Daily Archives: September 25, 2013

ಭಾರತಕ್ಕೆ ಬೇಕಾಗಿರುವುದಾದರೂ ಏನು?

– ಎಮ್.ಸಿ.ಡೋಂಗ್ರೆ

ನಾವೀಗ ಸಂದಿಗ್ಧ ಕಾಲಘಟ್ಟದಲ್ಲಿ ನಿಂತಿದ್ದೇವೆ. 1991 ರಲ್ಲಿ ಆರಂಭಗೊಂಡ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಬಗ್ಗೆ ಇದ್ದ ಭ್ರಮೆಗಳು ಒಂದೊಂದಾಗಿ ಕಳಚಿಬೀಳುತ್ತಿದ್ದು ಅಮೇರಿಕಾ ಹಾಗೂ ಇತರ ಬಂಡವಾಳಶಾಹೀ ರಾಷ್ಟ್ರಗಳ ಸ್ವಾರ್ಥಪರ ಸಂಚುಗಳು ಒಂದೊಂದಾಗಿ Globalizationನಮಗೆಲ್ಲರಿಗೂ ಅರಿವಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014 ರ ಸಾರ್ವತ್ರಿಕ ಚುನಾವಣೆಯು ಬಹಳ ಪ್ರಾಮುಖ್ಯತೆಯನ್ನು ಪಡೆಯಲಿದೆ.

ದೇಶದ ಜನತೆಯ ಮುಂದೆ “ನಮ್ಮ ಮುಂದಿನ ಪ್ರಧಾನಿ ಯಾರು?” ಎಂಬ ಪ್ರಶ್ನೆಯನ್ನಿಡುವುದರ ಬದಲು “ನಮ್ಮ ಮುಂದಿನ ನೀತಿಗಳು ಏನಾಗಿರಬೇಕು?” ಎಂಬ ಪ್ರಶ್ನೆಯನ್ನಿಡುವುದು ಈಗಿನ ತುರ್ತುಸ್ಥಿತಿಯಾಗಿರುತ್ತದೆ. ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ ವಿಶ್ವಬ್ಯಾಂಕ್ ಪ್ರಣೀತ ನೀತಿಗಳನ್ನು ಅನುಷ್ಟಾನಗೊಳಿಸುವಲ್ಲಿ ಪರಸ್ಪರ ಪೈಪೋಟಿಯಲ್ಲಿ ನಿರತರಾಗಿದ್ದು ಇವರಲ್ಲಿ ಯಾರು ಗೆದ್ದು ಬಂದರೂ ಸಹ ಅಮೇರಿಕಾ ಅಥವಾ ಇತರ ಯುರೋಪಿಯನ್ ದೇಶಗಳಿಗೆ ಆತಂಕವಿಲ್ಲ. ಭಾರತದ ಈ ಎರಡೂ ಬಣಗಳೂ ಅಮೇರಿಕಾದ ಆಜ್ಞಾನುವರ್ತಿಗಳಾಗಿರುತ್ತಾರೆ-ಇದರಲ್ಲಿ ಯಾವ ಸಂಶಯವೂ ಇಲ್ಲ.

ಹಾಗಾದರೆ ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ನಾವು ಯೋಚಿಸಬೇಕಾಗಿದೆಯೇ ವಿನಹ ಪಾಶ್ಚಿಮಾತ್ಯ ದೇಶಗಳ ಸಂಚಿಗೆ ಬಲಿಯಾಗಿ ಈಗಿನ ಕಾಂಗ್ರೆಸ್ ಅಥವಾ ಮೋದಿ-ಇವರಿಬ್ಬರಲ್ಲಿ ಒಬ್ಬರನ್ನು ಅಧಿಕಾರಕ್ಕೆ ತರುವ ಗಾಳಕ್ಕೆ ಬೀಳಬಾರದು. ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ಮೊದಲು ಅರಿಯಬೇಕು.

ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ FDI ಯನ್ನು ಭಾರತಕ್ಕೆ ತರುವುದರಲ್ಲಿ, ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುವುದರಲ್ಲಿ ನಿರತರಾಗಿದ್ದಾರೆ. ನಮ್ಮಿಂದ ಬೇರೆ ದೇಶಗಳಿಗೆ ಜ್ಞಾನದ ಹಾಗೂ ವಸ್ತುಗಳ ಮಾರಾಟವಾಗಬೇಕು. ಭಾರತದ ಸಾಮರ್ಥ್ಯದ Investment ಬೇರೆಡೆಗೆ, ಅನ್ಯರನ್ನು ಶೋಷಣೆಗೈಯ್ಯದೇ, ನಮ್ಮ ದೇಶಕ್ಕೆ ಲಾಭ ತರುವ ನಿಟ್ಟಿನಲ್ಲಿ ಆಗಬೇಕಾಗಿದೆ. ನಮಗೆ ಬೇಕಾಗಿರುವುದು ಪರ್ಯಾಯ ನೀತಿಗಳೇ ವಿನಹ ಪರ್ಯಾಯ ಪಕ್ಷಗಳಲ್ಲ!!

ಯಾವಾಗ ದೇಶದ ಜನ ಹಸಿವಿನಿಂದ ಬಳಲುವ ಪ್ರಸಂಗ ಇರುವುದಿಲ್ಲವೋ, ಯಾವಾಗ ದೇಶದಲ್ಲಿ ಜನ ವಿದ್ಯಾವಂತರಾಗಿರುತ್ತಾರೋ, ಎಲ್ಲಿ ಗಂಡು-ಹೆಣ್ಣುಗಳ ನಡುವೆ ತಾರತಮ್ಯವಿರುವುದಿಲ್ಲವೋ, ಯಾವಾಗ ದೇಶದಲ್ಲಿ ನಿರಂತರ ಉದ್ಯೋಗ ಸೃಷ್ಟಿಯಾಗುತ್ತಿರುತ್ತದೋ, ಯಾವಾಗ ದೇಶದಲ್ಲಿ ಕೋಮು ಗಲಭೆಗಳು ಇರುವುದಿಲ್ಲವೋ, ಎಲ್ಲಿ ಆರ್.ಎಸ್.ಎಸ್., ಭಜರಂಗ ದಳ ಅಥವಾ ಶ್ರೀ ರಾಮಸೇನೆಯಂತಹ ಬೇಜಬ್ದಾರೀ ಸಂಘಟನೆಗಳು ಇರುವುದಿಲ್ಲವೋ, india-poverty-hungerಎಲ್ಲಿ ಮುಸ್ಲಿಂ ಧಾರ್ಮಿಕ ಮತಾಂಧರಿಗೆ ಬೆಳೆಯಲು ಅವಕಾಶಗಳನ್ನು ತೊಡೆದುಹಾಕಲಾಗುತ್ತದೋ-ಆಗ ಮಾತ್ರ ಭಾರತ ಬೆಳೆಯಲು ಸಾಧ್ಯ.

ಭಾರತಕ್ಕೆ ಬೇಕಾಗಿರುವುದು ಏನು ಎಂಬುದನ್ನು ಅರಿಯುವ ಮೊದಲು ಈಗ ಭಾರತ ಏನಾಗಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ಜಾಗತಿಕ ಹಸಿವಿನ ಸೂಚ್ಯಂಕ (2008):
ಹಸಿವಿನ ಜಾಗತಿಕ ಸೂಚ್ಯಂಕ (2008)ರಲ್ಲಿ ಭಾರತದ ದಾಖಲೆ ಅತ್ಯಂತ ಚಿಂತಾಜನಕವಾಗಿದೆ. 88 ದೇಶಗಳ ಪಟ್ಟಿಯಲ್ಲಿ ಭಾರತ 66 ನೇ ಸ್ಥಾನದಲ್ಲಿದೆ. ಹಸಿವಿನ ಜಾಗತಿಕ ಸೂಚ್ಯಂಕ (2008) ರಲ್ಲಿ ಭಾರತವು 23.70% ಅಂಕಗಳನ್ನು ಪಡೆದು “ಅತಿ ಗಂಭೀರ” ಎಂಬ ಹಣೆಪಟ್ಟಿಯನ್ನು ತನ್ನದಾಗಿಸಿದೆ. ಹಸಿವಿನ ಜಾಗತಿಕ ಸೂಚ್ಯಂಕ (2012)ರಲ್ಲಿ ಭಾರತ ಪಡೆದಿರುವ ಅಂಕ 22.90% ಅಂದರೆ, ಈಗಲೂ ಅದೇ “ಹಣೆಬರಹ”.

ಭಾರತದ ಹಸಿವಿನ ಸೂಚ್ಯಂಕ (2008) ರ ಪ್ರಕಾರ (ಇದಕ್ಕಿಂತ ಈಚಿನ ಅಂಕಿ-ಅಂಶಗಳು ಇಲ್ಲ) ನಮ್ಮ ದೇಶದ 17 ರಾಜ್ಯಗಳ ಸ್ಥಿತಿ-ಗತಿಗಳನ್ನು ಗಮನಿಸೋಣ.

ರಾಜ್ಯ ಅಪೌಷ್ಟಿಕತೆಯಿಂದ ನರಳುವವರು (ಅಲ್ಲಿಯ ಜನಸಂಖ್ಯೆಯ ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ underweight ಮಕ್ಕಳ (ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವನ್ನಪ್ಪುವವರ ಶೇಕಡಾವಾರು ಸಂಖ್ಯೆ ಹಸಿವಿನ ಸೂಚ್ಯಂಕ ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ
ಪಂಜಾಬ್ 11.1 24.6 5.2 13.63 1
ಕೇರಳ 28.6 22.7 1.6 17.63 2
ಆಂಧ್ರ ಪ್ರದೇಶ 19.6 32.7 6.3 19.53 3
ಅಸ್ಸಾಂ 14.6 36.4 8.5 19.83 4
ಹರಿಯಾಣ 15.1 39.7 5.2 20.00 5
ತಮಿಳುನಾಡು 29.1 30.0 3.5 20.87 6
ರಾಜಾಸ್ಥಾನ್ 14.0 40.0 8.5 20.97 7
ಪಶ್ಚಿಮ ಬಂಗಾಳ 18.5 38.5 5.9 20.97 8
ಉತ್ತರ ಪ್ರದೇಶ 14.5 42.3 9.6 22.13 9
ಮಹಾರಾಷ್ಟ್ರ 27.0 36.7 4.7 22.80 10
ಕರ್ನಾಟಕ 28.0 37.6 5.5 23.73 11
ಓರಿಸ್ಸಾ 21.4 40.9 9.1 23.80 12
ಗುಜರಾತ್ 23.3 44.7 6.1 24.70 13
ಛತ್ತೀಸ್ ಘರ್ 23.3 47.6 9.0 26.63 14
ಬಿಹಾರ್ 17.3 56.1 8.5 27.30 15
ಝಾರ್ ಖಂಡ್ 19.6 57.1 9.3 28.67 16
ಮಧ್ಯ ಪ್ರದೇಶ್ 23.4 59.8 9.4 30.87 17
ಭಾರತ 20.0 42.5 7.4 23.30

ಅಂದರೆ ಪಂಜಾಬ್ ರಾಜ್ಯವು ಭಾರತದ ರಾಜ್ಯಗಳ ಪೈಕಿ ಸ್ವಲ್ಪ ಉತ್ತಮ ಬೆಳವಣಿಗೆಯನ್ನು ಹೊಂದಿದೆ ಹಾಗೂ ಮಧ್ಯ ಪ್ರದೇಶದ ಸ್ಥಿತಿ ಅತ್ಯಂತ ಹೀನವಾಗಿದೆ. ಜಾಗತಿಕ ಮಟ್ಟದಲ್ಲಿ ಇಥಿಯೋಪಿಯಾಗೆ ಮಧ್ಯಪ್ರದೇಶದ ಸ್ಥಿತಿ ಇದೆ. ನಿಕಾರಾಗುವ ಹಾಗೂ ಘಾನಾಗಳ ಸಾಲಿಗೆ ಪಂಜಾಬ್, ಕೇರಳ, ಆಂಧ್ರ ಹಾಗೂ ಅಸ್ಸಾಂ ಸೇರಿದರೆ, ಉಳಿದ ರಾಜ್ಯಗಳ ಪರಿಸ್ಥಿತಿ “ಅತಿ ಗಂಭೀರ” (Alarming) ಸ್ಥಿತಿಯಲ್ಲಿದೆ.

ಒಂದು ರಾಜ್ಯದ ಅಭಿವೃದ್ಧೀ ದರ ಹೆಚ್ಚಾಗಿದೆ ಎಂದಾಕ್ಷಣ ಅಲ್ಲಿಯ ಜನರಿಗೆ ಸಂಪತ್ತಿನ ಹಂಚಿಕೆಯು ಸಮರ್ಪಕವಾಗಿದೆ ಎಂದಾಗುವುದಿಲ್ಲ. ಅಥವಾ ಒಂದು ರಾಜ್ಯವು ಅತಿ ಹೆಚ್ಚಿನ FDI ಯನ್ನು ತನ್ನದಾಗಿಸಿದೆ (ಉದಾ: ಮಹಾರಾಷ್ಟ್ರ) ಎಂದಾಕ್ಷಣ ಅಲ್ಲಿಯ ಜನ ಹಸಿವು ಇತ್ಯಾದಿಗಳಿಂದ ಮುಕ್ತರಾಗಿರುತ್ತಾರೆ ಎನ್ನುವುದೂ ಸಹ ಸರಿಯಲ್ಲ.
ಅಂದರೆ ಸಂಪತ್ತನ್ನು ಸರಿಯಾಗಿ, ಎಲ್ಲರಿಗೂ ಸಮನಾಗಿ ಹಂಚುವ ನೀತಿಯನ್ನು ಜಾರೀ ತರುವ ನೀತಿಯುಳ್ಳವರು ನಮಗೆ ಬೇಕಾಗಿದ್ದಾರೆಯೇ ವಿನಹ ಬರೀ “ಅಭಿವೃದ್ಧಿ ದರ”ಗಳ ಲೆಕ್ಕಾಚಾರದ ಮಂಕುಬೂದಿಯನ್ನು ಎರಚುವವರಲ್ಲ.

ಭ್ರಷ್ಟಾಚಾರದ ನಿಗ್ರಹ:

ಜಾಗತಿಕ ಮಟ್ಟದ Corruption Perception Index (2012) ರ ಪಟ್ಟಿಯಲ್ಲಿ 178 ದೇಶಗಳ ನಡುವೆ ಭಾರತಕ್ಕೆ 94ನೇ ಸ್ಥಾನ. corruption-india-democracyಅಂದರೆ ಅತ್ಯಂತ ಭ್ರಷ್ಟ ದೇಶಗಳಲ್ಲಿ ಭಾರತವೂ ಸಹ ಒಂದು. 1998 ರಲ್ಲಿ 66 ನೇ ಸ್ಥಾನ, 2000 ನೇ ಇಸವಿಯಲ್ಲಿ 69 ನೇ ಸ್ಥಾನ, 2004 ರಲ್ಲಿ 90 ನೇ ಸ್ಥಾನ, 2008 ರಲ್ಲಿ 85 ನೇ ಸ್ಥಾನ!!.
ಅನೈತಿಕತೆಗೆ, ಕಪ್ಪುಹಣದ ವೃದ್ಧಿಗೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗೆ ಭ್ರಷ್ಟಾಚಾರವೂ ಸಹ ಒಂದು ಕಾರಣ. ವ್ಯಕ್ತಿಗತ ಭ್ರಷ್ಟಾಚಾರಗಳು ಹಾಗೂ ರಾಜಕೀಯ ಭ್ರಷ್ಟಾಚಾರ ಇವೆರಡನ್ನೂ ನಿಯಂತ್ರಣದಲ್ಲಿಡಬಲ್ಲ ಪರ್ಯಾಯ ರಾಜಕೀಯ ನಾಯಕತ್ವದ ಅವಶ್ಯಕತೆ ನಮಗೆ ಬಹಳವಿದೆ.

ಭ್ರಷ್ಟಾಚಾರ = ಅವಕಾಶಗಳು-ತಡೆಗಳು.
ಸರಿಯಾದ ತಡೆಗಳಿಲ್ಲದಿದ್ದಲ್ಲಿ ಭ್ರಷ್ಟಾಚಾರವು ಮಿತಿ ಮೀರುವುದು ಸಹಜ.

  • ಆರ್ಥಿಕ ಸಂಕಷ್ಟ ಅಥವಾ ಅನಿಶ್ಚಿತತೆಯಲ್ಲಿ ತೊಳಲುವ ಪ್ರಜೆಗಳು ಭ್ರಷ್ಟಾಚಾರದ ಕುಕೃತ್ಯದಲ್ಲಿ ತೊಡಗುತ್ತಾರೆ. ಗುಮಾಸ್ತರು, ಪೋಲೀಸರು, ನ್ಯಾಯಾಧೀಶರು, ಸರ್ಕಾರೀ ಡಾಕ್ಟರುಗಳು, ರಾಜಕೀಯ ವ್ಯಕ್ತಿಗಳು ಆರ್ಥಿಕವಾಗಿ ಒಳ್ಳೆಯ ಮಟ್ಟದಲ್ಲಿದ್ದಲ್ಲಿ ಅವರು ಭ್ರಷ್ಟಾಚಾರದಲ್ಲಿ ತೊಡಗುವುದು ಎಷ್ಟೋ ಕಮ್ಮಿಯಾಗುತ್ತದೆ. ಹೀಗಾಗಿ ಇವರೆಲ್ಲರಿಗೆ ಅತ್ಯಾಕರ್ಷಕ ವೇತನವನ್ನು ನೀಡುವುದು ಬಹಳ ಮುಖ್ಯವಾಗಿದೆ.
  • ಚುನಾವಣೆಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಹೊರುವುದು ಬಹಳ ಉತ್ತಮವಾದ ನಡೆಯಾಗಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದಲ್ಲಿ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿ ಅಭಿವೃದ್ಧೀ ಕೆಲಸಗಳು ಜಾರಿಯಾದ್ದಲ್ಲಿ ಅಲ್ಲಿಯ ವಿಧಾಸಸಭಾ ಸದಸ್ಯನಿಗೆ ಹಾಗೂ ಲೋಕಸಭಾ ಸದಸ್ಯನಿಗೆ ಪ್ರೋತ್ಸಾಹ-ಧನವನ್ನು ಕೊಡುವ ವ್ಯವಸ್ಥೆಯನ್ನು ತರಬೇಕು.
  • ಯಾವ, ಯಾವ ಇಲಾಖೆ/ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಅನುಮಾನಗಳು, ಆರೋಪಗಳು ಅಥವಾ ಅನಿಸಿಕೆಗಳು ಇರುತ್ತವೆಯೋ ಅಂತಹ ಇಲಾಖೆ ಅಥವಾ ಕ್ಷೇತ್ರಗಳ ಕುರಿತು ಅಧ್ಯಯನ ತಂಡಗಳನ್ನು, ಆಡಿಟ್ ಸಂಸ್ಥೆಗಳನ್ನು ಅಗಿಂದಾಗ್ಗೆ ಕಳುಹಿಸಿ ವಾಸ್ತವಗಳನ್ನು ಗೊತ್ತುಪಡಿಸಿಕೊಳ್ಳುವುದು ಆಗಬೇಕು ಅಲ್ಲದೇ ಸ್ವಯಂ-ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಇಂತಹ ಇಲಾಖೆ/ಕ್ಷೇತಗಳ ಕುರಿತು ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
  • ಸಾಧ್ಯವಾದೆಡೆಯಲ್ಲೆಲ್ಲ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ (E-governance) ಕೆಲಸಗಳು ಆಗುವಂತೇ ವ್ಯವಸ್ಥೆಯನ್ನು ತರಬೇಕು.

1991 ರ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣವನ್ನು ಒಳಗೊಂಡ ಹೊಸ ಆರ್ಥಿಕ ನೀತಿಯ ನಂತರ ದೇಶದಲ್ಲಿ ಭ್ರಷ್ಟಾಚಾರವು ಎಲ್ಲೆ ಮೀರಿರುವುದನ್ನು ನೋಡಬಹುದು. ಬಹುರಾಷ್ಟ್ರೀಯ ಕಂಪೆನಿಗಳು ಎಷ್ಟು ಕೋಟಿ ಹಣವನ್ನು ಬೇಕಾದರೂ ನೀಡಲು ತಯಾರಾಗಿರುವುದೇ ಮುಖ್ಯ ಕಾರಣ.

ಸಾರ್ವಜನಿಕ ಕ್ಷೇತ್ರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಸಿ, ಭ್ರಷ್ಟಾಚಾರದ ವಿರುದ್ಧ ಸಮರ್ಪಕ ತಡೆಗಳನ್ನು ನಿರ್ಮಿಸಿ, ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವೆದೇ ನಮ್ಮ ಮುಂದಿರುವ ಮಾರ್ಗ.

ತನ್ನ ರಾಜ್ಯದಲ್ಲಿ ಅನೇಕ ವರ್ಷಗಳಿಂದ “ಲೋಕಾಯುಕ್ತ”ರನ್ನು ನೇಮಿಸದ, ಕರ್ನಾಟಕದ “ಕಳಂಕಿತ” ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನು ಅಧಿಕಾರ-ಲಾಲಸೆಯಿಂದ ಪುನಹ ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂಜರಿಯದ ಹಾಗೂ ರಾಜ್ಯಯಂತ್ರವನ್ನು ಒಂದು ವರ್ಗದ ಜನರನ್ನು ಕೊಲೆ ಮಾಡಲು ಉಪಯೋಗಿಸಿದ ಮಾನ್ಯ ನರೇಂದ್ರ ಮೋದಿಯಿಂದ ಇದೆಲ್ಲವನ್ನು ಅಪೇಕ್ಷಿಸುವುದು ಒಂದು ದುಸ್ಸಾಹಸವೇ ಸರಿ.

ವಿದೇಶಾಂಗ ನೀತಿ :

ಭಾರತವು ತನ್ನ “ಅಲಿಪ್ತ ನೀತಿ”ಗೆ ಹೆಸರುವಾಸಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಯಾಯಗಳನ್ನು ವಿರೋಧಿಸುವ ನೈತಿಕತೆಯನ್ನು ಭಾರತವು ಬೆಳೆಸಿಕೊಂಡು ಬಂದಿತ್ತು. ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ನೆಹರೂರವರ ಮುತ್ಸದ್ದೀತನದ ಪರಿಣಾಮವೇ ನಮ್ಮ ವಿದೇಶಾಂಗ ನೀತಿಯಾಗಿತ್ತು. ಸೋವಿಯತ್ ಯೂನಿಯನ್ನಿನ ಪತನಾನಂತರ “ಭಾರತದ ಅಲಿಪ್ತ ನೀತಿ”ಯು ತನ್ನ ಕೊನೆಯನ್ನು ಕಂಡಿರುತ್ತದೆ.

ಈಗ ಭಾರತದ ವಿದೇಶಾಂಗ ನೀತಿಯ ಪ್ರಮುಖ ಗುರಿಯು ತನ್ನ ಸುತ್ತಮುತ್ತಲಿನ ದೇಶಗಳೊಡನೆ ಪರಸ್ಪರ ವಿಶ್ವಾಸ ಮತ್ತು ಸ್ನೇಹದ ಸಂಬಂಧಗಳನ್ನು ಬೆಳೆಸಿ ಮುಂದುವರಿಸುವುದು ಹಾಗೂ ಅಮೇರಿಕಾ ಮತ್ತು ಇತರ ಯುರೋಪಿಯನ್ ದೇಶಗಳಿಂದ ಭಾರತಕ್ಕೆ ಉಪಯೋಗವಾಗುವ ರೀತಿಯಲ್ಲಿ Nehruಸಂಬಂಧಗಳನ್ನು ಜೋಡಿಸುವುದು ಇವು ಬಹಳ ಪ್ರಮುಖವಾದದ್ದಾಗಿದೆ.

ಈ ಹಿನ್ನೆಲೆಯಲ್ಲಿ ತನ್ನ ನೆರೆಯ ಪಾಕಿಸ್ತಾನ್ ಅಥವಾ ಚೀನದಿಂದ ಎಷ್ಟೇ provocation ಗಳು ಬಂದರೂ ಸಂಯಮವನ್ನು ಭಾರತವು ಕಾಪಾಡಿಕೊಂಡು ಬಂದಿದೆ. ಈಗಿನ ವಿದೇಶಾಂಗ ನೀತಿಯು ಭವಿಷ್ಯದಲ್ಲಿ ಭಾರತಕ್ಕೆ ಅತ್ಯಂತ ಉಪಯೋಗಕ್ಕೆ ಬರುವುದರಲ್ಲಿ ಸಂಶಯವಿಲ್ಲ.

ಭಾರತವು ಅತ್ಯಂತ ನಾಜೂಕಿನ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಯುದ್ಧಕ್ಕೆ ತಳ್ಳಲು ಅನೇಕ ಶಕ್ತಿಗಳು ಪ್ರಯತ್ನಪಡುತ್ತಿವೆ. ಅತ್ಯಂತ ತಾಳ್ಮೆಯನ್ನು ಪ್ರದರ್ಶಿಸುವ ಕಾಲ ಇದಾಗಿದ್ದು,ಭಾರತವು ಈ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಬಲ್ಲದು-ಈಗಿನ ನಾಯಕತ್ವದ ಚಿಂತನೆಗಳು ಮುಂದುವರಿದರೆ ಮಾತ್ರ ಇದು ಸಾಧ್ಯ.

ಮಾಜಿ ಪ್ರಧಾನಿ ವಾಜಪೇಯೀಯವರು ಇದನ್ನೆಲ್ಲ ಅರ್ಥಮಾಡಿಕೊಂಡಿದ್ದರು ಹಾಗೂ ಆಗ ವಾಜಪೇಯಿಯವರು ಹೇಳಿದಂತೆ ಆರ್.ಎಸ್.ಎಸ್. ಕೇಳುತ್ತಿತ್ತು (ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಸಂಘ ಪರಿವಾರವು “ಸ್ವದೇಶೀ ಜಾಗರಣ ಮಂಚ್‌”ನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತ್ಯಜಿಸಿ ವಿದೇಶೀ ವಸ್ತುಗಳನ್ನು ಹಾಗೂ ವಿದೇಶೀ ಬಂಡವಾಳವನ್ನು ವಿರೋಧಿಸುವುದನ್ನು ಕೈಬಿಟ್ಟಿದ್ದು ಒಂದು ದೊಡ್ಡ ಉದಾಹರಣೆ.) ಆದರೆ ಈಗ ಮೋದಿಯು ಆರ್.ಎಸ್.ಎಸ್ ನ್ನು ಮೀರಿ ನಡೆವಷ್ಟು ಸಮರ್ಥರೇನು?

ಪಂಚಸೂತ್ರಗಳು :

ಈ ಮುಂದೆ ಹೇಳಿರುವ ಪಂಚಸೂತ್ರಗಳು ಮುಂಬರುವ “ಪರ್ಯಾಯ ನೀತಿ”ಗಳ ಅವಿಭಾಜ್ಯ ಅಂಗವಾಗಿದ್ದಲ್ಲಿ ಮಾತ್ರ ಹೊಸ ಭಾರತವನ್ನು ನೋಡಬಹುದು.

  1. ಆಹಾರ ಭದ್ರತಾ ಕಾಯ್ದೆಯನ್ನು ಕೇವಲ ಬಿ.ಪಿ.ಎಲ್.ಕಾರ್ಡುದಾರರಿಗೆ ಮಾತ್ರ ಸೀಮಿತಗೊಳಿಸದೆ ದೇಶದ ಎಲ್ಲ ಜನವಿಭಾಗಕ್ಕೂ ವಿಸ್ತರಿಸುವುದು ಹಾಗೂ ಅದರಲ್ಲಿ ಪರಿಷ್ಕರಣವನ್ನು ಅಳವಡಿಸುವುದು. ಖಾಸಗೀ ಕ್ಷೇತ್ರದಲ್ಲೂ ಸಹ ಮೀಸಲಾತಿಯನ್ನು ಕಡ್ಡಾಯಗೊಳಿಸುವುದು.
  2. ದೇಶದಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಜನಸಂಖ್ಯೆಯ ಕೇವಲ ಶೇಕಡಾ 3 ಮಾತ್ರ. ನಮ್ಮಲ್ಲಿ ಮಿಲಿಯಾಧಿಪತಿ ಹಾಗೂ ಕೋಟ್ಯಾಧಿಪತಿಗಳಿಂದ ಅತಿಹೆಚ್ಚು ಎಂದರೆ ಅವರ ಆದಾಯದ ಕೇವಲ 30%ನ್ನು ಮಾತ್ರ ತೆರಿಗೆಯನ್ನು ಸರ್ಕಾರವು ಸಂಗ್ರಹಿಸುತ್ತಿದ್ದು, ಇದನ್ನು ಬ್ರಿಟನ್, ಸ್ಪೈನ್,ಸ್ವೀಡನ್ ಇತ್ಯಾದಿ ದೇಶಗಳಲ್ಲಿರುವಂತೆ 50%ಗೆ ಏರಿಸುವುದು.
  3. ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವಲ್ಲಿ ಆದ್ಯತೆ ನೀಡುವುದು. ಈ ಕಾರ್ಯವನ್ನು ಖಾಸಗೀಯವರಿಗೆ ವಹಿಸದೇ ಸರ್ಕಾರವೇ ಕೈಗೆತ್ತಿಕೊಳ್ಳುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಜೊತೆ-ಜೊತೆಯಲ್ಲೇ ನಗರ ಪ್ರದೇಶಗಳ ಬದಲು ಗ್ರಾಮಗಳಲ್ಲಿ ಉದ್ಯೋಗ ನಿರ್ಮಾಣದ ವಿಕೇಂದ್ರೀಕರಣ ಯೋಜನೆಗಳನ್ನು ಹಮ್ಮಿಕೊಳ್ಳುವುದು ತನ್ಮೂಲಕ ಗ್ರಾಮಗಳಲ್ಲೂ ಕೊಳ್ಳುವ ಶಕ್ತಿಯನ್ನು ವೃಧ್ಧಿಸುವುದು
  5. ವಸತಿ ಸೌಕರ್ಯವನ್ನು ಆದ್ಯತೆ ಮೇರೆಗೆ ವಿಸ್ತರಿಸುವುದು .