ಧರ್ಮಾಧಾರಿತ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಒಂದು ಕಂಟಕ – ಸೈಯದ್ ಹೈದರ್ ಫರೂಕ್ ಸಿದ್ದಿಕಿ

ಸರ್ಕಾರವೊಂದು ಧರ್ಮವನ್ನು ಬಹಿರಂಗವಾಗಿ ಪ್ರತಿಪಾದಿಸಿದರೆ ಅದು ಪ್ರಜಾಪ್ರಭುತ್ವವನ್ನು ಪಾಲಿಸುತ್ತಿಲ್ಲ, ಬೇರೇನನ್ನೋ ಎತ್ತಿ ಹಿಡಿಯುತ್ತಿದೆ ಎಂದರ್ಥ. – ಸೈಯದ್ ಹೈದರ್ ಫರೂಕ್ ಸಿದ್ದಿಕಿ

ಸೈಯದ್ ಹೈದರ್ ಫರೂಕ್ ಸಿದ್ದಿಕಿಯವರು ಜಮಾತೆ ಎ-ಇಸ್ಲಾಮಿ ಸ್ಥಾಪಕ ಸೈಯದ್ ಅಬ್ದುಲ್ಲ ಮೌದೂಡಿಯ ಮಗ. ಇಂದು ಪಾಕಿಸ್ತಾನದ ಲಾಹೋರಿನ ಪತ್ರಿಕೆಯೊಂದರ ಅಂಕಣಕಾರ. 69 ವರ್ಷದ ಇವರು ಒಂದು ಕಾಲದಲ್ಲಿ ಪೈಲಟ್ ಆಗಿದ್ದರು. ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಮಾಡಿದ್ದರೂ ಇಂಗ್ಲೀಷಿನಲ್ಲಿ ಮಾತನಾಡಲು ನಿರಾಕರಿಸುವ ಫರೂಕ್ ಸಿದ್ದಿಕಿ ಉಪಖಂಡದಲ್ಲಿ ಜಮಾತೆಯ ರಾಜಕಾರಣದ ಕುರಿತಾಗಿ, ಇಸ್ಲಾಂನ ರಾಜಕೀಯ, ಮಿಲಿಟೆನ್ಸಿ, ರಾಜ್ಯದ ಧರ್ಮ, ಬಾಂಗ್ಲ ದೇಶದ ಯುದ್ಧ ಕಾಲದ ಅಪರಾಧಗಳು ಮತ್ತು ಅವುಗಳ ಕುರಿತಾದ ಟ್ರಿಬ್ಯೂನಲ್ ವಿಚಾರಣೆಗಳನ್ನು “ಢಾಕಾ ಟ್ರಿಬ್ಯೂನ್” ಪತ್ರಿಕೆಯೊಂದಿಗೆ ನಡೆಸಿದ ಸಂದರ್ಶನದುದ್ದಕ್ಕೂ ಹಂಚಿಕೊಂಡಿದ್ದಾರೆ.

ನಿಮ್ಮ ತಂದೆ ಅಬುಲ್ ಅಲಾ ಮೌದೂನಿ ಜಮಾತ್-ಎ-ಇಸ್ಲಾಮಿಯ ಸ್ಥಾಪಕರು. ನೀವಾಗಲಿ ಅಥವಾ ನಿಮ್ಮ ಅಣ್ಣತಂಗಿಯರಾಗಲೀ ಈ ಜಮಾತೆಯೊಂದಿಗೆ ಗುರುತಿಸಿಕೊಂಡಿದ್ದೀರ?
ಇಲ್ಲ. ನಾವೆಂದೂ ರಾಜಕಾರಣದಲ್ಲಾಗಲಿ, ಜಮಾತೆಯಾಗಲಿ ಅಥವಾ ಬೇರಾವುದೇ ಪಕ್ಷದೊಂದಿಗಾಗಲಿ ಗುರುತಿಸಿಕೊಂಡಿಲ್ಲ. syed-haiderನನ್ನ ತಂದೆ ನಾವು ರಾಜಕಾರಣದಲ್ಲಿ ಪ್ರವೇಶಿಸಲು ಅನುಮತಿ ಕೊಡಲಿಲ್ಲ. ಅವರ ಮನಸ್ಸಿನಲ್ಲಿ ಏನಿತ್ತೋ ನಮಗೆ ಗೊತ್ತಿಲ್ಲ, ನನ್ನ ತಂದೆ ಮಾತ್ರವಲ್ಲ ಬೇಕಿದ್ದರೆ ಇತರೇ ಜಮಾತೆ ನಾಯಕರನ್ನು ಗಮನಿಸಿ, ಅವರೂ ಸಹ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಅಥವಾ ಪಕ್ಷದ ಚಟುವಟಿಕೆಗಳಿಗೆ ತೊಡಗಿಕೊಳ್ಳಲು ಪ್ರೋತ್ಸಾಹಿಸಲಿಲ್ಲ.

ಜಮಾತೆ ನಾಯಕರ ಮಕ್ಕಳು ಇತರೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಅವೆಲ್ಲವೂ ಜಮಾತೆ ಪಕ್ಷದ ಕಾರ್ಯಗಳಿಗೆ ಹೊರತಾದವು. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಹುಶಃ ಒಮ್ಮೆ ನೀವು ಧರ್ಮಾಧಾರಿತ ರಾಜಕಾರಣ ಮಾಡಿದ ತಕ್ಷಣ ನಿಮ್ಮ ಕೆಲವು ವೈಯುಕ್ತಿಕ ಗುರಿಗಳನ್ನು ಸಾಧ್ಯವಾಗಿಸಿಕೊಳ್ಳಬಹುದು. ಅದರೆ ಧರ್ಮದ ಆಧಾರಿತ ರಾಜಕಾರಣದಲ್ಲಿ ಕಡೆಗೂ ನೀವು ಶತೃಗಳನ್ನು ಸೃಷ್ಟಿಸಿಕೊಳ್ಳುವುದಂತೂ ಖಂಡಿತ. ತಾನು ಸತ್ತ ನಂತರ ತನ್ನ ಮಕ್ಕಳಿಗೆ ಆತ ಬಿಟ್ಟುಹೋಗುವುದು ಶತೃಗಳನ್ನು ಮಾತ್ರ.

ಬಾಂಗ್ಲಾ ದೇಶದ ಜಮಾತೆಯ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ಬಾಂಗ್ಲಾ ದೇಶದ ಹುಟ್ಟಿಗೆ ವಿರೋಧ ವ್ಯಕ್ತಪಡಿಸಿದ ಜಮಾತೆಗೆ ಬಾಂಗ್ಲಾ ದೇಶದಲ್ಲಿ ರಾಜಕೀಯ ಅಥವಾ ರಾಜಕಾರಣ ಮಾಡಲು ಯಾವುದೇ ಹಕ್ಕಿಲ್ಲ. ಇವರಿಗೆ ಇಲ್ಲಿ ರಾಜಕೀಯ ಮಾಡಲು ಅವಕಾಶ ನೀಡಬಾರದು. ಆದರೆ ವಾಸ್ತವ ಪರಿಸ್ಥಿತಿ ಬೇರೆ ಇದೆ. ಸ್ವಾತಂತ್ರದ ನಂತರ ನಿಮ್ಮಲ್ಲಿನ ರಾಜಕೀಯ ನಾಯಕರೇ ಜಮಾತೆಗೆ ರಾಜಕೀಯ ಮಾಡಲು ಪ್ರೇರಣೆ ನೀಡಿದರು. ಅದು ನಿಮ್ಮ ನಾಯಕರದೇ ತಪ್ಪು. ನೀವು ಜಮಾತೆಗೆ ರಾಜಕೀಯದಲ್ಲಿ ಪ್ರವೇಶಕ್ಕೆ ಅನುಮತಿ ಕೊಟ್ಟಿದ್ದೀರೆಂದರೆ ಧರ್ಮ ಆಧಾರಿತ ರಾಜಕಾರಣಕ್ಕೆ ನಿಮ್ಮ ಅನುಮತಿ ಇದೆಯೆಂದರ್ಥ. ಆದರೆ ಬಾಂಗ್ಲಾ ದೇಶದ ಇಂದಿನ ಪರಿಸ್ಥಿತಿಗೆ ಯಾರು ಹೊಣೆಗಾರರು?

ನೋಡಿ, ಷೇಕ್ ಮುಜೀಬುರ್ ರೆಹಮಾನ್ ಅವರು ರಚಿಸಿದ ಸಂವಿಧಾನ ಇಂದು ಬಾಂಗ್ಲಾ ದೇಶದಲ್ಲಿಲ್ಲ. ಇದು ಹೇಗೆ ಸಾಧ್ಯವಾಯಿತು? ಇದನ್ನು ಯಾರು ಬದಲಾಯಿಸಿದರು? ಈ ವಿಷಯಗಳನ್ನು ಕುರಿತಾಗಿ ಚಿಂತಿಸಬೇಕಾಗಿದೆ. ನಿಜಕ್ಕೂ ಜನತೆ ಜಮಾತೆಯ ಪರವಾಗಿ ಮತದಾನ ಮಾಡುವುದಿಲ್ಲ. ಎಪ್ಪತ್ತರ ದಶಕದಲ್ಲೂ ಅವರಿಗೆ ಬೆಂಬಲವಿಲ್ಲ, ಈಗಲೂ ಬೆಂಬಲವಿಲ್ಲ, ಅವರ ಬಹುತೇಕ ಅಭ್ಯರ್ಥಿಗಳು ಹೀನಾಯ ಸೋಲು ಕಂಡರು. ಜಮಾತೆ ರಾಜಕಾರಿಣಿಗಳಿಗೆ ಎಷ್ಟು ಕಡಿಮೆ ಮತಗಳು ಬಡವೆಂದರೆ ಅವರು ಡೆಪಾಸಿಟ್ ಸಹ ಪಡೆಯಲಾಗದಷ್ಟು.

ಷೇಕ್ ಸಾಹೇಬರು ಜಮಾತೆಯನ್ನು ನಿಷೇಧಿಸಿದ್ದರು, ಅಲ್ಲವೇ? ಹಾಗಿದ್ದಲ್ಲಿ ಮರಳಿ ಅವರನ್ನು ರಾಜಕಾರಣಕ್ಕೆ ಕರೆದು ತಂದವರು ಯಾರು? ನೀವು, ಈ ದೇಶದ ಪ್ರಜೆಗಳು, ಯೋಚಿಸಿ. ಬಾಂಗ್ಲಾ ದೇಶದಲ್ಲಿ ಜಮಾತೆಯ ಬೆಂಬಲದ ಮೂಲಗಳಾವುವು? ಅವರ ಶಕ್ತಿ ಕೇಂದ್ರಗಳಾವುವು ? ಇವೆಲ್ಲವನ್ನೂ ಪತ್ತೆ ಹಚ್ಚದೆ ಸಂಕಷ್ಟಗಳ ಮೂಲವನ್ನು ಸಹ ಪತ್ತೆ ಹಚ್ಚಲಾಗದು.

ಒಂದು ವೇಳೆ ಯದ್ಧ ಕಾಲದ ಅತ್ಯಾಚಾರಗಳ ಕುರಿತಾಗಿ ಈಗ ನಡೆಯುತ್ತಿರುವ ವಿಚಾರಣೆಗಳು ಇವರ ಬಲವನ್ನು ಕುಗ್ಗಿಸುತ್ತದೆಯೆಂದುಕೊಂಡರೆ ನೀವು ಸಂಪೂರ್ಣವಾಗಿ ದಿಕ್ಕುತಪ್ಪಿದ್ದೀರ ಅಷ್ಟೆ. ಏಕೆಂದರೆ ಈ ವಿಚಾರಣೆಯು ಅವರಿಗೆ ವರವಾಗಿ ಪರಿಣಮಿಸಿದೆ. ಇದನ್ನು ಬಳಸಿಕೊಂಡು ಈ ಜಮಾತೆಯವರು ಜನರ ಬಳಿ ಹೋಗಿ ನಾವು ಇಸ್ಲಾಂ ಅನ್ನು ಬೆಂಬಲಿಸಿದ್ದರಿಂದ ನಮ್ಮನ್ನು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಹಿಂದಿನಂತೆಯೂ ಈ ವಿಚಾರಣೆಗಳು ಮತ್ತು ಇಸ್ಲಾಂ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ.

ಈ ಉಪಖಂಡದ ರಾಜಕಾರಣದಲ್ಲಿ ಇಸ್ಲಾಂನ ಪಾತ್ರದ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ರಾಜಕಾರಣದೊಳಗೆ ಧರ್ಮ ಪ್ರವೇಶಿಸಿದಾಕ್ಷಣ ಇದು ಮನುಷ್ಯರನ್ನು ಮತ್ತು ಮಾನವತೆಯನ್ನು ಕೊಂದು ಹಾಕುತ್ತದೆ. ಬುದ್ಧಿಸಂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ಖಿಸಂ ಹೀಗೆ ಯಾವುದೇ ಧರ್ಮಗಳಾಗಲಿ ವೈಯುಕ್ತಿಕ ನೆಲೆಯಲ್ಲಿ ಆಚರಣೆಯಲ್ಲಿದ್ದಾಗ ಅವು ಪ್ರತಿಯೊಬ್ಬನನ್ನೂ ಮಾನವಂತನಾಗುವಂತೆ ರೂಪಿಸಬಲ್ಲವು. ಪವಿತ್ರ ಖುರಾನ್ ರಾಜಕಾರಣದ ಕುರಿತಾಗಿ ಏನನ್ನೂ ಹೇಳುವುದಿಲ್ಲ, ಬದಲಾಗಿ ಮನುಷ್ಯತ್ವದ ಕುರಿತಾಗಿ ಮಾತನಾಡುತ್ತದೆ.

ಧರ್ಮಾಧಾರಿತ ರಾಜಕಾರಣವು ಸಮಾಜದೊಳಗೆ ವಿಘಟನೆಯನ್ನು ಹುಟ್ಟಿಹಾಕುತ್ತದೆ. ಪವಿತ್ರ ಖುರಾನ್ ಕೇವಲ ಮನುಷ್ಯರ ಕುರಿತಾಗಿ ಮಾತನಾಡುತ್ತದೆ. ಅದು ಆಡಳಿತ, ಅಧಿಕಾರದ ಕುರಿತಾಗಿ ಮಾತನಾಡುವುದಿಲ್ಲ. ಒಂದು ವೇಳೆ ಖುರಾನ್ ಅಧಿಕಾರದ ಕುರಿತಾಗಿ ಮಾತನಾಡಿದ್ದರೆ ಆಗ ಅದು ಖಲೀಫನನ್ನು ಹೇಗೆ ನೇಮಕ ಮಾಡಿಕೊಳ್ಳಬಹುದು, ಖಲೀಫನನ್ನು ಅಧಿಕಾರದಿಂದ ಹೇಗೆ ಪದಚ್ಯುತಗೊಳಿಸಬಹುದು, ಶುರಾವನ್ನು ಹೇಗೆ ಸ್ಥಾಪಿಸಬಹುದು, ಶುರಾವನ್ನು ಹೇಗೆ ವಿಲೀನಗೊಳಿಸಬಹುದು, ಶುರಾಗೆ ಯಾವ ಬಗೆಯ ಅಧಿಕಾರ ಕೊಡಬಹುದು, ಖಲೀಫಾ ಮತ್ತು ಶುರಾ ನಡುವಿನ ಸಂಬಂಧವೇನು? ಖಲೀಫಾ ಯಾವಾಗ ಅಧಿಕಾರವನ್ನು ಚಲಾಯಿಸಬಹುದು, ಶುರಾದ ಸರದಿ ಯಾವಾಗ? ಹೀಗೆ ಇಂತಹ ವಿಷಯಗಳ ಕುರಿತಾಗಿ ಚರ್ಚಿಸಬಹುದಿತ್ತು. ಆದರೆ ಖುರಾನ್ ಇದೆಲ್ಲದರ ಬಗ್ಗೆ ಮಾತನಾಡುತ್ತದೆಯೇ? ಇಲ್ಲ. ದೇವರು ಪವಿತ್ರ ಖುರಾನ್ ಅನ್ನು ಗಮನಿಸುವ ಹಾಗಿದ್ದರೆ ಖಿಲಾಫತ್ (ರಾಜಕೀಯ ವಾರಸುದಾರರು) ಅನ್ನೂ ನೋಡಿಕೊಳ್ಳುತ್ತಿದ್ದ. ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಧರ್ಮದ ಉದ್ದೇಶ ದೇಶವನ್ನು ಆಳುವುದಂತೂ ಖಂಡಿತ ಅಲ್ಲವೇ ಅಲ್ಲ.

ಬಾಂಗ್ಲಾದಲ್ಲಿ ವೈಯುಕ್ತಿಕ ಲಾಭಕ್ಕಾಗಿ ಧರ್ಮವನ್ನು ರಾಜಕಾರಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ರಾಜಕಾರಣಿಗಳ ಉದ್ದೇಶ ಜನತೆ ತಮ್ಮ ಧಾರ್ಮಿಕ ನಂಬುಗೆಗಳು ಮತ್ತು ಭಾವನೆಗಳನ್ನು ಆಧರಿಸಿ ಮತವನ್ನು ನೀಡುವಂತೆ ಪ್ರೇರೇಪಿಸುವುದು. ಧಾರ್ಮಿಕ ನಂಬಿಕೆಗಳನ್ನು ದುರ್ಲಾಭ ಪಡೆದುಕೊಳ್ಳುವುದಷ್ಟೇ ಇವರ ಉದ್ದೇಶ.

ಜಿನ್ನಾ ಸಾಹೇಬರು ವಿಭಜನೆಗೂ ಮುಂಚೆ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. 1931 ರಲ್ಲಿ ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಮೌಲಾನ ಅಬ್ದುಲ್ ಕಲಾಮ್ ಅವರ ಚಳುವಳಿಯನ್ನು ಬೆಂಬಲಿಸಿದ್ದರು. ಆದರೆ ಅದನ್ನು ಜಿನ್ನಾ ವಿರೋಧಿಸಿ ಕಾಂಗ್ರೆಸ್‌ಗೆ ರಾಜಿನಾಮೆ ನೀಡಿದರು. jinnahಆ ಸಂದರ್ಭದಲ್ಲಿ ಜಿನ್ನಾ ಸಾಹೇಬರು ಗಾಂಧೀಜಿಯವರಿಗೆ ಬರೆದ ಪತ್ರದ ಸಾರಾಂಶ ಹೀಗಿತ್ತು: “ನೀವು ಧರ್ಮವನ್ನು ರಾಜಕಾರಣದೊಳಗೆ ಬಳಸಿಕೊಳ್ಳುತ್ತಿದ್ದೀರಿ. ಆದರೆ ಇದು ರಕ್ತಪಾತವನ್ನಷ್ಟೇ ಉಂಟು ಮಾಡುತ್ತದೆ. ಈ ಬಗೆಯ ಧರ್ಮದ ಬಳಕೆಯಿಂದ ಭಾರತ ಇಬ್ಭಾಗವಾಗುವುದು ಖಂಡಿತ.” ಆದರೆ ದುರಂತವೆಂದರೆ ಇದೇ ಜಿನ್ನಾ ಸಾಹೇಬರು ಮುಂದೆ ಮಾಡಿದ್ದು ಇದನ್ನೇ. ಮುಸ್ಲೀಂ ಲೀಗನ್ನು ಸ್ಥಾಪಿಸಿದರು. ನಂತರ ಏನಾಯಿತು? ಇಂಡಿಯಾ ಮತ್ತು ಪಾಕಿಸ್ತಾನ ಬೇರೆ ಬೇರೆ ಆಯಿತು.

ಕೇವಲ ಎರಡು ಧರ್ಮಗಳ ಆಧಾರದ ಮೇಲೆ ಈ ಎರಡ್ಯ್ ದೇಶಗಳ ಸ್ಥಾಪನೆ ಆಯಿತು. ಆದರೆ ಅದು ಸರಿ ಇತ್ತೇ? ಹಿಂದುಸ್ತಾನದಲ್ಲಿ ಸುಮಾರು 17 ಧರ್ಮಗಳಿದ್ದವು/ವೆ. ಅಂದರೆ ಇಂಡಿಯಾವನ್ನು 17 ಭಾಗಗಳಾಗಿ ಮಾಡಬೇಕೆ? ಇದು ಎಂತಹ ಭಯಂಕರ ಅಲ್ಲವೆ? ವಿಭಜನೆ ಯಾರು ಮುಸ್ಲಿಮ್, ಯಾರು ಮುಸ್ಲಿಮ್ ಅಲ್ಲ ಎನ್ನುವ್ ಆಧಾರದ ಮೇಲೆ ಆಯಿತು. ಹಿಂದು, ಬೌಧ್ಹರು, ಸಿಖ್ಖರು, ಪಾರ್ಸಿಗಳು, ಇವರೆಲ್ಲ ಹಿಂದುಗಳಾಗಿದ್ದರೆ? ಧರ್ಮದ ಟೊಳ್ಳು ಅರ್ಥೈಸುವಿಕೆಯಿಂದ ಅಂತಹ ವಿಭಜನೆ ಆಗಿದ್ದು ನಿಜಕ್ಕೂ ನಿಜಕ್ಕೂ ಅಪಾಯಕಾರಿ. ಇದೇ ಬಗೆಯ ಬೇಧೀಯ ನೀತಿಯು ಇಸ್ಲಾಂ ಧರ್ಮವನ್ನೇ ನಾಶ ಮಾಡುತ್ತದೆ.

ಧರ್ಮವನ್ನು ಆಧರಿಸಿದ ಎಲ್ಲ ಪಕ್ಷಗಳ ನೀತಿಯು ಒಂದೇ ಆಗಿರುತ್ತದೆ. ಮುಸ್ಲಿಂ ಲೀಗನ್ನೇ ತೆಗೆದುಕೊಳ್ಳಿ. ಅವರ ಪ್ರಕಾರ ನೀನು ಮುಸ್ಲಿಂ ಆಗಿದ್ದರೆ ನೀನು ಮುಸ್ಲಿಂ ಲೀಗ್ ಅನ್ನು ಸೇರಬೇಕು. ಅಂದರೆ ಇನ್ನೊಂದು ರೀತಿಯಲ್ಲಿ ಇವರು ನೀನು ಮುಸ್ಲಿಂ ಲೀಗ್‌ಗೆ ಸೇರಿಲ್ಲವಾದ್ದರಿಂದ ನೀನು ಮುಸ್ಲಿಂನಲ್ಲ ಎಂದು ಹೇಳುತ್ತಿದ್ದಾರಲ್ಲವೇ? ಇದೇ ಮಾದರಿಯಲ್ಲಿ ಈ ಧರ್ಮಾಧಾರಿತ ರಾಜಕಾರಣವು ಜನರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ದುರಂತವೆಂದರೆ ಈ ರಾಜಕಾರಣಿಗಳನ್ನು ಟೀಕಿಸಿದರೆ ಅವರು ತಮ್ಮ ವಿರುದ್ಧದ ಈ ಟೀಕೆಯನ್ನು ಇಸ್ಲಾಂನ ವಿರುದ್ಧದ ಟೀಕೆಯೆಂದು ಪ್ರತಿಬಿಂಬಿಸುತ್ತಾ ಜನತೆಯನ್ನು ಉದ್ರೇಕಿಸುತ್ತಾರೆ. ಇದು ಧರ್ಮಾಧಾರಿತ ರಾಜಕಾರಣದ ಬಲು ದೊಡ್ಡ ಅಪಾಯ. ನೀವೆಂದಾದರು ಮೌಲ್ವಿಗಳು ತಮ್ಮಲ್ಲಿನ ತಪ್ಪುಗಳನ್ನು ಒಪ್ಪಿಕೊಂಡಿದ್ದನ್ನು ಕಂಡಿದ್ದೀರ? ಇಲ್ಲ, ಏಕೆಂದರೆ ಅವರು ಇಸ್ಲಾಂ ಅನ್ನು ರಕ್ಷಣೆಯಾಗಿ ಬಳಸಿಕೊಳ್ಳುತ್ತಾರೆ. ತಪ್ಪು ಮಾಡಿಯೂ ತಪ್ಪೊಪ್ಪಿಕೊಳ್ಳದವರು ಈಗಾಗಲೆ ನರಕದಲ್ಲಿದ್ದಾರೆಯೆ ಹೊರತು ಇಸ್ಲಾಮನ್ನು ಕೆಟ್ಟದ್ದಕ್ಕಾಗಿ ಬಳಸಿಕೊಳ್ಳುವುದರ ಬಗ್ಗೆ ಮಾತನಾಡುವವರು ಅಲ್ಲ.

ನಮಗೆಲ್ಲ ತಿಳಿದಿರುವಂತೆ ಇಸ್ಲಾಂ ಧರ್ಮವು ಶಾಂತಿಯನ್ನು ಬೋಧಿಸುತ್ತದೆ. ಆದರೆ 1971 ರ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಜಮಾತೆಯು ಪಾಕಿಸ್ತಾನ್ ಆಕ್ರಮಿತ ಸೈನ್ಯದೊಂದಿಗೆ ಬೆರೆತು ಆಗಿನ ಅತ್ಯಾಚಾರಗಳಲ್ಲಿ ಭಾಗಿಯಾಗುತ್ತದೆ. ನೀವು ಈ 1971 ಮತ್ತು ಇಸ್ಲಾಂ ನಡುವಿನ ಸಂಬಂಧವನ್ನು ಹೇಗೆ ವಿವರಿಸುತ್ತೀರಿ?
1970 ರ ಚುನಾವಣೆಯಲ್ಲಿ ಜಮಾತೆಯು ಧರ್ಮದ ಆಧಾರದ ಮೇಲೆ ರಾಷ್ಟ್ರೀಯ ಚುನಾವಣೆಗಳಲ್ಲಿ ಭಾಗವಹಿಸಿತ್ತು. ಆದರೆ ಅವರಿಗೆ ಗೆಲ್ಲಲಾಗಲಿಲ್ಲ. ಅಗ ಪಾಕಿಸ್ತಾನ್ ಆಕ್ರಮಿತ ಸೈನ್ಯವು ಅವರನ್ನು ಬಳಸಿಕೊಂಡಿತು. ಈ ಎಲ್ಲ ಗುಂಪುಗಳನ್ನು ಪಾಕಿಸ್ತಾನ್ ಆಕ್ರಮಿತ ಸೈನ್ಯವೇ ಸ್ಥಾಪಿಸಿದ್ದು. ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಸಭೆಯೊಂದರಲ್ಲಿ ಪಾಕಿಸ್ತಾನದ ಜನರಲ್ ನಿಯಾಜಿ ಬಾಂಗ್ಲಾದೇಶ ಜಮಾತ್ ಎ- ಇಸ್ಲಾಂನ ನಾಯಕರಿಗೆ ಹೇಳಿದ್ದು ನಾವು ಅಲ್- ಬಾದ್ರ್, ಅಲ-ಶಾಮ್ಸ ಅನ್ನು ಸ್ಥಾಪಿಸಿದ್ದೇವೆ. ನಿಮಗೆ ಹಣವನ್ನು, ಶಸ್ತ್ರಗಳನ್ನು, ತರಬೇತಿಯನ್ನು ನೀಡುತ್ತೇವೆ. ಈ ಗುಂಪುಗಳನ್ನು ನಿಮ್ಮದೆಂದು ಹೇಗೆ ವಾದಿಸುತ್ತೀರಿ?”

ಈ ಅಲ್- ಬಾದ್ರ್, ಅಲ-ಶಾಮ್ಸ ಗುಂಪುಗಳ ಪ್ರಾಂತೀಯ ನಾಯಕ ಮೋತಿರ್ ರೆಹಮಾನ್ ನಿಜಾಮಿ. ಆತನ ಮೇಲಧಿಕಾರಿ ಕುರ್ರುಮ್ ಝಾ ಮುರಾದ್. ತನಿಖಾ ತಂಡವೊಂದರ ವರದಿಯ ಪ್ರಕಾರ ಕುರ್ರುಮ್ ಝಾ ಮುರಾದ್ 15 ಬಾಂಗ್ಲಾ ದೇಶಿಯರನ್ನು ಸಾಯಸಿದ್ದ. ಇಸ್ಲಾಮ್ ಆಧರಿತ ಗುಂಪುಗಳು ಪಾಕಿಸ್ತಾನಿ ಆರ್ಮಿಯ ಪರವಾಗಿ ಕೆಲಸ ಮಾಡಿದ್ದವು.

ನಾವು ಈ ವಿದ್ಯಾಮಾನಗಳನ್ನು ಅರ್ಥ ಮಾಡಿಕೊಳ್ಳಲು ಮತ್ತಷ್ಟು ಹಿಂದಕ್ಕೆ ಹೋಗಬೇಕು. ರೂಸ್‌ವೆಲ್ಟ್ ಅವರಿಂದ ಚರ್ಚಿಲ್ ಅವರಿಗೆ ಪತ್ರವೊಂದು ಬರುತ್ತದೆ. ಅದರಲ್ಲಿ ರೂಸ್‌ವೆಲ್ಟ್ ಅವರು ಚರ್ಚಿಲ್ ಅವರಿಗೆ “ನೀವು ಎರಡನೇ ಮಹಾಯುದ್ಧದಲ್ಲಿ ನಿಮಗೆ ಬೆಂಬಲಿಸಬೇಕೆಂದು ನಮ್ಮನ್ನು ಕೇಳಿದ್ದೀರಿ. ಸರಿ. ನಾವು ಬೆಂಬಲಿಸುತ್ತೇವೆ. ಆದರೆ ನಮ್ಮ ಕರಾರೆಂದರೆ ನೀವು ಇಂಡಿಯಾವನ್ನು ದುರ್ಬಲಗೊಳಿಸಬೇಕು ಮತ್ತು ಇದನ್ನು ಇಬ್ಭಾಗವಾಗಿಸಿ ಎರಡು ಮಿಲಿಟರಿ ರಾಜ್ಯಗಳನ್ನು ಸ್ಥಾಪಿಸಬೇಕು,” ಎಂದು ಹೇಳುತ್ತಾರೆ. ಈಗ ಅರ್ಥವಾಗಿರಬೇಕಲ್ಲವೇ ಇಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದಾರೆಂದು.

ಯುದ್ಧ ಕಾಲದ ಅತ್ಯಾಚಾರಗಳ ವಿಚಾರಣೆಗಾಗಿ ನಿಯುಕ್ತಗೊಂಡ ಟ್ರಿಬ್ಯೂನಲ್ 1971 ರ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಅಪರಾಧಗಳನ್ನೆಸಿಗಿದ ಕ್ರಿಮಿನಲ್‌ಗಳ ವಿರುದ್ಧ ಮೊಕದ್ದಮೆಗಳನ್ನು ನಡೆಸುತ್ತಿದೆ. ಈ ಕ್ರಿಮಿನಲ್‌ಗಳ ಪಟ್ಟಿಯನ್ನು ಗಮನಿಸಿದಾಗ ಈ ಬಹುಪಾಲು ಆರೋಪಿಗಳು ಜಮಾತ್ ಎ- ಇಸ್ಲಾಂನ ಬಾಂಗ್ಲಾ ದೇಶದ ಅಂಗವಾಗಿರುತ್ತಾರೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ಮೊದಲಿಗೆ ಮಾನವತೆಯ ವಿರುದ್ಧವಾಗಿ ಯಾರೇ ಅತ್ಯಾಚಾರ ಮಾಡಲಿ ಅವರು ಶಿಕ್ಷೆಗೆ ಒಳಪಡಲೇಬೇಕು. ಸ್ಥಳೀಯ ಬಾಂಗ್ಲಾ ದೇಶೀಯರ ಹೊಣೆಯೇನೆಂದರೆ ಈ ಕ್ರಿಮಿನಲ್‌ಗಳಿಗೆ ರಾಜಕೀಯ ಪ್ರವೇಶವನ್ನು ನಿರಾಕರಿಸುವುದು. ಷೇಕ್ ಸಾಹೇಬರು ಗತಿಸಿದ ನಂತರ ಅಧಿಕಾರ ವಹಿಸಿಕೊಂಡ ಪಕ್ಷದವರೇ ಈ ಅಪರಾಧಿಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು. ಇಂದು ಖಲೀದ ಜಿಯಾ ಚುನಾವಣೆಗೆ ಸ್ಪರ್ಧಿಸಿದರೆ ಜಮಾತೆಯು ಆಕೆಯ ಬೆಂಬಲಕ್ಕಿರುತ್ತದೆ. ಇವರು ಅಧಿಕಾರಕ್ಕೆ ಬಂದರೆ ಏನಾಗಬಹುದೆಂದು ಈಗಾಗಲೇ ನಿಮ್ಮ ಅನುಭವಕ್ಕೆ ಬಂದಿರುತ್ತದೆ.

ನೀವು ಬಾಂಗ್ಲಾ ಮತ್ತು ಪಾಕಿಸ್ತಾನ ದೇಶಗಳ ಜಮಾತೆಯ ಚಟುವಟಿಕೆಗಳನ್ನು ಅಧ್ಯಯನ ಮಾಡಿದ್ದೀರಾ? ನಿಮಗೇನಾದರೂ ಇವೆರಡರ ನಡುವೆ ಸಾಮ್ಯತೆ ಗೋಚರಿಸಿದೆಯೇ?
ಎರಡೂ ದೇಶಗಳಲ್ಲಿರುವ ಜಮಾತೆಯ ಎರಡೂ ಪಕ್ಷಗಳು ವ್ಯಕ್ತಿಯೊಬ್ಬನ ಎಡಗೈ ಮತ್ತು ಬಲಗೈಯಂತೆ. ಆದರೆ ಇವೆರಡನ್ನು ನಿಯಂತ್ರಿಸಲು ಎರಡು ಅಧಿಕಾರ ಕೇಂದ್ರಗಳಿಲ್ಲ, ಬದಲಾಗಿ ಇವೆರೆಡನ್ನು ನಿಯಂತ್ರಿಸುವುದು ಮಾತ್ರ ಒಂದೇ ಕೈ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಾಂಗ್ಲಾದೇಶದ ವಿದ್ಯಮಾನಗಳ ಕುರಿತಾಗಿ ಬರೆಯುವಾಗ ಅಲ್ಲಿನ ಜಮಾತೆಯ ಬಗೆಗೂ ಬರೆಯುತ್ತಾರೆ. ಅಲ್ಲಿನ ಸರ್ಕಾರದ ವಿರೋಧದ ವರದಿಗಳನ್ನು ಪ್ರಟಿಸುತ್ತಾರೆ.ಉದಾಹರಣೆಗೆ ನೋಡಿ ಆ ಸೆಕ್ಯುಲರ್ ಬಾಂಗ್ಲಾ ದೇಶದಲ್ಲಿ ಇಸ್ಲಾಂ ಅನ್ನು ಹೇಗೆ ಅಪಮಾನಗೊಳಿಸುತ್ತಿದ್ದಾರೆ ಎಂದು ಬರೆಯುತ್ತಾ ಈ ಸೆಕ್ಯುಲರ್ ಬಾಂಗ್ಲಾದಲ್ಲಿ ಇಸ್ಲಾಂ ಅನ್ನು ಮಾತನಾಡಿದ್ದಕ್ಕೆ ಶಿಕ್ಷಿಸುತ್ತಾರೆ ಎಂದು ಸಹ ವರದಿ ಮಾಡುತ್ತಾರೆ.

ಯುದ್ಧ ಕಾಲದ ಅತ್ಯಾಚಾರಗಳ ವಿಚಾರಣೆಗಾಗಿ ನಿಯುಕ್ತಗೊಂಡ ಟ್ರಿಬ್ಯೂನಲ್‌ನ ವಿಚಾಣೆಯಲ್ಲಿ ಕೇವಲ ಬಾಂಗ್ಲಾ ದೇಶದ ಅಪರಾಧಿಗಳ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಜೊತೆಗೆ ಪಾಕಿಸ್ತಾನದ ಸೈನ್ಯ ಮತ್ತು ಇತರೇ ದೇಶದ ಯುದ್ಧ ಕಾಲದ ಅಪರಾಧಿಗಳನ್ನು ಸಹ ವಿಚಾರಣೆಗೆ ಒಳಪಡಿಸಬೇಕಲ್ಲವೇ? ಕನಿಷ್ಟ ಅಂತರಾಷ್ಟ್ರೀಯ ಕೋರ್ಟಗಳಲ್ಲಿ.
ಕ್ರೈಮ್ ಟ್ರಿಬ್ಯೂನಲ್ ತನ್ನ ಆದೇಶವನ್ನು ಪ್ರಕಟಿಸಿದಾಗ ಪಾಕಿಸ್ತಾನದ ಜಮಾತ್ ಅಮೀರ್ ಸೈಯದ್ ಮುನಾವರ್ ಹಸನ್ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಸರ್ಕಾರಕ್ಕೆ ಷೇಕ್ ಹಸೀನಾ ಅವರ ಬಳಿ ನಿಯೋಗವನ್ನು ಕಳಿಸಬೇಕೆಂದು ಸೂಚಿಸುತ್ತಾರೆ. ಮುಂದುವರೆದು “ನಾವು ಮುಜೀಬರ್ ಅವರೊಂದಿಗೆ ಯುದ್ಧ ಕಾಲದ ಖೈದಿಗಳನ್ನು ವಿಚಾರಣೆ ನಡೆಸಬಾರದೆಂದು ಒಪ್ಪಂದ ಮಾಡಿಕೊಂಡಿದ್ದೇವೆ. ಹಾಗಿದ್ದಲ್ಲಿ ಅವರು ಹೇಗೆ ಈ ಒಪ್ಪಂದವನ್ನು ಧಿಕ್ಕರಿಸಿ ಅಪರಾಧಿಗಳನ್ನು ವಿಚಾರಣೆ ನಡೆಸುತ್ತಾರೆ?” ಎಂದು ಹೇಳುತ್ತಾರೆ. ಈಗ ನಾನು ಕೇಳುವ ಪ್ರಶ್ನೆ ಆ ಒಪ್ಪಂದ ಯಾವುದು? ನಿಜಕ್ಕೂ ಆ ಒಪ್ಪಂದದಲ್ಲಿ ಯುದ್ಧ ಕಾಲದ ಅಪರಾಧಿಗಳನ್ನು ವಿಚಾರಣೆಗೆ ಗುರಿಪಡಿಸಬಾರದೆಂದು ಹೇಳಿದ್ದಾರೆಯೇ?

ವಾಸ್ತವದಲ್ಲಿ ಆ ಬಗೆಯ ಒಪ್ಪಂದವೊಂದು ಜಾರಿಯಲ್ಲಿದೆ. ಅದರಲ್ಲಿ ಸುಮಾರು 195 ಯುದ್ಧಕಾಲದ ಅಪರಾಧಿಗಳನ್ನು ತನ್ನ ದೇಶದಲ್ಲಿ ವಿಚಾರಣೆ ನಡೆಸಬುಹುದೆಂದು ತಿಳಿಸಲಾಗಿದೆ. ಆದರೆ ಆ ರೀತಿ ಇದುವರೆಗು ಪಾಕಿಸ್ತಾನ ನಡೆದುಕೊಂಡಿದೆಯೇ?1971_Surrender_of_Pakistan ಕೊನೆವರೆಗೂ ಜನರಲ್ ನಿಯಾಜಿ ಹೇಳುತ್ತಿದ್ದದ್ದು “ನಾನು ಕೇವಲ ಆರ್ಮಿ ಅಧಿಕಾರಿ. ಮೇಲಿನವರ ಆದೇಶಗಳನ್ನು ಪಾಲಿಸಿದ್ದೇನಷ್ಟೆ.” ಈ ಆದೇಶಗಳನ್ನು ಪಾಲಿಸಿದ್ದಕ್ಕೆ ಆರ್ಮಿಯನ್ನು ಇದೇ ಬಗೆಯಲ್ಲಿ ವಿಚಾರಣೆಗೆ ಗುರಿಪಡಿಸಿದ್ದಲ್ಲಿ ಆರ್ಮಿಯ ಅವಶ್ಯಕತೆ ಎಲ್ಲಿದೆ? ನಿಯಾಜಿ ಇದನ್ನು ಹಮಿದುರ್ ರೆಹಮಾನ್ ಕಮಿಷನ್‌ಗೆ ಹೇಳಿದ್ದು.

ಆದರೆ ಅದೇ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಶಹಬಾಜಾ ಯಾಕೂಬ್ ಅಲಿ ಖಾನ್ ಈ 1971 ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ಪಾಕಿಸ್ತಾನ ಆರ್ಮಿಯಿಂದ ನಿವೃತ್ತಿ ಹೊಂದುತ್ತಾರೆ. ಆದರೆ ಇವರಿಗೆ ಆರ್ಮಿಯ ಆದೇಶವನ್ನು ಧಿಕ್ಕರಿಸಿದ್ದಾರೆಂದೇನು ಶಿಕ್ಷೆಯನ್ನು ನೀಡುವುದಿಲ್ಲ. ಬದಲಾಗಿ ಜುಲ್ಫೀಕರ್ ಅಲಿ ಭುಟ್ಟೋ ಅವರು ಶಹಬಾಜಾ ಅವರನ್ನು ವಿದೇಶಾಂಗ ಮಂತ್ರಿಯಾಗಿ ನೇಮಿಸುತ್ತಾರೆ.

ಲಾಹೋರಿನಲ್ಲಿ ಸೆಮಿನಾರ್ ಒಂದರಲ್ಲಿ ಈ ಸೇನಾಧಿಕಾರಿ ನಿಯಾಜಿಯ ಮಗಳು ಪ್ರೆಸಿಡೆಂಟ್ ಮುಷರಫ್ ಅವರ ಸಮ್ಮುಖದಲ್ಲಿ ತನ್ನ ತಂದೆ (ನಿಯಾಜಿ)ಯವರಿಗೆ ಕಿರುಕಳ ಕೊಡುತ್ತಿದ್ದಾರೆ .ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪೆನ್ಷನ್ ಅನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸುತ್ತಾರೆ

ಕೆಲವೊಮ್ಮೆ ಈ ಧಾರ್ಮಿಕ ನಾಯಕರು ಅಧಿಕಾರಸ್ತರ ಷಡ್ಯಂತ್ರಕ್ಕೆ ಬಲಿಯಾಗುತ್ತಾರೆ. ಇದರಿಂದ ಹೊರಬರಲಾಗದೆ ಸೋತು ಹೋಗುತ್ತಾರೆ. ಅಲ್- ಬಾದ್ರ್, ಅಲ-ಶಾಮ್ಸ ಗುಂಪಿನ ಸದಸ್ಯರು ಬಾಂಗ್ಲಾ ಸ್ವತಂತ್ರದ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು. ಇಂದಿಗೂ ಅವರು ಅಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.ಇವರೆಲ್ಲ ಶೋಷಿಸಲ್ಪಟ್ಟವರು. ಇಲ್ಲಿ ವ್ಯಕ್ತಿ ಮುಖ್ಯವಾಗುವುದಿಲ್ಲ. ಆದರೆ ಧರ್ಮಾಧಾರಿತ ಸಂಸ್ಥೆಗಳು ವಿಚಾರಣೆಗೊಳಗಾಬೇಕು.

ಜಮಾತೆ ಸಹ 1971ರ ಯುದ್ಧಕಾಲದ ಅಪರಾಧಗಳಿಗಾಗಿ ಟ್ರಿಬ್ಯೂನಲ್‌ನ ವಿಚಾರಣೆಗೆ ಒಳಪಟ್ಟಿದೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?
ನನ್ನ ಗ್ರಹಿಕೆಯ ಪ್ರಕಾರ 1971 ರಲ್ಲಿ ತಾವು ನಡೆಸಿದ ಕೃತ್ಯದ ಬಗ್ಗೆ ಜಮಾತೆಗೆ ಪಶ್ಚತ್ತಾಪವಿಲ್ಲ. ಬದಲಾಗಿ ಅದರ ಕುರಿತಾಗಿ ಅಭಿಮಾನವಿದೆ. ಅವರ ಪ್ರಕಾರ ಇಸ್ಲಾಂಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇವೆಂದೇ ವಾದಿಸುತ್ತಾರೆ. ಇವರು ಇಸ್ಲಾಂ ರಾಷ್ಟ್ರವನ್ನು ಪ್ರತಿಪಾದಿಸುತ್ತಾರೆ. ಬಾಂಗ್ಲಾ ದೇಶವು ಇಸ್ಲಾಂ ರಾಷ್ಟ್ರವಾಗದೆ ಸೆಕ್ಯುಲರ್ ದೇಶವೆಂದು ಘೋಷಿಸಿಕೊಂಡಿದ್ದು ಇದರ ವಿರುದ್ಧ ಧಾರ್ಮಿಕ ಅನುಕಂಪವುಳ್ಳ ಜನರ ವಿಶ್ವಾಸ ಗಳಿಸುತ್ತಿದ್ದಾರೆ. ಇವರಾಗಲೇ ಸೆಕ್ಯುಲರ್ ಎನ್ನುವ ಪದವನ್ನು ಒಂದು ಬಯ್ಗಳ ಪದವಾಗಿ ಚಾಲ್ತಿಗೆ ತಂದಿದ್ದಾರೆ.

ಸೆಕ್ಯುಲರ್ ಎನ್ನುವ ಪದವನ್ನು ಧರ್ಮವಿರೋಧಿ ಪದವೆಂದು ಅಪಪ್ರಚಾರ ನಡೆಸಿದ್ದು ನನ್ನ ಪ್ರಕಾರ ಜಮಾತೆಯ ಬಲು ದೊಡ್ಡ ಕ್ರೈಮ್. ಏಕೆಂದರೆ ಸೆಕ್ಯುಲರ್ ಅಂದರೆ ಅದು ಒಂದು ಧೋರಣೆ. ಒಂದು ಮನೋವೃತ್ತಿ. ಅದರ ಭಾವಾರ್ಥ ನಿನ್ನ ಒರಿಜಿನಾಲಿಟಿಯನ್ನು ಕಳೆದುಕೊಳ್ಳಬೇಡ, ಹಾಗೆಯೇ ಬೇರೊಬ್ಬರ ನಂಬಿಕೆಯನ್ನು ಘಾಸಿಗೊಳಿಸಬೇಡ. ಆದರೆ ಜಮಾತೆಯ ಪ್ರಕಾರ ಇಸ್ಲಾಂ ಅನ್ನು, ಅದರ ರಾಜಕಾರಣವನ್ನು ಬೆಂಬಲಿಸದವರೆಲ್ಲರನ್ನೂ ನಾಶಮಾಡಬೇಕು.

ತನ್ನ ಪತಿ ಜಿಯಾ ಉರ್ ರೆಹಮಾನ್ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದಿಂದ ಖಲೀದಾ ಜಿಯಾ ತೋರಿಕೆಗಾಗಿ ಪ್ರಜಾಪ್ರಭುತ್ವದ ಕಡೆಗೆ ವಾಲಿದ್ದಾರಷ್ಟೆ.

ಜಮಾತ್ ಎ- ಇಸ್ಲಾಮಿಯಂತಹ ಪಕ್ಷವು ಪಾಕಿಸ್ತಾನ, ಇಂಡಿಯಾ, ಬಾಂಗ್ಲಾದೇಶದಲ್ಲಿ ಇಸ್ಲಾಂ ಮಿಲಿಟೆನ್ಸಿಯಂತಹ ರಾಡಿಕಲ್ ಚಳುವಳಿಗೆ ತನ್ನ ಕೊಡುಗೆಯನ್ನು ನೀಡಿದೆಯೇ ?
ಕಡೆಗೆ ಜಮಾತೆಯ ಗುರಿ ಏನೆಂದರೆ ಇಸ್ಲಾಂ ಅನ್ನು ವಿವಾದಾಸ್ಪದ ಧರ್ಮವನ್ನಾಗಿಸುವುದು. ಇವರ ಈ ಕೃತ್ಯಗಳು ಪಾಕಿಸ್ತಾನದಲ್ಲಿ ಜುಲ್ಫೀಕರ್ ಅಲಿ ಭುಟ್ಟೋ ಅವರ ವಿರುದ್ಧದ ಚಳುವಳಿಗಳಾಗಿ ಸಹ ರೂಪುಗೊಂಡವು. ಅಲ್ಲಿ ಇಸ್ಲಾಂ ಮುರ್ದಾಬಾದ್ ಎನ್ನುವ ಘೋಷಣೆಯೂ ಕೇಳಿಬರುತ್ತಿತ್ತು. ಅಂದರೆ ಇಸ್ಲಾಂ ಅನ್ನು ರಾಜಕಾರಣಕ್ಕೆ ಬಳಿಸಿಕೊಂಡಿದ್ದಕ್ಕಾಗಿ ನಾವೆಲ್ಲ ಇಸ್ಲಾಂ ಮುರ್ದಾಬಾದ್ ಘೋಷಣೆಯನ್ನು ಕೇಳಬೇಕಾಯಿತು.

ಹಾಗಿದ್ದಲ್ಲಿ ನಿಮ್ಮ ಪ್ರಕಾರ ಇಸ್ಲಾಮಿಕ್ ರಾಜ್ಯ ಮತ್ತು ಸೆಕ್ಯುಲರ್ ರಾಜ್ಯದ ಅರ್ಥವೇನು ?
ಒಂದು ದೇಶವು ಇಸ್ಲಾಂ ಅನ್ನು ಆಧರಿಸಿ ಕಟ್ಟಿದ್ದೇವೆ ಎಂದು ವಾದಿಸುವುದಾದರೆ, ಅದು ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶವಾಗಿದ್ದರೆ dhaka-tribuneಅಲ್ಲಿ ತಾಲಿಬಾನ್‌ಗಳಿಗೆ ಅಧಿಕಾರವನ್ನು ಗಳಿಸಲು ಹಕ್ಕಿದೆ. ಯಾವುದೇ ದೇಶವೊಂದರಲ್ಲಿ ಧರ್ಮವು ಜನತೆಗಾಗಿ ಇರಬೇಕೇ ಹೊರತು ಜನತೆ ಧರ್ಮಕ್ಕಾಗಿ ಅಲ್ಲ. ತನ್ನ ಛಾವಣೆಯಡಿಯಲ್ಲಿ ವಿಭಿನ್ನ ಧರ್ಮಗಳು ಒಂದಾಗಿ ಬದುಕುವಂತಹ ಅವಕಾಶ ಕಲ್ಪಿಸುವ ದೇಶ ಬದುಕುಳಿಯುತ್ತದೆ. ದೇಶವೊಂದು ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕೆಂದರೆ ಅಲ್ಲಿ ಧರ್ಮವಿರುವುದಿಲ್ಲ. ಪ್ರಜಾಪ್ರಭುತ್ವ ಯಾವಾಗಲೂ ಸೆಕ್ಯುಲರ್ ಆಗಿರುತ್ತದೆ. ನೀವು ಸೆಕ್ಯುಲರ್ ಆಗದಿದ್ದರೆ ನಿಮ್ಮನ್ನು ಪ್ರಜಾಪ್ರಭುತ್ವವಾದಿಗಳೆಂದು ಕರೆಯಲು ಸಾಧ್ಯವಿಲ್ಲ. “ಒಬ್ಬ ಮನುಷ್ಯ, ಒಂದು ಪದ” ಎಂದರೆ ಎಲ್ಲರೂ ಸಮಾನರು ಎಂದರ್ಥ. ಅಂದರೆ ವಿಭಿನ್ನ ಧರ್ಮದವರಾಗಿದ್ದರೂ ಎಲ್ಲರೂ ಸಮಾನರೆಂದರ್ಥ. ಯಾರು ಮುಸ್ಲಿಂ ಯಾರು ಮುಸ್ಲಿಮ ಅಲ್ಲ ಎಂಬುದು ಮುಖ್ಯವೇ ಅಗುವುದಿಲ್ಲ.

ಆದರೆ ಇಸ್ಲಾಂ ಅಂದರೆ ರಾಜಕೀಯವೆಂದೇ ಇಸ್ಲಾಂ ರಾಜಕೀಯ ಪಕ್ಷಗಳು ವಾದಿಸುತ್ತಾವಲ್ಲ?
(ನಗುತ್ತ) ಇಸ್ಲಾಂ ಮತ್ತೇನಲ್ಲದೇ ರಾಜಕೀಯವಷ್ಟೆ ಎಂಬುದಾದಲ್ಲಿ ಅವರಿಗೆ ಮತ ಹಾಕದವರೆಲ್ಲರೂ ಕಾಫಿರರು ಹಾಗಾದರೆ.

ನಿಮ್ಮ ತಂದೆಯವರು ಜಮಾತೆಯ ಸ್ಥಾಪಕರಲ್ಲೊಬ್ಬರು. ಇಂದಿಗೂ ಬಾಂಗ್ಲಾ ದೇಶದಲ್ಲಿ ಅದರ ಸ್ಥಾಪಕರೆಂದೇ ಗುರುತಿಸಲ್ಪಡುತ್ತಾರೆ. ಈ ಜಮಾತೆಯ ಸ್ಥಾಪಕರ ಮಗನಾಗಿ ಅವರಿಗೆ ಏನಾದರೂ ಉಪದೇಶಿಸ ಬಯಸುತ್ತೀರ?
(ನಗುತ್ತ) ಇಂದು ಅವರೆಲ್ಲ ಸಲಹೆಗಳನ್ನು ಸ್ವೀಕರಿಸುವ ಮಟ್ಟವನ್ನು ಮೀರಿದ್ದಾರೆ. ನನಗನ್ನಿಸುತ್ತದೆ ಇಂದು ಅವರಿಗೆ ಯಾರ ಅವಶ್ಯಕತೆಯೂ ಬೇಕಾಗಿಲ್ಲ.

– ಕೃಪೆ : ಢಾಕಾ ಟ್ರಿಬ್ಯುಲ್; ಅಕ್ಟೋಬರ್ 6, 2013.
ಸಂದರ್ಶಕರು : ಜುಲ್ಫೀಕರ್ ಅಲಿ ಮನಿಕ್, ಮಕ್ತಾಶ್ರೀ ಚಕ್ಮಾ ಸಾಥಿ
ಅನುವಾದ: ಬಿ. ಶ್ರೀಪಾದ ಭಟ್

One comment

  1. World wars were fought on religion, we have not learnt any lessons, millions have died. we are still having Religion or a state, secuar state is also a myth.

Leave a Reply

Your email address will not be published.