ಪ್ರಕೃತಿ ಕೇಂದ್ರಿತ ಅಭಿವೃದ್ಧಿ ನಮ್ಮದಾಗಲಿ


– ರೂಪ ಹಾಸನ


 

ಯಾವುದೇ ಪರಿಸರ ಸಂಬಂಧಿ ಯೋಜನೆಗಳ ಕುರಿತು ಸರ್ಕಾರದಿಂದ ಚರ್ಚೆ ಪ್ರಾರಂಭವಾದೊಡನೆ ಪರಿಸರವಾದಿಗಳು ಅದು ಸಲ್ಲದು ಎಂದು ತಮ್ಮ ಗಲಾಟೆ ಪ್ರಾರಂಭಿಸುತ್ತಾರೆ. ಅಭಿವೃದ್ಧಿವಾದಿಗಳು ಯೋಜನೆಯ ಅವಶ್ಯಕತೆಯನ್ನು ಪ್ರತಿಪಾದಿಸಿ ತಮ್ಮ ವಾದ ಮುಂದಿಡುತ್ತಾರೆ. ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪರ-ವಿರೋಧ ಚರ್ಚೆ ನಡೆಸುತ್ತಾರೆ. ಎಲ್ಲರಿಗೂ ಅವರವರದೇ ಒಂದೊಂದು ಸಿದ್ಧಾಂತ. ಮತ್ತೆ ಯೋಜನೆ ಕಾರ್ಯರೂಪಕ್ಕೆ ಬರದೇ ನೆನೆಗುದಿಗೆ ಬೀಳುತ್ತದೆ. ಆಗೀಗ ಪ್ರಸ್ತಾಪಗೊಂಡು ಮತ್ತೆ ಮರೆತೂ ಹೋಗುತ್ತದೆ. ಆದರೆ ಮೂಲ ಸಮಸ್ಯೆ? ಅದು ಒಂದಿಂಚೂ ಕದಲದೇ ಹಾಗೇ ಇರುತ್ತದೆ. ಜೊತೆಗೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ. ಇದರ ಮಧ್ಯೆ ಸಿಕ್ಕಿಕೊಳ್ಳುವ ಸಾಮಾನ್ಯ ಜನರು ಪರಿತಪಿಸುತ್ತಲೇ ಇರಬೇಕಾಗುತ್ತದೆ.

ಇದೆಲ್ಲಾ ಮತ್ತೆ ನೆನಪಾದದ್ದು ಎತ್ತಿನಹೊಳೆ ತಿರುವು ಯೋಜನೆಯ ಕುರಿತು ವರದಿ, ಪೂರ್ವ-ಪರ ಚರ್ಚೆಗಳು ಪ್ರಕಟವಾಗುತ್ತಿರುವುದನ್ನು ಕಂಡಾಗ. p3-24 city.inddಈ ಹಿಂದೆ ನೇತ್ರಾವತಿ ತಿರುವು ಯೋಜನೆಯ ಕುರಿತು ಹೀಗೇ ಪೂರ್ವ-ಪರ ಚರ್ಚೆಗಳಾಗಿ ನಿಂತು ಹೋಗಿತ್ತು. ಈಗ ಹೆಸರು ಬದಲಾದ, ಅದೇ ಉದ್ದೇಶ ಹೊಂದಿದ ಮತ್ತೊಂದು ಯೋಜನೆಯ ಚರ್ಚೆ. ಯೋಜನೆಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ ಪಶ್ಚಿಮಘಟ್ಟದ ಒಡಲೊಳಗೆ ಮೈಲಿಗಟ್ಟಲೆ ನಡೆಯಬೇಕಿರುವ ಇದರ ಕಾರ್ಯಾಚರಣೆಯಲ್ಲಿ ಒಡ್ಡು ನಿರ್ಮಾಣಕ್ಕೆ, ಪೈಪ್‌ಲೈನ್ ಅಳವಡಿಕೆಗೆ, ಪಂಪಿಂಗ್ ಮೋಟರ್ ಸ್ಥಾಪನೆಗೆ, ಜಲ ಸಂಗ್ರಹಣೆಗೆ, ಕಾಲುವೆ, ಅಣೆಕಟ್ಟೆ ನಿರ್ಮಾಣಕ್ಕೆ,…. ಹೀಗೆ ಪಶ್ಚಿಮಘಟ್ಟದಲ್ಲಿ ಏನೆಲ್ಲಾ ಅಲ್ಲೋಲಕಲ್ಲೋಲ ಆಗಬಹುದೆಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿದೆ. ಈ ಇಡೀ ಕಾರ್ಯಾಚರಣೆ ನಡೆವ ಅರಣ್ಯ, ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಮತ್ತೆ ಎಲ್ಲಾದರೂ ಸ್ಥಳಾಂತರಿಸಲು, ಪುನರ್ ಸೃಷ್ಟಿಸಲು ಸಾಧ್ಯವೇ? ಮನುಷ್ಯನನ್ನು ಸೃಷ್ಟಿಸುವುದು ಸುಲಭ. ಹೀಗೆಂದೇ ಮನುಷ್ಯ ಸಂತತಿ ಮಿತಿಮೀರಿ ಬೆಳೆಯುತ್ತಿದೆ. ಅವನ ಅಗಾಧ ಹಸಿವು ಹಿಂಗಿಸಲು ಪ್ರಕೃತಿಯ ಒಡಲು ಲೂಟಿಯಾಗುತ್ತಿದೆ. ಆದರೆ ವೈವಿಧ್ಯಮಯವಾದ ಪ್ರಕೃತಿಯನ್ನು ಸೃಷ್ಟಿಸುವುದು ಹೇಗೆ? ಒಂದು ಮರವನ್ನು ಸೃಷ್ಟಿಸಲು ಹತ್ತೆಂಟು ವರ್ಷಗಳೇ ಬೇಕು. ಒಂದು ಕಾಡು ಸೃಷ್ಟಿಯಾಗಲು ಶತಮಾನವೇ ಬೇಕಾಗಬಹುದು. ಅದೂ ಸೃಷ್ಟಿಸುವ ಮನಸ್ಸು ಮತ್ತು ಜಾಗವಿದ್ದರೆ ಮಾತ್ರ!

ಮುಖ್ಯವಾಗಿ ನಾವು ಗಮನಿಸಬೇಕಿರುವುದು ಅಭಿವೃದ್ಧಿಗಾಗಿ ನಾವು ತೆರುತ್ತಿರುವ ಬೆಲೆ ಏನು? ಹಾಗೂ ಪರಿಸರ ಸಂರಕ್ಷಣೆಗಾಗಿ ನಾವು ತೆರಬೇಕಿರುವ ಬೆಲೆ ಏನು? ಎಂಬುದು. ಪರಿಸರವನ್ನು ನಾಶಮಾಡದೇ ಕಟ್ಟಿಕೊಳ್ಳುವ ಅಭಿವೃದ್ಧಿ ಹಾಗೂ ಅಭಿವೃದ್ಧಿಗೆ ಪೂರಕವಾಗುವಂತೆ ಉಳಿಸಿಕೊಳ್ಳುವ ಪರಿಸರ ಎರಡೂ ನಮಗಿಂದು ಮುಖ್ಯವಾಗಬೇಕು. ಏಕೆಂದರೆ ಪರಿಸರ ಹಾಗೂ ಅಭಿವೃದ್ಧಿ ಎರಡೂ ಯಾವುದೇ ಒಂದು ಪ್ರದೇಶದ ಜನರಿಗೆ ಸೇರಿದ ವಿಷಯವಲ್ಲ. ಅದು ಸಾರ್ವತ್ರಿಕವಾದುದು ಹಾಗು ಸಾರ್ವಕಾಲಿಕವಾದುದು. ಅಭಿವೃದ್ಧಿ ಪ್ರಕೃತಿ ಕೇಂದ್ರಿತವಾಗಿದ್ದಾಗ ಅದು ಮಾನವೀಯವೂ, ಸಕಲ ಜೀವಪರವೂ ಆಗಿರುತ್ತದೆ. ಆದರೆ ನಾವಿಂದು ಮಾಡುತ್ತಿರುವ ಅಭಿವೃದ್ಧಿ ಮನುಷ್ಯ ಕೇಂದ್ರಿತವಾಗಿರುವುದರಿಂದ ರೂಕ್ಷವೂ, ಅಮಾನವೀಯವೂ ಆಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ, ಅಸೂಕ್ಷ್ಮವಾಗಿ ಕೈಗೊಳ್ಳುವ ಯಾವುದೇ ಯೋಜನೆಯಿಂದ ದೀರ್ಘಕಾಲೀನ, ಹಲವು ಬಾರಿ ಶಾಶ್ವತ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪಶ್ಚಿಮಘಟ್ಟದಲ್ಲಿ ಇದುವರೆಗೆ ನಡೆದ ರಸ್ತೆಮಾರ್ಗ, ರೈಲುಮಾರ್ಗ, ವಿದ್ಯುತ್‌ಮಾರ್ಗ, ಪೆಟ್ರೋಲಿಯಂ ಪೈಪ್‌ಲೈನ್, ಅಣೆಕಟ್ಟೆ, ಜಲವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯದಲ್ಲಿ ತೋರಿದ ಇಂತಹ ದುಡುಕುತನಗಳು ಶಾಶ್ವತ ಪಶ್ಚಾತ್ತಾಪಕ್ಕೆ ಕಾರಣವಾಗಿವೆ. ಅನೇಕ ನದಿ ಹಾಗೂ ಜಲಮೂಲಗಳು ಬತ್ತಿ ಹೋಗುವಂತೆ ಅವೈಜ್ಞಾನಿಕವಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳು, ದಕ್ಷಿಣ ಭಾರತದ ಹೆಚ್ಚಿನ ನದಿಗಳಿಗೆ ಜನ್ಮಸ್ಥಳವಾದ ಪಶ್ಚಿಮಘಟ್ಟವನ್ನು ಬರಡಾಗಿಸುತ್ತಿದೆ. ಮೊದಲಿಗೆ ಇಲ್ಲೀಗ ಆ ಜಲಮೂಲಗಳನ್ನು ಪುನರ್ ಸೃಷ್ಟಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಪರಿಸರವಾದಿಗಳು ಪಶ್ಚಿಮಘಟ್ಟಗಳ ಕಾಡು, ಅನನ್ಯ ಬೆಲೆಬಾಳುವ ಗಿಡ-ಮರ, ಅಮೂಲ್ಯ ಜೀವವೈವಿಧ್ಯ, heritage_western_ghatsಅಸಂಖ್ಯಾತ ಪ್ರಾಣಿಪಕ್ಷಿ ಪ್ರಭೇದಗಳು, ನೈಸರ್ಗಿಕ ನದಿ-ಝರಿ-ಜಲಪಾತಗಳ ಕುರಿತು ಭಾವುಕರಾಗಿ ಮಾತ್ರ ಮಾತನಾಡುತ್ತಿಲ್ಲ. ಮುಖ್ಯವಾಗಿ ಒಮ್ಮೆ ನಾಶವಾದರೆ ಇಂತಹ ಪ್ರಕೃತಿಯದ್ಭುತಗಳನ್ನು ನಾವು ಮರುಸೃಷ್ಟಿಸಲು ಸಾಧ್ಯವಿಲ್ಲ ಎಂಬ ಎಚ್ಚರ ಸದಾ ಅವರನ್ನು ಕಾಡುತ್ತಿದೆ. ಇದರ ಜೊತೆಗೆ ಪಶ್ಚಿಮಘಟ್ಟದ ಸಮೀಪದಲ್ಲಿ ವಾಸಿಸುತ್ತಿರುವ ನಮ್ಮಂಥ ಜನರಿಗೆ ಬೇರೆಯದೇ ಆದ ಸಮಸ್ಯೆಗಳು ಕಾಡುತ್ತಿರುತ್ತವೆ. ಪ್ರಮುಖವಾಗಿ ಆನೆ ಹಾಗೂ ಚಿರತೆಯಂಥಾ ವನ್ಯಜೀವಿಗಳು ಕಾಡು ನಾಶವಾದಂತೆಲ್ಲಾ ನಾಡಿಗೆ ನುಗ್ಗಿ ಬೆಳೆ, ಮನೆ-ಮಠಗಳನ್ನು, ಜನರು ಕಟ್ಟಿಕೊಂಡ ಬದುಕನ್ನು ನಾಶಮಾಡುವ ಕೆಲಸಕ್ಕೆ ತೊಡಗಿಕೊಳ್ಳುತ್ತವೆ. ಅವುಗಳನ್ನು ಹಿಡಿಯುವ, ಅಥವಾ ಕೊಂದು ಮನುಷ್ಯರ ಪ್ರಾಣ ರಕ್ಷಿಸಲೆಂದೇ ಅರಣ್ಯ ಇಲಾಖೆಯ ಸಿಬ್ಬಂದಿ ತಾವು ಮಾಡುವ ಕೆಲಸ ಬಿಟ್ಟು, ಹಲವು ಬಾರಿ ವನ್ಯಜೀವಿ ರಕ್ಷಣೆಯ ಕಾನೂನನ್ನು ಮೀರಿ ತಿಪ್ಪರಲಾಗ ಹಾಕಬೇಕಾಗಿದೆ. ಇದರಿಂದ ಈಗಾಗಲೇ ಕೋಟ್ಯಾಂತರ ರೂಪಾಯಿಗಳಷ್ಟು ಸರ್ಕಾರಿ ಹಣ ಹಾಗೂ ರೈತರ, ಬೆಳೆದು ನಿಂತ ಫಸಲು ನಷ್ಟವಾಗುವುದರೊಂದಿಗೆ, ಗಣನೀಯ ಪ್ರಮಾಣದಲ್ಲಿ ಜೀವ ಹಾನಿಯೂ, ವನ್ಯಜೀವಿ ಹತ್ಯೆಯೂ ಆಗುತ್ತಿದೆ. ಇದರೊಂದಿಗೆ ಕಾಡಿನಿಂದ ನಾಡಿಗೆ ವಲಸೆ ಬರುವ ಸಣ್ಣ-ಪುಟ್ಟ ಪ್ರಾಣಿ, ಪಕ್ಷಿ, ಕೀಟ, ಕ್ರಿಮಿಗಳ ದಾಳಿ ನಿರಂತರವಾಗಿ ಮಲೆನಾಡಿನ ಜನರನ್ನು ಕಾಡುತ್ತಿದೆ. ಇದು ಕಾಡಿನಲ್ಲೇ ತಮ್ಮ ಪಾಡಿಗೆ ತಾವು ವಾಸಿಸುತ್ತಾ ಬಂದಿರುವ ವನ್ಯಜೀವಿಗಳ, ಕ್ರಿಮಿ-ಕೀಟಗಳ ತಪ್ಪಲ್ಲ. ಪ್ರಕೃತಿಯ ಸಂಪತ್ತೆಲ್ಲಾ ತನಗಾಗಿ ಮಾತ್ರವೇ ಇರುವುದೆಂಬಂತೆ ಅದನ್ನು ಅಮಾನವೀಯವಾಗಿ ಲೂಟಿ ಮಾಡುತ್ತಿರುವ ಮನುಷ್ಯನ ಪರಮ ಸ್ವಾರ್ಥದ ಮಹಾಪರಾಧದ ಫಲ. ಇದು ಕಣ್ಣಿಗೆ ಕಾಣುವ ವಾಸ್ತವದ ಒಂದು ಮುಖ. ತಕ್ಷಣಕ್ಕೆ ಕಾಣದಂತಾ ಸೃಷ್ಟಿ ವೈಪರೀತ್ಯಗಳು ಲೆಕ್ಕವಿಲ್ಲದಷ್ಟಿರಬಹುದು.

ಹಾಗೇ ಬಯಲುಸೀಮೆಯ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ ಜನರು ಬಳಲುತ್ತಿರುವುದು, ದಿನಬಳಕೆಯ ಅಗತ್ಯತೆಗಳಿಗೆ, ವ್ಯವಸಾಯಕ್ಕೆ ನೀರಿಲ್ಲದೇ ಕಂಗಾಲಾಗಿರುವುದು, ವಾಸ್ತವದ ಇನ್ನೊಂದು ಮುಖ.

ಆದರೆ ಆ ವಾಸ್ತವ ಹಾಗೂ ಈ ವಾಸ್ತವ ಒಂದಕ್ಕೊಂದು ಮುಖಾಮುಖಿಯಾಗಿ ನಿಂತು ಯುದ್ಧವಾಡುವುದಾದರೆ ಪರಿಹಾರ ಹೇಗೆ ಸಾಧ್ಯ? ಈ ವೈರುಧ್ಯದ ನಡುವೆಯೇ ನಾವೊಂದು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ನಮಗಿಂದು ಸುಲಭದ, ತಕ್ಷಣದ, ದುಬಾರಿಯಾದ ಪರಿಹಾರಗಳ ಕಡೆಗೆ ಗಮನವೇ ಹೊರತು, ನೈಸರ್ಗಿಕವಾದ, ಕಡಿಮೆ ಖರ್ಚಿನ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ ಪರಿಹಾರಗಳ ಕಡೆಗೆ ಹೆಚ್ಚಿನ ಗಮನವಿಲ್ಲ. ಈ ದಿಕ್ಕಿನಲ್ಲಿ ಪ್ರಯತ್ನಗಳು ಆಗುತ್ತಿವೆಯಾದರೂ ಅದು ಅತ್ಯಲ್ಪ ಪ್ರಮಾಣದ್ದು. ಅಂಥಹ ಕೆಲವು ಮಾದರಿಗಳು ಇಲ್ಲಿವೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ರಾಜಸ್ಥಾನದ ಆಳ್ವಾರ್‌ನ ರಾಜೇಂದ್ರಸಿಂಗ್ ಅವರ ಭಗೀರಥ ಪ್ರಯತ್ನ ಪ್ರಕೃತಿಯಿಂದಲೇ rajendra-singh-check-damಪ್ರಕೃತಿಯನ್ನು ಸೃಷ್ಟಿಸುವ ಒಂದು ಮಾದರಿ. ಅವರು ತರುಣ ಭಾರತ ಸಂಘವೆಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಮಳೆ ನೀರನ್ನು ಸಂಗ್ರಹಿಸಲು ಹಳ್ಳಿ ಹಳ್ಳಿಗಳಲ್ಲಿ 4500 ಜೋಹಡ್‌ಗಳನ್ನು [ಮಣ್ಣಿನ ತಡೆಗೋಡೆಗಳು] ನಿರ್ಮಿಸಿ, ಬತ್ತಿ ಹೋಗಿದ್ದ 5 ನದಿಗಳನ್ನು ಪುನರುತ್ಥಾನಗೊಳಿಸಿ, ಪೂರ್ವ ರಾಜಸ್ಥಾನದ ಮರುಭೂಮಿಯಿಂದ ಆವೃತವಾದ 850 ಹಳ್ಳಿಗಳಲ್ಲಿ ಯತೇಚ್ಛ ನೀರು ಉಕ್ಕಿಸಿ ಹಸಿರು ಸೃಷ್ಟಿಸಿದ ಹರಿಕಾರರಾಗಿದ್ದಾರೆ. ನೀರುಸಂತ, ನೀರುಸಂರಕ್ಷಕನೆಂಬ ಬಿರುದಿಗೆ ಪಾತ್ರರಾಗಿ ಮಳೆ ನೀರಿನ ಕೊಯ್ಲಿಗೆ ಹೊಸ ಭಾಷ್ಯ ಬರೆದ ಆಧುನಿಕ ಕ್ರಾಂತಿ ಭಗೀರಥ ಅವರಾಗಿದ್ದಾರೆ. ಅವರ ತಾಳ್ಮೆ, ಸಂಘಟನಾ ಕೌಶಲ್ಯ, ಪ್ರಕೃತಿ ಸೂಕ್ಷ್ಮತೆಯನ್ನೊಳಗೊಂಡು, ಕಡಿಮೆ ವೆಚ್ಚದಲ್ಲಿ ನಮ್ಮ ದೇಸೀ ಪರಂಪರಾಗತ ಜಾಣ್ಮೆಯನ್ನು ಬಳಸಿ ಮಾಡಿದ ಈ ಸಾಧನೆ, ನಮ್ಮ ಶೈಕ್ಷಣಿಕ ಶಿಸ್ತಿನ ಪಾಂಡಿತ್ಯಕ್ಕಿಂಥಾ ಸಮರ್ಥವಾದುದೆಂದು ಸಾಬೀತಾಗಿದೆ.

ಅದೇ ಉತ್ತರ ರಾಜಸ್ಥಾನದ ಲಾಪೋಡಿಯಾದ ಲಕ್ಷ್ಮಣಸಿಂಗ್ ಅವರದು ಬರಕ್ಕೇ ಬೇಲಿ ಹಾಕಿದ ಇನ್ನೊಂದು ನೀರಿನ ಗಾಥೆ. ರಾಜಸ್ಥಾನದ ಈ ಅವಿದ್ಯಾವಂತ ರೈತ ಊರವರನ್ನು ಸಂಘಟಿಸಿ ಬರಡು ಮರುಭೂಮಿಯ ಹಳ್ಳಿಯಲ್ಲಿ ಹಸಿರು ಸೃಷ್ಟಿಸಿದ್ದು, ಅಕ್ಕಪಕ್ಕದ 20 ಗ್ರಾಮಗಳ 31 ಕೆರೆಗಳನ್ನು ಜೋಡಿಸಿ, ಬರ ಹಾಗೂ ನೆರೆಗಳನ್ನು ಏಕಕಾಲಕ್ಕೆ ನಿಯಂತ್ರಿಸಿ, ಸುತ್ತಲ 350 ಹಳ್ಳಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಈಗ ಒಂದು ಇತಿಹಾಸ. ಈ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ OLYMPUS DIGITAL CAMERAಮಾದರಿಯೊಂದನ್ನು ಲಕ್ಷ್ಮಣ್ ಅಭಿವೃದ್ಧಿಪಡಿಸಿದ್ದಾರೆ. ಅದು ಚೌಕ ವಿಧಾನವೆಂದೇ ಜನಪ್ರಿಯವಾಗಿದೆ. ಹುಲ್ಲುಗಾವಲಿನಲ್ಲಿ ಚೌಕಗಳನ್ನು ನಿರ್ಮಿಸಿ ನೀರನ್ನು ಇಂಗಿಸಿ, ಸಂಗ್ರಹಿಸುವ ವಿಧಾನ ಇದಾಗಿದೆ. ಇಲ್ಲೂ ಗ್ರಾಮೀಣ ವಿಕಾಸ ನವ್ ಯುವಕ್ ಮಂಡಲ್ ಎಂಬ ಸಂಘಟನೆಯಿಂದಲೇ ಇಷ್ಟೆಲ್ಲಾ ಸಾಧ್ಯವಾಗಿದ್ದು ಎಂಬುದು ಗಮನಾರ್ಹ. ಮಳೆ ನೀರನ್ನು ಶೇಖರಿಸಿ, ಇಂಗಿಸಿ ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳನ್ನು ನಿರ್ಮಿಸಿ ಇವರು ದಾಖಲೆ ಬರೆದಿದ್ದಾರೆ. ಇದಾವುದೂ ಪವಾಡಗಳಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು. ನಿಸರ್ಗದ ಒಂದೊಂದೇ ಗುಟ್ಟುಗಳನ್ನರಿತು ನಮ್ಮ ಸೋಲಿನ ಮೂಲ ಎಲ್ಲಿದೆ ಎಂದು ಅರಿತೆ ಎನ್ನುವ ಲಕ್ಷ್ಮಣ್ ಅವರ ಮಾತು ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ.

ಇದು ದೂರದ ರಾಜಸ್ಥಾನದ ಮಾತಾಯ್ತು. ನಮ್ಮಲ್ಲಿ ಇಂಥ ಪ್ರಯತ್ನಗಳು ಆಗಿಯೇ ಇಲ್ಲವೇ? ಎಂದು ಹುಡುಕಲು ಹೊರಟರೆ, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ನೀರಿನಜೋಗಿ ಎಂದೇ ಹೆಸರು ಮಾಡಿರುವ ಕೃಷಿ ಪಂಡಿತ ಶಿವಕುಮಾರ ಸ್ವಾಮೀಜಿ, ಬರದ ನಾಡಿನಲ್ಲೂ ಮಳೆ ನೀರು ಸಂಗ್ರಹ ಮಾಡಿ, ಹಸಿರು ಸೃಷ್ಟಿಸಿ ಸುತ್ತಲಿನ ಹಳ್ಳಿಗಳಿಗೆ ಜೀವ ಚೈತನ್ಯ ತುಂಬಿದ್ದಾರೆ.

ಮಳೆಕುಯ್ಲು ಹಾಗೂ ಸಂಗ್ರಹಣಾ ವಿಧಾನವನ್ನು ಸಮರ್ಥವಾಗಿ ಅಳವಡಿಸಿಕೊಂಡರೆ ನಮ್ಮ ಬಹಳಷ್ಟು ನೀರಿನ ಸಮಸ್ಯೆ ನೀಗಿಹೋಗುತ್ತದೆ ಎನ್ನುತ್ತಾರೆ ನಮ್ಮ ನೀರಿನ ತಜ್ಞರು. ಸರ್ಕಾರದ ಸುವರ್ಣ ಜಲ ಯೋಜನೆ ಈಗಾಗಲೇ 23683 ಸರ್ಕಾರಿ ಶಾಲೆಗಳಲ್ಲಿ ಅಳವಡಿಕೆಯಾಗಿ ಸಮರ್ಥ ಮಳೆಕೊಯ್ಲು ವಿಧಾನದಿಂದ ನೀರಿನ ಕೊರತೆ ನೀಗಿಕೊಂಡಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಳೆನೀರಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 8000 ದಿಂದ 15000 ಲೀಟರ್‌ಗಳಷ್ಟಿವೆ. water-harvestingಮನೆ, ಶಾಲೆ, ಯಾವುದೇ ಬೃಹತ್ ಕಟ್ಟಡದ ಮೇಲ್ಚಾವಣಿಗಳಿಂದ ಮಳೆ ನೀರು ಸಂಗ್ರಹಿಸಿ, ಅದರ ಪುನರ್ ಬಳಕೆಯ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಕುರಿತು ಒಂದು ಆಂದೋಲನದ ರೀತಿಯಲ್ಲಿ, ಸಾರ್ವತ್ರಿಕವಾಗಿ ಜನರಲ್ಲಿ ಜಲ ಜಾಗೃತಿಯನ್ನೂ, ಅದನ್ನು ಪ್ರತಿಯೊಂದು ಕಟ್ಟಡದಲ್ಲೂ ಅಳವಡಿಸುವ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಂಡಾಗ ನಮ್ಮ ಜನರಲ್ಲೂ ಅದರ ಅರಿವು ಮೂಡುತ್ತದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಮಳೆನೀರು ಕೊಯ್ಲು ಮಾದರಿ ಉದ್ಯಾನವನವನ್ನು ರೂಪಿಸಿ ಪ್ರಚಾರ ಕಾರ್ಯ ಆರಂಭಿಸಿರುವುದೂ ಒಂದು ಗಮನಾರ್ಹ ಪ್ರಯತ್ನ. ಇದಲ್ಲದೇ ಹಳ್ಳಿಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಮಳೆ ನೀರಿನ ಸಮರ್ಥ ಬಳಕೆ ಕುರಿತು ಕೃಷಿ ಹಾಗೂ ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ.

ಇಂತಹ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸುವ, ಪ್ರಕೃತಿ ಕೇಂದ್ರಿತ ನೈಸರ್ಗಿಕ ಪ್ರಯತ್ನಗಳು ಭೂಮಿಯ ಮೇಲೆ ಮನುಷ್ಯ ಇನ್ನಷ್ಟು ವರ್ಷ ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುತ್ತವೆ. ಅದಿಲ್ಲದೇ ಪ್ರಕೃತಿಯ ವಿರುದ್ಧವಾಗಿ ನಾವಿಡುವ ಪ್ರತಿ ಹೆಜ್ಜೆಯೂ ನಮ್ಮ ನಾಶಕ್ಕೆ ಕಂದಕವನ್ನು ನಾವೇ ತೋಡಿಕೊಳ್ಳುವಂತಾ ಮೂರ್ಖತನವಾದೀತು. ಸಹನಾಮಯಿ ಧರಿತ್ರಿ ತನ್ನ ಮೇಲಿನ ಅತ್ಯಾಚಾರಗಳಿಗೆ, ವರ್ತಮಾನವಷ್ಟೇ ಮುಖ್ಯ, ಎಂಬ ನಮ್ಮ ಹುಂಬತನಕ್ಕೆ, ಈಗಾಗಲೇ ನಾವು ಚೇತರಿಸಿಕೊಳ್ಳಲಾಗದಂತಾ ಪೆಟ್ಟುಗಳನ್ನು ಕೊಡುತ್ತಿದ್ದಾಳೆ. ಅವಳೊಂದಿಗಿನ ಪ್ರೀತಿಯ ಅನುಸಂಧಾನದಿಂದ ಮಾತ್ರ ನಾವು ನೆಮ್ಮದಿಯ ನಾಳೆಗಳನ್ನು ಕಾಣಲು ಸಾಧ್ಯ.

Leave a Reply

Your email address will not be published.