’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” : ಹಾಸನದಲ್ಲಿ, ನವೆಂಬರ್ 16-17, 2013

ಸ್ನೇಹಿತರೇ,

ಸುಮಾರು 30-40ರ ವಯೋಮಾನದ ಆಸುಪಾಸಿನಲ್ಲಿರುವ ಪ್ರಗತಿಪರ ಮನೋಭಾವದ ಕನ್ನಡ ಲೇಖಕ ಮತ್ತು ಪತ್ರಕರ್ತರ ಒಂದು ಗುಂಪು ಹಲವು ವರ್ಷಗಳಿಂದ “ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಇದರ ಆಶ್ರಯದಲ್ಲಿ ಪ್ರತಿವರ್ಷವೂ ಎರಡು ದಿನಗಳ ಚರ್ಚೆ-ಸಂವಾದ-ವಿಚಾರಸಂಕಿರಣಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ. ಎರಡು ವರ್ಷದ ಹಿಂದೆ ಇವರು ಚಿತ್ರದುರ್ಗದಲ್ಲಿ ನಡೆಸಿದ “ಮಾಧ್ಯಮ ಕರ್ನಾಟಕ” ನಾನು ಪಾಲ್ಗೊಂಡ ಮೊದಲ ಕಾರ್ಯಕ್ರಮ. ಆ ಸಂದರ್ಭದಲ್ಲಿ ನಾನು “ಪರ್ಯಾಯ ಮಾಧ್ಯಮ”ದ ಕುರಿತು ಮಾತನಾಡಿದ್ದೆ. ಅದಕ್ಕೆ ಸಿದ್ದವಾಗುವ ವೇಳೆಯಲ್ಲಿಯೇ “ವರ್ತಮಾನ.ಕಾಮ್”ನ ಯೋಚನೆ ಮೊಳೆತದ್ದು ಮತ್ತು ಆ ಸಭೆಯ ನಂತರದ ಕೆಲವು ಚರ್ಚೆಗಳಲ್ಲಿ ಅದು ಗಟ್ಟಿಯಾದದ್ದು ಎನ್ನುವುದು ನಮ್ಮ ಬಳಗದ ಅನೇಕರಿಗೆ ಗೊತ್ತಿರುವ ವಿಚಾರ. 2011 ರ “ಮಾಧ್ಯಮ ಕರ್ನಾಟಕ” ಕಾರ್ಯಕ್ರಮ ನಡೆದ ಎರಡು ತಿಂಗಳಿಗೆಲ್ಲ “ವರ್ತಮಾನ.ಕಾಮ್” ಆರಂಭವಾಗಿತ್ತು.

ಕಳೆದ ವರ್ಷ (2012) ಇದೇ ಗುಂಪು ಕುಪ್ಪಳಿಯಲ್ಲಿ “ಚಳವಳಿ ಕರ್ನಾಟಕ” ಕುರಿತು ಕಾರ್ಯಕ್ರಮ ಏರ್ಪಡಿಸಿತ್ತು. ಪ್ರಾಮಾಣಿಕತೆ ಮತ್ತು ಬದ್ಧತೆ ಉಳಿಸಿಕೊಂಡ ನಾಡಿನ ಅನೇಕ ಜನಪರ ಮನಸ್ಸುಗಳು, ಲೇಖಕರು, ಪತ್ರಕರ್ತರು, ಹೋರಾಟಗಾರರು ಅಲ್ಲಿ ನೆರೆದಿದ್ದರು. ಈ ವರ್ಷದ ಕಾರ್ಯಕ್ರಮ ಕಾರಣಾಂತರಗಳಿಂದ ಕೆಲ ತಿಂಗಳುಗಳ ಕಾಲ ಮುಂದೂಡಲ್ಪಟ್ಟರೂ ಇದೇ ನವೆಂಬರ್ ತಿಂಗಳ 16 ಮತ್ತು 17 ರಂದು ಹಾಸನದಲ್ಲಿ ನಡೆಯಲಿದೆ. ವಿಷಯ : “ಅಭಿವ್ಯಕ್ತಿ ಕರ್ನಾಟಕ”. ದೇವನೂರು ಮಹಾದೇವ, ದಿನೇಶ್ ಅಮೀನ್‌ಮಟ್ಟು, ಹೆಚ್.ನಾಗವೇಣಿ, ಸುಗತ ಶ್ರೀನಿವಾಸರಾಜು, ರಹಮತ್ ತರೀಕೆರೆ, ಫಣಿರಾಜ್, ಇನ್ನೂ ಅನೇಕ ಚಿಂತಕರು, ಲೇಖಕರು, ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಮತ್ತು ಮಾತನಾಡಲಿದ್ದಾರೆ. ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ವರ್ತಮಾನ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ. ವಿವರಗಳಿಗೆ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿರುವ ಆಯೋಜಕರನ್ನು ಸಂಪರ್ಕಿಸಿ ಮತ್ತು ಬರುವಿರಾದರೆ ಅವರಿಗೆ ತಿಳಿಸಿ. ಆಯೋಜನೆ ಮಾಡಲು ಅವರಿಗೂ ಸುಲಭವಾಗುತ್ತದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

’ನಾವು ನಮ್ಮಲ್ಲಿ’ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

“ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು” ಸಮಾನ ಮನಸ್ಕ ಬರಹಗಾರರ, ಚಿಂತಕರ ಒಕ್ಕೂಟ. ಇದು ಪ್ರತಿವರ್ಷ ’ನಾವು ನಮ್ಮಲ್ಲಿ’ ಎಂಬ ಕಾರ್ಯಕ್ರಮ ನಡೆಸುವುದರ ಮೂಲಕ ರಾಜ್ಯದ ಬರಹಗಾರರನ್ನು, ಸಮಾನ ಮನಸ್ಕ ಗೆಳೆಯರನ್ನು ಒಂದೆಡೆ ಸೇರಿಸಿ ಅವರ ತುಡಿತಗಳಿಗೆ, ಮುಕ್ತ ಸಂವಾದಕ್ಕೆ ವೇದಿಕೆ ಒದಗಿಸುತ್ತ ಬಂದಿದೆ. ರಾಜಕೀಯವಾಗಿ, ಸಾಂಸ್ಕೃತಿಕ, ಸಾಮಾಜಿಕವಾಗಿ ಕರ್ನಾಟಕ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿದ್ದೇವೆ. ಬಂಡವಾಳಶಾಹಿಗಳ ಕೈ ಸೇರಿ ಮಾಧ್ಯಮ ಕ್ಷೇತ್ರ ಹೇಗೆ ಸ್ಥಿತ್ಯಂತರವಾಗುತ್ತಿದೆ ಎಂಬ ಆತಂಕಗಳನ್ನು ಹಂಚಿಕೊಂಡಿದ್ದೇವೆ. ಹಕ್ಕು, ದನಿ, ಸ್ಥಾನಮಾನ, ಸಾಮಾಜಿಕ ಬದಲಾವಣೆಗೆ ಕಾರಣವಾದ ಚಳವಳಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡೆವು. ಈಗ `ಅಭಿವ್ಯಕ್ತಿ’ಯನ್ನು ಕುರಿತು ಒಂದಿಷ್ಟು ಆಲೋಚಿಸಬೇಕಾದ ಹೊತ್ತು. ಮುಕ್ತವಾಗಿ ನಮ್ಮ ಅಭಿಪ್ರಾಯವನ್ನು ದಾಖಲಿಸಲಾಗದ, ಅಸೂಕ್ಷ್ಮವಾದ, ಸಂಯಮವೇ ಇಲ್ಲದ ಕಾಲಘಟ್ಟದತ್ತ ಸಮಾಜ ಹೊರಳುತ್ತಿದೆ. ಮಾಧ್ಯಮ ಕೇಂದ್ರಿತವಾದ ಈ ಕಾಲದಲ್ಲಿ ಅಭಿವ್ಯಕ್ತಿಗೆ ಧಕ್ಕೆ ತರುವಂತಹ ಹಲವು ಘಟನೆಗಳು ಭಯ ಹುಟ್ಟಿಸುವಂತೆ ನಡೆಯುತ್ತಿದ್ದರೆ, ಪ್ರಚೋದಕವಾದ, ಆವೇಶದ, ಹಿಂಸಾತ್ಮಕ ಮಾತು ಮತ್ತು ದೃಶ್ಯಗಳು ಇನ್ನೊಂದೆಡೆ ಅಭಿವ್ಯಕ್ತಿಯ ಹೆಸರಿನಲ್ಲೇ ಎಡಬಿಡದೇ ಭಿತ್ತರಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸವಾಲು ಮತ್ತು ಅಭಿವ್ಯಕ್ತಿಯ ಹಲವು ಮಜಲುಗಳ ಸುತ್ತ ಚರ್ಚೆ ಮತ್ತು ಸಂವಾದ ನಡೆಸಲು ಎರಡು ದಿನಗಳ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕನ್ನಡದ ಆರೋಗ್ಯವಂತ ಮನಸ್ಸುಗಳು ಪಾಲ್ಗೊಂಡು ಈ ಸಮಾವೇಶ ಒಂದು ಮಹತ್ವದ ಹೆಜ್ಜೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ. ಕಾರ್ಯ ಕ್ರಮದ ರೂಪುರೇಷೆಯನ್ನು ತಿಳಿಸುವ ಪತ್ರವನ್ನು ಇದರೊಂದಿಗೆ ಇರಿಸಿದ್ದೇವೆ.

ನಾವೆಲ್ಲರೂ ಜೊತೆಗಿದ್ದು ಸಂವಾದವನ್ನು ಯಶಸ್ವಿಯಾಗಿಸೋಣ.

ನಿಮ್ಮ ಬರವನ್ನು ನಿರೀಕ್ಷಿಸುವ
ನಾವು ನಮ್ಮಲ್ಲಿ ಬಳಗ

ನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕ

One comment

Leave a Reply

Your email address will not be published.