ಮಾಟ-ಮಂತ್ರ ನಿಷೇಧಿಸುವ ಜೊತೆ ಜೊತೆಗೆ ವೈಚಾರಿಕತೆ ಬೆಳಸಿ!

– ಬಿ.ಜಿ.ಗೋಪಾಲಕೃಷ್ಣ

ಮಾಟ-ಮಂತ್ರ ನಿಷೇಧಿಸುವ ಕಾನೂನು ಜಾರಿಮಾಡುವ ಜೊತೆ ಜೊತೆಯಲ್ಲಿ, ಸಮಾಜದಲ್ಲಿ ವೈಚಾರಿಕತೆಯನ್ನೂ ಬೆಳಸಬೇಕಾಗಿದೆ. ಮಾನಸಿಕ ಖಿನ್ನತೆಯಿಂದ ಹೂರ ಬರಲು ದೆವ್ವ, ಭೂತ ಬಿಡಿಸುವವರ ಮೂರೆ ಹೋಗುತ್ತಿದ್ದವರು, ಆ ದಾರಿಯೂ ಮುಚ್ಚಿದಾಗ ಮತ್ತಷ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

ಅಕ್ಷರದಿಂದ ವಂಚಿತರಾಗಿ ಪ್ರಾಪಂಚಿಕ ಜ್ಞಾನವಿಲ್ಲದೇ ಅಂಧಾಕಾರದಯಲ್ಲಿರುವ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತಿ dhabolkarಭಯಭೀತರನ್ನಾಗಿಸಿ ಅವರ ತೊಳಲಾಟದಲ್ಲಿ ತಮ್ಮ ಹೊಟ್ಟೆ ಹೊರೆಯುತ್ತಿರುವ ಸ್ವಯಂಘೋಷಿತ ದೇವಮಾನವರ ಉಪಟಳಕ್ಕೆ ಕಡಿವಾಣ ಹಾಕಲು ಹೊರಟಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ.

ಭಾರತೀಯರನ್ನು ತಲತಲಾಂತರದಿಂದ ಕಾಡುತ್ತಿರುವ ಅಂಧಶ್ರದ್ಧೆ , ಬಾನಾಮತಿ, ಮಾಟ-ಮಂತ್ರ , ಪವಾಡ, ವಶೀಕರಣ, ಜ್ಯೋತಿಷ್ಯ, ಮೂಢನಂಬಿಕೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ದೇವಸ್ಥಾನಗಳಿಗೆ ಶೂದ್ರರಿಗೆ, ದಲಿತರಿಗೆ ಮತ್ತು ಸ್ತ್ರೀಯರಿಗೆ ಪ್ರವೇಶ ನಿರಾಕರಣೆ, ಪಾದಪೂಜೆ, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಸ್ತ್ರೀಯರ ನೈಸರ್ಗಿಕ ಕ್ರಿಯೆಗಳಿಗಾಗಿ ಊರಾಚೆ ಇರಿಸುವುದು. ಹೀಗೆ ಹತ್ತು ಹಲವು ಅನಿಷ್ಟ ಪದ್ಧತಿಗಳು ಜನಮಾನಸದಲ್ಲಿ ಮನೆ ಮಾಡಿ, ಕುಬ್ಜ ಮಾನವನನ್ನು ಮತ್ತಷ್ಟು ಕುಬ್ಜನನ್ನಾಗಿಸುತ್ತಿವೆ.

ಜನಸಾಮಾನ್ಯರನ್ನು ಮೌಢ್ಯತೆಯಿಂದ ಹೊರತರಲು ಅನೇಕ ಸಂಘ ಸಂಸ್ಥೆಗಳು ಶ್ರಮಿಸುತ್ತಿವೆಯಾದರೂ ರಾಜಕೀಯ ಇಚ್ಛಾಶಕ್ತಿಯ ಮುಂದೆ ಎಲ್ಲವೂ ಶೂನ್ಯವೇ ಸರಿ. ಈ ಒಂದು ನಿಟ್ಟಿನಲ್ಲಿ ಸರ್ಕಾರವೇ ಮುಂದಾಗಿ ಕಾನೂನು ರೂಪಿಸುತ್ತಿರುವುದು ಪ್ರಶಂಸನೀಯ ಸಂಗತಿ.

ಅಕ್ಷರಸ್ಥರೂ ಅಂಧಶ್ರದ್ಧೆಯ ಮೊರೆ ಹೋಗುತ್ತಾರೆಂದರೆ ಅದು ಪಾಪಪ್ರಜ್ಞೆಯಿಂದಲೇ ಹೊರತು ಬೇರೇನೂ ಇರಲಾರದು. ಒಬ್ಬ ಮನುಜ ಈ ಜಗತ್ತಿನಲ್ಲಿ ಹುಟ್ಟಿದಾಗ ಅವನೊಬ್ಬ ಪಾಪ-ಪುಣ್ಯಗಳಿಲ್ಲದ ಪರಿಪೂರ್ಣ ವ್ಯಕ್ತಿತ್ವದವನಾಗೇ ಇರುತ್ತಾನೆ. ನಂತರದ ದಿನಗಳಲ್ಲಿ ಅವನಲ್ಲಿ ಪಾಪಪ್ರಜ್ಞೆ ಕಾಡುತ್ತಿದೆ ಎಂದರೆ, ಆ ಪಾಪದ ಕೆಲಸವನ್ನು ಈ ಭೂಮಿಯ ಮೇಲೆ ಅವತರಿಸಿದ ನಂತರವಷ್ಟೇ ಮಾಡಿರಲು ಸಾಧ್ಯ. ಅವನ ಕರ್ಮದ ಫಲವೇ ಅವನಲ್ಲಿ ಪಾಪಪ್ರಜ್ಞೆ ಕಾಡಲು ಆರಂಭಿಸುತ್ತದೆ. ಅದರ ಪ್ರತಿಫಲವೇ ಅಂಧಶ್ರದ್ಧೆಯ ಮೂರೆ ಹೋಗುತ್ತಾನೆ. ಇಲ್ಲವಾದಲ್ಲಿ ಈ ಸಮಾಜ ಅಥವಾ superstitionsನಮ್ಮ ಸುತ್ತಮುತ್ತಲಿನ ಬಂಧು-ಮಿತ್ರರು ಅವನ/ಅವಳನ್ನು ನಡೆಸಿಕೊಂಡ ರೀತಿ ಅಥವಾ ಹೇರಿದ ಮಾನಸಿಕ ಒತ್ತಡಗಳೂ ಕಾರಣವಾಗಿರುವ ಸಾಧ್ಯತೆ ಇದೆ. ಅಂತಹವರಿಗೆ ಮಾನಸಿಕ ತಜ್ಞರ ಸಲಹೆ ಸೂಚನೆ ಅಥವಾ ಚಿಕಿತ್ಸೆಗಳು ಅವಶ್ಯಕತೆ ಇರುತ್ತದೆಯೇ ಹೊರತು, ದೆವ್ವ-ಭೂತ ಬಿಡಿಸುವ ದುಷ್ಟ ರಾಕ್ಷಸರ ಚಿಕಿತ್ಸೆಯಲ್ಲ.

ಇಂದಿನ ವಿದ್ಯಾರ್ಥಿಗಳು ವಿಜ್ಞಾನವನ್ನು ಒಂದು ಪಠ್ಯಕ್ರಮವನ್ನಾಗಿ ಆಭ್ಯಾಸಿಸುತ್ತಿದ್ದಾರೆಯೇ ಹೊರತು, ವಸ್ತುನಿಷ್ಠವಾಗಿ ಆಭ್ಯಾಸಿಸದೇ ಇರುವುದು ಜನಮಾನಸದಲ್ಲಿ ಮೌಢ್ಯತೆ ಮನೆ ಮಾಡಲು ಕಾರಣವಾಗಿದೆ. ವಿಜ್ಞಾನ ಮತ್ತು ಸಾಮಾಜಿಕ ಬದುಕಿನ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ವಿಜ್ಞಾನದ ವಿಧ್ಯಾರ್ಥಿಗಳು ಸಮಾಜಿಕ ವ್ಯವಸ್ಥೆಯ ಇತಿಹಾಸ ವ್ಯಾಸಂಗ ಮಾಡುತ್ತಿಲ್ಲ. ಕಲಾ ವಿದ್ಯಾರ್ಥಿಗಳು ವಿಜ್ಞಾನ ತಿಳಿಯತ್ತಿಲ್ಲ. ಈ ಸಮನ್ವಯದ ಕೊರತೆ ಸಾಮಾಜಿಕ ಆಂಧಕಾರಕ್ಕೆ ಮತ್ತೊಂದು ಪರ್ಯಾಯ ಕಾರಣೀಭೂತವಾಗಿದೆ.

ದೆವ್ವ-ಭೂತ ಬಿಡಿಸುವುದು ವೈಜ್ಞಾನಿಕವೊ ಅವೈಜ್ಞಾನಿಕವೊ ಬೇರೆಯದೇ ವಿಚಾರ, ಮಾನಸಿಕ black-magic-indiaಆಯಾಸದಿಂದ ಬಳಲುತ್ತಿರುವವರನ್ನು ಬೇವಿನಸೊಪ್ಪು ಅಥವಾ ಚಾವಟಿಗಳಿಂದ ಹೊಡೆಯುವುದು, ಕಾದ ಹಲಿಗೆಗಳ ಮೇಲೆ ನಡೆಸುವುದು, ಅರೆಬೆತ್ತಲೆಗೊಳಿಸುವುದು, ಕೊಠಡಿಯ ತುಂಬ ಧೂಮಹಾಕಿ ಉಸಿರಾಟಕ್ಕೆ ತೊಂದರೆ ನೀಡುವುದು, ಮುಖ / ಕಣ್ಣುಗಳ ಮೇಲೆ ಕೈಗೆ ಸಿಕ್ಕಸಿಕ್ಕ ಬೂಧಿ, ಅರಿಷಿಣ, ಕುಂಕುಮ ಎರಚುವುದು, ಈ ಎಲ್ಲಾ ದೈಹಿಕ ಹಿಂಸೆಗಳನ್ನು ಸಹಿಸಲು ಸಾಧ್ಯವಾಗದೆ, ಅಲ್ಲಿಗೆ ಹೋಗಿಬಂದ ಮಾನಸಿಕ ರೋಗಿ ಸಾಮಾನ್ಯ ಸ್ಥಿತಿಗೆ ಬಂದಂತೆ ಕಂಡರೂ ಅದು ಶಾಶ್ವತ ಪರಿಹಾರವಾಗಿರದೆ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗುವ ಅಥವಾ ಶಾಶ್ವತವಾಗಿ ಮನೊರೋಗಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರವೆಂದರೆ ಮನೊವೈದ್ಯರನ್ನು ಕಂಡು ಚಿಕಿತ್ಸೆಕೊಡಿಸಿ, ಆ ರೋಗಿಯ ಪರಿಸರವನ್ನು ಬದಲಾಯಿಸಬೇಕು, ಆ ಪರಿಸರ ನಾವೇ ಆಗಿದ್ದ ಪಕ್ಷದಲ್ಲಿ ನಾವುಗಳು ಬದಲಾಗಬೇಕು.

2 comments

Leave a Reply

Your email address will not be published.