“ಬೆಂದಕಾಳೂರು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ವಿಜಯ್ ಹೂಗಾರ್

ಯಾವುದೂ ಪೂರ್ಣವಾಗಿಲ್ಲ, ಯಾವುದೂ ಪೂರ್ಣವಾಗುವದಿಲ್ಲ. ನನ್ನೊಳಗೆ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂದುಕೊಂಡೆ ನನ್ನ ಬರವಣಿಗೆಯನ್ನ ಆರಂಭಿಸಿದ್ದೇನೆ. ಕೆಲವು ಕಥೆಗಳಾಗಿ ನನ್ನಿಂದ ಮುಕ್ತಿ ಪಡೆದವು. ಇನ್ನು ಕೆಲವು ಆತ್ಮಕಥೆಯಾಗಲು ನನ್ನಲ್ಲೇ ಬಂಧಿಯಾಗಿವೆ. ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳಾಗಿಯೇ ಹೋಗಿದ್ದವು. ಅಂದುಕೊಂಡ ಕೆಲಸ ಇದ್ದ ಜಾಗದಲ್ಲೇ ಸತ್ತು ಹೋಗಿತ್ತು. ಸಾವೇ ಇಲ್ಲದ ಯುಗಕ್ಕೆ ದಿನಗಳು ಸಂತಾನವಾಗಿ ಹುಟ್ಟುತ್ತಿದ್ದವು. ದಿನದ ಸಾವು ಮರುದಿನಕ್ಕೆ ‘ಖೋ’ ಕೊಟ್ಟಂತೆ. ಈ ಆಟದಲ್ಲಿ ನಮ್ಮ ಓಟ ನಿರಂತರ. ಮೈ ಮರೆಯುವ ಹಾಗಿಲ್ಲ. ಮರೆತರೆ ಅಂದಿನ ದಿನದ ಸಾವು ತನ್ನ ಜೊತೆಗೆ ನಮ್ಮನ್ನು ಕರೆದೊಯ್ಯುತ್ತದೆ.

***

ಚಿರತೃಷೆ

ಕತ್ತಲಿಗೆ ಸದಾ ಹಲ್ಲು ಕಿರಿದು ನಿಂತ ಬೀದಿ ದೀಪಕ್ಕೆ ಶಾಂತಿ ಸಿಕ್ಕಿದ್ದು ಹಗಲು ತನ್ನ ಕಾಲಿಂದ ನಸುಕು ಅಳಿಸಿ ಹಾಕಿದಾಗ. ಅಂದಿನ ಮುಂಜಾವಿನ ತುಂತುರು ಮಳೆ, ಗುರಿಯಿಟ್ಟು ಕಾಲಿಡುತ್ತಾ ರಸ್ತೆ ದಾಟುವ ಸಕಲ ಮನುಕುಲದ ಬೈಗುಳಕ್ಕೆ ಬಲಿಯಾಗಿತ್ತು ಮಳೆ. ನೆರಿಗೆಯಲಿ ತೋಯ್ದು ಒದ್ದೆಯಾದ ಬೆಳಕು ಕೆಳಗಿಳಿಯದೆ ಮೋಡದಲ್ಲೇ ಅಡಗಿಕೊಂಡಿತ್ತು. ಅಕ್ಟೋಬರ್ ಎರಡರ ಪ್ರಯುಕ್ತ ಇಡಿ ಬೆಂಗಳೂರೇ ರಜೆಯ ಮಜೆಯಲ್ಲಿತ್ತು. ಕೆಲವು ಶಾಲೆಯ ಆವರಣಗಳು, ಸರಕಾರಿ ದಫ್ತರುಗಳು ಬೆಳಗಿನ ಕೆಲ ಕಾಲ ಬಿಗಿ ಹಿಡಿದ ಉಸಿರಿನಂತೆ ಜಾಗೃತವಾಗಿದ್ದವು. ಅಲ್ಲಲ್ಲಿ ಬಿಳಿ ಬಟ್ಟೆ ಧರಿಸಿ ಅಮ್ಮನ ಕೈ ಹಿಡಿದು ನಾಜೂಕಾಗಿ ಹೆಜ್ಜೆ ಇಡುತ್ತ ನಡೆಯುವ ಮಕ್ಕಳು ಶಾಲೆಯ ತಲುಪುವ ಅವಸರದಲ್ಲಿದ್ದರು.

ಮುಂಜಾವ ಮಳೆ ಕೆಲವರಿಗೆ ಕಾಫಿ ಕುಡಿಯುವ ನಶೆ ಏರಿಸುತ್ತದೆ. ರಾತ್ರಿಯಿಡಿ ಫ್ಲೈ ಓವರ್ ಕೆಳಗೆ ನಡಗುತ್ತ ಕುಳಿತ ಜನರಿಗೆ ಚಿರನಿದ್ರೆಗೆ ಕೈ ಬೀಸಿ ಕರೆಯುತ್ತದೆ. ಇನ್ನೂ ಕೆಲವರಿಗೆ ಹಳೆ ನೆನಪಿನ ಹೊಸ ಹೊನಲು ತರಿಸುತ್ತದೆ. ಪೇಪರ್ ಹಾಕುವ ಹುಡುಗನಿಗೆ ಜೊತೆಗೊಂದು ಪ್ಲಾಸ್ಟಿಕ್ ಕವರ್ ಜೊತೆ ತರಲು ನೆನಪಿಸುತ್ತದೆ. ಕೆಲವರಿಗೆ ಮೊದಲ ಮಳೆಯಲಿ ಪ್ರೇಯಸಿಗೆ ಮುತ್ತಿಡುವಂತೆ ಒತ್ತಾಯಿಸುತ್ತದೆ. ಇನ್ನೂ ಕೆಲವರಿಗೆ ಕೊರೆವ ಚಳಿ ಮೈ ಮುಚ್ಚುವ ಬಟ್ಟೆಗೆ ಪರಿತಪಿಸುವಂತೆ ಮಾಡುತ್ತದೆ. ಮಳೆಯ ಲೀಲೆಯೇ ಅಪಾರ. ಅವರವರ ಗ್ರಹಿಕೆಗೆ ಮಳೆ ತನ್ನ ಮಗ್ಗುಲು ಬದಲಾಯಿಸುತ್ತದೆ.

ಭಗ್ನ ಸೇತುವೆಯಂತೆ ಅರ್ಧಕ್ಕೆ ನಿಂತ ಫ್ಲೈ ಓವರ್ ಪಕ್ಕ ಎರಡು ಅಂತಸ್ತಿನ ವಾಣಿಜ್ಯ ಮಳಿಗೆಯ ಮೂಲೆಯಲ್ಲಿ ವಿನಾಯಕ್ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್ ಅನ್ನುವ ಮಳೆಗೆಯೊಂದು ಬಹುದಿನದಿಂದ ನೆಲೆಯುರಿತ್ತು. ವಿಶಾಲವಾದ ಒಳಗಂಗಣದಲ್ಲಿ ಸುಮಾರು ಇಪ್ಪತ್ತು ಕಂಪ್ಯೂಟರ್ ಇಟ್ಟಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. artಒಂದು ಸಾಲಿನಲ್ಲಿ ಹತ್ತು ಕಂಪ್ಯೂಟರ್ ಮತ್ತದರ ಅಭಿಮುಖವಾಗಿ ಮಿಕ್ಕ ಹತ್ತು ಕಂಪ್ಯೂಟರ್‌ಗಳು ನಡುವೆ ಓಡಾಡುವ ಜನರ ಅನಾಗರಿಕ ದೃಷ್ಟಿಯ ಪಾಲಾಗಿತ್ತು. ಇದರ ಮಾಲೀಕ ವಿನಾಯಕ ಮದುವೆಯಾಗಿ ಕೆಲ ವರ್ಷಗಳ ಬಳಿಕ ಹೆಂಡತಿಯನ್ನು ಕಳೆದುಕೊಂಡಿದ್ದ. ಬದುಕಿದ್ದಾಗ ಆಗಾಗ ಬಂದು ಲೆಕ್ಕ ಸಂಭಾಳಿಸುತ್ತಿದ್ದಳು. ಕಂಪ್ಯೂಟರ್ ಬಳಸುವ ಇನ್ ಟೈಮ್, ಔಟ್ ಟೈಮ್ ಎಲ್ಲ ವ್ಯವಸ್ಥಿತವಾಗಿ ಬರೆದಿಡುತ್ತಿದ್ದಳು. ಅವಳ ಆಕಸ್ಮಿಕ ಸಾವಿನ ನಂತರ ಲೆಕ್ಕ ಬರೆದಿಡಲು ಕೆಲ ಹುಡುಗರಿಗೆ ಕೆಲಸಕ್ಕೆ ಇಟ್ಟುಕೊಂಡಿದ್ದ. ಆದರೆ ಯಾರೂ ಅಲ್ಲಿ ತುಂಬಾ ದಿವಸ ಕೆಲಸ ಮಾಡುತ್ತಿರಲಿಲ್ಲ. ಕಾರಣ ಮಾತ್ರ ತಿಳಿಯುತ್ತಿರಲಿಲ್ಲ. ಅದೇ ಹೊತ್ತಲ್ಲಿ ಗೆಳೆಯ ಸುಧಾಂಶುವಿನ ಶಿಫಾರಸಿನಿಂದ ನಿಶೀಥ ಅಲ್ಲಿ ಕೆಲಸಕ್ಕೆ ಸೇರಿದ್ದ.

ನಿಶೀಥ ಬೆಂಗಳೂರಿನಲ್ಲಿ ಮಾಡಿರದ ಕೆಲಸವೇ ಉಳಿದಿರಲಿಲ್ಲ. ಬೂಟ್ ಪಾಲಿಶು, ಬ್ಲಾಕ್ ಟಿಕೆಟ್ ಮಾರೋದು, ‘ರೇ ಬ್ಯಾನ್’ ಹೆಸರಿನ ಖೋಟಾ ತಂಪು ಕನ್ನಡಕ ಮಾರೋದು, ತಳ್ಳು ಗಾಡಿಯಲಿ ಸೋವಿ ದರದ ಇಂಗ್ಲಿಷ್ ಪುಸ್ತಕ ಮಾರೋದು, ಫುಟ್‌ಪಾತಿನಲ್ಲಿ ಹತ್ತು ರೂಪಾಯಿಗೆ ಎರಡು ಬಿಳಿ ಬಣ್ಣದ ಕರ್ಚಿಫು ಮಾರೋದು, ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿ ಕೊನೆಗೆ ಇಲ್ಲಿ ಬಂದು ನಿಂತಿದ್ದ. ಇರಲು ಮನೆ ಇರಲಿಲ್ಲ. ಅದಕ್ಕೆ ಮಾಲೀಕ ಅದೇ ಮಹಡಿಯ ಅವನ ಸ್ಟೋರ್ ರೂಮ್‌ನಲ್ಲಿ ಸ್ವಲ್ಪ ಜಾಗ ಮಾಡಿ ಸೂರು ಕೊಟ್ಟಿದ್ದ.

ಬೆಂಗಳೂರಿಗೆ ಬಂದು ಅದೆಷ್ಟೋ ವರ್ಷಗಳೇ ಆದ ನಿಶೀಥನಿಗೆ ತಾನು ಬಂದ ಕಾರಣವೇ ಮರೆತು ಹೋದಂತಾಗಿತ್ತು. ಪಿಯುಸಿಯಲ್ಲಿ ಪ್ರೀತಿ ಮಾಡಿ ಓಡಿ ಮದುವೆಯಾಗಿ ಬಂದು ಸ್ವಲ್ಪ ದಿವಸ ಸಂಸಾರ ಮಾಡಿದ್ದ. ಮದುವೆಯಾದ ಕೆಲವು ದಿನಗಳಲ್ಲಿ ಹುಡುಗಿ ಮತ್ತೆ ತವರು ಮನೆಗೆ ಓಡಿ ಹೋಗಿದ್ದಳು. ವರ್ಷಗಳ ಹಿಂದೆ ಹಾಕಿದ್ದ ಡೈವೋರ್ಸ್ ಮೊನ್ನೆ ಕ್ಲಿಯರ್ ಆಗಿ ಈಗ ಒಂಟಿಯಾಗಿದ್ದಾನೆ. ಊರಿಗೆ ಹೋಗಬಹುದಲ್ಲ ಅಂತ ಯಾರಾದರು ಕೇಳಿದರೆ ಅವನು ಇನ್ಯಾವ ಮುಖ ಇಟ್ಕೊಂಡ್ ಹೋಗಲಿ ಇಲ್ಲೇ ಏನಾದ್ರು ಮಾಡಿ ಜೀವನ ಸಾಗಸ್ತಿನಿ ಅಂತ ಹೇಳ್ತಿದ್ದ. ಕೊನೆಗೂ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್‌ನಲ್ಲಿ ಸಿಕ್ಕ ಕೆಲಸ ಅವನಿಗೆ ಸೂರು ಮತ್ತು ಊಟಕ್ಕೆ ಸರಿ ಹೋಗುತ್ತಿತ್ತು. ಪ್ರತಿ ದಿನ ಸಾವಿರಾರು ರೂಪಾಯಿಗಳ ವ್ಯವಹಾರ ಆಗುತ್ತಿತ್ತು. ಮಳಿಗೆಯ ಪಕ್ಕದ ರಸ್ತೆಯಲ್ಲೇ ಒಂದು ಪಿಯು ಕಾಲೇಜ್ ಇದ್ದುದ್ದರಿಂದ ಸೀಸನ್‌ಗಳ ಹಂಗಿಲ್ಲದೆ ಸದಾ ಜನಭರಿತ ವಾಗಿರುತ್ತಿತ್ತು.‍

ಕೆಲಸಕ್ಕೆ ಸೇರಿದ ಮೊದಮೊದಲು ಕೆಲಸದ ಮೇಲೆ ತುಂಬಾ ಆಸಕ್ತಿ ಇಟ್ಟಿಕೊಂಡಿದ್ದ. ಬಂದವರ ಐ.ಡಿ ಕಾರ್ಡ್ ಕೇಳಿಯೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಲು ಕೊಡುತ್ತಿದ್ದ. ಸಮಯ ಮುಗಿದ ತಕ್ಷಣ ಮಾಸ್ಟರ್ ಕಂಪ್ಯೂಟರ್‌ನಿಂದ ಕನೆಕ್ಷನ್ ಕೀಳುತ್ತಿದ್ದ. ಗೋಡೆಗಳ ಮೇಲೆಲ್ಲಾ ‘ಧೂಮಪಾನ ನಿಷೇಧಿಸಿದೆ’, ‘ಇಲ್ಲಿ ಉಗುಳಬಾರದು’, ‘ಗಂಟೆಗೆ ಇಂತಿಷ್ಟು ಮತ್ತೆ ಮಿನಿಮಂ ಇಂತಿಷ್ಟು’ ಅಂತ ನಾಮಫಲಕಗಳೆಲ್ಲ ಹಾಕಿಸಿದ್ದ. ಒತ್ತಾಯದ ಮೇರೆಗೆ ಮಾತ್ರ ಹೆಡ್‌ಫೋನ್ ಕೊಡುತ್ತಿದ್ದ. ಮಾಲೀಕ ಬಂದ ತಕ್ಷಣ ಎಲ್ಲ ಲೆಕ್ಕ ಸರಿಯಾಗಿ ನೀಡುತ್ತಿದ್ದ.

ದಿನ ಕಳೆದಂತೆ ಕೆಲವು ಅಹಿತಕರವಾದ ಘಟನೆಗಳು ಅವನ ಗಮನಕ್ಕೆ ಬರುತ್ತಾ ಹೋದವು. ಕೀ ಬೋರ್ಡ್ ಮತ್ತು ಮೌಸ್ ಯಾವಾಗಲು ಹಸಿಯಾಗಿ ಜಿಗುಟಾಗಿರುತ್ತಿತ್ತು. ಕ್ಯಾಬಿನ್‌ನಿಂದ ವಿಚಿತ್ರವಾದ ಸದ್ದು ಬರುತ್ತಿತ್ತು. ಸಂಜೆ ಬಾಗಿಲು ಹಾಕಲು ಹೋಗುವ ಮೊದಲು ಎಲ್ಲ ಕಂಪ್ಯೂಟರ್ ಆಫ್ ಮಾಡುವಾಗ ಅಸಂಖ್ಯಾತ ನೀಲಿಚಿತ್ರಗಳು ಡೌನ್ಲೋಡ್ ಆಗಿ ಬಿದ್ದಿರುತ್ತಿದ್ದವು.

ದಿನ ಕಳೆದಂತೆ ಎಲ್ಲವು ಸರ್ವೇ ಸಾಮಾನ್ಯ ಅಂತ ತಿಳಿಯುತ್ತಾ ಬಂತು. ಅಲ್ಲಿಗೆ ಬರುವ ಹುಡುಗರು ಒಳ ಹೊಕ್ಕರೆ ಎರಡು, ಮೂರು ಗಂಟೆಗಳು ಹೊರ ಬರುತ್ತಲೇ ಇರಲಿಲ್ಲ. ಕಣ್ಣಲ್ಲಿ ವಿಪರೀತ ದಾಹವೊಂದರ ನಾಲಿಗೆ ಸದಾ ಹೊರಚಾಚಿರುತ್ತಿತ್ತು. ಮರಭೂಮಿಯ ಚಿರತೃಷೆಯಂತೆ. ಅದೇನೋ ಸಂತೃಪ್ತವಲ್ಲದ ಭಾವ. ಅದ್ಯಾವದೋ ತುರ್ತು ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದವರ ಹಾಗೆ, ಏನೋ ಕಳೆದುಕೊಂಡ ಹಾಗೆ. ಇನ್ಯಾವದೋ ಹುಡುಕುವ ಹಾಗೆ. ಯಾವುದೊ ಮಾಯಮೃಗದ ಹಿಂದೆ ಜೋತು ಬಿದ್ದಂಗೆ. ವಯಸ್ಸಿನ ಹಂಗಿಲ್ಲದೆ ಜನರ ದಂಡೆ ಅಲ್ಲಿಗೆ ಬರುತ್ತಿತ್ತು. ಅದರಲ್ಲೂ ಕಾಲೇಜಿನ ಹುಡುಗ ಹುಡುಗಿಯರು ಮುಂಚೂಣಿಯಲ್ಲಿದ್ದರು. ಮಾನಸಿಕವಾಗಿ ಅಸ್ವಸ್ಥ ಜನ ತುಂಬಾ ಹೊತ್ತು ಕಳೆಯುತ್ತಿದ್ದರು. ತಮ್ಮ ಕೊಳಕು ನೋಟದಲ್ಲಿ ಸುಂದರ ಜಗತ್ತನ್ನು ನೋಡಲು ಯತ್ನಿಸುತ್ತಿದ್ದರು.

ಹೀಗೆ ನಡೆಯುತ್ತಿರುವಾಗ ಒಂದು ದಿನ ಅಷ್ಟಾಗಿ ಹೆಚ್ಚು ಜನ ಇರಲಿಲ್ಲ. ಭಾನುವಾರವಾಗಿದ್ದರಿಂದ ಜನರ ಓಡಾಟ ಕಡಿಮೆಯೇ ಇತ್ತು. ಶಾಂತವಾಗಿದ್ದರಿಂದ ಇದ್ದಕ್ಕಿದ್ದಂತೆ ಒಂದು ಕ್ಯಾಬಿನ್‌ನಿಂದ ವಿಚಿತ್ರವಾದ ಸದ್ದೊಂದು ಜೋರಾಗಿ ಬರಲಾರಂಭಿಸಿತು. ಇನ್ನೊಬ್ಬರ ಪ್ರೈವಸಿಗೆ ಧಕ್ಕೆ ತರಬಾರದೆಂದು ತುಸು ಹೊತ್ತು ಸುಮ್ಮನಿದ್ದ. ಸಾರ್ವಜನಿಕವಾಗಿ ಆ ಸದ್ದು  ಅನಾಗರಿಕ. ಆದರೆ ಆ ಸದ್ದು ಎಲ್ಲರ ಕಿವಿ ಮುಟ್ಟುವ ಹಾಗೆ ಕೇಳಿ ಬರುತ್ತಿತ್ತು. ಎದ್ದು ಕ್ಯಾಬಿನ್ ತೆರೆದರೆ ಇಬ್ಬರು ಹುಡುಗರು ಅರ್ಧ ಪ್ಯಾಂಟ್ ಬಿಚ್ಚಿ ತಮ್ಮ ಲೋಕದಲ್ಲೇ ಮುಳುಗಿದ್ದರು. ನಿಶೀಥನಿಗೆ ದಂಗು ಬಡಿದಂತಾಯಿತು. ಇನ್ನೇನು ತನ್ನ ಮಾತು ಹೊರ ಹಾಕುವ ಮುನ್ನವೇ ಆ ಹುಡುಗರು ಅಲ್ಲಿಂದ ಪರಾರಿಯಾದರು. ಅವರು ಪ್ರತಿ ದಿನ ಇಲ್ಲಿಗೆ ಬರುವ ಕಾಲೇಜಿನ ಹುಡುಗರೇ ಆಗಿದ್ದರು. ತುಂಬಾ ಹೇಸಿಗೆ ಎನಿಸಿ.ವಾಂತಿ ಬಂದ ಹಾಗೆ ಭಾಸವಾಯಿತು. ಆವಾಗಿನಿಂದ ಆ ಕೆಲಸದ ಮೇಲೆ ಆಸಕ್ತಿಯೇ ಕಳೆದುಕೊಂಡಿದ್ದ.

ಅದಾದ ಮರುದಿನವೇ ಮಾಲಿಕನ ಮುಂದೆ ವಿಷಯ ಪ್ರಸ್ತಾಪಿಸಿದ. ಅದಕ್ಕೆ ಅವನು ಇದೆಲ್ಲ ಇಲ್ಲಿ ಸಾಮಾನ್ಯ ಸಂಗತಿ. ನನಗೂ ತುಂಬಾ ದಿವಸದ ಹಿಂದೆಯೇ ಗೊತ್ತಾಗಿತ್ತು. ನನ್ನ ಹೆಂಡತಿ ಹೇಳಿದ್ದಳು. ಅದನ್ನು ತಡೆಯುವ ಹಾಗಿಲ್ಲ. ಇಲ್ಲಿಗೆ ಬರುವ ಎಲ್ಲಾ ಹುಡುಗರಿಗೆ ಅದೇ ಬೇಕು. ಅದಕ್ಕೆ ಬಂದಿರುತ್ತಾರೆ. ಅದನ್ನೆಲ್ಲ ತಡೆ ಹಿಡಿದರೆ ಮುಂದೆ ಯಾರು ಇಲ್ಲಿ ತಲೆ ಹಾಕಲ್ಲ. ಇಡೀ ಸುತ್ತಮುತ್ತಲಿನ ಬ್ರೌಸಿಂಗ್ ಸೆಂಟರ್‌ಗಳಿಗಿಂತಲೂ ನಮ್ಮದೇ ಹೆಚ್ಚು ಲಾಭ. ಅಂತ ಬುದ್ಧಿಮಾತು ಹೇಳಿದ್ದ.

ಮಾಲಿಕನೆ ಹೇಳಿದ ಮೇಲೆ ಇವನು ಕೂಡ ಅದನ್ನ ನಿರ್ಲಕ್ಷಿಸುತ್ತ ಹೋದ. ಬರು ಬರುತ್ತಾ ಸ್ವಯಂಲಿಂಗ, ಸಲಿಂಗ, ಬಹುಲಿಂಗ, ನಾನಾ ಪ್ರಕಾರದ ಕ್ರೀಡೆಗಳು ಜರಗುತ್ತಲೇ ಹೋದವು. ಕೊನೆಗೆ ‘ಧೂಮಪಾನ ನಿಷೇಧಿಸಲಾಗಿದೆ’ ಎಂಬ ನಾಮಫಲಕ ತೆಗೆದು ‘ಧೂಮಪಾನ ಮತ್ತು ಮೈಥುನ ನಿಷೇಧಿಸಲಾಗಿದೆ’ ಅಂತ ಬದಲಿಸಿದ. computer-pornಆದರೂ ಯಾವುದೇ ಪರಿಣಾಮ ಬೀರಲಿಲ್ಲ. ಎಲ್ಲವು ಗಮನಿಸಿ ಗಮನಿಸದ ಹಾಗೆ ಅನ್ಯಮನಸ್ಕನಂತೆ ಸುಮ್ಮನಾಗಿದ್ದ. ಅಲ್ಲಿಗೆ ಬರುವ ಎಲ್ಲಾ ಗಿರಾಕಿಗಳಿಗೆ ನೋಡಿದರೆ ಏನೋ ಒಂಥರಾ ವಾಕರಿಕೆ ಬಂದ ಹಾಗೆ ಭಾಸವಾಗುತ್ತಿತ್ತು. ಬರು ಬರುತ್ತಾ ಮಾಡುವ ಕೆಲಸ ಹೇಸಿಗೆ ಅನಿಸತೊಡಗಿತು. ಹಾಗೋ ಹೇಗೋ ಅಲ್ಲಿಂದ ಹೊರ ಬರಬೇಕು ಅನ್ನುತ್ತಲೇ ಇದ್ದ. ಆದರೆ ಬಿಟ್ಟಿಯಾಗಿ ಸಿಗುವ ಸೂರು ಮತ್ತೆ ತಕ್ಕ ಮಟ್ಟಿಗೆ ಸಿಗುವ ಸಂಬಳ ಬಿಡುವ ಪರಿಸ್ಥಿತಿಯಲ್ಲಿರಲಿಲ್ಲ.

ಈ ಹಿನ್ನೆಲೆಯಲಿ ಅಂದು ಗಾಂಧಿ ಜಯಂತಿ ಇದ್ದುದ್ದರಿಂದ ಅಷ್ಟೊಂದು ಜನ ಬರುವದಿಲ್ಲವೆಂದು ತಿಳಿದ ನಿಶೀಥ್ ಸ್ವಲ್ಪ ತಡವಾಗಿಯೇ ಹೋದರಾಯಿತು ಅಂತ ಇನ್ನು ಮಲಗಿಯೇ ಇದ್ದ. ತುಂತುರು ಮಳೆ ನಿದ್ದೆ ತನ್ನ ಆಳದ ಅರಮನೆಯನ್ನೇ ಪರಿಚಯಿಸುತ್ತಿತ್ತು. ತಾನು ಮಲಗಿರುವ ಸ್ಟೋರ್ ರೂಮಿಗೆ ಬಾಗಿಲನ್ನೆ ಲೇವಡಿ ಮಾಡುವಂತಹ ಬಾಗಿಲೊಂದು ನೇತಾಡುವಂತೆ ನಿಂತಿತ್ತು. ಒಳಹೊಕ್ಕರೆ ಕಂಪ್ಯೂಟರ್ ಬೆವರು ವಾಸನೆ ಭಗ್ಗೆಂದು ಮುಗು ಹಿಡಿಯುತ್ತಿತ್ತು. ಇವನು ಮಲಗಿದ ಮಂಚದ ಸುತ್ತ ಸುತ್ತುವರಿದು ಪ್ರಜ್ಞೆ ಕಳೆದುಕೊಂಡು ಬಿದ್ದ ಕಂಪ್ಯೂಟರ್ ಗಳು ಬಿಕೋ ಅಂತ ಮೌನ ರಾಗ ಹಾಡುತ್ತಿದ್ದವು.

ಇವತ್ತು ಗೆಳೆಯ ಸುಧಾಂಶು ಇಲ್ಲಿಗೆ ಬರುತ್ತೇನೆಂದು ಹೇಳಿದ್ದು ನೆನಪಾಯಿತು. ಅವನ ಮುಂದೆ ಈ ವಿಷಯ ಹೇಳಿ ಸ್ವಲ್ಪ ಮನಸಿನ ಭಾರ ಇಳಿಸಿಕೊಂಡು ಬೇರೆ ಎಲ್ಲಾದರೂ ಕೆಲಸಕ್ಕೆ ನೋಡು ಅಂತ ಹೇಳುವ ನಿರ್ಧಾರ ಮಾಡಿಕೊಂಡ. ಎದ್ದೇಳುವ ಮನಸ್ಸಿರಲಿಲ್ಲ. ಆದರು ಎದ್ದು ಸ್ನಾನಕ್ಕೆ ಹೋಗಿ ಕೆಳಗಡೆ ಬಂದು ನಿಂತ. ಮಳಿಗೆಯ ಪಕ್ಕದ ಮನೆಯ ಪುಟಾಣಿಗಳೆಲ್ಲ ಆಗಷ್ಟೇ ಶಾಲೆಯಿಂದ ಬಂದು ಧ್ವಜ ಹಿಡಿದು ಆಡುತ್ತ ನಿಂತಿದ್ದವು. ಅವುಗಳ ತಲೆಗೊಂದು ಏಟು ಮಟುಕಿ ತಿಂಡಿ ತಿನ್ನಲು ಪಕ್ಕದ ಹೋಟೆಲ್‌ಗೆ ಹೋಗಿ ಸರಿಯಾಗಿ ತಿಂದು ಮತ್ತೆ ಎಂದಿನಂತೆ ಮಳಿಗೆ ತೆರೆದು ತನ್ನ ದೈನಂದಿನ ಕೆಲಸ ಮುಗಿಸಿ ಉದೂ ಹಚ್ಚಿ ಕುಳಿತುಕೊಂಡ.

ರಜೆ ಇರುವದರಿಂದ ಜನರ ಓಡಾಟ ಕಡಿಮೆ ಇತ್ತು. ಬ್ರೌಸಿಂಗ್ ಸೆಂಟರ್‌ಗೂ ಅವತ್ತು ಜನ ಕಡಿಮೆಯಿತ್ತು. ತುಸು ಹೊತ್ತಾದ ಮೇಲೆ ಚೆಕ್ಕಿಂಗ್ ಮಾಸ್ಟರ್ ತರಹ ಮಾಲಿಕ ಒಳಗಡೆ ಬಂದ. ನಿಶೀಥ ಎಲ್ಲ ಲೆಕ್ಕ ಒಂದೊಂದಾಗಿಯೇ ನೀಡುತ್ತ ಹೋದ. ಮಾಲಿಕ ಲೆಕ್ಕ ನೋಡುವ ಮೂಡಿನಲ್ಲಿರಲಿಲ್ಲ. ‘ಆಯ್ತು ಆಯ್ತು ಎಲ್ಲ ಸರಿಯಾಗಿ ಬರೆದಿಡು’ ಅಂತ ಹೇಳಿದ. ಸ್ವಲ್ಪ ಅರ್ಜೆಂಟ್ ಆಗಿ ಏನೋ ಬ್ರೌಸ್ ಮಾಡಬೇಕಿತ್ತು. ಸಿಸ್ಟಮ್ ಖಾಲಿ ಇದಿಯಾ ಅಂತ ಕೇಳಿದ. ಅದಕ್ಕೆ ನಿಶೀಥ ಅಲ್ಲೇ ಪಕ್ಕದ ಸಿಸ್ಟಮ್‌ಗೆ ಲಾಗಿನ್ ಕೊಟ್ಟ. ಯಾರನ್ನು ನನ್ನ ಕ್ಯಾಬಿನ್ ಒಳಗಡೆ ಬಿಡಬೇಡ ಅಂತ ಒಳಗಡೆ ಹೋಗುವಾಗ ಹೇಳಿದ. ಮಾಲಿಕನ ಕಣ್ಣಲ್ಲಿ ಕಂಡ ಸಂತೃಪ್ತವಲ್ಲದ ತುರ್ತು ಪರಿಸ್ಥಿತಿಯ ಭಾವ ಕಂಡು ಹಿಡಿಯಲು ನಿಶೀಥನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಈ ತರಹದ ಅದೆಷ್ಟೋ ಕಣ್ಣಗಳನ್ನು ಪ್ರತಿದಿನ ನೋಡುತ್ತಿದ್ದ.

ಬದುಕಿನ ಹೆಚ್ಚುವರಿ ಭಾಗ ಇರದುದೆಡೆಗೆ ತುಡಿಯುವದೆ ಆಯಿತಲ್ಲ ಅಂತ ಬೇಸತ್ತು ಕುಳಿತಿದ್ದ. ಅಷ್ಟರಲ್ಲೇ ಗೆಳೆಯ ಸುಧಾಂಶು ಆಟವಾಡುತ್ತಿದ್ದ ಪುಟ್ಟ ಮಗುವನ್ನು ಎತ್ತಿ ಹಿಡಿದು ಮುತ್ತಿಟ್ಟು ಚಾಕಲೇಟ್ ಕೊಡಿಸಿ ನಿಶೀಥನ ಹತ್ತಿರ ಬಂದ. ಅದಕ್ಕೆ ನಿಶೀಥ ‘ಹಾಗೆಲ್ಲ ಚಾಕಲೇಟ್ ಆಸೆ ತೋರಿಸಬೇಡಪ್ಪ, ನಾಳೆ ನೀನು ಇಲ್ಲಿ ಇರುವದಿಲ್ಲ ನಾನು ಕೊಡಿಸಬೇಕಾಗುತ್ತದೆ’ ಅಂತ ಹೇಳುತ್ತಿದ್ದ. ‘ಥೂ ಈ ಅಂಕಲ್ ಸರಿ ಇಲ್ಲ’ ಅಂತ ನಿಶೀಥನಿಗೆ ಬೈಯುತ್ತಿರುವಾಗ. ಆ ಪಾಪುವನ್ನು ಹಿಡಿಯಲು ಓಡಿದಾಗ ಅದು ಯಾರ ಕೈಗೂ ಸಿಗದೇ ಓಡಿ ಮಾಯವಾಯಿತು.

ಬಂದ ವಿಷಯ ಶುರು ಮಾಡುವ ಮೊದಲು ನನಗೆ ಇದರ ಪ್ರಿಂಟ್ ಔಟ್ ಕೊಡು ಅಂತ ಮೊದಲೇ ನಿಶೀಥನಿಗೆ ಹೇಳಿದ. ಏನಿದು ಅಂತ ಕೇಳಿದ್ದಕ್ಕೆ. ನಾ ಬರೆದಿರುವ ಹೊಸ ಕಥೆ. ಪ್ರೊಡ್ಯುಸೆರ್ ಕರೆದಿದ್ದಾರೆ ಅದಕ್ಕೆ ಹೋಗ್ತಾ ಇದ್ದೀನಿ ಅಂತ ಹೇಳಿದ. ಅವನಿಗೆ ಪ್ರಿಂಟ್ ಔಟ್ ಕೊಟ್ಟಮೇಲೆ, ಟೀ ಕುಡಿಯಲು ಮತ್ತು ತುಸು ಹೊತ್ತು ಮಾತಾಡಲು ಪಕ್ಕದ ಟೀ ಅಂಗಡಿಗೆ ಹೋದರು. ಹೋಗುವ ಮುನ್ನ ಒಳಗಡೆ ಕುಳಿತಿರುವ ಮಾಲಿಕನಿಗೆ ಒಂದು ಮಾತು ಹೇಳಿ ಬಂದನು.

ಇಲ್ಲಿ ನಡೆದಿರುವ ಘಟನೆಯನ್ನು ವಿಸ್ತಾರವಾಗಿ ಹೇಳಿದ. ಬೇರೆ ಎಲ್ಲಾದರು ಕೆಲಸ ಇದ್ದಾರೆ ನೋಡು ಅಂತ ಸುಧಾಂಶುಗೆ ಕೇಳಿದ. ಆಯ್ತು ಈ ಕೆಲಸ ಬಿಡುವಂತೆ ಕೊನೆ ಪಕ್ಷ ಈ ತಿಂಗಳ ಸಂಬಳನಾದ್ರು ಸಿಗುವರೆಗೂ ಕೆಲಸ ಮಾಡು. ಅಲ್ಲಿಯವರೆಗೆ ಏನಾದರೂ ವ್ಯವಸ್ಥೆ ಮಾಡುತ್ತೇನೆ ಅಂತ ಅವನಂದ. ಅವನ ಮಾತು ಕೂಡ ನಿಶೀಥನಿಗೆ ಸರಿಯೆನಿಸಿತು. ಸರಿ ನಾನೀಗ ಹೊರಡುತ್ತೇನೆ  ಪ್ರೊಡ್ಯುಸೆರ್ ಕಾಯ್ತಾ ಇರ್ತಾನೆ ಅಂತ ಹೇಳಿ ಅವನು ಅಲ್ಲಿಂದ ಹೊರಟ.

ಟೀ ಅಂಗಡಿಯವನು ‘ಇತ್ತೀಚಿಗೆ ನಮ್ ಹೋಟೆಲ್ ಕಡೆಗೆ ಕಾಣ್ತಾನೆ ಇಲ್ವಲ್ಲ?’ ಅಂತ ನಿಶೀಥನಿಗೆ ಕೇಳಿದಾಗ. ‘ನೀವು ಯಾವತ್ತಾದರೂ ನಮ್ ಬ್ರೌಸಿಂಗ್ ಸೆಂಟರ್‌ಗೆ ಬಂದಿದ್ದಿರಾ?’  ಅಂತ ಮರು ಪ್ರಶ್ನೆ ಹಾಕಿ ಅಲ್ಲಿಂದ ಬ್ರೌಸಿಂಗ್ ಸೆಂಟರ್‌ಗೆ ಮರಳಿದ.

ಮರಳಿ ಬರಬೇಕಾದರೆ ಏನೋ ಒಂದು ಅಪಶಕುನ ಕಾದಂತೆ ಹೆಜ್ಜೆ ಹೆಜ್ಜೆಗೂ ಭಾಸವಾಗುತ್ತಿತ್ತು. ಹತ್ತಿರ ಹೋದಂತೆ ತನ್ನ ಬ್ರೌಸಿಂಗ್ ಸೆಂಟರ್ ಹತ್ತಿರ ಜನ ಜಮಾಯಿಸಿರುವದು ಕಣ್ಣಿಗೆ ಕಾಣುತ್ತಿತ್ತು. ಓಡುತ್ತ ಹೋಗಿ ನೋಡಿದಾಗ

ಬ್ರೌಸಿಂಗ್ ಸೆಂಟರ್‌ನ ಅರ್ಧ ಶಟರ್ ಮುಚ್ಚಿತ್ತು.
ತ್ರಿವರ್ಣ ಧ್ವಜ ಹೊಸ್ತಿಲ ಮೇಲೆ ಬಿದ್ದಿತ್ತು.
ಅರ್ದ ತಿಂದು ಬಿಟ್ಟ ಚಾಕಲೇಟ್ ದ್ವಜದ ಪಕ್ಕ ಬಿದ್ದಿತ್ತು.

ಒಳಗಡೆ ಹೋಗುವ ಧೈರ್ಯ ಆಗಲಿಲ್ಲ. ಶಟರ್ ಪೂರ್ಣವಾಗಿ ಎಳೆದು ಒಳಗೆ ನೋಡಿದನು. ಚಿಕ್ಕ ಪಾಪುವಿನ ಸ್ಕೂಲ್ ಯುನಿಫಾರ್ಮ್ ಮೂಲೆಯಲ್ಲಿ ಬಿದ್ದಿತ್ತು. ನಿಶೀಥ ತಟಸ್ಥವಾಗಿ ನಿಂತು ಬಿಟ್ಟ. ಕಣ್ಣಿರು ಹರಿಯತೊಡಗಿತು. ಆಕಾಶವೇ ಎದೆಯ ಮೇಲೆ ಇಟ್ಟಂತೆ ಭಾಸವಾಯಿತು. ಮಾಲೀಕ ಎಲ್ಲೋ ಮಾಯವಾಗಿದ್ದನು .ಹಿನ್ನೆಲೆಯಲ್ಲಿ ಪೋಲಿಸು ಬರುವ ಶಬ್ದವಾಯಿತು. ನಿಂತಲ್ಲೇ ವಿಗ್ರಹವಾದ. ಮಾತು ಕಳೆದು ಹೋಯಿತು.

 ***

ಪದಬಂಧ

ಎಂಎಸ್‌ಸಿ ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ಸುಧಾಂಶುಗೆ ಊರಲ್ಲೇ ಇದ್ದು ಪಿಯು ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುವುದು ಸ್ವಲ್ಪವು ಇಷ್ಟವಿರಲಿಲ್ಲ. ಮನೆಯಲ್ಲಿ ತಂಗಿ, ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಗೆಳೆಯರು, ಗುರುಗಳು ಎಷ್ಟೇ ಹೇಳಿದರು ಒಪ್ಪಿರಲಿಲ್ಲ. ಮೊನ್ನೆ ತಾನೇ ಎಂಎಸ್‌ಸಿ ಮೇಲೆ ಸುಮಾರು ಸರಕಾರಿ ಪೋಸ್ಟ್‌ಗಳು ಬಿಟ್ಟಿದ್ದವು. ಅಮ್ಮನ ಒತ್ತಾಯದ ಮೇರೆಗೆ ಹಾಕಿದ್ದ. ಆದರೆ ಎಕ್ಸಾಮ್ ಮಾತ್ರ ಬರೆದಿರಲಿಲ್ಲ. ಅವನ ಜೊತೆಗಿನ ಗೆಳೆಯರು ಈಗ ಅದೇ ಪೋಸ್ಟಿನ ಮೇಲೆ ಆಯ್ಕೆಯಾಗಿ ಒಂದು ಟೂ ವೀಲರ್ ಬೈಕ್ ಅನ್ನು ಕಂತುಗಳಲ್ಲಿ ಖರೀದಿಸಿ ರಾಜಾರೋಷವಾಗಿ ಊರಲ್ಲೇ ತಿರುಗುತ್ತಿದ್ದರು. ಆದರೆ ಅವನಿಗೆ ಅದರ ಯಾವುದೇ ಕೊರಗು ಇರಲಿಲ್ಲ. ಅವನ ಗುರಿಯೇ ಬೇರೆಯಾಗಿತ್ತು. ಸಿನಿಮಾದಲ್ಲಿ ಒಬ್ಬ ಬರಹಗಾರನಾಗಿ ಹೆಸರು ಮಾಡುವದು.

ಚಿಕ್ಕಂದಿನಿಂದಲೂ ಸುಧಾಂಶುವಿಗೆ ಬರವಣಿಗೆಯಲ್ಲಿ ತುಂಬಾ ಆಸಕ್ತಿ. ಪುಸ್ತಕದಲ್ಲಿ ಖಾಲಿ ಹಾಳೆ ಅದ್ದಿದ ಮೇಲೆ ಅದರ ಮೇಲೆ ಮೂಡುವ ಅಕ್ಷರದಂತೆ ಬರೆಯುತ್ತಿದ್ದ. ಕನ್ನಡ ಮೇಷ್ಟ್ರು ತುಂಬಾ ಚನ್ನಾಗಿ ಬರೀತಿಯ ಅಂತ ಹೋಗುಳುತ್ತಿದ್ದರು. ಅವರು ಹೊಗಳಿದ್ದು ದುಂಡಾಗಿ ಬರೆದಿದ್ದಕ್ಕೆ ವಿನಹ ಬರೆದಿರುವ ವಿಷಯಕ್ಕೆ ಅಲ್ಲ ಅಂತ ಗೊತ್ತಾಗುತ್ತಿರಲಿಲ್ಲ. ಆದರು ಮನಸಿಗೆ ತೋಚಿದ್ದೆಲ್ಲ ಗೀಚುತ್ತ ಹೋಗುತ್ತಿದ್ದ. ದೈನಂದಿನ ಡೈರಿ ಬರೆಯುವದಕ್ಕೆ ಶುರುಮಾಡಿದ.

ಬರವಣಿಗೆಯ ಮೂಲ ಓದಿನಲ್ಲಿ ಅಡಗಿರುತ್ತದೆ ಅನ್ನುವ ಮಾತು ಅರಿವಾದದ್ದೆ ಅವನು ಬರೆದಿರುವ ಕಥೆ ಒಂದು ಕಥಾ ಸ್ಪರ್ಧೆಯಲ್ಲಿ ಕೊನೆಯವನಾಗಿ ನಿಂತಿರುವಾಗ. ಆವಾಗ ಓದಿನ ಬಂಡಿ ಹತ್ತಿದ್ದ. ಮೊದಮೊದಲು ಇಷ್ಟೆಲ್ಲಾ ಓದಬೇಕಾ ಅಂತ ನಟನೆ ಶುರುವಾಯಿತು. ಮೊದಲಿಗೆ ಪುಸ್ತಕ ಕೈಗೆತ್ತಿಕೊಂಡು ಒಟ್ಟು ಪುಟಗಳು ಎಣಿಸಿ ಉಗುಳು ನುಂಗಿ ಒಮ್ಮೆ ಫರ್ರನೆ ಎಲ್ಲ ಪುಟಗಳು ತಿರುವಿ ಹಾಕುತ್ತಿದ್ದ. ಓದಿನ ಪ್ರತಿ ಪುಟ ಮುಗಿಸಿದ ಮೇಲೆ ಒಟ್ಟು ಪುಟದ ಸಂಖ್ಯೆಯ ಜೊತೆ ಕಳೆದು ಉಸಿರು ಬಿಡುತ್ತಿದ್ದ. ಓದಿನ ಮೊದಲನೆಯ ದಿನಗಳ ವೈವಿಧ್ಯಮಯ ತಿಕಲಾಟಗಳು ಹೋಗಲಾಡಿಸಲು ಒಂದು ಉಪಾಯ ಹೂಡಿ ಶೃಂಗಾರ ಕಥೆಗಳು ಓದಲು ಶುರು ಮಾಡಿದ. ಹತ್ತು ರೂಪಾಯಿಗೆ ರೈಲ್ವೆ ನಿಲ್ದಾಣದಲ್ಲಿLonely-Lady ತಳ್ಳು ಗಾಡಿಯ ಮೇಲೆ ರಾಜಾರೋಷವಾಗಿ ಸಿಗುವ ಕಾಡತಾವ್ ನೆನಪುಗಳು, ರೂಪಸಿ, ಮೋಜು ಮಜಾ, ರತಿ ಶೃಂಗಾರ, ಹೀಗೆ ಹಲವಾರು ಅನಾಮಿಕ ಬರಹಗಾರರ ಪುಸ್ತಕಗಳನ್ನು ಪಾಪಪ್ರಜ್ಞೆಯ ಭಾವದಿಂದ ಕೇಳಿ, ಹೊಟ್ಟೆಯ ಒಳಗೆ ಗೌಪ್ಯವಾಗಿ ಇಟ್ಟು ರಾತ್ರಿಯ ಹೊತ್ತಲ್ಲಿ ಲೈಟ್ ಆರಿಸಿ ಬ್ಯಾಟರಿ ಬೆಳಕಲ್ಲಿ ಓದುವ ರೋಮಾಂಚನ ಕಸುಬು ಶುರು ಮಾಡಿದ. ಓದಿನ ತೀವ್ರತೆ ಹೆಚ್ಚಾಗಿ ಈ ತರಹದೆ ಒಂದು ಕಾಲ್ಪನಿಕ ಕಥೆ ಬರೆಯುವ ಮನಸಾಗಿ ಹಳೆ ಕಥೆಗೆ ಶೃಂಗಾರ ಸೇರಿಸಿ ಒಂದು ಕಮರ್ಷಿಯಲ್ ಕಥೆ ಬರೆದು ನಮ್ಮ ಗೆಳಯ ವೃಂದದ ಮುಂದಿಟ್ಟ. ಕಥೆಯ ವಾಸನೆ ಗೆಳೆಯರ ಮುಂದೆ ಅಲ್ಲದೆ ಶಾಲೆಯಲ್ಲೂ ಸಂಚಲನ ಮೂಡಿಸಿತು. ಆ ಕಥೆಯನ್ನ ಹುಡುಗಿಯರೂ ಬೇಡಿಕೆಯ ಮೇಲೆ ಓದಿದ್ದಾರೆ ಅನ್ನು ಸುದ್ದಿ ಕೂಡ ಬಂದು ಮುಟ್ಟಿತು. ಈ ತರಹ ಸಂಚಲನ ಮೂಡಿಸಿದ ಸಂಚಾರಿ ಯಾರು ಅಂತ ಶಾಲೆಯ ಮುಖ್ಯ ಗುರುಗಳು ಕರೆದು ಅಮ್ಮನ ಮುಂದೆ ಕಪಾಳಕ್ಕೆ ಬೀಸಿದ್ದರು. ಆದರೆ ಆ ಕಥೆ ಓದಿ ಮುಖ್ಯ ಗುರುಗಳೂ ಕೂಡ ವಿಚಲಿತರಾಗಿದ್ದರು ಅಂತ ಗೊತ್ತಾಗಿದ್ದೆ ಮರುದಿನ ಕರೆದು ‘ಚನ್ನಾಗಿಯೇ ಬರಿತಿಯ, ಆದರೆ ಒಳ್ಳೆಯದು ಬರಿ’ ಅಂತ ಹೇಳಿದಾಗಲೇ. ಆಗ ನನ್ನ ಕೈಗೆ ‘ಗೃಹಭಂಗ’ ಕಾದಂಬರಿ ಕೊಟ್ಟು ‘ಒಳ್ಳೆಯದನ್ನು ಬರೆಯಬೇಕಾದರೆ ಒಳ್ಳೆಯದು ಓದಬೇಕು’ ಅಂತ ಹೇಳಿದ್ದರು.

ಒಮ್ಮೆ ಶಾಲೆಯ ದೈಹಿಕ ಶಿಕ್ಷಕ ಶಾಮಣ್ಣರ ಜೀವನದಲ್ಲಿ ನಡೆದ ಅನೈತಿಕ ಸಂಬಧವನ್ನು ಕಥೆಯಲ್ಲಿ ಸೇರಿಸಿ ಬರೆದು. ಅದು ಪತ್ರಿಕೆಯಲ್ಲು ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ಕಥೆ ಬಂದಿದೆ ಅಂದ ತಕ್ಷಣ ಶಾಲೆಯ ಎಲ್ಲರು ಹೆಮ್ಮೆಯಿಂದ ಕಥೆ ಓದಿದರು. ಓದುತ್ತ ಹೋದಂತೆ ಕಥೆಯೊಳಗಿನ ಪಾತ್ರಗಳು, ಹೆಸರುಗಳು ಎಲ್ಲವೂ ತಮ್ಮ ಶಾಲೆಯದ್ದೆ ಅಂತ ಎಲ್ಲರಿಗೂ ಗೊತ್ತಾಗಿ ಇಡಿ ಶಾಲೆಯ ಮರ್ಯಾದೆ ಹರಾಜಾಗಿ ಹೋಗಿತ್ತು. ಅದೇ ದಿನ ಶಾಮಣ್ಣರ ಕೈಯಿಂದ ಮೈತುಂಬ ಒದೆ ತಿನಿಸಿಕೊಂಡಿದ್ದ. ಅವತ್ತಿನ ದಿನವೇ ಬರವಣಿಗೆಯ ಶಕ್ತಿ ತಿಳಿಯಿತು. ಸುಧಾಂಶುವಿನ ಸಂಚಲನಗಳನ್ನ ನೋಡಿ ಮುಖ್ಯ ಗುರುಗಳು ಕರೆದು ‘ಬರವಣಿಗೆ ಒಂದು ಕಲೆ, ಆ ಕಲೆ ಎಲ್ಲರಿಗೂ ಒಲೆಯುವದಿಲ್ಲ. ನಿನ್ನಲ್ಲಿ ಆ ಕಲೆ ಕರಗತವಾಗಿದೆ’ ಎಂದು ಎಂಎಸ್‌ಸಿ ಮುಗಿಸಿ ಊರು ಬಿಟ್ಟು ಬೆಂಗಳೂರಿಗೆ ಬರುವಾಗ ಹೇಳಿದ್ದರು.

ಎಲ್ಲರೂ ಬೆಂಗಳೂರಿಗೆ ನಟ ಇಲ್ಲವೇ ನಿರ್ದೇಶಕ ಆಗಬೇಕೆಂದು ಕನಸು ಹೊತ್ತು ಬರುತ್ತಾರೆ, ಆದರೆ ಸುಧಾಂಶು ಬರಹಗಾರ ಆಗಬೇಕೆಂದು ಬಂದವನು. ಇದೇ ಒಂದು ಕಾರಣಕ್ಕಾಗಿ ಊರಲ್ಲಿ ಸಿಗುತ್ತಿರುವ ಎಲ್ಲ ಸೌಕರ್ಯ, ಸರಕಾರಿ ನೌಕರಿ ತ್ಯಜಿಸಿ ಬೆಂಗಳೂರಿಗೆ ಬಂದು ನೆಲೆಸಿದ್ದ.

ಎಂಎಸ್‌ಸಿ ರಸಾಯನ ಶಾಸ್ತ್ರದಲ್ಲಿ ಪರಿಣಿತಿ ಪಡೆದಿದ್ದರಿಂದ ತಮ್ಮ ಗುರುಗಳ ಕೃಪಾಕಟಾಕ್ಷದಿಂದ ಹೆಸರುಘಟ್ಟ ಸಮೀಪದ ಭಾರತಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (IIHR) ಜೂನಿಯರ್ ವಿಜ್ಞಾನಿಯಾಗಿ ಕೆಲಸ ದೊರಕಿತು. ಕೆಲಸದ ಜೊತೆ ಕ್ವಾರ್ಟರ್ಸ್ ಕೂಡ ಸಿಕ್ಕಿತು. ಸಂಬಳ ತುಂಬಾ ಕಡಿಮೆಯಾದರು ತನ್ನ ಕನಸಿನ ಊರಲ್ಲಿರುವದು ಅವನಿಗೆ ಸಮಾಧಾನವಿತ್ತು. ಬರುವ ಸಂಬಳದಲ್ಲಿ ಊರಿಗೆ ಅರ್ದಕ್ಕೂ ಹೆಚ್ಚಿಗೆ ಕಳುಹಿಸಿ ತಿಂಗಳ ಕೊನೆಗೆ ಸಾಲ ಮಾಡಿ ಮತ್ತೆ ಸಂಬಳಕ್ಕೆ ಕಾಯುತ್ತಿದ್ದ.

ದಿನ ಕಳೆದಂತೆ ಕೆಲಸ ಬೋರ್ ಆಗತೊಡಗಿತು. ಬಿಎಸ್‍ಸಿ ಮತ್ತು ಎಂಎಸ್‌ಸಿ ಓದುವಾಗಲೇ ಕನ್ನಡದ ಎಲ್ಲಾ ಕಥೆ, ಕಾದಂಬರಿ, ಕವನಗಳನ್ನೂ ಓದಿ ಮುಗಿಸಿದ್ದ. ಇಲ್ಲಿ ಬಂದು ಖಾಲಿ ಖಾಲಿ ಅನಿಸತೊಡಗಿತು. ಅವನ ಪಾಲಿಗೆ ಉಳಿದಿದ್ದು ಬರವಣಿಗೆ ಮತ್ತು ಪದಬಂಧ ಬಿಡಿಸುವದು. ಪದಬಂಧ ಬಿಡಿಸುವದರಿಂದ ನಮ್ಮ ಶಬ್ದ ಸಂಗ್ರಹ ಹೆಚ್ಚಾಗುತ್ತದೆ, ಅದು ಬರಹಗಾರಿನಿಗೆ ಉಸಿರಿನಷ್ಟೇ ಅವಶ್ಯಕ ಅನ್ನುವ ಮಾತು ತನ್ನ ಗುರುಗಳಿಂದ ತಿಳಿದಿದ್ದ. IIHR ಎದುರುಗಡೆ ಟೀ ಅಂಗಡಿಯಲ್ಲಿ ಸಿಗುವ ಪೇಪರ್‌ನಲ್ಲಿ ಬರುವ ಪದಬದದ ಇರುವ ಜಾಗವಷ್ಟೇ ಯಾರಿಗೂ ಗೊತ್ತಾಗದೆ ಹರಿದು ಮನೆಯಲ್ಲಿ ತಂದು ಅದನ್ನು ಬಿಡಿಸುತ್ತಿದ್ದ. ಮಿಕ್ಕ ಸಮಯದಲ್ಲಿ ಬರೆಯಲು ಆರಂಭಿಸಿದ. ಸಿನಿಮಾ ಕ್ಷೇತ್ರಕ್ಕೆ ಸಂಭಂಧಿಸಿದ ಯಾವುದೇ ಕಾರ್ಯಕ್ರಮ ಸಿಕ್ಕರೂ ತಪ್ಪದೆ ಹೋಗಿ ಸಂಪಲ್ಮೂನ ವ್ಯಕ್ತಿಗಳನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಫೇಸ್‌ಬುಕ್‌ನಲ್ಲಿ ಎಲ್ಲ ಬರಹಗಾರರು, ನಿರ್ದೇಶಕರ ಗೆಳೆಯರ ಲಿಸ್ಟ್‌ನಲ್ಲಿ ಒಬ್ಬನಾಗಲು ಹಂಬಲಿಸುತ್ತಿದ್ದ. ದೀಪಾವಳಿ, ಯುಗಾದಿ, ಗಾಂಧಿ ಜಯಂತಿ, ಕರವೇ ನಲ್ನುಡಿ ಕಥಾ ಸ್ಪರ್ಧೆಗೆ ತಪ್ಪದೆ ತನ್ನ ಕಥೆ ಕಳುಹಿಸುತ್ತಿದ್ದ.

ಇದು ಸುಧಾಂಶುವಿನ ಮೊದಲ ದಿನಗಳ ಪರಿಚಯ. ಇವತ್ತಿಗೆ ಬಂದು ಅವನಿಗೆ ಆರು ವರ್ಷವೇ ಆಯಿತು. ಬದುಕಿನಲ್ಲಿ ಹಲವಾರು ಬದಲಾವಣೆ ಆಗಿವೆ .ಬರಹದಲ್ಲೂ. ಬರಹದ ಮೇಲೆ ಮೊದಲು ಇದ್ದ ತುಡಿತ ಈಗ ಕಡಿಮೆಯಾಗಿತ್ತು. ಹೀಗೆ ತನ್ನ ಇತಿಹಾಸ ನೆನೆಯುತ್ತ ಬೆಚ್ಚನೆ ಮಲಗಿರುವಾಗ. ಗೆಳೆಯ ಗೌರೀಶ, ಸುಧಾಂಶು ಮನೆಯ ಡೋರ್ ಬೆಲ್ ಬಾರಿಸುತ್ತಾನೆ. ಬಾಗಿಲ ಮೇಲೆ ‘ತೆರೆದಿದೆ ಮನೆ ಓ ಬಾ ಅತಿಥಿ’ ನೋಡಿ ಬಾಗಿಲು ತಳ್ಳಲು ಪ್ರಯತ್ನಿಸುತ್ತಾನೆ. ಆದರೆ ಒಳಗಡೆಯಿಂದ ಬಾಗಿಲು ಮುಚ್ಚಿರುತ್ತದೆ. ಇನ್ನೊಂದು ಎರಡು ಮೂರು ಸಾರಿ ಬೆಲ್ ಬಾರಿಸಿದ ಮೇಲೆ ಎದ್ದರಾಯಿತು ಅಂತ ಸುಧಾಂಶು ಹಾಗೆಯೇ ಮಲಗುತ್ತಾನೆ. ಮತ್ತೆ ಶಬ್ದವಾಗುತ್ತದೆ.ಎದ್ದು ಗೆಳೆಯನನ್ನ ‘ರಜೆ ದಿವಸ ಕೂಡ ನಿದ್ದೆ ಮಾಡಲು ಬಿಡುವದಿಲ್ಲ’ ಅಂತ ಮುಖದ ತುಂಬಾ ಉಗಿದು ಬರಮಾಡಿಕೊಳ್ಳುತ್ತಾನೆ.

ಸುಧಾಂಶು ಶೌಚಕ್ಕೆ ಹೋದಾಗ ಗೌರೀಶ್ ‘ತೆರೆದಿದೆ ಮನೆ ಓ ಬಾ ಅತಿಥಿ’ ಬರಹದ ಕೆಳಗೆ ‘ಕಡ್ಡಾಯವಾಗಿ ಮೂರು ಬೆಲ್ ಒತ್ತಿದರೆ ಮಾತ್ರ’ ಅಂತ ಟ್ಯಾಗ್ ಲೈನ್ ಸೇರಿಸುತ್ತಾನೆ. ಅಡುಗೆ ಮನೆಯಲ್ಲಿ ಏನಾದರೂ ತಿನ್ನಲು ಸಿಗುತ್ತಾ ಅಂತ ಒಳಗಡೆ ಹೋಗುತ್ತಾನೆ. ಎಷ್ಟೋ ದಿವಸದ ಒರೆಗೆ ತೊಳೆಯದೇ ಇದ್ದ ಪಾತ್ರೆಗಳಿಂದ ಗಬ್ಬು ನಾತ ಒಳಗಡೆ ಕಾಲಿಡುವ ಮುನ್ನವೇ ಅರಿವಾಗುತ್ತದೆ. ಪರಿಸ್ಥಿಯ ಗಂಭೀರತೆ ಗಮನಿಸಿ ಒಳ ಹೋಗದೆ ಹೊರ ಬರುತ್ತಾನೆ. ಟೇಬಲ್ ಮೇಲೆ ಪುಸ್ತಕಗಳ ರಾಶಿಯೇ ನೋಡುತ್ತಾನೆ. ಅದರ ಮೇಲೊಂದು ಬಿಳಿ ಹಾಳೆಯ ಮೇಲೆ ಬರೆದ ನಾಲ್ಕು ಸಾಲಿನ ಕವಿತೆ.

ಹೂವು ಕೈಯ ಚಾಚಿದೆ
ನಿನ್ನ ಅಂದ ನೀಡಲೇ
ನೀನು ನನ್ನ ಪಾಲಿಗೆ
ದೇವರೆಂದು ತಿಳಿಯಲೇ
ರೆಪ್ಪೆ ಕಾದು ಸೋತಿದೆ ಮುಚ್ಚಿಬಿಡಲೇ.

ಅಬ್ಬಾ ತುಂಬಾ ಭಾರವಾಗಿದೆ. ನನ್ ಹುಡುಗಿಗೆ ಹೇಳಿದ್ರೆ ಪಕ್ಕಾ ಬಿಳ್ತಾಳೆ. ಡೌಟೇ ಇಲ್ಲ.

ಹೊರಬಂದ ಸುಧಾಂಶು ‘ಹಾ ತೊಗೊಳಪ್ಪ ಯಾವ ಕೆಲಸಕ್ಕಾದ್ರು ಬರಲಿ ನಾ ಬರ್ದಿರೋದು.’ ಅಂತ ಹೇಳಿ ಅರ್ಧಕ್ಕೆ ನಿಲ್ಲಿಸಿದ ನೆನ್ನೆಯ ಪದಬಂಧ ಬಿಡಿಸುತ್ತ ಕುಳಿತುಕೊಳ್ಳುತ್ತಾನೆ.

ಹೌದು ಅದೇನೋ ಹೇಳ್ತಿದ್ದಿಯಲ್ಲ….ಯಾರೋ ಪ್ರೊಡ್ಯುಸರ್ ಸಿನಿಮಾ ಹಾಡು ಬರೆಯೋದಕ್ಕೆ ಚಾನ್ಸ್ ಕೊಟ್ಟಿದ್ದಾರೆ ಅಂತ, ಏನಾಯ್ತು….?

ಎಲ್ಲ ಚಂಬು…! ಚಂಬು ಪದ ತುಂಬುತ್ತಾನೆ.

ಅದಕ್ಕೆ ಗೌರೀಶ್ ಅದೇನದು ಚಂಬು? ಅಂತ ಕೇಳುತ್ತಾನೆ.

ಏನಿಲ್ಲ…..! ಅದಾ….? ಹಾಡು ಬರೆದಿದ್ದೆ ಆದ್ರೆ…. ಹಾಡು ಇಷ್ಟ ಆಯ್ತು ಆದ್ರೆ ನನ್ನ್ ಹೆಸರು ಇಷ್ಟ ಆಗಲಿಲ್ಲ.

ಹೆಸರು ಇಷ್ಟ ಆಗಲಿಲ್ಲ ಅಂದ್ರೆ?

ಗ್ರಹಚಾರ….! ಗ್ರಹಚಾರ ಪದ ತುಂಬುತ್ತಾನೆ.

ಅಂದ್ರೆ….ಆ ಪ್ರೊಡ್ಯುಸರ್ ಮಗ ಮೂವಿ ಡೈರೆಕ್ಟ್ ಮಾಡ್ತಾ ಇರೋದು. ಅದಕ್ಕೆ ಅವನಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಕಲನ, ವ್ಯವಕಲನ ಎಲ್ಲ ಅವನ ಮಗನ ಹೆಸರಲ್ಲೇ ಇರಬೇಕಂತೆ. ನಿರ್ದೇಶಕ ಬರಹಗಾರನಾಗಿದ್ರೆ ಇಂಡಸ್ಟ್ರಿಯಲ್ಲಿ ತುಂಬಾ ಬೆಲೆ ಅದಕ್ಕೆ ‘ದುಡ್ಡು ಕೊಡ್ತೀವಿ ಎರಡು ಸಾವಿರ ನಿಮ್ ಹಾಡು ಮಾರ್ಬಿಡಿ’ ಅಂತ ಕೇಳ್ದ .ನಾ ಆಗಲ್ಲ ಅಂದೇ .ಅಂತ ತುಂಬಾ ಬೇಜಾರಿಂದ ಉತ್ತರಿಸಿದ.

ಈ ಹಾಡು ಅದಕ್ಕೆ ಬರೆದಿರೋದಾ……? ಅಂತ ಹಾಳೆ ನೋಡುತ್ತಾ ಕೇಳುತ್ತಾನೆ.

ಅದಕ್ಕೆ ಗ್ರಹಚಾರ ಅಂತ ಹೇಳಿದ್ದು…!

ಮುಂದೆ ಏನು ಮಾಡಬೇಕು? ಮತ್ತೆ ಯಾರಾದರು, ಯಾರಿಗಾದರು ಕಥೆ ಹೇಳಿದ್ದಿಯ ಅಂತ ಕೇಳುವನು.

ಪರಿಸ್ಥಿತಿ……! ಪರಿಸ್ಥಿತಿ ಪದ ತುಂಬುತ್ತಾನೆ.

ಎಲ್ಲದಕ್ಕೂ ಟೈಮ್ ಬರತ್ತೆ. ಎರಡು ತಿಂಗಳಿಂದ ಮನೆಗೆ ದುಡ್ಡೇ ಕಳಿಸಿಲ್ಲ. ಮೊದ್ಲು ಅದಕ್ಕೆ ಏನಾದ್ರು ಒಂದು ವ್ಯವಸ್ಥೆ ಮಾಡಬೇಕು. ಬಾ ಟೀ ಕುಡಿದು ಬರೋಣ ಅಂತ ಹೇಳುತ್ತಾನೆ.

ಆ ಹೋಟಲಿನಿಂದ ಪೇಪರ್ ಹರ್ಕೊಂಡು ಬರೋನು ನೀನೇನಾ? ಅಂತ ನಗುತ್ತ ಗೌರೀಶ್ ಕೇಳಿದಾಗ. ನಗುತ್ತಲೇ ‘ಪರಿಸ್ಥಿತಿ ಕಣಪ್ಪ’ ಅಂತ ಹೇಳಿ ಹೊರನಡೆಯುವರು. ತುಂತುರು ಮಳೆಯಲಿ ತಲೆಯ ಮೇಲೆ ಕೈಯಿಟ್ಟು ಓಡುತ್ತ ಟೀ ಅಂಗಡಿಯ ತಲುಪುವರು.

ಇವತ್ತು ಅಕ್ಟೋಬರ್ ಎರಡಲ್ಲಾ? ನೀನ್ ಬಂದು ಇವತ್ತಿಗೆ ಆರು ವರ್ಷ ಆಯಿತು. ಎಷ್ಟು ಬದಲಾಗಿದೆ ಅಲ್ಲ? ಅಂತ ಹೇಳುತ್ತಾನೆ ಗೌರೀಶ್. ಟೀ ಕುಡಿಯುತ್ತ ‘ಇವತ್ತು ಒಬ್ಬ ಪ್ರೊಡ್ಯುಸರ್ ಬಾ ಅಂತ ಹೇಳಿದ್ದಾನೆ. ರಿಮೇಕ್ ಚಿತ್ರಕ್ಕೆ ಸಂಭಾಷಣೆ ಬರೆಯಲು. ಸ್ವಂತ ಬರೆದದ್ದು ಕಳಿಸಿದ್ದೆ ಅವರಿಗೆ ರಿಸ್ಕ್ ತೆಗೆದುಕೊಳ್ಳುವದು ಇಷ್ಟ ಇಲ್ಲ ಅಂತೆ.’

ಒಹ್ ಒಳ್ಳೆಯದು….ಎಷ್ಟು ಗಂಟೆಗೆ ಹೊರಡುವದು?

ಇನ್ನೇನು ಸ್ನಾನ ಮುಗಿಸಿ ಹೋಗೋದೇ.

ನಿನ್ನ ಕಥೆ ಕೂಡ ಜೊತೆಯಲ್ಲಿ ತೆಗೆದುಕೊಂಡು ಹೋಗು. ಈ ಸಲ ಇಷ್ಟ ಆಗಬಹುದೇನೋ. ಹೋಪ್ ಫಾರ್ ದಿ ಬೆಸ್ಟ್. ಸಾಫ್ಟ್ ಕಾಪಿ ಇರಲಿ ಅಂತ ಸಲಹೆ ನೀಡುವನು.

ಆಯ್ತು ಅಂತ ಇವತ್ತಿನ ಖರ್ಚಿಗೆ ನೂರು ರುಪಾಯಿ ಗೌರೀಶನ ಹತ್ತಿರ ತೆಗೆದುಕೊಂಡು ಸುಧಾಂಶು ಮತ್ತೆ ರೂಮಿಗೆ ಮರಳುವನು.

ಮತ್ತದೇ ಜಡಿ ಮಳೆಯಲಿ ಬಿಎಂಟಿಸಿ ಬಸ್ಸು ಹತ್ತಿ ಮೆಜೆಸ್ಟಿಕ್ ಹತ್ರಾ ಇರುವ ವಿನಾಯಕ್ ಇಂಟರ್ನೆಟ್ ಸೆಂಟರ್ ಅಲ್ಲಿ ಕೆಲಸ ಮಾಡುವ ಗೆಳೆಯನ ಹತ್ತಿರ ಹೋಗಿ ಈ ಕಥೆಯ ಒಂದು ಹಾರ್ಡ್ ಕಾಪಿ ಪ್ರಿಂಟ್ ಔಟ್ ತೆಗೆದುಕೊಂಡು ಪ್ರೊಡ್ಯುಸರ್ ಮನೆಯ ಕಡೆಗೆ ಹೋಗುತ್ತಾನೆ. ಅವನ ದುರದೃಷ್ಟಕ್ಕೆ ಪ್ರೊಡ್ಯುಸರ್ ಮನೆ ಬೀಗ ಹಾಕಿತ್ತು. ಪಕ್ಕದ ಮನೆಯ ಒಬ್ಬ ಅಜ್ಜ ಆಗಷ್ಟೇ ಬಿಸಿ ಬಿಸಿ ಕಾಫಿ ಕುಡಿದು ಇವತ್ತಿನ ಪೇಪರ್ ಹಿಡಿದು ಕುಳಿತಿದ್ದ. ಸುಧಾಂಶು ಅವರ ಹತ್ತಿರ ಹೋಗಿ ಪ್ರೊಡ್ಯುಸರ್ ಯಾವಾಗ ಬರುತ್ತಾರೆ ಅಂತ ವಿಚಾರಿಸಲು ಹೋಗುವನು.

ಸುಧಾಂಶು ಹತ್ತಿರ ಬರುವದನ್ನು ನೋಡಿ ‘ಏನಾಗಬೇಕಿತ್ತು?’ ಅಂತ ಕೇಳುತ್ತಾನೆ.

ಪ್ರೊಡ್ಯುಸರ್ ಬರ ಹೇಳಿದ್ರು.ಯಾವಾಗ ಬರ್ತಾರೆ?

ಅಜ್ಜ: ‘ಗೊತ್ತಿಲ್ಲ ಮಗ….ಇವತ್ತು ಅವರ ಪಿಕ್ಚರ್ ರಿಲೀಸು…ಬ್ಯುಸಿ ಇರ್ತಾರೆ, ಬಂದ್ರೆ ಬರಬಹುದು. ಏನು ಕೆಲಸ ಇತ್ತು?’

ಸುಧಾಂಶು: ರೈಟರ್ ಕೆಲಸಕ್ಕೆ.

ಒಳ್ಳೆಯದಾಗಲಿ…. ಅಂತ ಹೇಳಿ ಅಜ್ಜ ಪೇಪರ್‌ನಲ್ಲಿ ಬಂದಿರುವ ಪದಬಂಧ ಬಿಡಿಸಲು ಕುಳಿತುಕೊಳ್ಳುತ್ತಾನೆ. ರೈಟರ್ ಸಾಹೇಬ್ರೆ ಸ್ವಲ್ಪ ಪೆನ್ನು ಇದ್ರೆ ಕೊಡಿ ಅಂತ ಕೇಳುತ್ತಾನೆ.

ಸುಧಾಂಶು ಪೆನ್ ಕೊಟ್ಟು ಅಜ್ಜನ ಪಕ್ಕ ಕುಳಿತುಕೊಳ್ಳುತ್ತಾನೆ.

ಅಜ್ಜ: ‘ನಿಮ್ ಪ್ರೊಡ್ಯುಸರ್ ಬರುವವರೆಗೂ ನಾನು ನಿನ್ನ ಇಂಟರ್ವ್ಯೂ ತೆಗೆದುಕೊಳ್ಳುತ್ತೇನೆ’ ಅಂತ  ನಗುತ್ತ ಸುಧಾಂಶುವಿಗೆ ಹೇಳುವನು.

ಸುಧಾಂಶು: ಹೇಯ್ ತೊಗೊಳ್ಳಿ ಅದಕ್ಕೇನಂತೆ…!

ಅಜ್ಜ: ರೈಟರ್ ಕೆಲಸಕ್ಕೆ ಬಂದಿರುವ ಮಾನ್ಯ ಕನ್ನಡ ಪಂಡಿತರೆ ಇದಕ್ಕೆ ಉತ್ತರ ಹೇಳಿ
‘ಗಡಿ ಭಾಗದಲ್ಲಿ ವಸ್ಥಾದ ವ್ಯಾಯಾಮ ಶಾಲೆ’ .ಮೂರು ಅಕ್ಷರ.

ಸುಧಾಂಶು ಠಕ್ಕನೆ ‘ಗರಡಿ’ ಎಂದು ಉತ್ತರಿಸುವನು.

ಅಜ್ಜ: ಪರವಾಗಿಲ್ಲ ಕಣಯ್ಯಾ….ಕನ್ನಡ ವ್ಯಾಯಾಮ ಚನ್ನಾಗೇ ಮಾಡಿದ್ದಿಯ. (ಗರಡಿ ಪದ ತುಂಬುತ್ತಾನೆ )
ಇದನ್ನ ಹೇಳು. ಕಾವೇರಿದಂತೆ ಕಂಡ ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರ.

ಸುಧಾಂಶು: ಕೆಂಗೇರಿ……?

ಅಜ್ಜ: ಕೆಂಗೇರಿ ಬೆಂಗಳೂರಿನಲ್ಲಿ ಇರೋದು…..ಉತ್ತರ ಕರ್ನಾಟಕದಲ್ಲಿ ಅಲ್ಲ.

ಸುಧಾಂಶು: ಶೃಂಗೇರಿ……?

ಅಜ್ಜ: (ಸಿಟ್ಟಿನಿಂದ) ಶೃಂಗೇರಿ ಉತ್ತರ ಕರ್ನಾಟಕಕ್ಕೆ ಯಾವಾಗ ಕೊಟ್ರು…..?

ಸುಧಾಂಶು (ತುಂಬಾ ಯೋಚನೆ ಮಾಡಿ):  ಹಾವೇರಿ…..!

ಅಜ್ಜ: (ಆಶ್ಚರ್ಯದಿಂದ) ಹಾ …..ಹಾವೇರಿ…..ಕರೆಕ್ಟ್….! (ಹಾವೇರಿ ಪದ ತುಂಬುತ್ತಾನೆ)
ಇದನ್ನ ಹೇಳಪ್ಪ ‘ಇದು ಪ್ರಣಯದಂತೆ ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ.

ಹೀಗೆ ಒಂದೊಂದು ಪದಗಳನ್ನು ಸುಧಾಂಶುವಿನಿಂದ ಪಡೆದು ತುಂಬಾ ಹೊತ್ತು ಕಳೆಯುತ್ತಾರೆ. ಅಜ್ಜ ಕೂಡ ತುಂಬಾ ಕ್ಯಾಶುಯಲ್ ಆಗಿ ಸಮಯ ಕಳೆಯುತ್ತಾನೆ. ಪದಬಂಧದ ಎಲ್ಲವೂ ಬಿಡಿಸಿ ಕೊನೆಯದಾಗಿ ಒಂದು ಉಳಿದಿರುತ್ತದೆ.

ಅಜ್ಜ: ಇದನ್ನ ಹೇಳಪ್ಪ ‘ಇದು ಪ್ರಣಯದಂತೆ ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ.

ಸುಧಾಂಶು: (ಯೋಚನೆ ಮಾಡುತ್ತಾನೆ) ‘ಪ್ರಣಯದಂತೆ…ಅನ್ಯರ ಎದುರು ಮಾಡಲಾಗುವದಿಲ್ಲ’ ಮೂರು ಅಕ್ಷರ….. ?!!!

ಅಷ್ಟರಲ್ಲೇ ಪ್ರೊಡ್ಯುಸರ್ ಕಾರು ಒಳಗಡೆ ಹೋಗುತ್ತದೆ. ಸುಧಾಂಶು ಎದ್ದೋ ಬಿದ್ದು ನಗುತ್ತ ಹಿಂದೆ ಓಡಿ ಹೋಗುವನು. ಅಜ್ಜ ಅಲ್ಲೇ ಕುಳಿತು ಪದಬಂಧ ತುಂಬುತ್ತ ಕುಳಿತಿರುತ್ತಾನೆ.

ಪ್ರೊಡ್ಯುಸರ್ ಓಹ್ ಬನ್ನಿ ಬನ್ನಿ ರೈಟರ್ ಸಾಹೇಬ್ರೆ. ತುಂಬಾ ಕಾಯಿಸಿದ್ನಾ? ಏನ್ ಮಾಡೋದು ನಮ್ ಕೆಲಸಾನೆ ಹಿಂಗೆ ಅಂತ ಹೇಳಿ ತಮ್ಮ ಕ್ಯಾಬಿನ್ ಒಳಗಡೆ ಕರೆದುಕೊಂಡು ಹೋಗುವರು. ನೀವು ಅದೇನೋ ನಿಮ್ ಸ್ವಂತ ಕಥೆ ಕಳಿಸಿದ್ರಂತೆ. ನನಗೆ ತಲುಪೇ ಇಲ್ಲ. ನನಗು ಟೈಮ್ ಇರಲಿಲ್ಲ. ನೋಡಿ ಸ್ವಂತ ಕಥೆ ಚನ್ನಾಗಿದ್ರೆ ಮಾಡೋಣ ಅದಕ್ಕೇನಂತೆ. ಏನಂತೀರಿ ಸೋಮಣ್ಣ? ಅಂತ ತಮ್ಮ ಅಸಿಸ್ಟೆಂಟ್ ಕಡೆಗೆ ಹಲ್ಲು ಕಿರಿಯುವರು. ಸೋಮಣ್ಣ ಅವರ ಮಾತಿಗೆ ಹೂಂಕಾರ ಹಾಕಿ ನಿಲ್ಲುವರು.

ವಿಷಯಕ್ಕೆ ಬರೋಣ, ಅದೇನೆಂದ್ರೆ ನಿಮ್ಮ ಬರವಣಿಗೆ ನಾನು ನೋಡಿಲ್ಲ. ಈಗ ಯೇನಾದ್ರು ನಮ್ಮ ಎದುರಿಗೆ ಬರೆದು ತೋರಿಸಿದರೆ ನಮಗೂ ಖುಷಿ. ಯಾಕೆಂದ್ರೆ ಕೋಟ್ಯಾಂತರ ರುಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಬೇಕಾದ್ರೆ ಎಲ್ಲೂ ಎಡವ ಬಾರದು ಅದಕ್ಕೆ ನೋಡಿ ಅಂತ ಹೇಳಿ ಒಂದು ಹಾಳೆ ಮತ್ತು ಪೆನ್ನು ಸುಧಾಂಶುವಿನ ಮುಂದಿಟ್ಟು ತಮ್ಮ ಅಸಿಸ್ಟೆಂಟ್ ಜೊತೆ ಮಾತಾಡುತ್ತ ಕುಳಿತರು.

ಸುಧಾಂಶುವಿಗೆ ಒಂಥರಾ ಮುಜುಗರವಾಗುತ್ತದೆ. ಏನು ಬರೆಯಬೇಕು ಅನ್ನುವದೇ ತೋಚುವದಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಪ್ರೊಡ್ಯುಸರ್ ಯಾಕ್ರೀ ಆಗ್ತಾ ಇಲ್ವಾ? ನಾವು ಹೊರಗಡೆ ಹೋಗಬೇಕಾ? ಅಂತ ಕೇಳುವರು. ಇಲ್ಲ ಪರವಾಗಿಲ್ಲ ಅಂತ ಸುಧಾಂಶು ಗೋಣು ಅಲುಗಾಡಿಸುವನು. ಒಂಥರಾ ಕಣ್ಣಲ್ಲಿ ನೀರು ಬಂದಂಗಾಗಿ ಕೈಯಲ್ಲಿ ಹಿಡಿದ ಪೆನ್ನು ಕೆಳಗಿಡುವನು.

ಏನ್ರೀ ನಿಮಗೆ ನಾಲ್ಕು ಅಕ್ಷರ ಬರೆಯುವದಕ್ಕಾಗುವದಿಲ್ವಾ? ನಿಮ್ಮನ್ನ ನಂಬಿ ನಾನು ದುಡ್ಡು ಹಾಕಿದ್ರೆ ಅಷ್ಟೇ ನಮ್ ಕಥೆ. ರೀ ಯಾರ್ರಿ ಇವರನ್ನೆಲ್ಲ ಸೆಲೆಕ್ಟ್ ಮಾಡೋದು……ಸ್ವಲ್ಪ ಫಿಲ್ಟರ್ ಮಾಡಿ ಕಳಸ್ರಿ ಅಂತ ತನ್ನ ಅಸಿಸ್ಟೆಂಟ್ ಮೇಲೆ ಪ್ರೊಡ್ಯುಸರ್ ಕೆಟ್ಟದಾಗಿ ರೇಗುವರು.

ಅಲ್ಲಿಂದ ಎದ್ದು ಬರಲು ಸಜ್ಜಾಗಿ ತನ್ನ ಹಿಂಬ್ಯಾಗು ಹಿಡಿದು ಕೊನೆಗೆ ‘ಬರಹ ಒಂದು ಪ್ರಣಯದಂತೆ, ಅದನ್ನು ಅನ್ಯರ ಎದುರುಗಡೆ ಮಾಡಲಾಗುವದಿಲ್ಲ’ ಅಂತ ಬರೆದು. ಅಲ್ಲಿಂದ ಹೊರಬರುತ್ತಾನೆ. ಪ್ರೊಡ್ಯುಸರ್ ಅದನ್ನ ಓದಿ ‘ಪ್ರಣಯ’ ಅಂದ್ರೆನ್ರಿ ಅಂತ ಸೋಮಣ್ಣನಿಗೆ ಕೇಳುತ್ತಾರೆ.

ಹೊರ ಬಂದ ಸುಧಾಂಶುವಿಗೆ ಯಾವುದೊ ಒಂದು ಬಂಧನದಿಂದ ಕಳಚಿ ಹೊರಬಂದಂತೆ ಭಾಸವಾಯಿತು. ಅಜ್ಜನಿಗೆ ಕೊಟ್ಟ ಪೆನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಆ ಜಾಗಕ್ಕೆ ಹೋದರೆ ಅಜ್ಜ ಪೇಪರ್ ಮತ್ತು ಪೆನ್ನು ಅಲ್ಲೇ ಬಿಟ್ಟು ಒಳಗಡೆ ಹೋಗಿರುತ್ತಾನೆ. ಜಾಣ ಅಜ್ಜ ಪದಬಂಧದ ಎಲ್ಲ ಸ್ಥಳಗಳನ್ನು ತುಂಬಿರುತ್ತಾನೆ ಒಂದನ್ನು ಬಿಟ್ಟು. ಆ ಖಾಲಿ ಜಾಗದಲ್ಲಿ ‘ಬರಹ’ ಅಂತ ಬರೆದು ಪೆನ್ನು ಅಜ್ಜನಿಗಾಗಿ ಅಲ್ಲೇ ಇಟ್ಟು, ಅತ್ತಿತ್ತ ಅಜ್ಜನಿಗಾಗಿ ನೋಡುತ್ತಾನೆ. ಆ ಮನೆಯ ಹಿಂಭಾಗದಲ್ಲಿ ಜನರ ಗುಂಪೊಂದು ನೋಡುತ್ತಾನೆ. ಯಾರೋ ಹಾವಾಡಿಗರು ಇಲ್ಲಾ ಇನ್ಯಾರೋ ಸರ್ಕಸ್ ಮಾಡುತ್ತಿರಬೇಕು ಅಂತ ಸುಧಾಂಶು ಅಲ್ಲಿಂದ ತನ್ನ ಮನೆ ಕಡೆಗೆ ಹೆಜ್ಜೆ ಇಡುತ್ತಾನೆ.

***

ಆತ್ಮಹತ್ಯೆ

ಜೀವಿತ ಏನೆಂದು ತಿಳಿಯದೆ ಜೀವಿಸುವ, ಸುಖ ಏನೆಂದು ತಿಳಿಯದೆ ಸುಖಿಸುವ, ಮರಣ ಏನೆಂದು ತಿಳಿಯದೆ ಸಾಯುವ, ಕೋಟ್ಯಾನುಕೋಟಿ ಜೀವರಾಶಿಗಳ ಮಧ್ಯೆ ಒಂದು ಆಶ್ಚರ್ಯಚಕಿತ ಮನಸ್ಸು ಜೀವಿತದ ಅರ್ಥವನ್ನು ತಿಳಿಯಲು ಪ್ರಶ್ನೆಗಳನ್ನು ಹಾಕಿದಾಗಲೇ ಜಟಿಲವಾದ ಅನೇಕಾನೇಕ ಸಮಸ್ಯಗಳು ಹುಟ್ಟಿಕೊಳ್ಳುತ್ತವೆ. ಉತ್ತರಗಳು ಹುಟ್ಟಿಕೊಳ್ಳುತ್ತವೆ. ರಾಮರಾಯರ ಬದುಕಿನಲ್ಲೂ ಈ ತರಹದ ಪ್ರಶ್ನೆಗಳೇ ಹುಟ್ಟಿದ್ದು, ಮಗನ ಓದಿಗಾಗಿ ಇದ್ದ ಆಸ್ತಿಯನ್ನೆಲ್ಲ ಮಾರಿ ಮಗನನ್ನೇ ಒಂದು ಆಸ್ತಿಯನ್ನಾಗಿಸಿದಾಗ, ಅದೇ ಮಗ ಅಳಿದುಳಿದ ಹೊಲ ಮನೆ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಬಾ ಎಂದು ಹಠ ಮಾಡಿದಾಗ.

ರಿಟೈರ್ಮೆಂಟ್ ಆದಮೇಲೆ ಹೊಲ ಗದ್ದೆ ಸಂಪೂರ್ಣವಾಗಿ ನೋಡಿಕೊಂಡು ಇರೋಣವೆಂದು ಅಂದುಕೊಂಡಿದ್ದರು. ಆದರೆ ಮಗನ ಮೇಲಿನ ಪ್ರೀತಿ ಒತ್ತಾಯ ಬೆಂಗಳೂರಿಗೆ ದರದರನೆ ಎಳೆದುಕೊಂಡು ಬಂದಿತ್ತು. ರಾಮರಾಯರ ಹೆಂಡತಿಗೂ ಮಗನ ಜೊತೆ ಇರುವ ಆಸೆ ಬಹು ಬೇಗನೆ ಊರಿಂದ ಇಲ್ಲಿಗೆ ಸ್ಥಳಾಂತರ ಮಾಡುವಂತಾಯಿತು.

ಬೆಂಗಳೂರಿನ ಕತ್ರಿಗುಪ್ಪೆಯ ನಾಲ್ಕನೆಯ ಕ್ರಾಸ್‌ನಲ್ಲಿ ಒಂದು ವಿಶಾಲವಾದ ಮನೆಯಲ್ಲಿ ಮಗ ಮತ್ತು ಸೊಸೆ ವಾಸಿಸುತ್ತಿದ್ದರು. ಮಗನ ಮದುವೆಯಾಗಿ ಒಂದು ವರ್ಷವಾಗಿತ್ತು. ಸೊಸೆ ಮೇರಿ. ಇವರ ಅಂತರ್ಜಾತಿ ವಿವಾಹಕ್ಕೆ ಊರಿಗೂರೇ ವಿರೋಧಿಸಿದರು. ಇವರಿಬ್ಬರು ಎರಡು ಮಾತಿಲ್ಲದೆ ಒಪ್ಪಿಕೊಂಡಿದ್ದರು.

ಬೆಂಗಳೂರಿನ ಮನೆ ಸೊಸೆ ಮತ್ತು ಮಗನಿಗೆ ವಿಶಾಲವಾದ ಆಕಾಶ ಸಿಕ್ಕಿದಂತೆ ರಾಮರಾಯ ಮತ್ತು ಅವರ ಹೆಂಡತಿಗೆ ಸಿಕ್ಕಿರಲಿಲ್ಲ. ಪದೇ ಪದೇ ಡಿಕ್ಕಿಯಾಗುವ ಗೋಡೆಗಳ ಮಧ್ಯ ಬಹು ಬೇಗನೆ ಖೈದಿಯಾದರು. ಕಿಟಕಿ ಆಕಾಶಕ್ಕೆ ತೆರೆದುಕೊಳ್ಳುತ್ತಿತ್ತು. ಥಳಥಳನೆ ಹೊಳೆಯುವ ವಿಶಾಲ ಮನೆ ಇವರನ್ನು ಇನ್ನಷ್ಟು ಒಂಟಿಯಾಗಿಸಿತು. ಬೆಳಕು, ಆಕಾಶದ ತುಣುಕು ಮತ್ತು ಸದಾ ಶಬ್ದಿಸುವ ನಗರದ ಯಾಂತ್ರಿಕ ಸದ್ದುಗಳು ಇವರಿಗೆ ಕಿವುಡರನ್ನಾಗಿ ಮಾಡಿತ್ತು.

ಇವರು ಬಂದ ಕೆಲವು ತಿಂಗಳಲ್ಲಿ ಮಗ ಮತ್ತು ಸೊಸೆ ಅಮೇರಿಕಾಕ್ಕೆ ಹೊರಡಲು ನಿಂತಿದ್ದರು. ಒಂದೈದು ವರ್ಷ ಅಷ್ಟೇ ಮತ್ತೆ ತಿರುಗಿ ಬರುತ್ತೇನೆ ಅಂತ ಅಪರವಯಸ್ಸಿನ ಹಿರಿಯರನ್ನ ಮನೆಯ ಕಾವಲುಗಾರರನ್ನಾಗಿ ಬಿಟ್ಟು ಹೋದರು. ಮಗನ ಪ್ರೀತಿ ಮತ್ತು ಒತ್ತಾಯದ ಮೇರೆಗೆ ಊರು ಬಿಟ್ಟು ಬಂದ ರಾಮರಾಯರು ತಾವು ಬಂದದ್ದು ವ್ಯರ್ಥವಾಯಿತು ಅನ್ನುವಂತೆ ಅವರಿಗೆ ಬಂದ ಕೆಲವು ದಿನಗಳಲ್ಲಿಯೇ ಭಾಸವಾಯಿತು. ರಾಯರ ಹೆಂಡತಿಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ.

ಬೆಂಗಳೂರಿನಲ್ಲೇ ಇದ್ದರೂ ಮಗನಿಗೆ ದಿನಕ್ಕೆ ಒಂದೈದು ನಿಮಿಷ ಮಾತಡುವದಕ್ಕೆ ಸಿಗುವದೇ ಅಪರೂಪ. ಆ ಐದು ನಿಮಿಷದ ತರಾತುರಿ ಮಾತುಕತೆಗೆ ಇಡಿ ದಿನ ಎರಡು ಮುಡಿ ಜೀವ ಜೀವಂತವಾಗಿರುತ್ತಿದ್ದವು. ಪಕ್ಕದ ಮನೆಯವರ ಜೊತೆ ಮಾತಾಡಲು ವಿಷಯಗಳು ಹುಡುಕುತ್ತಿದ್ದರು. ಆದರೆ ಈಗ ಒಮ್ಮೆಗೆ ಇವರ ಅನುಪಸ್ಥಿತಿ ಉಮ್ಮಳಿಸಿ ಬಂದ ಸಂಕಟ ಒಳಗೆ ಮಣ್ಣಾದಂತೆ ಮುಳುಗಿಹೋಯಿತು.

ರಾಯರು ಸಮಯ ಕಳೆಯಲು ಸಮಯ ಹುಡುಕುತ್ತಿದ್ದರು. ಬೆಳಗಿನ ಎರಡು ಮೂರು ಗಂಟೆ ಪೇಪರ್ ಓದುವದರಲ್ಲಿ ಕಳೆಯುತ್ತಿದ್ದರು. ಪಾರ್ಕಿಗೆ ಬರುವ ಸಮವಯಸ್ಕ ಜನರ ಜೊತೆ ಹರಟೆ ಹೊಡೆಯುತ್ತಿದ್ದರು. ಅವರ ಬದುಕಿನ ಕಥೆಗಳನ್ನು ಕಿವಿಗೊಟ್ಟು ಕೇಳುತ್ತಿದ್ದರು. ಬಂದು ಆ ಕಥೆಗಳನ್ನು ರಸವತ್ತಾಗಿ ಹೆಂಡತಿಗೆ ಹೇಳುತ್ತಿದ್ದರು. ಆದರೆ ಹೆಂಡತಿಗೆ ಸಮಯ ಕಳೆಯುವ ಯಾವುದೇ ಸಾಧನ ಸಿಕ್ಕಿರಲಿಲ್ಲ. ಕುಳಿತಲ್ಲೇ ಕುಳಿತು ಭ್ರಾಂಥಳಾಗುತ್ತಿದ್ದಳು. ನಗಬೇಕಾದಲ್ಲಿ ಅಳು, ಅಳಬೇಕಾದಲ್ಲಿ ನಗು. ಹೀಗೆ ಬದುಕಿನ ಅಂತಿಮ ದಿನಗಳು ಸಾಗುತ್ತಿದ್ದವು.

ತಿಂಗಳು ತಿಂಗಳು ಅಮೇರಿಕಾದಿಂದ ಹಣ ಬರುತ್ತಿತ್ತು. ಮೊದಮೊದಲಿಗೆ ವಾರಕ್ಕೆ ಬರುವ ಫೋನ್ ಈಗ ತಿಂಗಳಿಗೆ ಬರುತ್ತಿತ್ತು. ನೆನ್ನೆ ಮಗನಿಂದ ಫೋನ್ ಬರಬೇಕಿತ್ತು, ಬಂದಿರಲಿಲ್ಲ. ರಾಯರ ಹೆಂಡತಿ ಫೋನಿನ ಪಕ್ಕ ಕುಳಿತು ಜಪಿಸುತ್ತಿದ್ದಳು. ಯಾಕೆಂದರೆ ಮುಂಚೆ ಫೋನು ಮಾಡಿದಾಗ ಯಾವುದೊ ಕಷ್ಟದಲ್ಲಿ ಇರುವಂತೆ ಮಗನ ಧ್ವನಿ ಕಂಪಿಸುತ್ತಿತ್ತು. ಮಗನ ಸೊಲ್ಲಿಗಾಗಿ ಕಾತರಿಸಿದ್ದಳು. ರಾಯರಿಗೆ ಮನೆಯ ಬಂಧನದಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಪೇಪರ್ ಹಿಡಿದು ಎದ್ದು ಹೊರಬಂದರು. ಎಂದಿನನತೆ ಮನೆಯ ಎದುರುಗಡೆ ಪೇಪರ್ ಓದುತ್ತ ಕುಳಿತಿದ್ದರು. ಸರಕಾರೀ ರಜೆ ಇರುವದರಿಂದ ಜನಪ್ರವಾಹ ಕಡಿಮೆಯಾಗಿತ್ತು. ಒಂದೆರೆಡು ಬಾರಿ ಮಗನಿಗೆ ರಿಂಗಣಿಸಿ ನೋಡಿದಳು. ಆ ಕಡೆಯಿಂದ ಬ್ಯುಸಿ ಬರುತ್ತಿತ್ತು. ಇತ್ತ ರಾಯರು ಯಾರದೋ ಜೊತೆಗೆ ಕುಳಿತು ಪದಬಂಧ ಬಿಡಿಸುತ್ತಿದ್ದರು. ಅವಳ ಆತಂಕ ಏರುತ್ತಲೇ ಇತ್ತು. ತುಂಬಾ ಹೊತ್ತಿನ ನಂತರ ಅಮೇರಿಕಾದಿಂದ ಫೋನು ರಿಂಗಣಿಸಿತು.

ಎದ್ದು ಓಡೋಡಿ ರಾಯರನ್ನು ಕರೆದು ಫೋನು ಕೈಗೆತ್ತಿಕೊಂಡರು. ಲೌಡ್ ಸ್ಪೀಕರ್ ಇಟ್ಟು ಮಾತಿಗಿಳಿದರು. ಇಲ್ಲಿ ಹಗಲು, ಅಲ್ಲಿ ರಾತ್ರಿ. ‘ಪಪ್ಪಾ ನಾನು ಹೋಗುತ್ತಿದ್ದೇನೆ’ ಅಂತ ಮಗನ ಸದ್ದು ಕೇಳಿಸಿತು .’ಅಮ್ಮ ನಾನು ಸಾಯುತ್ತಿದ್ದೇನೆ’, ‘ನಾನು ನಾಶವಾದೆ’ ಅನ್ನುವ ಧ್ವನಿ ಕೇಳಿ ಬರುತ್ತಿತ್ತು. ಇಲ್ಲಿ ಇಬ್ಬರು ದಿಗ್ಭ್ರಾಂತರಾಗಿ ಮೈಯಿಂದ ರಕ್ತ ಕಳಚಿ ಹೋದಂತೆ ಕೇಳುತ್ತ ಕುಳಿತ್ತಿದ್ದರು. ‘ಮಗನೇ ಹಾಗೆನ್ನಬೇಡ ನೀನು ಬದುಕಬೇಕು. ನೀನು ನಮ್ಮ ಜೀವ’ ಎಂದು ಕಂಪಿಸುವ ಧನಿಯಲ್ಲೇ ಧೈರ್ಯ ತುಂಬಲು ಯತ್ನಿಸಿದ್ದರು. ‘ಮೇರಿ ದ್ರೋಹ ಮಾಡಿದಳು. ಅವಳ ಮೋಹಕ ಮಾತು ನನ್ನನ್ನು ಸೆಳೆಯಿತು. ಅವಳು ಅವಳ ಉದ್ದೇಶಕ್ಕಾಗಿ ನನ್ನ ಇಲ್ಲಿಗೆ ಕರೆ ತಂದಿದ್ದಳು. ಕೇಳಿಸಿಕೊಳ್ಳುತ್ತಿದ್ದಿಯಾ ಪಪ್ಪಾ? ಇದು ನನ್ನ ಕೊನೆಯ ಹೇಳಿಕೆ. ನಿಮ್ಮೊಂದಿಗೆ ಇದ್ದಾಗಲೂ ಮಾತನಾಡಲು ಆಗಲಿಲ್ಲ ಅಮ್ಮಾ. ಒಂದು ಸುಳಿಯಲ್ಲಿ ಸಿಲುಕಿಕೊಂಡಿದ್ದೆ. ಅದರಿಂದ ಬಿಡಿಸಿಕೊಳ್ಳುತ್ತಿದ್ದೆ. ಸದಾ ಅದೇ ಚಿಂತೆ’ ಎಂದ. ’ಚಿಂತೆ ಬೇಡ ಮಗನೇ ಇಲ್ಲಿ ಬಾ ಹೊಸ ಬದುಕು ಬದುಕೋಣ’ ಎಂದರು.

‘ಇಲ್ಲ ಪಪ್ಪಾ, ನನ್ನ ಪಪ್ಪಾ ಇನ್ನು ನೀವು ಈ ಕೈಗಳನ್ನು ಹಿಡಿದು ನಡೆಸಲಾರಿರಿ. ಮೇರಿ ಇಲ್ಲಿ ಬಂದು ಪೂರ್ತಿ ಬದಲಾದಳು. suicide-paintingಅವಳ ಪೂರ್ವಕಾಲದ ಪ್ರೇಮಿಯನ್ನು ಹುಡುಕುತ್ತ ಇಲ್ಲಿ ಬಂದಿದ್ದಳು. ನನ್ನನ್ನು ಒಂದು ವಾಹನವನ್ನಾಗಿ ಉಪಯೋಗಿಸಿಕೊಂಡಳು. ನನ್ನೆದುರೇ ಅವರ ಪ್ರಣಯದಾಟ ನಡೆಯುತ್ತಿತ್ತು. ಆ ವಿಘ್ನವಿನೋದ ನನ್ನ ಪೂರ್ತಿ ಕಂಗೆಡಿಸುತ್ತ ಬಂತು. ಭಯಾನಕ ಡಿಪ್ರೆಷನ್. ಕೆಲಸ ಕಳೆದುಕೊಂಡೆ. ಈ ರಾತ್ರಿಯೂ ಇನ್ನೊಂದು ಕೋಣೆಯಲ್ಲಿ ಅವರಿಬ್ಬರೂ ಇದ್ದಾರೆ. ಮಣಿಗಂಟಿನ ಬಳಿ ಬ್ಲೇಡಿನಿಂದ ರಕ್ತನಾಳವನ್ನು ಈಗ ತಾನೇ ಕೊಯ್ದು ಕೊಂಡಿದ್ದೇನೆ. ಪ್ಲೀಸ್ ಪಪ್ಪಾ ದಯವಿಟ್ಟು ಫೋನ್ ಇಡಬೇಡಿ. ಬಹಳ ಒಂಟಿಯಾಗಿದ್ದೇನೆ. ಈ ಕೊನೆಯ ಹೆಜ್ಜೆಗಳಲ್ಲಿ ನನ್ನ ಜೊತೆಯಾಗಿರಿ. ಪಪ್ಪಾ ಅಮ್ಮ. ಎಂದ.

‘ಅಮ್ಮಾ ನೋವು……. ನಿಮ್ಮನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ….. ಬೇರೆ ವಿಧಿಯಿಲ್ಲ…… ಅಯ್ಯೋ ರಕ್ತ…..! ನೋವು ಹೆಚ್ಚಾಗುತ್ತಿದೆ ಪಪ್ಪಾ… .ಆಯ್ತು ಇನ್ನೇನು ನನ್ನ ಪ್ರಾಣ ನನ್ನ ಬಿಟ್ಟು ಹೋಗಲು ಸಿದ್ಧವಾಗಿದೆ……. ಪಪ್ಪಾ ಮಾತಾಡು ಪಪ್ಪಾ………! ನಿನ್ನ ಧ್ವನಿ ಕೇಳಬೇಕು ನಾನು ಪಪ್ಪಾ….!’ ಮೊಬೈಲ್ ಬಿದ್ದು ಸದ್ದಾಗುವವರೆಗೂ ಕೊನೆ ಕೊನೆಗೆ ನೋವಿನ ಚಿತ್ಕಾರ ಮಾತ್ರ ಇತ್ತು. ಕೊನೆಗೂ ಫೋನ್ ಬಿದ್ದ ಸದ್ದಾಯಿತು. ಮಾತು ನಿಂತು ಹೋಯಿತು, ಜೀವವೂ. ರಾಯರಿಗೂ ಮಾತು ನಿಂತು ಹೋಯಿತು. ಕುಳಿತಲ್ಲೇ ವಿಗ್ರಹವಾದರು. ರಾಯರ ಹೆಂಡತಿ ಎದ್ದು ಹೊರಗಡೆ ನಡೆದರು. ಎಲ್ಲಿಗೆ ಅನ್ನುವದು ಗೊತ್ತಿಲ್ಲ. ಯಾರು ಕಿಟಾರನೆ ಚೀರಿದ ಸಾವಿನ ಶಬ್ದ ಕೇಳಿಸಿತು. ತುಸು ಹೊತ್ತು ಕಳೆದ ಮೇಲೆ ರಾಯರು ತಮ್ಮ ಹೆಂಡತಿಯನ್ನು ಹುಡುಕತೊಡಗಿದರು. ಎರಡಂತಸ್ತಿನ ಮನೆಯ ಮಾಳಿಗೆಯ ಮೇಲೆ ನೋಡಿದರು. ಮನೆಯ ಹಿತ್ತಲುಕಡೆ ಇಣುಕಿ ನೋಡಿದರು.

ಜನರ ಗುಂಪು ರಕ್ತದ ಸುತ್ತ ಸುತ್ತುವರೆದಿದ್ದರು. ರಾಯರು ಓಡತೊಡಗಿದರು. ಮುದಿ ವಯಸ್ಸಿನಲ್ಲಿ ಇನ್ನು ಜೋರಾಗಿ ಓಡತೊಡಗಿದರು.

2 thoughts on ““ಬೆಂದಕಾಳೂರು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

  1. ಮೋಹನ್ ಮೈಸೂರು

    ಕಥೆಯ ಆಶಯವೇ ತಿಳಿಯುತ್ತಿಲ್ಲ. ಗೋಜಲು ಗೋಜಲಾದ ಕಥೆ. ಕಥೆಯ ತುಂಬಾ ಬರೀ ಆಘಾತಕಾರಿ ಸಂಗತಿಗಳೇ. ಇಂಥಾ ಕಥೆಗಳು ಅದೇಗೆ ಪ್ರಶಸ್ತಿ ಗಿಟ್ಟಿಸುತ್ತವೋ? ಗೋಜಲು ಗೋಜಲಾದ ನಿರೂಪಣೆಯಿಂದಲೇ?

    Reply
  2. ಹನುಮಂತ ಹಾಲಿಗೇರಿ

    ಕಥೆ ಚನ್ನಾಗಿದೆ.

    ಹೊಸ ವಿಷಯಗಳಿಂದ ಕೂಡಿದೆ.

    ಇನ್ನೊಂಚೂರು ಬಿಗಿ ಬೇಕಿತ್ತು ಅನಿಸ್ತು

    Reply

Leave a Reply

Your email address will not be published. Required fields are marked *