Daily Archives: October 17, 2013

ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

– ಬಿ.ಶ್ರೀಪಾದ ಭಟ್

ಒಂದು ವರ್ಷದ ಹಿಂದೆ ನಡೆದ ಸೌಜನ್ಯ ಹತ್ಯೆ ಪ್ರಕರಣ ಈಗ ಅನಿರೀಕ್ಷಿತವಾದ ತಿರುವು ಪಡೆದುಕೊಂಡು ಕಡೆಗೆ ಧರ್ಮಸ್ಥಳದ ಸೋ ಕಾಲ್ಡ್ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಂಗಳಕ್ಕೆ ಬಂದು ತಲುಪಿದೆ. ಅಷ್ಟೇ ಅಲ್ಲ ಅವರಿಗೆ ಉರುಳಾಗುತ್ತಾ ಸಾಗಿದೆ. ಇವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದೆ. Dharmasthala_Templeಇಂದು ಸೌಜನ್ಯ ಹತ್ಯೆಯ ಹಿಂದೆಯೇ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಕಳೆದ ಕೆಲವು ವರ್ಷಗಳಿಂದ ನಿಗೂಢ ಕೊಲೆಗಳು ಮತ್ತು ಅದು ಮುಚ್ಚಿ ಹಾಕಿದ ಪ್ರಭಾವಶಾಲಿ ವ್ಯಕ್ತಿ ಮತ್ತು ಸಂಸ್ಥೆಗಳ ಕೈವಾಡ ಇಂದು ಬಯಲಿಗೆ ಬರುತ್ತಿದೆ.

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಕೆಲವು ವರ್ಷಗಳಿಂದ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಮುತ್ತ ನಡೆದಿದೆ ಎನ್ನಲಾದ ಕೊಲೆಗಳ ಸತ್ಯಶೋಧನೆಗಾಗಿ ಮಂಗಳೂರಿನ ಕಮ್ಯುನಿಷ್ಟ ಮಿತ್ರರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಈ ಪ್ರಕರಣ ಮರುಜೀವ ಪಡೆದುಕೊಳ್ಳಲು ಕಾರಣ. ನಿಸ್ವಾರ್ಥದಿಂದ ಈ ಹೋರಾಟವನ್ನು ನಡೆಸಿದ ನಮ್ಮ ಕಮ್ಯುನಿಷ್ಟ ಮಿತ್ರರಿಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಬೇಕಾಗಿದೆ. ನಮ್ಮ ಮಿತ್ರರು ಇದೇ ತಿಂಗಳು ಸೌಜನ್ಯಳ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 18ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ. ನಮ್ಮ ಪ್ರೀತಿಯ ಗೆಳೆಯರಿಗೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡಬೇಕಾಗಿದೆ.

ಪ್ರಜಾಪ್ರಭುತ್ವದ ದೇಶದಲ್ಲೂ ಧರ್ಮಸ್ಥಳದಲ್ಲಿ ಈ ವೀರೇಂದ್ರ ಹೆಗ್ಗಡೆಯವರು ಅನಭಿಷಕ್ತ ರಾಜರಂತೆ ರಾಜ್ಯಾಭಾರ ನಡೆಸುತ್ತಿದ್ದಾರೆ. ಅಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಉಕ್ಕಿನ ಹಿಡಿತ ಸಡಿಲಗೊಂಡಿಲ್ಲ. ಇಂದು ಈ ಸರ್ವಾಧಿಕಾರದ ಆಡಳಿತಕ್ಕೆ ಸಮಾಜ ಸೇವೆಯ ಮುಖವಾಡ ಗಟ್ಟಿಯಾಗಿ ಅಂಟಿಕೊಂಡಿದೆ. ಇಷ್ಟಾದರೂ ನಮ್ಮ ದೇಶದ ಪ್ರಜಾಪ್ರಭುತ್ವದ ಸಂವಿಧಾನ ಸಮಾನತೆಗಾಗಿ ಕಲ್ಪಿಸಿಕೊಟ್ಟ ಅಲ್ಪಸಂಖ್ಯಾತರಿಗಾಗಿ ಇರುವ ಮೀಸಲಾತಿಯ ಸವಲತ್ತನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಬಳಸಿಕೊಳ್ಳಲು ಈ  ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಸಂಕೋಚವಿಲ್ಲ. ಮಾತೆತ್ತಿದರೆ ನಮ್ಮ ಪರಿಸರ, ನಮ್ಮ ಸಂಸ್ಕೃತಿಯ ಕುರಿತಾಗಿ ಮಾತನಾಡುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸುತ್ತಮುತ್ತ ವಸಾಹುಶಾಹಿಯ ಸಮಾಜವನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದು ಕಲೋನಿಯಲ್ ರೂಪದಂತೆ ಗೋಚರಿಸದಿರಲು ಅಲ್ಲಿ ಉದಾರವಾದಿ ಮುಖವಾಡವನ್ನು ತೊಡಿಸಲಾಗಿದೆ. ಇದಕ್ಕೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರ ಸಂಘ ಸಂಸ್ಥೆಗಳ ಸಮಾಜ ಸೇವೆಯ ಗರಿಗಳು ಮುಡಿಗೇರಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಈ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಮೂಲಭೂತವಾದವನ್ನು ಪ್ರಗತಿಪರರು ಬಿಚ್ಚಿ ತೋರಿಸಿದರೆ ಬೆಂಬಲಿಗರು ಅದನ್ನು ಅಲ್ಲಗೆಳೆಯದೆಯೇ ಬದಲಾಗಿ ಹೆಗ್ಗಡೆಯವರ ಸಮಾಜಸೇವೆಯ ಪಟ್ಟಿಗಳನ್ನು ನೀಡಿ ಇದೇ ಅವರ ಅಸ್ಮಿತೆ ನೆನಪಿರಲಿ ಎಂದು ತಾಕೀತು ಮಾಡುತ್ತಾರೆ. ಇಂದು ಧರ್ಮಸ್ಥಳದ ಧಾರ್ಮಿಕತೆಯ ಅಮಾನವೀಯ ಅಟ್ಟಹಾಸವನ್ನು Sowjanya-Rape-Murderದೈವತ್ವದ ಪವಾಡವಾಗಿ ಬಳಸಿಕೊಂಡಿರುವುದು ವೀರೇಂದ್ರ ಹೆಗ್ಗಡೆಯವರ ಚಾಣಾಕ್ಷತೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಅಲ್ಲಿನ ಗುಲಾಮಿತನವನ್ನು ಭಕ್ತಿಯ ಪರಾಕಷ್ಟೆಯೆಂಬಂತೆ ಜಗಜ್ಜಾಹೀರುಗೊಳಿಸಿರುವುದು ವೀರೇಂದ್ರ ಹೆಗ್ಗಡೆಯವರ ಬಲು ದೊಡ್ಡ ಮಾರ್ಕೆಟಿಂಗ್‌ ಸಕ್ಸೆಸ್. ಅಲ್ಲಿನ ನಾಗರಿಕರು ಚಿಂತನೆಗೆ ಒರೆ ಹಚ್ಚಬೇಕಾದಂತಹ ತಮ್ಮದೇ ಆದ ಮಿದುಳನ್ನು ಮೌನವಾಗಿ ನಿಷ್ಕ್ರಿಯೆಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪದತಲದಲ್ಲಿ ಮುಡಿಪಾಗಿರಿಸಿದ್ದಾರೆ. ಕಲೋನಿಯಲ್ನ ಈ ದಿಗ್ವಿಜಯದ ಫಲವಾಗಿ  ಅಲ್ಲಿನ ‘ಒಡೆಯ-ಗುಲಾಮ’ ವ್ಯವಸ್ಥೆ ಗುರು-ಶಿಷ್ಯ ಸಂಬಂಧದ ಮುಖವಾಡ ಧರಿಸಿದೆ. ಹಾಗಾದಲ್ಲಿ ವೀರೇಂದ್ರ ಹೆಡೆಯವರ ಸಾಮ್ರಾಜ್ಯದಲ್ಲಿ ಆಧುನಿಕತೆಯ, ವೈಚಾರಿಕತೆಯ ವ್ಯಾಖ್ಯಾನವೇನು?? ಸ್ವಘೋಷಿತ ಧಾರ್ಮಿಕ ನಾಯಕನ ಈ ಸಕ್ಸೆಸ್ ಓಟ ಎಗ್ಗಿಲ್ಲದೆ ಜನಬೆಂಬಲ ಪಡೆದುಕೊಳ್ಳತೊಡಗಿದರೆ ಇನ್ನೆಲ್ಲಿದೆ ಮಾನವೀಯ ನಾಯಪರವಾದ ಸಂವಾದ?? ಇನ್ನೆಲ್ಲಿದೆ ಹೃದಯ ವೈಶಾಲ್ಯತೆ?

ಈ ವೀರೇಂದ್ರ ಹೆಗ್ಗಡೆಯವರ ಈ ಶಕ್ತಿಕೇಂದ್ರ ಯಾವುದೇ ಬಗೆಯ ಹೊನ್ನಾಳಿ ಹೊಡೆತಕ್ಕೂ, ಬಲವಾದ ಸುತ್ತಿಗೆ ಏಟಿಗೂ ಒಂದಿಂಚೂ ಅಲ್ಲಾಡದಿರಲು ಕಾರಣವೇನು?? ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪ್ರಕರಣಗಳು ಸೂಕ್ತವಾಗಿ ತನಿಖೆಯಾಗದಂತೆ ತಡೆಯುತ್ತಿರುವ ಕಾಣದ ಕೈಗಳಾವವು?? ಅಲ್ಲಿನ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸದಂತೆ ನಿಗ್ರಹಿಸುತ್ತಿರುವ ರಾಜಕೀಯ ಶಕ್ತಿಗಳಾವುವು?? ಉತ್ತರ ಕ್ಲಿಷ್ಟವೇನಲ್ಲ. ತುಂಬಾ ಸರಳ.

ಸೀನ್ 1:
ಈ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಕೊಲೆ ಸಂಚಿನ ಆರೋಪ ಎದುರಿಸುತ್ತಿರುವಂತಹ ಈ ಸೂಕ್ಷ್ಮ ಸಂದರ್ಭದಲ್ಲಿ  ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ಬುದ್ಧಿಜೀವಿ ರಾಜಕಾರಣಿ ಎಂದೇ ಪ್ರಖ್ಯಾತರಾದ ಕನ್ನಡ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ರಾಜಕಾರಣಿ ಬಿ.ಎಲ್. ಶಂಕರ್ ಏಕಾಏಕಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಲ್ಲಿ ಈ ಉತ್ತರ ಅಡಗಿದೆ.

ಸೀನ್ 2:
17ನೇ ಅಕ್ಟೋಬರ್ 2013ರಂದು ತನ್ನ ಶಕ್ತಿಯನ್ನು ಸಾಬೀತುಪಡಿಸಲು ಉಜಿರೆಯಲ್ಲಿ ರಾಜಕಾರಣಿಯಂತೆ ತನ್ನ ಬೆಂಬಲಿಗರ ಸಮಾವೇಶ ನಡೆಸಿದ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾಚಿಕೆ, ಮಾನವಿಲ್ಲದೆ ವೇದಿಕೆ ಹಂಚಿಕೊಂಡ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೀರೇಂದ್ರ ಹೆಗ್ಗಡೆಯವರ ಪರವಾಗಿ ಜಿದ್ದಿಗೆ ಬಿದ್ದವರಂತೆ ಮಾತನಾಡಿದರು. ಇವರಿಗೆ ಸಂವಿಧಾನದ ಆಶಯಗಳೇ ಮರೆತುಹೋಗಿದ್ದು ದುರಂತವಲ್ಲದೇ ಮತ್ತಿನ್ನೇನು ?? ನೆನಪಿರಲಿ ಇವರೆಲ್ಲ ಸೆಕ್ಯುಲರ್ ರಾಜಕಾರಣಿಗಳು.

ಸೀನ್ 3:
17ನೇ ಅಕ್ಟೋಬರ್ 2013ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭ್ಯ, ನಿಷ್ಠಾವಂತ, ಶಿಕ್ಷಿತ, ಸೆಕ್ಯುಲರ್ ರಾಜಕಾರಣಿ ಎಂದೇ ಪ್ರಖ್ಯಾತರಾದ  ಕಾಂಗ್ರೆಸ್‌ನ ಸುದರ್ಶನ್, ಜನಪರ ರಾಜಕಾರಣಿ ಎಂದು ಪ್ರಸಿದ್ಧಿ ಪಡೆದ ಸಿಂಧ್ಯಾ, ಮತಾಂಧ ರಾಜಕಾರಣಿ ಸಿ.ಟಿ.ರವಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಮತ್ತು ಪ್ರಖ್ಯಾತ, ಜಾತ್ಯಾತೀತ, ಸೆಕ್ಯುಲರ್ ಸಾಹಿತಿಗಳಾದ ಕಮಲಾ ಹಂಪಾನಾ ಮತ್ತು ಇತ್ಯಾದಿ, ಇತ್ಯಾದಿ, ಇತ್ಯಾದಿ ಮುಖಂಡರು!!

ಸೀನ್ 4:
ಕೇವಲ ಕನ್ನಡ ಸಾಹಿತ್ಯ ಸಂಬಂದಿತ ವಿವಾದಗಳಿಗೆ ಮಾತ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಮುಗಿಲುಮುಟ್ಟುವಂತೆ ಘೋಷಿಸುವ ನಮ್ಮ ಬಹುಪಾಲು ಸಾಹಿತಿಗಳು ಮತ್ತು ವಿಮರ್ಶಕರು ಸಾಹಿತ್ಯೇತರವಾದ ಯಾವುದೇ ಬಗೆಯ ಶೋಷಣೆಯ ಕುರಿತಾಗಿ ತಳೆಯುವ ದಿವ್ಯ ನಿರ್ಲಕ್ಷ್ಯ, ನ್ಯಾಯದ, ಸಮತಾವಾದದ ಪರವಾಗಿ ಚಳುವಳಿ ನಡೆಸುವ ಚಳುವಳಿಗಾರರ ಕುರಿತಾದ ಈ ಯುಜಿಸಿ ಪಂಡಿತರ ಅಸಡ್ಡೆ ಇವರ ಕುರಿತಾಗಿ ನಮ್ಮಲ್ಲಿ ಅಸಹ್ಯ ಹುಟ್ಟಿಸಲು ಮಾತ್ರ ಸಾಧ್ಯವಷ್ಟೇ. ಇವರೆಲ್ಲ ತಿರಸ್ಕಾರಕ್ಕೆ ಮಾತ್ರ ಅರ್ಹರು. ಕನ್ನಡಿಗರು ಇವರ ಬೌದ್ಧಿಕ ಅಹಂಕಾರವನ್ನು ನಿರಾಕರಿಸಿ ಎಷ್ಟು ಬೇಗ ಮೂಲೆಗೆ ಎಸೆಯುತ್ತಾರೋ ಅಷ್ಟು ಒಳ್ಳೆಯದು. ಚಿಂತಕರು ಹೇಳಿದಂತೆ ಸಮತಾವಾದದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದದ್ದೇನೆಂದರೆ ಪ್ರಜ್ಞಾವಂತರ, ಅಧಿಕಾರಶಾಹಿಯ ದಿವ್ಯ ಮೌನ. ಅನ್ಯಾಯದ, ಅತ್ಯಾಚಾರದ ವಿರುದ್ಧ ತುಟಿಬಿಚ್ಚದ ಭೀಕರವಾದ ಈ ಮೌನ ದಿನಗಳೆದಂತೆ ಒಂದೇ ಏಟಿಗೆ ಎಲ್ಲಾ ಬಗೆಯ ಮಾನವೀಯ, ಜನಪರ ಚಳುವಳಿಗಳನ್ನು ನಾಶಮಾಡಬಲ್ಲದು. ಅಂದರೆ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಪರವಾಗಿ ನೀವು ಮಾತನಾಡಲಿಲ್ಲವೆಂದರೆ ನೀವು ನಮ್ಮ ವಿರುದ್ಧ ಇದ್ದೀರಿ ಎಂಬುದಷ್ಟೇ ಈ ಭೀಕರ ಮೌನದ ತಾತ್ಪರ್ಯ. ಈ ಅತ್ಯಾಚಾರ, ಹಲ್ಲೆಗಳನ್ನು ನಡೆಸುವ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸುವವರೆನ್ನಲ್ಲ ತಂಟೆಕೋರರೆಂದು ವ್ಯಾಖ್ಯಾನಿಸುವ ಗುಂಪಿಗೆ ಈ ಮೌನಧಾರಿಗಳೂ ಸೇರಿಕೊಂಡಿದ್ದಾರೆ ಎಂಬುದು ಸೂರ್ಯ ಸ್ಪಷ್ಟ.

ಸೀನ್ 5 :
ಬದಲಾವಣೆಯ ತಂಗಾಳಿ ಬೀಸಿದೆ ಎನ್ನುವ ಹೆಗ್ಗಳಿಕೆಯೊಂದಿಗೆ ಗದ್ದುಗೆ ಹಿಡಿದಿರುವ ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ದಿವ್ಯ ಮೌನದ ಅರ್ಥ ಬಿಡಿಸಿ ಹೇಳಬೇಕೆ ?? ತನ್ನ ರಾಜ್ಯಭಾರದಲ್ಲಿ ಯಾವುದೇ ಪ್ರಜೆಗೆ ಅನ್ಯಾಯವಾದರೂ ತನ್ನ ಶಾಸಕಾಂಗ ಮತ್ತು ಕಾರ್ಯಾಂಗವು ಆತನ/ಆಕೆಯ ಪರವಾಗಿ ಬೆಂಬಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ಸಂವಿಧಾನ ಮೂಲ ಆಶಯವೆಂಬುದು ನಮ್ಮ ಮಾನವೀಯ ರಾಜಕಾರಣಿ ಸಿದ್ಧರಾಮಣ್ಣನವರಿಗೆ ಮರೆತು ಹೋಯಿತೆ? ಅಥವಾ ಜಾಣ ಮೌನವೇ !! ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಮತ್ತು ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಕೊಲೆಗಳ ವಿರುದ್ಧದ ತನಿಖೆ ಮುಗಿಯುವವರೆಗೂ ತನ್ನ ಸರ್ಕಾರದ ಮಂತ್ರಿಗಳಿಗೆ, ತನ್ನ ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ನೀತಿಸಂಹಿತೆಯನ್ನು ಬೋಧಿಸಿ ಈ ಹೆಗ್ಗಡೆಯವರೊಂದಿಗೆ ಸಮಾನ ದೂರದಲ್ಲಿರಬೇಕೆಂದು ಆದೇಶಿಸಲು ಸಿದ್ಧರಾಮಯ್ಯನವರಿಗೆ ಇರುವ ತೊಂದರೆಯಾದರೂ ಏನು? ಅದು ಒಂದೇ ತೊಂದರೆ, ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬಹುಮತವೇ ನಿರ್ಣಾಯಕವಾಗುವಂತಹ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೀರೇಂದ್ರ ಹೆಗ್ಗಡೆಯಂತಹ ಅತಿರಥರಿಗೆ ರಾಜ್ಯಾದ್ಯಾಂತ ಈ ನಿಗೂಢ ಬಹುಮತವನ್ನು ಗಳಿಸುವುದು ನೀರು ಕುಡಿದಷ್ಟೇ ಸುಲಭ. ಈ ನಿಗೂಢ ಬಹುಮತವನ್ನು ಆಧಾರವಾಗಿಟ್ಟುಕೊಂಡು ಶತಮಾನಗಳವರೆಗೆ ತನ್ನ ಸ್ಥಾನ ಮಾನವನ್ನು ಅಭಾದಿತವಾಗಿ ಕಾಪಾಡಿಕೊಳ್ಳುವ ನೈಪುಣ್ಯತೆಯೂ ವೀರೇಂದ್ರ ಹೆಗ್ಗಡೆಯವರಿಗೆ ಗೊತ್ತು.  ಸ್ನೇಹ – ಪ್ರೀತಿ – ಭಕ್ತಿಯ ಅಪೂರ್ವ ಸಮ್ಮಿಳನದ ಫಲವನ್ನು ಪಡೆದುಕೊಳ್ಳುವ ಕಲೆಗಾರಿಕೆ ಈ ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಿಸಿದೆ.

ಆದರೆ ಇದನ್ನು ವಿರೋಧಿಸುವ ನೈತಿಕತೆ ಮತ್ತು ಪ್ರಾಮಾಣಿಕತೆ ನಮಗೆ ಸಿದ್ಧಿಸಿಲ್ಲವಲ್ಲ! ಇದಲ್ಲವೇ ದುರಂತ.