ಆರೆಸಸ್ ಅಂದರೆ ಏನು?

ಹಿಂದಿ ಮೂಲ : ಮಧು ಲಿಮಯೆ
ಇಂಗ್ಲೀಷ್ ಅನುವಾದ : ಜಾವೇದ್ ಆನಂದ್
ಅನುವಾದ : ಬಿ.ಶ್ರೀಪಾದ ಭಟ್

(ಹಿರಿಯ ಸಮಾಜವಾದಿ ನಾಯಕ, ಲೋಹಿಯಾವಾದಿ ದಿವಂಗತ ಮಧು ಲಿಮಯೆ 1979 ರಲ್ಲಿ, ಅಂದರೆ ಜನತಾ ಪಕ್ಷ ಹೋಳಾದ ನಂತರದ ದಿನಗಳಲ್ಲಿ ಹಿಂದಿ ವಾರ ಪತ್ರಿಕೆ “ರವಿವಾರ್”ಗೆ ಬರೆದ ಲೇಖನ. ಇಂದಿಗೆ ಇದು 34 ವರ್ಷಗಳಷ್ಟು ಹಳೆಯದಾದರೂ ಅದರ ವಿವರಗಳು ಇಂದಿಗೂ ಪ್ರಸ್ತುತ ಎನ್ನುವ ಕಾರಣಕ್ಕೆ ಆಂಶಿಕವಾಗಿ ಅನುವಾದಿಸಲಾಗಿದೆ.)

ನಾನು 1937 ರಲ್ಲಿ ರಾಜಕೀಯವನ್ನು ಪ್ರವೇಶಿಸಿದೆ. madhu-limaye-postal-stampಆಗ ತರುಣನಾಗಿದ್ದ ನಾನು ಚಿಕ್ಕ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪಾಸಾಗಿದ್ದೆ ಮತ್ತು ಕೂಡಲೇ ಕಾಲೇಜಿಗೆ ಪ್ರವೇಶವನ್ನು ಪಡೆದಿದ್ದೆ. ಆ ಕಾಲದಲ್ಲಿ ಪುಣೆಯಲ್ಲಿ ಒಂದು ಕಡೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು (ವಿನಾಯಕ್ ದಾಮೋದರ್ ಸಾವರ್ಕರ್ ಬೆಂಬಲಿಗರು) ಮತ್ತೊಂದು ಕಡೆ ಸೋಷಿಯಲಿಷ್ಟರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕಮ್ಯುನಿಷ್ಟರು ಕ್ರಿಯಾಶೀಲರಾಗಿದ್ದರು. 1 ನೇ ಮೇ 1937 ರಂದು ನಾವೆಲ್ಲ ಮೇ ದಿನವನ್ನು ಆಚರಿಸುತ್ತಿದ್ದೆವು. ಆಗ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಗಾರರ ಮೇಲೆ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಏಕಾಏಕಿ ಹಲ್ಲೆ ನಡೆಸಿದರು. ಈ ಹಲ್ಲೆಯಿಂದ ಕ್ರಾಂತಿಕಾರಿ ಸೇನಾಪತಿ ಬಾಪಟ್ ಮತ್ತು ಸಮಾಜವಾದಿ ನಾಯಕ ಎಸ್.ಎಂ.ಜೋಶಿ ಗಾಯಗೊಂಡರು. ಈ ಘಟನೆಯ ನಂತರ ಅಂದಿನಿಂದ ಇಂದಿನವರೆಗೂ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳೊಂದಿಗೆ ನಾವೆಲ್ಲ ತೀವ್ರವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ.

ಆರೆಸಸ್‌ನೊಂದಿಗೆ ನಮ್ಮ ಮೊದಲ ತಕರಾರು ಶುರುವಾದದ್ದು ರಾಷ್ಟ್ರೀಯತೆಯ ಕುರಿತಾಗಿ. ನಾವೆಲ್ಲ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳಿವೆ ಎಂದು ನಂಬಿದ್ದರೆ ಈ ಆರೆಸಸ್ ಮತ್ತು ಸಾವರ್ಕರ್‌ವಾದಿಗಳು ಹಿಂದೂ ರಾಷ್ಟ್ರದ ಕನಸನ್ನು ಪ್ರತಿಪಾದಿಸುತ್ತಿದ್ದರು. ಜಿನ್ನಾ ಅವರು ಸಹ ಈ ಪರಿಕಲ್ಪನೆಯ ಬಲಿಪಶುವಾಗಿದ್ದರು. savarkar-golwalkarಇಂಡಿಯಾ ಎರಡು ದೇಶಗಳಿಂದ ರೂಪಿಸಲ್ಪಟ್ಟಿದೆ, ಅದು ಮುಸ್ಲಿಂ ದೇಶ ಮತ್ತು ಹಿಂದೂ ದೇಶ ಎಂದು ಜಿನ್ನಾ ವಾದಿಸುತ್ತಿದ್ದಾಗ ಅದನ್ನು ಸಾವರ್ಕರ್ ಅನುಮೋದಿಸುತ್ತಿದ್ದರು.

ಅವರೊಂದಿಗಿನ ಮತ್ತೊಂದು ಭಿನ್ನಮತವೆಂದರೆ ನಾವು ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯವನ್ನು ಪ್ರತಿಪಾದಿಸುತ್ತಿದ್ದರೆ ಈ ಆರೆಸಸ್ ಪಕ್ಷವು ಪ್ರಜಾಪ್ರಭುತ್ವ ಮಾದರಿಯು ಪಶ್ಚಿಮ ರಾಷ್ಟ್ರಗಳ ಪರಿಕಲ್ಪನೆಯೆಂದೂ ಹಾಗೂ ಇದೆಂದೂ ಇಂಡಿಯಾಕ್ಕೆ ಸರಿ ಹೊಂದುವುದಿಲ್ಲವೆಂದೂ ವಾದಿಸುತ್ತಿತ್ತು. ಹಾಗೆಂದು ಅದರ ಸ್ವಯಂಸೇವಕರು ಬಲವಾಗಿ ನಂಬಿದ್ದರು. ಆ ದಿನಗಳಲ್ಲಿ ಆರೆಸಸ್ ಸಂಚಾಲಕರು ಹಿಟ್ಲರ್‌ನನ್ನು, ಗುರೂಜಿ ಗೋಳ್ವಲ್ಕರ್‌ರನ್ನು ಆರಾಧಿಸುತ್ತಿದ್ದರು ಮತ್ತು ಅವರ ಐಡಿಯಾಲಜಿಗಳನ್ನು ನಂಬುತ್ತಿದ್ದರು.

ಈ ಗುರೂಜಿ ಗೋಳ್ವಲ್ಕರ್ ಮತ್ತು ನಾಜಿಗಳ ನಡುವೆ ಅಪಾರ ಸಾಮ್ಯತೆ ಇತ್ತು. ತಮ್ಮ ಪುಸ್ತಕ “ನಾವು ಮತ್ತು ನಮ್ಮ ರಾಷ್ಟ್ರೀಯತೆ”ಯಲ್ಲಿ ಬರೆಯುತ್ತ ಗೋಳ್ವಲ್ಕರ್ ಅವರು ಹೇಳುತ್ತಾರೆ, “ಭಾರತದಲ್ಲಿರುವ ಅನ್ಯಧರ್ಮೀಯರು ಹಿಂದೂ ಧರ್ಮದ ಆಚರಣೆಗಳನ್ನು ಮತ್ತು ಸಂಸ್ಕೃತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿಂದೂ ಧರ್ಮವನ್ನು ಗೌರವಿಸಬೇಕು. ಹಿಂದೂ ಧರ್ಮವನ್ನಲ್ಲದೆ ಬೇರೇನನ್ನೂ ಪ್ರಚಾರ ಮಾಡಬಾರದು. ಈ ದೇಶದ ಕುರಿತಾದ ಅಸಹನೆಯನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಅನ್ಯಧರ್ಮೀಯರನ್ನು ವಿದೇಶಿಯರೆಂದೇ ಪರಿಗಣಿಸಬೇಕು. ಅನ್ಯಧರ್ಮೀಯರು ಈ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಬದುಕಬೇಕು. ಇವರಿಗೆ ಯಾವುದೇ ವಿಶೇಷ ಸೌಕರ್ಯಗಳನ್ನು ನೀಡಲಾಗುವುದಿಲ್ಲ .ಇವರಿಗೆ ಸಮಾನ ನಾಗರಿಕ ಹಕ್ಕುಗಳಿರುವುದಿಲ್ಲ.”

ಈ ಆರೆಸಸ್ ಸದಸ್ಯರು ಮತ್ತು ಸಂಚಾಲಕರು ಹಿಟ್ಟರ್‌ನ ಹಿಂಬಾಲಕರಾಗಿದ್ದರು. ಇವರೆಲ್ಲ ಜರ್ಮನಿಯಲ್ಲಿ ಹಿಟ್ಲರ್ ನಾಜಿಗಳನ್ನು ನಡೆಸಿಕೊಂಡ ರೀತಿಯಲ್ಲಿಯೇ ಇಂಡಿಯಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರನ್ನು ನಡೆಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಗೋಳ್ವಲ್ಕರ್ ಅವರು ಬರೆದ “ನಾವು ಅಥವಾ ನಮ್ಮ ರಾಷ್ಟ್ರೀಯತೆ” ಪುಸ್ತಕ ಒಂದು ಭಾಗ “ತನ್ನ ಬಣ್ಣದ ಮತ್ತು ಸಂಸ್ಕೃತಿಯ ಪರಿಶುದ್ಧತೆಯನ್ನು ಕಾಪಾಡಬೇಕಾದಂತಹ ಸಂದರ್ಭದಲ್ಲಿ ತನ್ನ ದೇಶದ ಅನ್ಯಧರ್ಮೀಯರಾದ ಯಹೂದಿಗಳನ್ನು ಸಂಪೂರ್ಣವಾಗಿ ನಾಶ ಮಾಡುವುದರ ಮೂಲಕ ಜರ್ಮನಿ ಜಗತ್ತನ್ನೇ ನಿಬ್ಬೆರಗಾಗಿಸಿತು. ಇದು ಇಂದು ನಮಗೆ ಆದರ್ಶವಾಗಬೇಕು” ( ಪುಟ 42, ನಾವು ಅಥವಾ ನಮ್ಮ ರಾಷ್ಟ್ರೀಯತೆ, 1947 ) ಎನ್ನುತ್ತದೆ. KZ Mauthausen, Sowjetische Kriegsgefangeneನೀವು ಇದನ್ನು ಹಳೆ ಕಾಲದ, ಸ್ವಾತಂತ್ರ ಪೂರ್ವದ ಪುಸ್ತಕವೆಂದು ವಾದಿಸಬಹುದು. ಆದರೆ ಗೋಳ್ವಲ್ಕರ್ ಅವರ ಮತ್ತೊಂದು ಪುಸ್ತಕ “ಚಿಂತನ ಗಂಗಾ” 1966 ರಲ್ಲಿ ಪ್ರಕಟವಾಯಿತು. ಆ ಪುಸ್ತಕದಲ್ಲಿ ಗೋಳ್ವಲ್ಕರ್ ಭಾರತದ ಪ್ರತಿಯೊಬ್ಬ ಮುಸ್ಲಿಂರು, ಕ್ರಿಶ್ಚಿಯನ್ನರು, ಕಮ್ಯುನಿಷ್ಟರನ್ನು ಅಂತರಿಕ ಶತೃಗಳೆಂದು, ಅವರು ದೇಶದ ಭದ್ರತೆಗೆ ಅಪಾಯಕಾರಿಗಳೆಂದು ಬರೆಯುತ್ತಾರೆ. ಇದು ಈ ಗುರೂಜಿಯ ಐಡಿಯಾಲಜಿ.

ಜಾತೀಯತೆಯ ಕುರಿತಾಗಿ ಈ ಆರೆಸಸ್ ಮತ್ತು ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಭಿನ್ನಮತವಿತ್ತು. ಈ ಆರೆಸಸ್ ಮತ್ತು ಗೋಳ್ವಲ್ಕರ್ ಜಾತಿ ಪದ್ಧತಿಯನ್ನು ಬೆಂಬಲಿಸುತ್ತಿದ್ದರು. ಆದರೆ ಸಮಾಜವಾದಿಗಳಾದ ನಮಗೆ ಈ ಜಾತಿ ಪದ್ಧತಿ ಒಂದು ಶತೃವಾಗಿತ್ತು. ನಾನು ಈ ಜಾತೀಯತೆ ಮತ್ತು ಬ್ರಾಹ್ಮಣತ್ವದ ಚಿಂತನೆಗಳನ್ನು ವಿರೋಧಿಸುತ್ತಿದ್ದೆ. ಇವೆರೆಡೂ ನಾಶವಾಗುವವರೆಗೂ ನಮ್ಮ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲವೆಂಬುದು ನನ್ನ ಅಚಲ ನಂಬಿಗೆಯಾಗಿತ್ತು. ಆದರೆ ಈ ಗೋಳ್ವಲ್ಕರ್ ತಮ್ಮ “ಚಿಂತನ ಗಂಗಾ” ಪುಸ್ತಕದಲ್ಲಿ ಬರೆಯುತ್ತಾರೆ, “ನಮ್ಮ ಸಮಾಜದ ವಿಶಿಷ್ಟತೆಯೆಂದರೆ ಅದು ವರ್ಣಾಶ್ರಮ ಪದ್ಧತಿ. ಈ ಸಮಾಜವು ಶಕ್ತಿಯುತ ದೇವರನ್ನು ಒಳಗೊಂಡಿದೆ. ಈ ದೇವರನ್ನು ಸಮಾಜದ ವಿವಿಧ ಸ್ತರಗಳಲ್ಲಿರುವವರಿಗೆ ವಿಭಿನ್ನ ನೆಲೆಗಳಲ್ಲಿ ಪೂಜಿಸಲು ಅವಕಾಶ ನೀಡಲಾಗುತ್ತದೆ. ಸಕಲ ಜ್ಞಾನವನ್ನು ಹೊಂದಿದ ಬ್ರಾಹ್ಮಣರು ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ. ಕ್ಷತ್ರಿಯರನ್ನು ಸಹ ಅದೇ ಮಟ್ಟದ ಶ್ರೇಷ್ಠರೆಂದೇ ಗುರತಿಸಲಾಗುತ್ತದೆ, ಏಕೆಂದರೆ ಅವರು ಶತೃಗಳನ್ನು ಸಂಹರಿಸುತ್ತಾರೆ. ವೈಶ್ಯರೂ ಸಹ ಅಷ್ಟೇ ಮುಖ್ಯರಾಗುತ್ತಾರೆ, ಏಕೆಂದರೆ ಅವರು ವ್ಯಾಪಾರದ ಮೂಲಕ ಸಮಾಜವನ್ನು ಸಮತೋಲನದಲ್ಲಿಡುತ್ತಾರೆ. ತಮ್ಮ ಕೌಶಲ್ಯದ ಆಧರಿಸಿ ಸಮಾಜದ ಅವಶ್ಯಕತೆಗಳನ್ನು ಪೂರೈಸುವುದರ ಮೂಲಕ ಶೂದ್ರರೂ ಮುಖ್ಯರಾಗುತ್ತಾರೆ.” ಆದರೆ ಇಲ್ಲಿ ಗೋಳ್ವಲ್ಕರ್ ಅವರು ಚಾಣಕ್ಯನ ಆರ್ಥಿಕ ನೀತಿಯನ್ನು ಅನುಮೋದಿಸುತ್ತ ಶೂದ್ರನ ಕಾಯಕವನ್ನು ಅವನ ಕರ್ತವ್ಯವೆಂದೇ ಷರಾ ಬರೆಯುತ್ತಾರೆ. ಅವರ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಸೇವೆ ಮಾಡುವುದು ಶೂದ್ರರ ಧರ್ಮ. ಅವರ ಧಾರ್ಮಿಕ ಕರ್ತವ್ಯ.

ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರೊಂದಿಗೆ ನಮ್ಮ ಮತ್ತೊಂದು ಪ್ರಮುಖ ಭಿನ್ನಾಭಿಪ್ರಾಯವೆಂದರೆ ಅವರು ಪ್ರತಿಪಾದಿಸುವ ಭಾಷೆ. ಗೋಳ್ವಲ್ಕರ್ ಅವರ ಪ್ರಕಾರ ಹಿಂದಿಯನ್ನು ಸಾರ್ವಜನಿಕ ಭಾಷೆಯನ್ನಾಗಿಯೂ, ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು. ತಮ್ಮ ಚಿಂತನ ಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಅವರು “ಸಧ್ಯದ ಅನುಕೂಲಕ್ಕಾಗಿ ಹಿಂದಿ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಸಂಸ್ಕೃತವು ರಾಷ್ಟ್ರ ಭಾಷೆಯಾಗಬೇಕೆಂಬುದೇ ನಮ್ಮ ಅಂತಿಮ ಗುರಿ.” ಎಂದು ಬರೆಯುತ್ತಾರೆ. ಆದರೆ ಮಹಾತ್ಮ ಗಾಂಧಿ ಮತ್ತು ಟಿಳಕರಂತೆ ನಾವೆಲ್ಲರೂ ಪ್ರಾಂತೀಯ ಭಾಷೆಗಳನ್ನು ಬೆಂಬಲಿಸುತ್ತಿದ್ದೆವು. ನಾಗರಿಕರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದನ್ನು ನಾವು ವಿರೋಧೀಸುತ್ತಿದ್ದೆವು. ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲುಗು, ಕರ್ನಾಟಕದಲ್ಲಿ ಕನ್ನಡ, ಪಶ್ಚಿಮ ಬಂಗಾಲದಲ್ಲಿ ಬೆಂಗಾಲಿ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಗಳ ಬಳಕೆಗೆ ನಮ್ಮ ಬೆಂಬಲವಿತ್ತು. ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತಿದ್ದೆವು. ಏಕೆಂದರೆ ಅದು ಮೇಲ್ಜಾತಿಯವರ ಭಾಷೆಯಾಗಿತ್ತು.

ಸ್ವಾತಂತ್ರ ಹೋರಾಟದ ರಾಷ್ಟ್ರೀಯ ಚಳುವಳಿಯು ಭಾರತದ ಗಣರಾಜ್ಯ ಸ್ವರೂಪವನ್ನು ಒಪ್ಪಿಕೊಂಡಿತ್ತು. ಕೆಲವು ಪ್ರಮುಖ ಇಲಾಖೆಗಳ ಅಧಿಕಾರವು ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಕೇಂದ್ರದ ಸುಪರ್ದಿಯಲ್ಲಿದ್ದರೆ ಇತರೇ ವಿವಿಧ ಇಲಾಖೆಗಳ ಜವಬ್ದಾರಿಯು ರಾಜ್ಯ ಸರ್ಕಾರಗಳಗೆ ಸೇರಬೇಕೆಂಬ ವಿಕೇಂದ್ರಿಕರಣದ ನೀತಿ ನಮ್ಮ ನಿಲುವಾಗಿತ್ತು. ಗಣರಾಜ್ಯದ ಈ ಪರಿಕಲ್ಪನೆಯನ್ನು ಸ್ವಾತಂತ್ರ ನಂತರ ರಚಿತವಾದ ಸಂವಿಧಾನವೂ ಅನುಮೋದಿಸಿತ್ತು.

ಪ್ರಜಾಪ್ರಭುತ್ವದ, ವಿಕೇಂದ್ರೀಕರಣದ ಈ ಗಣರಾಜ್ಯ ಮಾದರಿಯನ್ನು, ಅದರ ಸಂವಿಧಾನವನ್ನು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ನಿರಂತರವಾಗಿ ವಿರೋಧಿಸಿದರು. ಈ ಗುಂಪು ಗಣರಾಜ್ಯಗಳ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡುತ್ತಿದ್ದವು. ಈ ಗಣರಾಜ್ಯಗಳ ಬಹುರೂಪಿ ತತ್ವಗಳನ್ನು ಪ್ರತಿಪಾದಿಸುವ ಭಾರತದ ಸಂವಿಧಾನವನ್ನೇ ರದ್ದುಗೊಳಿಸಬೇಕೆಂದು ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಒತ್ತಾಯಿಸುತ್ತಿದ್ದರು. ತಮ್ಮ ಚಿಂತನಗಂಗಾ ಪುಸ್ತಕದಲ್ಲಿ ಗೋಳ್ವಲ್ಕರ್ ಬರೆಯುತ್ತಾರೆ, “ಸಂವಿಧಾನವನ್ನು ಪುನರ್ವಿಮರ್ಶಿಸಬೇಕು. ಕೇಂದ್ರಾಡಳಿತ ರಾಜ್ಯವನ್ನು ಸಂವಿಧಾನದಲ್ಲಿ ಸೇರಿಸಬೇಕು.” ಗೋಳ್ವಲ್ಕರ್ ಬಯಸುವುದು ಒಂದು ದೇಶ, ಒಂದು ರಾಜ್ಯ, ಒಂದು ಪಾರ್ಲಿಮೆಂಟ್, ಒಂದು ಕಾರ್ಯಾಂಗ ಮಾತ್ರ. ಇವರು ವಿಭಿನ್ನ ರಾಜ್ಯಗಳ ವಿಧಾನ ಸಭೆಗಳನ್ನು ಮತ್ತು ಮಂತ್ರಿಮಂಡಳಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಾರೆ. ಅಂದರೆ ಇವರ ಗುರಿ ಸರ್ವಾಧಿಕಾರದ ಆಡಳಿತ. ಕೇಂದ್ರಾಡಳಿತ ರಾಜ್ಯಭಾರ.

ಮತ್ತೊಂದು ವಿವಾದವೆಂದರೆ ತ್ರಿವರ್ಣಧ್ವಜ. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಭಾರತದ ಬಿಡುಗಡೆಯ ಸಂಕೇತವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ತ್ರಿವರ್ಣ ಧ್ವಜವನ್ನು ಸ್ವಾತಂತ್ರದ ಸಂಕೇತವಾಗಿ ಹೋರಾಟಗಳಲ್ಲಿ ಬಳಲಾಗುತ್ತಿತ್ತು. ಅದರ ಘನತೆಯನ್ನು ಕಾಪಾಡಲು ಸಾವಿರಾರು ದೇಶಾಭಿಮಾನಿಗಳು ಪ್ರಾಣ ತ್ಯಾಗ ಮಾಡಿದರು. ಆಶ್ಚರ್ಯವೆಂದರೆ ಆರೆಸಸ್ ಈ ತ್ರಿವರ್ಣ ಧ್ಜಜವನ್ನು ರಾಷ್ಟ್ರ ಧ್ವಜವನ್ನಾಗಿ ಎಂದಿಗೂ ಮಾನ್ಯ ಮಾಡಲೇ ಇಲ್ಲ. ಆರೆಸಸ್ ಮಾನ್ಯ ಮಾಡಿದ್ದು ಕೇಸರೀ ಧ್ಜಜವನ್ನು. ಭಗವಧ್ವಜವನ್ನು. ಈ ಕೇಸರೀ ಧ್ವಜವು ಹಿಂದೂ ರಾಷ್ಟ್ರದ ಸಂಕೇತವೆಂದು ಆರೆಸಸ್ ಬಲವಾಗಿ ನಂಬಿತ್ತು.

ಗಣರಾಜ್ಯ ಮಾದರಿಯ ವಿಕೇಂದ್ರೀಕರಣ ತಿರಸ್ಕರಿಸಿದಂತೆಯೇ ಈ ಈ ಆರೆಸಸ್ ಮತ್ತು ಅದರ ಮುಖ್ಯಸ್ಥ ಗೋಳ್ವಲ್ಕರ್ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೂ ತಿರಸ್ಕರಿಸಿದ್ದರು. ಈ ಪ್ರಜಾಪ್ರಭುತ್ವ ವ್ಯವಸ್ಥೆಯು ಪಶ್ಚಿಮ ದೇಶಗಳಿಂದ ನಕಲು ಮಾಡಲಾಗಿದ್ದು ಅದು ಭಾರತದ ಚಿಂತನೆಗಳೊಂದಿಗೆ ಬೆರೆಯುವುದಿಲ್ಲವೆಂದು ಇವರು ನಂಬಿದ್ದರು. ಇವರಿಗೆ ಸೋಷಿಯಲಿಸಂ ಅಂತೂ ಸಂಪೂರ್ಣ ಪರಕೀಯವಾಗಿತ್ತು. ಗೋಳ್ವಲ್ಕರ್ ಅವರು ಈ ಎಲ್ಲಾ ಇಸಂಗಳು ವಿದೇಶಿ ಸಂಸ್ಕೃತಿಗಳೆಂದೂ ಇವನ್ನೆಲ್ಲವನ್ನೂ ತಿರಸ್ಕರಿಸಬೇಕೆಂದೂ ಕರೆ ಕೊಟ್ಟಿದ್ದರು.

1975 ರಲ್ಲಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಅದನ್ನು ವಿರೋಧಿಸಿ ನಾವೆಲ್ಲಾ ಈ ಆರೆಸಸ್‌ನವರೊಂದಿಗೆ ಕೈಜೋಡಿಸಬೇಕಾದಂತಹ ಸಂದರ್ಭ ಬಂದಿತು. ಚೌಧುರಿ ಚರಣ ಸಿಂಗ್ ಅವರೂ ಸಹ ಇದೇ ಅಭಿಮತವನ್ನು ವ್ಯಕ್ತಪಡಿಸಿದರು. ಎಲ್ಲರೂ ಒಂದಾಗಿ ಒಂದೇ ಪಕ್ಷದ ಅಡಿಯಲ್ಲಿ ಕಾಂಗ್ರೆಸ್ ವಿರುದ್ಧದ ಚುನಾವಣೆಯನ್ನು ಎದುರಿಸಬೇಕೆಂದು ಚರಣ ಸಿಂಗ್ ಒತ್ತಾಯಿಸುತ್ತಿದ್ದರು. ಜಯಪ್ರಕಾಶ ನಾರಾಯಣ ಮತ್ತು ಇತರ ನಾಯಕರೂ ಇದನ್ನು ಅನುಮೋದಿಸಿದ್ದರು. Jayaprakash Narayanಆಗ ನಮ್ಮೆಲ್ಲರ ಆಯ್ಕೆಗಳೆಂದರೆ ಜನಸಂಘ, ಸೋಷಲಿಸ್ಟ್ ಪಕ್ಷಗಳು, ಕಾಂಗ್ರೆಸ್ ( ಓ ), ಭಾರತೀಯ ಲೋಕದಳ, ಮತ್ತು ಭಿನ್ನಮತೀಯ ಕಾಂಗ್ರೆಸ್ ಪಕ್ಷಗಳ ಗುಂಪು. ಈ ಸಂದರ್ಭದಲ್ಲಿಯೂ ನಾವೆಂದೂ ಆರೆಸಸ್ ಜೊತೆಗೆ ಕೈ ಜೋಡಿಸಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಚರಣಸಿಂಗರು ಸುಮಾರು ಜುಲೈ 7, 1976 ರಂದು ಜೈಲಿನಿಂದ ಬರೆದ ಪತ್ರದಲ್ಲಿ ನಮ್ಮ ಮೇಲಿನ ಆಯ್ಕೆಗಳಲ್ಲಿರುವ ಪ್ರಮುಖ ಬಿಕ್ಕಟ್ಟಾದ ದ್ವಿಸದಸ್ಯದ ಕುರಿತಾಗಿ ವಿವರಿಸಿದರು. ಆರೆಸಸ್‌ನ ಸಂಚಾಲಕರಾದ ಜನಸಂಘದ ಸದಸ್ಯರು ಹೊಸ ಪಕ್ಷದ ಸದಸ್ಯರಾಗಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸುತ್ತಾ ಆಗಿನ ಜನಸಂಘದ ಕಾರ್ಯದರ್ಶಿ ಓಂ ಪ್ರಕಾಶ್ ತ್ಯಾಗಿ ಅವರು ಇದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ಜನಸಂಘವು ಸಿದ್ಧವೆಂದೂ ಹೇಳುತ್ತಾ, ಅಂತಹ ಬಿಕ್ಕಟ್ಟು ಎದುರಾದಲ್ಲಿ ಆರೆಸಸ್ ಅನ್ನು ವಿಸರ್ಜಿಲೂ ಸಹ ತಯಾರು ಎಂದು ಆಶ್ವಾಸನೆ ಕೊಟ್ಟರು.

ಆದರೆ ಜನತಾ ಪಕ್ಷದ ಸಂವಿಧಾನವನ್ನು ರಚಿಸುವ ಜವಾಬ್ದಾರಿ ಹೊತ್ತುಕೊಂಡ ಉಪಸಮಿತಿಯು ಹೊಸ ಪಕ್ಷದ ತತ್ವಗಳಿಗೆ, ಚಿಂತನೆಗಳಿಗೆ, ವಿಚಾರಗಳಿಗೆ ಭಿನ್ನವಾಗಿರುವವರಿಗೆ ದ್ವಿಸದಸ್ಯತ್ವವನ್ನು ಕೊಡಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿತು. ಇದರ ಮಹತ್ವವನ್ನು ಅರಿತುಕೊಂಡ ಎಲ್ಲರೂ ಇದನ್ನು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಇದಕ್ಕೆ ವಿರೋಧ ಬಂದಿದ್ದು ಜನಸಂಘದ ಸುಂದರ್ ಸಿಂಗ್ ಭಂಡಾರಿ ಅವರಿಂದ. ಆಗ ಜನಸಂಘ ಮತ್ತು ಆರೆಸಸ್‌ನ ಪರವಾಗಿ ಅಟಲ್ ಬಿಹಾರಿ ವಾಜಪೇಯಿಯವರು ಪತ್ರವನ್ನು ಬರೆದು ಜನತಾ ಪಕ್ಷದ ಸದಸ್ಯರ ನೊಂದಣಿಯ ಸಂದರ್ಭದಲ್ಲಿ ಆರೆಸಸ್ ಕುರಿತಾದ ಚರ್ಚೆಯೇ ಅಪ್ರಸ್ತುತ ಎಂದು ಹೇಳಿದರು. ಆಗ ನಾನು ಜೈಲಿನಲ್ಲಿದ್ದೆ. ಹೀಗಾಗಿ ಆಗ ನಡೆದ ತೀರ್ಮಾನಗಳಿಗೆ ನಾನು ಜವಾಬ್ದಾರನಾಗಿರಲಿಲ್ಲ.

ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಬರೆಯುವಂತಹ ಸಂದರ್ಭದಲ್ಲಿ ಆರೆಸಸ್ ಬಗ್ಗೆ ನಾವೆಲ್ಲ ಅಂತಹ ಆತಂಕವನ್ನು ಹೊಂದಿರಲಿಲ್ಲ. ಪ್ರತಿಯೊಂದು ವಾಕ್ಯವನ್ನು ಸ್ಪಷ್ಟವಾಗಿ ವಿವರಿಸಲಾಗಿತ್ತು. ನಿಜಕ್ಕೂ ಹೇಳಬೇಕೆಂದರೆ ಜನತಾ ಪಕ್ಷದ ಪ್ರಣಾಳಿಕೆಯು ಸೋಷಿಯಲಿಸ್ಟ್ ಸಮಾಜದ, ಸೆಕ್ಯುಲರ್ ಪ್ರಜಾಪ್ರಭುತ್ವದ, ಗಾಂಧಿ ಕನಸಿನ ಆದರ್ಶಗಳನ್ನು ಹೊಂದಿತ್ತಲ್ಲವೇ? ಅಲ್ಲಿ ಹಿಂದೂ ರಾಷ್ಟ್ರದ ಪ್ರಸ್ತಾಪವೇ ಇರಲಿಲ್ಲ. ಮಿಗಿಲಾಗಿ ನಮ್ಮ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಸಮಾನ ನಾಗರಿಕತೆಯನ್ನು ಧೃಡೀಕರಿಸಿದ್ದೆವು. ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಹಿಂದುಳಿದ ಜಾತಿಗಳಿಗೆ ಶೇಕಡಾ 25-33 ಮೀಸಲಾತಿಯನ್ನು ಕಲ್ಪಿಸುವುದಾಗಿ ಹೇಳಿದ್ದೆವು.

ಆದರೆ ಆರೆಸಸ್ ಸದಸ್ಯರು ಜನತಾ ಪಕ್ಷದ ಈ ಪ್ರಣಾಳಿಕೆಯನ್ನು ಮನಃಪೂರ್ವಕವಾಗಿ ಒಪ್ಪಿರಲಿಲ್ಲ. ಈ ಸಂದರ್ಭದಲ್ಲಿ ಕುಶುಭಾವು ಠಾಕ್ರೆ ಅವರಿಗೆ ಪತ್ರವನ್ನು ಬರೆದು ಜನಸಂಘ ಮತ್ತು ಆರೆಸಸ್‌ನ ದ್ವಂದವನ್ನು ವಿವರಿಸಿ ಇದರಿಂದ ನಿಮ್ಮ ಕಾರ್ಯಸೂಚಿಗಳ ಕುರಿತಾಗಿಯೇ ಅನುಮಾನ ಮೂಡುತ್ತದೆ ಎಂದು ಹೇಳಿದ್ದೆ. ಆದರೂ ಸಂಯುಕ್ತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನು ಎದುರಿಸಲು ನಾವೆಲ್ಲ ಒಂದಾಗಲೇಬೇಕೆಂಬ ಜಯಪ್ರಕಾಶ ನಾರಾಯಣರ ಅನಿಸಿಕೆಯನ್ನು ಒಪ್ಪಿಕೊಳ್ಳಬೇಕೆಂದರೆ ಎರಡು ಮುಖ್ಯ ವಿಷಯಗಳ ಕುರಿತಾಗಿ ನನ್ನಲ್ಲಿ ಖಚಿತತೆ ಇತ್ತು. ಈ ಸಂಯುಕ್ತ ವಿರೋಧ ಪಕ್ಷ ಚಾಲ್ತಿಗೆ ಬರಬೇಕೆಂದರೆ ಆರೆಸಸ್ ತನ್ನ ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕು. ಅದು ಸೆಕ್ಯುಲರ್ ಐಡಿಯಾಲಜಿಯನ್ನು ಒಪ್ಪಿಕೊಳ್ಳಬೇಕು. ಎರಡನೇಯದಾಗಿ ಆರೆಸಸ್‌ನ ಇತರೇ ಅಂಗ ಪಕ್ಷಗಳು ವಿಸರ್ಜನೆಗೊಂಡು ಸೆಕ್ಯುಲರ್ ಪಕ್ಷಗಳೊಂದಿಗೆ ವಿಲೀನಗೊಳ್ಳಬೇಕು. ಇದನ್ನು ನಾನು ಅರೆಸಸ್‌ನ ಪ್ರಮುಖರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೆ. ಆಗ ಆರೆಸಸ್‌ನ ಪ್ರಮುಖರು ಈ ನಿಬಂಧನೆಗಳನ್ನು ಈ ಕೂಡಲೆ ಪಾಲಿಸಲು ಕಷ್ಟ, ಅದರೆ ಹಂತಹಂತವಾಗಿ ತಾವು ಬದಲಾಗುತ್ತೇವೆಂದು ಆಶ್ವಾಸನೆಯನ್ನು ಕೊಟ್ಟರು. ಮುಂದಿನ ದಿನಗಳಲ್ಲಿ ಇದರ ಕುರಿತಾಗಿ ಪ್ರಶ್ನಿಸಿದಾಗ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಇವರ ಈ ದ್ವಂದ ವರ್ತನೆಗಳಿಂದ ನನಗೆ ಖಚಿತವಾಗಿದ್ದು ಇವರು ಬದಲಾಗಲು ತಯಾರಿಲ್ಲ ಎಂದು. ಅದರಲ್ಲೂ 1977 ರ ನಂತರ ನಡೆದ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರಾಂತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಂಘ ಪರಿವಾರ ಈ ಜನಬೆಂಬಲವಿದ್ದರೆ ನಾವು ಬದಲಾಗುವ ಅಗತ್ಯವೇ ಇಲ್ಲವೆಂದು ಬೀಗಿತ್ತು. ಇದೇ ತಂತ್ರಗಾರಿಕೆಯ ಮೂಲಕ ದೇಶದ ಇತರೇ ರಾಜ್ಯಗಳಲ್ಲಿಯೂ ಅಧಿಕಾರವನ್ನು ಕಬ್ಜಾ ಮಾಡಿಕೊಳ್ಳಬೇಕೆಂದು ಮಹತ್ವಾಕಾಂಕ್ಷೆಯಿಂದಿತ್ತು ಸಂಘ ಪರಿವಾರ. ಕಡೆಗೆ ಕೇಂದ್ರ ಮೇಲೆ ಸಹ ಅದು ಕಣ್ಣಿಟ್ಟಿತ್ತು.

ಆರೆಸಸ್‌ನ ಮುಖವಾಣಿ ಪಾಂಚಜನ್ಯದಲ್ಲಿ ಲೇಖನಗಳಲ್ಲಿ ನನ್ನನ್ನೂ ಒಳಗೊಂಡು ಆರೆಸಸ್‌ನ ನೀತಿಗಳನ್ನು ವಿರೋಧಿಸುವ ಪ್ರತಿಯೊಬ್ಬ ಜನತಾ ಪಕ್ಷದ ಸದಸ್ಯನನ್ನೂ ಟೀಕಿಸಲಾಗಿತ್ತು.

ಈ ಸಂದರ್ಭದಲ್ಲಿ ಆರೆಸಸ್‌ನ ಸರಸಂಚಾಲಕ ಬಾಬಾ ಸಾಹೇಬ್ ದೇವರಸ್ ಅವರು ನನ್ನ ಮನೆಗೆ ಬಂದಿದ್ದರು. morarji-desaiಆದರೆ ಹೊಸ ಬಗೆಯ ಬದಲಾವಣೆಗಳಿಗೆ ಅವರು ಮುಕ್ತ ಮನಸ್ಸಿನವರಾಗಿರಲಿಲ್ಲ. ಅವರೊಂದಿಗೆ ನಿರಂತರ ಸಂಭಾಷಣೆ ನಡೆಸುತ್ತ ಅವರನ್ನು ಬದಲಾಯಿಸಲು ನಾನು ನಡೆಸಿದ ನನ್ನ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಅರೆಸಸ್‌ನ ಅಂಗ ಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಎಬಿವಿಪಿ, ಯುವ ಮೋರ್ಚ ಮುಂತಾದ ಸಂಘಟನೆಗಳೊಂದಿಗೆ ನಡೆಸಿದ ಮಾತುಕತೆಗಳು ಫಲ ನೀಡಲಿಲ್ಲ. ಇದಕ್ಕೆ ಪ್ರತಿಯಾಗಿ ನನಗೆ ಅವರಿಂದ ತೆಗಳಿಕೆಗಳು ಉತ್ತರ ರೂಪದಲ್ಲಿ ದೊರೆತವು.

ಅವರ ಉದ್ದೇಶಗಳು ಸ್ಪಷ್ಟವಾಗಿದ್ದವು. ಅವರು ಉದ್ದೇಶ ಜನಜೀವದ ಪ್ರತಿಯೊಂದು ಘಟ್ಟಗಳಲ್ಲೂ ತಾವು ಭಾಗಿಗಳಾಗಬೇಕು ಮತ್ತು ಅವರನ್ನು ನಿಯಂತ್ರಿಸಬೇಕೆಂಬುದಾಗಿತ್ತು. ಅವರ ಮೊದಲ ಗುರಿ ಜನತಾ ಪಕ್ಷವನ್ನು ಕಬ್ಜಾ ಮಾಡಿಕೊಳ್ಳುವುದು. ಇದಕ್ಕಾಗಿಯೇ ಸಂಘ ಪರಿವಾರವು ಹಲವಾರು ಜನತಾ ಪಕ್ಷದ ನಾಯಕರ ಮುಂದೆ ಅಧಿಕಾರದ ಕ್ಯಾರೆಟ್ ಅನ್ನು ಅಲ್ಲಾಡಿಸುತ್ತಿದ್ದರು. ಒಂದು ಕಡೆ ಮುರಾರ್ಜಿ ದೇಸಾಯಿಯವರಿಗೆ ನೀವೇ ನಮಗೆ ಪ್ರಶ್ನಾತೀತ ನಾಯಕರೆಂದು ಬಣ್ಣಿಸುತ್ತಿದ್ದರು. ಆದರೆ ಮತ್ತೊಂದು ಕಡೆ ಚರಣಸಿಂಗ್ ಅವರಿಗೆ ನೀವು ಪ್ರಧಾನಿ ಪಟ್ಟಕ್ಕಾಗಿ ಬಯಸಿದರೆ ನಿಮಗೆ ನಮ್ಮ ಬೆಂಬಲ ಖಾತ್ರಿ ಎಂದು ಆಸೆ ಹುಟ್ಟಿಸುತ್ತಿದ್ದರು. ಈಗಲೂ (1979) ಅವರು ಚಂದ್ರಶೇಖರ್, ಜಗಜೀವನ್ ರಾಂ ಮತ್ತು ಜಾರ್ಜ ಫರ್ನಾಂಡೀಸ್ ಅವರಿಗೆ ಈ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಒಮ್ಮೆಯೂ ಅವರು ನನ್ನ ಹೆಸರನ್ನು ಎತ್ತಲಿಲ್ಲ!! ಅವರಿಗೆ ಗೊತ್ತಾಗಿರಬೇಕು ಈ ಮನುಷ್ಯನನ್ನು ಮೂರ್ಖನಾಗಿಸಲು ಸಾಧ್ಯವಿಲ್ಲವೆಂದು. ಅದರೆ ಬದಲಾಗಿ ಅಂತಹ ಪ್ರಯತ್ನಗಳು ಆತನನ್ನು ( ಲಿಮಯೆ) ಮತ್ತಷ್ಟು ಹುಷಾರುಗೊಳಿಸುತ್ತದೆ ಎಂದು ಆರೆಸಸ್ ಮಂದಿಗೆ ಗೊತ್ತಿತ್ತು.

ಈ ಆರೆಸಸ್ ಮಂದಿ ಜೈಲಿನಲ್ಲಿದ್ದಾಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು, ರಾಜ ನಾರಾಯಣ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಇಂದಿರಾ ಗಾಂಧಿಯವರ ಪರ ತೀರ್ಪು ನೀಡಿದಾಗ ಆರೆಸಸ್ ಸರಸಂಚಾಲಕ ಬಾಳಾಸಾಹೇಬ ದೇವರಸರು ಇಂದಿರಾ ಗಾಂಧಿಯವರಿಗೆ ಶುಭ ಕೋರಿದ್ದರು. ಇವರ ಕುರಿತಾಗಿ ನನಗೆ ನಂಬುಗೆ ಇಲ್ಲ.

11 thoughts on “ಆರೆಸಸ್ ಅಂದರೆ ಏನು?

  1. Ananda Prasad

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಆರೆಸೆಸ್ ಗರಡಿಯಲ್ಲಿ ಪಳಗಿ ಹೊರಬಂದ ಬಿಜೆಪಿ ಪಕ್ಷವು ಕೂಡಾ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಪಕ್ಷವಲ್ಲ. ಇವರು ಹೆಚ್ಚು ಒತ್ತು ಕೊಡುತ್ತಿರುವುದು ಪುರೋಹಿತಶಾಹೀ ಧಾರ್ಮಿಕ ಊಳಿಗಮಾನ್ಯ ವ್ಯವಸ್ಥೆಯ ಪುನರ್ನಿಮಾಣಕ್ಕೆ. ಇಂಥ ವ್ಯವಸ್ಥೆ ಪ್ರಜಾಪ್ರಭುತ್ವ ಪದ್ಧತಿಗೆ ವಿರೋಧಿಯಾಗಿದ್ದು ರಾಜಪ್ರಭುತ್ವದ ಮುಂದುವರಿದ ಅವತರಣಿಕೆಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಸರಿಯಾಗಿ ಬೆಳವಣಿಗೆಯಾಗದೆ ಇರಲು ಪುರೊಹಿತಶಾಹೀ ವ್ಯವಸ್ಥೆ ಪ್ರಧಾನ ಕಾರಣವಾಗಿದೆ. ಜನರನ್ನು ಎಲ್ಲಿಯವರೆಗೆ ಪುರೋಹಿತಶಾಹೀ ಚಿಂತನೆಗಳ ಗುಲಾಮಗಿರಿಯಿಂದ ಹೊರತರಲಾಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿ ಬೆಳೆಯಲಾರದು. ಆರೆಸೆಸ್ ಹಾಗೂ ಅದರ ರಾಜಕೀಯ ಅಂಗವಾದ ಬಿಜೆಪಿ ಸ್ವಾಮೀಜಿಗಳು, ದೇವಮಾನವರು, ಪವಾಡಪುರುಷರು, ಅಮ್ಮಾಗಳು, ಬಾಬಾಗಳು, ಧರ್ಮಾಧಿಕಾರಿಗಳು ಮೊದಲಾದವರನ್ನು ಲಾಗಾಯ್ತಿನಿಂದಲೂ ಬೆಂಬಲಿಸಿಕೊಂಡು ಬಂದಿವೆ ಹಾಗೂ ಅವರೆಲ್ಲರ ಬೆಂಬಲವು ಆರೆಸೆಸ್ ಹಾಗೂ ಬಿಜೆಪಿಯ ಕಡೆಗೆ ಯಾವಾಗಲೂ ಇರುತ್ತದೆ. ಇವರೆಲ್ಲರಿಗೂ ಬುದ್ಧಿಜೀವಿಗಳಾದ ವಿಜ್ಞಾನಿಗಳು, ಚಿಂತಕರು, ಪ್ರಗತಿಶೀಲ ಸಾಹಿತಿಗಳು ಮೊದಲಾದವರ ಮೇಲೆ ಲಾಗಾಯ್ತಿನಿಂದಲೂ ಧ್ವೇಷಭರಿತ ಆಕ್ರೋಶವಿದೆ ಏಕೆಂದರೆ ಅವರೆಲ್ಲರ ಪಟ್ಟಭದ್ರ ಹಿತಾಸಕ್ತಿಗಳಿಗೆ ಕಂಟಕರಾಗಿ ಕಾಣುವವರು ಬುದ್ಧಿಜೀವಿಗಳು. ಫ್ರೆಂಚ್ ಕ್ರಾಂತಿಯಂಥ ಕ್ರಾಂತಿ ಉಂಟಾಗಿದ್ದು ಬುದ್ಧಿಜೀವಿಗಳು ಜನರನ್ನು ತಮ್ಮ ಚಿಂತನೆಗಳಿಂದ ಜಾಗೃತಿಗೊಳಿಸಿದ ಪರಿಣಾಮವಾದುದರಿಂದ ಆರೆಸೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಬುದ್ಧಿಜೀವಿಗಳು ಎಂದರೆ ಯಾವಾಗಲೂ ಆಕ್ರೋಶವೇ ಇರುವುದು.

    ಮಧು ಲಿಮಯೆಯಂಥ ಸ್ಪಷ್ಟ ನಿಲುವಿನ ಚಿಂತಕರ ಈ ಲೇಖನ 34 ವರ್ಷ ಹಳೆಯದಾದರೂ ಇಂದಿಗೂ ಪ್ರಸ್ತುತವಾಗಿದೆ ಮಾತ್ರವಲ್ಲ ಇನ್ನು 50 ವರ್ಷ ಕಳೆದರೂ ಪ್ರಸ್ತುತವಾಗಿಯೇ ಉಳಿಯಲಿದೆ ಏಕೆಂದರೆ ಆರೆಸೆಸ್ ಹಾಗೂ ಬಿಜೆಪಿಯ ಬಲಪಂಥೀಯ ಚಿಂತನೆಗಳು ಎಂದೂ ಬದಲಾಗಲಾರವು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಹೊಂದದ ಆರೆಸೆಸ್ ಹಾಗೂ ಬಿಜೆಪಿಯ ಬಲಪಂಥೀಯ ಚಿಂತನೆಗಳ ವಿರುದ್ಧವಾಗಿ ಇಡೀ ದೇಶದಲ್ಲಿ ವಿದ್ಯಾವಂತರು ಜಾಗೃತರಾಗಿ ಇತರರನ್ನು ಜಾಗೃತಿಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಬೆಳೆಸಲು ಮುಂದೆ ಬರಬೇಕಾಗಿದೆ.

    Reply
  2. saranga

    why do we have only like links for the articles.. there should be “Don’t like” buttons to also. That is more republic

    Reply
    1. Ananda Prasad

      ‘ವರ್ತಮಾನ’ ಕ್ಕೆ ಒಂದು ನಿರ್ದಿಷ್ಟ ದೃಷ್ಟಿಕೋನ ಇದೆ ಅದುವೇ ಪ್ರಗತಿಪರ, ಪ್ರಜಾಪ್ರಭುತ್ವವಾದಿ, ಜನಪರ ಧೋರಣೆ. ಹೀಗಾಗಿ ಇದನ್ನು ಪೂರ್ವಾಗ್ರಹಪೀಡಿತ, ಏಕಪಕ್ಷೀಯ ಎಂದು ಹೇಳಲಾಗದು. ಪತ್ರಿಕೋದ್ಯಮದ ಮೂಲಭೂತ ಗುರಿ ಇರಬೇಕಾದದ್ದೇ ಪ್ರಗತಿಪರ, ಜನಪರ, ಪ್ರಜಾಪ್ರಭುತ್ವ ಧೋರಣೆಯನ್ನು ಎತ್ತಿ ಹಿಡಿಯುವುದಕ್ಕೇ ಆಗಿರಬೇಕು. ಜನರನ್ನು ಪ್ರತಿಗಾಮಿತನದಿಂದ ಪ್ರಗತಿಶೀಲತೆಯೆಡೆಗೆ ನಡೆಸುವುದು ಅದರ ಪ್ರಧಾನ ಗುರಿ ಆಗಿರಬೇಕು. ಹರಿಯುವ ನದಿ ಯಾವ ರೀತಿ ಹಿಂದಕ್ಕೆ ಹರಿಯುವುದಿಲ್ಲವೋ ಅದೇ ರೀತಿ ಪತ್ರಿಕೋದ್ಯಮವೂ ಸತತವಾಗಿ ಪ್ರಗತಿಯೆಡೆಗೆ ಮುಖ ಮಾಡಿರಬೇಕು, ಆಗಲೇ ಅದು ಸಾರ್ಥಕ್ಯ ಕಾಣುವುದು. ಪ್ರತಿಗಾಮಿ ಮನಸ್ಸುಗಳಿಗೆ, ಚಿಂತನೆಗಳಿಗೆ ‘ವರ್ತಮಾನ’ದಲ್ಲಿ ಜಾಗವಿಲ್ಲ. ಪ್ರತಿಗಾಮಿ ಮನಸ್ಸುಗಳ ಕೀಳು ಭಾಷೆಯ, ನಿಂದನಾತ್ಮಕ, ವಿತಂಡವಾದದ ಕಮೆಂಟುಗಳಿಗೆ ಉಳಿದ ಕೆಲವು ವೆಬ್ಸೈಟುಗಳಂತೆ ಇಲ್ಲಿ ಅವಕಾಶ ನೀಡದೆ ನಿಯಂತ್ರಿಸುವ ವ್ಯವಸ್ಥೆ ಇದೆ. ಹೀಗಾಗಿ ಇಲ್ಲಿ ಕೀಳು ಭಾಷೆಯ ಕಮೆಂಟುಗಳು ಪ್ರಕಟಗೊಳ್ಳದೆ ಒಂದು ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡು ಬಬರಲಾಗಿದೆ.

      ಲೇಖನವನ್ನು ಲೈಕ್ ಮಾಡುವ ವ್ಯವಸ್ಥೆ ಇರುವಂತೆ ಡಿಸ್ ಲೈಕ್ ಮಾಡುವ ವ್ಯವಸ್ಥೆ ಇದ್ದರೆ ಹೆಚ್ಚು ಡಿಸ್ ಲೈಕ್ ಗಳೇ ಬರಬಹುದು ಎಂಬುದು ನಿಜ ಏಕೆಂದರೆ ಮಧ್ಯಮ, ಮೇಲ್ಮಧ್ಯಮ ವರ್ಗದ ಅಂತರ್ಜಾಲ ಸೌಲಭ್ಯ ಹೊಂದಿರುವ ಜನ ಮಾತ್ರ ಇಂಟರ್ನೆಟ್ ನೋಡುವ ಇಲ್ಲಿನ ಪರಿಸ್ಥಿತಿಯಲ್ಲಿ ಪ್ರತಿಗಾಮಿ, ಊಳಿಗಮಾನ್ಯ ವ್ಯವಸ್ಥೆಗೆ ಗುಲಾಮರಾಗಿರುವ ಭಾರತದಲ್ಲಿ ಪುರೋಹಿತಶಾಹೀ ಚಿಂತನೆಯನ್ನು ಮೆಚ್ಚುವ ಜನ ಅಂತರ್ಜಾಲ ಲೋಕದಲ್ಲಿ ಹೆಚ್ಚು ಇದ್ದಾರೆ. ಹಾಗೆಂದು ಹೆಚ್ಚು ಜನರ ಮೆಚ್ಚುಗೆ ಗಳಿಸಲು ಈ ವೆಬ್ ಸೈಟ್ ರೂಪುಗೊಂಡದ್ದು ಅಲ್ಲ ಅಥವಾ ಯಾವುದೇ ಲಾಭ ಗಳಿಸಲೂ ಇದು ರೂಪುಗೊಂಡದ್ದು ಅಲ್ಲ. ಹಾಗಾಗಿ ಉಳಿದ ಕೆಲವು ಮಾಧ್ಯಮಗಳಂತೆ ಪ್ರತಿಗಾಮಿ ಹಾಗೂ ಪ್ರಗತಿಗಾಮಿ ಹೀಗೆ ಎರಡರ ನಡುವೆಯೂ ಓಲಾಡುತ್ತಾ ಎಡಬಿಡಂಗಿಯಂತೆ, ಅಡ್ಡ ಗೋಡೆಯ ಮೇಲೆ ನಿಂತು ಗಾಳಿ ಯಾವ ಕಡೆಗೆ ಬೀಸುತ್ತದೋ ಅತ್ತ ಕಡೆಗೆ ಹಾರುವ ಸಮಯಸಾಧಕತನ ಈ ವೆಬ್ ಸೈಟು ಹೊಂದಿಲ್ಲ. ಜನರನ್ನು ಪ್ರಗತಿಪರ ಚಿಂತನೆಗೆ, ವೈಚಾರಿಕತೆಗೆ, ಸಮಾನತೆಯ, ಮಾನವತೆಯ ಆಶಯದೆಡೆಗೆ ಕೊಂಡೊಯ್ಯುವ ಉನ್ನತ ಗುರಿಯನ್ನು ಹೊಂದಿರುವ ಈ ವೆಬ್ ಸೈಟು ಪತ್ರಿಕೋದ್ಯಮದ ಮೂಲಭೂತ ಆಶಯವನ್ನು ಎತ್ತಿ ಹಿಡಿಯುತ್ತಿದೆ.

      Reply
      1. ಜೆ.ವಿ.ಕಾರ್ಲೊ, ಹಾಸನ

        ನಿಮ್ಮ ಉತ್ತರ ಓದಿ ಖುಷಿಯಾಯ್ತು.

        Reply
  3. srinivasamurthy

    20 ವರ್ಶಗಳಶ್ಟೇ ಈ ಆರ್.ಎಸ್.ಎಸ್ ಇರೋದು. ಅನಿಸುತ್ತಿದೆ. ಎಲ್ಲರಿಗೂ ಇದರ ಗೊಡ್ಡುಗಳು ತಿಳಿಯುತ್ತಿದೆ.

    Reply
  4. mahesh

    Rss jathi paddathi bembalisuthade anthe…ivaru yava rss bagge mathadtha eddare……Nanna antha adestu janarannu badalayisiddu ide rss….Nammali avru yaru nanna jathi keliilla..yaru yara manegu hogthare.alli uta ella madthare……..Sullu helbeku..Sadya adre nivu adannu prove madi thorisi…Hosa swayamsevakaridalla karyakartharinda…

    Reply
  5. Gurumurthy CM

    ಆರೆಸ್ಸೆಸ್ ಬಗ್ಗೆ ಊಹಿಸಿಕೊಂಡು ಲೇಖನ ಬರೆಯುವುದು ಇತ್ತೀಚಿನ ಬೆಳವಣಿಗೆಯಲ್ಲ ಅದು ೧೯೭೯ ರಲ್ಲೂ ಇತ್ತು ಎಂದು ತಿಳಿಸಿಕೊಡುವ ಲೇಖನ….

    Reply
  6. Umesh

    ಶ್ರೀಪಾದಭಟ್ಟರೆ,

    ಆರೆಸಸ್ ಬಗ್ಗೆ ಬರೆಯುವ ಮುಂಚೆ ತಮ್ಮ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದವರು 1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬ್ರಿಟಿಷರ ಪರವಾಗಿ ಸೇರಿಕೊಂಡು ನಡೆಸಿದ ದ್ರೋಹದ ಚರಿತ್ರೆಯನ್ನು ಮೊದಲು ಹೇಳಿ ಸ್ವಾಮಿ.

    Reply
  7. Munwar Ali

    ಇಂಥವರ ವಿರುದ್ದ ಕಠಿಣ ಕ್ರಮವನ್ನು ತಗೆದುಕೊಳ್ಳ ಬೇಕು.. ಈ ಸಂಘಟನೆಯ ಮೆಲೇ ನಿಷೇಧ ಹೇರಿಸಬೇಕು…

    Reply

Leave a Reply to Ananda Prasad Cancel reply

Your email address will not be published. Required fields are marked *