Daily Archives: October 9, 2013

ಮರೆತು ಹೋದ 1949ರಲ್ಲಿ ಕೊಟ್ಟ ವಾಗ್ದಾನ

ಮೂಲ : ವಿದ್ಯಾ ಸುಬ್ರಮಣ್ಯಂ
ಅನುವಾದ : ಬಿ.ಶ್ರೀಪಾದ ಭಟ್

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಸಕ್ರಿಯ ರಾಜಕಾರಣದಿಂದ ದೂರವಿರುತ್ತೇನೆ ಎಂದು ತನ್ನ ಪಕ್ಷದ ಸಂವಿಧಾನದಲ್ಲಿ ಅತ್ಯಂತ ಸ್ಪಷ್ಟವಾಗಿ ಬರೆದಿದೆ. ತನ್ನ ಪಕ್ಷದ ಸಂವಿಧಾನವನ್ನು ಸಹ ಅನಿವಾರ್ಯವಾಗಿ ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಒತ್ತಾಯದ ಮೇರೆಗೆ 1949 ರಲ್ಲಿ ಬರೆದಿತ್ತು ಆರೆಸಸ್. ಆದರೆ ಭಾರತದ ಆ ಕಾಲದ ಇತಿಹಾಸವನ್ನು 2013ರ ಘಟನೆಗಳು ಸಂಪೂರ್ಣವಾಗಿ ಅಳಸಿಹಾಕುತ್ತವೆ. Sardar_patelಇಂದು ಆರೆಸಸ್ ಭಾರತೀಯ ಜನತಾ ಪಕ್ಷವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ತನ್ನ ಪಕ್ಷದೊಳಗಿನ ಅಂತರಿಕ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ನರೇಂದ್ರ ಮೋದಿಯನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಸಿತು. ರಾಜಕೀಯವಾಗಿ ತಾನು ಸನ್ನಧ್ಧ ಎಂದು ಇದಕ್ಕಿಂತಲೂ ಮಿಗಿಲಾಗಿ ಹೇಳಲು ಸಾಧ್ಯವಿಲ್ಲ

ಒಂದು ಕಾಲದ ಜನಸಂಘ ಮತ್ತು ಈಗಿನ ಬಿಜೆಪಿಯನ್ನು ಹುಟ್ಟಿ ಹಾಕಿದ್ದು ಆರೆಸಸ್. ಆಗಿನ ಜನಸಂಘದ ಸಾಂಸ್ಕೃತಿಕ ಮತ್ತು ರಾಜಕೀಯ ಘಟಕಗಳಾಗಿ ಅದರ ಸ್ವಯಂಸೇವಕರು ನೇಮಕಗೊಂಡಿದ್ದರು. ತನ್ನ ಪಕ್ಷದ ಸಂವಿಧಾನದಲ್ಲಿ ತಾನು ರಾಜಕೀಯದಿಂದ ದೂರವಿರುವುದನ್ನು ಸ್ಪಷ್ಟವಾಗಿ ಹೇಳಿದ್ದ ಆರೆಸಸ್ ತನ್ನ ಸ್ವಯಂಸೇವಕರಿಗೆ ಮಾತ್ರ ರಾಜಕೀಯವನ್ನು ಪ್ರವೇಶಿಸುವುದಕ್ಕೆ ಅನುಮತಿಯನ್ನು ನೀಡಿತ್ತು. ಇದನ್ನೇ ತನ್ನ ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಂಡ ಆರೆಸಸ್ ತನ್ನ ಸ್ವಯಂಸೇವಕರನ್ನು ಜನಸಂಘ/ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಿತು. ಆರೆಸಸ್‌ನ ತಳಮಟ್ಟದ ಕಾರ್ಯಕರ್ತರಾಗಿ ಜನಸಂಘ/ಬಿಜೆಪಿಯನ್ನು ಪ್ರವೇಶಿಸಿದ ಲಾಲ್‌ಕೃಷ್ಣ ಅಡ್ವಾನಿಯವರಿಂದ ನರೇಂದ್ರ ಮೋದಿಯವರೆಗೂ ಪ್ರತಿಯೊಬ್ಬ ನಾಯಕರೂ ನಂತರ ದೆಹಲಿ ಮತ್ತು ನಾಗಪುರದ ಆರೆಸಸ್ ಕಛೇರಿಗೆ ತೀರ್ಥಯಾತ್ರೆಯಂತೆ ಭೇಟಿಕೊಡುತ್ತಿದ್ದುದು ಒಂದು ಕಡ್ಡಾಯವಾದ ಪಠ್ಯಕ್ರಮವಾಗಿತ್ತು. ಆದರೆ ಆರೆಸಸ್‌ನ ಮುಖ್ಯಸ್ಥ ಸರಸಂಚಾಲಕ ಮಾತ್ರ ಬಹಿರಂಗವಾಗಿ ತನ್ನ ಹಕ್ಕನ್ನು ಪ್ರತಿಪಾದಿಸುವಂತಿಲ್ಲವೆಂಬುದು ಬಿಜೆಪಿ ಮತ್ತು ಆರೆಸಸ್ ನಡುವಿನ ಒಂದು ಆನಧಿಕೃತ ವಿಷಯವಷ್ಟೇ. ಈ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರೊಂದಿಗೆ ಮಾಡಿಕೊಂಡ ಒಪ್ಪಂದಂತೆ 1977-79 ಮತ್ತು 1998-2004 ಸಂದರ್ಭದ ಕೇಂದ್ರ ಸರ್ಕಾರಗಳಲ್ಲಿ ಆರೆಸಸ್ ಬಹಿರಂಗ ರಾಜಕಾರಣದಿಂದ ದೂರವುಳಿದತ್ತು. 2013 ರ ರಾಜಕೀಯ ವಿದ್ಯಮಾನಗಳು ವಿಚಿತ್ರ ತಿರುವುಗಳನ್ನು ಪಡೆದುಕೊಂಡು ತೆರೆಮರೆಯಲ್ಲಿದ್ದ ಆರೆಸಸ್ ಹಠಾತ್ತಾನೆ ಮುನ್ನೆಲೆಗೆ ಬಂದು ಅಧಿಕಾರದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿತು.

2005 ರಿಂದೀಚಿಗಿನ ಕಳೆದ ಕೆಲವು ವರ್ಷಗಳ ವಿದ್ಯಮಾನಗಳನ್ನು ಅವಲೋಕಿಸಿದಾಗ ಅಡ್ವಾನಿಯವರು ತಮ್ಮ ಪಾಕಿಸ್ತಾನದ ಭೇಟಿಯ ಸಂದರ್ಭದಲ್ಲಿ ಜಿನ್ನಾರನ್ನು ಪ್ರಶಂಸಿಸಿ ಮಾತನಾಡಿದ್ದು ಸಂಘಪರಿವಾರವನ್ನು ಎಷ್ಟರಮಟ್ಟಿಗೆ ಕೆರಳಿಸಿತೆಂದರೆ ಅಡ್ವಾನಿಯವರನ್ನು ಬಿಜೆಪಿಯ ಅಧ್ಯಕ್ಷ ಪದವಿಯಿಂದ ನಿರ್ಗಮಿಸುವವರೆಗೂ ಬಿಡಲಿಲ್ಲ. ತದನಂತರ 2009 ರಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಬಿಂಬಿತವಾದರೂ ಅಡ್ವಾನಿಯವರ ವರ್ಚಸ್ಸು ಸಂಘಪರಿವಾರದಲ್ಲಿ ಸಂಪೂರ್ಣವಾಗಿ ಕಳೆಗುಂದಿತ್ತು. Advaniಅಡ್ವಾನಿಯವರ ಕಡೆಗಣಿಸುವಿಕೆಯ ಪ್ರಕ್ರಿಯೆ 2005 ರಿಂದ ಶುರುವಾಗಿ ಅದು ಇಂದು ಅವರನ್ನು ಪಕ್ಷದೊಳಗೆ ಸಂಪೂರ್ಣವಾಗಿ ಏಕಾಂಗಿಯನ್ನಾಗಿ ಮೂಲೆಗುಂಪು ಮಾಡುವವರೆಗೂ ಬಂದು ತಲುಪಿದೆ. ಇದರಿಂದ ಹತಾಶರಾಗಿದ್ದ ಅಡ್ವಾನಿಯವರು 2005ರ ಸೆಪ್ಪೆಂಬರ್‌ನಲ್ಲಿ ಚೆನ್ನೈಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಂತಿಮ ದಿನದಂದು ಮಾತನಾಡುತ್ತ “ತನ್ನ ಪಕ್ಷ ಬಿಜೆಪಿಯು ಆರೆಸಸ್‌ನೊಂದಿಗೆ ಸಮಾಲೋಚಿಸದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಈ ನೀತಿಯು ಪಕ್ಷಕ್ಕಾಗಲೀ ಆರೆಸಸ್‌ಗಾಗಲಿ ಯಾವುದೇ ಒಳಿತನ್ನು ಮಾಡುವುದಿಲ್ಲ. ಈ ನೀತಿಯಿಂದ ಆರೆಸಸ್‌ನ ಧ್ಯೇಯವಾದ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತದೆ. ಆರೆಸಸ್ ಮತ್ತು ಬಿಜೆಪಿ ಈ ಭಾವನೆಯನ್ನು ಹೋಗಲಾಡಿಸಲು ಒಂದಾಗಿ ಪ್ರಯತ್ನಿಸಬೇಕು.” ಎಂದು ಹೇಳಿದರು. ಆಡ್ವಾನಿಯವರು ದಾಕ್ಷಿಣ್ಯವಿಲ್ಲದೆ ಆಗ ಆರೆಸಸ್ ಅನ್ನು ತಂಟೆಕೋರನೆಂದು ಕರೆದರು. ಆದರೆ ಏಳು ವರ್ಷಗಳ ನಂತರ ನರೇಂದ್ರ ಮೋದಿಯನ್ನು ಮೊದಲು ಚುನಾವಣಾ ಪ್ರಚಾರದ ಅಧ್ಯಕ್ಷನನ್ನಾಗಿಯೂ ನಂತರ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿಯೂ ಪಟ್ಟ ಕಟ್ಟಿದ ಆರೆಸಸ್ ಆ ಮೂಲಕ ಮತ್ತೊಮ್ಮೆ ಬಿಜಿಪಿ ಮೇಲಿನ ತನ್ನ ಆಧಿಕಾರವನ್ನು ದಾಖಲಿಸಿತು. ಜೂನ್ 11, 2013ರಲ್ಲಿ ಸಂಘಪರಿವಾರವು ಈಗಿನ ಸರಸಂಚಾಲಕರಾದ ಮೋಹನ ಭಾಗವತ್ ಅವರು ಅಡ್ವಾನಿಯವರನ್ನು ಮಾತನಾಡಿಸಿ ಬಿಜೆಪಿಯ ಸಂಸದೀಯ ಮಂಡಳಿಯ ನಿರ್ಣಯವನ್ನು ಗೌರವಿಸಬೇಕೆಂದು, ರಾಷ್ಟ್ರದ ಹಿತವನ್ನು ಗಮನದಲ್ಲಿರಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕೆಂದು ಹೇಳಿದರು ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿತು. ಬಿಜೆಪಿಯಿಂದ ಅಡ್ವಾನಿಯವರಿಗೆ ಬೇಡಿಕೆಯನ್ನು ಸಲ್ಲಿಸಿದ್ದರೆ ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್‌ರು ಅಡ್ವಾನಿಯವರಿಗೆ ಆಜ್ಞೆಯನ್ನು ನೀಡಿದ್ದರು. ಪದಗಳು ಸೌಜನ್ಯತೆಯಿಂದ ಕೂಡಿದ್ದರೂ ಆ ಮೂಲಕ ತಲುಪಿಸಿದ ಸಂದೇಶ ಮಾತ್ರ ಕಟುವಾಗಿತ್ತು. ಈ ರೀತಿಯಾಗಿ 2005 ರಲ್ಲಿ ಶುರುವಾದ ಬಿಜೆಪಿಯ ಕಬ್ಜಾ ಪ್ರಕ್ರಿಯೆ 2013 ರ ವೇಳೆಗೆ ಸಂಪೂರ್ಣಗೊಂಡು ತನ್ನ ಲಾಜಿಕಲ್ ಗುರಿಯನ್ನು ಮುಟ್ಟಿದೆ.

1949 ರಲ್ಲಿ ಪಟೇಲರಿಗೆ ಕೊಟ್ಟ ಮಾತಿನ ಪ್ರಕಾರ ತನ್ನ ಪಕ್ಷದ ಸಂವಿಧಾನವನ್ನು ರಚಿಸಿದ ಆರೆಸಸ್ ಅದರಲ್ಲಿ ರಾಜಕೀಯವನ್ನು ಪ್ರವೇಶಿಸುವುದಿಲ್ಲವೆಂದೂ ತನ್ನನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸಿಕೊಳ್ಳುವುದೆಂದೂ ಸ್ಪಷ್ಟವಾಗಿ ತಿಳಿಸಿತ್ತು. 1948 ರಲ್ಲಿ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರೆಸಸ್‌ನ ಮೇಲೆ ವಿಧಿಸಿದ ನಿರ್ಬಂಧನೆಯನ್ನು ಹಿಂತೆಗುದುಕೊಳ್ಳುವ ಸಂದರ್ಭದಲ್ಲಿ ಮೇಲಿನ ಕಂಡೀಶನ್ ಅನ್ನು ಪ್ರ್ರಮುಖವಾಗಿ ಪ್ರತಿಪಾದಿಸಿದ್ದರು ಆಗಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್. ಆರೆಸಸ್ gandhi_dead_bodyಅನ್ನು ಗಾಂಧಿಯವರ ಹತ್ಯೆಗೆ ನೇರವಾಗಿ ಕಾರಣವೆಂದು ಆಪಾದಿಸದಿದ್ದರೂ ಆರೆಸಸ್‌ನ ಹಿಂಸಾತ್ಮಕ ನಡುವಳಿಕೆ ಮತ್ತು ಪ್ರಚೋದನಾತ್ಮಕ ಚಿಂತನೆಗಳೇ ಗಾಂಧಿಯವರ ಹತ್ಯೆಗೆ ಕಾರಣಗಳಲ್ಲೊಂದು ಎಂದು ಪಟೇಲರು ನಂಬಿದ್ದರು. ಗಾಂಧೀಜಿಯವರ ಹತ್ಯೆಯ ನಂತರ ಆರೆಸಸ್ ಅನ್ನು ನಿಷೇಧಿಸಲು 4 ನೇ ಫೆಬ್ರವರಿ 1948 ರಂದು ಹೊರಡಿಸಿದ ನೋಟಿಫಿಕೇಶಿನಿನಲ್ಲಿ ಆಗಿನ ಸರ್ಕಾರವು “ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಮೂಲಭೂತ ಆದರ್ಶಗಳಾದ ಭ್ರಾತೃತ್ವ, ಪ್ರೀತಿ, ಸಮಾನತೆಗಳನ್ನು ಪಾಲಿಸಲಿಲ್ಲ. ಬದಲಾಗಿ ಸಂಘಪರಿವಾರದ ಸದಸ್ಯರು ಗುರುತರವಾದ ಭಯ ಹುಟ್ಟಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸಂಘಪರಿವಾರದ ಸದಸ್ಯರು ವ್ಯವಸ್ಥೆಯಲ್ಲಿ ಹಿಂಸೆಯನ್ನು ಹುಟ್ಟುಹಾಕಿದರು. ದರೋಡೆ, ಗಲಭೆ, ಹತ್ಯೆಗಳನ್ನು ನಡೆಸಿದರು. ಶಸ್ತ್ರಗಳನ್ನು, ಹಣವನ್ನು ವಸೂಲಿ ಮಾಡಿದರು. ದ್ವೇಷಮಯವಾದ, ಗಲಭೆಗಳನ್ನು ನಡೆಸುವಂತೆ ಕರೆಕೊಡುವಂತಹ, ಭಯೋತ್ಪಾದಕ ಪಾಠಗಳನ್ನು ತಿಳಿಸುವಂತಹ ಕರಪತ್ರಗಳನ್ನು ಸಾರ್ವಜನಿಕವಾಗಿ ಹಂಚಿದರು. ಈ ಕಾರ್ಯತಂತ್ರಗಳನ್ನು ಗುಪ್ತವಾಗಿ ನಡೆಸಿದರು,” ಎಂದು ಅಭಿಪ್ರಾಯಪಟ್ಟಿತು.

4 ನೇ ನವೆಂಬರ್‌ನಲ್ಲಿ ಪಟೇಲ್ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, “ಇತರೇ ರಾಜ್ಯಗಳಿಂದಲೂ ಈ ಆರೆಸಸ್ ವಿರುದ್ಧ ನಮಗೆ ದೂರುಗಳು ಬಂದಿವೆ. ಆ ದೂರುಗಳ ಪ್ರಕಾರ ಆರೆಸಸ್ ಸದಸ್ಯರು ನಡಾವಳಿಗಳು ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದ್ದು. ಸದಾ ಗಲಭೆಗಳನ್ನು ಪ್ರಚೋದಿಸುತ್ತಿದ್ದರು,” ಎಂದು ತಿಳಿಸಿದ್ದರು.

ಇದಕ್ಕೂ ಮುಂಚೆ ಗೃಹಮಂತ್ರಿ ಎರಡು ಪತ್ರಗಳನ್ನು ಬರೆದಿದ್ದರು. ಮೊದಲನೇ ಪತ್ರವನ್ನು ಜುಲೈ 1948ರಲ್ಲಿ ಆಗಿನ ಆರೆಸಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಬರೆದಿದ್ದರು. ಅದರಲ್ಲಿ ಆರೆಸಸ್ ಚಟುವಟಿಕೆಗಳು ಸರ್ಕಾರದ ವಿರುದ್ಧದ ಪಿತೂರಿಯಾಗಿದೆ. ಸರ್ಕಾರದ ಇರುವಿಕೆಗೇ ಭಂಗ ತರುವಂತಿದೆ. ಬುಡಮೇಲು ಮಾಡುವಂತಹ ಅದರ ಕೃತ್ಯಗಳು ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ಸ್ಪಷ್ಟವಾಗಿ ಬರೆದಿದ್ದರು.

11 ನೇ ಸೆಪ್ಟೆಂಬರ್ 1948 ರಂದು ಗೋಳ್ವಾಲ್ಕರ್ ಅವರಿಗೆ ಬರೆದ ಎರಡನೇ ಪತ್ರದಲ್ಲಿ ಪಟೇಲರು “Gandhi's Funeralಇಂದು ಆರೆಸಸ್ ಹುಟ್ಟುಹಾಕಿದ ದ್ವೇಷದ ಚಿಂತನೆಗಳಿಂದಾಗಿ ದೇಶದಲ್ಲಿ ಸೃಷ್ಟಿಗೊಂಡ ಕಮ್ಯೂನಲ್‌ನ ವಿಷಯುಕ್ತ ವಾತಾವರಣ ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಗಾಂಧೀಜಿವರು ತೀರಿಕೊಂಡ ಬಳಿಕ ಆರೆಸಸ್ ಸದಸ್ಯರು ಸಿಹಿಯನ್ನು ಹಂಚಿದರು. ಇದು ನಾಗರಿಕರಲ್ಲಿ ತಿರಸ್ಕಾರವನ್ನು ಹುಟ್ಟಿಸಿದೆ,” ಎಂದು ಬರೆಯುತ್ತಾರೆ.

ಈ ಎಲ್ಲ ಹಿನ್ನೆಲೆಗಳಲ್ಲಿ ಆಗಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲರು ಆರೆಸಸ್‌ನಿಂದ ದೇಶದ ಧ್ವಜವನ್ನು ಗೌರವಿಸುವಂತೆ ಆದೇಶಿಸುತ್ತಾರೆ (ಕಡೆಗೂ ಆರೆಸಸ್ ಗೌರವಿಸುವುದು ತನ್ನದೇ ಆದ ಭಗವದ್ವಜವನ್ನು). ತನ್ನ ಎಲ್ಲಾ ಚಟುವಟಿಕೆಗಳನ್ನು ಬಹಿರಂಗವಾಗಿ ಕಾನೂನಿನ ಅಡಿಯಲ್ಲಿ ನಡೆಸಬೇಕೆಂತಲೂ, ಸಕ್ರಿಯ ರಾಜಕಾರಣದಿಂದ ದೂರವಿರಬೇಕೆಂತಲೂ ಆರೆಸಸ್‌ನಿಂದ ವಾಗ್ದಾನ ಪಡೆಯುತ್ತಾರೆ.

ಆದರೆ ಇಂದು ಆರೆಸಸ್ ಸಕ್ರಿಯ ರಾಜಕಾರಣಕ್ಕೆ ಮರಳುವ ಮೂಲಕ 1949 ರಲ್ಲಿ ವಲ್ಲಭಭಾಯಿ ಪಟೇಲರಿಗೆ ನೀಡಿದ ವಾಗ್ದಾನವನ್ನು ಭಂಗಗೊಳಿಸಿದೆ.

( ಕೃಪೆ : ದಿ ಹಿಂದೂ, 8ನೇ ಅಕ್ಟೋಬರ್, 2013)