ಗೆದ್ದ ರಾಹುಲ್ ಮುಗ್ಗರಿಸಿದ ಪ್ರತಿಪಕ್ಷಗಳು


– ಚಿದಂಬರ ಬೈಕಂಪಾಡಿ


 

ಸದಾ ಮೌನವಾಗಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೌನ ಮುರಿಯುವಂತೆ ಮಾಡುವುದು ಯಾರಿಗೆ ಸಾಧ್ಯವೆನ್ನುವುದು ಈಗ ಜಗತ್ತಿಗೇ ಗೊತ್ತಾಗಿದೆ. ಯಾಕೆಂದರೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಡಾ.ಸಿಂಗ್ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನಂಬರ್ 2 ನಾಯಕ rahul-gandhiರಾಹುಲ್ ಗಾಂಧಿ ಕಳಂಕಿತರನ್ನು ರಕ್ಷಿಸುವ ಕೇಂದ್ರ ಸರ್ಕಾರದ ತರಾತುರಿ ಅಧ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದದ್ದೇ ತಡ ಮೌನ ಮುರಿದು ಹೇಳಿಕೆ ನೀಡಿದ್ದಾರೆ.

ನಿಜ, ಕೇಂದ್ರದ ಯುಪಿಎ ಸರ್ಕಾರ ಕಳಂಕಿತರನ್ನು ರಕ್ಷಿಸಲು ಮುಂದಾಗಿದ್ದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಸುಪ್ರಿಂಕೋರ್ಟ್ ಕ್ರಿಮಿನಲ್ ಜನಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸನ ಸಭೆಗಳಿಂದ ಹೊರಗಿಡಲು ಕೈಗೊಂಡ ಪ್ರಮುಖ ತೀರ್ಮಾನದ ತೀರ್ಪು ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ ಅದು ಹೆಚ್ಚು ದಿನ ಕಾವನ್ನು ಉಳಿಸಿಕೊಳ್ಳಲಿಲ್ಲ. ಸುಪ್ರಿಂಕೋರ್ಟ್ ತೆಗೆದುಕೊಂಡ ಐತಿಹಾಸಿಕ ನಿಲುವಿಗೆ ಪ್ರತಿಯಾಗಿ ಕೇಂದ್ರ ಯುಪಿಎ ಸರ್ಕಾರ ಅಷ್ಟೇ ತರಾತುರಿಯಾಗಿ ಅಧ್ಯಾದೇಶ ಹೊರಡಿಸಿ ಕ್ರಿಮಿನಲ್ ಹಿನ್ನೆಲೆಯ ಪ್ರತಿನಿಧಿಗಳು ಮತ್ತೆ ಅಖಾಡದಲ್ಲಿ ಉಳಿಯುವಂಥ ಚಾಣಾಕ್ಷ ನಡೆಗೆ ಮುಂದಾಯಿತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧ್ಯಾದೇಶಕ್ಕೆ ಸಹಿ ಹಾಕಬಾರದು ಎನ್ನುವ ನಿಲುವು ಸಾರ್ವತ್ರಿಕವಾಗಿ ಜನ ಸಾಮಾನ್ಯರದ್ದಾಗಿತ್ತು. ಆದರೆ ಅವರು ಸಹಿ ಹಾಕುತ್ತಿದ್ದರೋ, ಇಲ್ಲವೋ ಎನ್ನುವುದು ಈಗ ಅಪ್ರಸ್ತುತ. ಯಾಕೆಂದರೆ ಅಧ್ಯಾದೇಶವನ್ನೇ ಯುಪಿಎ ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿ ಆಗಿದೆ. ರಾಷ್ಟ್ರಪತಿಗಳು ನಿಜಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದರು ಒಂದು ವೇಳೆ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯಲು ಮನಸ್ಸು ಮಾಡದೇ ಇದ್ದಿದ್ದರೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಈಗ ಪ್ರತಿಪಕ್ಷಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ಪ್ರತಿಕ್ರಿಯೆಸುತ್ತಿವೆ ರಾಹುಲ್ ಚೀರಾಡಿದ ಮೇಲೆ. ಅಧ್ಯಾದೇಶ ಹಿಂದಕ್ಕೆ ಪಡೆಯುವಂತೆ ಮಾಡಿದ್ದು ಪ್ರತಿಪಕ್ಷಗಳಲ್ಲ ರಾಹುಲ್. ಆಡಳಿತ ಪಕ್ಷದಲ್ಲಿದ್ದರೂ ಪ್ರತಿಪಕ್ಷದ ನಾಯಕರಂತೆ ರಾಹುಲ್ ಕೆಲಸ ಮಾಡಿದರು ಎನ್ನುವುದು ಪ್ರತಿಕ್ಷಗಳ ಟೀಕೆಯೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಪ್ರತಿಪಕ್ಷಗಳು ಅಷ್ಟೇನೂ ಗಂಭೀರವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದವು ಎನ್ನುವಂತಿಲ್ಲ. ಇದಕ್ಕೆ ಕಾರಣ ಸರಳ ಅವರು ಸನ್ಯಾಸಿಗಳಲ್ಲ,Rahul_Gandhi_Ajay_Maken ಅವರಿಗೂ ಅಧಿಕಾರ ಬೇಕು. ಕ್ರಿಮಿನಲ್ ಹಿನ್ನೆಲೆ ಎನ್ನುವುದು ಈಗಿನ ರಾಜಕೀಯಕ್ಕೆ ತೀರಾ ಅಗತ್ಯವಾದ ಮತ್ತು ಹೆಚ್ಚು ಫಲ ತಂದುಕೊಡಬಲ್ಲ ಅರ್ಹತೆ ಎನ್ನುವಂತಾಗಿದೆ. ಕ್ರಿಮಿನಲ್ ಕೇಸುಗಳಿಲ್ಲದ ರಾಜಕಾರಣಿಗಳ ಸಂಖ್ಯೆ ತೀರಾ ವಿರಳ ಎನ್ನುವುದಕ್ಕಿಂತಲೂ ಕ್ರಿಮಿನಲ್ ಕೇಸಿಲ್ಲದವರು ರಾಜಕೀಯಕ್ಕೆ ನಾಲಾಯಕ್ಕು ಎನ್ನುವಂಥ ಭಾವನೆ ನೆಲೆಗೊಂಡಿದೆ. ಆದ್ದರಿಂದಲೇ ಬಿಜೆಪಿ ಸಹಿತ, ಈ ದೇಶದ ಎಲ್ಲಾ ವಿರೋಧಪಕ್ಷಗಳು ಯುಪಿಎ ತರಾತುರಿಯಲ್ಲಿ ತಂದ ಅಧ್ಯಾದೇಶವನ್ನು ಬಹಿರಂಗವಾಗಿ ವಿರೋಧಿಸುವಂಥ ಮನಸ್ಥಿತಿಗೆ ಬರಲಾಗಲಿಲ್ಲ.

ತೋರಿಕೆಗೆ ಲಾಲು ಪ್ರಸಾದ್ ಯಾದವ್ ಮೇಲೆ ಸುಪ್ರೀಂಕೋರ್ಟ್ ತೀರ್ಪು ಮುಳುವಾಗಲಿದೆ ಎನ್ನುವ ಭಾವನೆ ಹುಟ್ಟು ಹಾಕಲಾಯಿತೇ ಹೊರತು ಪ್ರತಿಪಕ್ಷಗಳು ತಮ್ಮಲ್ಲೂ ಇರಬಹುದಾದ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಯುಪಿಎ ಜೊತೆಗೆ ಕೈಜೋಡಿಸಿದ್ದವು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಬಲವಾಗಿ ವಿರೋಧಿಸುತ್ತಿದ್ದಂಥ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರೂ ಕೂಡಾ ಸುಪ್ರೀಂಕೋರ್ಟ್ ತೀರ್ಪಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಮೌನಕ್ಕೆ ಶರಣಾಗಿದ್ದರು. ಪ್ರಧಾನಿಯದ್ದು ನಿರಂತರ ಮೌನ, ಇವರದು ಅನಿರೀಕ್ಷಿತ ಮೌನ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಮತ್ತು ರಾಹುಲ್ ಮಾತಿಗಷ್ಟೇ ಮಣೆ-ಮನ್ನಣೆ ಎನ್ನುವುದು ಗೊತ್ತಿರುವುದರಿಂದ ಮತ್ತೆ ಮತ್ತೆ ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ.

ಈ ದೇಶದಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಯುಪಿಎ ಸರ್ಕಾರದ ಅಧ್ಯಾದೇಶವನ್ನು ಬಹಿರಂಗವಾಗಿ, ಖಡಾಖಂಡಿತವಾಗಿ ವಿರೋಧಿಸುವಂಥ ಎದೆಗಾರಿಕೆ ತೋರಿಸಲ್ಲಿಲ್ಲ ಎನುವುದು ಎಷ್ಟು ಸತ್ಯವೋ ಸುಪ್ರೀಂಕೋರ್ಟ್ ತೀರ್ಪನ್ನು ಆತ್ಮಪೂರ್ವಕವಾಗಿ ಸ್ವಾಗತಿಸಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಾಧ್ಯಮಗಳು ಕೂಡಾ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿ ಗಮನ ಸೆಳೆದವು, ಯುಪಿಎ ಸರ್ಕಾರ ಹೊರಡಿಸಿದ ಅಧ್ಯಾದೇಶವನ್ನು ವ್ಯಾಪಕವಾಗಿ ಪ್ರಚಾರ ಮಾಡಿದವು. ರಾಹುಲ್ ಗಾಂಧಿ ಈ ಅಧ್ಯಾದೇಶವನ್ನು ಹರಿದು ಬಿಸಾಡಿ ಎನ್ನುವ ತನಕವೂ ಕೇವಲ ಒಂದು ಸುದ್ದಿಯಾಗಿ ನೋಡಿದ ಮಾಧ್ಯಮಗಳು ಈಗ ತಾವೂ ಎಡವಟ್ಟು ಮಾಡಿದೆವು ಎನ್ನುವ ಮನಸ್ಥಿತಿಗೆ ಬಂದಿವೆ.

ರಾಹುಲ್ ಗಾಂಧಿ ಅಧ್ಯಾದೇಶವನ್ನು ವಿರೋಧಿಸಿರುವುದು ಅದನ್ನು ಕಸದ ಬುಟಿಗೆ ಹಾಕಿಸಿರುವುದು ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಒಂದು ಪ್ರಬಲ ರಾಜಕೀಯ ತಂತ್ರಗಾರಿಕೆಯ ನಡೆ ಎನ್ನುವುದನ್ನು ಯಾರೇ ಆದರೂ ಒಪ್ಪಿಕೊಳ್ಳಲೇ ಬೇಕು. ರಾಜಕಾರಣದಲ್ಲಿ ಸಕ್ರಿಯರಾಗಿರುವ advani-sushma-jaitleyರಾಹುಲ್ ಗಾಂಧಿ ಅವರಿಂದ ರಾಜಕೀಯ ನಡೆಗಳನ್ನು ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದಾದರೆ ಅವರು ಅರಿವಿದ್ದೇ ಅಧ್ಯಾದೇಶದ ಬಗ್ಗೆ ಮೌನ ವಹಿಸಿರಬಹುದು, ಈಗ ಉದ್ದೇಶಪೂರ್ವಕವಾಗಿ ಅದನ್ನು ವಿರೋಧಿಸಿರಬಹುದು. ವಾಸ್ತವ ಈ ಅಧ್ಯಾದೇಶದಿಂದ ರಾಜಕೀಯದಲ್ಲಿರುವವರಿಗೆ ನಡುಕವಾಗಿರುವುದು ಮತ್ತು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿರುವುದು.

ಪ್ರತಿಪಕ್ಷಗಳು ಮಾಡಬೇಕಿದ್ದ ಕೆಲಸವನ್ನು ತಮ್ಮ ಸರ್ಕಾರದ ಮುಂಚೂಣಿಯಲ್ಲಿರುವ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ ಎನ್ನುವುದಾದರೆ ಅದು ಅವರ ಮುಂದಿನ ರಾಜಕೀಯದ ನಡೆಗೆ ದಿಕ್ಸೂಚಿ. ರಾಹುಲ್ ಗಾಂಧಿ ತಮ್ಮ ಪಕ್ಷದ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರಬಹುದು, ಆದರೆ ಮತದಾರರ ಮನಗೆದ್ದಿದ್ದಾರೆ, ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾದ ಸನ್ನಿವೇಶವಿತ್ತು. ರಾಹುಲ್ ಗಾಂಧಿ ಗುಟುರು ಹಾಕಿರುವುದರಿಂದ ಅಂಥವರಿಗೆ ಹಿನ್ನಡೆಯಾಗಿದೆ. ಆದರೆ ಈಗ ರಾಜಕೀಯದಲ್ಲಿ ಹೊಸರಕ್ತದ ಹರಿವಿಗೆ ಅವಕಾಶ ಸಿಕ್ಕಿದರೂ ಸಿಗಬಹುದು ಎನ್ನುವ ಆಶಾಭಾವನೆ ಮೂಡುತ್ತಿದೆ.

ಸುಪ್ರೀಂಕೋರ್ಟ್ ತೀರ್ಪು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಬಲ ಅಸ್ತ್ರವಾಗುತ್ತಿತ್ತು ಬಳಸಿಕೊಂಡಿದ್ದರೆ, ಆದರೆ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿಬಿಟ್ಟವು. ಕಾಂಗ್ರೆಸ್ ಯುವರಾಜ ಈಗ ಚಾಲಾಕಿತನ ತೋರಿಸಿ ಸಂಚಲನ ಉಂಟು ಮಾಡಿದ್ದಾರೆ. ಈಗ ಉಂಟಾಗಿರುವ ಸಂಚಲನ ಯುಪಿಎ ಸರ್ಕಾರಕ್ಕಿಂತಲೂ ಪ್ರತಿಪಕ್ಷಗಳಿಗೆ ಆತಂಕ ತಂದಿದೆ. ಒಂದು ವೇಳೆ ಸುಪ್ರೀಂ ತೀರ್ಪು ಸುಪ್ರೀಂ ಆಗಿಯೇ ಮುಂದಿನ ಚುನಾವಣೆಯಲ್ಲಿ ಚಾಲ್ತಿಯಲ್ಲಿದ್ದರೆ ರಾಹುಲ್ ಹೀರೋ ಆಗುವುದನ್ನು ಅಷ್ಟು ಸುಲಭವಾಗಿ ತಪ್ಪಿಸಲಾಗದು.

6 comments

  1. ನಿಜ, ಇದರಿಂದ ರಾಹುಲ್ ಗಾಂಧಿಯವರು ನಮ್ಮ ಫೇಕೇಶ್ವರರಿಗಿಂತ ದೊಡ್ದ ಹೀರೋ ಆದರು. ಎಷ್ಟಂದರೂ ಅವರು ನಮ್ಮ ಯುವರಾಜರು. ( ಯುವರಾಜ ಎನ್ನುವುದ ನಮ್ಮ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಲ್ಲ. ಆದರೆ ಯಾರನ್ನಾದರೂ ಯುವರಾಜ ಎಂದು ಕರೆಯುವುದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ)

  2. Lol…he became a laughing stock…where was he all these days? It was his mom and PM who passed the ordinance.. Where was he until it went to President? Was he sleeping? He could have voiced this long back..at-least before it went to President. Real here is people who protested it and media who highlighted our protest….Congress had no choice… Isn’t it very clear… 🙂

  3. ಭ್ರಷ್ಟಾಚಾರದ ವಿರುದ್ಧ ದಿಟ್ಟ ಹಾಗೂ ಖಡಕ್ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ಕಾರಣ ಕಾಂಗ್ರೆಸ್ ಪಕ್ಷದ ವಿರುದ್ಧ ದೇಶಾದ್ಯಂತ ಭಾರೀ ಜನಾಕ್ರೋಶ ರೂಪುಗೊಂಡಿದೆ ಅದರಲ್ಲೂ ಮುಖ್ಯವಾಗಿ ಯುವಜನಾಂಗ ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ಹೊಂದಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಎಂದು ಕಾಂಗ್ರೆಸ್ಸಿನಲ್ಲಿ ಇರುವವರು ಭ್ರಷ್ಟಾಚಾರ ನಿಯಂತ್ರಣದ ಬಗೆಗಾಗಲೀ, ಉತ್ತಮ ಆಡಳಿತ ನೀಡುವ ಬಗೆಗಾಗಲೀ ಕಾಳಜಿ ಹೊಂದಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿಯೂ ವಲಸಿಗ ಕಾಂಗ್ರೆಸ್ಸಿಗ ಸಿದ್ಧರಾಮಯ್ಯನವರ ಸ್ವಚ್ಛ ವ್ಯಕ್ತಿತ್ವದ ಕಾರಣ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಯಿತು. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸಿ ಸಿದ್ಧರಾಮಯ್ಯನವರಿಗೆ ಆಡಳಿತದಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡಬೇಕಾದ ಅಗತ್ಯ ಇದೆ. ಇಲ್ಲದೆ ಹೋದರೆ ಕಾಂಗ್ರೆಸ್ ಪಕ್ಷವು ಹಿನ್ನಡ ಅನುಭವಿಸಬೇಕಾದೀತು. ಪೋಲೀಸರ ವರ್ಗಾವಣೆಯಲ್ಲಿ ಸಿದ್ಧರಾಮಯ್ಯನವರು ಶಾಸಕರ ಲಾಬಿಗಳಿಗೆ ಮಣಿಯದೆ ದಿಟ್ಟ ನಿರ್ಧಾರ ಕೈಗೊಂಡಿದ್ದರೂ ಅದನ್ನು ಈಗ ಶಾಸಕರ ಬೆದರಿಕೆಗೆ ಮಣಿದು ತಡೆ ಹಿಡಿಯಲಾಗಿದೆ. ಗಣಿ ಹಗರಣದಲ್ಲಿ ಪಾಲುಗೊಂಡಿರುವ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳದಂತೆ ಸಿದ್ಧರಾಮಯ್ಯನವರ ಕೈಗಳನ್ನು ಮೂಲ ಕಾಂಗ್ರೆಸ್ಸಿಗರು ಕಟ್ಟಿ ಹಾಕಿರುವಂತೆ ಕಾಣುತ್ತದೆ. ಈ ಕೈಗಳನ್ನು ಕಾಂಗ್ರೆಸ್ ಹೈಕಮಾಂಡ್ ಬಿಡಿಸಿ ಸಿದ್ಧರಾಮಯ್ಯನವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶ ನೀಡುವುದು ಪಕ್ಷದ ಹಿತದೃಷ್ಟಿಯಿಂದ ಹಾಗೂ ನಾಡಿನ ಹಿತದೃಷ್ಟಿಯಿಂದ ಅಗತ್ಯ. ಅಧಿಕಾರ ಹೋದರೆ ಹೋಗಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂಬ ದಿಟ್ಟ ನಿಲುವನ್ನು ಕಾಂಗ್ರೆಸ್ ಪಕ್ಷವು ತಳೆಯದಿರುವುದೇ ಅದರ ದೊಡ್ಡ ದೌರ್ಬಲ್ಯ. ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡು ಅಧಿಕಾರ ಹೋದರೆ ಹೋಗಲಿ ಎಂಬ ದಿಟ್ಟ ನಿಲುವನ್ನು ತೆಗೆದುಕೊಂಡರೆ ಅದುವೇ ಮರಳಿ ಪ್ರಾಮಾಣಿಕ ವ್ಯಕ್ತಿಗಳನ್ನು ಚುನಾವಣೆಗೆ ನಿಲ್ಲಿಸಿ ಮುಂದಿನ ಚುನಾವಣೆ ಗೆಲ್ಲಿಸಲು ಸಹಾಯಕವಾದೀತು. ಅಂಥ ದಿಟ್ಟ ನಿಲುವನ್ನು ತೆಗೆದುಕೊಳ್ಳುವ ನೈತಿಕ ಸ್ಥೈರ್ಯವನ್ನು ರಾಹುಲ್ ಗಾಂಧಿ ತೋರಿಸಿಲ್ಲ.

  4. ರಾಹುಲ್ ಗಾಂಧಿ ವಿರೋಧಿಸಿದಷ್ಟೇ ನಿಷ್ಠವಾಗಿ ಅದು ಯುಪಿಎ ಸರ್ಕಾರದ ನಿಲುವಾಗಿ ಪರಿವರ್ತಿಸುವಲ್ಲಿಯೂ ಬಹುದೊಡ್ಡ ಪಾತ್ರ ವಹಿಸಬೇಕಾಗಿದೆ. ಆಗ ಅವರು ಹೀರೋ ಆಗಬಹುದೇನೋ!

  5. ಸುಗ್ರೀವಾಜ್ಞೆ ಹೊರಡಿಸುವವರೆಗೂ ಸುಮ್ಮನಿದ್ದು, ಈಗ ಮಾಧ್ಯಮದ ಮುಂದೆ ಅದನ್ನು ವಿರೋಧಿಸಿರುವುದು ಅತ್ಯಂತ ರಾಜಕೀಯ ಚಾಣಾಕ್ಷತನ, ಹಾಗೂ ಇದರಿಂದಾಗಿ ಅವರು ಜನರ ಕಣ್ಣಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ ಎಂಬ ಮಾತು ನಿಜಕ್ಕೂ ಬಾಲಿಷ. ರಾಜಾಶ್ರಯದಲ್ಲಿರುವ ಆಸ್ಥಾನ ಪಂಡಿತರಲ್ಲ, ಅವರ ಹಿಂಬದಿಯೇ ಕೂರುವ ವಿದೂಷಕರಿಗೂ ಈ ನಗೆಪಾಟಲಿನ ಮಾತನಾಡುವುದು ಸಾಧ್ಯವಿರಲಿಕ್ಕಿಲ್ಲ.

Leave a Reply

Your email address will not be published.