’ಜಟ್ಟ’ : ತಪ್ಪದೇ ನೋಡಿ…


– ರವಿ ಕೃಷ್ಣಾರೆಡ್ದಿ


 

ಕೆಲವು ಸಿನೆಮಾಗಳನ್ನು ಒಳ್ಳೆಯ ಸಿನೆಮಾ ಎಂದು ನೋಡಬೇಕಾಗುತ್ತದೆ, ಮತ್ತೆ ಕೆಲವನ್ನು ಅಂತಹ ಸಿನೆಮಾಗಳನ್ನು ಪ್ರೋತ್ಸಾಹಿಸುವ ಕಾರಣಕ್ಕಾಗಿಯೇ ನೋಡಬೇಕಾಗುತ್ತದೆ. ಜಟ್ಟ ಸಿನೆಮಾವನ್ನು ಎರಡೂ ಕಾರಣಗಳಿಗೆ ನೋಡಬೇಕಿದೆ. ಅದು ಕೇವಲ ಪ್ರಯೋಗಾತ್ಮಕ ಚಿತ್ರವಲ್ಲ. ಕನ್ನಡದಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಬಂದ ಕೆಲವು ಪ್ರಶಸ್ತಿ ವಿಜೇತ ಸಿನೆಮಾಗಳನ್ನು ನೋಡಿ ನನಗೆ ಖಂಡಿತ ಬೇಸರವಾಗಿತ್ತು. ಅರ್ಧ ಗಂಟೆಯಲ್ಲಿ ಹೇಳಿ ಮುಗಿಸಬಹುದಾದದ್ದನ್ನು ಎರಡು ಗಂಟೆ ಎಳೆಯುತ್ತಾರೆ. ನಿಧಾನವಾಗಿ, ನೀರಸವಾಗಿ ಕತೆ ಹೇಳುವುದನ್ನೇ ಕಲೆ ಎಂದುಕೊಂಡಿದ್ದಾರೆ. ಮತ್ತು ಈ ಸಿನೆಮಾಗಳು ದುರಂತವನ್ನೇ ಹೇಳಬೇಕು. ಜೀವನಪ್ರೀತಿಯ, ಆಶಾವಾದದ ಸಿನೆಮಾ ಪ್ರಶಸ್ತಿಗೆ ಅನರ್ಹ ಎನ್ನುವ ಭಾವನೆ ಇದೆ.

ಆದರೆ, ’ಜಟ್ಟ’ ಹಾಗಿಲ್ಲ. ಕ್ರೌರ್ಯ ಮತ್ತು ದುರಂತವನ್ನೇ ಇದೂ ಹೇಳಿದರೂ ಅಲ್ಲಿ ಜೀವನಪ್ರೀತಿಯಿದೆ. ತ್ಯಾಗವಿದೆ. ಕರುಣೆ ಇದೆ. ದೊಡ್ದತನವಿದೆ. ವಿಷಾದವಿದೆ. ಹಿಂಸೆಯನ್ನು ತೋರಿಸುತ್ತಲೇ ಅಹಿಂಸೆಯನ್ನು ಸಾರುತ್ತದೆ.

ಸಮಾಜದ ಪಿತೂರಿಗಳಿಗೆ ಬಲಿಯಾಗಿ ಒಂದು ತಪ್ಪು ಮಾಡುವ ಜೀವ ಆ ತಪ್ಪನ್ನು ಸರಿಮಾಡಿಕೊಳ್ಳಬೇಕೆಂದರೂ ಅದನ್ನು ಮಾಡುವ ಬಗೆ ತಿಳಿಯದೆ ಒದ್ದಾಡುವ ಕತೆ ಇದು. ಮಧ್ಯಂತರದ ನಂತರ ವೇಗ ಪಡೆದುಕೊಳ್ಳುವ ಚಿತ್ರ ಅನಿರೀಕ್ಷಿತ ಕ್ಲೈಮಾಕ್ಸ್ ಮೂಲಕ ಕೊನೆಯ ಅರ್ಧ ಗಂಟೆಯಲ್ಲಿ ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. jattaಬಹುತೇಕ ಎಲ್ಲರ ನಟನೆಯೂ ಚೆನ್ನಾಗಿದೆ. ವಿಷಾದದ ಕತೆ ಹೇಳುತ್ತಿದ್ದರೂ ಪಾತ್ರಧಾರಿಗಳ ನಟನೆಯನ್ನು ನೋಡಿ ಖುಷಿಪಡದೆ ಇರಲಾಗದು.

ಸುಮಾರು ಎರಡೂ ಕಾಲು ಗಂಟೆಯ ಈ ಸಿನೆಮಾವನ್ನು ಒಂದು ಹದಿನೈದು ನಿಮಿಷ ಕಡಿಮೆ ಮಾಡಿ, ಕೆಲವೊಂದು ಕಡೆ ಬರುವ ದೀರ್ಘ ಭಾಷಣಗಳ ಸಂಭಾಷಣೆಯನ್ನು ಕಡಿತ ಮಾಡಿದ್ದರೆ ಚಿತ್ರಕ್ಕೆ ಇನೂ ಬಿಗಿ ಬರುತ್ತಿತ್ತು. ಕೆಲವೊಂದು ಕಡೆ ಯಾವುದೇ ವಾಚ್ಯವಿಲ್ಲದೆ ಕತೆ ಹೇಳಲು ಪ್ರಯತ್ನಿಸುವ ನಿರ್ದೇಶಕರು ಮತ್ತೆ ಹಲವು ಕಡೆ ದೀರ್ಘ ಸಂಭಾಷಣೆ ಇಟ್ಟಿರುವುದು ಚಿತ್ರದಲ್ಲಿನ ದೋಷಗಳಲ್ಲಿ ಒಂದು. ಇದು ಕೆಲವು ಕಡೆ, ವಿಶೇಷವಾಗಿ ಗೃಹಬಂಧನದಲ್ಲಿರುವ ಹೆಣ್ಣುಮಗಳ ಕೈಯ್ಯಲ್ಲಿ ಹೇಳಿಸುವ ಮಾತುಗಳು ಅಸಹಜ ಮತ್ತು ಅಸಾಂದರ್ಭಿಕ ಎನ್ನಿಸುತ್ತವೆ.

ನಾನು ಈ ಸಿನೆಮಾವನ್ನು ಆನೇಕಲ್‌ನಲ್ಲಿ ಅತ್ತ ಥಿಯೇಟರ್ರೂ ಅಲ್ಲದ ಇತ್ತ ಟೆಂಟೂ ಅಲ್ಲದ ಚಿತ್ರಮಂದಿರದಲ್ಲಿ ನೋಡಿದೆ. ಅಂದು ಆಯುಧಪೂಜೆಯ ಮಧ್ಯಾಹ್ನ. ಸುಮಾರು 70-80 ಜನ ಮಾತ್ರ ಇದ್ದರು. ಕೆಲವು ಸಂದರ್ಭಗಳಲ್ಲಿ ಪ್ರೇಕ್ಷಕರ ಅಸಹನೆ ತಾಳಲಾಗದಷ್ಟಿತ್ತು. ಏನೇನನ್ನೋ ಕಲ್ಪಿಸಿಕೊಂಡು ಬಂದಿದ್ದ ಕೆಲವು ಪ್ರೇಕ್ಷಕರು ಈ ಸಿನೆಮಾದ ಕಲಾ ಭಾಷೆ ನೋಡಿ ದಂಗಾಗಿದ್ದರು, ವ್ಯಗ್ರಗೊಂಡಿದ್ದರು. ಕಿರುಚುತ್ತಿದ್ದರು. “ಷಂಡ”ನನ್ನು ಹೀಯಾಳಿಸುತ್ತಿದ್ದರು. “ಗಂಡಸಿಗೆ ಸವಾಲೆಸೆಯುವವಳನ್ನು” ಬೈಯ್ಯುತ್ತಿದ್ದರು. “ಮೋಸಗಾರ್ತಿಯನ್ನು” ಮಾತಿನಲ್ಲೇ ಕೊಲ್ಲುತ್ತಿದ್ದರು. ಸಿಗರೇಟಿನ ಮೇಲೆ ಸಿಗರೇಟು ಹೊತ್ತಿಸುತ್ತಿದ್ದರು. ಅಂದ ಹಾಗೆ ಸಿನೆಮಾದ ವಿರಾಮದ ಸಮಯದಲ್ಲಿ ಬಂದ ಶಿವರಾಜ್ ಕುಮಾರ್‌ರ “ಭಜರಂಗಿ” ಚಿತ್ರದ ಟ್ರೈಲರ್ ಅಲ್ಲಿದ್ದವರನ್ನು ರೋಮಾಂಚನಗೊಳಿಸಿದ ರೀತಿ ನೋಡಬೇಕಿತ್ತು. ಅತಿಮಾನುಷ, ಅಮಾನುಷ, ಅವಾಸ್ತವಿಕ ಕತೆ ಮತ್ತು ದೃಶ್ಯಗಳನ್ನು ನೋಡುವ ಮೂಲಕ ಸಮಯ ಕೊಲ್ಲಲು ಅಥವ ವಾಸ್ತವದಿಂದ ಪಲಾಯನ ಮಾಡಲು ಬಯಸುವ ಜನರಿಗೆ ’ಜಟ್ಟ’ ಚಿತ್ರ ಇಷ್ಟವಾಗುವುದಾದರೂ ಹೇಗೆ? ಮತ್ತು, ಇಂತಹ ಚಿತ್ರಗಳನ್ನು ಎಲ್ಲಾ ತರಹದ ಚಿತ್ರಮಂದಿರಗಳಲ್ಲಿ ನೋಡಲು ಆಗದು. ಅದನ್ನು ನೋಡಬೇಕಾದ ಪರಿಸರವೇ ಒಂದು ಬಗೆಯದು. ಆದರೂ, ಇಂತಹ ಚಿತ್ರಗಳು ಸಣ್ಣಪುಟ್ಟ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಪ್ರದರ್ಶಿತವಾಗುವುದು ಒಳ್ಳೆಯದೇ. ತಾವು ಗಮನಿಸಿರದ ಒಂದು ಭಾಷೆ ಮತ್ತು ವಿಚಾರವನ್ನು ಕೆಲವರಾದರೂ ಬಲವಂತವಾಗಿಯಾದರೂ ಗಮನಿಸಲು ಸಾಧ್ಯವಾಗುತ್ತದೆ.

ಮೊದಲೇ ಹೇಳಿದ ಹಾಗೆ ಈ ಚಿತ್ರವನ್ನು ಒಳ್ಳೆಯ ಸಿನೆಮಾ ಎನ್ನುವ ಕಾರಣಕ್ಕಾಗಿ ಮತ್ತು ಪ್ರೋತ್ಸಾಹಿಸುವ ಕಾರಣಕ್ಕಾಗಿ ಹೆಚ್ಚೆಚ್ಚು ಕನ್ನಡಿಗರು ನೋಡಬೇಕಿದೆ. ನಮ್ಮ ಚಲನಚಿತ್ರಗಳ ಗುಣಮಟ್ಟ ಹೆಚ್ಚಬೇಕಿದ್ದರೆ ಇಂತಹ ಚಿತ್ರಗಳು ಹೆಚ್ಚಬೇಕು. ಚಿತ್ರ ಸಿನೆಮಾ ಮಂದಿರಗಳಿಂದ ತೆರವಾಗುವ ಮೊದಲೇ ಹೋಗಿ ಇದನ್ನು ನೋಡಿ. ಪರಿಚಿತರಿಗೆ ನೋಡಲು ಪ್ರೇರೇಪಿಸಿ.

4 comments

  1. ಹೌದು ಖಂಡಿತವಾಗಿಯೂ ನೋಡಲೇ ಬೇಕಾದ ಹಾಗೂ ನಮ್ಮ ಆಪ್ತವಲಯಕ್ಕೆ ನೋಡಲೇಬೇಕೆಂದು ತಾಕೀತು ಮಾಡಬೇಕಾದ ಸಿನೆಮಾ ಇದು

  2. ತುಂಬಾ ತಡವಾಯ್ತು ರವಿಯವರೆ. ನಾಳೆ ಇದು ಖಂಡಿತಾ ಎತ್ತಂಗಡಿ ಆಗಿರುತ್ತದೆ!

  3. ಸಪ್ನ ಥೇಟರ್ ಗಾಂಧಿನಗರದಲ್ಲಿದೆ. ದಯವಿಟ್ಟು ನೋಡಿ ಸಕಹರಿಸಿ ಪ್ರತಿಕ್ರಿಯಿಸಿ

Leave a Reply

Your email address will not be published.