Daily Archives: October 19, 2013

“ಗಲೀಜು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ಗಿರಿ ರಾಜ್

ಅವಳ ಬೆನ್ನ ಮೇಲಿಂದ ನೀರು ಜಾರಿ, ಕುಂಡೆ ಆವರಿಸಿ, ಇಳಿದಿದ್ದನ್ನು ಕಂಡು, ಕಜ್ಜಿ ಅರ್ಥವಾಗದೇ ನೋಡುತ್ತ ನಿಂತುಬಿಟ್ಟ. ಹಿಂದಿನ ಮಹಡಿಗೆ ಚಪ್ಪರ ಸರಿ ಮಾಡಲು ದೊಡ್ಡ ಯಜಮಾನರು ಹೇಳಿದ್ದಕ್ಕೆ ಕಜ್ಜಿ ಮೇಲೆ ಹತ್ತಿ ಸರಿ ಮಾಡುತ್ತಿದ್ದಾಗ, ಆ ಕಡೆಯಿಂದ ಅವನಿಗಿಂತ ಎರಡು ಮೂರು ವರ್ಷ ಸಣ್ಣವಳಾಗಿದ್ದ ಯಜಮಾನರ ಮಗಳು, ಚಿಕ್ಕವ್ವ, ಹಾಡುವುದು ಕೇಳಿಸಿತು. ಏನು ಮಾಡಬೇಕಾದಾಗಲೂ ಯೋಚಿಸದ ಕಜ್ಜಿ, ಆಗಲೂ ಏನೂ ಯೋಚಿಸದೇ, ಹಾಡಿನ ಜಾಡು ಹಿಡಿದು, ಚಪ್ಪರದಿಂದಿಳಿದು, ಹಿಂಬದಿಯಲ್ಲಿರುವ ಬಚ್ಚಲ ಮನೆಯ ಹೊರ ಗೋಡೆಗೆ ಆತುಕೊಂಡು ಹಾಡು ಕೇಳಲು ಶುರು ಮಾಡಿದ. ಈ ಹಿಂದೆ ಎಷ್ಟೋ ಸಲ ಹಾಗೆ ಹಾಡು ಕೇಳುತ್ತ ಕೆಲಸ ಮರೆತು, ನಿಂತಿದ್ದಾಗ, ದೊಡ್ಡ ಯಜಮಾನರು “ಹಲ್ಕಾ ನಾಯಿಮುಂಡೆ ಮಗನೆ, ಕೆಲಸ ತಪ್ಪಿಸಿ ಇಲ್ಲಿ ನಿಂತ್ಕಂಡಿದಿಯ. . . .” ಅಂತ ಕೂಗಿ ಬಾರಕೋಲಿನಲ್ಲಿ, ಬತ್ತ ಜಪ್ಪೋ ಒನಕೆಯಲ್ಲಿ, ಎತ್ತುಗಳಿಗೆ ಹೊಡೆಯೊ ಚಾಟಿಯಲ್ಲಿ ಹೊಡೆದಿದ್ದಿದೆ. ಕಜ್ಜಿಗೆ ಅದೆಲ್ಲ ಅಭ್ಯಾಸವಾಗಿ ಹೋಗಿತ್ತು. ಅವನಿಗೆ ಇವಳ ಹಾಡಿಗೆ ನಾನು ನಿಲ್ಲುವುದು ಯಾಕೆ, ನಾನು ಮರೆತು ನಿಲ್ಲುವುದ್ಯಾಕೆ, ನನ್ನನ್ನು ಹೊಡೆಯುವುದು ಯಾಕೆ, ಅವರು ಹೇಳುವುದು ನನಗೆ ಅರ್ಥವಾಗದೇ ಇರುವುದು ಯಾಕೆ, ಈ ಕೆಲಸಗಳಿಂದ ಆಗುವ ಲಾಭ ಏನು? ನಷ್ಟ ಏನು ಅನ್ನುವುದು ಅವನಿಗೆ ಯಾವತ್ತೂ ಗೊತ್ತಾಗುತ್ತಿರಲಿಲ್ಲ. ಅವನಿಗೆ ಬುದ್ಧಿ ಬಂದಾಗಿನಿಂದ ಹೀಗೇ ಇದ್ದುದರಿಂದ, ಅವನಿಗೆ ಬುದ್ಧಿಯೇ ಬಂದಿಲ್ಲವೆಂದು ಊರಿನವರೆಲ್ಲ ನಿರ್ಧರಿಸಿದ್ದರು. ಕೆಲವರಂತು “ಒಂದೆಂಟಾಣೆ ಕಮ್ಮಿನೇ ಸೈ” ಅಂತ ಷರಾ ಹೊರಡಿಸಿದ್ದರು. ಹೀಗಿದ್ದ ಕಜ್ಜಿ, ಇವತ್ತೂ ಕೂಡ, ಅದ್ಯಾವುದೋ ಹಾಡಿನ ಮೋಡಿಗೆ ಮೈ ಮರೆತು ಬಚ್ಚಲಿನ ಗೋಡೆಗೆ ಕಿವಿಕೊಟ್ಟು ನಿಂತುಬಿಟ್ಟ. ಆದರೆ ಇವತ್ತು ಅದೇನಾಯಿತೊ ಹಾಡು ಎಲ್ಲಿಂದ ಬರುತ್ತಿದೆ ಅಂತ ನೋಡೇ ಬಿಡೋಣ ಅನ್ನೋ ಮನೆ ಹಾಳು ಬುದ್ಧಿ, ಈ ಬುದ್ಧಿ ಇಲ್ಲದೇ ಇರೋನಿಗೆ ಬಂದು, ಅವನು ಕೆಳಗೆ ಬಿದ್ದಿದ್ದ ಕಲ್ಲಿನ ಮೇಲೆ ಕಾಲಿಟ್ಟು, ತನ್ನ ಎತ್ತರವ ಹಿಗ್ಗಿಸಿ, ಕಿಟಕಿಯಿಂದ ಇಣುಕಿ ನೋಡೇಬಿಟ್ಟ.

ಒಳಗೆ ಹಂಡೆಯಿಂದ ನೀರು ಎತ್ತಿ, ತನ್ನ ಕುಂಡೆ ಮೇಲೆ ಸುರಿದು, ಅದರ ಮೇಲಿದ್ದ ಮಚ್ಚೆಯ ಜಾಗವನ್ನು ತಿಕ್ಕುತ್ತಿದ್ದ ಚಿಕ್ಕವ್ವೋರು, ಕಿಟಕಿಯಿಂದ ಉಲ್ಟಾ ದಿಕ್ಕಿಗೆ ಮುಖ ಮಾಡಿ ಹಾಡುತ್ತಿದ್ದಳು. ಕಜ್ಜಿಗೆ ಕಣ್ಣಿಗೆ ಕಂಡಿದ್ದ ಕಂಡು, ಕಿವಿ ಕಿವುಡಾದಂತಾಯಿತು. ಏನೂ ಕೇಳಿಸುತ್ತಿರಲಿಲ್ಲ. ಚಿಕ್ಕವ್ವೋರ ಮೈ ಮೇಲೆ ಸುರಿದ ಬಿಸಿ ನೀರು, ಅವಳ ಬೆನ್ನ ಸವರಿ, ಕುಂಡೆ ಮೇಲೆ ಜಾರಿ, ಚಪ್ಪರದ ಮೇಲಿಂದ ಕಷ್ಟಪಟ್ಟು ಇವಳ ಬೆತ್ತಲೆ ದೇಹ ನೋಡಲು ಒಳನುಗ್ಗಿದ್ದ ಸೂರ್ಯನ ಕಿರಣಗಳು nude-woman-after-bath-paintingಅವಳ ಮೈ ಮೇಲೆ ಬಿದ್ದು ಅವಳ ಬೆನ್ನು ಹೊಳೆಯುತ್ತಿತ್ತು. ಅರೆಕ್ಷಣ ಏನೂ ಕೇಳದಿದ್ದ ಕಜ್ಜಿಗೆ, ಮೊದಲು ತನ್ನ ಎದೆ ಬಡಿತ ಕೇಳಿತು. ನಿಧಾನವಾಗಿ ಅವಳ ಮೇಲಿಂದ ಕೆಳಗೆ ಬೀಳುತ್ತಿದ್ದ ನೀರಿನ ಸದ್ದು ಕೇಳಲಾರಂಭಿಸಿತು. ಈಗ ಮತ್ತೆ ಅವಳ ಹಾಡು ಕೇಳಿಸಿತು. ಆಗ ದೂರದಿಂದ, “ಪುಕಳಿ ಹೆಟ್ಯಾಕೆ ಹೋಯಿದ್ದಿಯೇನೋ ರಂಡೆಮಗನೆ. . .” ಅಂತ ಯಜಮಾನರು ಕೂಗುವುದು ಕೇಳಿಸಿತು.

ಕಜ್ಜಿ ಯಾರ ಮಗ ಅಂತ ಯಾರಿಗೂ ಗೊತ್ತಿಲ್ಲ. ಪಾರಂ ನೋಡಿಕೊಳ್ಳೊ ಒಡ್ಡನಿಗೆ ಒಂದು ರಾತ್ರಿ ಸಗಣಿ ಪಕ್ಕ ಕಿಟಾರನೆ ಕಿರುಚಿಕೊಳ್ಳುತ್ತಿದ್ದ ಮಗುವೊಂದು ಸಿಕ್ಕಿ, ಅದನ್ನ ಯಜಮಾನರ ಮುಂದೆ ತಂದು ಇಟ್ಟಿದ್ದನು. “ದನದ ಹಾಲು ಕುಡಿಸು” ಅಂತ ಯಜಮಾನರು ದಯೆ ತೋರಿಸಿದರ ಪರಿಣಾಮ ಕೂಸು ಬದುಕಿತು. ಮೊದ ಮೊದಲು ಅಳುವುದನ್ನೇ ನಿಲ್ಲಿಸಿದ್ದ ಮಗು, ಕ್ರಮೇಣ ಮಾತು ನಿಲ್ಲಿಸಿತು. ಕೆಲವರು ಮೂಗ ಅಂದ್ಕೊಂಡರು. ಆದರೆ ಆಗಾಗ ಪ್ರತಿಕ್ರಿಯೆ ರೂಪದಲ್ಲಿ ಕನಸಲ್ಲಿ ಬಡ ಬಡಿಸವುದನ್ನು, ಇನ್ನೂ ಹೆಚ್ಚಿನ ಆಳುಮಕ್ಕಳು, ಉಳಿದ ಒಕ್ಕಲು ಗಮನಿಸಿದ್ದರಿಂದ ಆ ಅನುಮಾನ ದೂರವಾಗಿತ್ತು. ಸಣ್ಕಿದ್ದಾಗಿಂದ ಮಿಣ್ಣಿ ಪಕ್ಕ ಕೆರ್‍ಕೋತಾನೆ ಇರ್‍ತಿದ್ದರಿಂದ, ’ಇವನೊಬ್ಬ ಕಜ್ಜಿ ಸುಬ್ಬ’ ಅಂತ ಯಜಮಾನರು ಗದರುತ್ತಿದ್ದರು. ಸುಬ್ಬ ಅನ್ನುವುದ ಹೇಳಲು ಅಷ್ಟು ಚೆನ್ನಾಗಿರದೇ ಇದ್ದುದರಿಂದ, ಊರಿನವರೆಲ್ಲ ಅವನನ್ನು ಕಜ್ಜಿ ಅಂತಲೇ ಕರೆಯುತ್ತಿದ್ದರು.

’ಇದನ್ನ ಎತ್ಕೊಂಡು ಗನಾ ನೋಡ್ಕ’ ಅಂತ ಯಜಮಾನ್ರು ತಂದಿದ್ದ ಪೊಗದಸ್ತು ಕುರಿಯನ್ನು ಕಜ್ಜಿಗೆ ಒಪ್ಪಿಸಿದರು. ’ಎರೆಡು ತಿಂಗಳು, ನಿನ್ನ ಹೆಂಡತಿ ನೋಡ್ಕಳಂಗೆ ನೋಡೂಕು. ಅಕ್ಕ?’ ಅಂತ ಆದೇಶ ರೂಪದ ಪ್ರಶ್ನೆಯನ್ನು ಮುಂದಿಟ್ಟ. ಕಜ್ಜಿಗೆ ಪುಣ್ಯ ಯಜಮಾನರಿಗೆ ಅವರ ಮಗಳನ್ನ ಕದ್ದು ನೋಡಿದ್ದು ಗೊತ್ತಾಗಲಿಲ್ಲಿ ಅಂತ ಗೊತ್ತಾದ ಖುಷಿಯಲ್ಲಿ ಹೂ ಅನ್ನುವುದನ್ನು ಜೋರಾಗಿ ತಲೆ ಆಡಿಸಿ ಉತ್ತರಿಸಿದ. ’ಅಲ್ಕಾಣು ಹೇಂಡ್ತಿ ಅನ್ನೂಕು, ಎಂಥ ನಾಚ್ಕೆ ಆತ್? ಹೋಗು’ ಅಂತ ಕಳುಹಿಸಿದ. ಮುಂದಿನ ತಿಂಗಳು, ವರ್‍ನಳ್ಳಿ ಆಟ್ಮಾರಮ್ಮನ ಉತ್ಸವಕ್ಕೆ ಬಲಿ ಕೊಡಕ್ಕೆ ಅಂತ, ದೊಡ್ಡ ಯಜಮಾನರು ಪೂಜಾರರ ಸಮೇತ ದೂರದ ಸಿಟಿಗೆ ಹೋಗಿ ಅ ಕುರಿಯನ್ನ ತಕ್ಕಂಡು ಬಂದಿದ್ದರು. ದೊಡ್ಡ ಯಜಮಾನರು ಇತ್ತೀಜಿಗೆ ಸಮಾಜ ಸರ್ವೀಸ್ ಕಾರ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಶೆಟ್ಟರು ಮಂಡಲ್ ಪಂಚಾಯತಿ ಎಲೆಕ್ಷನ್ ಗೆದ್ದಾಗಿನಿಂದ, ತಾನೂ ಒಂದಷ್ಟು ಸರ್ವೀಸ್ ಮಾಡಬೇಕು ಅನ್ನುವುದು ದೊಡ್ಡ ಯಜಮಾನರ ಖಯಾಲಿಗೆ ಇತ್ತೀಚಿಗೆ ಬಂದಿತ್ತು. ಆಟ್ಮಾರಮ್ಮನ ಗುಡಿ ತಳಗೆರೆ ಪ್ರಾಂತ್ಯದ ಪ್ರಮುಖ ಉಪಜಾತಿಯ ಮನೆ ದೇವರು. ಅಲ್ಲಿ ಗೌಡರಿಗೆ ಒಂದು ನೂರು ಕುರಿ ಕಡಿಸಿ ತಾನು ಆ ಜಾತಿಯವನಲ್ಲದಿದ್ದರೂ, ಅವರ ದೇವರ ಮೇಲೆ ಇಷ್ಟೋಂದು ಭಕ್ತಿ ಇಟ್ಟಿರುವುದು ಆ ಉಪಜಾತಿಯವರಿಗೆ ಮನಗಾಣಿಸುವುದು ಬೇಕಿತ್ತು. ಕಡಿಯುವುದು ನೂರು ಕುರಿ ಆದರೂ, ನೂರೂ ಕುರಿಯನ್ನು ಗೌಡರೇ ಕಡಿಯಲು ಸಾಧ್ಯವಿಲ್ಲವಲ್ಲ. ಅದಕ್ಕೆ ಸಾಂಕೇತಿಕವಾಗಿ ಎಲ್ಲರೆದುರು ಫೋಟೋಗಾಗಿ ಒಂದು ಕುರಿ ಬ್ಯಾ ಅನ್ನಿಸಿದ್ರಾತಪ್ಪ ಅಂತ ಪೂಜಾರಪ್ಪನ ಸಂದಿಗ್ದತೆಯ ನಿವಾರಣೆಗೆ ಋಣಿಯಾಗಿ, ತುಂಬ ಫೋಟೋಜೆನಿಕ್ ಆಗಿರುವ ಒಂದು ಕುರಿಯನ್ನು ತಿಂಗಳಿಂದ ಹುಡುಕಿ, ಈಗ ತಕ್ಕಂಡು ಬಂದಿದ್ದರು. ಕುರಿ ಕಡಿಯುವುದು ಈಗ ಅವರ ’ಪ್ರಸತೀಜ್ ಇಸೂ’ ಆಗಿತ್ತು.

ಕಳೆದೊಂದೆರೆಡು ವರ್ಷದಿಂದ ಕಜ್ಜಿ ಬದಲಾಗ್ತಾ ಇರೋದು ಯಜಮಾನರ ಮತ್ತು ಉಳಿದವರ ಗಮನಕ್ಕೆ ಬಂದಿತ್ತು. ಒಂದು ಕಡೆ ನಿಂತಲ್ಲೇ ಕಲ್ಲಾಗಿ ಬಿಡುವ ಕಾಯಿಲೆ, ಎಂಟಾಣೆ ಕಮ್ಮಿ ಅಗಿದೆ ಅನ್ನುವ ಹಾಗೆ ಅನುಮಾನ ಬರಲು ಶುರುವಾದದ್ದು, ಮಾಡುವ ಕೆಲಸ ಬಿಟ್ಟು ಬೇರೆ ಏನೋ ಯೋಚಿಸುತ್ತ ಕುಳಿತುಕೊಳ್ಳುವುದು ಮೊದಲೆಲ್ಲ ಆಗುತ್ತಿರಲಿಲ್ಲ. ಇದೇ ಒಂದೆರೆಡು ವರ್ಷದಿಂದ ಶುರುವಾದದ್ದು. ಮೊದಲೆಲ್ಲ, ಮೈ ಮೇಲೆ ಕೂದಲು ಬೆಳೆಯೋ ಮೊದಲೇ, ಒಬ್ಬನೇ ನೂರು ನೂರು ಚೀಲ ಹೊರುತ್ತ ಇದ್ದ. ಬೆಟ್ಟ ಒಡಿ ಅಂದರೆ, ಘಂಟೆಯೊಳಗೆ ಒಡೆದು ಬಿಡುವ ಏಕಾಗ್ರತೆ ಇತ್ತು. ಮೊದಲೆಲ್ಲ ಗಂಜಲ ಕುಡೀತಿದ್ದವನು, ನಿಧಾನವಾಗಿ ಯಜಮಾನರ ಮನೆ ಗಂಜಿ ಕುಡಿಯುವಷ್ಟು ಭಡ್ತಿ ಪಡೆದಿದ್ದ. ಆದರೆ ಈಗೆಲ್ಲ ಕಳ್ಕೊಂಡಿದ್ದ. ಹಾಗೆ ನೋಡಿದರೆ, ಅವನಿಗೆ ಅವನ ವಲ್ಮೀಕದಿಂದ ಮೊದಲು ಮುಕ್ತಗೊಳಿಸಿದವರು ದೊಡ್ಡ ಯಜಮಾನರೆ!

ಅಲ್ಲಿ ಅಡಿಕೆ ತೋಟದಲ್ಲಿ ಪಂಪಸೆಟ್ ನೀರು ಹರಿಯಲು ಬಿಟ್ಟು ಆಳುಗಳೆಲ್ಲ, ಯಜಮಾನರ ಆಜ್ಞೆಯ ಮೇರೆಗೆ, ಸಂಜೆ ಹೊತ್ತು ಆಯೋಜಿಸಿದ್ದ ಸ್ವಚ್ಛತಾ ಕಾರ್ಯಗಾರವನ್ನು ನಡೆಸುತ್ತಿದ್ದ ಸಿಟಿ ಹುಡುಗರ ಶಿಬಿರಕ್ಕೆ ಹೋಗಿದ್ದರು. ಕಜ್ಜಿ, ದೊಡ್ಡಮ್ಮನವರು ಹೇಳಿದ್ದ ಸಾಮಾನು ತರಲು ಎಂಕಣ್ ಶಾಸ್ತ್ರಿಗಳ ಮನೆಗೆ ಹೋಗಿ ದೊಡ್ಡ ಚೀಲ ಹೊತ್ತು ಬಂದಿದ್ದ. ಅವನಿಗೆ ಯಜಮಾನರ ಆಜ್ಞೆಯ ಬಗ್ಗೆ ಏನೇನು ಗೊತ್ತಿರಲಿಲ್ಲ. ಬಂದವನೇ, ಪಂಪಸೆಟ್ ನೀರು ಹಾಗೇ ಬಿಟ್ಟು ಹೋಯಿದ್ರಲ್ಲ ಅಂತ ಪರಿತಪಿಸುತ್ತ, ಪಂಪ್ ಸೆಟ್ ರೂಂ ಹತ್ತಿರ ಹೋದಾಗ, ಅಲ್ಲಿ ದೊಡ್ಡ ಯಜಮಾನರು, ನಿಂಗನ್ನ ಹೆಂಡತಿ ಸಾವಿತ್ರನ್ನ, ಅಂಬೆಗಾಲು ಮಾಡಿಸಿ, ತಾವೂ ಮೊಣಕಾಲೂರಿ ನಿಂತು ಹಿಂದಿನಿಂದ ಆಕೆಯನ್ನು ಜಡಿಯುತ್ತಿರುವುದು ಕಾಣಿಸಿತು. ಮೊದಲು ನೋಡಿದಾಗ, ಕಜ್ಜಿಗೆ ತನಗೆ ಬೆತ್ತಲಾಗಿಸಿ ಹೊಡೆದಂಗೆ ಸಾವಿತ್ರನ್ನೂ ಹೊಡಿತಾಯಿದ್ರ ಅನ್ನುವ ಯೋಚನೆ ಬಂತಾದರೂ, ಇದು ಯಾಕೊ ವಿಚಿತ್ರವಾಗಿದೆ ಅಂತೆನಿಸಿತು. ಯಜಮಾನರ ಮೈ ಮೇಲೂ ಬಟ್ಟೆ ಇಲ್ಲ. ಅವಳ ಸೀರೆ ಕೆಳಗೆ ಮರಳು ಚುಚ್ಚದೇ ಇರಲಿ ಅನ್ನೋ ರೀತಿ ಹಾಸಲಾಗಿದೆ, ಇಬ್ಬರೂ ವಿಚಿತ್ರವಾಗಿ ಆಡುತ್ತಿದ್ದಾರೆ. ಮೇಲಾಗಿ ಯಜಮಾನರ ಬಾಯಿಂದ ಯಾವ ಪರಿಚಿತ ಬಯ್ಗಳೂ ಕೇಳಿಸುತ್ತಿಲ್ಲ. ಹುಟ್ಟಿದಾಗಿಂದ ತಿನ್ನುವುದೂ, ಹೇಲುವುದು, ದುಡಿಯುವುದು ಮಾತ್ರ ಗೊತ್ತಿದ್ದ ಕಜ್ಜಿಗೆ ಇದು ಹೊಸತಾಗಿತ್ತು. ಅಲ್ಲಿ ತನಕ ಹೆಂಗಸರನ್ನೆಲ್ಲ ರವಿಕೆ, ಸೀರೆ, ಉಳಿದ ಸ್ತ್ರೀ ಸೂಚಕ ವಸ್ತ್ರಗಳಲ್ಲಿ ನೋಡಿ ಇದು ಹೆಣ್ಣು ಎಂದಷ್ಟೇ ಅರ್ಥ ಮಾಡಿಕೊಂಡಿದ್ದ ಕಜ್ಜಿಗೆ, erotic-sculptureಈಗ ನೆಲಕ್ಕೆ ಮುಖ ಮಾಡಿ, ಪ್ರತಿ ಹೊಡೆತಕ್ಕೂ ಜೋರಾಗಿ ಕಂಪಿಸುತ್ತಿದ್ದ ಮೊಲೆಗಳನ್ನು ನೋಡಿ ಬೆರಗಾಗಿದ್ದ. ಆದರೆ ಆಗ, ಸಾವಿತ್ರ ಇವನನ್ನು ನೋಡಿ ಕೆಳಗೆ ಇದ್ದ ಸೀರೆಯನ್ನು ಗಬಕ್ಕನೆ ಕಸಿದು ಮೈಮೇಲೆ ಎಳೆದು ಯಜಮಾನರಿಂದ ದೂರವಾದಳು. ಬೆಚ್ಚಿದ ಯಜಮಾನರು, ಬಾಗಿಲ ಹತ್ತಿರ ಇಣುಕುತ್ತಿದ್ದ ಕಜ್ಜಿಯನ್ನು ಕಂಡು ಗಾಳಿ ತಾಕಿದ ಕೆಂಡವಾದರು.

ಅವತ್ತಿನಿಂದ ದೊಡ್ಡ ಯಜಮಾನರು, ಕಜ್ಜಿಗೆ ಸಿಕ್ಕಸಿಕ್ಕಲ್ಲೆಲ್ಲ ಥಳಿಸುವುದು, ಹಿಯಾಳಿಸುವುದು, ಅವನ ಬದುಕೇ ಈ ಭೂಮಿ ಮೇಲಿನ ಘೋರ ಅಪರಾಧ ಅಂತ ಎಲ್ಲರಿಗೂ ಮನದಟ್ಟಾಗುವ ಹಾಗೆ ಮಾಡಲು ಶತ ಪ್ರಯತ್ನ ಪಟ್ಟರು. ತಾನು ಸ್ಚಚ್ಛತಾ ಅಭಿಯಾನ ನಡೆಸಲು ಸಿಟಿಯಿಂದ ಹುಡುಗರ ಕರ್‍ಕೊಂಡು ಬಂದರೆ, ಇವನು ಕಾಡಲ್ಲಿ ಹೊಕ್ಕಳ ಕೆಳಗೆ ಕೆರ್‍ಕೊಂಡು ಕೂತಿದ್ದ ಅಂತ ಬಯ್ಯುತ್ತಿದ್ದರು. ಅವನ ಸಹ ವಯ್ಯಸ್ಸಿನವರು ಅವನಿಗೆ ’ನಿನ್ನಿಂದ ಶಾಲಿಯಲಿ ನಮಗೆಲ್ಲ, ’ಏನ್ ರಿಸರ್ವೇಷನ್ ಕೊಟ್ಟರೂ ಇವರು ಉದ್ಧಾರ ಆಗಲ್ಲ ಅಂತ ಬಯ್ತಿದ್ರ’ ಅಂತ ಬಯ್ಯುತ್ತಿದ್ದರು. ಒಟ್ಟಾರೆ ಕಜ್ಜಿ ಯಾವ ಜಾತಿಯಲ್ಲಿ ಹುಟ್ಟಿದವನೆಂದು ಯಾರಿಗೂ ಗೊತ್ತಿಲ್ಲದಿದ್ದರೂ, ಇಷ್ಟು ಗಲೀಜು ಇನ್ನಾರಿರಲು ಸಾಧ್ಯ ಎಂದು ಎಲ್ಲರು ಒಮ್ಮತದಿಂದ ಅವನನ್ನು ಎಸ್.ಸಿ. ಅಂತ ಗುರುತಿಸಿದರು. ಎಸ್.ಸಿ.ಯಲ್ಲಿ ಯಾವ ಪಂಗಡ ಅನ್ನುವುದರ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳಲಿಲ್ಲ. ಆದರೆ, ಕಜ್ಜಿ ಮಾತ್ರ ಈ ಘಟನೆಯಿಂದ ತುಂಬ ಬದಲಾದ. ಮೊದಲು ಮೌನಿ ಆಗಿದ್ದವನು. ಈಗ ಅಂತರ್ಮುಖಿಯಾದ. ತನ್ನೊಂದಿಗೇ ಮಾತನಾಡಲು ಶುರು ಮಾಡಿದ.

ಬೆಳಗ್ಗೆ ದೊಡ್ಡ ಯಜಮಾನರು ಕೊಟ್ಟ ಕುರಿಯ ಮೈ ಸವರುತ್ತ, ಅವನಿಗೆ ’ಮೃದು ಸ್ಪರ್ಶ’ದ ಅನುಭವವಾಗಲು ಶುರುವಾಯಿತು. ಅಲ್ಲಿಯವರೆಗೆ ಎಮ್ಮೆ ಮೈ ತಿಕ್ಕಿ, ಪಾತ್ರೆ ಮುಸುರೆ ತಿಕ್ಕಿ, ಕಟ್ಟಿಗೆ ಒಡೆದು, ಬಂಡೆ ಒಡೆದು, ಕೃಷಿ ಬೇಲಿ ಹಾಕಿದ ಕೈಗೆ ಯಾವತ್ತೂ, ಇಷ್ಟು ಸಪಾಟಾದ ಏನನ್ನು ಮುಟ್ಟಿರಲಿಲ್ಲ. ಅದು ಅವನ ಕಣ್ಣಿಗಾದ ಅನುಭವಗಳಿಂದ ದೊರೆತ ಹೊಸ ಅನುಭೂತಿಯ ಪರಿಣಾಮವೋ ಏನೋ. ಕುರಿಯ ಮೈ ಸವರುತ್ತ, ಇಷ್ಟು ಮೃಧುವಾಗಿರುವುದನ್ನು ತಾನು ಜೋರಾಗಿ ಉಜ್ಜಿ ಅದಕ್ಕೆ ಗಾಯವಾಗಿ ಬಿಟ್ಟರೆ? ಅನ್ನುವ ಹೆಣಿಕೆ ಮಂಡೆಗೆ ಹೊಕ್ಕಿ ತಬ್ಬಿಬ್ಬಾದ. ಆಗಲೆ ತಾನು ಇದನ್ನು ತುಂಬ ಜೊಪಾನವಾಗಿ ನೋಡ್ಕೋಬೇಕು ಅಂತ ನಿರ್ಧರಿಸಿ, ಅದಕ್ಕಾಗಿ ಬೇರೆಯದೇ ಆದ ಹುಲ್ಲನ್ನು ಎತ್ತು ತಂದ. ಎಮ್ಮಗೆ ಹಾಕಿದ ನೀರನ್ನು ದೂರ ಇಟ್ಟು, ಕುರಿಗಾಗಿ ವಿಶೇಷವಾದ ಬಟ್ಟಲನ್ನು ಅದೆಲ್ಲಿಂದಲೂ ಎತ್ತಿ ತಂದು, ಅದರಲ್ಲಿ ಸೇದಿದ ಬಾವಿ ನೀರನ್ನು ಹಾಕಿ ಕುಡಿಯಲು ಕೊಡುತ್ತಿದ್ದ. ದಿನಾ ಸ್ನಾನ ಮಾಡಿಸುತ್ತಿದ್ದ. ಮೊದಲ ಬಾರಿಗೆ ಅವನ ಮನಸ್ಸೊಳಗೆ ಅನುಕಂಪ, ಪ್ರೀತಿ ಅಂತ ಭಾವನೆಗಳು ಹುಟ್ಟಿಕೊಂಡವು. ಅವುಗಳು ಏನು ಅನ್ನುವುದರ ಅರಿವು ಕಜ್ಜಿಗೆ ಇಲ್ಲದೇ ಇದ್ದರೂ!

ಹೀಗಿರ ಬೇಕಾದರೆ, ಕುರಿಯು ಕಜ್ಜಿ ಕದ್ದು ಮುಚ್ಚಿಟ್ಟಿದ್ದ ಪುಸ್ತಕಗಳ ರಾಶಿಯನ್ನು ಒಂದು ಮಧ್ಯಾಹ್ನ, ಕಜ್ಜಿ ಹೊರಗೆ ಹೋಗಿದ್ದಾಗ, ಜಗಿದು ಜಗಿದು ತಿಂದು ಮುಗಿಸಿತು. ವ್ಯಘ್ರನಾದ ಕಜ್ಜಿಗೆ ಏನು ಮಾಡವುದು ಎಂದು ತಿಳಿಯಲಿಲ್ಲ. ಕೋಲು ಎತ್ತಿ ಹೊಡೆಯಲು ಅಣಿಯಾದ ಕಜ್ಜಿಯ ಕೈಗಳು, ಇದ್ದಕ್ಕಿದ್ದ ಹಾಗೆ ಗಾಳಿಯಲ್ಲೇ ಸ್ಥಬ್ಧವಾಗಿ ಬಿಟ್ಟಿತ್ತು. ಕುರಿಯ ಮೈ ಮೇಲೆ ಬಿದ್ದಿದ್ದ ನೀರು, ಅದರ ಮೇಲೆ ಬಿದ್ದಿದ್ದ ಸೂರ್ಯನ ರಶ್ಮಿ, ಅದನ್ನು ಹೊಳೆಯುವ ಹಾಗೆ ಮಾಡಿ, ಬಚ್ಚಲು ಮನೆಯಲ್ಲಿನ ಚಿಕ್ಕವ್ವೋರ ನೆನಪು ತರಿಸಿ ಅವನನ್ನು ಶಾಂತವಾಗುವ ಹಾಗೆ ಮಾಡಿತು. ಮೇಲೆದ್ದಿದ್ದ ಕೈಯ ಹಾಗೆ ಇಟ್ಟು ಕೊಂಡಿದ್ದ ಕಜ್ಜಿಯ ನೋಡಿ, ಕುರಿ ಯಾವುದೇ ತರಹದ ಪ್ರತಿಕ್ರಿಯೆ ತೋರದೆ ತನ್ನ ಎಂದಿನ ಭೋಳೆ ಮುಖ ಮಾಡಿ ಅವನನ್ನು ನೋಡುತ್ತಿತ್ತು. ಕಜ್ಜಿಗೆ, ಕುರಿ ತನ್ನ ಇನ್ನೊಂದು ರೂಪದ ತರಹ ಕಂಡಿತು. ಕೈ ಕೆಳಗಿಳಿಯಿತು. ಆದರೆ ಒಳಗಿನ ಕ್ರೋಧ ಕಡಿಮೆ ಆಗುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಅದಕ್ಕೆ ಕಾರಣವೂ ಇತ್ತು.

ಶಣಿಯಾರ, ಊರಿನ ಅತೀ ಪುಂಡರಲ್ಲಿ, ಮಹಾ ಮಿಂಡರಲ್ಲಿ ಒಬ್ಬ. ಅವನ ಅಪ್ಪ ಅವ್ವ ಅಲಮಾರಿ ಒಕ್ಕಲಿನವರಾಗಿ ಈ ಊರಿಗೆ ಬಂದವರು. ಕಡು ಬೇಸಿಗೆಯ, ಕಡು ಬಡತನದ ಮೂಲದಿಂದ ಬಂದವರಿಗೆ, ಈ ಊರಿನ ಅಂದ ಚೆಂದ ಬೆರಗಾಗಿಸಿತು. ಇನ್ನು ಅಲೆಯುವುದು ಬೇಡ ಅಂತ ನಿಶ್ಚಯಿಸಿ, ಮೊದಲು ಸಣ್ಣದಾಗಿ ಢೇರೆ ಹೂಡಿ, ನಿಧಾನವಾಗಿ ಅಂಗಡಿ ತೆರೆದು, ಈಗ ಊರಾಚೆ ಬಸ್ ಸ್ಟಾಂಡಿನಲ್ಲಿ ಒಂದು ಶಾಪ್ ತೆರೆದಿದ್ದಾರೆ. ಎಲ್ಲರಿಗು ಇವರ ಬೆಳವಣಿಗೆಯ ಬಗ್ಗೆ ಅಸಹ್ಯ, ಅಸೂಯೆ ಎರೆಡೂ ಇದೆ. ಮುಖ್ಯವಾಗಿ, ಹೆಚ್ಚಿನ ಅಲೆಮಾರಿ ಜನರ ತರಹ, ಶಣಿಯಾರನ ಅಪ್ಪ ಅವ್ವ ಲೈಂಗಿಕ ರೋಗ, ನಿಶ್ಯಕ್ತಿ, ಹೀಗೆ ಊರ ಸುತ್ತಮುತ್ತ ಯಾವ ಡಾಕ್ಟ್ರಿಗೂ ಹೇಳಿಕೊಳ್ಳಲಾಗದ ಸಮಸ್ಯಗಳಿಗೆ ಔಷಧಿ ಇದೆ ಎಂದುಕೊಂಡೇ, ಅವರ ವ್ಯಾಪಾರ ಶುರು ಮಾಡಿದರು. ಬೆಳಗಾ ಮುಂಚೆ ಹೋದರೆ, ತಮ್ಮ ಸೊಂಟದ ಕೆಳಗಿನ ವಿಷಯ ಊರಿನವರಿಗೆಲ್ಲ ಗೊತ್ತಾಗಿ ಬಿಡುತ್ತದೆ, ಅಂತ ಬೆದರಿ ಎಲ್ಲರೂ ಕತ್ತಲಾದ ಮೇಲೆ ಇವರ ಢೇರೆಗೆ ಬರಲು ಶುರು ಮಾಡಿದರು. ಅದ್ಯಾರ ಮನೆ ತೊಟ್ಟಿಲು ತೂಗಿತೋ, ಅದ್ಯಾರ ಹೆಂಗಸರು ಸುಸ್ತಾಗಿ, ’ಇಷ್ಟು ಸಂತೋಷ ಕರುಣಿಸಿದಕ್ಕೆ ಧನ್ಯ ಪ್ರಭು’ ಅಂತ ಘೀಳಿಟ್ಟರೋ ಗೊತ್ತಿಲ್ಲ. ಅದರೆ ಶಣಿಯಾರನ ಅಪ್ಪ ಅಮ್ಮ ಮಾತ್ರ ತೊಟ್ಟಿಲು ತೂಗಿದರು, ವ್ಯಾಪಾರ ಶುರು ಮಾಡಿ, ಮನೆ ದೇವರಿಗೆ ಧನ್ಯವಾದೆವು ಎಂದು ಖುಷಿ ಪಟ್ಟರು.

ಇಂತವರ ಮಗನಾದ ಶಣಿಯಾರ, ಸಣ್ಣ ವಯ್ಯಸ್ಸಿನಿಂದಲೇ ಲೌಕಿಕ ಜ್ಞಾನದಲ್ಲಿ ಮಹಾ ವಿಧ್ವಾನ ಅನ್ನುವುದು ಎಲ್ಲರಿಗೂ ಗೊತ್ತಾಗುತ್ತ ಹೋಯಿತು. ಶಾಲೆಯ ಮಾಸ್ತರರು ಮತ್ತು ಅಕ್ಕೋರು ಪಾಟ ಮಾಡಲು ಹೆದರುತ್ತಿದ್ದ ಜೀವ ವಿಕಾಸದ ಮುಖ್ಯ ಭಾಗವನ್ನು ಶಣಿಯಾರನೇ ಎಷ್ಟೋ ಮಕ್ಕಳಿಗೆ ಹೇಳಿ ಕೊಡುತ್ತಿದ್ದ. ಹನ್ನೆರಡನೇ ವಯ್ಯಸ್ಸಿನಲ್ಲೇ ತನ್ನ ಬ್ರಹ್ಮಚರ್ಯಕ್ಕೆ ತಿಲಾಂಜಲಿ ಬಿಟ್ಟಿರುವುದನ್ನು ಹೆಮ್ಮೆಯಿಂದ ಎಲ್ಲರಲ್ಲೂ ಹೇಳುತ್ತಿದ್ದ. ಒಬ್ಬನೆ ಮಗನೂ, ಜೊತೆಗೆ ತುಂಬ ವರ್ಷಗಳ ನಂತರ ಹುಟ್ಟಿದವನೆಂದು ಅವನ ಅಪ್ಪ ಅಮ್ಮ, ಕೇಳಿದಾಗೆಲ್ಲ ಏನಕ್ಕೆ ಎಂದು ಕೇಳದೆ, ಹಣ ಕೊಡುತ್ತಿದ್ದರು. ಇಲ್ಲದಿದ್ದರೂ ಕಾಸು ಸಂಪಾದಿಸೊ ಕಳ್ಳತನದ ವಿದ್ಯೆ ಅವನಿಗೆ ಚೆನ್ನಾಗಿ ಕರಗತವಾಗಿತ್ತು. ಜೊತೆಗೆ ಮೀಸೆ ಬೇಗ ಬರಲು, ಶಾಟ ಸೊಂಪಾಗಿ ಬೆಳೆಯಲು, ಬೇಗ ಗಂಡಸರಾಗಲು, ಮೊಡವೆ ಮಾಯ ಆಗಲು ಏನೇನಕ್ಕೋ ಹುಡುಗರಿಗೆ ಔಷಧಿ ಕೊಡುತ್ತಿದ್ದ. ಆ ಔಷಧಿ ಪಡೆಯಲು ಹಣವನ್ನು ಅಪ್ಪನ ಜೇಬಿಂದ ಹೇಗೆ ಕದಿಯ ಬೇಕೆಂಬುದನ್ನೂ ಇವನೇ ಹೇಳಿ ಕೊಡುತ್ತಿದ್ದ. ಇಂತಹ ಅತೀ ಪುಂಡ, ಮಹಾ ಮಿಂಡನಿಗೆ ಒಂದು ಖಯಾಲಿ ಇತ್ತು.

ಶಾಲೆಗೆ ಸೇರಿಸಿದ್ದರಿಂದ ಓದು ಬರಹ ಗೊತ್ತಿದ್ದ ಶಣಿಯಾರ ತನ್ನ ಸುತ್ತಲು ಹುಡುಗರನ್ನು ಕಟ್ಟಿಕೊಂಡು, ಅವರಿಗೆ ಪೋಲಿ ಪುಸ್ತಕಗಳನ್ನು ಓದಿ ಹೇಳುತ್ತಿದ್ದ. ಅದರಲ್ಲಿ ಬರುವ ರಸ ಕ್ಷಣಗಳನ್ನೆಲ್ಲ ತಾನೆ ಅನುಭವಿಸುತ್ತಿರುವ ಹಾಗೆ ವರ್ಣ ರಂಜಿತವಾಗಿ ವಿವರವಾಗಿ ಹೇಳುತ್ತಿದ್ದ. ಹುಡುಗರು ಮೈ ಸೋತು ಕೇಳುತ್ತಿದ್ದರು. ಕೆಲವರು ಸ್ಖಲನವಾಗಿ ಮುಜುಗರ ಪಡುತ್ತಿದ್ದರು. ಒಮ್ಮೆ ಕಟ್ಟಿಗೆ ತರಲು ಹೋಗಿದ್ದ ಕಜ್ಜಿ, ಶಣಿಯಾರ ನಡೆಸುತ್ತಿದ್ದ ಮುಷಾಯರಾಗೆ ಹೋಗಿ ಕೂತುಬಿಟ್ಟ. ಇವನು ಪಕ್ಕ ಬಂದು ಕೂತಿದ್ದೆ, ಉಳಿದ ಹುಡುಗರು ಮಾರು ದೂರ ಸರಿದರು. ಶಣಿಯಾರ ಕಜ್ಜಿಗೆ ಸುಮ್ಮನೆ ಕೂರಂಗಿಲ್ಲ ಏನಾದರು ಕೊಡಬೇಕು ಅಂದಾಗ, ಕೈಯಲ್ಲಿದ್ದ ಕೊಡಲಿಯನ್ನು ಮುಂದಿಟ್ಟ. ಅದು ಕಜ್ಜಿಯ ಅರ್ಪಣೆಯೊ ಅಪ್ಪಣೆಯೋ ಶಣಿಯಾರನಿಗೆ ಗೊತ್ತಾಗಲಿಲ್ಲ. ಇವನ ಸಹವಾಸ ಬೇಡ ಅಂದ್ಕೊಂಡು ಕಥೆ ಹೇಳಲು ಶುರು ಮಾಡಿದ. ವಿವರಣೆ ವಿವರವಾಗುತ್ತಿದ್ದ ಹಾಗೆ ಕಜ್ಜಿಗೆ ವಿಚಿತ್ರವಾದ ಸಂಕಟ ಶುರುವಾಯಿತು. ಎದೆ ಬಡಿತ ಹೆಚ್ಚಾಯಿತು. ಅವನ ಶಿಶ್ನ ಎದ್ದು ನಿಂತು ಅದರ ಸುತ್ತಲಿನ ಕೂದಲನ್ನು ಎಳೆಯಲು ಶುರು ಮಾಡಿತು. ಹಿಂದೆಂದೂ ಹೀಗಾಗಿರಲಿಲ್ಲ. ಕ್ರಮೇಣ ಇಂತಹ ಸತ್ಸಂಗಗಳಲ್ಲಿ ಅವನ ಭಾಗವಹಿಸುವಿಕೆ ಹೆಚ್ಚಾಯಿತು.

ಒಂದು ದಿನ, ಕಜ್ಜಿ ಶಣಿಯಾರ ಒಬ್ಬನೇ ಸಿಕ್ಕಿದಾಗ, ದೊಡ್ಡ ಯಜಮಾನರ ಹೆಸರು ಹೇಳದೆ, ಈ ರೀತಿ ಮೊಣಕಾಲೂರಿ ಹೆಣ್ಣು ಅಂಬೆಗಾಲಲ್ಲಿದ್ದು, ಅವಳ ಹಿಂದೆ ಗಂಡು ಮೊಣಕಾಲ ಮೇಲೆ ನಿಂತು ಮಾಡುವುದಕ್ಕೆ ಏನಂತಾರೆ? ಅಂತ ಕೇಳಿದ. ಬರೀ ಪುಸ್ತಕದ ಬದನೆ ಕಾಯಿ ಆಗಿದ್ದ ಶಣಿಯಾರನಿಗೆ, abstract-painting-sexಇದು ಯಾವ ಪುಸ್ತಕದಲ್ಲೂ ಕಂಡಿಲ್ಲದಿದ್ದರಿಂದ, ’ನಾಯಿ ಮಗನೆ, ಆ ರೀತಿ ಬರೀ ಪ್ರಾಣಿಗಳು ಮಾಡುವುದು. ಯಾವುದೊ ಬೊಗ್ಗಿನೋ ಕುರಿನೋ ಮಾಡ್ತಿರೋದನ್ನ ನೋಡಿರ್‍ತೀಯ’ ಅಂತ ಹೇಳಿ ಹೋದ. ಆದರೆ ಕಜ್ಜಿಗೆ ತಾನು ನೋಡಿದ್ದು ಏನು ಅನ್ನುವುದು ಗೊತ್ತಿತ್ತು. ಒಮ್ಮೆ ಶಣಿಯಾರ ತನ್ನ ಪ್ರತಾಪ ತೋರಿಸಲು, ಒಬ್ಬ ವೇಶ್ಯೆಯನ್ನು ಕರ್‍ಕೊಂಡು ಬಂದ. ಢೇರೆ ಹಾಕುವ ಕುಲದಿಂದಲೇ ಬಂದವನಾಗಿದ್ದ ಶಣಿಯಾರ ಕ್ಷಣ ಮಾತ್ರದಲ್ಲಿ, ಒಂದು ಬಂಡೆ ಪಕ್ಕ ಬಟ್ಟೆ ಹಾಸಿ, ಟೆಂಟು ಮಾಡಿಬಿಟ್ಟ. ಅದರೊಳಗೆ ಒಬ್ಬೊಬ್ಬರನ್ನು ಕಳಿಸಿ, ಕಾಸು ಸಂಪಾದಿಸುವ ಹುನ್ನಾರ ಅವನದಾಗಿತ್ತು. ಆದರೆ ಆ ಹದಿಮೂರು, ಹದಿನಾಲ್ಕು ವಯಸ್ಸಿನವರಿಗೆ ಎದುರಿದ್ದ 30 ರ ಆಸುಪಾಸಿನ ಹೆಂಗಸು, ಅವರ ತಾಯಿಯೊ ಚಿಕ್ಕಮ್ಮನ ಹಾಗೋ ಕಂಡು ಹೆದರಿ ಹಿಂದೆ ಓಡಿದರು. ಅದರೆ ಕಜ್ಜಿ ಒಬ್ಬನೆ ಏನೂ ಅರ್ಥವಾಗದೇ ಅಲ್ಲೇ ಇದ್ದುಬಿಟ್ಟ. ’ಕಜ್ಜಿ ನೀನೇ ಹೋಗು’ ಅಂತ ಶಣಿಯಾರ ಆದೇಶ ಹೊರಡಿಸಿದ. ಆದರೆ ಬಂದ ವೇಶ್ಯೆ ಕಜ್ಜಿ ಅಂತ ಹೆಸರು ಕೇಳಿ, ಇವನು ಯಾವುದೋ ಕಾಯಿಲೆಯಿಂದ ನರಳುತ್ತಿರುವವನಿರಬೇಕೆಂದು ಹೆದರಿ, ನಾನು ಅವನ ಜೊತೆ ಮಾಡಲ್ಲ ಅಂತ ಹೇಳಿಬಿಟ್ಟಳು. ಶಣಿಯಾರನಿಗೆ ತನ್ನ ಯೋಜನೆ ಎಲ್ಲ ಚಟ್ಟ ಹಿಡಿದಿದ್ದು ಕಂಡು ನಿರಾಶೆ ಆಯಿತು. ಕೊನೆಗೆ ಕಜ್ಜಿಗೆ ಮನೆಗೆ ಹೋಗಲು ಹೇಳಿ, ತಾನೆ ಟೆಂಟು ಹೊಕ್ಕಿದ. ಕಜ್ಜಿಗೆ ಬೇಸರವಾಯಿತು. ತನ್ನನ್ನು ಆ ಸೂಳೆ ಹಾಗೆ ಕಡೆಗಣಿಸಿದಳೆಂದಲ್ಲ. ಅವಳಿಂದಾಗಿ ಅವತ್ತು ಕಥಾ ಪ್ರವಚನ ನಡೆಯಲಿಲ್ಲ ಎಂದು. ಕಥೆ ಕೇಳುವುದೇ ಚೆನ್ನಾಗಿತ್ತು.

ನಿಧಾನವಾಗಿ ಕಜ್ಜಿ ತಲೆಯಲ್ಲಿ ಇನ್ನೊಂದು ಮನೆ ಹಾಳು ಆಸೆ ಹುಟ್ಟಿತು. ತಾನೂ ಈ ಕಥೆಗಳನ್ನೆಲ್ಲ ಓದುವ ಹಾಗಿದ್ದರೆ?! ಆಗ ತಾನೇ ಈ ಕಥೆಯ ರುಚಿಯನ್ನು ಅನುವಾದಕರ ಸಹಾಯ ಇಲ್ಲದೇ ಸವಿಯಬಹುದಲ್ಲ ಎಂದೆಣಿಸಿ, ಅದ್ಯಾವುದೋ ಸರಿ ಅಲ್ಲದ ಹೊತ್ತಿನಲ್ಲಿ, ಚಂಬೆತ್ತಿ ನೀರು ಕುಡಿಯುತ್ತಿದ್ದ ದೊಡ್ಡ ಯಜಮಾನರ ಬಳಿ ಹೋಗಿ ತಾನು ಶಾಲೆಗೆ ಹೋಗುವುದಾಗಿ ಹೇಳಿದ. ದೊಡ್ಡವರಿಗೆ ಅದೇನು ಸಿಟ್ಟಿತ್ತೋ, ಆ ಚಂಬನ್ನ ಬೀಸಿ ಅವನ ಮಂಡೆಗೆ ಒಗೆದರು. ಅದು ಅವನ ಕಿವಿಗೆ ಬಡಿದು, ರಕ್ತ ಬಂದು, ಎರೆಡು ವಾರ ಎಡಗಿವಿಗೆ ಏನೂ ಕೇಳಿಸುತ್ತಿರಲಿಲ್ಲ. ಕಜ್ಜಿ ತುಂಬ ನೊಂದು ಕೊಂಡ. ದೊಡ್ಡವರು ಹೊಡೆದಕ್ಕಲ್ಲ. ತಾನೇ ಆ ಕಥೆಗಳನ್ನು ಓದಿ ಸವಿಯುವ ಅವಕಾಶ ಇನ್ನೆಂದೂ ತನಗೆ ದೊರೆಯುವುದಿಲ್ಲವಲ್ಲ ಎಂದು.

ಅವತ್ತಿನಿಂದ ಕಜ್ಜಿಗೆ ತಾನೂ ಓದ ಬೇಕು, ಓದಿ ಆ ಸುಖದ ರಸವನ್ನು ಸವಿಯಬೇಕು ಎಂದು ಹಟಹತ್ತಿತು. ಅವನು ದಿನಾಲು ಒಂದು ಸಿಂಯಾಳನೊ, ಚೇಪೇ ಕಾಯೊ, ಇನ್ನೇನೋ ತಗೊಂಡು ಹೋಗಿ, ಶಣಿಯಾರಂಗೆ ಕೊಟ್ಟು, ಅವನು ಓದುವುದನು ಇವನೂ ಜೋರಾಗಿ ಹೇಳಿ, ಉರು ಹೊಡೆಯುತ್ತಿದ್ದ. ಎಷ್ಟೋ ಸಲ ಪದ ನಾಲಿಗೆಗೆ ಬರದಿದ್ದರೆ, ಶಣಿಯಾರನಿಗೆ ಇನ್ನೊಮ್ಮೆ ಹೇಳಲು ಒತ್ತಾಯಿಸುತ್ತಿದ್ದ. ಸುತ್ತಲಿದ್ದವರಿಗೆ ಇದರಿಂದ ರಸ ಭಂಗವಾದರೂ, ಈ ಗಲೀಜು ಹುಡಗನ ಸಹವಾಸ ಬೇಡ, ನಮ್ಮನ್ನ ಮುಟ್ಟಿ ಬಿಟ್ಟರೆ ಅಂತ ಹೆದರಿ ಸುಮ್ಮನಿರುತ್ತಿದ್ದರು. ಶಣಿಯಾರಂಗೆ ಕೋಳಿ ಕದ್ದು ಕೊಟ್ಟು ಅವನಲ್ಲಿದ್ದ ಹಳೆಯ ಪುಸ್ತಕಗಳನ್ನು ಕೊಂಡುಕೊಂಡ. ಶಣಿಯಾರಂಗೂ ಒಮ್ಮೆ ಓದಿದ ಕಥೆ ಮತ್ತೆ ಮಜ ಕೊಡುತ್ತಿರಲಿಲ್ಲ. ಕೊಟ್ಟ. ಕಜ್ಜಿ ಆ ಪುಸ್ತಕವನ್ನು ಕೊಟ್ಟಿಗೆಯಲ್ಲಿ ಹಳೆಯ ಟ್ರಂಕೊಂದರಲ್ಲಿ ಮುಚ್ಚಿಟ್ಟು, ರಾತ್ರಿ ವೇಳೆಗೆ ಎದ್ದು ಅವುಗಳನ್ನು ಹೊರಗೆ ತೆಗೆಯುತ್ತಿದ್ದ. ತೆಗೆದು ತಾನು ಉರು ಹೊಡೆದ ಕಥೆಯನ್ನು, ಒಂದು ಬೆರಳು ಪುಸ್ತಕದ ಮೇಲಿಟ್ಟು ಜೋರಾಗಿ ಶಣಿಯಾರ ಓದುತ್ತಿದ್ದ ಧಾಟಿ, ಮಟ್ಟು, ಶೈಲಿಯಲ್ಲಿ ಓದಲು ಶುರು ಮಾಡಿದ. ಬಾಯಿಯಂದ ಹೊರ ಬರುತ್ತಿದ್ದ ಶಬ್ದಗಳಾವುವೋ. ಬೆರಳು ತೋರಿಸುತ್ತಿದ್ದ ಪದಗಳಾವುವೋ. ಪದಗಳ ಅರ್ಥವೂ ಅವನಿಗೆ ಗೊತ್ತಿರಲಿಲ್ಲ. ಆದರೆ ಕಜ್ಜಿಗೆ, ತಾನೂ ಈಗ ಪದ ಗುರುತಿಸಿ ಓದುತ್ತಿದ್ದೀನಿ, ಅನ್ನೋ ಸುಖ ಸಿಗಲು ಶುರುವಾಯಿತು. ಈ ಸುಖ ಎಲ್ಲರ ಜೊತೆಗೆ ಕಥೆ ಕೇಳಿ, ಶಿಶ್ನ ನಿಗರುವುದಕ್ಕಿಂತಲೂ, ಹೆಚ್ಚು ರೋಮಾಂಚನವಾಗಿತ್ತು. ನಿಧಾನವಾಗಿ ಇನ್ನೂ ಹೆಚ್ಚಿನ ಸುಖ ಪಡೆಯಲು, ಇನ್ನೂ ಹೆಚ್ಚಿನ ಕಥೆಯನ್ನು ಉರು ಹೊಡೆದು, ಹೆಚ್ಚಿನ ಪುಸ್ತಕಗಳನ್ನು ಕಳ್ಳತನದಿಂದ ಸಂಪಾದಿಸಿದ.

ಒಮ್ಮೆ ಏಕಾಏಕಿ ಚಿಕ್ಕವ್ವೋರು ಕೊಟ್ಟಿಗೆಗ ಬಂದರು. ಅವರು ಮೂಲೆಯಲ್ಲಿ, ಕಜ್ಜಿಯ ಅಜಾಗರೂಕತೆಯಿಂದ ಬಿದ್ದಿದ್ದ ’ರತಿರಾಗ’ ಪುಸ್ತಕವನ್ನು ಎತ್ತಿಕೊಂಡಳು. ಕಜ್ಜಿಗೆ ಭಯ ಶುರುವಾಯಿತು. ಒಳಗೆ ’ವೈನಿ ಗೂಡ ಮೈದುನನ ಗೂಟ’ ಅನ್ನೊ ಕಥೆಯ ನಾಲ್ಕು ಸಾಲುಗಳನ್ನು ಓದಿದಳು ’ಇದ್ಯಾರದು ಕಜ್ಜಿ?’ ಅಂತ ಕೇಳಿದಳು. ’ಗೊತ್ತಿಲ್ಲ ಅವ್ವೋರೆ! ಪೊಟ್ಟಣ ಕಟ್ಟಲಿಕ್ಕಿರಲಿ ಅಂತ ಎತ್ಕೊಂಡಿದ್ದೆ!’ ಅಂತ ಸುಳ್ಳು ಹೇಳಿದ. ಕಜ್ಜಿಗೆ ಓದು ಬರಹ ಏನೂ ಬರದಿದ್ದುದರಿಂದ ಇದು ಅವನದಾಗಲು ಸಾಧ್ಯವೇ ಇಲ್ಲ ಅನ್ನುವುದು ಚಿಕ್ಕವ್ವೋರಿಗೂ ಗೊತ್ತಿತ್ತು. ಅವರು ಆ ಪುಸ್ತಕವನ್ನು ತಗೊಂಡು ಹೋದರು. ಕಜ್ಜಿಗೆ ಏನೂ ಅರ್ಥ ಆಗಲಿಲ್ಲ. ನೆಲ ಒರೆಸುವ ನೆಪವೊಡ್ಡಿ, ಚಿಕ್ಕವ್ವೋರ ಕೋಣೆಯ ನೆಲ ಒರೆಸ ಬೇಕಾದರೆ, ಅವರು ಈ ಪುಸ್ತಕವನ್ನು ನಗುತ್ತ ಓದುವುದು ಕಾಣಿಸಿತು. ಕಜ್ಜಿಗೆ ತಾನು ಸಿಕ್ಕಿ ಬೀಳಲಿಲ್ಲ ಅಂತ ಸಮಾಧಾನವಾದರೂ, ಇವರು ಯಾಕೆ ಶಣಿಯಾರನ ತರಹ ಜೋರಾಗಿ ಓದುತ್ತಿಲ್ಲ? ಎಂದೆನಿಸಿತು. ಪುಸ್ತಕ ಓದುವುದಂದರೆ, ಕನಿಷ್ಟ ನನ್ನಷ್ಟಾದರೂ ಜೋರಾಗಿ ಓದ ಬೇಕಲ್ಲ ಅಂತ ಕಜ್ಜಿಗೆ ಅನಿಸಲು ಶುರು ವಾಯಿತು..

ಆದರೆ ಮಾರನೆ ದಿನ, ಚಿಕ್ಕವ್ವೋರು ಬಚ್ಚಲ ಮನೆಗೆ ಹೋಗಿ, ಹಾಡು ಹೇಳಲು ಶುರು ಮಾಡಿದಾಗಿನಿಂದ ಕಜ್ಜಿಗೆ ತಡೆದುಕೊಳ್ಳಲಾಗಲಿಲ್ಲ. ಈ ಪುಸ್ತಕ ಓದುವುದರಿಂದ ಹಾಡು ಹಾಡಲೂ ಆಗುತ್ತದಾ? ಛೆ ಆ ಶಣಿಯಾರ ಯಾಕೆ ಹಾಡು ಹಾಡಲಿಲ್ಲ. ನನಗ್ಯಾಕೆ ಹಾಡು ಕಲಿಸಲಿಲ್ಲ ಅಂತ ಒಳಗೊಳಗೆ ನೊಂದು ಬಡವಾದ. ಬಚ್ಚಲ ಮನೆಯಲ್ಲಿ ಓದಿದರೆ, ಪದ ಹಾಡಾಗಬಹುದು ಅಂತೆಲ್ಲ ಹುಚ್ಚು ಹುಚ್ಚಾಗಿ ಯೋಚಿಸಲು ಶುರು ಮಾಡಿದ. ಪ್ರತಿ ದಿನ ಚಿಕ್ಕವ್ವೋರು ಪುಸ್ತಕ ನೋಡಿ ಹಾಡು ಕಲಿತಿದ್ದಾರೆ. ನಾನು ಕಲಿಯಬೇಕು ಅನ್ನುವ ವಾಂಛೆ, ಮನದೊಳಗೆ ಜ್ವಲಾಮುಖಿ ಕುದಿಸಲು ಶುರು ಮಾಡಿತು. ಮರುದಿನ ಕಜ್ಜಿ ಅದೇನೋ ಧೈರ್ಯ ಮಾಡಿ ಇನ್ನೊಂದು ಪುಸ್ತಕ ತಗೊಂಡು ಚಿಕ್ಕವ್ವೋರ ಕೋಣೆಗೆ ಹೋಗಿ ಅವಳು ಮುಂದಿಟ್ಟ. ’ಇದೂ ತೋಟದಲ್ಲಿ ಸಿಕ್ತು. ನಿಮಗೆ ಕೊಡುವ ಅಂತ ತಂದೆ’ ಅಂತಂದ. ಅದನ್ನು ನೋಡಿ ಅರೆಕ್ಷಣ ಚಿಕ್ಕವ್ವೋರು ಹೈರಾಣಾದರೂ, ಕೂಡಲೆ ಸುಧಾರಿಸಿಕೊಂಡು, ’ಕಜ್ಜಿ, ನಿನಗೆ ದೇವರ ಮೇಲೆ ಆಣೆ ಕಾಣು. ನೀನು ನನಗೆ ಈ ಪುಸ್ತಕ ಕೊಟ್ಟಿದ್ದು ಯಾರಿಗೂ ಹೇಳುಕಾಗ. ಸತ್ತರೂ ಹೇಳುಕಾಗ. ಅಕ್ಕ?’ ಅಂತ ಕೇಳದಳು. ಈ ನಿಷೇಧಿತ ವ್ಯವಹಾರ ಕಜ್ಜಿಗೆ ಭಯ ಮತ್ತು ಉತ್ಸಾಹ ಹೆಚ್ಚಿಸಿತು. ಅಕ್ಕು ಅಂತ ತಲೆ ಆಡಿಸಿದ. ಚಿಕ್ಕವ್ವೋರು ನಕ್ಕು ಅವನಿಗೆ 5 ರೂಪಯಿ ನಾಣ್ಯ ಕೊಟ್ಟು ಪುಸ್ತಕ ಇಸ್ಕೊಂಡಳು. ಕಜ್ಜಿ ಮಾರನೇ ದಿನ ಬೆಳಗಾಗುವುದನ್ನೇ ಕಾಯುತ್ತಿದ್ದ. ಮಾರನೇ ದಿನ, ಚಿಕ್ಕವ್ವೋರು ಸ್ನಾನದ ಮನೆಗೆ ಹೋಗಿ ಬೇರೆಯದೇ ಹಾಡನ್ನು ಹಾಡಲು ಶುರು ಮಾಡಿದಳು! ಅಲ್ಲಿಗೆ ಕಜ್ಜಿಗೆ ಬೇರೆ ಬೇರೆ ಪುಸ್ತಕದಲ್ಲಿ, ಬೇರೆ ಬೇರೆ ಹಾಡಿರುವುದು ಖಾತ್ರಿ ಆಯಿತು. ನೋಡೇ ಬಿಡೋಣ ಅದು ಹೇಗೆ ಹಾಡುವುದು, ಹೇಗೆ ಬಚ್ಚಲಲ್ಲಿ ಓದುವುದು ಅಂತ ನೋಡಲು ಅವತ್ತು ಕಜ್ಜಿ ಕಿಟಕಿಯಿಂದ ಇಣುಕಿ ಚಿಕ್ಕವ್ವೋರ ನಗ್ನ ಕುಂಡೆಯನ್ನು ನೋಡೇ ಬಿಟ್ಟ.

ಆದರೆ ಈಗ ಈ ರಂಡೆ ಕುರಿ, ಆ ಪುಸ್ತಕಗಳನ್ನೆಲ್ಲ ತಿಂದು, ತನ್ನೆಲ್ಲ ಆಸೆಯನ್ನು ನುಂಗಿ ನೀರು ಕುಡಿದು, ತಾನಿನ್ನೆಂದೆಂದೂ ಓದಲು ಸಾಧ್ಯವೇ ಇಲ್ಲದ ಹಾಗೆ ಮಾಡಿದೆ. ಹಾಗೆಲ್ಲ ಮರಗುತ್ತಿರಬೇಕಾದಾಗಲೇ, ದೊಡ್ಡ ಯಜಮಾನರು ಪಂಚಾಯತಿ ಛೇರಮ್ಯಾನ್ ಜೊತೆ ಕೊಟ್ಟಿಗೆಯೊಳಗೆ ಬಂದೇ ಬಿಟ್ಟರು. sheep-sacrificeಬಂದವರೇ ಛೇರಮ್ಯಾನ್‌ರನ್ನು ಕುರಿಯ ಮುಂದೆ ನಿಲ್ಲಿಸಿದರು. ಕುರಿಯ ಪಕ್ಕ ಪಾಳು ಬಿದ್ದಿದ್ದ ಟ್ರಂಕನ್ನು ಕಂಡು, ’ಲೈ ಕಜ್ಜಿ, ಆ ಪೆಟ್ಟಿಗೆ ಎಂತಕೆ, ಹೇಲು ಗುಡ್ಡೆ ಹಾಕುವುದಕ್ಕೆ ಇಟ್ಟಿದ್ದಿ? ಬಿಸಾಕದನ್ನ’ ಅಂತ ಗುಡುಗಿ ಅದನ್ನ ಜಾಡಿಸಿ ಒದ್ದರು. ಟ್ರಂಕ್ ಗೋಡೆಗೆ ಬಡಿದು ಎರೆಡು ಚೂರಾಯಿತು. ಒಳಗಿದ್ದ ಗೋಣಿ ಚೀಲ ಮತ್ತು ಎರೆಡು ಚಡ್ಡಿ ಮಾತ್ರ ಕೆಳಗೆ ಬಿತ್ತು. ಕಜ್ಜಿ ಅದನ್ನು ಎತ್ಕೊಂಡು ಹೊರಗೆ ಓಡಿದ. ಅವನಿಗೆ ಜೀವವೇ ಬಾಯಿಗೆ ಬಂದ ಹಾಗಾಯಿತು. ’ದೇವರೆ, ಒಂದು ವೇಳೆ ಇದರೊಳಗಿದ್ದ ಪುಸ್ತಕಗಳು ಹೊರಗೆ ಬಿದ್ದು ಅದನ್ನು ದೊಡ್ಡ ಯಜಮಾನರು ನೋಡಿದ್ದರೆ?’ ಓದುತ್ತೇನೆ ಅಂತ ಹೇಳಿದಕ್ಕೆ ಅಷ್ಟು ಸಿಟ್ಟಾಗಿದ್ದವರು, ಈಗ ಓದುತ್ತಿರುವ ವಿಚಾರವೇನಾದರು ಗೊತ್ತಾಗಿ ಬಿಟ್ಟಿದ್ದಿದ್ದರೆ? ಕೊಂದೇ ಹಾಕಿ ಬಿಡ್ತಿದ್ದರು. ಆ ಕುರಿ ನನ್ನ ಕಾಪಾಡಿತು? ಅದು ದೇವರ ನನಗಾಗಿ ಕಳುಹಿಸಿ ಕೊಟ್ಟಿದ್ದು. ಅಂತೆಲ್ಲ ಏನೇನೊ ಯೋಚಿಸಿ ಕಜ್ಜಿಯ ಕಣ್ಣಿಂದ ನೀರಿಳಿಯಲು ಶುರುವಾಯಿತು. ಹೀಗೇಕೆ ನೀರಿಳಿಯುತ್ತಿದೆ ಅನ್ನುವುದು ಕೂಡ ಕಜ್ಜಿಗೆ ಅರ್ಥವಾಗುತ್ತಿರಲಿಲ್ಲ.

ಮರಳಿ ಕೊಟ್ಟಿಗೆಗೆ ಬಂದರೆ, ಯಜಮಾನರು ಮತ್ತು ಛೇರಮ್ಯಾನರು ಬಲಿ ಕೊಟ್ಟ ಮೇಲೆ ಇದನ್ನು ಯಾವ್ಯಾವ ರೂಪದಲ್ಲಿ ಪದಾರ್ಥ ಮಾಡಿ ತಿನ್ನಬಹುದು ಅಂತ ಸಮಾಲೋಚಿಸುತ್ತಿದ್ದರು. ಕಜ್ಜಿಗೆ ಆ ಮಾತು ಕೇಳಿ ಆಘಾತವಾಯಿತು. ತನ್ನನ್ನು ಕಾಪಾಡಿದ ಕುರಿ, ತನಗೆ ಹಿಂದೆಂದೂ ಸಿಗದಿದ್ದ ಸ್ಪರ್ಷ ಅನುಭವವನ್ನು ಕೊಟ್ಟ ಕುರಿಯನ್ನು ಈ ಕಟುಕರು ಇಷ್ಟು ನಿರ್ದಾಕ್ಷಿಣ್ಯವಾಗಿ ಕೊಲ್ಲಲು ಹೊಂಚು ಹಾಕುತ್ತಿದ್ದಾರಲ್ಲ! ಅಂತ ಭಯ ಪಟ್ಟ. ಈ ಕುರಿ ಬದಲು ಬೇರೆ ಕುರಿ ಕೊಟ್ಟರೆ… ಆದರೆ ಬೇರೆ ಕುರಿ ಕೊಡಿ ಅಂತ ನಾನು ಹೇಗೆ ಹೇಳಲಿ. ಹಾಗೆ ಹೇಳಿದರೆ ನನ್ನನ್ನೇ ಬಲಿ ಕೊಟ್ಟು ಬಿಡುತ್ತಾರೆ ಅಂತ ಬೆದರಿ ಆ ಕ್ಷಣ ಸುಮ್ಮನಾಗಿಬಿಟ್ಟ. ಆದರೆ ರಾತ್ರಿ ಕಜ್ಜಿಗೆ ತಡೆದುಕೊಂಡಿರಲು ಆಗಲಿಲ್ಲ. ಸಾವುತ್ರನ ಕೊಟ್ಟಿಗೆ ಕಡೆಗೆ ಹೋಗಿ, ಹಿಂದಗಡೆ ಇರೋ ಕಿಟುಕಿಗೆ ಕೈ ಹಾಕಿ, ಸಾವುತ್ರ ಎತ್ತಿಟ್ಟಿದ್ದ ಸೇಂದಿಯನ್ನು ತಗೊಂಡು ಬಂದ. ಸಾವುತ್ರ ಮತ್ತವಳ ಗಂಡ, ಗೊರಕೆ ಹೊಡೆದು ಮಲಗಿದ್ದರು. ತನ್ನ ಕೊಟ್ಟಿಗೆಗೆ ಮರಳಿ ಕಜ್ಜಿ ಒಂದೇ ಗುಟುಕಿಗೆ ಇಡೀ ಸೇಂದಿ ಬಾಟಲನ್ನು ಗಟಗಟನೆ ಕುಡಿದು ಬಿಟ್ಟ. ಹಿಂದೆ ಮೋಣಕೈ ಮುರ್‍ಕೊಂಡು ನೋವಾದಾಗ, ಸಾವುತ್ರನ ಗಂಡ ಹನಿ ಕಡೀಲಿಕ್ಕೆ ಕೊಟ್ಟು, ನಿದ್ದೆ ಬಂದು ನೋವು ಮಾಯ ಆಗುವ ಹಾಗೆ ಮಾಡಿದ್ದ. ಅಂದಿನಿಂದ ನೋವಾದಾಗೆಲ್ಲ ಸೇಂದಿ ಕುಡೀಬೇಕು ಅನ್ನುವುದು ಕಜ್ಜಿ ಕಲಿತುಕೊಂಡ. ಅವನಿಗೆ ಅದಾದ ಮೇಲೆ ಯಾವತ್ತೂ ನೋವಾಗಿರಲಿಲ್ಲ. ಯಜಮಾನರು ಹೊಡೆದಾಗಲೂ. ಆದರೆ ಅವತ್ತು ತಡೆದುಕೊಳ್ಳಲಾಗುತ್ತಿರಲಿಲ್ಲ. ಗಟಗಟನೆ ಕುಡಿದು ಕಜ್ಜಿ ಅಳಲು ಶುರು ಮಾಡಿದ.

ಎಚ್ಚರವಾಗಿದ್ದ ಕುರಿಯ ಮೈ ಸವರುತ್ತ, ’ನನ್ನ ಪ್ರಾಣ ಕೊಟ್ಟಾದರೂ ನಿನ್ನ ಉಳಿಸ್ಕೋತೀನೆ’ ಅಂತೆಲ್ಲ ಅದಕ್ಕೆ ಆಶ್ವಾಸನೆ ಕೊಡುತ್ತಿದ್ದ. ನಿಧಾನವಾಗಿ ಅವನಿಗೇ ಗೊತ್ತಿಲ್ಲದೆ ಅವನು ಅದರ ಕೆಚ್ಚಲನ್ನು ಅದುಮುತ್ತ ತಾನು ಉರು ಹೊಡೆದಿದ್ದ ಕಥೆಗಳನ್ನೆಲ್ಲ ಜೋರಾಗಿ ಹೇಳಲು ಶುರು ಮಾಡಿದ. ತೀರಾ ಜೋರಾಗೇನಲ್ಲ. ಆದರೆ ಚಿಕ್ಕವ್ವೋರು ಓದುವುದಕ್ಕಿಂತ ಜೋರಾಗಿ. ಪ್ರತಿ ಪದ ಉಚ್ಛರಿಸುತ್ತಿದ್ದಾಗಲೂ ಅವನ ಅಳು ಹೆಚ್ಚಾಯಿತು. ಕುರಿಯ ಕಿವಿ ಸವರುತ್ತ, ಅದರೆ ಬೆನ್ನ ಸವರುತ್ತ, ಅವನಿಗ ಗೊತ್ತಿಲ್ಲದೇ, ತನ್ನ ಚಡ್ಡಿ ತೆಗೆದು, ಕುರಿಯನ್ನ ದೊಡ್ಡ ಯಜಮಾನರು ಸಾವುತ್ರನ್ನ ಕೂರಿಸಿದ ಹಾಗೆ ನಿಲ್ಲಿಸಿ, ತಾನು ಯಜಮಾನರ ಹಾಗೆ ಮಂಡಿಯೂರಿ ನಿಂತು, ಅವನ ಶಿಶ್ನವನ್ನು ಆ ಹೆಣ್ಣು ಕುರಿಯ ಕೂನಿನೊಳಗೆ ಜಡಿದ. ಅ ಕುರಿ ತುಟಿ ಪಿಟಕ್ಕೆನ್ನದೆ ಸುಮ್ಮನೆ ಕಣ್ಣು ಮುಚ್ಚಿತು.

ಬೆಳಗ್ಗೆ, ತನ್ನ ಕುರಿಯನ್ನು ಹೊತ್ತುಕೊಂಡು ಹೋಗಿ, ಕೆರೆಯಲ್ಲಿ ಮುಳುಗಿಸಿ, ಅದರ ಮೈ ಉಜ್ಜುತ್ತ ಯಾರಿಗೂ ಅರ್ಥವಾಗದ ಪದಗಳನ್ನ, ಚಿಕ್ಕವ್ವೋರು ಹಾಡಿದ ರಾಗದಲ್ಲಿ ಹಾಡಲಾರಂಭಿಸಿದ. ಅವನ ವಿಚಿತ್ರ ವರ್ತನೆ ನೋಡಿದ ಸಾವುತ್ರ ಸ್ವಲ್ಪ ಚಿಂತಿತಳಾದಳು. ಅವನಿಗೆ ಗೊತ್ತಿಲ್ಲದ ಹಾಗೆ ದೂರದಿಂದಲೆ ಅವನ ಚಲನ ವಲನ ಗಮನಿಸಲು ಪ್ರಾರಂಭಿಸಿದಳು. ಕತ್ತಲಾದ ಮೇಲೆ, ಸಾವುತ್ರ ನಿಧಾನವಾಗಿ ನೆಡ್ಕೊಂಡು ದನದ ಕೊಟ್ಟಿಗೆಯ ಕಡೆ ಹೊರಟಳು. abstract-art-sheepಕಿಟಕಿಯಿಂದ, ’ನಾನು ಸತ್ತಾದರೂ ನಿನ್ನ ಬಲಿ ಕೊಡದೆ ಇರೋ ಹಾಗೆ ನೋಡ್ಕೋತೀನೆ’ ಅಂತೆಲ್ಲ ಕಜ್ಜಿ ಬಡಬಡಿಸುವುದು ಕೇಳಿಸಿತು. ಸಾವುತ್ರ ಒಳಗಿನ ದೃಶ್ಯ ಕಂಡು ಹೌಹಾರಿದಳು. ಕೂಡಲೆ ಓಡಿ, ಊಟ ಮಾಡುತ್ತಿದ್ದ ದೊಡ್ಡ ಯಜಮಾನರನ್ನ ಕರೆದಳು. ಅವರು ಕೊಟ್ಟಿಗೆ ನುಗ್ಗಿದ್ದಾಗ, ’ರೇಣು ತನ್ನ ಮೈದುನನ ಕೂದಲೆಲೆದು. . .ಅವಲ ತೊಡೆಯೊಲಗೆ ತಲ್ಲುತಿದ್ದಲು.’ ಅಂತ ಉರು ಹೊಡೆದ ಕಥೆಯನ್ನು ಜೋರಾಗಿ ಪಠನ ಮಾಡುತ್ತಿದ್ದ. ದೊಡ್ಡ ಯಜಮಾನರು ಬಂದವರೆ ಕಜ್ಜಿ ಮಾಡುತ್ತಿದ್ದದ್ದನ್ನು ನೋಡಿ, ಅವನನ್ನು ಜಾಡಿಸಿ ಒದ್ದರು. ಅಲ್ಲಿ ಹಾರೆಯಿಂದ ಬಿಡಿಸಿಟ್ಟಿದ್ದ ಕೋಲನ್ನು ಎತ್ತಿ ಬಾರಿಸಲು ಶುರು ಮಾಡಿದರು. ಇಡೀ ಪ್ರಕರಣದಲ್ಲಿ ಒಮ್ಮೆಯೂ ಬಾಯಿ ಬಿಡದಿದ್ದ ಕುರಿ, ತನ್ನ ಪ್ರಿಯಕರನನ್ನು ಹೊಡೆಯುವುದ ನೋಡಿ, ’ಮೇ. . . .ಮೇ. . . ’ ಅಂತ ಅಳಲು ಶುರು ಮಾಡಿತು. ಯಜಮಾನರು ಕಜ್ಜಿಯನ್ನು ಎಳೆದು ತಂದು ಹೊರಗಡೆ ತೊಟಕ್ಕೆ ಅಟ್ಟಿಸಿಕೊಂಡು ಹೋಗಿ ಅವನ ತಲೆ ಮೇಲೆ ಬಲವಾಗಿ ಹೊಡೆದರು. ಬಿದ್ದ ಕಜ್ಜಿ ಮತ್ತೆ ಏಳಲಿಲ್ಲ. ಆದರೂ ಯಜಮಾನರು ಹೊಡೆಯುತ್ತಲೆ ಇದ್ದರು. ಕೋಲು ತುಂಡಾದ ಮೇಲೆ, ಸಾವುತ್ರನ ಗಂಡನ್ನ ಕರೆದು ಕಜ್ಜಿಯನ್ನು ಹೊರಗಡೆ ಬೇಣದಲ್ಲಿ ಮುಚ್ಚಿ ಹಾಕಲು ಹೇಳಿದರು.

ಪೂಜಾರಪ್ಪ ಎಲ್ಲ ವಿಷಯ ಕೇಳಿ, ಈ ನಡತೆಗೆಟ್ಟ ಕುರಿಯನ್ನು ಬಲಿ ಕೊಟ್ಟರೆ, ಅದು ನಾವು ಸಾರು ಮಾಡಿ ತಿಂದ ಮೇಲೆ, ದೇವಿ ಸುಮ್ನಿರ್‍ತಾ? ಅನ್ನೊ ಧರ್ಮ ಸಂಕಟ ಮುಂದಿಟ್ಟ. ದೊಡ್ಡ ಯಜಮನರಿಗೆ, ಜನರಿಗೆ ಈ ವಿಚಾರ ಗೊತ್ತಾದರೆ ನನ್ನ ಮುಂದಿನ ರಾಜಕೀಯ ಭವಿಷ್ಯ ಏನು ಅನ್ನುವುದು ಭಯವಾಯಿತು. ಪೂಜಾರಪ್ಪ ಶಾಂತಿಗಂತ 5000 ಪೀಕಿಸಿ, ಇನ್ನೊಂದು ಕೇರಳ ಕುರಿ ನೋಡುವ ಇದನ್ನು ಬಲಿ ಕೊಡುವುದು ಬೇಡ ಅಂತ ನಿರ್ಧರಿಸಿದ. ಸರಿ ಅಂತಾಯಿತು. ಆದರೆ ಈ ಹಾದರಗಿತ್ತಿ ಕುರಿಯನ್ನ ಏನು ಮಾಡುವುದು? ಆ ಕಜ್ಜಿ ಹತ್ತಿರ ಮಾಡಿಸಿಕೊಂಡಿದ್ದಿದ್ದರಿಂದ ಯಾರು ಅದನ್ನು ತಿನ್ನಲು ಮುಂದಾಗಲಿಲ್ಲ. ಅದನ್ನ ಊರ ಹೊರಗೆ ಬೇಣದ ಹತ್ತಿರ ಬಿಡುವುದು ಅಂತ ನಿರ್ಧರಿಸಿ ಅಲ್ಲೇ ಬಿಟ್ಟರು.

ಈಗ ಶಣಿಯಾರ ಎಲ್ಲರಿಗೂ ಈ ಗಲೀಜು ಕಥೆ ಹೇಳಿ, ಕಜ್ಜಿಯನ್ನು ಮಣ್ಣು ಮಾಡಿದ ಸಮಾಧಿ ಮೇಲೆ ಬೆಳೆದಿದ್ದ ಹೂವು ಹುಲ್ಲನ್ನು ಮೇಯುವ ಕುರಿಯನ್ನು ತೋರಿಸಿ, ’ನೋಡಿ, ಅವ ನಿಜವಾದ ಪ್ರೇಮಿ. ಜೀವ ಕೊಟ್ಟಾದರು ನಿನ್ನ ಉಳಿಸ್ತೀನಿ ಅಂತ ಹೇಳಿದ. ಕೊಟ್ಟ ಮಾತು ಉಳಿಸಿಕೊಂಡ’ ಅಂತ ಕಥೆ ಹೇಳುತ್ತಿರುತ್ತಾನೆ.