ್ಥಿತ ಬಳಕೆಯಿಂದ water-man-singhಕೇವಲ 3 ವರ್ಷಗಳಲ್ಲಿ ಪ್ರತಿಫಲ ಕಾಣತೊಡಗಿ, ಕೆಲವೇ ವರ್ಷಗಳಲ್ಲಿ ಅದು ‘ವೈಟ್ ಝೋನ್’ [ಶ್ವೇತ ಪ್ರದೇಶ]ವಾಗಿ ಮಾರ್ಪಟ್ಟಿತು. ಅಂದಿನಿಂದ ಇಲ್ಲಿಯವರೆಗೂ ಆ ಪ್ರದೇಶಗಳಲ್ಲಿ ಎಂದಿಗೂ ನೀರಿನ ಕೊರತೆಯಾಗದಿರಲು ಸಾಧ್ಯವಾಗಿದ್ದು ನೀರಿನ ವ್ಯವಸ್ಥಿತ ನಿರ್ವಹಣೆಯಿಂದ! ಅದಕ್ಕೆ ಬೇಕಿರುವುದು ಒಂದಿಷ್ಟು ಶ್ರಮ, ಯುವಶಕ್ತಿಯ ಸಂಘಟನೆ ಮತ್ತು ಸಾಧಿಸುವ ಛಲ. ‘ಮಣ್ಣು ಮತ್ತು ನೀರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ’ ಎನ್ನುವ ರಾಜೇಂದ್ರಸಿಂಗ್ ಮಾತು ನಮಗೆ ಸರಿಯಾಗಿ ಅರ್ಥವಾದರೆ ಬಹುಶಃ ಪ್ರವಾಹ ಮತ್ತು ಬರ ಎರಡನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯವಿದೆ.

ಇತ್ತೀಚೆಗಿನ ವರದಿಯಂತೆ ಕರ್ನಾಟಕ, ದೇಶದ ಎರಡನೆಯ ದೊಡ್ಡ ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದೆ. 13 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಂತರ್ಜಲ ಬತ್ತಿ, ಕೃಷಿಗಿರಲಿ ಕುಡಿಯಲೂ ನೀರಿಲ್ಲದೇ ಜನ ತತ್ತರಿಸುತ್ತಿದ್ದಾರೆ. ಇನ್ನೊಂದೆಡೆ ಪ್ರವಾಹದಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಹಾಗಿದ್ದರೆ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ, ಮಳೇ ಮಾರುತಗಳು ದಿಕ್ಕನ್ನು ಬದಲಿಸಿವೆಯಷ್ಟೇ! ಮಳೆಯನ್ನು ಸೆಳೆಯಲು, ಅಂತರ್ಜಲ ಪ್ರಮಾಣ ಹೆಚ್ಚಿಸಲು ಈಗಲಾದರೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ಪರಿಣಾಮಗಳು ಇನ್ನಷ್ಟು ಘೋರವಾಗಬಹುದು. ಬಯಲುಸೀಮೆಯ ಜನರ ದಾಹ ತಣಿಸಲು ಎತ್ತಿನಹೊಳೆ ಯೋಜನೆ, ನೇತ್ರಾವತಿ ತಿರುವು ಯೋಜನೆ, ಪರಮಶಿವಯ್ಯ ವರದಿಯ ಅನುಷ್ಠಾನ….. ಹೀಗೆ ಸಾವಿರಾರು ಕೋಟಿಗಳ, ಅಪಾರ ಪ್ರಮಾಣದ ಕಾಡು ನಾಶದ, ಹಲವಾರು ವರ್ಷಗಳ ಕಾಮಗಾರಿಯ ಯೋಜನೆಗಳ ಪ್ರಸ್ತಾವನೆಗಳನ್ನು ತರಾತುರಿಯಾಗಿ ಪರಿಶೀಲಿಸಿ, ಸರ್ಕಾರ ಹಣವನ್ನು ಬಿಡುಗಡೆ ಮಾಡಲು ಕಾತುರವಾಗಿದೆ.

ಆದರೆ ಈ ಯೋಜನೆಗಳ ಕಾರಸ್ಥಾನವಾದ ಪಶ್ಚಿಮಘಟ್ಟದಲ್ಲಿ ಈಗಾಗಲೇ ನಡೆದಿರುವ ಹಲವಾರು ಅವೈಜ್ಞಾನಿಕ ಅಭಿವೃದ್ಧಿ water-manಕೆಲಸಗಳಿಂದ ಅಪಾರ ಪ್ರಮಾಣದ ಕಾಡು ನಾಶವಾಗಿದೆ. ಅಪರೂಪದ ಸಸ್ಯರಾಶಿ, ವನ್ಯಜೀವಿಗಳು ನಾಶವಾಗಿದ್ದರೆ, ಇನ್ನೂ ಕೆಲವು ಅಳಿವಿನ ಅಂಚಿನಲ್ಲಿವೆ. ಒತ್ತುವರಿಯಿಂದಾಗಿ ವನ್ಯಮೃಗಗಳು ಕಾಡಿನಂಚಿನ ನಾಡಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಹಾನಿಯೂ ಆಗುತ್ತಿದೆ. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿರದೇ ಮನುಷ್ಯ ಕೇಂದ್ರಿತವಾಗಿದ್ದರೆ ಇಂತಹ ಪ್ರಮಾದಗಳಾಗುತ್ತವೆ. ಅಂತರ್ಜಲ ಮರುಪೂರಣಕ್ಕೆ ರಾಜಸ್ಥಾನದ ಮರುಭೂಮಿಯಲ್ಲಿ ರಾಜೇಂದ್ರಸಿಂಗ್, ಲಕ್ಷ್ಮಣಸಿಂಗ್ ನಡೆಸಿದ ಪರ್ಯಾಯ ನೀರು ಸಂಗ್ರಹಣೆಯ, ಮಳೆಯ ಮರುಸೃಷ್ಟಿಯ, ಪ್ರಕೃತಿಯಿಂದಲೇ ಪ್ರಕೃತಿಯನ್ನು ಹುಟ್ಟಿಸುವ ನೈಸರ್ಗಿಕ ಮತ್ತು ಶಾಶ್ವತ ಪ್ರಯೋಗಗಳು ಬಯಲುಸೀಮೆಯಲ್ಲಿ ಆಗಬೇಕೇ ಹೊರತು ಉಳಿದಿರುವ ಕಾಡನ್ನು ಛಿದ್ರಮಾಡಿಯಲ್ಲ ಎಂಬುದನ್ನು ಯುವಶಕ್ತಿಯೇ ಮನದಟ್ಟು ಮಾಡಿಕೊಡುವ ಸಂದರ್ಭ ಈಗ ಬಂದಿದೆ.

2 thoughts on “ಯುವ ರಾಜೇಂದ್ರಸಿಂಗ್ ಕಂಡ ನೀರಿನ ಕನಸು

Leave a Reply

Your email address will not be published. Required fields are marked *