ಜೈಲಿನಲ್ಲಿ ಮಾಜಿ ಮುಖ್ಯಮಂತ್ರಿಗಳು – ಸಂಪೂರ್ಣ ಪತನದಿಂದ ಹಿಂದೆ ಸರಿಯುತ್ತಿರುವ ಭಾರತ


– ರವಿ ಕೃಷ್ಣಾರೆಡ್ದಿ


 

ಹದಿನೇಳು ವರ್ಷಗಳ ಹಿಂದೆ ಬಯಲಿಗೆ ಬಂದ ಹಗರಣ. ಈಗ ಶಿಕ್ಷೆಯಾಗುತ್ತಿದೆ. ಓಮ್ ಪ್ರಕಾಶ್ ಚೌತಾಲ, ಲಾಲೂ ಪ್ರಸಾದ್ ಯಾದವ್; ದೇಶದ ಎರಡು ಮಾಜಿ ಮುಖ್ಯಮಂತ್ರಿಗಳು ಈಗ ಜೈಲಿನಲ್ಲಿದ್ದಾರೆ. ಜಗನ್ನಾಥ್ ಮಿಶ್ರಾ; ಮೂರನೆಯ ಮಾಜಿ ಆಸ್ಪತ್ರೆ-ಆರೋಗ್ಯ ಎಂದು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ತಾವು ಎಂತಹವರನ್ನು ಆರಿಸಿ ಕಳುಹಿಸುತ್ತಿದ್ದೇವೆ ಎಂದು ಜನ ಗಂಭೀರವಾಗಿ lalu_prasad_yadavಯೋಚಿಸಲು ಆರಂಭಿಸಿ ದಶಕಗಳೇ ಆಗಬೇಕಿತ್ತು. ಆಗಲಿಲ್ಲ. ಆಗಿದ್ದಿದ್ದರೆ ಮುಂದಿನ ದಿನಗಳಲ್ಲಿ ಜೈಲಿನ ಹೊಸ್ತಿಲಲ್ಲಿರುವ ಜಯಲಲಿತ, ಯಡ್ಡಯೂರಪ್ಪ, ಇಂತಹವರೆಲ್ಲ ಮತ್ತೊಮ್ಮೆ ಆರಿಸಿ ಬರುತ್ತಿರಲಿಲ್ಲ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಅನಿಲ್ ಲಾಡ್, ಶ್ರೀರಾಮುಲು, ಸಂತೋಷ್ ಲಾಡ್, ಜಗನ್ ಮೋಹನ್ ರೆಡ್ಡಿ, ಕರುಣಾನಿಧಿ ಮತ್ತವರ ಸಂತತಿ, ದೇವೇಗೌಡರ ಮನೆಯ ಒಂದಿಬ್ಬರು, ಇತ್ಯಾದಿ ಇತ್ಯಾದಿ ಅನೇಕ ಜನ ಇಂದು ಮಾಜಿಗಳಾಗಬೇಕಿತ್ತು. ಆಗಿಲ್ಲ ಎಂದುಕೊಂಡರೂ ಇದು ಹೀಗೆಯೇ ಮುಂದುವರೆಯುತ್ತದೆ ಎಂದುಕೊಳ್ಳುವುದು ಬೇಡ.

ಹಿಂದೂಸ್ಥಾನದ ಕ್ರೂರ ಮತ್ತು ಅಮಾನವೀಯ ಜಾತಿವ್ಯವಸ್ಥೆಯಲ್ಲಿ ದಲಿತ, ಹಿಂದುಳಿದ, ಬ್ರಾಹ್ಮಣೇತರ ಜಾತಿಗಳಲ್ಲಿ ಸ್ವಾಭಿಮಾನದ ಕಿಚ್ಚು ಮತ್ತು ಕೀಳರಿಮೆಯಿಲ್ಲದ ಮನೋಭಾವ ಹುಟ್ಟಿಸಿದವರು ಎನ್ನುವ ಕಾರಣಕ್ಕೆ ಲಾಲೂ ಪ್ರಸಾದ್ ಯಾದವ್, ಮಾಯಾವತಿ, ಮುಲಾಯಮ್ ಸಿಂಗ್ ಯಾದವ್, ಇನ್ನಿತರರು ಒಂದು ಸಂದರ್ಭದಲ್ಲಿ ದೇಶದಲ್ಲಿ ಸಮಾನತೆ ಬಯಸುವ, ಪ್ರಗತಿಪರ ಆಲೋಚನೆಗಳ, ಪ್ರಜಾಪ್ರಭುತ್ವವಾದಿ ಜನರಲ್ಲಿ ಹೆಮ್ಮೆ ಹುಟ್ಟಿಸಿದ್ದು ನಿಜ. ಚಳವಳಿಗಳ ಮೂಲಕ, ವೈಚಾರಿಕತೆಯ ಮೂಲಕ, ಜನಬೆಂಬಲದ ಮೂಲಕ ಅಧಿಕಾರಕ್ಕೆ ಬಂದ ಈ ಜನ ತಮ್ಮ ಮೊದಲ ಚುನಾವಣೆಗಳಲ್ಲಿ ಹಣಬಲವಿಲ್ಲದೆಯೇ ಅಧಿಕಾರಕ್ಕೆ ಬಂದವರು. ಆದರೆ, ಅಧಿಕಾರಕ್ಕೆ ಬಂದನಂತರ ತಾವು ಅಲ್ಲಿಯವರೆಗೆ ಯಾರನ್ನು ಮತ್ತು ಯಾವುದನ್ನು ವಿರೋಧಿಸುತ್ತ ಬಂದಿದ್ದರೋ ಅದನ್ನೇ ತಾವೂ ಪಾಲಿಸಲು ಆರಂಭಿಸಿದ್ದು ಅಕ್ಷಮ್ಯ. ಹಣವಿಲ್ಲದೇ ಗೆದ್ದವರು ಮುಂದಿನ ಚುನಾವಣೆಗಳಲ್ಲಿ ಗೆಲ್ಲಲು ಮತ್ತು ತಮ್ಮ ವೈಯಕ್ತಿಕ ಆಸ್ತಿ ಹೆಚ್ಚಿಸಿಕೊಳ್ಳಲು ಅಧಿಕಾರ ದುರುಪಯೋಗಕ್ಕೆ ಮತ್ತು jds-kumaraswamy-anita-devegowdaಭ್ರಷ್ಟಾಚಾರಕ್ಕೆ ಇಳಿದಿದ್ದು ಅವರ ವೈಯಕ್ತಿಕ ಪತನ ಮಾತ್ರವಲ್ಲ, ದೇಶ ಮುಂದುವರೆಯಲು ಮತ್ತು ಬದಲಾಗಲು ಇದ್ದ ಅತ್ಯುತ್ತಮ ಅವಕಾಶವನ್ನು ಕಳೆದುಹಾಕಿದ ದೌರ್ಭಾಗ್ಯ ಸಹ. ಈ ಕಾರಣಕ್ಕೆ ಅವರು ತಮ್ಮ ಮೇಲಿರುವ ಮೊಕದ್ದಮೆಗಳ ಕಾರಣವಾಗಿ ಕಾನೂನಿನ ಪ್ರಕಾರವೇ ಅಪರಾಧಿಗಳು ಮಾತ್ರವಲ್ಲ, ದೇಶದ ನೈತಿಕತೆಯ ದೃಷ್ಟಿಯಿಂದಲೂ ಅಪರಾಧಿಗಳು.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ದೇಶದ ಬಹುತೇಕ ಜಾತಿವಾದಿ ಮನಸ್ಸುಗಳು ತಮ್ಮ ಜಾತಿಯ ರಾಜಕೀಯ ನಾಯಕರನ್ನಾಗಿ ಆರಿಸಿಕೊಂಡಿರುವ ಜನರ ಹೆಸರು ಕೇಳಿದರೆ ವಾಕರಿಕೆ ಬರುತ್ತದೆ. ತಮ್ಮದೇ ಆದ ಪರಿವಾರ ಮತ್ತು ಸಾಮ್ರಾಜ್ಯವನ್ನು ಕಟ್ಟಿದ, ಪಕ್ಷವನ್ನು ತಮ್ಮ ಮನೆಯ ಆಸ್ತಿ ಮಾಡಿಕೊಂಡಿರುವ ದೇವೇಗೌಡರು ಒಕ್ಕಲಿಗರ ನಾಯಕ. ಕರ್ನಾಟಕ ಕಂಡರಿಯದ ಭ್ರಷ್ಟಾಚಾರ ಎಸಗಿ ವಿಚಾರಣಾಧೀನ ಕೈದಿಯಾಗಿಯೂ ಇದ್ದುಬಂದ ಯಡ್ಡಯೂರಪ್ಪ ಲಿಂಗಾಯತರ ನಾಯಕ. ನ್ಯಾಯ ಮತ್ತು ನೀತಿಯ ಪರಿಜ್ಞಾನಗಳಿರದಿದ್ದ, ಮದತುಂಬಿದ ಮಾತುಗಳನ್ನಾಡುತ್ತಿದ್ದ ಜನಾರ್ಧನ ರೆಡ್ಡಿ ರೆಡ್ಡಿಗಳ ನಾಯಕ. ಪಕ್ಕದ ಆಂಧ್ರದಲ್ಲಿ ಬಹುಶಃ ಇಡೀ ದೇಶದಲ್ಲಿ ಯಾವೊಬ್ಬ ರಾಜಕಾರಣಿಯೂ ಮಾಡದಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡು YS-Jagan-Mohan-Reddy-in-Jailಹತ್ತಾರು ಸಾವಿರ ಕೋಟಿ ರೂಪಾಯಿಗಳ ಆಸ್ತಿ ಮಾಡಿದ ಜಗನ್ ಮೋಹನ್ ರೆಡ್ಡಿ ರೆಡ್ಡಿಗಳ ಪರಮೋಚ್ಚ ನಾಯಕ. ತನ್ನ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ಆಸ್ತಿ ಮಾಡಿದ ಆರೋಪಗಳಿರುವ ಚಂದ್ರಬಾಬು ನಾಯ್ಡು ಕಮ್ಮರ ನಾಯಕ. ಉತ್ತರದಲ್ಲಿ ಪ್ರಜಾಪ್ರಭುತ್ವ ಎಂದರೆ ನನ್ನ ಮನೆಯ ವಂಶಪಾರಂಪರ್ಯ ಆಡಳಿತ ಎನ್ನುವ ಮುಲಾಯಮ್, ಲಾಲೂ, ಯಾದವರ ನಾಯಕರು ಮತ್ತು ಸಾಬೀತಾದ ಭ್ರಷ್ಟರು. ಮರಾಠರ ನಾಯಕ ಪವಾರ್. ಹೀಗೆ, ಯಾವುದೇ ರಾಜ್ಯಕ್ಕೆ ಹೋಗಿ ಅಲ್ಲಿಯ ಬಲಿಷ್ಟ ಜಾತಿಗಳ ನಾಯಕರನ್ನು ನೋಡಿ, ದುಷ್ಟರು, ಭ್ರಷ್ಟರು, ಕಿಡಿಗೇಡಿಗಳು, ಅಪ್ರಬುದ್ಧರು, ಅನಾಗರೀಕರೇ ಆಯಾಯ ಜಾತಿಗಳ ಬಲಿಷ್ಟ ನಾಯಕರಾಗಿದ್ದಾರೆ. ಮೂರ್ನಾಲ್ಕು ದಶಕಗಳ ಹಿಂದೆ ಹೀಗೆ ಇರಲಿಲ್ಲ. ತಮ್ಮ ಜಾತಿಯ ಬಗ್ಗೆ ಹೇಳಬಹುದಾದ/ಹೇಳಿಕೊಳ್ಳಲಾಗದ ಕಾರಣಕ್ಕೆ ಒಲವಿದ್ದ, ನಿಷ್ಠೆಯಿದ್ದ ಜನ ಆದಷ್ಟು ಒಳ್ಳೆಯವರನ್ನು, ಸಜ್ಜನರನ್ನು ತಮ್ಮ ಜಾತಿ-ನಾಯಕನನ್ನಾಗಿ ಒಪ್ಪಿಕೊಳ್ಳುತ್ತಿದ್ದರು.

ಐನ್ ರ್‍ಯಾಂಡ್ ಎನ್ನುವ ಅಮೆರಿಕದ ಲೇಖಕಿ 1957 ರಲ್ಲಿ ಹೀಗೆ ಹೇಳುತ್ತಾಳೆ: “ಯಾವಾಗ ನೀವು ಉತ್ಪಾದನೆ ಮಾಡಲು ಏನನ್ನೂ ಉತ್ಪಾದಿಸದ ಜನರಿಂದ ಒಪ್ಪಿಗೆ ಪಡೆಯಬೇಕಿದೆಯೋ, ಯಾವಾಗ ಹಣವು ವಸ್ತುಗಳ ಮಾರಾಟಗಾರರಿಗೆ ಬದಲಾಗಿ ಅನೈತಿಕವಾಗಿ ಅನುಗ್ರಹಗಳನ್ನು ಮಾರಾಟಮಾಡುವವರತ್ತ ಹರಿಯುತ್ತದೆಯೋ, Ayn-Randಯಾವಾಗ ಜನ ತಮ್ಮ ದುಡಿಮೆಗೆ ಬದಲಾಗಿ ಲಂಚ ಮತ್ತು ತಮಗಿರುವ ಪ್ರಭಾವದ ಕಾರಣಕ್ಕಾಗಿ ಶ್ರೀಮಂತರಾಗುತ್ತಾರೋ, ಮತ್ತು ಯಾವಾಗ ನಿಮ್ಮ ಕಾನೂನುಗಳು ನಿಮ್ಮನ್ನು ಅಂತಹವರಿಂದ ರಕ್ಷಿಸುವುದಿಲ್ಲವೋ. ಮತ್ತು ಅದೇ ಕಾನೂನುಗಳು ಅವರನ್ನು ನಿಮ್ಮಿಂದ ರಕ್ಷಿಸುತ್ತವೆಯೋ, ಯಾವಾಗ ಭ್ರಷ್ಟಾಚಾರಕ್ಕೆ ಪುರಸ್ಕಾರಗಳು ದೊರೆತು ಪ್ರಾಮಾಣಿಕತೆ ಎನ್ನುವುದು ತನ್ನನ್ನೇ ತಾನು ಹಾಳುಮಾಡಿಕೊಳ್ಳುವುದು ಎಂದು ತೋರುತ್ತದೋ, ಅಂದು ಆ ನಿಮ್ಮ ಸಮಾಜ ಪತನವಾಗುತ್ತಿದೆ ಎನ್ನುವುದು ನಿಮಗೆ ಗೊತ್ತಿರಲಿ.”

ನಮ್ಮ ಸಮಾಜ ಪತನದತ್ತ ಬಿರುಸಿನಿಂದ ನಡೆಯಲು ಆರಂಭಿಸಿ ದಶಕಗಳೇ ಆಗಿವೆ. ಆದರೆ, ಕಳೆದ ಎರಡು ಮೂರು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಅನೇಕ ಪರ್ಯಾಯ ವಿದ್ಯಮಾನಗಳು ಅದನ್ನು ಸಂಪೂರ್ಣ ಪತನದಿಂದ ತಡೆಯಲು ಪ್ರಯತ್ನಿಸುವ ಹೋರಾಟಗಳಾಗಿವೆ. ಬುದ್ಧ, ಬಸವಣ್ಣ, ಗಾಂಧಿ, ಪಟೇಲ್, ಅಂಬೇಡ್ಕರ್, ನೆಹರೂ, ಲೋಹಿಯಾ, ಜಯಪ್ರಕಾಶ್ ನಾರಾಯಣರ ಈ ದೇಶ ಅಷ್ಟು ಸುಲಭವಾಗಿ ಕುಬ್ಜತೆಗೆ ಮಂಡಿಯೂರದು. ದಮನಿಸಲಾಗದ ಆತ್ಮಸ್ಥೈರ್ಯ ಈ ದೇಶವನ್ನು ಸಹಸ್ರಾರು ವರ್ಷಗಳಿಂದ ಮಾನವನ ಸಾಮಾಜಿಕ ವಿಕಾಸದ ಯಾತ್ರೆಯಲ್ಲಿ ಬಹುದೊಡ್ಡ ಭಾಗವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಬರುವ ಮತ್ತು ಬದಲಾಗುವ ಕಾನೂನುಗಳು, ಜೈಲಿಗೆ ಹೋಗುವ ದುಷ್ಟರು, ಒಳ್ಳೆಯದರ ಪರ ನಿಲ್ಲುವ ಮನುಷ್ಯನ ಮೂಲಭೂತ ಮನಸ್ಥಿತಿ, ಈ ದೇಶ ಪತನದಿಂದ ಸಂಪೂರ್ಣ ವಿರುದ್ಧ ದಿಕ್ಕಿಗೆ ತಿರುಗುವಂತೆ ಮಾಡುತ್ತವೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಚಲನೆ ರಾಜಕೀಯವನ್ನೂ ಮೇಲೆತ್ತಲಿದೆ. ಒಂದು ಸಂಪೂರ್ಣ ನೈತಿಕ ಕ್ರಾಂತಿಗೆ ದೇಶ ಮುಂದಾಗಲಿದೆ.

ಇಂದು ವಾಸ್ತವ ಏನೇ ಇರಲಿ, ಭಾರತದ ಭವಿಷ್ಯದ ಬಗ್ಗೆ ನನ್ನದೊಂದು ಭವಿಷ್ಯವಿದೆ. ಇವತ್ತು ಯಾರೇ ಮೆರೆಯುತ್ತಿರಲಿ, ಇನ್ನು ಹತ್ತು ವರ್ಷಗಳಿಗೆಲ್ಲ ಜೈಲಿಗೆ ಹೋಗಿಬಂದ ನಾಯಕರುಗಳು ಮತ್ತು ಅವರ ಪರಿವಾರವನ್ನು, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಮೊಕದ್ದಮೆಗಳಿರುವ ಜನಪ್ರತಿನಿಧಿಗಳು ಮತ್ತವರ ಪರಿವಾರವನ್ನು ಜನ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಇಡೀ ಸಮಾಜ ಆ ನಿಲುವಿನತ್ತ ವಿಕಾಸವಾಗುತ್ತಿದೆ. ಮುಂದೆಯೂ ಹೀಗೆಯೆ ಎಂದುಕೊಂಡ ಭ್ರಷ್ಟರು ಮತ್ತು ದುಷ್ಟರಿಗೆ ಭವಿಷ್ಯ ಭಯಾನಕವಾಗಿರುತ್ತದೆ. ಆದರೆ, ಅವರ ಸ್ಥಾನಗಳಿಗೆ ಬರುವವರು ಒಳ್ಳೆಯವರಷ್ಟೇ ಅಲ್ಲ, ಸಮರ್ಥರೂ ಆಗಿರುವಂತೆ ನೋಡಿಕೊಳ್ಳುವುದೇ ನಮ್ಮ ಆಗಿನ ಸವಾಲು.

6 thoughts on “ಜೈಲಿನಲ್ಲಿ ಮಾಜಿ ಮುಖ್ಯಮಂತ್ರಿಗಳು – ಸಂಪೂರ್ಣ ಪತನದಿಂದ ಹಿಂದೆ ಸರಿಯುತ್ತಿರುವ ಭಾರತ

  1. Ananda Prasad

    ಭಾರತದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಜಾಪ್ರಭುತ್ವದ ವಿಧಾನದಲ್ಲಿಯೇ ಅವಕಾಶ ಇದೆ. ಜನ ವಿಚಾರವಂತರಾದರೆ ಇದು ಅಸಂಭವವೇನೂ ಅಲ್ಲ. ಗಾಂಧೀಜಿಯವರ ನೇತೃತ್ವದಲ್ಲಿ ಜನತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದಂತೆ ಇಂದು ಜನ ಬದಲಾವಣೆಯನ್ನು ತರಲು ಆಮ್ ಆದ್ಮಿ ಪಕ್ಷದ ಜೊತೆ ಕೈಜೋಡಿಸುತ್ತಿದ್ದಾರೆ. ಇದು ಬದಲಾವಣೆಗೆ ನಾಂದಿ ಹಾಡಲಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷದ ಜೊತೆ ಜನಸಾಮಾನ್ಯರ ಪಾಲುಗೋಳ್ಳುವಿಕೆ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬರುತ್ತ ಇದೆ. ಪಕ್ಷ ಕಟ್ಟಲು, ಚುನಾವಣೆಗೆ ಸ್ಪರ್ಧಿಸಲು ಸ್ವಚ್ಛ ಮೂಲದಿಂದ ಹಾಗೂ ಜನತೆಯ ಪಾಲುದಾರಿಕೆಯಿಂದ ಆಮ್ ಆದ್ಮಿ ಪಕ್ಷವು 12 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಸಂಗ್ರಹಿಸಿದ ಪ್ರತಿಯೊಂದು ಪೈಸೆಗೂ ಲೆಕ್ಕ ಇಡಲಾಗಿದೆ. ಇದು ಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಡೆಯುತ್ತಿದ್ದ ನಿಧಿ ಸಂಗ್ರಹದ ಪಾರದರ್ಶಕತೆಯನ್ನು ಅನುಸರಿಸುತ್ತಿದೆ. ಹೀಗಾಗಿ ಇದು ಇತರೆಲ್ಲಾ ಪಕ್ಷಗಳಿಗಿಂತ ಭಿನ್ನವಾಗಿ ನಿಲ್ಲುವ ತಳಹದಿಯನ್ನು ಹೊಂದಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಹಾಗೂ ದೊಡ್ಡ ಮುದ್ರಣ ಮಾಧ್ಯಮದ ಅಸಹಕಾರ, ಬಂಡವಾಳಶಾಹೀ ಉದ್ಯಮಿಗಳ ಅಸಹಕಾರ, ಅಣ್ಣಾ ಹಜಾರೆ ಹಾಗೂ ತಂಡದ ಇನ್ನಿತರರ ಅಸಹಕಾರದ ನಡುವೆಯೂ ಪ್ರಜಾಪ್ರಭುತ್ವದ ಸುಧಾರಣೆಗೆ ಅರವಿಂದ್ ಕೇಜರಿವಾಲ್ ಹಾಗೂ ತಂಡದವರು ದೇಶಕ್ಕಾಗಿ ಹಗಲಿರುಳು ದುಡಿಯುವ ತಂಡವನ್ನು ಕಟ್ಟುತ್ತಿರುವುದು ಭಾರತದಲ್ಲಿ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಕಂಡುಬರುತ್ತಿದೆ. ದೆಹಲಿಯಲ್ಲಿ ಕಂಡುಬರುತ್ತಿರುವ ಈ ಚಟುವಟಿಕೆ ನಿಧಾನವಾಗಿ ದೇಶಾದ್ಯಂತ ವಿಸ್ತರಿಸಿದರೆ ಇನ್ನು ಹತ್ತು ವರ್ಷಗಳಲ್ಲಿ ಗಮನಾರ್ಹ ಬದಲಾವಣೆ ಅಸಾಧ್ಯವೇನಲ್ಲ. ಜನ ದೇವರು, ಧರ್ಮ, ಗೋಮಾತೆ, ಮಂದಿರ, ಜಾತಿ ಮೊದಲಾದ ರಾಜಕಾರಣವನ್ನು ತಿರಸ್ಕರಿಸುವುದನ್ನು ಕಲಿತರೆ ಬದಲಾವಣೆ ಬೇಗನೆ ತರಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಜನರ ಕೈಯಲ್ಲಿಯೇ ಇದೆ. ಇದಕ್ಕಾಗಿ ಅವರು ಭಾರೀ ಶ್ರಮವನ್ನೇನೂ ಹಾಕಬೇಕಾಗಿಲ್ಲ. ಯೋಗ್ಯ ಪಕ್ಷವನ್ನು, ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಮತ ಹಾಕಿ ತಾವು ಆರಿಸಿದ ಪ್ರತಿನಿಧಿಗಳನ್ನು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರೆ ಸಾಕು. ಇದಕ್ಕೆ ಸೂಕ್ತ ಅಡಿಪಾಯವನ್ನು ಆಮ್ ಆದ್ಮಿ ಪಕ್ಷ ಈಗಾಗಲೇ ಹಾಕಿದೆ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಆದರ್ಶಗಳನ್ನು ಇತರ ಪಕ್ಷಗಳು ಅನುಸರಿಸಲೆಬೇಕಾದ ಪರಿಸ್ಥಿತಿಯನ್ನು ನಿರ್ಮಿಸುವ ಜವಾಬ್ದಾರಿ ಜನರ ಮೇಲೆ ಇದೆ.

    Reply
  2. ಜೆ.ವಿ.ಕಾರ್ಲೊ, ಹಾಸನ

    ಜೈಲಿಗೆ ಹೋಗುತ್ತಿರುವ, ತಾಂತ್ರಿಕ ಕಾರಣಗಳಿಂದ ಹೊಬರುತ್ತಿರುವ ರಾಜಕಾರಣಿಗಳ ಮುಖಗಳನ್ನೊಮ್ಮೆ ನೋಡಿ. ಸ್ವಾತಂತ್ರ ಹೋರಾಟಗಾರರ ಮುಖದ ಮೇಲೂ ಏನೋ ಸಾಧಿಸಿದಂತ ಆ ಗೆಲುವಿನ ಕಳೆ ಕಾಣಿಸುತ್ತಿರಲಿಲ್ಲವೇನೋ!

    Reply
  3. Dilip Mysore Devaraj

    “ಹೋರಾಟದಲ್ಲಿ ಎಲ್ಲರೂ ಒಳ್ಳೆಯವರೇ. ಅವರ ನಿಜವಾದ ಗುಣ ತಿಳಿಯಲು ಅಧಿಕಾರವನ್ನು ಕೊಟ್ಟೆ ನೋಡಬೇಕು”. ಈ ಮಾತು ಲಾಲೂ ಪ್ರಸಾದ್ ಯಾದವ್, ಮಾಯಾವತಿ, ಮುಲಾಯಮ್ ಸಿಂಗ್ ಯಾದವ್ರಿಗೆ ಸರಿಯಾಗಿ ಅನ್ವಯಿಸುತ್ತದೆ.

    Reply

Leave a Reply

Your email address will not be published. Required fields are marked *