Daily Archives: October 28, 2013

ಸಮಾನ ಶಿಕ್ಷಣದೆಡೆಗಿನ ಪಯಣ…….


– ರೂಪ ಹಾಸನ


 

ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ನಮ್ಮ ಪ್ರೇರಣಾ ವಿಕಾಸ ವೇದಿಕೆಯಿಂದ ನಡೆಸುವ ನಿರಂತರ ಕಾರ್ಯಕ್ರಮಗಳಿಂದಾಗಿ ಬಹಳಷ್ಟು ವಿಶೇಷಗಳು, ವೈರುಧ್ಯಗಳೂ ಕಣ್ಣಿಗೆ ಬೀಳುತ್ತಿರುತ್ತವೆ. ಈಗ್ಗೆ 3-4 ವರ್ಷದ ಹಿಂದೆ ಹಳ್ಳಿಯ ಶಾಲೆಯೊಂದರಲ್ಲಿ ಕಾರ್ಯಕ್ರಮದಲ್ಲಿದ್ದಾಗ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ಈಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ಜನರಲ್ಲೂ ಜಾಗೃತಿ ಮೂಡಿದೆ ಎನಿಸಿ ಸಮಾಧಾನವಾಗಿತ್ತು. ಆದರೆ ಮುಂದೆ ಬೇರೆ ಹಳ್ಳಿಗಳ ಶಾಲೆಗಳಿಗೆ ಹೋದಾಗಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣಲಾರಂಭಿಸಿದಾಗ ಸಂದೇಹ ಕಾಡಲಾರಂಭಿಸಿತು. ಸಮಾಜದಲ್ಲಿ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯೇ ಗಣನೀಯ ಪ್ರಮಾಣದಲ್ಲಿ ಕುಸಿದಿರುವಾಗ, ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿರಲು ಹೇಗೆ ಸಾಧ್ಯ? ಅನುಮಾನದಿಂದ ಶಿಕ್ಷಕ ಮಿತ್ರರನ್ನು ಅಡ್ಡಪ್ರಶ್ನೆ ಮಾಡಲಾರಂಭಿಸಿದಾಗ ತಿಳಿದದ್ದು…… ಈಗ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಬಡ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಮಕ್ಕಳು! ಹತ್ತಿರದಲ್ಲೆಲ್ಲೂ ಖಾಸಗಿ ಶಾಲೆಗಳಿಲ್ಲದೇ, ಅನಿವಾರ್ಯವಾಗಿ ಸರ್ಕಾರಿ ಶಾಲೆಯನ್ನೇ ಅವಲಂಬಿಸಬೇಕಾದಲ್ಲಿ ಮಾತ್ರ ಜಾತಿ, ವರ್ಗ, ಲಿಂಗ ಭೇದವಿಲ್ಲದೇ kannada-schoolಎಲ್ಲರೂ ಸರ್ಕಾರಿ ಶಾಲೆಗೇ ಬರುತ್ತಾರಷ್ಟೇ. ಆಯ್ಕೆ ಇದ್ದರೆ ಹೆಚ್ಚಿನ ಉಳ್ಳವರು ಬಯಸುವುದು ಕಾನ್ವೆಂಟ್‌ಗಳನ್ನೇ. ಅದರಲ್ಲೂ ಒಂದೇ ಮನೆಯಲ್ಲಿ ಗಂಡು-ಹೆಣ್ಣುಮಕ್ಕಳಿಬ್ಬರೂ ಇದ್ದರೆ, ಬಡತನವಿದ್ದರೂ ಕಷ್ಟಪಟ್ಟಾದರೂ ಗಂಡನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ, ಹೆಣ್ಣನ್ನು ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ! ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೆ, ದುರ್ಬಲರು, ಶೋಷಿತರು ಹೇಗೆ ಅಂಚಿಗೆ ತಳ್ಳಲ್ಪಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

ಸ್ವಾತಂತ್ರ್ಯ ದೊರೆತ ಎರಡು ದಶಕಗಳ ನಂತರ ಹುಟ್ಟಿ, ಗ್ರಾಮೀಣ ಪ್ರದೇಶದ ಸಾಮಾಜಿಕ ಭೇದವಿಲ್ಲದೇ ಕಿಕ್ಕಿರಿದು ತುಂಬಿರುತ್ತಿದ್ದ ಸರ್ಕಾರಿ ಶಾಲೆಗಳಲ್ಲಿ ಓದಿದ ನನ್ನಂತವರಿಗೆ, ಕಳೆದೆರಡು ದಶಕಗಳಿಂದ ಆಗುತ್ತಿರುವ ವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ. ನಮ್ಮ ಭಾರತಕ್ಕೆ ಇದೆಲ್ಲಾ ಏನಾಗಿ ಹೋಯ್ತು? ಎಲ್ಲೆಲ್ಲೂ ಅಸಮಾನತೆಯೇ ತಾಂಡವವಾಡುತ್ತಿರುವಂತೆ ಯಾಕೆ ಕಾಣುತ್ತಿದೆ? ಇದನ್ನು ಎಲ್ಲಿಂದ ಸರಿಪಡಿಸುವುದು? ಸರಿಪಡಿಸುವವರಾರು? ಹೇಗೆ ಸರಿಪಡಿಸುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ.

ಸಮ ಸಮಾಜವೆಂಬ ಬಂಗಲೆಯ ಅಡಿಪಾಯವಾದ, ಸಮಾನ ಶಿಕ್ಷಣ ವ್ಯವಸ್ಥೆ ಎಂಬುದೇ ಒಂದು ಆದರ್ಶದ ಸ್ಥಿತಿ ಇರಬಹುದೇ? ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲವೇ? ಆದರೆ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಉಳ್ಳ ಅಮೆರಿಕಾ, ಕ್ಯೂಬಾ, ಚೈನಾ, ರಷ್ಯಾ, ಬ್ರಿಟನ್ ರಾಷ್ಟ್ರಗಳು ಕಣ್ಣೆದುರಿಗಿವೆಯಲ್ಲಾ? ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಅಂತಹ ಪ್ರಯತ್ನಗಳು ಆಗಲೇ ಇಲ್ಲವೇ? – ಚರಿತ್ರೆಯ ಗರ್ಭವನ್ನು ಬಗೆಯುತ್ತಾ ಹೊರಟರೆ, ಅಸಹನೀಯ ಸತ್ಯಗಳು ಕಣ್ಣ ಮುಂದೆ ನಿಲ್ಲುತ್ತವೆ.

ನಿಜವಾದ ಸಮಾನತೆಯ ಅಡಿಪಾಯದ ಶಿಕ್ಷಣ ಹಕ್ಕು ಕಾಯ್ದೆ ಮೊದಲು ಮಂಡನೆಯಾದದ್ದು ಸ್ವಾತಂತ್ರ್ಯಪೂರ್ವದ 1882 ರಲ್ಲಿ ಜ್ಯೋತಿ ಬಾ ಫುಲೆ ಅವರಿಂದ. phuleಅದುವರೆಗೆ ಕೆಲವೇ ಕೆಲವು ಮೇಲ್ಜಾತಿ, ಮೇಲ್ವರ್ಗದ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ, ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದು, ಜೊತೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಡಗೂಡಿ ಮಹಿಳೆ ಮತ್ತು ತಳಸಮುದಾಯದವರಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಶಿಕ್ಷಣ ಮತ್ತು ಸಮಾನತೆ ಕುರಿತ ಅವರ ನಿಜವಾದ ಕಾಳಜಿಯನ್ನು ತೋರಿಸುತ್ತದೆ. ಆ ನಂತರ ಗೋಪಾಲಕೃಷ್ಣ ಗೋಖಲೆಯವರು 1911 ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಿಲ್ ಮಂಡನೆ ಮಾಡಿದಾಗ ಬಹುಸಂಖ್ಯಾತರ ವಿರೋಧವನ್ನು ಎದುರಿಸಬೇಕಾಯ್ತು. ಇದರ ವಿರುದ್ಧವಾಗಿ ೧೧೦೦೦ ವಿರೋಧಿ ಸಹಿಗಳನ್ನು ಸಂಗ್ರಹಿಸಲಾಯ್ತು. 1937 ರವರೆಗೂ ಈ ಬಿಲ್ ಪಾಸ್ ಆಗಲಿಲ್ಲ. ಮಹಾತ್ಮಾ ಗಾಂಧಿ ಎಲ್ಲರಿಗೂ ಶಿಕ್ಷಣ ಎಂಬುದಕ್ಕೆ ಪರವಾಗಿ ವಾದಿಸಿದ್ದು ಗಟ್ಟಿಯಾಗಿ ನಿಂತಿದ್ದು ಒಂದು ಇತಿಹಾಸ. ರಾಜ ಮಹಾರಾಜರು, ಸಾಮಂತರು, ಭೂಮಾಲಿಕರು ಎಲ್ಲರಿಗೂ ಶಿಕ್ಷಣ ಕೊಟ್ಟರೆ ಆಳುಗಳ ಕೆಲಸವನ್ನು ಮಾಡುವವರ್‍ಯಾರು ಎಂದು ಪ್ರತಿರೋಧ ಒಡ್ಡಿದರು. ಸ್ವಾತಂತ್ರ್ಯಾ ನಂತರ 1948-49 ರಲ್ಲಿ ಅಸೆಂಬ್ಲಿಯಲ್ಲಿ ಮತ್ತೆ ಉಚಿತ ಶಿಕ್ಷಣದ ಕುರಿತು ಚರ್ಚೆಗಳಾಯ್ತು. ಅಲ್ಲಿಯವರೆಗೆ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದಿದ್ದು 11 ವರ್ಷಕ್ಕೆ ಇಳಿಸಬೇಕೆಂದು ಭೂಮಾಲೀಕರು ವಾದ ಮಾಡಿದರು. ಆದರೆ ಅಂಬೇಡ್ಕರ್ ಅವರು 11 ವರ್ಷದ ನಂತರ ಮಕ್ಕಳು ಬಾಲಕಾರ್ಮಿಕರಾಗುತ್ತಾರೆಂಬ ಭವಿಷ್ಯವನ್ನು ಮುಂದಾಲೋಚಿಸಿ 14 ವರ್ಷದವರೆಗಿನ ಶಿಕ್ಷಣವನ್ನು ಕಡ್ಡಾಯಗೊಳಿಸಲು ಒಪ್ಪಿಸಿದರು. ಆದರೆ ನಮ್ಮ ಅಸಮಾನ ಭಾರತದ ಸಾಮಾಜಿಕ ವ್ಯವಸ್ಥೆಗೆ ಇದರೊಂದಿಗೇ ಸಮಾನ ಶಿಕ್ಷಣ ವ್ಯವಸ್ಥೆಯೂ ಕಡ್ಡಾಯವಾಗಿ ಜಾರಿಗೊಳ್ಳಬೇಕಿತ್ತು. ಏಕೋ ಕಡ್ಡಾಯ ಶಿಕ್ಷಣದ ಕುರಿತೇ ನಡೆದ ಸುದೀರ್ಘ ಚರ್ಚೆಗಳು ಸಮಾನ ಶಿಕ್ಷಣದವರೆಗೆ ಆ ಹಂತದಲ್ಲಿ ತಲುಪಲೇ ಇಲ್ಲ.

ಭಾರತದಲ್ಲಿ ಬಹುಶಃ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ಶಿಕ್ಷಣಕ್ಕೆ ಸಂಬಂಧಿಸಿದ 3000 ಕೇಸುಗಳು ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ. ಎಷ್ಟೆಲ್ಲಾ ಸಂಘರ್ಷಗಳಾದರೂ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯ, govt-school-kidsತಾರತಮ್ಯರಹಿತವಾದ ಶಿಕ್ಷಣದಿಂದ ನಿಧಾನಕ್ಕೆ ದೂರ ಸರಿಯುತ್ತಾ, ಇವುಗಳನ್ನೇ ಒಡೆದು ದೊಡ್ಡ ಗೋಡೆಗಳನ್ನು ಕಟ್ಟಿ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಲಾಗುತ್ತಿದೆಯೆಂಬುದೇ ದುರಂತ. ವರ್ಗ ಹಾಗೂ ಪಟ್ಟಭದ್ರಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ಇಂದು ಶಿಕ್ಷಣವೂ ಒಂದು ವ್ಯಾಪಾರವಾಗಿಬಿಟ್ಟಿದೆ. ಸಾಮಾಜಿಕ-ಆರ್ಥಿಕತೆಯ ದಟ್ಟವಾದ ತಾರತಮ್ಯಕ್ಕೆ ಒಳಗಾಗಿದ್ದ, ಅಸಮಾನತೆಯೇ ತಾಂಡವವಾಡುತ್ತಿದ್ದ ನಮ್ಮ ದೇಶ, ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿಕೊಂಡ ನಂತರವಾದರೂ ಇದನ್ನೆಲ್ಲಾ ಮೀರಲು ತನ್ನದೇ ಆದ ಸಶಕ್ತ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿತ್ತಲ್ಲವೇ? ಪ್ರಯತ್ನಗಳು ಆಗಲೇ ಇಲ್ಲವೆಂದಲ್ಲ……

ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸುವ 1964-66 ರ ಕೊಥಾರಿ ಆಯೋಗ ಸಮಾನ ಶಿಕ್ಷಣದ ಆಶಯದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆಯನ್ನು ತರುವ ದೊಡ್ಡ ಕನಸನ್ನು ಕಂಡಿತ್ತು. ಸಮಾನ ಶೈಕ್ಷಣಿಕ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಭದ್ರ ತಳಪಾಯವಾಗುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ಆಶಯವಿತ್ತು. ಅದು ಸಾಕಾರವಾಗಿದ್ದರೆ ಬಹುಶಃ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಮಹತ್ತರವಾದ ಬದಲಾವಣೆಗಳಾಗಿರುತ್ತಿದ್ದವು. ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಜಾತಿ, ಮತ, ಲಿಂಗ, ಆರ್ಥಿಕ-ಸಾಮಾಜಿಕ ಸ್ಥಿತಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಶಿಕ್ಷಣವೆಂಬುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಆರೋಗ್ಯಕರವಾದ ಆಶಯವಿತ್ತು. ನೆರೆಹೊರೆ ಶಾಲಾ ಪದ್ಧತಿಯ ಮೂಲಕ ಒಂದು ಪ್ರದೇಶದ ಮಕ್ಕಳು rte_schoolಯಾವುದೇ ಭೇದವಿಲ್ಲದೇ, ಒಂದೇ ಶಾಲೆಯಲ್ಲಿ ಓದುವ ವ್ಯವಸ್ಥೆಯ ಜೊತೆಗೆ ಸಂಪೂರ್ಣವಾಗಿ ಉಚಿತವಾದ ಶಿಕ್ಷಣವನ್ನು ಸರ್ಕಾರವೇ ನೀಡುವುದರೊಂದಿಗೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಶಾಲೆಗಳೂ ಹೊಂದಬೇಕೆಂದು ವಿಧಿಸಲಾಗಿತ್ತು. ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಾಥಮಿಕ ಹಂತದವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಇವು ಸಮಾನತೆಯನ್ನು ಬಯಸುವವರೆಲ್ಲರೂ ಒಪ್ಪಿಕೊಳ್ಳುವಂತಹಾ ಆಶಯಗಳೇ.

ಈ ಕೊಥಾರಿ ಆಯೋಗದ ಶಿಫಾರಸ್ಸಿನಂತೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು 1968, 1986 ಮತ್ತು 1992 ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಭರವಸೆಯನ್ನೇನೋ ನೀಡಿದವು. ಆದರೆ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನಗಳು ಆಗಲೇ ಇಲ್ಲ. ಈ ಉನ್ನತ ಕನಸಿನ ಸಾಕಾರಕ್ಕಾಗಿ ದೇಶದ ಒಟ್ಟು ಉತ್ಪನ್ನದ ಶೇಕಡ 6 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಥಾರಿ ಆಯೋಗ ಸೂಚಿಸಿದ್ದರೂ, ಇದುವರೆಗೂ ಯಾವ ಸರ್ಕಾರವೂ ಶೇಕಡ 3 ರ ಮೀಸಲನ್ನೂ ಮೀರಿಲ್ಲದಿರುವುದು ನಮ್ಮ ಪಟ್ಟಭದ್ರಹಿತಾಸಕ್ತಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗೆಗಿನ ನಿರ್ಲಕ್ಷ್ಯವನ್ನೂ, ಮಾನವ ಸಂಪನ್ಮೂಲದ ಅಭಿವೃದ್ಧಿ ಕುರಿತು ಆಮೂಲಾಗ್ರ ಬದಲಾವಣೆಯ ಕನಸುಗಳಿಲ್ಲದಿರುವುದನ್ನು ಸೂಚಿಸುತ್ತದೆ. ಆಳುವ ವರ್ಗವಾಗಲೀ ಅಧಿಕಾರಶಾಹಿಯಾಗಲೀ ಕೊಥಾರಿ ಆಯೋಗದ ಮಹತ್ವವನ್ನು ಅರಿಯಲೇ ಇಲ್ಲ. ಅಥವಾ ಅರಿತರೂ ಅಸಮಾನತೆಯನ್ನೇ ಉಂಡುಡುವ ಪೂರ್ವಾಗ್ರಹಪೀಡಿತ ಮನಸ್ಸುಗಳು ಅದನ್ನು ಸದ್ದಿಲ್ಲದೇ ಪಕ್ಕಕ್ಕಿಟ್ಟವೋ? ಒಟ್ಟಿನಲ್ಲಿ ಶಿಫಾರಸ್ಸು ಮೂಲೆಗುಂಪಾಯ್ತು.

1986 ರಲ್ಲಿ ಎಚ್ಚೆತ್ತ ಸರ್ಕಾರ, ಈ ಶಿಫಾರಸ್ಸು ಜಾರಿಯಾಗದೇ ಇರುವುದಕ್ಕೆ ಕಾರಣಗಳನ್ನು ಹುಡುಕಲು ಆಚಾರ್ಯ ರಾಮಮೂರ್ತಿ ಸಮಿತಿಯನ್ನು ನೇಮಿಸಿತು. ಅದು ಸಮುದಾಯದಲ್ಲಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಆಳವಾಗಿ ಬೇರೂರಿರುವುದರಿಂದ ಪರಸ್ಪರರಲ್ಲಿ ಅಸಹನೆ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇರಲಾಗುವುದಿಲ್ಲ, ಗುಣಾತ್ಮಕ ಶಿಕ್ಷಣ ಬೇಕೆನಿಸಿದ ಪೋಷಕರು ತಮಗೆ ಬೇಕೆನಿಸಿದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಲ್ಲಿ ಜಾತಿ-ಮತಗಳ ತಾರತಮ್ಯವಿಲ ಎಂದು ಹೇಳಿತು. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವಿನ ವರ್ಗ ತಾರತಮ್ಯ, ಹಾಗೂ ಆಂಗ್ಲಭಾಷೆ ಹಾಗೂ ಮಾತೃಭಾಷಾ ಮಾಧ್ಯಮದ ಮಕ್ಕಳ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಈಗ ಅಗಾಧವಾಗಿ ಬೆಳೆದು ನಿಂತಿದೆ. private-schoolಸಮಾನ ಶಿಕ್ಷಣವೆಂಬುದು ಅಸಮಾನತೆಯನ್ನು ತೊಡೆಯುವಲ್ಲಿನ ಪ್ರಮುಖ ಅಸ್ತ್ರವಾಗಿರುವುದರಿಂದ, ಅದು ಹೇರಿಕೆ ಎಂದೆನಿಸದೇ ಕಷ್ಟವಾದರೂ ಎಲ್ಲರೂ ಅನುಸರಿಸಲೇ ಬೇಕಾದ ಕಾನೂನಾಗಬೇಕು. ಆಗ ಸಾಮಾಜಿಕ ಅಸಮಾನತೆಯನ್ನು ಮೀರುವ ಸ್ಪಷ್ಟ ಮಾರ್ಗಗಳು ಕಾಣಲಾರಂಭಿಸುತ್ತದೆ. ಸಮುದಾಯದಲ್ಲಿ, ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲೆಂದೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು ಎಂಬುದನ್ನು ನಾವು ಮರೆಯಬಾರದು. ಅಸಮಾನತೆಯ ಯಥಾಸ್ಥಿತಿಯೇ ಮುಂದುವರೆಯುವುದಾದರೆ ಇದನ್ನು ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ದೇಶವೆಂದು ಏಕೆ ಹೇಳಬೇಕು?

ಜೊತೆಗೆ ತಮ್ಮದೇ ಆದ ಶಾಲೆಗಳನ್ನು ತೆರೆದು ನಿರ್ವಹಿಸುವ ಹಕ್ಕು ಸಂವಿಧಾನದಲ್ಲಿಯೇ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೊರಕಿರುವುದರಿಂದ ಇದೂ ಸಮಾನ ಶಿಕ್ಷಣ ವ್ಯವಸ್ಥೆಗೆ ಮಾರಕ ಮತ್ತು ಸರ್ಕಾರವೇ ಒಂದು ಸೀಮಿತ ವರ್ಗಕ್ಕಾಗಿ ಸೈನಿಕ ಶಾಲೆ, ನವೋದಯ ವಿದ್ಯಾಶಾಲೆ, ಕೇಂದ್ರೀಯ ಶಾಲೆಗಳನ್ನು ನಡೆಸುವುದೇ ಸಂವಿಧಾನ ವಿರೋಧಿ ನಿಲುವು ಎಂದು ಸಮಿತಿ ಆರೋಪಿಸಿದ್ದರಲ್ಲಿ ಕೊಂಚ ವಾಸ್ತವಾಂಶವಿದೆ. ಆದರೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತಲೇ ಐಕ್ಯತೆಯ ಆಶಯವನ್ನೂ ಅಳವಡಿಸಿಕೊಳ್ಳಲು ಸಂವಿಧಾನದಲ್ಲೇ ಇರುವ ಅಪಾರ ಸಾಧ್ಯತೆಗಳೆಡೆಗೆ ನಾವಿಂದು ಗಮನಹರಿಸಬೇಕಾಗಿದೆ. ಇದರೊಂದಿಗೇ ಕಾನ್ವೆಂಟ್‌ಗಳು ದುಬಾರಿ ವಂತಿಗೆ, ಶುಲ್ಕ ಪಡೆದು ಉತ್ತಮ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯವನ್ನು ನೀಡಲಾರಂಭಿಸಿದ್ದು, ಆ ಮಟ್ಟದ ವ್ಯವಸ್ಥೆಯನ್ನು ಒದಗಿಸಲು ಸರ್ಕಾರ ಸೋತಿದ್ದು, ಖಾಸಗಿಗೆ ಕಡಿವಾಣವಿಲ್ಲದ ಸರ್ಕಾರಿ ನುಸುಳುಗಳು ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿವೆ. ಖಾಸಗಿ ಶಾಲಾ ವ್ಯವಸ್ಥೆ ಈ 15-20 ವರ್ಷಗಳಲ್ಲಿ ಉಳ್ಳವರು-ಇಲ್ಲದವರ ಮಧ್ಯೆ ಬೃಹತ್ ಕಂದಕ ಸೃಷ್ಟಿಸಿಬಿಟ್ಟಿದೆ.

ಸಂವಿಧಾನದ 350[ಎ] ಕಲಂ ಪ್ರಾಥಮಿಕ ಹಂತದವರೆಗಾದರೂ ಮಾತೃಭಾಷೆ ಶಿಕ್ಷಣಕ್ಕೆ ಆಯಾ ರಾಜ್ಯ ಸರ್ಕಾರಗಳು ಅನುವು ಮಾಡಿಕೊಟ್ಟು tribal-schools-educationಮಕ್ಕಳ ಹಕ್ಕನ್ನು ಕಾಪಾಡಬೇಕೆಂದು ಪ್ರತಿಪಾದಿಸುತ್ತದೆ. 2009 ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಕೂಡ ಇದನ್ನೇ ಹೇಳುತ್ತದೆ. 19[ಎ] ಕಲಂ ಮಗುವಿನ ಮಾತೃಭಾಷೆಯ ಕಲಿಕೆಗೆ ಒತ್ತು ನೀಡುತ್ತದೆ. ಅದನ್ನು ನಿರ್ಲಕ್ಷಿಸಿ ಬೇರೆ ಭಾಷೆಯನ್ನು ಹೇರುವುದರಿಂದ ಮಕ್ಕಳ ನಿಜವಾದ ವ್ಯಕ್ತಿತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಗು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಕ್ರಿಯಾಶೀಲತೆಯನ್ನೂ ಕಳೆದುಕೊಳ್ಳುತ್ತದೆ. ಆದರೆ ನಮ್ಮ ಸರ್ಕಾರಗಳು, ಜೊತೆಗೆ ನ್ಯಾಯಂಗವೂ ಈ ಆಶಯಕ್ಕೆ ಗಂಭೀರವಾದ ಒತ್ತನ್ನು ನೀಡದಿರುವುದು ನಿಜಕ್ಕೂ ಖೇದಕರ.

ಜಾಗತೀಕರಣದ ದಾಳಿಯಿಂದಾಗಿ ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜಾನಪದೀಯ ಸತ್ವ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೆವೆ. ಆಧುನಿಕ ಅವಶ್ಯಕತೆಗಳ ನೆಪ ಹೇಳಿ ನಾವೂ ಆಂಗ್ಲಭಾಷೆ ಕಲಿಕೆಯೆಡೆಗೆ ಮುಖ ಮಾಡುತ್ತಿದ್ದೇವೆ. ನಮ್ಮ ಉಚ್ಛ ನ್ಯಾಯಾಲಯವೂ ಶಾಲೆ ಹಾಗೂ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಕೊಟ್ಟಿದ್ದು ಸಮಾನ ಶಿಕ್ಷಣ ವ್ಯವಸ್ಥೆಯೆಡೆಗಿನ ಹಿನ್ನೆಡೆಯಾಗಿದೆ. ಕಳೆದ 19 ವರ್ಷದಿಂದ ನಡೆಯುತ್ತಿರುವ ಕರ್ನಾಟಕದ ಭಾಷಾ ಮಾಧ್ಯಮದ ವಿವಾದವನ್ನು ಮೊನ್ನೆ ಸರ್ವೋಚ್ಛ ನ್ಯಾಯಾಲಯ, ಇದರಲ್ಲಿ ಸಂವಿಧಾನಾತ್ಮಕ ತೊಡಕುಗಳಿರುವುದರಿಂದ ಸಾಂವಿಧಾನಿಕ ಪೀಠವೇ ಇದನ್ನು ಬಗೆಹರಿಸಲೆಂದು ಹೇಳಿ ಕೈ ತೊಳೆದುಕೊಂಡಿದೆ. ತೀರ್ಪು ಭಾಷಾಮಾಧ್ಯಮದ ಪರವಾಗಿ ಬಂದರೆ ಭಾರತದ ಒಟ್ಟು ಶೈಕ್ಷಣಿಕ ವ್ಯವಸ್ಥೆಯೇ ಬದಲಾಗುವ ಸಾಧ್ಯತೆಗಳಿವೆ. ಹೀಗೆ ಸಮಾನ ಶಿಕ್ಷಣಕ್ಕಾಗಿ ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದಕ್ಕೆ ಬಹುಶಃ ನಮ್ಮನ್ನಾಳುವ ಪ್ರಭುಗಳಿಗೆ ಇಚ್ಛಾಶಕ್ತಿ ಇಲ್ಲದ್ದು, ಆಡಳಿತಯಂತ್ರದ ವೈಫಲ್ಯ, ನ್ಯಾಯಾಂಗದ ವ್ಯತಿರಿಕ್ತ ತೀರ್ಪುಗಳು, ಜನರ ನಿರಾಸಕ್ತಿ ಎಲ್ಲವೂ ಕಾರಣವಿರಬಹುದೆನಿಸುತ್ತದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಲೇ ರೂಪಿತವಾದ 2009 ರ ಶಿಕ್ಷಣ ಹಕ್ಕು ಕಾಯ್ದೆಯಿಂದ ಸಮಾನ ಶಿಕ್ಷಣ ಸಾಧ್ಯವೆಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯೇ ಹೊರತು ಸಮಾನ ಶಿಕ್ಷಣ ಕಾಯ್ದೆಯಲ್ಲ! ನಮ್ಮ ಸಂವಿಧಾನದಲ್ಲೇ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಿದ ನಂತರ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅವಶ್ಯಕತೆಯೂ ಇರಲಿಲ್ಲ. ಜೊತೆಗೆ ಶೇಕಡಾ 25 ರ ಹಿಂದುಳಿದ ವರ್ಗಗಳ ಮೀಸಲಾತಿ, ಶಿಕ್ಷಣ ಖಾಸಗೀಕರಣದ ಸ್ಪಷ್ಟ ನಿದರ್ಶನವಾಗಿದೆ. ಈ ಮೀಸಲಾತಿಯೇ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಶಾಲೆಗಳು ಮುಚ್ಚಲ್ಪಟ್ಟರೆ, ಇನ್ನೂ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವವರಾರು? ಲಾಭಕ್ಕಾಗಿ ಶಾಲೆಯೆಂಬ ಅಂಗಡಿಗಳನ್ನು ತೆರೆದಿರುವ ಖಾಸಗಿಯವರು ಕಾಳಜಿಯಿಂದ ಮಕ್ಕಳನ್ನು ಹುಡುಕಿ ತಂದು ಶಿಕ್ಷಣ ನೀಡುವ ಜವಾಬ್ದಾರಿ ಹೊರುತ್ತಾರೆಯೇ? ಎಲ್ಲವನ್ನೂ ಖಾಸಗಿಯವರೇ ನಿರ್ವಹಿಸುವುದಾದರೆ ಸರ್ಕಾರದ ಹೊಣೆಗಾರಿಕೆಯೇನು? ಜೊತೆಗೆ 6 ವರ್ಷದ School_children_line_Cochin_Kerala_Indiaಒಳಗಿನ ಮಕ್ಕಳ ವಿದ್ಯಾಭ್ಯಾಸದ ಕುರಿತು ಈ ಕಾಯ್ದೆ ಮತ್ತು ಇದುವರೆಗಿನ ಎಲ್ಲಾ ಸರ್ಕಾರಿ ಶೈಕ್ಷಣಿಕ ನೀತಿಗಳೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಸರ್ಕಾರದಿಂದ ಈ ವಯಸ್ಸಿನ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದರಿಂದ ಸಹಜವಾಗಿ ಅವರು ಖಾಸಗಿ ವ್ಯವಸ್ಥೆಯ ಮೊರೆ ಹೋಗುತ್ತಾರೆ. ಇಂತಹವರು 6 ವರ್ಷ ತುಂಬಿದ ನಂತರ ಮತ್ತೆ ಸರ್ಕಾರಿ ಶಾಲೆಗಳಿಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯೇ ಮೂರ್ಖತನದ್ದಾಗುತ್ತದೆ. ಖಾಸಗಿಗೆ ಕಡಿವಾಣ ಸಾಧ್ಯವಿಲ್ಲವೆಂದಾದರೆ ಶಿಕ್ಷಣ ರಾಷ್ಟ್ರೀಕರಣವೊಂದೇ ಅಂತಿಮ ಮದ್ದೇನೋ ಎನಿಸುತ್ತದೆ. ಈ ಶಿಕ್ಷಣ ಹಕ್ಕು ಕಾಯ್ದೆಗೇ ನೆರೆಹೊರೆ ತತ್ವವನ್ನು ಮೂಲವಾಗಿಟ್ಟುಕೊಂಡು ಖಾಸಗಿ ಹಾಗೂ ಸರ್ಕಾರಿ ಶಾಲೆಗಳೆರಡಕ್ಕೂ ಅನ್ವಯಿಸುವಂತೆ ಸಮಾನ ಶಾಲಾ ವ್ಯವಸ್ಥೆ, ಸಮಾನ ಪಠ್ಯ, ಸಮಾನ ಮೂಲಭೂತ ಸೌಲಭ್ಯಗಳಿರುವ, ಆಯಾ ರಾಜ್ಯಗಳ ಮಾತೃಭಾಷೆಯನ್ನು ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣ ಮಾಧ್ಯಮವಾಗಿಸಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ಸಮಾನ ಶಿಕ್ಷಣವನ್ನು ಪ್ರತಿಪಾದಿಸುವ ತಿದ್ದುಪಡಿ ತಂದರೆ ಮಾತ್ರ ಏನಾದರೂ ಬೇರುಮಟ್ಟದ ಗುಣಾತ್ಮಕ ಬದಲಾವಣೆಗಳಾಗಬಹುದೆನಿಸುತ್ತದೆ.

“ಮಾತೃಭಾಷೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ವ್ಯವಸ್ಥೆ ತಾರತಮ್ಯಕ್ಕಾಗಿಯಲ್ಲದೇ, ಲಾಭಕ್ಕಾಗಿಯಲ್ಲದೇ ಸರ್ಕಾರದ ನಿಯೋಜಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶ-ಶಿಸ್ತು ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯೇ ಕೆಲಸ ಮಾಡಬೇಕು. ೬ವರ್ಷಕ್ಕೆ ಮೊದಲಿನಿಂದ ಹಿಡಿದು ೧೪ವರ್ಷದವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಸರ್ಕಾರ ನೀಡಬೇಕು ಮತ್ತು ವಿಕೇಂದ್ರಿತ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವನ್ನು ಸರ್ಕಾರವೇ ನೀಡಬೇಕು. ಸಂವಿಧಾನದ ಸಮಾನತೆಯ ತತ್ವಕ್ಕೆ ಬದ್ಧವಾಗಿ ಶಿಕ್ಷಣ ವ್ಯವಸ್ಥೆಯಿರಬೇಕು. ಸಮಾನ ಶಿಕ್ಷಣವನ್ನು ಏಕರೂಪ ಶಿಕ್ಷಣವೆಂದು ಗ್ರಹಿಸಿದ್ದರಿಂದ ಇದರ government_schoolಬಗ್ಗೆ ದ್ವಂದ್ವವೇರ್ಪಟ್ಟಿದೆ. ಅದನ್ನು ಸರಿಯಾದ ಕ್ರಮದಲ್ಲಿ ತಿಳಿಹೇಳಿ ಜನಾಭಿಪ್ರಾಯ ಮೂಡಿಸಬೇಕು,” ಎನ್ನುತ್ತಾರೆ ಖ್ಯಾತ ಶಿಕ್ಷಣತಜ್ಞ ಅನಿಲ್ ಸದ್ಗೋಪಾಲ್.

ಇತ್ತೀಚೆಗೆ ಕರ್ನಾಟಕ ಸರ್ಕಾರ ನೆರೆಹೊರೆ ಶಾಲಾ ನಿಯಮವನ್ನು ಅನುಸರಿಸಿ ಪಬ್ಲಿಕ್ ಶಾಲೆಗಳನ್ನು ಸದ್ಯಕ್ಕೆ ಪ್ರತಿ ಜಿಲ್ಲೆಯ ಒಂದು ಗ್ರಾಮಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸುವ ಪ್ರಸ್ತಾಪ ಮಾಡಿದೆ. ಸುತ್ತಲಿನ ಸರ್ಕಾರಿ ಶಾಲೆಗಳನ್ನು ಇದರಲ್ಲಿ ವಿಲೀನಗೊಳಿಸುವ ಉದ್ದೇಶವಿದೆ. ಆದರೆ ಈ ನೆರೆಹೊರೆ ನಿಯಮ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಿ ಖಾಸಗಿ ಶಾಲೆಗಳನ್ನು ಇದರಿಂದ ಹೊರಗಿಟ್ಟರೆ ಅದು ಅಸಮಾನತೆಯನ್ನು ಮತ್ತಷ್ಟು ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೈವಿಧ್ಯತೆಯ ಭಾರತ ದೇಶಕ್ಕೆ ಐಕ್ಯತೆಯನ್ನು ಕಲಿಸಲಾಗುವುದು ಸಮಾನ ಶಿಕ್ಷಣ ವ್ಯವಸ್ಥೆಯಿಂದ. ಇದನ್ನು ಗುರಿಯೆಡೆಗಿನ ಪಯಣವಾಗಿಸಿ, ಹಂತ ಹಂತವಾಗಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಸರ್ಕಾರ ಗಟ್ಟಿ ಮನಸು ಮಾಡಿದರೆ ಮಾತ್ರ ಈ ಆಶಾವಾದ ಉಳಿದೀತೇನೋ?