ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರು ಅರ್ಚಕಿಯರಾಗುತ್ತಿರುವುದು…


– ಚಿದಂಬರ ಬೈಕಂಪಾಡಿ


 

ಮಂಗಳೂರು ದಸರಾ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮೂಲಕ ಈಗ ಮನೆ ಮಾತಾಗಿದೆ. ಸಾಮಾಜಿಕ ಸುಧಾರಕ ನಾರಾಯಣಗುರುಗಳ ಮೂಲಕ kudroli-temple-wodows-facilitated-poojaryಸ್ಥಾಪನೆಯಾದ ಈ ಕ್ಷೇತ್ರದಲ್ಲಿ ಈಗ ಬದಲಾವಣೆಯ ಬೆಳಕು ಕಾಣಿಸುತ್ತಿದೆ. ಇತಿಹಾಸ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗಿದೆ. ವಿಧವೆಯರು ಸಾಮಾಜಿಕವಾಗಿ ಯಾವುದೇ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸಮಾಜ ಸಮ್ಮತವಲ್ಲ. ಇದು ಮನುಷ್ಯರೇ ಹಾಕಿರುವ ಬಂಧನ. ಆದರೆ ಈ ಬಂಧವನನ್ನು ಕಳಚಿಕೊಂಡು ವಿಧವೆಯರು ಕೂಡಾ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು ಎನ್ನುವುದಷ್ಟೆ ಅಲ್ಲ, ದೇವರ ಪೂಜೆ ಮಾಡುವ ಅರ್ಚಕರ ಸ್ಥಾನಕ್ಕೂ ಅರ್ಹರು ಎನ್ನುವುದನ್ನು ಈ ಬಾರಿಯ ದಸರಾದಲ್ಲಿ ಜಾರಿಗೆ ತರಲಾಗುತ್ತಿದೆ.

ಇಬ್ಬರು ವಿಧವೆಯರು ಇನ್ನು ಮುಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾಶ್ವತ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಿದ್ದಾರೆ. ಈ ಮೊದಲು ವಿಧವೆಯರು ಗೋಕರ್ಣನಾಥ ಕ್ಷೇತ್ರದಲ್ಲಿ ರಥ ಎಳೆದಾಗ ಸಂಪ್ರದಾಯವಾದಿಗಳು ಹೌಹಾರಿದ್ದರು. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧವೆಯರೇ ಚಂಡಿಕಾಯಗದಲ್ಲಿ ಪಾಲ್ಗೊಳ್ಳುವ ಮೂಲಕ ವಿಧವೆಯರು ಅಮಂಗಳೆಯರಲ್ಲ ಎನ್ನುವ ಸಂದೇಶ ಸಾರಿದ್ದರು. ಈಗ ವಿಧವೆಯರು ಅರ್ಚಕರಾಗಿ ನಿತ್ಯವೂ ಇಲ್ಲಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ ಇಬ್ಬರು ವಿಧವೆಯರನ್ನು ಆಯ್ಕೆ ಮಾಡಿ ಕಳೆದ ಆರು ತಿಂಗಳಿನಿಂದ ಅರ್ಚಕರ ತರಬೇತಿ ಪಡೆಯುತ್ತಿದ್ದಾರೆ.

ಇದೆಲ್ಲವೂ ಸಾಧ್ಯವಾಗಿರುವುದು ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿ ಅವರ ಛಲ ಮತ್ತು ಸ್ವತಂತ್ರ ನಿಲುವಿನಿಂದ.

ಶತಮಾನಗಳ ಇತಿಹಾಸವಿರುವ ಕುದ್ರೋಳಿ ಕ್ಷೇತ್ರವನ್ನು ನವೀಕರಿಸಲು ಜನಾರ್ಧನ ಪೂಜಾರಿ ಅವರು ಅದಕ್ಕಾಗಿ ನಾಡಿನಾದ್ಯಂತ ಸಂಚರಿಸಿ ಜನರಿಂದ kudroli-templeದೇಣಿಗೆ ಸಂಗ್ರಹಿಸಿದರು. ತಾವೇ ನವೀಕರಣದ ಸಂದರ್ಭದಲ್ಲಿ ಕಲ್ಲು, ಮಣ್ಣು ಹೊರುವ ಮೂಲಕ ಕರಸೇವೆಯಲ್ಲಿ ಜನಸಾಗರವೇ ಪಾಲ್ಗೊಳ್ಳುವಂತೆ ಮಾಡಿದರು. ಇದೆಲ್ಲವನ್ನೂ ಒಂದು ವರ್ಗ ಪೂಜಾರಿಯವರ ಇಮೇಜ್ ವೃದ್ಧಿಗೆಂದು ಗೇಲಿ ಮಾಡಿತ್ತು. ನಂತರ ಮಂಗಳೂರು ದಸರಾ ಮೆರವಣಿಗೆಗೆ ಹೊಸ ರೂಪಕೊಟ್ಟು ಪ್ರತೀ ವರ್ಷ ಅದ್ದೂರಿ ದಸರಾಕ್ಕೆ ಸ್ಫೂರ್ತಿಯಾಗಿದ್ದಾರೆ. ಇವಿಷ್ಟೇ ಆಗಿದ್ದರೆ ಮಾಮೂಲಿ ಅಂದುಕೊಳ್ಳಬಹುದಿತ್ತು.

ಶೂದ್ರರಿಗೆ ದೇವಸ್ಥಾನ ಮೆಟ್ಟಿಲು ಹತ್ತುವ ಅವಕಶಾವಿಲ್ಲ ಎನ್ನುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಿಂದುಳಿದವರು ಅಸ್ಪೃಶ್ಯರಿಗೂ ದೇವಸ್ಥಾನಕ್ಕೆ ಹೋಗುವ ಹಕ್ಕಿದೆ, ದೇವರನ್ನು ಪೂಜಿಸುವುದಕ್ಕೆ ಅವಕಾಶವಿದೆ ಎನ್ನುವ ಮೂಲಕ ಈ ಕ್ಷೇತ್ರ ಸ್ಥಾಪನೆ ಮಾಡಿದರು ನಾರಾಯಣಗುರುಗಳು. ಮಾನವತಾವಾದದ ಪ್ರತಿಪಾದಕರಾಗಿ, ಮೇಲು-ಕೀಳು ಎನ್ನುವ ಮನುಷ್ಯ ನಿರ್ಮಿತ ಗೋಡೆಗಳನ್ನು ಕೆಡವಿ ಕೆಳವರ್ಗದವರಲ್ಲೂ ಸ್ವಾಭಿಮಾನದ ಬೀಜ ಬಿತ್ತಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೇವಲ ಆರಾಧನಾ ಸ್ಥಳವಾಗಲಿಲ್ಲ, ಸ್ವಾಭಿಮಾನದ ಪ್ರತೀಕವಾಗಿ ಬೆಳೆಯಿತು. ಈಗ ಅಂಥ ಸ್ವಾಭಿಮಾನವನ್ನು ಬೆಳೆಸುವ ಭಾಗವಾಗಿ hindu-widowವಿಧವೆಯರಿಗೂ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ ಎನ್ನುವುದನ್ನು ಪ್ರತಿಪಾದಿಸಿದ ಜನಾರ್ಧನ ಪೂಜಾರಿ ವಿಧವೆಯರಿಂದಲೇ ರಥ ಎಳೆಯಿಸಿ ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾದರು. ಚಂಡಿಕಾ ಯಾಗದಲ್ಲಿ ವಿಧವೆಯರೇ ಪಾಲ್ಗೊಳ್ಳುವಂತೆ ಮಾಡಿ ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ಮುಖದಲ್ಲಿ ಮುಗುಳು ನಗು ಅರಳಲು ಕಾರಣರಾದರು. ಹೆತ್ತ ತಾಯಿ ವಿಧವೆಯಾದರು ಮಕ್ಕಳಿಗೆ ಆಕೆ ಪೂಜ್ಯಳು ಎಂದು ಪ್ರತಿಪಾದಿಸುತ್ತೇವೆ. ಆದರೆ ಆಕೆಯನ್ನು ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸುತ್ತೇವೆ. ಮಾನಸಿಕವಾಗಿ ವಿಧವೆಯರನ್ನು ಕುಬ್ಜರಾಗಿಸುವ ನಮ್ಮ ನಂಬಿಕೆ, ಆಚರಣೆಗಳು ಅಮಾನವೀಯ ಎನ್ನುವ ಪರಿವೆಯೇ ಇಲ್ಲದವರಂತೆ ವರ್ತಿಸುತ್ತೇವೆ.

ಕನ್ನಡದ ಮೊಟ್ಟಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಓರ್ವ ವಿಧವೆಯ ಬದುಕನ್ನು ಮನಮಿಡಿಯುವಂತೆ ಹೇಳುತ್ತದೆ. ಆಕೆಗೆ ಮರುಮದುವೆ ಮಾಡಿಸುವ ಮೂಲಕ ನಿಜವಾದ ಧರ್ಮದ ವಿಜಯ ಎನ್ನುವ ಸಂದೇಶ ಸಾರುತ್ತಾರೆ. ಶತಮಾನಗಳ ಹಿಂದೆಯೇ ಇಂಥ ಕ್ರಾಂತಿಕಾರಿ ನಿಲುವು ತಳೆಯುವ ಎದೆಗಾರಿಕೆ ಓರ್ವ ಲೇಖಕರು ತೋರಿಸಿದ್ದಾರೆ. ಸಂಪ್ರದಾಯ, ಆಚರಣೆಗಳೇ ಅತೀಮುಖ್ಯ ಎನ್ನುವ ಕಾಲಘಟ್ಟದಲ್ಲಿ ಗುಲ್ವಾಡಿ ಅವರು ಸಂಪ್ರದಾಯದ ಗೋಡೆ ಕೆಡವುವ ಸಾಹಸ ಮಾಡಿದ್ದರು.

ಜನಾರ್ಧನ ಪೂಜಾರಿ ಓರ್ವ ರಾಜಕಾರಣಿಯಾಗಿ ಕೇಂದ್ರದಲ್ಲಿ ಹಣಕಾಸು ಖಾತೆ ಮಂತ್ರಿಯಾಗಿ ಸಾಲಮೇಳ ನಡೆಸುವ ಮೂಲಕ ಸುದ್ದಿಯಾದರು ಎನ್ನುವುದು ಕ್ಲೀಷೆಯ ಮಾತಾಗುತ್ತದೆ. ಬಡವರು, ಮಹಿಳೆಯರು ಸ್ವಾವಲಂಬಿಯಾಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕವಾಗಿ ಸಾಲಮೇಳ ನಡೆಸುವ poojaryಮೂಲಕ ಬ್ಯಾಂಕಿನ ಬಾಗಿಲುಗಳು ಬಡವರಿಗೆ ಮುಕ್ತವಾಗುವಂತೆ ಮಾಡಿದವರು ಎನ್ನುವುದನ್ನು ನಿರಾಕರಿಸಲಾಗದು. ಈ ಸಾಲಮೇಳದ ಕಾನ್ಸೆಪ್ಟ್ ಪರಿಷ್ಕರಣೆಗೆ ಒಳಪಡಬೇಕಿತ್ತು ಎನ್ನುವುದು ಚರ್ಚೆಯ ಭಾಗವಾಗಿದ್ದರೂ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಂತೆಯೇ ಮಂಗಳೂರು ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರಿಗೆ ಪೂಜಾರಿ ಅವರು ಕಲ್ಪಿಸಿಕೊಟ್ಟಿರುವ ಹೊಸ ಅವಕಾಶಗಳು ಮತ್ತು ತೆಗೆದುಕೊಂಡಿರುವ ನಿಲುವುಗಳು ನಾರಾಯಣಗುರುಗಳ ತತ್ವ, ಆದರ್ಶ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಪೂರಕ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಮನುಷ್ಯರೇ ಮಾಡಿದ ಕಟ್ಟುಪಾಡುಗಳಿಗೆ ದೇವರು ಪರಿಹಾರ ಕೊಡಲು ಸಾಧ್ಯವಿಲ್ಲ, ಮನುಷ್ಯರೇ ಪರಿಹಾರ ಕೊಡಬೇಕಾಗಿದೆ. ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸಿ, ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ವಿಚಾರದಲ್ಲಿ ಜನಾರ್ಧನ ಪೂಜಾರಿ ಅವರು ತಳೆದಿರುವ ನಿಲುವುಗಳು ಮನುಷ್ಯತ್ವ, ಮಾನವೀಯತೆಯನ್ನು ಪ್ರತಿಪಾದಿಸುವವರು ಮೆಚ್ಚಿದರೆ ಅತಿಶಯೋಕ್ತಿಯಲ್ಲ ಮತ್ತು ಅಪರಾಧವೂ ಅಲ್ಲ.

5 comments

 1. ಅರ್ಥಹೀನ ಪುರೊಹಿತಶಾಹೀ ಚಿಂತನೆಗಳಿಂದ, ಕಟ್ಟುಪಾಡುಗಳಿಂದ ಸಮಾಜವನ್ನು ಈ ರೀತಿ ಮುಕ್ತಗೊಳಿಸುವ ಧೀಮಂತರು ಇಂದು ನಮಗೆ ಬೇಕಾಗಿದ್ದಾರೆ. ನಾರಾಯಣ ಗುರುಗಳ ಸಮಾಜ ಸುಧಾರಣೆಯ ಪರಂಪರೆಯನ್ನು ದಿಟ್ಟತನದಿಂದ ಮುಂದೆ ಕೊಂಡೊಯ್ಯುತ್ತಿರುವ ಜನಾರ್ಧನ ಪೂಜಾರಿಯವರ ಈ ಕ್ರಮ ಶ್ಲಾಘನೀ

 2. ಕಂದಾಚಾರಿಗಳ ಅಕ್ಷೇಪಣೆ ಇದ್ದೇ ಇರುತ್ತೆ ಇದಕ್ಕೆ ಸೊಪ್ಪು ಹಾಕದೆಇಂತಹ ಒಳ್ಳೆಯ ಕೆಲಸವನ್ನು ಪ್ರೋತ್ಸಾಹಿಸಬೇಕು. ವಿದುರರಿಗೂ ವಿಧವೆಯರಿಗೆ ವಿಧಿಸಿದಂತೆ ಕಟ್ಟುಪಾಡು ವಿಧಿಸಿದ್ದರೆ ವಿಧವೆಯರ ಗೋಳು ಇವರಿಗೆ ಅರ್ಥವಾಗುತ್ತಿತ್ತು.

 3. ದೇವರು ಎಲ್ಲರೊಳಿರುವಾಗ . . . ಎಲ್ಲರೂ ದೇವರ ಮಕ್ಕಳೇ ಆಗಿರುವಾಗ ಗಂಡನಿಲ್ಲ ಎನ್ನುವುದೇ ದೇವರನ್ನು ಪೂಜಿಸಲು ನಿರಾಕರಿಸುವುದಕ್ಕೆ ಸಕಾರಣವಾಗದು. ಈ ಮಣ್ಣೀನ ಕಣಕಣದಲ್ಲಿ ಭಗವಂತನನ್ನು ಕಾಣುವ ನಮಗೆ ಸಂಗಾತಿಯನ್ನು ಕಳೆದುಕೊಂಡ ಕಾರಣಕ್ಕೆ ಮಹಿಳೆಯನ್ನು ಕೀಳಾಗಿ ಕಾಣುವುದು ಹಿಂದೂ ಧರ್ಮ ಸಮ್ಮತ ವಿಚಾರವಲ್ಲ. ಬದಲಾಗಿ ಯಾರೋ ಯಾವುದೋ ಕಾರಣಕ್ಕೆ ಸೃಷ್ಠಿಸಿದ ಸಂಪ್ರದಾಯ ಎಂಬ ನಡೆಯದು.
  ಅದನ್ನು ಖಂಡಿಸಿ, ಎಲ್ಲಾ ವಿಧವೆಯರಿಗೂ ದೇವತಾರಾಧನೆಯ ಹಕ್ಕು ಇದೆ ಎಂಬುವುದನ್ನು ತಿಳಿಸಿದ ಜನಾರ್ಧನ ಪೂಜಾರಿಯವರ ನಡೆ ಶ್ಲಾಘನೀಯ. ಅವರ ರಾಜಕೀಯ ದ್ವನಿ ಸ್ವೀಕಾರವಲ್ಲದಿದ್ದರೂ ಅವರ ಧಾರ್ಮಿಕ ಚಿಂತನೆ ಗುರು ನಾರಾಯಣಸ್ವಾಮಿಗಳ ಚಿಂತನೆಯನ್ನು ಅನುಷ್ಠಾನಿಸುವಂತಿದೆ.
  ಇಂತಹ ಅತ್ಯುತ್ತಮ ಕಾರ್ಯಗಳನ್ನು ನಡೆಸಲು , ಅವರಿಗೆ ಈ ಮಣ್ಣಿನ ಶಕ್ತಿ ದೇವತೆಗಳು ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಎಂದಾರೈಸುತ್ತಾ. . . ಅವರ ರಾಜಕೀಯ ನಡೆಯಲ್ಲೂ ಈ ಮಣ್ಣೀನ ಗುಣ ಮೇಲೈಸಿ ತುಷ್ಠೀಕರಣದ ಗುಣ ನಾಶವಾಗಲಿ ಎಂದು ಆಶಿಸುತ್ತೇವೆ.

 4. ಜನಾರ್ಧನ ಪೂಜಾರಿಯವರೇ , ಧನ್ಯವಾದಗಳು .
  ನೀವು ಮಾಡಿದ ಕೆಲಸ ಬಹಳ ದೊಡ್ಡದು . ಎಷ್ಟು ದೊಡ್ಡದೆಂದರೆ ಅದು ಹೆಣ್ಣು ಕುಲಕ್ಕೆ ಮಾತ್ರವೇ ಅರ್ಥವಾಗುವಂತದ್ದು . ಇದನ್ನು ಗಿಮಿಕ್, ಸ್ಟಂಟ್ , ಮತ್ತೆ ಹೆಣ್ಣು ಮಕ್ಕಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳುವ ಪುರುಷ ಪ್ರಧಾನ ಸಮಾಜದ ಒಂದು ಪ್ರಯತ್ನ … ಹೀಗೆ ಏನೇ ಹೀಗೆಳೆಯಲಿ . ಯಾರದ್ರು ರಾಜಕಾರಣಿ ಗಿಮಿಕ್ ಮಾಡುವುದೇ ಆದರೆ ಇಂಥ ಗಿಮಿಕ್ಗಳನ್ನೇ ಮಾಡಲಿ ಎಂದು ಆಶಿಸುವವಳು ನಾನು. ಏಕೆಂದರೆ ಇಂಥ ಗಿಮಿಕ್ಗಳನ್ನೂ ಮಾಡಲಾದರೂ ಒಂದು ಒಳ್ಳೆಯ ಮನಸ್ಥಿತಿಯೇ ಬೇಕು ಎನ್ನುವುದು ಈ ಕಾಲ-ದೇಶಗಳು ನನಗೆ ಕಲಿಸಿದ ಪಾಠ . ಇತ್ತೀಚಿಗೆ ಒಂದು ಮಠಕ್ಕೆ ಹೋಗಿದ್ದೆ . ಅದು ತುಸು ಕ್ರಾಂತಿಕಾರಿ ಮಠ ಎಂದೇ ಪ್ರಖ್ಯಾತ ಗೊಂಡಿರುವುದು . ಎಲ್ಲರಿಗು ಜಾತಿಬೇಧವಿಲ್ಲದೆ ಸಾಮೂಹಿಕ ದಾಸೋಹವಿದೆ .ಪಂಕ್ತಿಬೇಧದಂತ ಶಬ್ದಗಳಿಗೆ ಅಲ್ಲಿ ಅವಕಾಶವಿಲ್ಲ . ಅಂತ ಮಠದಲ್ಲಿ ಸುಂದರವಾದ ವನವು ಇದೆ . ಅ ವನಕ್ಕೆ ಇತ್ತೀಚಿಗೆ ಒಂದಿಸ್ತು ಹೊಸ ಸಸಿಗಳನ್ನು ತಂದರಂತೆ . ಅದರಲ್ಲಿ ಹತ್ತಿಪ್ಪತ್ತು ರುದ್ರಾಕ್ಷಿ ಗಿಡಗಳು ಇವೆ. ಸ್ವಾಮಿಗಳು ಕರೆದು ಅದೆಶಿಸಿದರಂತೆ … ರುದ್ರಾಕ್ಷಿ ಗಿಡಗಳಿಗೆ ಹೆಣ್ಣು ಮಕ್ಕಳು ಆ ಮೂರು ದಿನಗಳಲ್ಲಿ ನೀರು ಹಾಕುವುದಗಲಿ , ಇದನ್ನು ಮುಟ್ಟುವುದಾಗಲಿ ಮಾಡಬಾರದು .ಈ ಅಂಶ ಮರೆತುಹೋಗುವ ಸಾದ್ಯತೆ ಇರುವುದರಿಂದ ಗಂಡಸರೇ ರುದ್ರಾಕ್ಷಿ ಗಿಡದ ದೆಖರೆಖಿ ವಹಿಸಿಕೊಳ್ಳಬೇಕು . ಹೆಣ್ಣು ಮಕ್ಕಳು ಆ ಕಡೆ ಸುಳಿಯಬಾರದು … ಅಲ್ಲಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳತಿಯೊಬ್ಬಳು ಈ ಘಟನೆ ಹೇಳುವಾಗ ಅವಳ ಕಣ್ಣುಗಳಲ್ಲಿ ಹೇಳಿಕೊಳ್ಳಲಾಗದ ಅಕ್ರೋಶ ನೋವು ಮನೆ ಮಾದಿದ್ದವು. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವವರು ಕೂಡ ಮಹಿಳೆಯರ ವಿಷಯದಲ್ಲಿ ಸಂವೇದನ ಶೂನ್ಯರಾಗಿರುವುದನ್ನು ನಾವು ಹಲವು ಬಾರಿ ಬಾರಿಗೂ ಕಾಣುತ್ತ ಬಂದಿದ್ದೇವೆ .
  ಅಂತ ಹೊತ್ತಲ್ಲಿ ನೀವು ಮಾಡಿದ ಇಂಥದೊಂದು ಕಾರ್ಯ ಖಂಡಿತಾ ಕಡೆಗನಿಸುವನ್ತದ್ದಲ್ಲ . ನೀವು ಹೆಣ್ಣುಮಕ್ಕಳನ್ನು ಅರ್ಚಕರಾಗಿ ನೆಮಿಸಿದಿರಿ ಎಂಬ ಕಾರಣಕ್ಕೆ ನಿಮ್ಮನ್ನು ಅಭಿನಂದಿಸುತಿಲ್ಲ ಬದಲಿಗೆ ಗಂಡನಿಲ್ಲ ಎಂಬ ಕಾರಣಕ್ಕೆ ನಿಕ್ರುಸ್ಟವಾಗಿ ಕಾಣುವ ತಿಂಗಳ ಆ ಮೂರು ದಿನಗಳ ಕಾಲ ಹೊರಗೆ ಕೂರಿಸುವ ಪದ್ದತಿಯನ್ನು ಇನ್ನು ಪರಿಪಾಲಿಸುತ್ತಿರುವ ಎಸ್ಟೋ ಮನಸ್ಸುಗಳು ಮತ್ತು ಮನೆಗಳು ಇರುವ ನಮ್ಮ ಸಮಾಜದಲ್ಲಿ ನೀವು ಇಂಥ ಎಲ್ಲ ಕಟ್ಟು ಪಾಡುಗಳನ್ನು ಮೀರಿ ಅವುಗಳು ಅನ್ವಯವಾಗದಂತೆ ಹೆಣ್ಣು ಮಕ್ಕಳಿಗೆ ಇಂಥದೊಂದು ಗೌರವ ಕೊಟ್ಟಿರಲ್ಲ . ಅದು ದೊಡ್ಡದು .
  ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ದೇವರ ಮೇಲೆ ಪ್ರೀತಿ ಜಾಸ್ತಿಯೆ. (ಪ್ರೀತಿ ಅನ್ನಿ , ಭಕ್ತಿ ಅನ್ನಿ ) . ಕುದ್ರೋಳಿ ದೇವಸ್ತಾನಕ್ಕೆ ಹೊಸದಾಗಿ ನೇಮಕಗೊಂಡ ಅರ್ಚಕರು ಒಂದೆರಡು ದಿನ ಮುಜಗರ , ಕಂಗಾಲು ತನದಿಂದ ದಿಕ್ಕುಗೆತ್ಹಾರು … (ಮೊದಲ ದಿನ ಅಳುವೇ ತುಟಿಗೆ ಬಂದಂತೆ …. ) ಮುಂದೆ ಅವರೇ ದೇವಸ್ತಾನದ ಪರಿಸರವನ್ನೇ ನಿಧಾನಕ್ಕೆ ಹೊಸ ಗಾಳಿ ಬೆಳಕುಗಳೊಂದಿಗೆ ಬದಲಿಸಿಯಾರು . ಅವರು ವೈಚಾರಿಕವಾಗಿ ಯೋಚಿಸುವಂತೆ ಚೂರು ಅವಕಾಶ ಆಗಬೇಕಿದೆ ಅಸ್ಟೆ . ಇಸ್ಟೆಲ್ಲಾ ವೈಚಾರಿಕ ಹೆಜ್ಜೆಗಳನ್ನು ಧೃಡವಾಗಿಟ್ಟ ನಿಮಗೆ ಅದೇನು ಕಷ್ಟದಲ್ಲ .
  ಅಕ್ಕ ಚೆನ್ನಮಲ್ಲಿಕಾರ್ಜುನನ ಮೇಲಿಟ್ಟ ಭಕ್ತಿ,ಶ್ರದ್ದೆ ಪ್ರೀತಿಯಿಂದ ಅದ್ಭುತ ಸಾಹಿತ್ಯವೇ ಸೃಷ್ಟಿಯಾಯಿತು ಎನ್ನುವುದು ನಮಗೆ ಸದಾ ನೆನಪಲ್ಲಿರುತ್ತದೆ .

Leave a Reply

Your email address will not be published.