Daily Archives: September 27, 2013

CET ಮತ್ತು ಕಾಮೆಡ್-ಕೆ ಗಳಲ್ಲಿ ಡ್ರಾಪ್‌ಔಟ್ ಅಕ್ರಮ : ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ಅನ್ಯಾಯ


– ರವಿ ಕೃಷ್ಣಾರೆಡ್ದಿ


 

ಇದು ಬಹಳ ವರ್ಷಗಳಿಂದ ನಡೆದು ಬರುತ್ತಿರುವ ಮೋಸ ವಂಚನೆಗಳ ಕರ್ಮಕಾಂಡ. ಸಾರ್ವಜನಿಕರಿಗೆ ಗೊತ್ತಿರಲಿಲ್ಲ ಅಷ್ಟೇ. ಪ್ರತಿವರ್ಷ ನೂರಾರು ಮೆಡಿಕಲ್ ಸೀಟುಗಳನ್ನು ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ವಂಚಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರು ಅಕ್ರಮವಾಗಿ ಮಾರಿಕೊಳ್ಳುವ ಒಂದು ವ್ಯವಸ್ಥಿತ ಜಾಲವೇ ಇಲ್ಲಿದೆ.

ಇದು ಮೊದಲಿಗೆ ಬಯಲಾಗಿದ್ದು 2011 ರಲ್ಲಿ, ಲೇಖಕ ಬೇದ್ರೆ ಮಂಜುನಾಥರವರ ಮೂಲಕ. Bedre-Photoಬೇದ್ರೆ ಮಂಜುನಾಥರವರ ಪ್ರತಿಭಾವಂತ ಮಗನಿಗೆ ಸಿಇಟಿಯಲ್ಲಿ ಎಂಬಿಬಿಎಸ್‌ಗೆ ಉಚಿತ ಸೀಟು ದೊರಕಿತ್ತು. ಆದರೆ ಆ ಹುಡುಗನಿಗೆ ಪಶುವೈದ್ಯಕೀಯ ಓದಲು ಮನಸ್ಸಿತ್ತು. ಅದನ್ನು ಹೇಗೋ ತಿಳಿದುಕೊಂಡ ಖದೀಮರು ಆ ಹುಡುಗನನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿಗಳ ಆಮಿಷ ಒಡ್ಡಿ, ಆತ ತಾವು ಸೂಚಿಸಿದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್‌ಗೆ ಅಡ್ಮಿಷನ್ ಮಾಡಿಕೊಳ್ಳುವಂತೆಯೂ, ಹಾಗೆಯೇ ತನಗೆ ಬೇಕಾದ ಪಶುವೈದ್ಯಕೀಯ ಕೋರ್ಸ್‌ಗೂ ಸೇರಿಕೊಳ್ಳುವಂತೆಯೂ, ಅದಾದ ನಂತರ್ ಸಿಇಟಿ ಕೌನ್ಸೆಲಿಂಗ್ ಮುಗಿಯುತ್ತಿರುವಂತೆ ಮೆಡಿಕಲ್ ಕಾಲೇಜಿನಿಂದ ಡ್ರಾಪ್‌ಔಟ್ ಆಗುವಂತೆಯೂ ಸೂಚಿಸಿತು. ಆಗ ಇದ್ದ ನಿಯಮಗಳ ಪ್ರಕಾರ ಸಿಇಟಿ ಕೌನ್ಸೆಲಿಂಗ್ ಮುಗಿದ ನಂತರ ಹೀಗೆ ಡ್ರಾಪ್‌ಔಟ್ ಆದರೆ ಆ ಖಾಲಿ ಉಳಿಯುವ ಸೀಟು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಸೇರುತ್ತದೆ. ಅದನ್ನವರು ಎಂದಿನಂತೆ ಮಾರುಕಟ್ಟೆ ದರದಲ್ಲಿ ಐವತ್ತು ಲಕ್ಷದಿಂದ ಕೋಟಿ ರೂಪಾಯಿಗಳ ತನಕ ಮಾರಿಕೊಳ್ಳಬಹುದು. ಆದರೆ ಇಂತಹ ವಂಚನೆಯ ಜಾಲಕ್ಕೆ ಬೀಳುವ ಮನಸ್ಸಿಲ್ಲದ ಆ ಹುಡುಗ ತನ್ನ ನೈತಿಕ ಪ್ರಜ್ಞೆಯ ಕಾರಣಕ್ಕೆ ಅಂತಹ ಕೆಲಸ ಮಾಡಲು ನಿರಾಕರಿಸಿದ. ಈ ವಿಷಯ ತಿಳಿದ ಬೇದ್ರೆ ಮಂಜುನಾಥರು ಈ ವಂಚನೆಯ ಜಾಲದ ಬಗ್ಗೆ ಮತ್ತು ಅದರಿಂದ ಅರ್ಹರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪತ್ರಿಕೆಗಳ ವಾಚಕರ ವಾಣಿಗೆ 2011 ಜುಲೈ-ಆಗಸ್ಟ್‌ನಲ್ಲಿ ಪತ್ರ ಬರೆದರು. ಆ ಮೂಲಕ ಅದು ಸಾರ್ವಜನಿಕವಾಗಿ ಬಯಲಾಯಿತು. ನಂತರ ಸಿಇಟಿಯ ಮೂಲಕ ಇಂತಹ ಅಕ್ರಮಗಳು ಮತ್ತು ಮೋಸಗಳು ಆಗದಂತೆ ಕ್ರಮಕೈಗೊಳ್ಳುವ ಘೋಷಣೆಗಳು ಸರ್ಕಾರದ ಕಡೆಯಿಂದ ಆದವು.

bedre-manjunath-cet
ಆದರೆ, ಮುಂದಿನ ವರ್ಷ, ಅಂದರೆ 2012 ರಲ್ಲಿ ಇದರ ತೀವ್ರತೆ ಕಾಣಿಸಿಕೊಂಡಿತು. ರಂಗೋಲಿಯ ಕೆಳಗೆ ತೂರುವ ಮೋಸಗಾರರು ಆ ವರ್ಷ ಸುಮಾರು 800 ಮೆಡಿಕಲ್ ಸೀಟುಗಳನ್ನು ಹೀಗೆ ಡ್ರಾಪ್‌ಔಟ್ ಮಾಡಿಸಿದ್ದರು. ಬದಲಾದ ಸಿಇಟಿ ನಿಯಮಗಳಿಂದಾಗಿ ಮತ್ತು ಹಗರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿದ್ದ ಕಾರಣದಿಂದಾಗಿ ಅನೇಕ ಕಾಲೇಜುಗಳಲ್ಲಿ ಇಂತಹ ಅಕ್ರಮ ಸೀಟುಗಳನ್ನು ತುಂಬಲಾಗಲಿಲ್ಲ. ಆ ಮೂಲಕ ಕೇವಲ ಪ್ರತಿಭಾವಂತರಿಗೆ ಅನ್ಯಾಯವಾಗಿದ್ದೇ ಅಲ್ಲದೆ, ನೂರಾರು ವಿದ್ಯಾರ್ಥಿಗಳು ವೈದ್ಯರಾಗುವ ಅವಕಾಶವನ್ನೇ ನಿರಾಕರಿಸಲಾಯಿತು.

ಇದು ಸಿಇಟಿ ಕತೆ. ಈ ವರ್ಷ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಆದರೆ ಇದು ಕಾಮೆಡ್‌-ಕೆ ಯಲ್ಲೂ ಅವ್ಯಾಹತವಾಗಿ ನಡೆಯುತ್ತ ಬಂದಿದೆ comdekಎಂದು ಇತ್ತೀಚೆಗೆ ತಿಳಿಯಿತು. ನಿಮಗೆ ಗೊತ್ತಿರಬಹುದು, ಕಾಮೆಡ್‌-ಕೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಸಿಇಟಿಯನ್ನು ಧಿಕ್ಕರಿಸಿ ತಮ್ಮ ಪಾಲಿನ ಪೇಮೆಂಟ್ ಸೀಟುಗಳನ್ನು (ಮ್ಯಾನೇಜ್‌ಮೆಂಟ್ ಸೀಟುಗಳನ್ನಲ್ಲ) ತುಂಬಿಕೊಳ್ಳಲು ಮಾಡಿಕೊಂಡ ಒಂದು ತಂತ್ರ. ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾದ ಪೇಮೆಂಟ್ ಸೀಟುಗಳಿಗೆ ನಾವೇ ಪರೀಕ್ಷೆ ಮಾಡಿ ತುಂಬಿಸಿಕೊಳ್ಳುತ್ತೇವೆ ಎಂದು ಖಾಸಗಿ ಕಾಲೇಜುಗಳು ಸಿಇಟಿಗೆ ಪರ್ಯಾಯವಾಗಿ ಇವನ್ನು ನಡೆಸುತ್ತವೆ. ಇಲ್ಲಿಯೂ ಸಹ ಕೆಲವು ಆಡಳಿತ ಮಂಡಳಿಯವರು ಪ್ರತಿಭಾವಂತರಿಗೆ ವಂಚಿಸಿ ಸಿಇಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದಾರೆ.

ಈ ವರ್ಷವೂ ಅದು ಮುಂದುವರೆದಿದೆ. ನಂಬಬಲ್ಲ ಮೂಲಗಳ ಪ್ರಕಾರ ಹೀಗೆ ಡ್ರಾಪ್‌ಔಟ್ ಮಾಡಿಸಿದ ಸುಮಾರು ಹತ್ತು ವೈದ್ಯಕೀಯ ಸೀಟುಗಳಿಗೆ ಜಾತಿ ಸಂಘವೊಂದು ಬೆಂಗಳೂರಿನಲ್ಲಿರುವ ತನ್ನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಇಂದು “ಸ್ಪಾಟ್ ಅಡ್ಮಿಷನ್” ಸಂದರ್ಶನ ನಡೆಸುತ್ತಿದೆ. ಈ ಹತ್ತೂ ಸೀಟುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೋಗಬೇಕಿತ್ತು. ಇದು ಒಂದು ಕಾಲೇಜಿನ ಕತೆ. ರಾಜ್ಯದ ಇತರೆ ಅನೇಕ ಖಾಸಗಿ ಕಾಲೇಜುಗಳಲ್ಲಿ ಹೀಗೆ ಅದೆಷ್ಟು ಸ್ಥಾನಗಳು ಬಿಕರಿ ಆಗುತ್ತಿವೆಯೋ? ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

ಈಗಾಗಲೆ ಇಂಜಿನಿಯರಿಂಗ್, ಮೆಡಿಕಲ್ ಓದುತ್ತಿರುವ ಉತ್ತಮ ಅಂಕ ಪಡೆದಿರುವ ಪ್ರತಿಭಾವಂತ ಹುಡುಗರನ್ನು ಐದತ್ತು ಲಕ್ಷ ಕೊಟ್ಟು ಹಿಡಿದುಕೊಂಡು ಬಂದು ಅವರಿಂದ ಕಾಮೆಡ್-ಕೆ ಪರೀಕ್ಷೆ ಬರೆಸಿ, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿ, ಮತ್ತೆ ಡ್ರಾಪ್‌ಔಟ್ ಮಾಡಿಸುವ ಧಂಧೆ ಮತ್ತು ಅಕ್ರಮದ ಬಗ್ಗೆ ನಗರದ ಸೆಂಟ್ರಲ್ ಪೊಲೀಸ್ ಠಾಣೆಯವರು ವಿಚಾರಣೆ ನಡೆಸಿ ಸಿದ್ದಪಡಿಸಿರುವ ಸುಮಾರು 642 ಪುಟಗಳ ಚಾರ್ಜ್‍ಷೀಟ್ ನನ್ನ ಮುಂದಿದೆ. 2011 ನೇ ಸಾಲಿನಲ್ಲಿ ಕಾಮೆಡ್-ಕೆ ಪರೀಕ್ಷೆ ಬರೆದು ಕೆಂಪೇಗೌಡ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ನಂತರ ಕೊನೆಯ ದಿನಾಂಕದಂದು ಡ್ರಾಪ್‌ಔಟ್ ಆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಡ್ರಾಪ್‌ಔಟ್ ದಂಧೆ ಪತ್ತೆ ಹಚ್ಚಲು ಒಬ್ಬರು ಕೊಟ್ಟ ದೂರಿನ ಆಧಾರದ ಮೇಲೆ kims-chargesheet-1ಪೋಲಿಸರು ಸುಮಾರು 110 ಜನರನ್ನು ವಿಚಾರಣೆಗೆ ಕರೆದು ಸಿದ್ದಪಡಿಸಿದ ದೋಷಾರೋಪಣೆ ಪಟ್ಟಿ ಇದು. ಕೆಳಹಂತದ ನ್ಯಾಯಾಲಯದಲ್ಲಿದ್ದ ಈ ಮೊಕದ್ದಮೆಯ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ ಎನ್ನುವುದು ಸುದ್ದಿ.

ಇಂತಹ ಅಕ್ರಮಗಳು ಹೀಗೆ ಸಾರ್ವಜನಿಕವಾಗಿ ಬಯಲಾಗುತ್ತಿದ್ದರೂ ನಮ್ಮ ಸರ್ಕಾರಗಳ ಕುಸಿದ ನ್ಯಾಯಪ್ರಜ್ಞೆ ಮತ್ತು ನೈತಿಕತೆಯ ಕಾರಣವಾಗಿ ಇದ್ಯಾವುದೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಕೈಸನ್ನೆ-ಬಾಯ್ಸನ್ನೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುತ್ತಿಲ್ಲ. ಅನ್ಯಾಯಕ್ಕೊಳಗಾದ ಪೋಷಕರು ಮತ್ತು ಪ್ರಜ್ಞಾವಂತರು ಎಚ್ಚೆತ್ತುಕೊಂಡು ಈ ಅಕ್ರಮಗಳನ್ನು ಅನ್ಯಾಯಗಳನ್ನು ತಡೆಯಬೇಕಿದೆ.

kims-chargesheet-2

ಹಿಂದೂಧರ್ಮ – ಗೋಮತಿ ಮತ್ತು ಪೆರಿಯಾರ್

 -ಎನ್. ರವಿಕುಮಾರ್, ಶಿವಮೊಗ್ಗ

ಕರ್ನಾಟಕ ವಿಚಾರ ವೇದಿಕೆ ಇತ್ತೀಚೆಗೆ ವಿಚಾರ ಸಂಕಿರಣ ಹಾಗು ಪೆರಿಯಾರ್ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ನಡೆಸುವ ಮೂಲಕ ಈ.ವಿ.ಪೆರಿಯಾರ್ (ಈರೋಡು ವೆಂಕಟಪ್ಪ ರಾಮಸ್ವಾಮಿ ನಾಯ್ಕರ್ : 1879-1973) ವಿಚಾರಧಾರೆಗಳ ಪ್ರಸ್ತುತತೆ ಮತ್ತು periyarಹಿಂದೂ ಧರ್ಮದ ಶ್ರೇಣಿಕೃತ ವ್ಯವಸ್ಥೆಯ ಜೀವಂತಿಕೆಯನ್ನು ಚರ್ಚೆಗೀಡು ಮಾಡಿತು. ದೇಶದಲ್ಲಿಯ ಪ್ರಗತಿಪರ ವಿಚಾರಧಾರೆಗಳಿಗೆ ಹಿನ್ನಡೆಯಾಗುತ್ತಿರುವ ಈ ಆತಂಕದ ವೇಳೆಯಲ್ಲಿ ಪೆರಿಯಾರ್ ಅವರ ವಿಚಾರ ಧಾರೆಗಳು, ಸಾಮಾಜಿಕ ಹೋರಾಟದ ಇತಿಹಾಸಗಳನ್ನು ನೆನಪಿಸುವ, ವಿಚಾರ ಪ್ರಚೋದಿಸುವ, ಅದೇ ಕಾಲಕ್ಕೆ ಹಿಂದೂತ್ವದ ಹೆಸರಿನಲ್ಲಿ ನಡೆದ ಮನುಷ್ಯ ವಿರೋಧಿ ಕೃತ್ಯಗಳನ್ನು ಖಂಡಿಸುವ, ಎಚ್ಚರಿಸುವ ಜವಾಬ್ದಾರಿಯನ್ನು ಕರ್ನಾಟಕ ವಿಚಾರ ವೇದಿಕೆ ಮಾಡಿದೆ.

ಜಾತಿ ನಿರ್ಮೂಲನೆಗಾಗಿ ಕ್ರಾಂತಿಕಾರಿ ಹೋರಾಟವನ್ನೆ ಮಾಡಿದ ಈ.ವಿ. ಪೆರಿಯಾರ್ ಹುಟ್ಟಿದ ತಮಿಳುನಾಡಿನಲ್ಲಿ ವೈರುಧ್ಯವೆಂಬಂತೆ ಇಂದು ಜಾತೀಯತೆಯ, ಹಿಂದೂ ಧರ್ಮದೊಳಗಿನ ಮತೀಯ ದ್ವೇಷ ಹೆಚ್ಚುತ್ತಲೆ ಇದೆ. ಇದು ಪೆರಿಯಾರ್ ಬಿತ್ತಿದ ಬೀಜವಲ್ಲ. ಅಸಹಿಷ್ಣುತೆಯ ಕುಲುಮೆಯೊಳಗೆ ಮೇಲ್ಜಾತಿಗಳ ಮನುಷ್ಯ ದ್ವೇಷದ ಸಾಂಪ್ರಾದಾಯದ ಅಸ್ತಿತ್ವಕ್ಕಾಗಿ ನಡೆಸಿರುವ ಕಟುಕತನಗಳು ಎಂಬುದಕ್ಕೆ ಈ ಹಸಿ ಘಟನೆಯೊಂದೆ ಸಾಕು ಎನಿಸುತ್ತದೆ.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಸೀವಲಪೇರಿ ಗ್ರಾಮದ ಮೇಲ್ಜಾತಿಯ ಹುಡುಗಿ ಗೋಮತಿ ಅದೇ ಗ್ರಾಮದ ದಲಿತ ಹುಡುಗ ಮುರುಗನ್‌ನನ್ನು ಪ್ರೀತಿಸುತ್ತಿದ್ದಳು. ಇದನ್ನು ಸಹಿಸದ ಹುಡುಗಿಯ ಸಹೋದರರು ಒಡಹುಟ್ಟಿದ ಸಹೋದರಿ gomathy-murugan-honour-killingಗೋಮತಿಯ ಗಂಟಲಿಗೆ ಆಸಿಡ್ ಸುರಿದು‍, ಸಾಲದೆಂಬಂತೆ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಅಮಾನುಷವಾಗಿ ಕೊಂದು ಹಾಕಿದರು. (ಸೆ 13, 2013)

ಹಿಂದೂ ಧರ್ಮದೊಳಗಿನ ಜಾತಿಯ ದ್ವೇಷದ ಕೆನ್ನಾಲಿಗೆ ಬರು ಬರುತ್ತಾ ದಲಿತ ಜಾತಿಯನ್ನು ವಿರೋಧಿಸುವುದಿರಲಿ, ದಲಿತರೊಂದಿಗೆ ಸಹಬಾಳ್ವೆ, ಸ್ನೇಹ, ಪ್ರೀತಿ ಬಯಸುವ ತಮ್ಮವರನ್ನು ಕೊಂದು (ಮರ್ಯಾದಾ ಹತ್ಯೆ) ಹಾಕುವ ಅಮಾನುಷತೆ ಹಿಂದೂ ಧರ್ಮಾಭಿಮಾನಿಗಳಲ್ಲಿ ತೆರೆದುಕೊಳ್ಳುತ್ತಿದೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಅಪಾಯಕಾರಿಯಾಗಿದೆ.

ಇಂತಹ ಘಟನೆಗಳು ತಮಿಳುನಾಡಿನಲ್ಲಿ ನಿರಂತರ. ಅವುಗಳಾವು ದೆಹಲಿಯ ದಾಮಿನಿ ಅತ್ಯಾಚಾರ-ಹತ್ಯೆ ಪ್ರಕರಣದಷ್ಟು ಪ್ರಚಾರ ಪಡೆದುಕೊಳ್ಳುತ್ತಿಲ್ಲ. ತಮಿಳುನಾಡಿನಲ್ಲೆ ಪೆರಿಯಾರ್ ನಿಮ್ನ ಜಾತಿ, ಸಮುದಾಯಗಳ ಧ್ವನಿಯಾದವರು. ಹಿಂದೂ ಧರ್ಮದಲ್ಲಿನ ವರ್ಣಾಶ್ರಮ ನೀತಿ, ಶ್ರೇಣಿಕೃತ ಜಾತಿ ವ್ಯವಸ್ಥೆಯ, ಅಮಾನುಷ ಧೋರಣೆಗಳನ್ನು ಅಷ್ಟೆ ಪ್ರಖರವಾಗಿ ಪೆರಿಯಾರ್ ವಿರೋಧಿಸದವರು. ತಮ್ಮ ಹೆಸರಿಗೆ ತಗಲಿಕೊಂಡಿದ್ದ ಜಾತಿ ಸೂಚಕ ’ನಾಯ್ಕರ್’ ಪದವನ್ನು (1929) ಕಿತ್ತಾಕುವ ಮೂಲಕ ಜಾತಿ ರಹಿತ ಸಮಾಜಕ್ಕಾಗಿ ಪಣ ತೊಟ್ಟವರು.

ಹಿಂದೂಸ್ಥಾನದ ಚರಿತ್ರೆಯಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಪೆರಿಯಾರ್ ಸಾಮಾಜಿಕ ನ್ಯಾಯದ Periyar_and_Maniammaiಹೋರಾಟಗಾರನಾಗಿ ಬಹುಜನರಿಗೆ ದನಿಯದವರು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟು ಹಾಕಿದ ಪೆರಿಯಾರ್ ದೇವರು, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು-ಜನಿವಾರಗಳನ್ನು ಕಂಡ ಕಂಡಲ್ಲಿ ಕಿತ್ತೆಸೆಯುವಂತೆ ಕರೆ ನೀಡಿದರು. ಮನುವಾದಿಗಳನ್ನು ವಿರೂಪಗೊಳಿಸದರು. ಅದಕ್ಕೆ ಕಾರಣ ಸ್ಪಷ್ಟವಾಗಿದೆ. ಶತಮಾನಗಳಿಂದಲೂ ಜಾತಿಯ ಹೆಸರಿನಲ್ಲಿ ಈ ದೇಶದ ಬಹು ಜನರನ್ನು ಶಿಕ್ಷಣ-ಮನುಷ್ಯ ಸಹಜ ಸಂಬಂಧಗಳಿಂದಲೂ ದೂರವಿಟ್ಟವರ್‍ಯಾರು? ಇಂದು ಸಾಮಾಜಿಕ ನ್ಯಾಯ, ಸಮಾನತೆ, ಹಕ್ಕುಗಳಿಗಾಗಿ ಹೋರಾಡುವ ಮನಸ್ಸುಗಳಲ್ಲಿ ಕರಗದಷ್ಟು ಇತಿಹಾಸದ ನೋವಿದೆ ಅಥವಾ ನೋವಿನ ಕಾವಿದೆ ಎಂಬುದನ್ನು ಪೆರಿಯಾರ್ ಅವರನ್ನು ವಿರೋಧಿಸುವವರು ಅರ್ಥಮಾಡಿಕೊಳ್ಳಬೇಕು.

ಪೆರಿಯಾರ್ ತಮಿಳುನಾಡಿನಲ್ಲಿಯೆ ಬಹುದೊಡ್ಡ ಸಾಮಾಜಿಕ ಕ್ರಾಂತಿಯನ್ನೆ ಮಾಡಿದವರು. ಜಾತಿ ವಿಷವೃಕ್ಷವನ್ನು ಬುಡ ಮಟ್ಟ ಕಿತ್ತೊಗೆಯಲು ಕೊಡಲಿ ಹಿಡಿದು ನಿಂತವರು. ಜಾತಿ ರಹಿತ ನೆಲೆಯಲ್ಲಿ ಮಹಿಳಾ ಹಕ್ಕು ಕಾಯ್ದೆಯ ಜಾರಿಗೆ 30 ರ ದಶಕದಲ್ಲಿಯೇ ದೊಡ್ಡ ದನಿ ಎತ್ತಿದ ಪೆರಿಯಾರ್ ನಾಡಿನಲ್ಲಿ ಗೋಮತಿ ಎಂಬ ಹೆಣ್ಣು ಮಗಳು ಹಿಂದೂ ಮತದೊಳಗಿನ ಜಾತಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ಜಾತಿ ಕಲಹಕ್ಕೆ ಹಳ್ಳಿಗೆ ಹಳ್ಳಿಯೆ ಉರಿದು ಹೊಗೆಯಾಡುತ್ತಿದೆ. ದಲಿತರನ್ನು ಮುಟ್ಟಿದ್ದಕ್ಕೆ, ಪ್ರಕೃತಿದತ್ತ ಪ್ರೀತಿಯನ್ನು ಸಾರಿದ್ದಕ್ಕೆ, ಮುಗ್ದ ಜೀವಗಳು ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿರುವುದರ ಹಿಂದೆ ಯಾವ ಧರ್ಮದ ದಾರಿ ದೀವಿಗೆ ಇದೆ?

ಭಾರತದಲ್ಲಿನ ಕೋಮು ಗಲಭೆಗಳು ಹಿಂದೂ-ಮುಸ್ಲಿಂರ ನಡುವಿನ ಕ್ರೂರ ಮಾರಾಮಾರಿಯನ್ನೆ ಉಲ್ಲೇಖಿಸಿರುತ್ತವೆ. periyar-ambedkarರಾಜಕೀಯ ಕಾರಣಗಳ ನೆಲೆಯಲ್ಲಿ ಬಹುತೇಕ ನಡೆಯುವ ಈ ಕೋಮುಗಲಭೆಗಳು ಸಾಂದರ್ಭಿಕವಾಗಿ ನಡೆಯತ್ತಿರುತ್ತವೆಯಾದರು, ಹಿಂದೂ ಧರ್ಮದೊಳಗೆ ಇರುವ ಜಾತಿಯ ಒಳಜಗಳ, ಹತ್ಯೆಗಳ ಹಿಂದೆ ಸಾಮಾಜಿಕ ಅಸಮಾನತೆಗಳು ಸದಾ ಕೆಲಸ ಮಾಡುತ್ತಿದೆ. ಇದು ಕೋಮು ಗಲಭೆಗಿಂತ ಹೆಚ್ಚು ಅನಾಹುತವನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೆ ಅಂಬೇಡ್ಕರ್ ಅವರು ’ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಆದರೆ ಹಿಂದೂ ಆಗಿ ಸಾಯಲಾರೆ’ ಎಂದು ಬೌದ್ಧ ಧರ್ಮವನ್ನು ಅನುಸರಿಸಿದ್ದು. ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳನ್ನಷ್ಟೆ ಅಲ್ಲ ಮನುಷ್ಯ ಪ್ರೀತಿಯ ಸಹಜ ಸ್ವಭಾವದ ಎಲ್ಲರಲ್ಲೂ ಬಸವಣ್ಣ, ಬುದ್ಧ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು ಅವರ ವಿಚಾರಧಾರೆಗಳನ್ನು ಪಸರಿಸುವ, ಆ ತಳಪಾಯದಲ್ಲಿ ಮುಂದಿನ ಪೀಳಿಗೆಯನ್ನು ಎಚ್ಚರಿಸುವ ಕೆಲಸ ನಡೆಯಬೇಕು.