Daily Archives: October 3, 2013

ಕಳಂಕಿತರಿಗೆ ಆಕಸ್ಮಿಕ ಹಿನ್ನಡೆ


– ಚಿದಂಬರ ಬೈಕಂಪಾಡಿ


 

ಕಳಂಕಿತರನ್ನು ರಕ್ಷಿಸುವ ಪ್ರಯತ್ನದಲ್ಲಿ ಕೇಂದ್ರ ಯುಪಿಎ ಸರ್ಕಾರ ಎಡವಟ್ಟು ಮಾಡಿಕೊಂಡಿತು. ತಾನೇ ಅವಸರವಾಗಿ ಜಾರಿಗೆ ತರಲುದ್ದೇಶಿಸಿದ್ದ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯುವ ಮೂಲಕ ಸೋಲೊಪ್ಪಿಕೊಂಡಿದೆ.

ನಿಜಕ್ಕೂ ಕಳಂಕಿತರಿಗೆ ಯುಪಿಎ ಸರ್ಕಾರದ ಈ ನಡೆ ಹಿನ್ನಡೆಯಾಗಿದೆ. ಹೇಗಾದರೂ ಸರಿ ತಾವು ಅಧಿಕಾರದಲ್ಲೇ ಉಳಿಯಬೇಕೆಂಬ ಧಾವಂತದ ಜೊತೆಗೆ ತಾವು ಏನೇ ಮಾಡಿದರೂ ಪ್ರಶ್ನಿಸುವಂತಿಲ್ಲ ಎನ್ನುವಂಥ ಮನಸ್ಥಿತಿಗೆ ಕಡಿವಾಣ ಬಿದ್ದಿದೆ.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರಿರುವ ಅರ್ಥಶಾಸ್ತ್ರಪಂಡಿತರು ಹೊರತು ರಾಜಕೀಯ ಪಂಡಿತರಲ್ಲ obama-manamohansinghಎನ್ನುವುದು ಕೂಡಾ ಜಾಗತಿಕವಾಗಿ ಗೊತ್ತಿರುವ ಸಂಗತಿ. ಸೋನಿಯಾ ಗಾಂಧಿ ಅವರ ಇಶಾರೆಯಂತೇ ಕೆಲಸ ಮಾಡುವ ನಿಷ್ಠಾವಂಥರಲ್ಲಿ ಡಾ.ಮನಮೋಹನ್ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ಪಟ್ಟವನ್ನು ಮನಮೋಹನ್ ಸಿಂಗ್ ಅವರ ಬದಲು ಅವರದ್ದೇ ಪಕ್ಷದ ಬೇರೆ ಯಾರಿಗಾದರೂ ಕಟ್ಟುತ್ತಿದ್ದರೆ ಇಷ್ಟುಹೊತ್ತಿಗೆ ಸ್ವತ: ಸೋನಿಯಾ ಅವರನ್ನು ಜೈಲಿಗೆ ಕಳುಹಿಸುತ್ತಿದ್ದರೇನೋ ಎನ್ನುವುದು ಅತಿಶಯೋಕ್ತಿಯಲ್ಲ. ಪ್ರಧಾನಿಯಂಥ ಒಂದೇ ಒಂದು ಅವಕಾಶ ಸಿಕ್ಕಿದರೆ ಅಮರಿಕೊಳ್ಳುತ್ತಿದ್ದರು. ನೆಲ, ಜಲವನ್ನು ಕೊಳ್ಳೆಹೊಡೆಯುವ ಈಗಿನ ಕಾಲದಲ್ಲಿ ಚಿನ್ನದಂಥ ಅವಕಾಶ ಸಿಕ್ಕಿದ್ದರೆ ಇನ್ನಷ್ಟು ಹಗರಣಗಳಿಗೇನೂ ಕೊರತೆಯಾಗುತ್ತಿರಲಿಲ್ಲ. ಆ ಮಟ್ಟಿಗೆ ಸೋನಿಯಾ ಕುಟುಂಬ ಬಚಾವ್ ಮನಮೋಹನ್ ಸಿಂಗ್ ಅವರಿಂದಾಗಿ.

ಕೇಂದ್ರ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆದಿರುವುದು ಒತ್ತಡದ ಕಾರಣಕ್ಕೆ, ಅದರಲ್ಲೂ ಕಾಂಗ್ರೆಸ್ ಯುವರಾಜನ ಕಾರಣಕ್ಕೆ ಎನ್ನುವುದು ಸ್ಪಷ್ಟ. ಈ ನಡೆಯಿಂದ ಯಾರು ಗೆದ್ದರು, ಯಾರು ಬಿದ್ದರು ಎನ್ನುವುದು ಬಹಳ ಮುಖ್ಯವೆನಿಸುತ್ತಿಲ್ಲ. ದೇಶದ ಜನರ ಮುಂದೆ ಕಳಂಕಿತರ ಮುಖಗಳು ಕೊನೆಗೂ ಅನಾವರಣವಾಗಲು ಸಾಧ್ಯವಾಯಿತು.

ಒಂದು ವೇಳೆ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯದೇ ಇದ್ದಿದ್ದರೆ ಎರಡು ಅನಾಹುತಗಳು ಸಂಭವಿಸುತ್ತಿದ್ದವು. Rahul_Gandhi_Ajay_Makenಕಳಂಕಿತರನ್ನು ಮಟ್ಟ ಹಾಕುವುದು ಅಸಾಧ್ಯವಾಗುತ್ತಿತ್ತು. ಕಳಂಕಿತರನ್ನು ರಕ್ಷಣೆ ಮಾಡಿದ ಅಪಕೀರ್ತಿಗೆ ಯುಪಿಎ ಸರ್ಕಾರ ಭಾಗಿಯಾಗುತ್ತಿತ್ತು. ಕಳಂಕಿತರನ್ನು ಚುನಾವಣೆಯಿಂದ ದೂರ ಇಡಬೇಕೆಂದು ಚಿಂತನೆ ಮಾಡಿದ ರಾಜಕಾರಣಿಗಳು ಬಹುಬೇಗ ನೇಪಥ್ಯ ಸೇರಿಕೊಂಡಿದ್ದಾರೆ. ಕಳಂಕಿತರು ತಮ್ಮನ್ನು ದೂರ ಇಡುವ ಮನಸ್ಥಿತಿಯವರನ್ನು ಎಂದೆಂದಿಗೂ ಸಹಿಸುವುದಿಲ್ಲ. ಇದಕ್ಕೆ ಯಾರೂ ಹೊರತಲ್ಲ.

ಯಾವ ರಾಜ್ಯದ ಯಾವ ಪಕ್ಷದ ರಾಜಕಾರಣಿಯ ಚರಿತ್ರೆಯನ್ನು ಅವಲೋಕಿಸಿದರೂ ಒಂದಷ್ಟು ಕಪ್ಪು ಚುಕ್ಕೆಗಳು ಗೋಚರಿಸುತ್ತವೆ. ಖಾದಿಯಷ್ಟೇ ಶುಭ್ರ ಅವರ ಚಾರಿತ್ರ್ಯ ಅಂದುಕೊಳ್ಳುವುದು ಸುಲಭ ಸಾಧ್ಯವಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಗಳು ರಾಜಕೀಯದಲ್ಲಿ ಚಲಾವಣೆಯಲ್ಲಿರಬೇಕಾದರೆ ಅನಿವಾರ್ಯ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹಸಿವೆಯನ್ನು ಸಹಿಸಿಕೊಂಡು ಸುಮ್ಮನಿದ್ದರೂ ಎಂಜಲು ಕೈಯನ್ನು ಮೂತಿಗೆ ಒರೆಸಿ ಹೊಟ್ಟೆತುಂಬಾ ಉಂಡಿರಬೇಕು ಎನ್ನುವಂತೆ ಮಾಡಿಬಿಡುತ್ತಾರೆ ಸ್ವಲ್ಪ ಯಾಮಾರಿದರೂ, ಇದಕ್ಕೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮೇಲಿನ ಆಪಾದನೆಗಳೇ ಸಾಕ್ಷಿ. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ, ಅದು ಈ ಬರಹದ ಉದ್ದೇಶವೂ ಅಲ್ಲ. ಜಿ ಕೆಟಗರಿ ಸೈಟಿನಿಂದ ಹಿಡಿದು ಅರಣ್ಯ, ಕೆರೆ, ಗೋಮಾಳ ಒತ್ತುವರಿ ತನಕ ತಮ್ಮವರ ಹೆಸರಲ್ಲಿ ಕಬ್ಜ ಮಾಡಿಕೊಂಡಿರುವ ರಾಜಕಾರಣಿಗಳನ್ನು ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ಮುಂದೊಂದು ದಿನ ಈ ದೇಶದ ಪ್ರತಿಯೊಂದು ಇಂಚು ಭೂಮಿಯೂ ರಾಜಕಾರಣಿಗಳ ಕುಟುಂಬದವರ ಪಾಲಾಗಿರುತ್ತದೆ. ಭೂಮಿತಿ ಕಾಯಿದೆಯನ್ನು ಜಾರಿಗೆ ತಂದಿದ್ದರೆ ರಾಜಕಾರಣಿಗಳ ಬಣ್ಣ ಬಯಲಾಗುತ್ತಿತ್ತು, ಆದ ಕಾರಣವೇ ಅಂಥ ಕಾಯಿದೆ ಯಾರ ತಲೆಯೊಳಗೆ ಸುಳಿಯದಂತೆ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ದಟ್ಟ ದರಿದ್ರರ ಭೂಮಿಯನ್ನು ಕಬ್ಜ ಮಾಡಿಕೊಂಡವರು ಮಾಧ್ಯಮಗಳ ಬೆಳಕಲ್ಲಿ ಹೊಳೆಯುತ್ತಾರೆ, ಅವರೂ ಸಾಮಾಜಿಕ ನ್ಯಾಯದ ಬಗ್ಗೆ ನೀತಿ ಪಾಠ ಹೇಳುತ್ತಾರೆ. ಇಂಥವರನ್ನು ಅಧ್ಯಾದೇಶ ಜಾರಿಗೆ ತಂದು ರಕ್ಷಣೆ ಮಾಡಿದರೆ ದೇವರು ಮುನಿಸಿಕೊಳ್ಳುತ್ತಿದ್ದ ಖಂಡಿತಕ್ಕೂ. ಯಾಕೆಂದರೆ ದೇವಸ್ಥಾನವನ್ನೇ ಕಬ್ಜ ಮಾಡಿಕೊಂಡ ಉದಾಹರಣೆಗಳು ಕಣ್ಣಮುಂದಿವೆಯಲ್ಲವೇ?

ಪಕ್ಷದ ಅಂಗಿತೊಟ್ಟುಕೊಂಡಿರುವವರು ಅದನ್ನು ಕಳಚಿ ಯೋಚಿಸಿದರೆ ಕಾಂಗ್ರೆಸ್, ಬಿಜೆಪಿ ಅಥವಾ ಮತ್ತೊಂದು ಪಕ್ಷದ ನಡುವೆ shettar-yed-sada-eshwar-ananthಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ ಇಂಥ ವಿಚಾರಗಳಲ್ಲಿ ಅಷ್ಟೇನೂ ವ್ಯತ್ಯಾಸ ಗುರುತಿಸಲಾಗದು. ಯಾಕೆಂದರೆ ಎಲ್ಲರ ಗುರಿ ಒಂದೇ. ವೇಗದಲ್ಲಿ ವ್ಯತ್ಯಾಸವಿರಬಹುದೇ ಹೊರತು ಸಾಗುವ ದಿಕ್ಕು ಎಲ್ಲರದ್ದೂ ಒಂದೇ ಆಗಿರುತ್ತದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು. ಹಂಚಿ ತಿಂದರೆ ಸ್ವರ್ಗ ಸುಖ ಎನ್ನುವುದನ್ನು ಎಲ್ಲರೂ ಅರಿತಿದ್ದಾರೆ. ಆದ್ದರಿಂದಲೇ ದಿಲ್ಲಿಯಿಂದ ಹಿಡಿದು ಬೆಂಗಳೂರು ತನಕ ಅದೆಷ್ಟು ಜನ ರಾಜಕಾರಣಿಗಳು ಜೈಲಲ್ಲಿ ರಾತ್ರಿ ಕಳೆದು ಬರುತ್ತಿದ್ದಾರೆ, ಕೋರ್ಟ್ ಮೆಟ್ಟಿಲು ಹತ್ತಿ-ಇಳಿಯುತ್ತಿದ್ದಾರೆ. ಇಂಥವರನ್ನು ಪ್ರಶ್ನೆ ಮಾಡಬಾರದು, ಪ್ರಶ್ನೆ ಮಾಡುವುದು ತಪ್ಪು ಎನ್ನುವ ಮನಸ್ಥಿತಿಯರನ್ನು ಏನೆಂದು ಕರೆಯಬೇಕು?

ಈ ಅಧ್ಯಾದೇಶ ರದ್ಧಾದ ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಕಳಂಕಿತರನ್ನು ರಕ್ಷಿಸಬೇಕಿತ್ತು ಎನ್ನುವ ಜನರನ್ನು ತುಂಬಾ ಜಾಗರೂಕರಾಗಿ ನೋಡಿ. ಇವರು ಕಳಂಕಿತರಿಗಿಂತಲೂ ಅಪಾಯಕಾರಿಗಳು.