ಈ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ…

– ಶರ್ಮಿಷ್ಠ

ಕಳೆದ ಹದಿನೈದು ದಿನಗಳಿಂದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿಗೆ ಬರುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸುವಾಗ ಕೆಲವು ಓದುಗರು, ಕಮ್ಯುನಿಸ್ಟ್‌ರು ನಡೆಸುತ್ತಿರುವ ಹೋರಾಟ ಎಂಬ ಕಾರಣಕ್ಕೆ ತಮ್ಮ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಕರಣವನ್ನು, ಎಲ್ಲರ ಕಾಳಜಿಯನ್ನು ಹಾದಿ ತಪ್ಪಿಸುತ್ತಿಸುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ. ಇಲ್ಲಿ ನಕ್ಸಲರ ವಿಷಯ ಯಾಕೆ ಬೇಕು?

ಇಲ್ಲಿ ಒಂದು ಸ್ಪಷ್ಟವಾಗಬೇಕು ಮಹೇಶ ತಿಮರೋಡಿ ವಿಶ್ವಹಿಂದು ಪರಿಷತ್‌ನ ಮುಖಂಡನೇ ಹೊರತು ಕಮ್ಯುನಿಸ್ಟ್ ಪಕ್ಷದವರಲ್ಲ. Dharmasthala_Templeಅವರು ಯಾಕೆ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ? ಜೊತೆಗೆ ಕೆಲವು ಹಿಂದೂ ಪರ ಸಂಘಟನೆಗಳು ಅವರ ಜೊತೆ ಹೋರಾmಕ್ಕೆ ಕೈ ಜೋಡಿಸಿವೆ. ಜೊತೆಗೆ ಬಿಜೆಪಿ ನಾಯಕರ್‍ಯಾರು ಹೆಗ್ಗಡೆಯವರನ್ನು ಕಾಂಗ್ರೆಸ್ ನಾಯಕರ ಮಟ್ಟಿಗೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ.

ಅವರ ವೈಯಕ್ತಿಕ ಹಿತಾಸಕ್ತಿ ಎಂದು ಎಲ್ಲರು ಕೊಡುವ ಕಾರಣಗಳನ್ನೇ ಇಟ್ಟುಕೊಳ್ಳೋಣ. ರಾಜಕೀಯ ಭವಿಷ್ಯಕ್ಕೆ ಹಾದಿಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರುತ್ತಿದೆ. ಪೂಜಾರಿಯಂತಹ ಹಿರಿಯ ರಾಜಕಾರಣಿ ಚುನಾವಣೆಗಾಗಿ ತನ್ನತನವನ್ನೇ ಮಾರಿಕೊಂಡು ಚೀಪ್ ಗಿಮಿಕ್ ಮಾಡಲು ಹೊರಟಿರುವಾಗ, ಗೋಧ್ರಾ ಹತ್ಯಾಕಾಂಡದ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ವಿಜೃಂಭಿಸುತ್ತಿರುವಾಗ, ರಿಯಲ್ ಎಸ್ಟೇಟ್ ಡಾನ್‌ಗಳು, ಗಣಿ ಕಳ್ಳರೆಲ್ಲ ಮಂತ್ರಿ ಪದವಿಗಾಗಿ ತಾಮುಂದು ತಾಮುಂದು ಎಂದು ಹೊರಟಿರುವಾಗ, ಅವರನ್ನೆಲ್ಲ ನಾವು ಸಹಿಸಿಕೊಂಡಿರುವಾಗ, ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಅದಕ್ಕಾಗಿ ಹೋರಾಟ ಮಾಡಿ, ರಾಜಕೀಯಕ್ಕೆ ಹಾದಿ ಮಾಡಿಕೊಳ್ಳುವದರಲ್ಲಿ ಯಾವ ತಪ್ಪಿದೆ? ಬಡವರಿಗಾದ ಅನ್ಯಾಯಕ್ಕೆ ಧ್ವನಿ ಎತ್ತುವುದು ಯಾವ ತಪ್ಪು?

ನಮಗೆ ರಾಜಕೀಯ ಪಕ್ಷಗಳ ನಿಲುವು ನೊಂದವರ ಶೋಷಿತರ ಪರವಾಗಿರಬೇಕು. ತಿಮರೋಡಿಯೋ, ಕಮ್ಯುನಿಸ್ಟರೋ ಶೋಷಿತರಿಗಾಗಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಮೊಸರಲ್ಲಿ ಕಲ್ಲು ಹುಡುಕುವ ಸಿನಿಕತನ ಯಾಕೆ? ಅವರನ್ನು ದೂಷಿಸುವರಿಗೆ ಸೌಜನ್ಯಳ ಪರವಾಗಿ ಹೋರಾಡಲು, ನ್ಯಾಯಕ್ಕಾಗಿ ಕಿಂಚಿತ್ತಾದರೂ ಮಾಡಲು ಸಾಧ್ಯವಿದೆಯೇ? ಬೇರೆಯವರ ಹೋರಾಟವನ್ನು ಯಾಕೆ ತೆಗಳಬೇಕು?

ಎಷ್ಟು ಜನ ರಾಜಕಾರಣಿಗಳು ತಮ್ಮ ಪ್ರಣಾಳಿಕೆಯಲ್ಲಿ ಬಡವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬರೆದುಕೊಳ್ಳುತ್ತಾರೆ? ಎಲ್ಲರೂ ಜನರನ್ನು ಮರಳು ಮಾಡಲು ಬಳಸುವುದು ಅಗ್ಗದ ಪ್ರಚಾರ ತಂತ್ರವನ್ನ ತಾನೇ? ಬಡವರು ಒಂದು ರೂಪಾಯಿ ಅಕ್ಕಿಗೆ, ಬಿಪಿಲ್ ಕಾರ್ಡ್‌ಗೆ, ಆಶ್ರಯ ಮನೆ ಕೇಳಲು ಮಾತ್ರ ಅರ್ಹರೇ?

ಸರ್ಕಾರ, ಪೋಲೀಸ್ ಇಲಾಖೆ ಎಲ್ಲರೂ sowjanya-heggadeಪ್ರಭಾವಿಗಳ ಕೃಪಾಕಟಾಕ್ಷದಲ್ಲಿರುವಾಗ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವವರಾದರೂ ಯಾರು? ಅವರಿಗೆ ನ್ಯಾಯ ಕೇಳುವ ಹಕ್ಕಿಲ್ಲವೇ? ಯಾರಾದರೂ ಮುಂದೆ ಬಂದು ಧ್ವನಿ ಎತ್ತಿದರೆ ಆಗುವ ನಷ್ಟವಾದರೂ ಏನು? ಅನ್ಯಾಯವಾಗಿ ಯಾರದೋ ಕಾಮದಾಹಕ್ಕೆ ಬಲಿಯಾದ ಆಕೆಯ ಮೇಲೆ ಎಳ್ಳಷ್ಟೂ ಕನಿಕರ ತೋರದೆ, ಹೋರಾಟವನ್ನೇ ಆರೋಪಿಸಿದರೆ?

ಆಕೆಯ ಮನೆಯವರು ಆರೋಪಿಸಿದವರನ್ನು ಪೋಲಿಸರು ತನಿಖೆ ಮಾಡಿದ್ದು ತೀರಾ ಇತ್ತೀಚೆಗೆ ತಾನೆ? ಅಂದರೆ ಹೋರಾಟ ಆರಂಭವಾದ ಬಳಿಕ. ತನ್ನದೇ ಸಂಸ್ಥೆ, ತನ್ನದೇ ಗ್ರಾಮದ ಹುಡುಗಿಯ ಸಾವಿನ ತನಿಖೆಗೆ ಹಗ್ಗಡೆಯವರೇ ಮುಂದೆಬರಬಹುದಿತ್ತಲ್ಲ? ಕಮಿನಿಸ್ಟರೋ, ತಿಮ್ಮರೋಡಿಯೋ, ಪ್ರಗತಿಪರರೋ ಯಾಕೆ. ಸಿಬಿಐ ತನಿಖೆಗೆ ಒತ್ತಾಯಿಸಲು ಒಂದು ವರ್ಷದ ನಂತರದ ಹೋರಾಟ ಬೇಕಾಯಿತೋ? ಸಮಾಜ ಸುಧಾರಕ ಖಾವಂದರಿಗೆ, ಧರ್ಮನಿಷ್ಠರಿಗೆ ಕಾಲಬುಡದಲ್ಲೇ ಹೋದ ಅಮಾಯಕ ಜೀವ ಕಾಣಲೇ ಇಲ್ಲವೇ? ಯಾಕೆ ಬಡವರಿಗೆ ನ್ಯಾಯ ಎಂಬ ಉದಾಸೀನವೋ ಅಥವಾ ಅಸಡ್ಡೆಯೋ?

ತಾನೇ ಗೃಹಮಂತ್ರಿಗಳಿಗೆ ತನಿಖೆ ಮಾಡಿಸಿ ಎಂದ ಹೆಗ್ಗಡೆಯವರಿಗೆ ಸಿಬಿಐ ಹೋಗಲಿ ಕನಿಷ್ಠ ಪಕ್ಷ ಸಿಓಡಿ ತನಿಖೆ ಯಾವ ಮಟ್ಟದಲ್ಲಿದೆ ಎಂಬ ವಿಷಯವನ್ನಾದರೋ ಫಾಲೋಅಪ್ ಮಾಡಿ ತನಿಖೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬಹುದಿತ್ತಲ್ಲಾ?

ಅಷ್ಟಕ್ಕೂ ಸೋಮನಾಥ ನಾಯಕ್ ಹಾಗು ನರೇಂದ್ರ ನಾಯಕ್ ವ್ಯಥಾ ಯಾರ ಮೇಲೂ ಆರೋಪ ಹೊರಿಸುವವರಲ್ಲ. ಅವರು ಸೌಜನ್ಯ ಪ್ರಕರಣದಿಂದ ಲಾಭ ಮಾಡಿಕೊಂಡು ಯಾವ ಚುನಾವಣೆಯನ್ನೂ ಸ್ಫರ್ಧಿಸಬೇಕಿಲ್ಲ. ಹೆಗ್ಗಡೆಯವರ ವಿರುದ್ಧ ಆರೋಪಕ್ಕೆ ದಾಖಲೆ ಕೇಳುವವರು , ಸ್ವಸಹಾಯ ಸಂಘ, ಭೂ ಮಾಫಿಯಾಕ್ಕೆ ಸಂಬಂಧಿಸಿದ ಅವ್ಯವಹಾರಗಳಿಗೆ ಸೋಮನಾಥ ನಾಯಕರನ್ನು ಸಂಪರ್ಕಿಸಬಹುದು. ಅವರಲ್ಲಿ ಆರ್‌ಟಿಐ ಮೂಲಕ ಪಡೆದ ದಾಖಲೆಗಳಿವೆ. ಅದು ಸುಳ್ಳಾಗಲು ಸಾಧ್ಯವಿಲ್ಲ ಅಲ್ಲವೇ? ಧರ್ಮಸ್ಥಳದಲ್ಲಿ ಆದ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಈ ಮೊದಲೇ ಪ್ರಕಟವಾಗಿದೆ. ಪಿಪಿ ಹೆಗ್ಡೆಯಂತಹ ಲಾಯರ್ ಮಾನಹಾನಿ ಎಂಬ ಬ್ರಹ್ಮಾಸ್ತ್ರವನ್ನು ಹಿಡಿದು ನಿಂತಿರುವಾಗ ಯಾರೂ ಸುಳ್ಳು ಸುದ್ದಿ ಪ್ರಕಟಿಸುವಂತಹ ಹುಂಬತನ ಕೈ ಹಾಕುವುದಿಲ್ಲ. ಬೇಕಾದವರು ಆರ್‌ಟಿಐ ಮೂಲಕ ಅಸಹಜ JusticeForSowjanyaಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಪ ಸುಳ್ಳು ಎಂದು ಸಾಬೀತುಪಡಿಸಬಹುದು. ಇನ್ನೂ ಅಗತ್ಯವಿದ್ದರೆ ಧರ್ಮಸ್ಥಳದಲ್ಲಿ ತಿರುಗಾಡಿ ಜನರ ಹತ್ತಿರ ಮಾತನಾಡಿದರೆ ಸತ್ಯಸಂಧ, ಧರ್ಮಸಂಧರ ಬಗೆಗೆ, ಅಲ್ಲಿನ ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ಹೆಚ್ಚಿನ ವಿಷಯ ತಿಳಿಯುತ್ತದೆ.

ಅಷ್ಟಕ್ಕೂ ಈ ಎಲ್ಲಾ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ. ಸತ್ತದ್ದು ಯಾವುದೋ ಜೀವ, ಹತ್ತರೊಂದಿಗೆ ಇದು ಹನ್ನೊಂದನೇ ರೇಪ್ ಪ್ರಕರಣ ಅಂದುಕೊಂಡಾಗಲ್ಲ. ನಮ್ಮ ಮನೆಮಗಳಿಗೇ ಈ ಸ್ಥಿತಿ ಬಂದಿದ್ದರೆ? ಸೌಜನ್ಯಳ ಅಸಹಾಯಕ ತಂದೆತಾಯಿಯ ಸ್ಥಾನದಲ್ಲಿ ನಾವಿದ್ದಿದ್ದರೆ, ಇದೇ ಕೊಂಕು ಮಾತು ಹೇಳುತ್ತಿದ್ದೆವಾ?

2 comments

  1. ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಎಲ್ಲಿಯವರೆಗೆ ಧರ್ಮಸ್ಥಳದ ಗುಲಾಮರಾಗಿರುತ್ತಾರೋ ಅಲ್ಲಿಯವರೆಗೆ ಧರ್ಮಸ್ಥಳದಲ್ಲಿ ನಡೆಯುವ ಯಾವುದೇ ಅನ್ಯಾಯ, ಅನಾಚಾರ, ದೌರ್ಜನ್ಯಗಳಿಗೆ ನ್ಯಾಯ ಸಿಕ್ಕಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷವಾದ ಜೆಡಿಎಸ್ ಪಕ್ಷವು ಸೌಜನ್ಯ ಪ್ರಕರಣದಲ್ಲಿ ಚಕಾರವೆತ್ತುತ್ತಿಲ್ಲ. ಮತ್ತೊಂದು ವಿರೋಧ ಪಕ್ಷವಾದ ಬಿಜೆಪಿಯ ಆಡಳಿತದ ಅವಧಿಯಲ್ಲಿಯೇ ಈ ಪ್ರಕರಣ ನಡೆದ ಕಾರಣ ಅದಕ್ಕೆ ಈ ಬಗ್ಗೆ ಧ್ವನಿಯೆತ್ತುವ ನೈತಿಕತೆಯೇ ಇಲ್ಲ. ರಾಜ್ಯದಲ್ಲಿ ಕಮ್ಯುನಿಷ್ಟರು ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ ಈ ಪ್ರಕರಣದಲ್ಲಿ ಅಧಿಕೃತ ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಜನರ ಧ್ವನಿಯಾಗಿದ್ದಾರೆ. ಇದಕ್ಕಾಗಿ ಅವರ ಈ ಶ್ರಮವನ್ನು ಮೆಚ್ಚಬೇಕು. ಬಹುಶ: ರಾಜ್ಯದಲ್ಲಿ ನೈತಿಕತೆ ಉಳಿಸಿಕೊಂಡಿರುವ ಪಕ್ಷ ಇದೊಂದೇ. ಉಳಿದ ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಅಕ್ಕತಂಗಿಯರು ಯಾರೂ ಇಲ್ಲವೆಂದು ಕಾಣುತ್ತದೆ ಹಾಗಾಗಿ ಅವರಿಗೆ ಜನರ ನೋವು ಅರ್ಥವಾಗಲಿಕ್ಕಿಲ್ಲ. ದನಗಳನ್ನು ಸಾಗಾಟ ಮಾಡುವವರ ಮೇಲೆ ಮುಗಿಬೀಳುವ, ವಿಭಿನ್ನ ಧರ್ಮಗಳ ಗಂಡು ಹೆಣ್ಣುಗಳು ಒಟ್ಟಿಗೆ ಕಂಡರೆ, ಮಾತಾಡಿದರೆ ಕಾನೂನು ಕೈಗೆತ್ತಿಕೊಳ್ಳುವ ರಕ್ಕಸರಿಗೆ ಸೌಜನ್ಯ ಅತ್ಯಾಚಾರ, ಕೊಲೆ ನಡೆದು ಒಂದು ವರ್ಷವಾದರೂ ನ್ಯಾಯಕ್ಕಾಗಿ ಧ್ವನಿ ಎತ್ತಲು ನಾಲಿಗೆ ಇಲ್ಲ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಷ್ಟರು ಜನರಿಗೆ ಆಶಾಕಿರಣವಾಗಿ ಕಂಡರೆ ಅಚ್ಚರಿ ಇಲ್ಲ

Leave a Reply

Your email address will not be published.