Daily Archives: October 11, 2013

ಪಾಪಪ್ರಜ್ಞೆಯ ಚಿತ್ತ, ಅಂಧಶ್ರದ್ದೆಯ ಸರಳ ವಾಸ್ತುವಿನತ್ತ..

– ಬಿ.ಜಿ. ಗೋಪಾಲಕೃಷ್ಣ, ಹಾಸನ

ವಾಸ್ತುಶಾಸ್ತ್ರ, ಇತ್ತೀಚಿನ ದಿನಗಳಲ್ಲಿ ಸರಳ ವಿಶೇಷಣದೊಂದಿಗೆ ದುಬಾರಿಯ ಮೌಢ್ಯವನ್ನು ಬಿತ್ತುತ್ತಾ ಸರಳ ವಾಸ್ತುಶಾಸ್ತ್ರವಾಗಿ ಬದಲಾಗಿದೆ. ಮನುಷ್ಯನಿಗೆ ರೋಗ-ರುಜಿನಗಳು ಅವನ ಶ್ರೀಮಂತಿಕೆಯ ವೈಭವವನ್ನು ತಿಳಿದು ಬರುವುದಿಲ್ಲ. ಅವನ ಐಷಾರಾಮಿತನದ ಸೋಮಾರಿತನ, ಒತ್ತಡದ ಜೀವನ ಶೈಲಿಗಳಿಗೆ ಓಗೊಟ್ಟು ಸಖ್ಯ ಬಯಸಿ ಬರುತ್ತವೆ. ಆದರೆ ಸರಳ ವಾಸ್ತುವಿನ ವಿಷಯವೇ ಬೇರೆ, ಶ್ರೀಮಂತಿಕೆಯ ಅಂಧಕಾರದ ಮೌಢ್ಯತೆಯನ್ನು ಅನುಸರಿಸಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತದೆ.

‘ಭಯವೇ ಭಕ್ತಿಯ ಮೂಲವಯ್ಯ’ ಎಂಬಂತೆ, ಭಯ ಇದ್ದೆಡೆ ಅಂಧಕಾರ, ಮೌಢ್ಯತೆ, ಮೂಢನಂಬಿಕೆ, ಅಂಧಶ್ರದ್ಧೆಗಳ sarala-vaastuಭಕ್ತಿ ಮನೆಮಾಡುವುದರಲ್ಲಿ ಎರಡನೆಯ ಮಾತಿಲ್ಲ. ಭಯದ ಮೂಲ, ತಿಳಿವಳಿಕೆಯ ಕೊರತೆ ಇರಬಹುದೇ ಹೊರತು, ಸಾಕ್ಷರತೆಯ ಕೊರತೆ ಇರಲಾರದು. ಏಕೆಂದರೆ ಇತ್ತೀಚಿನ ದಿನಳಲ್ಲಿ ಅಕ್ಷರ ಜ್ಞಾನವಿಲ್ಲದವರಿಗಿಂತ ಅಕ್ಷರ ತಿಳಿದ ಮತ್ತು ನಗರವಾಸಿಗಳೇ ಇಂತಹ ಮೌಢ್ಯತೆಗೆ ಹೆಚ್ಚು ಹೆಚ್ಚು ಬಲಿಯಾಗತ್ತಿದ್ದಾರೆ.

ಪಠ್ಯಕ್ರಮದಲ್ಲಿ ಅಭ್ಯಸಿಸುವುದೇ ಒಂದು, ನಿಜ ಜೀವನದಲ್ಲಿ ಅಳವಡಿಸಿಕೂಳ್ಳುವುದೇ ಮತ್ತೊಂದಾಗಿದೆ. ಓದಿನಿಂದ ಅಕ್ಷರಸ್ತರಾಗುತ್ತಿದ್ದಾರೆಯೇ ವಿನಃ, ಜ್ಞಾನವಂತರಾಗುತ್ತಿರುವವರ ಸಂಖ್ಯೆ ವಿರಳ. ಇದಕ್ಕೆ ಪೂರಕ ಎಂಬಂತೆ ನಮ್ಮ ಸುತ್ತಮುತ್ತಲಿನ ಸಮಾಜಘಾತುಕ ಪಟ್ಟಭದ್ರ ಹಿತಾಸಕ್ತಿಗಳು, ಮೂಲಭೂತವಾದಿಗಳು ನಮ್ಮ ಜೀವನಕ್ಕೆ ವ್ಯವಸ್ಥಿತ ಸಂಚಿನೊಡನೆ ಜನಮಾನಸದಲ್ಲಿ ಮೌಢ್ಯವನ್ನು ಬಿತ್ತುತ್ತಾ ತಮ್ಮ ಹಾದಿಯನ್ನು ಸುಗಮಗೊಳಿಸಿಕೂಳ್ಳುತ್ತಿವೆ.

ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ, ಜಾಗತೀಕರಣ, ಉದಾರಿಕರಣ ಫಲಶೃತಿಯಿಂದ ಮಾನವನ ಜೀವನವನ್ನು ಸುಲಭೀಕರಿಸುವುದರೊಂದಿಗೆ ಸುಖ ಭೋಗದ ಜೀವನಕ್ಕೆ ದಾರಿಯಾಗಿವೆ. ಐಷಾರಾಮಿ ಜೀವನಕ್ಕೆ ಮಾರುಹೋಗುವ ಮನಸ್ಸು, ತನ್ನ ಮನಸ್ಸಾಕ್ಷಿಗೆ ವಿರುದ್ದವಾಗಿ ಗಳಿಸಿ, ತನ್ನ ಅವಶ್ಯಕತೆ, ಅನಾವಶ್ಯಕತೆಗಳನ್ನು ಯೋಚಿಸದೇ ಪರರನ್ನು ಹಿಂಬಾಲಿಸುತ್ತಾ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿ ಪುಟ್ಟ ಸಂಸಾರಕ್ಕೆ ಭೌವ್ಯ ಭಂಗಲೆಯೊಂದನ್ನು ನಿರ್ಮಿಸಿ ’ನೆಮ್ಮದಿಯ ಗುಡಿಸಲು’ ಎಂದು ನಾಮಕರಣ ಮಾಡಿ ವಾಸ್ತವ್ಯ ಹೂಡಿದರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ? ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ಸರ್ಕಾರಕ್ಕೆ ತೆರಿಗೆ ಸರಿಯಾದ ರೀತಿ ಸಂದಾಯ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗದೆ, ಪರರನ್ನು ಆಥವಾ ಸಂಬಂಧಿಕರನ್ನುsarala-vastu ವಂಚಿಸದೆ ತಮ್ಮ ನಿಜವಾದ ನ್ಯಾಯಯುತ ಗಳಿಕೆಯಿಂದ ಜೀವನ ಸಾಗಿಸುವವರಿಗೆ ಪಾಪಪ್ರಜ್ಞೆ ಕಾಡಲು ಹೇಗೆ ಸಾಧ್ಯ ಈ ಪಾಪಪ್ರಜ್ಞೆಯ ಮುಂದುವರೆದ ಭಾಗವಾಗಿ ಆಂಧಕಾರ ಮೌಢ್ಯತೆ ಮನೆಮಾಡುತ್ತದೆ. ನೆಮ್ಮದಿಯ ಬದುಕು ದೂರವಾಗುತ್ತದೆ. ಇದ್ದ ನೆಮ್ಮದಿಯನ್ನು ಹಾಳು ಮಾಡಿಕೂಂಡು ಇಲ್ಲದ ನೆಮ್ಮದಿಯನ್ನು ಅರಸುತ್ತಾ ತಮ್ಮ ಪಾಪದ ಫಲಶೃತಿಗಳಿಗೆ ಪರಿಹಾರ ಹುಡುಕುತ್ತಾ ಮೌಢ್ಯತೆಗಳಲ್ಲೊಂದಾದ ವಾಸ್ತುವಿನ ಮರೆ ಹೋಗುತ್ತಾರೆ.

ಸರಳ ವಾಸ್ತುವಿನಲ್ಲಿ ಅಲ್ಪ-ಸ್ವಲ್ಪ ವಿಜ್ಞಾನ ಅಡಗಿರಬಹುದು. ಆ ವಿಜ್ಞಾನ ನಮ್ಮ ಕುಗ್ರಾಮದ ಕಟ್ಟಡ ಕಾರ್ಮಿಕನ ಜ್ಞಾನಕಿಂತ ಹೆಚ್ಚಿನದೇನೂ ಇರಲು ಸಾಧ್ಯವಿಲ್ಲ. ಇರುವ ಸ್ಥಳದಲ್ಲಿ ವ್ಯವಸ್ಥಿತವಾಗಿ, ಕಲಾತ್ಮಕವಾಗಿ ಕಟ್ಟಡ ನಿರ್ಮಿಸಲು ವಾಸ್ತುಶಿಲ್ಪಿಯ ಅವಶ್ಯಕತೆ ಇರುವುದೇ ಹೊರತು. ಸರಳ ವಾಸ್ತುಶಾಸ್ತ್ರದ ಪಂಡಿತನ ಸಲಹೆ ಸೂಚನೆಗಳಲ್ಲ.

ಇಂದಿನ ಜಾಗತೀಕರಣದ, ಉದಾರೀಕರಣ ಮತ್ತು ರಾಜಕೀಯ ನೀತಿಗಳು ’ಹಳ್ಳಕ್ಕೇ ನೀರು ಹರಿಯುವಂತೆ’ ಉಳ್ಳವರನ್ನು ಹೆಚ್ಚು ಉಳ್ಳವರನ್ನಾಗಿಸುತ್ತಾ, ಬಡವರನ್ನು ಅತೀ ಬಡವರನ್ನಾಗಿಸುತ್ತಾ, ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮಗಳ ನಡುವೆಯೇ ನಾಗರಿಕ ಯುದ್ದ ಸಂಭವಿಸುವ ಸಮಯ ದೂರವೇನಿಲ್ಲ.

ಹಿಂದಿನ ದಿನಗಳಲ್ಲಿ ಮತ್ತು ಇಂದೂ ಮುಂದುವರೆದಂತೆ ಹಸಿವಿನಿಂದ ಬಳಲುತ್ತಿರುವವರ ಸಮ್ಮುಖದಲ್ಲೇ ಮೌಢ್ಯತೆಯ ಹೆಸರಿನಲ್ಲಿ ಆಥವಾ ಶ್ರೀಮಂತಿಕೆಯ ತೋರಿಕೆಯ ಅಹಂನ ಮಧದಲ್ಲಿ ಆಹಾರಧಾನ್ಯಗಳನ್ನು ಅಪವ್ಯಯಮಾಡುವುದು, ಧನದಾಹಿ ವ್ಯಾಪಾರಸ್ಥರು ಅಹಾರಧಾನ್ಯಗಳ ಕೃತಕ ಅಭಾವ ಸೃಷ್ಟಿಸಿ house-plansಹಣಗಳಿಸುವುದು, ಹಣವಂತರು ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿಸಿಕೊಳ್ಳುವುದು, ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗುವುದು. ಅವಶ್ಯಕತೆ ಇಲ್ಲದಿದ್ದರೂ ಹೆಚ್ಚು ಹೆಚ್ಚು ಸೈಟುಗಳನ್ನು ಖರೀದಿಸುವುದು ಅಥವಾ ಹಣ ಹೆಚ್ಚಾಗಿರುವವರು ಸುಸ್ಥಿತಿಯಲ್ಲೇ ಇರುವ ಮನೆಯನ್ನು ನವೀಕರಿಸಲು ಪ್ರಾರಂಭಿಸಿ ಮೂಲ ಮನೆಯ ಆಕೃತಿಯನ್ನೇ ಇಲ್ಲವಾಗಿಸಿಕೊಳ್ಳುವುದು. ಇವುಗಳೆಲ್ಲಾ ನೇರವಾಗಿ ಅಥವಾ ಪರೋಕ್ಷವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಸನ್ಮಂಗಳ ಕಾರ್ಯಗಳೇ ಆಗಿವೆ. ಇಂಥವರಿಗೆ ಪಾಪಪ್ರಜ್ಞೆ ಕಾಡದಿರಲು ಸಾಧ್ಯವೇ?

ನಮ್ಮ ಜೀವಿತಾವಧಿಯಲ್ಲಿ ಸಾವು, ನೋವು ಆಥವಾ ಯಾವುದಾದರೊಂದು ಅವಘಡ ಸಂಭವಿಸಿದ ಪಕ್ಷದಲ್ಲಿ ನಮ್ಮ ಮನೆಯ ವಾಸ್ತುವಿಗೂ ಸಂಭವಿಸಿದ ಘಟನೆಗಳಿಗೂ ಸಂಬಂಧವಿರಲು ಸಾಧ್ಯವೇ? ನಮ್ಮ ಮನೆಗಳಲ್ಲಿ ನಡೆದ ಅಶುಭಗಳಿಗೆ ಪಾಪಪ್ರಜ್ಞೆ ಕಾಡಿ ಕಾರಣ ಹುಡುಕಿ ಜ್ಯೋತಿಷಿಯನ್ನು ಸಂಪರ್ಕಿಸಿದರೆ ಮುಗಿಯಿತು. ಆ ಜ್ಯೋತಿಷಿಯೇನು ಆಜ್ಞಾನಿಯಾಗಿರುವುದಿಲ್ಲ, ಅಲ್ಪ-ಸ್ವಲ್ಪ ಪ್ರಸಕ್ತ ಸಮಾಜಿಕ ಸ್ಥಿತಿಗತಿಯನ್ನು ಅರಿತು ಮನೋತಜ್ಞನೂ ಆಗಿರುತ್ತಾನೆ. ಅವನ ಕಸುಬಿನ ಸಲಹೆ ಸೂಚನೆಗಳನ್ನು ಅರಸಿ ಅವನನ್ನು ಸಂಪರ್ಕಿಸುವ ಜನಸಾಮಾನ್ಯರಿಂದ ಮತ್ತು ಅನುಭವದಿಂದ ಈ ಜ್ಞಾನವನ್ನು ಮೈಗೂಡಿಸಿಕೊಂಡಿರುತ್ತಾನೆ. ನಮ್ಮ ಪೂರ್ವಪರವನ್ನು ಸವಿವರವಾಗಿ ವಿಚಾರಿಸಿ, ಕುಲಂಕುಷವಾಗಿ ಚರ್ಚಿಸಿ. ನಮ್ಮ ಶ್ರೀಮಂತಿಕೆಗೆ ಅನುಗುಣವಾಗಿ ಪರಿಹಾರವನ್ನು ಸೂಚಿಸುತ್ತಾನೆ.

ಮಾತಿನ ಮಧ್ಯೆ ಮನೆಯ ವಿನ್ಯಾಸದ ಬಗ್ಗೆ ಚಕಾರವೆತ್ತಿದರೆ ಮುಗಿಯಿತು. ವಾಸ್ತು ಪರಿಶೋಧಕರು, ಸರಳ ವಾಸ್ತು ವಿನ್ಯಾಸಕರು, model-houseಗುತ್ತಿಗೆದಾರರು, ಕಟ್ಟಡ ಕಾರ್ಮಿಕರು, ವಾಸ್ತುವಿನ ಅನುಸಾರವಾಗಿ ಬಣ್ಣಮಾರುವವರು, ಅದಕ್ಕನುಸಾರವಾಗಿ ಬಣ್ಣಬಳಿಯುವವರು. ಅದಕ್ಕೂಂದು ಪೂಜೆ ಹೋಮ ಹವನ ಹೀಗೆ ಮುಂದುವರೆಯುತ್ತದೆ. ಪ್ರಜ್ಞಾವಂತರು ಪ್ರಜ್ಞಾಪೂರ್ವಕವಾಗಿ ಮಾಡಿದ ಪಾಪಕರ್ಮದ ಪೂಜಾಫಲ ಪ್ರಾಯಶ್ಚಿತ್ತ.

ಈ ವಿಷವರ್ತುಲವನ್ನು ಪ್ರವೇಶಿಸುವುದು ಸುಲಭ ಮತ್ತು ಸರಳವಾದರೂ ಹೊರ ಬರುವುದರೊಳಗೆ ನಮ್ಮ ಆಯಸ್ಸಿನ ಕಡೆಯ ಹಂತ ತಲುಪಿರುತ್ತದೆ. ನಮಗೆ ತಿಳುವಳಿಕೆ ಮೂಡುವುದರೊಳಗಾಗಿ ಇದೇ ನಂಬಿಕೆಗಳು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಂಕ್ರಾಮಿಕ ರೋಗದಂತೆ ಹರಡಿರುತ್ತವೆ.

ಪಾಪ, ಪುಣ್ಯಗಳಿಲ್ಲದ ಮನುಜನಾಗಿ ಜನಿಸಿದ ಮೇಲೆ, ನಮ್ಮ ನ್ಯಾಯಯುತ ಗಳಿಕೆಯ ಬದುಕಿಗೇಕೆ ಬೇಕು ಸರಳ ವಾಸ್ತುವಿನ ಪರಿಹಾರ?