ತುಝೆ ಚಲ್ನಾ ಹೋಗ, ತುಝೆ ಚಲ್ನಾ ಹೋಗ

– ಶ್ರೀಪಾದ ಭಟ್

ಕೆಲವು ತಿಂಗಳ ಹಿಂದೆಯಷ್ಟೇ ಹಿಂದಿ ಚಿತ್ರರಂಗದ ಮಹಾನ್ ಗಾಯಕಿ ಶಂಶಾದ್ ಬೇಗಂ ತೀರಿಕೊಂಡಿದ್ದರು. ನಿನ್ನೆ ಮತ್ತೊಬ್ಬ ಮಹಾನ್ ಗಾಯಕ ಮನ್ನಾಡೆ ನಿಧನರಾಗಿದ್ದಾರೆ. ಇವರಿಬ್ಬರೂ ತೀರಿಕೊಂಡಾಗ ಅವರು ವಯಸ್ಸು 90 ರಿಂದ 95 ವರ್ಷಗಳು. ಇದೊಂದೇ ಅಲ್ಲ ಇವರ ನಡುವೆ ಇನ್ನೂ ಹಲವಾರು ಸಾಮ್ಯತೆಗಳಿವೆ. ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ತಮ್ಮ ತಲೆಮಾರಿನ ಜನಪ್ರಿಯ ಗಾಯಕ/ಗಾಯಕಿಯರಾದ ಮಹಮದ್ ರಫಿ, ಮುಖೇಶ್, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆರಂತಹವರ ನೆರಳಿನಲ್ಲಿ, ಸೆಕೆಂಡ್ ಲೆವೆಲ್‌ನಲ್ಲಿ ಬದುಕಿದ್ದರು. ಆದರೆ ಶಂಶಾದ್ ಬೇಗಂ ಮತ್ತು ಮನ್ನಾಡೆ ಅವರೆಲ್ಲರಿಗಿಂತಲೂ ತಮ್ಮ ಭಿನ್ನತೆ ಕಾಪಾಡಿಕೊಂಡಿದ್ದರು. Manna_Deyಇವರಿಬ್ಬರ ಕಂಠದ, ಹಾಡುಗಳ ಅನನ್ಯತೆ ಅದ್ಭುತವಾದದ್ದು. ಏಕೆಂದರೆ ದೇವ್ ಆನಂದ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್. ಶಮ್ಮಿ ಕಪೂರ್‌ರಂತಹ ಸೂಪರಸ್ಟಾರ್‌ಗಳ ಕಂಠವಾಗಿದ್ದವರು ಮಹಮದ್ ರಫಿ. ರಾಜ ಕಪೂರ್, ಮನೋಜ್ ಕುಮಾರರಂತಹ ನಟರಿಗೆ ಕಂಠವಾಗಿದ್ದವರು ಮುಖೇಶ್. ರಾಜೇಶ್ ಖನ್ನಾ, ದೇವ್ ಆನಂದ್ ರವರಿಗೆ ಕಂಠವಾಗಿದ್ದವರು ಕಿಶೋರ್ ಕುಮಾರ್. ಆದರೆ ಶಂಶಾದ್ ಬೇಗಂ ಮತ್ತು ಮನ್ನಾಡೆ ಯಾವುದೇ ನಟ/ನಟಿಯೊಂದಿಗೆ ಗುರುತಿಸಿಕೊಳ್ಳದೆ ಬದಲಾಗಿ ಶಂಶಾದ್ ಬೇಗಂ ಎಂದೇ ಮತ್ತು ಮನ್ನಾಡೆ ಎಂದೇ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿದ್ದರು. ಇವರಿಬ್ಬರ ಮತ್ತೊಂದು ಗುಣವೆಂದರೆ ಜನಪ್ರಿಯತೆಗೆ ಬೆನ್ನು ಹಾಕಿ ಒಂದು ಬಗೆಯ Low Profile ಜೀವನ ನಡೆಸಿದರು. ಖ್ಯಾತಿವಂತರಾಗಿದ್ದರೂ ತಮ್ಮದೇ ಆದ ಒಂದು ಕಟ್ಟುನಿಟ್ಟಿನ, ಮುಗ್ಧತೆಯೇ ಮೈವೆತ್ತಂತಹ ಬಾಳು ಸಾಗಿಸಿದರು.

ಕೌನ್ ಆಯಾ ಮೇರೆ ದಿಲ್ ಕೆ ದ್ವಾರೆ ಪಾಯಲ್ ಕಿ ಝನ್‌ಕಾರ್ ಲಿಯೇ, ಧರ್ತಿ ಕಹೆ ಪುಕಾರ್ ಕೆ, ಮೌಸಮ್ ಬೀತಾ ಜಾ ಐ ಮೇರೆ ಪ್ಯಾರೇ ವತನ್, ಐ ಮೇರೆ ಬಿಗಡೇ ಚಮನ್, ಮುಡು ಮುಡುಕೇನ ದೆಖ್ ಮುಡುಮುಡುಕೆ, ನೈನ್ ಮಿಲೆ ಚೈನ್ ಕಹಾ, ಸುರ್ ನ ಸಜೆ, ಜಿಂದಗಿ ಕೈಸಿ ಹೈ ಪಹೇಲಿ, ಕಭಿ ತೊ ಹಸಾಯೆ ಕಭಿ ತೊ ರುಲಾಯೆ, ತೂ ಪ್ಯಾರ್ ಕ ಸಾಗರ್ ಹೈ, ಪೂಛೋನ ಮೈನೆ ಕೈಸೆ, ಲಾಗಾ ಚುನುರೀ ಮೆ ದಾಗ್, ಯೆ ರಾತ್ ಭೀಗೀ ಭೀಗೀ, ಚಲತಾ ಮುಸಾಫಿರ್ ಮೊಹಲಿಯರೇ, ಯಾರೀ ಹೈ ಇಮಾನ್ ಮೇರ ಯಾರ್ ಮೇರಿ ಜಿಂದಗಿ, ಕಸ್ಮೆ ವಾದೆ ಪ್ಯಾರ್ ವಫಾ, ತುಜೆ ಸೂರಜ್ ಕಹೂ ಯ ಚಂದಾ, ನದಿಯಾ ಚಲೇ ರೆ ಧಾರ, ತುಜೆ ಚಲ್ನಾ ಹೋಗ, ಹೀಗೆ ಎಣೆಯಿಲ್ಲದ ನೂರಾರು ಹಾಡುಗಳನ್ನು ಅದ್ಭುತವಾಗಿ ಹಾಡಿದರು ಮತ್ತು ನಮ್ಮನ್ನೆಲ್ಲ ಮೋಡಿಗೊಳಿಸಿದರು. ಬಸಂತ್ ಬಹಾರ್ ಚಿತ್ರದಲ್ಲಿ ಭೀಮಸೇನ್ ಜೋಶಿಯವರೊಂದಿಗೆ ಜುಗಲ್ ಬಂದಿಯನ್ನು ಸರಿಸಮನಾಗಿ ಹಾಡಿದ್ದರು. ಆದರೆ ಕಡೆಗೂ ಮನ್ನಾಡೆ ತಾನು ಮುಟ್ಟಬೇಕಾದ ನಂ.1 ಸ್ಥಾನವನ್ನು ತಲುಪಲೇ ಇಲ್ಲ. ಇದಕ್ಕೆ ಸ್ವತಃ ಮನ್ನಾಡೆಯವರ ಸಂಕೋಚದ, ಇದ್ದುದರಲ್ಲೇ ತೃಪ್ತಿ ಪಡುವಂತಹ ಗುಣ ಮತ್ತು ಮಹತ್ವಾಕಾಂಕ್ಷಿಯಾಗಲೊಲ್ಲದ ವ್ಯಕ್ತಿತ್ವ ಮೂಲಭೂತ ಕಾರಣಗಳಾದರೆ ಹಿಂದಿ ಸಿನಿಮಾ ರಂಗದ ನಿಗೂಢತೆ, ಮಾಯೆ, ಐಶ್ವರ್ಯಗಳನ್ನು ಮನ್ನಾಡೆ ಅರಿಯದೇ ಹೋದದ್ದು ಮತ್ತೊಂದು ಕಾರಣವಿರಬಹುದೇನೋ.

ಶಂಕರ್ ಜೈ ಕಿಶನ್, ಓ.ಪಿ.ನಯ್ಯರ್, ಮದನ್ ಮೋಹನ್, ಅನಿಲ್ ಬಿಶ್ವಾಸ್, ಎಸ್.ಡಿ.ಬರ್ಮನ್, ರೋಶನ್, ಸಲೀಲ್ ಚೌಧುರಿ, ವಸಂತ್ ದೇಸಾಯಿಯವರಂತಹ ಪ್ರಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಹಾಡಿದ ಮನ್ನಾಡೆ ನಮ್ಮಂತಹ ಅಸಂಖ್ಯಾತ ಅಭಿಮಾನಿಗಳಿಗೆ ಆದರ್ಶವಾಗಿದ್ದರು. ಅಂದರೆ ಒಂದು ಬಗೆಯ ಮೀಡಿಯೋಕರ್ ವ್ಯಕ್ತಿತ್ವದವರಿಗೆ, ಆರಕ್ಕೇರದೆ ಮೂರಕ್ಕಿಳಿಯದಂತಹವರಿಗೆ ಈ ಮಿತಿಗಳ ನಡುವೆಯೂ ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸಬಹುದೆಂದು ತೋರಿಸಿಕೊಟ್ಟಿದ್ದು ಮನ್ನಾಡೆ. ರೋಮ್ಯಾಂಟಿಕ್ ಅಥವಾ ದುಖಃಭರಿತ ಹಾಡುಗಳನ್ನು ಆ ಸನ್ನಿವೇಶಕ್ಕೆ ಅನುಗುಣವಾಗಿ ಉಚ್ಛ್ರಾಯ ಗತಿಯಲ್ಲಿ ಹಾಡಿ ಪ್ರೇಕ್ಷಕರಲ್ಲಿ ಹುಚ್ಚೆಬ್ಬಿಸುವಂತೆ ಹಾಡುವುದು ಮನ್ನಾಡೆಯವರ ಶೈಲಿ ಅಲ್ಲವೇ ಅಲ್ಲ. ಇದೇ ನಿಮ್ಮ ಮಿತಿಯಾಗಿತ್ತಲ್ಲವೇ ಎಂಬ ಪ್ರಶ್ನೆಗೆ manna-deyಸುಮ್ಮನೆ ಮುಗುಳ್ನಗುತ್ತಿದ್ದರು ಮನ್ನಾಡೆ. ನೌಶಾದ್ ಸಾಬ್ ಸಹ ಮನ್ನಾಡೆಯವರ ಧ್ವನಿ ರೋಮ್ಯಾಂಟಕ್ ಹಾಡುಗಳಿಗೆ ಬೇಕಾದಂತಹ ಧ್ವನಿಯ ಇಲ್ಲವೆಂದೆ ಅಪಸ್ವರ ಎತ್ತಿದ್ದರು. ಇವರದು ನದಿಯ ಜುಳು ಜುಳು ಎನ್ನುವ ಆದ್ರತೆ ಮತ್ತು ಸಮ್ಮೋಹನಕರ. ಅಲ್ಲದೆ ಮನ್ನಾಡೆ ಹಿಂದಸ್ತಾನಿ ಶಾಸ್ತ್ರೀಯ ಶೈಲಿಯಲ್ಲಿ ಗಳಿಸಿದ ನೈಪುಣ್ಯತೆ ಮತ್ತು ಈ ಹಿಂದುಸ್ತಾನಿ ಸಂಗೀತದಲ್ಲಿನ ಪರಿಣಿತಿಯನ್ನು ಚಲನಚಿತ್ರದ ಹಾಡುಗಳಿಗೆ ಅದ್ಭುತವಾಗಿ ಉಪಯೋಗಿಸಿಕೊಂಡ ಮನ್ನಾಡೆ ದಿನನಿತ್ಯ ರಿಯಾಜ್ ಮಾಡುತ್ತಿದ್ದರು. ಇದೂ ಕೂಡ ನಮಗೆ ಒಂದು ಪಾಠ. ಮಲ್ಹಾರ್, ಯಮನ್, ಶುದ್ದ ಸಾರಂಗ್, ಬಹಾರ್, ಮುಧು ರಂಜನಿಯಂತಹ ಹಿಂದುಸ್ತಾನಿ ರಾಗಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸುಲಲಿತವಾಗಿ ಹಾಡುತ್ತಿದ್ದರು ಮನ್ನಾಡೆ. ಇದಕ್ಕೆಂದೇ ಇರಬೇಕು ಎಪ್ಪತ್ತರ ದಶಕದ ವೇಳೆಗೆ ಶಾಸ್ತ್ರೀಯ ರಾಗಗಳ ಆಧಾರಿತ ಸಿನಿಮಾ ಗೀತೆಗಳು ಹಿನ್ನೆಲೆಗೆ ಸರಿಯತೊಡಗಿದಾಗ ಮನ್ನಾಡೆಯಂತಹ ಗಾಯಕರು ಮಂಕಾಗತೊಡಗಿದರು. ಅನೇಕ ವೇಳೆ ಏಕ್ ಚತುರ ನಾರ್ ಬಡೆ ಹೋಶಿಯಾರ್, ಆ ವೋ ಟ್ವಿಸ್ಟ್ ಕರೇ, ಗಳಂತಹ ತನಗೊಪ್ಪದ, ಸಾಧಾರಣ ಹಾಡುಗಳನ್ನು ಹಾಡುವಂತ ಸ್ಥಿತಿಗೆ ತಲುಪಿದರು ಮನ್ನಾಡೆ. ನಂತರ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕಿಶೋರ್ ಕುಮಾರ್ ಅವರ ಅಲೆಯಲ್ಲಿ ಹೆಚ್ಚೂ ಕಡಿಮೆ ತಣ್ಣಾಗಾಗದರು. ಇದರ ಕುರಿತಾಗಿಯೂ ಅವರಲ್ಲಿ ವೇದನೆ, ಬೇಸರ ಇದ್ದಂತಿಲ್ಲ..

ಬದುಕಿದ್ದಾಗ ಭೌತಿಕವಾಗಿ ಯಾರೊಂದಿಗೂ ಬೆರೆಯದೆ ಒಂಟಿಯಾಗಿದ್ದ ಮನ್ನಾಡೆ ತಮ್ಮ ಗೀತೆಗಳ ಮೂಲಕ ನಮ್ಮೊಂದಿಗಿದ್ದರು, ಆದರೆ ಮನ್ನಾಡೆ ಇಂದು ನಮ್ಮೊಂದಿಗಿಲ್ಲ ಆದರೂ ಅವರ ಕಂಠ ನಮ್ಮೊಳಗೆ ಹಾಡುತ್ತಲೇ ಇರುತ್ತದೆ ತುಜೆ ಚಲ್ನಾ ಹೋಗ, ತುಜೆ ಚಲ್ನಾ ಹೋಗ.

2 comments

  1. ನಿಜವಾಗಿಯೂ ಮನ್ನಾ ದಾ ಅವರು ಸರಳ ವ್ಯಕ್ತಿತ್ವದ ಅದ್ಭುತ ಗಾಯಕ. ಹಳೆ ಕಾಲದ ಹಲವಾರು ಹಿಂದಿ ಚಿತ್ರಗೀತೆಗಳನ್ನು ಕೇಳಿದ, ಕೇಳುತ್ತಲೇ ಇರುವ ನನಗೆ ಮನ್ನಾ ದಾ ಅವರ ಗಾಯನ ಯಾವತ್ತೂ ಬಹಳ ವಿಭಿನ್ನ ಅನುಭವವನ್ನು ನೀಡುತ್ತಿತ್ತು. ನೀವು ಅಂದ ಹಾಗೆ ಅವರ ಆದ್ರ ಸ್ವರ ಬಲು ಸಮ್ಮೋಹಕ. `ಬದುಕಿದ್ದಾಗ ಭೌತಿಕವಾಗಿ ಯಾರೊಂದಿಗೂ ಬೆರೆಯದೆ ಒಂಟಿಯಾಗಿದ್ದ ಮನ್ನಾಡೆ ತಮ್ಮ ಗೀತೆಗಳ ಮೂಲಕ ನಮ್ಮೊಂದಿಗಿದ್ದರು, ಆದರೆ ಮನ್ನಾಡೆ ಇಂದು ನಮ್ಮೊಂದಿಗಿಲ್ಲ ಆದರೂ ಅವರ ಕಂಠ ನಮ್ಮೊಳಗೆ ಹಾಡುತ್ತಲೇ ಇರುತ್ತದೆ’ ಎಂಬುದು ಒಪ್ಪುವಂಥದೆ.

  2. Manna Dey is a legend: His effortless rendition of classical raagas reverberate in our souls.No amount of contemporary tunes can pose any challenge to the inner peace that Manna Dey’s songs light up.Timeless. Truely ” thuu pyaar ka saagar hai”.

Leave a Reply

Your email address will not be published.