ಮೋದಿಯ ಹಿಂದಣ ಸತ್ಯ, ಮಿಥ್ಯಗಳು…


– ಸಂಜ್ಯೋತಿ ವಿ.ಕೆ.


 

ಪ್ರಜಾಪ್ರಭುತ್ವ ವ್ಯವಸ್ಥೆ (ತನ್ನೆಲ್ಲ ಕೊರೆಗಳಿದ್ದಾಗ್ಯೂ) ಮನುಷ್ಯನ ಅತ್ಯುನ್ನತ ಸಾಮಾಜಿಕ ಆವಿಷ್ಕಾರಗಳಲ್ಲೊಂದು. ಮನುಷ್ಯನ ಸ್ವಾತಂತ್ರ್ಯ, ಘನತೆ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತೊಂದು ಪರ್ಯಾಯವಿಲ್ಲದಿರುವುದರಿಂದ ಈ ವ್ಯವಸ್ಥೆಯ ಕೊರೆಗಳನ್ನು ಮುಂದಿಟ್ಟುಕೊಂಡು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಬದಲಿಗೆ ಆ ಕೊರೆಗಳನ್ನು ಸರಿಪಡಿಸಿ ಇದನ್ನು ಮತ್ತಷ್ಟು ಬಲಪಡಿಸುವುದೇ ನಮ್ಮ ಮುಂದಿರುವ ಸವಾಲು ಮತ್ತು ಸಾಧ್ಯತೆ.

ಈ ವ್ಯವಸ್ಥೆಯ ಅತಿ ಮುಖ್ಯ ಹಕ್ಕು ಮತ್ತು ಭಾದ್ಯತೆ ಅಡಗಿರುವುದು ಚುನಾವಣೆ ಮತ್ತು ಮತದಾನದಲ್ಲಿ. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ, ಶ್ರೇಣೀಕೃತ ಅಸಮಾನ ಸಮಾಜದಲ್ಲಿ; ವಿಚಾರ-ಮಾಹಿತಿಗಳ ಪ್ರಸರಣ ಕೆಲವೇ ವ್ಯಕ್ತಿ, ಸಂಸ್ಥೆ, ವ್ಯವಸ್ಥೆಗಳ ಮರ್ಜಿಗೆ ಸಿಲುಕಿರುವಾಗ; grass-map-indiaಸಂಪೂರ್ಣ ಸಾಕ್ಷರತೆಯನ್ನೇ ಇನ್ನೂ ಸಾಧಿಸದ, ಅಕ್ಷರಸ್ಥರಾದರೂ ವಿದ್ಯಾವಂತರಾಗದ, ವಿದ್ಯೆಯ ಜೊತೆಗೆ ಜ್ಞಾನ ವಿವೇಚನೆಗಳನ್ನು ಸಮಾನವಾಗಿ ನಿರೀಕ್ಷಿಸಲಾಗದ ವ್ಯವಸ್ಥೆಯಲ್ಲಿ ಚುನಾವಣೆ-ಮತದಾನದ ಹಕ್ಕುಗಳು ನಿಚ್ಚಳವಾಗಿ ಚಲಾಯಿಸಲ್ಪಡುತ್ತವೆ ಮತ್ತು ಬಾಧ್ಯತೆಗಳು ನಿಭಾಯಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗದು. ಜೊತೆಗೆ ತೃತೀಯ ರಂಗ ಎಂಬುದು ಇನ್ನೂ ಒಂದು ಆದರ್ಶ ಕನಸಾಗಿಯೇ ಉಳಿದಿರುವಾಗ ಚುನಾವಣೆ ಎನ್ನುವುದು ಭಾಜಪ ಮತ್ತು ಕಾಂಗ್ರೆಸ್ ಎಂಬ ಎರಡು ಧೃವಗಳ ನಡುವಣ ಪೈಪೋಟಿಯಾಗಿರುವಾಗ ಚುನಾವಣಾ ಫಲಿತಾಂಶಗಳು ಜನರ ನೈಜ ಆಯ್ಕೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತದೆಂದು ಹೇಳಲಾಗದು.

ಇಷ್ಟೆಲ್ಲ ಸಂಕೀರ್ಣತೆಗಳ ನಡುವೆಯೂ 2004 ರ ಸಾರ್ವತಿಕ ಚುನಾವಣೆಯಲ್ಲಿ ಜನರನ್ನು ಮತ-ಧರ್ಮಗಳ ಹೆಸರಿನಲ್ಲಿ ಒಡೆಯುವ, ಭಾರತ ಹೊಳೆಯುತ್ತಿದೆ ಎಂಬ ಮಂಕುಬೂದಿ ಎರಚಲು ಹೊರಟ ಭಾಜಪವನ್ನು ಸೋಲಿಸಿದ್ದು ಇದೇ ಮತದಾರರು ದೇಶವನ್ನು ಅವೈಜ್ಞಾನಿಕ ರೀತಿಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳಿಗೆ (LPG) ಒಡ್ಡಿ ಅನೂಹ್ಯ ಆರ್ಥಿಕ, ಸಾಮಾಜಿಕ ಪರಿಣಾಮಗಳಿಗೆ ಕಾರಣವಾದ ಕಾಂಗ್ರೆಸ್ಸಿನ ಮೇಲೆ ಕಮ್ಯುನಿಸ್ಟರ ಕಣ್ಗಾವಲನ್ನು ಇರಿಸಲು ಸಾಧ್ಯವಾಗಿಸಿದ್ದು ಸಹ ಇದೇ ಮತದಾರರು. ಪಶ್ಚಿಮ ಬಂಗಾಳದಲ್ಲಿ ದೀರ್ಘಾವಧಿಯ ಅಧಿಕಾರ ದೊರೆತರೂ ಭ್ರಷ್ಟಾಚಾರವನ್ನು ವೈಯುಕ್ತಿಕ ನೆಲೆಯಲ್ಲಿ ಹತ್ತಿರ ಸುಳಿಯಗೊಡದಿದ್ದ ಕಮ್ಯುನಿಸ್ಟರು ತಮ್ಮದೇ ಸಿದ್ಧಾಂತಗಳನ್ನು ಸ್ವವಿಮರ್ಶೆಗೊಳಪಡಿಸಿ ಆಧುನಿಕತೆಗೆ ತೆರೆದುಕೊಳ್ಳದೆ ಸಂಕೋಲೆಗಳಾಗಿಸಿಕೊಂಡಾಗ ಅವರನ್ನು ನಿರಾಕರಿಸಿದ್ದು ಇದೇ ಪ್ರಜಾತಂತ್ರ ವ್ಯವಸ್ಥೆ. ನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ಕಲಿಯಬೇಕಾದ ಪಾಠಗಳಾಗಿ ದಾಖಲಾಗಿದ್ದು ನಿಜ (ರಾಜಕೀಯ ಪಕ್ಷಗಳಿಗೆ ಆ ಪಾಠಗಳನ್ನು ಕಲಿಯುವ ಮನಸ್ಸಿಲ್ಲದಿರುವುದು ವಿಷಾದನೀಯ). ಆದರೆ ಇಂತಹ ಅನಾಮಿಕ ಮತದಾರನ ಗುಪ್ತಗಾಮಿ ಶಕ್ತಿ (under current) ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಹರಿಯುತ್ತದೆ ಎನ್ನಲಾಗದು. ಧರ್ಮಾಂದತೆಯ ಅಫೀಮು ತಲೆಗೆ ಹತ್ತಿರುವ ಬಹುಸಂಖ್ಯಾತರ ಮತಗಳು ಧ್ರುವೀಕರಣಗೊಂಡು ಗುಜರಾತಿನಲ್ಲಿ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು.

ಈಗ ಈ ಗುಜರಾತ್ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಉಮೇದಿನಲ್ಲಿ ಭಾಜಪ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಭಾಜಪ ಮುಖ್ಯವಾಗಿ ನೆಚ್ಚಿಕೊಂಡಿರುವುದು ಒಂದು ಕಡೆ ಮತಾಂಧತೆಯ ಅಮಲು ಹತ್ತಿರುವ ಹಿಂದೂಗಳ ಮತಗಳನ್ನು; ಮತ್ತೊಂದೆಡೆ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಮಧ್ಯಮವರ್ಗದ ಮತಗಳನ್ನು. ಇದಲ್ಲದೆ ಮಾಧ್ಯಮಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ, ಜಾಲತಾಣಗಳಲ್ಲಿ ವಿಹರಿಸುತ್ತ ತಮಗೆ Modiಅನುಕೂಲವೆನಿಸುವ ಸತ್ಯಗಳನ್ನು ಅನುಮೋದಿಸುವ ವಿದ್ಯಾವಂತರೆನಿಸಿಕೊಂಡ ಅಕ್ಷರಸ್ಥರ ಮತಗಳನ್ನು ಸೆಳೆಯಲು ಇತ್ತೀಚಿನ ದಿನಗಳಲ್ಲಿ ಮೋದಿಯನ್ನು ‘ಸೆಕ್ಯುಲರ್’, ‘ಭ್ರಷ್ಟಾಚಾರ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಕನಿಷ್ಠ ವಿವೇಚನಾಶಕ್ತಿಯಿಂದ ನೈಜ ಸ್ಥಿತಿಯನ್ನು ವಸ್ತುನಿಷ್ಠವಾಗಿ ನೋಡುವ ಮನಸ್ಸಿದ್ದರೆ ಸಾಕು ಮತಾಂಧತೆಯಿಂದ ಜನಮಾನಸವನ್ನು ವಿಷಮಯವಾಗಿಸುವ, ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ‘ದೇಶಭಕ್ತ’ ಭಾಜಪವನ್ನು; ‘ಭಾರತೀಯ ಸಂಸ್ಕೃತಿ’ ಎಂಬ ಮಾಯಾಜಿಂಕೆಯನ್ನು ತೋರಿ ಬಹುಸಂಸ್ಕೃತಿಯನ್ನು ಅಳಿಸಿ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಮರುಸ್ಥಾಪಿಸಬಯಸುವಂತ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂಪರಿಷತ್‌ಗಳನ್ನು; ಮತ್ತು ಭಾರತದ ಸಂವಿಧಾನ ಕಾನೂನುಗಳ ಬಗ್ಗೆ ಯಾವುದೇ ಗೌರವವಿರದೆ ಉಳ್ಳವರ ಸೇವೆಗಾಗಿ ಇಡೀ ವ್ಯವಸ್ಥೆಯನ್ನು ಬಗ್ಗಿಸಲು ಹಿಂಜರಿಯದ ಭಾಜಪದ ಉತ್ಸವಮೂರ್ತಿ ಮೋದಿಯನ್ನು ಖಡಾಖಂಡಿತವಾಗಿ ನಿರಾಕರಿಸಲೇಬೇಕಾದ ಅನಿವಾರ್ಯತೆ ಏಕಿದೆ ಎಂದು ತಿಳಿಯುತ್ತದೆ.

ಗುಜರಾತ್ ಅಭಿವೃದ್ಧಿ ಎಂಬ ಭ್ರಮೆ

ಒಂದು ದೇಶ/ ರಾಜ್ಯದ ಒಟ್ಟಾರೆ ಆದಾಯ ಅಥವಾ ಸರಾಸರಿ ತಲಾವಾರು ಆದಾಯ ಹೆಚ್ಚಾಗುವುದನ್ನು Poverty_4C_--621x414ಆರ್ಥಿಕ ಬೆಳವಣಿಗೆ (economic growth) ಎಂದೂ, ಹಾಗೆ ಹೆಚ್ಚಾಗುವ ಆದಾಯ ಹೆಚ್ಚು ಸಮಾನವಾಗಿ ಹಂಚಿಕೆಯಾಗಿ ಉಳ್ಳವರ ಮತ್ತು ಬಡವರ ನಡುವಣ ಅಂತರವನ್ನು ಕಡಿಮೆಮಾಡಿದರೆ ಅದನ್ನು ಆರ್ಥಿಕ ಅಭಿವೃದ್ಧಿ (economic development) ಎಂದೂ ಗುರುತಿಸಬಹುದು. ಹೀಗೆ ಸಮಾನವಾಗಿ ಹಂಚಿಕೆಯಾದ ಆದಾಯವು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವುದನ್ನು ಮಾನವ ಅಭಿವೃದ್ಧಿ ಸೂಚ್ಯಂಕ (HDI) ಸೂಚಿಸುತ್ತದೆ. ಮೋದಿ ಆಳ್ವಿಕೆಯಲ್ಲಿ ‘HDI’ ನ ಬಹುತೇಕ ಎಲ್ಲ ಸೂಚಕಗಳೂ ಹಿಮ್ಮುಖ ಚಲನೆಯನ್ನೇ ತೋರುತ್ತವೆ. ಮೋದಿ ಮತ್ತು ಭಾಜಪ ಹೇಳಿಕೊಳ್ಳುವಂತೆ ಗುಜರಾತ್ ಹೊಳೆಯುತ್ತಲೂ ಇಲ್ಲ, ಅಭಿವೃದ್ಧಿಯ ಮುಂಚೂಣಿಯಲ್ಲೂ ಇಲ್ಲ.

  • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗೆ ದೇಶದಲ್ಲಿ 11 ನೇ ಸ್ಥಾನ.
  • 2004-10 ರ ನಡುವಣ ಶೇಕಡವಾರು ಬಡತನ ನಿವಾರಣೆಯಲ್ಲಿ ಗುಜರಾತ್ ಕೊನೆಯ ಸ್ಥಾನದಲ್ಲಿದೆ. (8.6%).
  • 1990-95 ರ ನಡುವೆ ರಾಜ್ಯದ ಒಟ್ಟಾರೆ ವೆಚ್ಚದ 4.25 %ರಷ್ಟಿದ್ದ ಸಾರ್ವಜನಿಕ ಆರೋಗ್ಯದ ಮೇಲಣ ಖರ್ಚು 2005-10 ರ ನಡುವೆ ಕೇವಲ 0.77 %ಕ್ಕೆ ಇಳಿದಿದೆ.
  • ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ವಿದ್ಯುತ್ ಲಭ್ಯತೆ ದಿನಂಪ್ರತಿ 10 ರಿಂದ 6 ಗಂಟೆಗಳಿಗೆ ಇಳಿದಿದೆ.
  • ಕಳೆದ ಹನ್ನೆರಡು ವರ್ಷಗಳಲ್ಲಿ ಔದ್ಯೋಗಿಕ ಬೆಳವಣಿಗೆ ದರ ಶೂನ್ಯದಲ್ಲಿ ನಿಂತಿದೆ.
  • ಗುಜರಾತಿನಲ್ಲಿ ಕೇವಲ 16.7 % ಜನರಿಗೆ ಸಾರ್ವಜನಿಕ ಕೊಳಾಯಿಯ ಮೂಲಕ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ.
  • ಇಲ್ಲಿನ 47% ಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ (ಇದು ಆಫ್ರಿಕಾದ ಅತೀ ಬಡ ರಾಷ್ಟ್ರಗಳ ಸರಾಸರಿಯನ್ನು ಮೀರಿಸಿದೆ).
  • ಶಿಶುಮರಣ ಅನುಪಾತ ಕಡಿತಗೊಳಿಸುವಲ್ಲಿ ಗುಜರಾತ್ ಹನ್ನೊಂದನೆ ಸ್ಥಾನದಲ್ಲಿದೆ.
  • ಇಲ್ಲಿ ಕೇವಲ 45% ರಷ್ಟು ಮಕ್ಕಳಿಗೆ ಜೀವರಕ್ಷಕ ಲಸಿಕೆಗಳನ್ನು ಕೊಡಲಾಗುತ್ತದೆ. ಗುಜರಾತಿಗೆ ಇದರಲ್ಲಿ 19 ನೇ ಸ್ಥಾನ.
  • ದೇಶದಲ್ಲಿ ನಾಲ್ಕನೇ ಅತಿಹೆಚ್ಚು ಬಾಲ್ಯವಿವಾಹಗಳು ನಡೆಯುವುದು ಗುಜರಾತಿನಲ್ಲಿ.
  • ಗುಜರಾತಿನಲ್ಲಿ ಶಾಲೆ ಬಿಡುವ ಮಕ್ಕಳ ಅನುಪಾತ 59%. ಮಕ್ಕಳು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಗುಜರಾತ್ 18 ನೇ ಸ್ಥಾನದಲ್ಲಿದೆ.
  • ಹೆಣ್ಣು-ಗಂಡು ಮಕ್ಕಳ ಅನುಪಾತದ ಅನುಸಾರ ಗುಜರಾತ್‌ಗೆ 24 ನೇ ಸ್ಥಾನ.
  • ಸಾಕ್ಷರತೆಯ ಸಾಧನೆಯಲ್ಲಿ ಗುಜರಾತ್ 12 ನೇ ಸ್ಥಾನದಲ್ಲಿದೆ.
  • ಯೋಜಿತ ಕಾರ್ಯಕ್ರಮಗಳ (ವಿಶೇಷವಾಗಿ ಅಭಿವೃದ್ಧಿ-ಬಡತನ ನಿರ್ಮೂಲನ ಕಾರ್ಯಕ್ರಮಗಳು) ಅನುಷ್ಟಾನದ ಅನುಪಾತ 73% ರಿಂದ (2003) 13% ಕ್ಕೆ (2011) ಕುಸಿದಿದೆ.
  • ಗುಜರಾತಿನ 28.2% ರಷ್ಟು ಪುರುಷರು ಮತ್ತು 32,3 %ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
  • ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮೋದಿಯ ಗುಜರಾತ್ ದೇಶಕ್ಕೆ ಮಾದರಿ ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿದ್ದ 15,000 ಜನರನ್ನು ಮೋದಿ ಒಂದೇ ದಿನದಲ್ಲಿ ರಕ್ಷಿಸಿದರು ಎಂಬೆಲ್ಲ ಸುಳ್ಳುಗಳು ಸರಾಗವಾಗಿ ಹರಿದಾಡುತ್ತಿರುವಾಗಲೇ ರಾತ್ರಿಯಿಡೀ ಸುರಿದ ಮಳೆಗೆ ಅಹiದಾಬಾದ್ ನಗರ ನೀರಿನಲ್ಲಿ ಮುಳುಗಿದ್ದ ಚಿತ್ರಗಳು (ಸೆಪ್ಟಂಬರ್ 25) ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಭೂಸುಧಾರಣೆಯಲ್ಲ, ಇದು ಭೂ ಕಬಳಿಕೆ

ಗುಜರಾತ್ ಅಭಿವೃದ್ಧಿ ಪ್ರಾಧಿಕಾರ (GIDC) ೮೦ರ ದಶಕದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. (1) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಭೂಮಿ ಒದಗಿಸುವುದು. (2) ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ವಿತರಿಸುವುದು. GIDC ವತಿಯಿಂದ ಪ್ರಾರಂಭವಾದ 262 ಕೈಗಾರಿಕಾ ಪ್ರದೇಶಗಳಲ್ಲಿ ಈಗ ಚಾಲ್ತಿಯಲ್ಲಿರುವುದು 182. ಅದೂ ಸಹ ದೊಡ್ಡ ಕೈಗಾರಿಕೆಗಳ/ಉದ್ದಿಮೆದಾರರ ಕೈ ಕೆಳಗೆ. ಸಾರ್ವಜನಿಕ ಉದ್ದೇಶಗಳಿಗಾಗಿ ಎಂದು ವಶಪಡಿಸಿಕೊಂಡ ರೈತರ ಭೂಮಿಯನ್ನು ಈಗ ಅಕ್ರಮವಾಗಿ ಖಾಸಗಿ ಉದ್ದಿಮೆದಾರರಿಗೆ ಮಾರುಕಟ್ಟೆದರದಲ್ಲಿ ಮಾರಿ ಲಾಭಗಳಿಸುತ್ತಿರುವುದು. ಅಂದು ಭೂಮಿ ಕಳೆದುಕೊಂಡ ರೈತರಿಗೆ ಎಸಗುತ್ತಿರುವ ದ್ರೋಹ.

ಗೋಮಾಳದ ಭೂಮಿಯನ್ನು ವಶಪಡಿಸಿಕೊಳ್ಳುವಾಗಲೂ ಮೋದಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಗೋಮಾಳಗಳು ಗ್ರಾಮಸಭೆ/ಪಂಚಾಯ್ತಿಗಳ ಒಡೆತನದಲ್ಲಿದ್ದು ಅವುಗಳನ್ನು ಅತೀ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾರುಕಟ್ಟೆಯ ದರಕ್ಕಿಂತ 30% ಹೆಚ್ಚಿನ ಬೆಲೆ ಕೊಟ್ಟು ಸರ್ಕಾರ ವಶಪಡಿಸಿಕೊಳ್ಳಬಹುದು. ಗುಜರಾತಿನಲ್ಲಿ ಹಳ್ಳಿಗಳ ಭೂರಹಿತರ (ಸಾಮಾನ್ಯವಾಗಿ ದಲಿತರು ಮತ್ತು ಮುಸ್ಲಿಂರು) ಆರ್ಥಿಕತೆ ಬಹುತೇಕ ಈ ಗೋಮಾಳಗಳನ್ನು ಅವಲಂಭಿಸಿದೆ. ಆದಾಗ್ಯೂ ಗ್ರಾಮಸಭೆ/ಪಂಚಾಯಿತಿಯ ಅನುಮತಿ ಪಡೆಯದೆಯೆ ಸಾಕಷ್ಟು ಗೋಮಾಳದ ಜಾಗವನ್ನು ಖಾಸಗಿ ಕೈಗಾರಿಕೆಗಳಿಗೆ ನೀಡಲು/SEZ ಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. Reliance-Gujarathಹಾಗೆ ವಶಪಡಿಸಿಕೊಳ್ಳುವಾಗ ಅವುಗಳ ಮಾರುಕಟ್ಟೆ ದರವನ್ನು ಬಹಳ ಕಡಿಮೆಯಾಗಿ ನಮೂದಿಸಲಾಗಿದೆ.

ಭಾವ್‌ನಗರದ ಮಹುವ ಕಡಲತೀರದ ಭೂಮಿಯನ್ನು ಕೃಷಿಯೋಗ್ಯವಲ್ಲದ ಜೌಳುಭೂಮಿಯೆಂದು ವರ್ಗೀಕರಿಸಿ ನಿರ್ಮಾ ವಿಶೇಷ ಆರ್ಥಿಕ ವಲಯದ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಆದರೆ ಇದು ಗುಜರಾತಿನ ಅತ್ಯಂತ ಫಲವತ್ತಾದ ಭೂಪ್ರದೇಶಗಳಲ್ಲೊಂದು. ಮಹಾರಾಷ್ಟ್ರದ ನಾಸಿಕ್‌ನ ನಂತರ ಭಾರತದ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಈ ಮಹುವ. ಗುಜರಾತಿನ ಬಹುತೇಕ ಕಡಲತೀರ ಸುಣ್ಣದ ಕಲ್ಲಿನಿಂದ ಆವೃತ್ತವಾಗಿದ್ದು ಇದು ಸಮುದ್ರದ ನೀರಿನಿಂದ ಉಪ್ಪನ್ನು ಹೀರಿ ತೀರಕ್ಕೆ ಹೊಂದಿಕೊಂಡ ಸುಮಾರು 50 ಕಿ.ಮೀ. ಪ್ರದೇಶಕ್ಕೆ ಶುದ್ಧ ಸಿಹಿ ನೀರನ್ನು ಬಿಡುಗಡೆ ಮಾಡುತ್ತದೆ. ಇದರಿಂದ ತೀರ ಪ್ರದೇಶದ ರೈತರು ವರ್ಷದಲ್ಲಿ ಮೂರು ಬೆಳೆ ತೆಗೆಯುವಷ್ಟು ಈ ಭೂಮಿ ಫಲವತ್ತಾಗಿದೆ. ನಿರ್ಮಾದ ಲೆಕ್ಕಾಚಾರವೇ ಬೇರೆ. ಇಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರೆ ಈ ಸುಣ್ಣದ ಕಲ್ಲುಗಳನ್ನು ಒಡೆದು ಸಿಮೆಂಟ್ ತಯಾರಿಸಿ ಇಲ್ಲೇ ಅಭಿವೃದ್ಧಿ ಪಡಿಸುವ ಬಂದರಿನ ಮೂಲಕ ಸಾಗಿಸಬಹುದಾದ್ದರಿಂದ ಸಾಗಾಣಿಕಾ ವೆಚ್ಚವೂ ಉಳಿಯಿತು. ಅಲ್ಲಿಗೆ ಫಲವತ್ತಾದ ಈ ಭೂಮಿ ನಿಜಕ್ಕೂ ಜೌಳು ಭೂಮಿಯೇ ಆಗುವುದಲ್ಲ! ಈ SEZ ಸ್ಥಾಪಿಸಿದರೆ ತೀರ ಪ್ರದೇಶದ ರೈತರು ಮಾತ್ರವಲ್ಲದೆ ಮೀನುಗಾರರು ಸೇರಿದಂತೆ ಸುಮಾರು 15,000 ಜನರ ಆರ್ಥಿಕತೆಗೆ ಕುತ್ತು ಬರುತ್ತದೆ. ಆದರೆ ಮೋದಿ ಸರ್ಕಾರ ನಿರ್ಮಾಕ್ಕೆ ಜಮೀನು ಮಂಜೂರು ಮಾಡಲು ನೀಡಿರುವ ಕಾರಣ ‘ಇದರಿಂದ ಸುಮಾರು 416 ಜನರಿಗೆ ಉದ್ಯೋಗಾವಕಾಶ ದೊರೆಯುವುದು’ ಎಂದು!

ಕಛ್‌ನ ಮುಂದ್ರಾದಲ್ಲಿ ಅದಾನಿ ಸಮೂಹ ಸಂಸ್ಥೆಗೆ ಬಂದರು ಮತ್ತು ವಿಶೇಷ ವ್ಯಾಪಾರ ವಲಯ ಸ್ಥಾಪನೆಗಾಗಿ ಅರಣ್ಯಹಕ್ಕು ಕಾಯ್ದೆ (2008) ಯನ್ನು ಧಿಕ್ಕರಿಸಿ 56 ಮೀನುಗಾರಿಕಾ ಗ್ರಾಮಗಳನ್ನು, 126 ಠರಾವಣೆಗಳನ್ನು ಈಗಾಗಲೇ ಒಕ್ಕಲೆಬ್ಬಿಸಲಾಗಿದೆ. ಇದು ಮೀನುಗಾರರ ಸಮುದ್ರದ ಮೇಲಣ ಸಹಜ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ ಅರಣ್ಯ ಉತ್ಪನ್ನಗಳ ಅವಲಂಬಿತರ, ದನಗಾಹಿಗಳ ಹಾಗೂ ತೀರ ಪ್ರದೇಶದ ರೈತರ ಜೀವನಾಧಾರವನ್ನೇ ಕಸಿಯುತ್ತವೆ. ಒಟ್ಟಾರೆಯಾಗಿ ಮೋದಿಯ ಈ ಮಾದರಿ ಗ್ರಾಮೀಣ ಆರ್ಥಿಕತೆಯ ಮೇಲೆ ಗದಾಪ್ರಹಾರ.

ಅದಾನಿ ಸಂಸ್ಥೆಗೆ ಈಗಾಗಲೇ ಪ್ರತಿ ಚ.ಮೀ.ಗೆ ರೂ.1 – ರೂ.32 ರಂತೆ (ಮಾರುಕಟ್ಟೆ ಬೆಲೆ ರೂ.1500) 5 ಕೋಟಿ ಚ.ಮೀ. ಕಡಲ ತೀರದ ಭೂಮಿಯನ್ನು ಮಂಜೂರು ಮಾಡಲಾಗಿದೆ. ಬಂದರು ಅಭಿವೃದ್ಧಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದ ಈ ಭೂಮಿಯ ಸಾಕಷ್ಟು ಭಾಗವನ್ನು ಅದಾನಿ ಸಂಸ್ಥೆ ಬೇರೆ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿದೆ/ಭೋಗ್ಯಕ್ಕೆ ನೀಡಿದೆ. ಇದು ಸರ್ಕಾರದೊಂದಿಗಿನ ಖರೀದಿ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.

ಹಾಜೀರಾ ಪ್ರದೇಶದಲ್ಲಿ ಪ್ರತಿ ಚ.ಮೀ.ಗೆ ಜಿಲ್ಲಾ ಭೂಮೌಲ್ಯಮಾಪನ ಸಮಿತಿ (DLVC) ರೂ.1000 – ರೂ.1050 ಎಂದೂ ರಾಜ್ಯ ಭೂಮೌಲ್ಯಮಾಪನ ಸಮಿತಿ (SLVC) ರೂ.2020 ಎಂದೂ ಬೆಲೆ ನಿಗದಿ ಮಾಡಿದ್ದರೂ L&T ಸಂಸ್ಥೆಗೆ ರೂ.700/ ಚ.ಮೀ.ಯಂತೆ 8.53 ಲಕ್ಷ ಚದುರ ಕಿಮೀ ಭೂಮಿಯನ್ನು ಹಸ್ತಾಂತರಿಸುವ ನಿರ್ಧಾರವನ್ನು ಮೋದಿಯ ಸಂಪುಟ (2008) ಅನುಮೋದಿಸಿತು. ಇದರಿಂದ ಉತ್ತೇಜನಗೊಂಡು 2009 ರಲ್ಲಿ ಯೋಜನೆಯ ವಿಸ್ತರಣೆಗಾಗಿ ಇನ್ನೂ 12.14 ಲಕ್ಷ ಚ.ಮೀ. ಭೂಮಿಗಾಗಿ L&T ಸಂಸ್ಥೆ ಕೋರಿಕೆ ಸಲ್ಲಿಸಿತು. ಈ ಬಾರಿ DVLC ನಿಗದಿಪಡಿಸಿದ ಬೆಲೆ ರೂ.2400-ರೂ.2800. ಆಗಲೂ ಮೋದಿಯ ಸಂಪುಟ ಹಳೆಯ ದರದಲ್ಲೇ 5.8 ಲಕ್ಷ ಚ.ಮೀ. ಭೂಮಿಯನ್ನು L&T ಸಂಸ್ಥೆಗೆ ನೀಡಿತು. ಇದರಿಂದ ಸರ್ಕಾರಕ್ಕಾದ ನಷ್ಟ ರೂ.128.71 ಕೋಟಿ. ಇದು ಇಲ್ಲಿಗೇ ನಿಲ್ಲದೆ ಹಾಜಿರಾದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಆವರಿಸಿಕೊಂಡಿದ್ದ ಎಸ್ಸಾರ್ ಸ್ಟೀಲ್ ಅದನ್ನು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಹಾಕಿದಾಗ ಇದೇ ರಿಯಾಯಿತಿ ದರದಲ್ಲಿ ಅದನ್ನು ಸಕ್ರಮಗೊಳಿಸಿ ಸರ್ಕಾರ ರೂ.238.5 ಕೋಟಿ ನಷ್ಟಮಾಡಿಕೊಂಡಿತು.

ಮೋದಿ ಸರ್ಕಾರದ ವಿವೇಚನಾರಹಿತ (ಅಥವ ಉದ್ದೇಶಪೂರ್ವಕ) ಯೋಜನೆಗಳಿಗೆ ಮತ್ತೊಂದು ನಿದರ್ಶನ ವಾಗ್ರಾ ಮತ್ತು ಭರೂಛ್‌ನ ರೈತರ ಪರಿಸ್ಥಿತಿ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲೆಂದೇ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಈಗ ಇದೇ ಭಾಗದ ನರ್ಮದಾ ಅಚ್ಚುಕಟ್ಟು ಪ್ರದೇಶದ 14,977 ಹೆಕ್ಟೇರ್ ಭೂಮಿಯನ್ನು ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ವಿಶೇಷ ಹೂಡಿಕೆ ವಲಯ ಸ್ಥಾಪನೆಗೆಂದು ವಶಪಡಿಸಿಕೊಳ್ಳಲಾಗಿದೆ. ನರ್ಮದಾ ನದಿಯ ಬಹುತೇಕ ನಾಲೆಗಳ ನೀರು ಜನರ ದಾಹವನ್ನು, ರೈತರ ಬವಣೆಯನ್ನು ತೀರಿಸುವ ಬದಲು ಬೃಹತ್ ಕೈಗಾರಿಕೆಗಳ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಉದಾ: ವಡೋದರ ಬಳಿ ಸ್ಥಾಪಿಸಲಾಗಿರುವ ರಾಸಾಯನಿಕ ಕೈಗಾರಿಕೆಗಳು ಶ್ರಮವೇ ಇಲ್ಲದೆ ನರ್ಮದಾ ನಾಲೆಯ ನೀರನ್ನು ಬಳಸಿಕೊಂಡು ನಗರದ ಸಂಸ್ಕರಿತ ಕೊಳಚೆ ನೀರನ್ನು ಒಯ್ಯುವ ನಾಲೆಗೆ ತಮ್ಮ ಸಂಸ್ಕರಿಸದ ತ್ಯಾಜ್ಯ ನೀರನ್ನು ಸುರಿಯುತ್ತದೆ. ಇದು ಮಾಹಿ ನದಿಯನ್ನು ಸೇರುತ್ತದೆ. ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವ ಕಾನೂನೂ ಇವರನ್ನು ಅಲುಗಿಸಲಾರದು. ದೇಶದ ಅತಿ ಹೆಚ್ಚು ಮಲಿನಗೊಂಡ ೮೮ ಪ್ರದೇಶಗಳ ಪೈಕಿ 8 ಗುಜರಾತಿಗೆ ಸೇರಿರುವುದು ಸಹಜವೇ ಆಗಿದೆ. ಗುಜರಾತಿನ ವಾಪಿ ಮತ್ತು ಅಂಕಲೇಶ್ವರ ನಗರಗಳು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಸರ್ಕಾರಿ ಉದ್ದಿಮೆಗಳ ಅವನತಿ ಮತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ

ಮೋದಿ ಮತ್ತವರ ಪ್ರಚಾರಕರು ಗುಜರಾತಿನಲ್ಲಿ ಸರ್ಕಾರಿ ಉದ್ದಿಮೆಗಳಿಗೆ ವೃತ್ತಿಪರತೆ ತಂದಿರುವುದಾಗಿ ಸಾರುತ್ತಿದ್ದರೂ ಸಿಎಜಿಯ ಇತ್ತೀಚಿನ ಮೂರು ವರದಿಗಳು ಬೇರೆಯದೇ ಕಥೆ ಹೇಳುತ್ತವೆ. ಇದರ ಪ್ರಕಾರ ಗುಜರಾತಿನ ಸರ್ಕಾರಿ ಉದ್ದಿಮೆಗಳು ಅನುಭವಿಸಿದ ರೂ.4052.37 ಕೋಟಿ ನಷ್ಟವನ್ನು ಉತ್ತಮ ಆಡಳಿತ ನಿರ್ವಹಣೆ ಮತ್ತು ನಿಯಂತ್ರಿಸಬಹುದಾದ ನಷ್ಟಗಳನ್ನು ತಡೆಯುವುದರಿಂದ ತಪ್ಪಿಸಬಹುದಾಗಿತ್ತು. ಇಂತಹ ನಷ್ಟಗಳು ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಈ ವರದಿಗಳು ತೋರುತ್ತವೆ. 2006-11 ರವರೆಗಿನ ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., (GSPCL) ಒಟ್ಟಾರೆ ಆದಾಯ 19245.39 ಕೋಟಿ. ಅದರಲ್ಲಿ ತನ್ನ ಸ್ವಂತ ಉತ್ಪಾದನೆಯ ಮಾರಾಟದಿಂದ ಬಂದ ಆದಾಯ ಕೇವಲ ರೂ.1563.63 ಕೋಟಿ (ಶೇ.8) ಮಾತ್ರ. ಉಳಿದ ಆದಾಯ ಇತರ ಖಾಸಗಿ ಉತ್ಪಾದಕರ ಉತ್ಪನ್ನಗಳ ಮಾರಾಟದಿಂದ ಬಂದದ್ದು.

ಮೋದಿ ತಾನು ಉದ್ಯಮಸ್ನೇಹಿ ಪರಿಸರ ನಿರ್ಮಿಸಿ ಗುಜರಾತನ್ನು ಅಭಿವೃದ್ಧಿ ಪರವಾಗಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಸಿಎಜಿ ವರದಿಗಳು ambani-modiಮೋದಿ ಸಾರ್ವಜನಿಕರ ಹಾಗೂ ಸರ್ಕಾರ ಉದ್ದಿಮೆಗಳ ಬೆಲೆ ತೆತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ ಮಾಡುತ್ತಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ. GSPCL ಹಾಗೂ ರಿಲೆಯನ್ಸ್ ಇಂಡಸ್ಟ್ರೀಸ್ ಲಿ., ನಡುವಣ ಒಪ್ಪಂದದ ಪ್ರಕಾರ (2007) ರೂ.52.27 ಕೋಟಿ ಸಾಗಾಣಿಕಾ ವೆಚ್ಚವನ್ನು ಸಂಗ್ರಹಿಸಬೇಕಿತ್ತು. ಮತ್ತೊಂದೆಡೆ ಹಲವು ಖಾಸಗಿ ಸಂಸ್ಥೆಗಳು ಒಪ್ಪಿಕೊಂಡ ಸರಕನ್ನು ಕೊಳ್ಳದ ಕಾರಣಕ್ಕೆ ರೂ.502.19 ಕೋಟಿಯನ್ನು ಸಂಗ್ರಹಿಸಬೇಕಿತ್ತು. ಆದರೆ ಅದರ ಮೇಲಿನ ದಂಡವನ್ನೂ ಸೇರಿಸಿ ಇದನ್ನು ಮಾಫಿ ಮಾಡಲಾಗಿದೆ. (ಮುಖ್ಯ ಫಲಾನುಭವಿಗಳು ಎಸ್ಸಾರ್ ಪವರ್ ಲಿ., ಮತ್ತು ಗುಜರಾತ್ ಪಗುನಾನ್ ಎನರ್ಜಿ ಕಾರ್ಪೊರೇಷನ್ ಲಿ.,) ಇದೆಲ್ಲವನ್ನೂ ಬಿಟ್ಟುಕೊಟ್ಟು ನಷ್ಟಮಾಡಿಕೊಂಡಿದ್ದೇಕೆ ಎಂಬ ಸಿಎಜಿ ಪ್ರಶ್ನೆಗೆ ಸಮರ್ಪಕ ಉತ್ತರವೇ ಇಲ್ಲ. ಅನಿಲ ವಹಿವಾಟಿನಲ್ಲಿ (2006-09) ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಅದಾನಿ ಎನರ್ಜಿಸ್‌ಗೆ ಅನಿಲ ಮಾರಿ ರೂ.20.54 ಕೋಟಿ ನಷ್ಟ ಅನುಭವಿಸಿದ್ದು ದಾಖಲಾಗಿದೆ. ಒಪ್ಪಂದ ನಿರ್ವಹಣೆಯಲ್ಲಿನ ತಪ್ಪಿನಿಂದ ಎಸ್ಸಾರ್ ಆಯಿಲ್ ಲಿ.,ಗೆ ಆದ ಲಾಭ ಅಥವಾ GSPCL ಗೆ ಆದ ನಷ್ಟ 106.71 ಕೋಟಿ. ಈ ರೀತಿ ಸರ್ಕಾರಿ ಉದ್ದಿಮೆಗಳ ಉತ್ಪಾದನಾ ಚಟುವಟಿಕೆಗಳನ್ನು ಕುಗ್ಗಿಸುವುದು ಹೀಗೆ ಕಣ್ಣು ಮುಚ್ಚಿಕೊಂಡು ನಷ್ಟ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮುಂದೊಂದು ದಿನ ನಿರಂತರ ನಷ್ಟದ ನೆಪ ಒಡ್ಡಿ ಇಂತಹ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ತೆರೆದಿಡುವುದು ಇವೆಲ್ಲ ಕಣ್ಣಮುಂದಿನ ತೆರೆದ ರಹಸ್ಯಗಳು.

ಮೋದಿ ಸರ್ಕಾರದ ಇಷ್ಟೆಲ್ಲ ಹಗರಣಗಳನ್ನು ಮಾಧ್ಯಮಗಳು ಜಾಣಕುರುಡಿನಿಂದ ನಿರ್ಲಕ್ಷಿಸುತ್ತ ಮೋದಿ ಕುರಿತಾದ ಕ್ಷುಲ್ಲಕ ವಿಷಯಗಳನ್ನು ದೊಡ್ಡ ವಿಷಯವೆಂಬಂತೆ ಬಿಂಬಿಸುತ್ತ ಆತ ನಿರಂತರ ಪ್ರಚಾರದಲ್ಲಿರುವಂತೆ ನೋಡಿಕೊಳ್ಳುತ್ತಿವೆ. ಈ ರೀತಿ ಮಾಧ್ಯಮಗಳ ನೈತಿಕ ಪ್ರಜ್ಞೆಯನ್ನು ಮಂಕಾಗಿಸಿರುವುದು ಮೋದಿ ಸರ್ಕಾರದ ಕಾರ್ಪೋರೇಟ್ ಫಲಾನುಭವಿಗಳ ಹಣ ಮತ್ತು ಸನಾತನಿಗಳ ಮನಸ್ಸು.

“ಸಿಎಜಿ ವರದಿಯಲ್ಲಿನ ಉಲ್ಲೇಖಗಳು ಭ್ರಷ್ಟಾಚಾರವಲ್ಲ ಕೇವಲ ಆಡಳಿತಾತ್ಮಕ ತಪ್ಪುಗಳು. ಅವನ್ನು ಸರಿಪಡಿಸಿಕೊಳ್ಳಲಾಗುವುದು,” ಎಂಬುದು ಮೋದಿ ಸರ್ಕಾರದ ಪ್ರತಿಕ್ರಿಯೆ. ಸಿಎಜಿ ವರದಿಯನ್ನೇ ಆಧರಿಸಿದ 2ಜಿ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳಲ್ಲಿನ ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡ ಭಾಜಪ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇದೇ ಮೋದಿಯನ್ನು ಅನುಮೋದಿಸಬೇಕೆನ್ನುತ್ತದೆ!

ಭ್ರಷ್ಟಾಚಾರ ವಿರೋಧಿ ಮುಖವಾಡ

ಸಿಎಜಿ ವರದಿಯಲ್ಲಿ ಬಯಲಾದ ಭ್ರಷ್ಟಾಚಾರಗಳು ಒತ್ತೊಟ್ಟಿಗಿರಲಿ, ಮೋದಿಯ ಭ್ರಷ್ಟಾಚಾರ ವಿರೋಧಿ ಮುಖವಾಡವನ್ನು ಕಿತ್ತೊಗೆಯಲು ಭ್ರಷ್ಟಾಚಾರ ನಿಯಂತ್ರಣಕ್ಕಾಗಿಯೇ ಇರುವ ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಈತ ನಿಯಂತ್ರಿಸಲು ಹೊರಟಿರುವ ರೀತಿಯೇ ಸಾಕು. 2004 ರಿಂದಲೂ ಗುಜರಾತಿನಲ್ಲಿ ಲೋಕಾಯುಕ್ತರ ಹುದ್ದೆ ಖಾಲಿ ಇದೆ. ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ರಾಜ್ಯಪಾಲೆ ಕಮಲಾ ಬಿನಿವಾಲ್ ಸಂಪುಟ Narendra_Modiಮತ್ತು ಮುಖ್ಯಮಂತ್ರಿ ಮೋದಿಯನ್ನು ಕಡೆಗಣಿಸಿ 2011ರಲ್ಲಿ ನಿವೃತ್ತ ನ್ಯಾ.ವಿ.ಆರ್.ಮೆಹ್ತಾರನ್ನು ಈ ಹುದ್ದೆಗೆ ನೇಮಕಮಾಡಿದರು. ಇದನ್ನು ವಿರೋಧಿಸಿ ಮೋದಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್‌ನಲ್ಲಿ ನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಲೋಕಾಯುಕ್ತರ ನೇಮಕಾತಿ ಊರ್ಜಿತವಾಯಿತು (ಖಟ್ಲೆ ಖರ್ಚಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಸಾರ್ವಜನಿಕರ ಹಣ ರೂ.45 ಕೋಟಿ). ಆದರೆ ನ್ಯಾ.ವಿ.ಆರ್.ಮೆಹ್ತಾ ಆ ಹುದ್ದೆಯ ಘನತೆಯನ್ನು ಕಾಪಾಡಲಾಗದ ಸರ್ಕಾರದಲ್ಲಿ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಲು ನಿರಾಕರಿಸಿದರು.

ಇಷ್ಟೆಲ್ಲ ಆದಮೇಲೂ ಮೋದಿ ಮಾಡಿದ್ದು ಬಲಿಷ್ಠ ಲೋಕಾಯುಕ್ತವನ್ನು ಸಹಿಸಲಾಗದ ಭ್ರಷ್ಟ ಸರ್ಕಾರ ಅಥವಾ ಅಹಂ ಪೆಟ್ಟಾದ್ದನ್ನು ಸಹಿಸಲಾಗದ ಸರ್ವಾಧಿಕಾರಿ ಮಾಡುವಂತದ್ದನ್ನೇ. 1986 ರ ಲೋಕಾಯುಕ್ತ ಕಾಯ್ದೆಗೆ ಬದಲಾವಣೆ ತಂದು ಲೋಕಾಯುಕ್ತರ ನೇಮಕಾತಿಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರ ಪಾತ್ರವನ್ನು ಗೌಣವಾಗಿಸಿ ಅದನ್ನು ಮುಖ್ಯಮಂತ್ರಿಯ ಕೆಳಗೆ ತರಲಾಗಿದೆ. ಅಷ್ಟೇ ಅಲ್ಲದೆ ಹೊಸ ಕಾಯ್ದೆಯ ಪ್ರಕಾರ ಸರ್ಕಾರ ಬಯಸಿದಲ್ಲಿ ಯಾವುದೇ ಸರ್ಕಾರಿ ಯಂತ್ರವನ್ನು ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಬಹುದಾಗಿದೆ. ಈ ಕಾಯ್ದೆಗೆ ಸದನದ ಅನುಮೋದನೆ ದೊರೆತರೂ ರಾಜ್ಯಪಾಲರ ಸಹಿಗಾಗಿ ಇನ್ನೂ ಕಾಯುತ್ತಿದೆ. (ಇದೇ ಮೋದಿ ಕೇಂದ್ರದಲ್ಲಿ ತಾನು ಅಣ್ಣಾ ಹಜಾರೆಯ ಲೋಕಪಾಲ ಕಾಯ್ದೆಯನ್ನು ಬೆಂಬಲಿಸುವುದಾಗಿ ಹೇಳುತ್ತಾರೆ.)

ಹಳಿತಪ್ಪಿದ ಆಡಳಿತ

ಭಾಜಪ ಮೋದಿಯನ್ನು ಅತ್ಯುತ್ತಮ ಆಡಳಿತಗಾರ ಎಂದು ಹಾಡಿ ಹೊಗಳುತ್ತಿದೆ. ಆದರೆ 2008-11 ರ ನಡುವೆ ರಾಜ್ಯದ ಹೂಡಿಕೆಗಳ ಮೇಲಣ ಗಳಿಕೆ (ROI) ಕೇವಲ 0.25%. ಸರ್ಕಾರ ಈ ಅವಧಿಯಲ್ಲಿ ಪಾವತಿಸಿದ ಸಾಲದ ಮೇಲಣ ಬಡ್ಡಿ ಸರಾಸರಿ 7.67%ರಷ್ಟು. ಇದು ರಾಜ್ಯದ ಮಧ್ಯಮ ಮತ್ತು ದೀರ್ಘಕಾಲೀನ ಆರ್ಥಿಕತೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ನಿಶ್ಚಿತ. ಸರ್ದಾರ್ ಸರೋವರ್ ಯೋಜನೆಯನ್ನು ಒಳಗೊಂಡಂತೆ ಬಹುತೇಕ ಸರ್ಕಾರಿ ಯೋಜನೆಗಳಲ್ಲಿನ ಅತಿಹೆಚ್ಚಿನ ಖರ್ಚು (55%) ಸಾಲದ ಮೇಲಣ ಬಡ್ಡಿಯೇ ಆಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಒಂದು ಕಡೆ ಶಿಕ್ಷಣ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿರುವುದು, ಉತ್ಪಾದನಾ ಸಾಮರ್ಥ್ಯ ಕುಗ್ಗುತ್ತಿರುವುದು ಮತ್ತೊಂದೆಡೆ ರಾಜ್ಯದ ಮೇಲಿನ ಸಾಲ, ಬಡ್ಡಿಗಳ ಹೊರೆ ಹೆಚ್ಚಾಗುತ್ತಿರುವುದು ಗುಜರಾತಿನ ಆರ್ಥಿಕತೆ ಅವನತಿಯತ್ತ ಸಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದಲಿತವಿರೋಧಿ ಧೋರಣೆ

“ನನಗೆ ಇವರು (ದಲಿತರು) ತಮ್ಮ ಕೆಲಸವನ್ನು ಕೇವಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ ಅನ್ನಿಸುವುದಿಲ್ಲ. ಹಾಗಿದ್ದಲ್ಲಿ ಇವರು ತಲತಲಾಂತರದಿಂದ ಇದೇ ಕೆಲಸಗಳನ್ನು ಮಾಡಿಕೊಂಡಿರುತ್ತಿರಲಿಲ್ಲ… ಯಾವುದೋ ಒಂದು ಗಳಿಗೆಯಲ್ಲಿ ಅವರಿಗೆ ‘ಸಮಾಜದ ಹಾಗೂ ದೇವರ ಸಂತೋಷಕ್ಕಾಗಿ ದುಡಿಯುವುದು ತಮ್ಮ ಕೆಲಸ, ದೇವರು ತಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದು ತಮ್ಮ ಕರ್ತವ್ಯ. ಶುಚಿಗೊಳಿಸುವ ಈ ಕೆಲಸ ತಮ್ಮೊಳಗಣ ಆಧ್ಯಾತ್ಮಿಕ ಕಸುವು’ ಎಂದು ಜ್ಞಾನೋದಯವಾಗಿದ್ದಿರಬೇಕು.” ಇವು ತನ್ನ ಕರ್ಮಯೋಗ ಪುಸ್ತಕದಲ್ಲಿ (2007) ಮೋದಿ ಹೇಳಿರುವ ಮಾತುಗಳು. ಇವು ಸ್ಪಷ್ಟವಾಗಿ ಮೋದಿಯ ಫ್ಯಾಸಿಸ್ಟ್, ದಲಿತವಿರೋಧಿ, ಸನಾತನವಾದಿ modi-advaniಮನಸ್ಥಿತಿಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಆತನ ಎಲ್ಲ “ಅಭಿವೃದ್ಧಿ” ಯೋಜನೆಗಳೂ ಬಲ್ಲಿದರ ಪರವಾಗಿಯೂ ಶೋಷಿತರ, ದಲಿತರ ವಿರುದ್ಧವಾಗಿಯೂ ಇರುತ್ತವೆ.

2011 ರ ಸಿಎಜಿ ವರದಿ ಪ್ರಕಾರ ಗುಜರಾತ್ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಭೂಮಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ಭೂರಹಿತರಿಗೆ ಹಂಚಬೇಕಿದ್ದ 15,587 ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಕ್ಕೆ ಸರಿಯಾದ ಕಾರಣ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. 2008-11 ರ ನಡುವೆ ನಡೆದ ಭೂಹಂಚಿಕೆಯಲ್ಲಿ ಕೇವಲ 52% ಫಲಾನುಭವಿಗಳಿಗೆ (1003 ರಲ್ಲಿ 520 ಜನರಿಗೆ) ಮಾತ್ರ ಹೆಕ್ಟೇರಿಗೆ ರೂ.5,000 ಸಹಾಯಧನ ನೀಡಲಾಗಿದೆ. ಉಳಿದವರಿಗೆ ಈ ಸೌಲಭ್ಯ ವಿಸ್ತರಿಸದಿರುವುದಕ್ಕೆ ಯಾವುದೇ ಸೂಕ್ತ ವಿವರಣೆ ಇಲ್ಲ. ಇಂತಹ ಮೋದಿಯ ಪರಿವಾರಕ್ಕೆ ಅಧಿಕಾರ ಸಿಕ್ಕರೆ ಭಾರತದ ಹಿಮ್ಮುಖ ಚಲನೆ ಬಹುವೇಗವಾಗಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲ್ಪಸಂಖ್ಯಾತರು ಎರಡನೇ ದರ್ಜೆ ಪ್ರಜೆಗಳು

ಭಾರತ ಭಾರತೀಯರೆಲ್ಲರ ರಾಷ್ಟ್ರವೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ‘ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಮುಸ್ಲಿಮರಾದಿಯಾಗಿ ಇತರ ಎಲ್ಲ ಧರ್ಮೀಯರು ಇವರ ಪಾರಮ್ಯವನ್ನು ಒಪ್ಪಿ ಇವರಿಗೆ ಬಗ್ಗಿ ಭಯದ ನೆರಳಲ್ಲೇ ಬದುಕಬೇಕು’ ಎನ್ನುವ ಆರ್‌ಎಸ್‌ಎಸ್, ಭಾಜಪಾದ ಜೀವವಿರೋಧಿ ಸಿದ್ಧಾಂತ ಅಕ್ಷರಶಃ ಅನುಷ್ಟಾನಗೊಂಡಿರುವುದು ಮೋದಿ ಆಳ್ವಿಕೆಯ ಗುಜರಾತಿನಲ್ಲಿ.

ಇತ್ತೀಚಿನ ಸಾಕಷ್ಟು ಅಧ್ಯಯನಗಳು ಗುಜರಾತಿನ ಮುಸ್ಲಿಮರು ದೇಶದ ಕಡುಬಡವರ ಗುಂಪಿಗೆ ಸೇರಿರುವುದಲ್ಲದೆ ಧರ್ಮದ ಹೆಸರಿನಲ್ಲಿ ಅತ್ಯಂತ ಹೆಚ್ಚು ಪಕ್ಷಪಾತಕ್ಕೆ ಒಳಗಾದವರು ಎಂಬುದನ್ನು ಸಾಬೀತು ಪಡಿಸಿದೆ.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಯಾಗದಂತೆ ನೋಡಿಕೊಳ್ಳುವುದರಲ್ಲಿ ಮೋದಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅಲ್ಪಸಂಖ್ಯಾತರ ಮೆಟ್ರಿಕ್ಯುಲೇಷನ್‌ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ಕೇಂದ್ರಸರ್ಕಾರ 55,000 ಮಂದಿಗೆ ವಿದ್ಯಾರ್ಥಿವೇತನವನ್ನು (ಅದರಲ್ಲಿ 53,000 ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ) ಗುಜರಾತಿಗೆ ಮಂಜೂರು ಮಾಡಿತ್ತು. ’ಇತರ ಧರ್ಮದ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತ’ ಎಂಬ ಕಾರಣ ನೀಡಿ ಮೋದಿ ಸರ್ಕಾರ ಅದನ್ನು ತಡೆಹಿಡಿದಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ ಯೋಜನೆಯ ಪರವಾಗಿ ತೀರ್ಪು ಬಂದಿದೆ. ಕೇವಲ 26% ರಷ್ಟು ಗುಜರಾತಿ ಮುಸ್ಲಿಮರು ಮೆಟ್ರಿಕ್ಯುಲೇಷನ್ ಹಂತ ತಲುಪುತ್ತಾರೆ. ಶಾಲೆ ಬಿಡುವ ಮಕ್ಕಳ ಶೇಕಡವಾರು ಲೆಕ್ಕದಲ್ಲಿ ಮುಸ್ಲಿಮರದು ಅತಿದೊಡ್ಡಪಾಲು.

ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಮಂಡಳಿ (NCAER) ಯ 2011 ರ ವರದಿ ರಾಜ್ಯಸರ್ಕಾರದ ಮುಸ್ಲಿಂ ವಿರೋಧಿ Gujarat_muslimಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರನ್ವಯ ಮೇಲ್ಜಾತಿ ಹಿಂದೂಗಳ ಹೋಲಿಕೆಯಲ್ಲಿ ನಗರವಾಸಿ ಮುಸ್ಲಿಮರ ಬಡತನ 8 ಪಟ್ಟು (800%) ಮತ್ತು ಹಿಂದೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹೋಲಿಕೆಯಲ್ಲಿ 50% ರಷ್ಟು ಹೆಚ್ಚು ಇದೆ. ಗ್ರಾಮವಾಸಿ ಮುಸ್ಲಿಮರ ಬಡತನ ಮೇಲ್ಜಾತಿಯಲ್ಲಿ ಹಿಂದೂಗಳ ಹೋಲಿಕೆಯಲ್ಲಿ 200% ಹೆಚ್ಚಾಗಿದೆ. ಗುಜರಾತಿನ 60% ರಷ್ಟು ಮುಸ್ಲಿಮರು ನಗರವಾಸಿಗಳಾಗಿದ್ದು ಇವರು ರಾಜ್ಯದ ಅತ್ಯಂತ ನಿರ್ಲಕ್ಷಿತ ಗುಂಪಿಗೆ ಸೇರಿದ್ದಾರೆ.

ಸರ್ದಾರ್‌ಪುರ ಮತೀಯ ಗಲಭೆಯ 22 ಸಂತ್ರಸ್ತ ಕುಟುಂಬಗಳಿಗಾಗಿ ಹಿಮ್ಮತ್‌ನಗರದಲ್ಲಿ ದಲಿತ ಕಾಲೋನಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ‘ಸುರಕ್ಷಿತ ಕಾಲೋನಿ’ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಾಮಾಜಿಕ ಬಹಿಷ್ಕಾರದ ವಿಸ್ತರಿಸಿದ ರೂಪವಾಗಿ ಕಾಣುತ್ತದೆ.

ಸಂವಿಧಾನ ದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಅಣಕ ಮಾಡುವಂತೆ ‘ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ (2003)ಯ ಪ್ರಕಾರ ರಾಜ್ಯದಲ್ಲಿ ಮತ್ತೊಂದು ಧರ್ಮಕ್ಕೆ ಮತಾಂತರ ಹೊಂದಲು ಬಯಸುವವರು ಸರ್ಕಾರದ ಅನುಮತಿ ಪಡೆಯಬೇಕಿದೆ. ‘ಸ್ಥಳಾಂತರದ ವಿರುದ್ಧ ಗಲಭೆ ಪೀಡಿತ ಪ್ರದೇಶದ ನಿವಾಸಿಗಳ ರಕ್ಷಣೆ ಮತ್ತು ಸ್ಥಿರಾಸ್ತಿ ಹಸ್ತಾಂತರ ನಿಯಂತ್ರಣ ಕಾಯ್ದೆ-1991 ಕ್ಕೆ 2009ರಲ್ಲಿ ಬದಲಾವಣೆ ತಂದು ಅದನ್ನು ಅಲ್ಪಸಂಖ್ಯಾತರ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ.

ಮೋದಿಯ ಜೀವವಿರೋಧಿ, ಪ್ರತಿಗಾಮಿ ಸಾಧನೆಗಳ ಪಟ್ಟಿ ಇನ್ನೂ ಬಹುದೊಡ್ಡದಿದೆ. ಆದರೆ ಯಾವುದೇ ಪ್ರಜ್ಞಾವಂತ ಮನಸ್ಸಿಗೆ ಮೋದಿ ನಮಗೆ ಯಾಕೆ ಬೇಡ ಎಂದು ಅರಿವಾಗಲು ಇವೇ ಬಹಳಷ್ಟಾಯಿತು ಅನ್ನಿಸುತ್ತದೆ. ಕಾಂಗ್ರೆಸ್/ಯುಪಿಎ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ), ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ), ಆಹಾರ ಭದ್ರತಾ ಕಾಯ್ದೆಯಂತಹ ಹಲವು ಜನಪರ (ಅವು ತಮ್ಮಷ್ಟಕ್ಕೆ ಪರಿಪೂರ್ಣವಲ್ಲದಿದ್ದರೂ) ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಆರಂಭದಲ್ಲಿ ಹೇಳಿದಂತೆ ಇವರ ಭ್ರಷ್ಟಾಚಾರದ ಪ್ರಕರಣಗಳು, ಅವೈಜ್ಞಾನಿಕ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಯೋಜನೆಗಳು ದೇಶದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ತಲ್ಲಣಗಳಿಗೆ ಕಾರಣವಾಗಿದೆ. ಹಾಗಾಗಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದರೂ ಜನಶಕ್ತಿಯು ನಿರಂತರ ವಿರೋಧ ಪಕ್ಷವಾಗಿ ಜನ/ಜೀವ ಪರವಾಗಿ ದನಿಯೆತ್ತುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿಯಾದರೂ ಮತಾಂಧತೆಯ ಅಫೀಮು ದ್ವೇಷದ ದಳ್ಳುರಿ ಹಬ್ಬಿಸದೆ ಸಾಮರಸ್ಯ ಉಳಿಯಬೇಕಿದೆ. ಬಡವರು ‘ದೈನೇಸಿ’ ಸ್ಥಿತಿ ತಲುಪದೆ ದನಿಯೆತ್ತುವಷ್ಟಾದರೂ ಸಾಮರ್ಥ್ಯ ಉಳಿಸಿಕೊಂಡಿರಬೇಕಿದೆ.

“ಮೋದಿಯೆಂಬ ಭಯವನ್ನು ಬಿತ್ತಿ ನಮ್ಮ ಮತ ಕೇಳುವುದು ಬಿಟ್ಟು ನಿಮ್ಮ ಯೋಜಿತ ಕಾರ್ಯಕ್ರಮಗಳ ಮೂಲಕ ನಮ್ಮ ಮತ ಗೆಲ್ಲಿ” ಎಂಬ ಮುಸ್ಲಿಮರ ಮಾತುಗಳು ಕಾಂಗ್ರೆಸ್ಸಿಗೆ ಸರಿದಾರಿ ತೋರಲೆಂದು ಆಶಿಸೋಣ.

13 thoughts on “ಮೋದಿಯ ಹಿಂದಣ ಸತ್ಯ, ಮಿಥ್ಯಗಳು…

  1. srinivasamurthy

    ಯೋಜಿತ ಕಾರ್ಯಕ್ರಮಗಳ ಮೂಲಕ ಮುಸ್ಲಿಮರ ಮತ ಕಾಂಗ್ರೆಸ್ಗೆ ಖಾಯಮ್ ಆಗಿ ಬರುತ್ತಲೇ ಇವೆ. ಉಚಿತವಾಗಿ ಮಂಚ.. ಗಳನ್ನು ನೀಡಲು ತೀರ್ಮಾನಿಸಿರುವುದು ಅವರ ಪರವಾಗಿಯೇ ತಾನೆ? ಧರ್ಮದ ಆದಾರದ ಮೇಲೆ ಯೋಜನೆಗಳನ್ನು ರೂಪಿಸದೆ ಆರ್ತಿಕದ ಹಿನ್ನಲೆಯಲ್ಲಿ ಯೋಜನೆಗಳನ್ನು ರೂಪಿಸಿದ್ದರೆ ಕಾಂಗ್ರೆಸ್ ಅನ್ನು ನಂಬಬಹುದಾಗಿತ್ತು. 1.50 ಲಕ್ಶದೊಳಗಡೆ ವರಮಾನಉಳ್ಳವರಿಗೆ ಉಚಿತ ಮಂಚ.. ಇತರೆಗಳನ್ನು ನೀಡುವ ಸರ್ಕಾರ ಸಮಾಜಕ್ಕೆ ಸರ್! ಖಾರ ನೀಡಿದಂತೆ ಆಗಿಬಿಟ್ಟಿದೆ. ಎಡ ಪಕ್ಶಗಳು ಕಾಂಗ್ ಪಕ್ಶವನ್ನು ಅಪ್ಪೀ ಅಪ್ಪೀ ಕಾಂಗ್ಗೆ ಒಂದು ರೀತಿಯಲ್ಲಿ ಧೈರ್ಯದಿಂದ ಇರುವಂತೆ ಸಮದಾನ ತಂದಿವೆ. ಎಡ ಪಕ್ಶಗಳು ಸರಿಯಾಗಿದಿದ್ದರೆ b.j.p ಯ ಅಸ್ತಿತ್ವ ಕುಗ್ಗಿರುತ್ತಿತ್ತು. ಎಡ ಪಕ್ಶಗಳು ಕಾಂಗ್ ಗೆದ್ದಾಗ ಅಪ್ಪುತ್ತಾ ಕಾಂಗ್ನ ತಪ್ಪುಗಳಿಗೆ ಬೆಂಬಲ ನೀಡಿವೆ. jDS ಅತ್ತಿತ್ತ ಹೋಗಿ ಬಂದಿದ್ದರೂ ಅದರೊಂದಿಗೆ ಬೆಸೆದುಕೊಂಡಿವೆ. ಯಾರನ್ನು ನಂಬುವುದು ಹ! ಬಿಡುವುದು ತುತ್ತರಿಕೆ. ಈ ತಾಣದಲ್ಲಿ ನೀವು ಎಡಪಕ್ಶಗಳ ಸಾದನೆಯನ್ನೇ ಬಿಂಬಿಸುತ್ತಾ ಇದ್ದೀರಿ. ಮೊದಲು ಎಡ ಪಕ್ಶಗಳು ದೃಡತ್ವದಿಂದ ಚುನಾವಣೆಯನ್ನು ಎದರಿಸಲು ಪಣ ತೊಡಲಿ. ತನ್ನ ಸಿದ್ದಾಂತಕ್ಕೆ ತಾಳೆಯಾಗದವರನ್ನು ದೂರವಿಡಲು ಕಲಿಯಲಿ. ಆಗೊಮ್ಮೆ ಈಗೊಮ್ಮೆ ತರಾತರಾ ಇರುವುದನ್ನು ಬಿಡೋದ ಕಲಿಯಿಲಿ. ಒಂದು ದರ್ಮದ ರಂಗ, ಮತ್ತೊಂದು ಓಲೈಕೆಯ ರಂಗ. ಮಗದೊಂದು ಮುತ್ತು ತೋರಿಸಿದಾಗ ಮುತ್ತು ಕೊಡಲು ಹೋಗಿ ನಿರಾಸೆಯ ಮತ್ತಿನಲ್ಲಿರುವ ರಂಗ. ಒಟ್ಟಿನಲ್ಲಿ ನಾವೆಲ್ಲರು ರಾಜಕೀಯದ ರಂಗಾಪ್ಪುಗೆಯ ಕಾಯಿಗಳು.

    Reply
  2. Kodava

    ನೀವು ಬರೆದಿದ್ದನ್ನೆಲ್ಲ ನಾವು ಒಪ್ಕೊತೀವಿ .. ಆದ್ರೆ ಮೋದಿ ಬಿಟ್ಟು ಬೇರೆ ಯಾರಿಗೂ ನಮ್ಮ ವೋಟು ಕೊಡೋಲ್ಲ .. ಎಲ್ಲ ರೀತಿಯ ಕಳ್ಳ- ಮಳ್ಳ – ಸುಳ್ಳ ರನ್ನು ನೋಡಿದ್ದಿವಿ .. ಈವಾಗಲೂ ನೋಡ್ತಾನೆ ಇದ್ದೀವಿ….. ಮೊದಿಗೂ ಒಂದು ಚಾನ್ಸ್ ಕೊಡೋಣ …..

    Reply
  3. a

    ಬಿಜೆಪಿಯ ಅಬ್ಬರ ಹಾಗೂ ಆಕ್ರಮಣಕಾರಿ ಮನೋಭಾವ ನೋಡುವಾಗ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತದೆಯೇ ಎಂಬ ಆತಂಕ ಉಂಟಾಗುತ್ತದೆ. ಮೋದಿ ಅಧಿಕಾರಕ್ಕೆ ಬಂದರೆ ಊಳಿಗಮಾನ್ಯ ಪುರೋಹಿತಶಾಹೀ ವ್ಯವಸ್ಥೆಗೆ ಬಹಳ ದೊಡ್ಡ ಉತ್ತೇಜನ ಸಿಕ್ಕುವುದರಲ್ಲಿ ಸಂಶಯವಿಲ್ಲ. ಈ ಕಾರಣದಿಂದಾಗಿಯೇ ಎಲ್ಲಾ ಪ್ರತಿಗಾಮಿ ಶಕ್ತಿಗಳು ಮೋದಿಯನ್ನು ಮುಂದಿಟ್ಟುಕೊಂಡು ಗರ್ಜಿಸುತ್ತಿವೆ. ಈ ಗರ್ಜನೆ ಹಾಗೂ ಹೂಂಕಾರ ನೋಡುವಾಗ ಭಾರತ ಮತ್ತೆ ರಾಜರ ಕಾಲದ ನಿರಂಕುಶ ಒಡ್ಡೋಲಗದ ಆಡಳಿತಕ್ಕೆ ಮರಳಿ ಹೋಗುತ್ತದೆಯಾ ಎಂಬ ಭಾವನೆ ಬರುತ್ತಿದೆ. ಧರ್ಮದ ಹೆಸರಿನಲ್ಲಿ ತಮ್ಮ ವಿವೇಕವನ್ನು ಕಳೆದುಕೊಂಡ ಮತದಾರರು ಮತ್ತೆ ದೇಶವನ್ನು ಊಳಿಗಮಾನ್ಯ ವ್ಯವಸ್ಥೆಗೆ ದೂಡದಂತೆ ದೇಶಾದ್ಯಂತ ಜನಜಾಗೃತಿ ಮೂಡಿಸುವ ಅಗತ್ಯ ಇದೆ.

    ಬಿಜೆಪಿಯ ಇಂಥ ಭಯಂಕರ ಅಬ್ಬರ ಹಾಗೂ ಅಟ್ಟಹಾಸಕ್ಕೆ ಬೇರೆ ರಾಜಕೀಯ ಪರ್ಯಾಯಗಳು ಇಲ್ಲದಿರುವುದು ಪ್ರಧಾನ ಕಾರಣ. ಬಿಜೆಪಿಯ ಇಂಥ ಅಟ್ಟಹಾಸವನ್ನು ತಡೆಗಟ್ಟಬೇಕಾದರೆ ಎಡ ಪಕ್ಷಗಳು ತಮ್ಮ ಕರ್ಮಠ ಸಿದ್ದಾಂತಗಳಿಂದ ಹೊರಬಂದು ಪಕ್ಷವನ್ನು ಜನರ ನಡುವೆ ಬೆಳೆಸಬೇಕಾದ ಅಗತ್ಯ ಇದೆ. ಯುವಜನಾಂಗವನ್ನು ಎಡ ಪಕ್ಷಗಳು ಏಕೆ ಸೆಳೆಯಲು ವಿಫಲವಾಗುತ್ತಿವೆ ಎಂಬ ಬಗ್ಗೆ ತೀವ್ರ ಅವಲೋಕನದ ಅಗತ್ಯ ಇದೆ. ಎಡಪಕ್ಷಗಳು ದೇಶದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮದೆ ಸುಸ್ಥಿರ ಸರಕಾರ ನೀಡಬಲ್ಲ ಮೂರನೇ ರಂಗ ದೇಶದಲ್ಲಿ ಬೆಳೆಯಲು ಸಾಧ್ಯವಿಲ್ಲ.

    Reply
  4. Ananda Prasad

    ಮೋದಿಯು ಗುಜರಾತಿನಲ್ಲಿ ಐಕ್ಯ ಶಿಲ್ಪ ಎಂಬ ಹೆಸರಿನಲ್ಲಿ 2070 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆ ನಿರ್ಮಾಣ ಮಾಡಲು ತೊಡಗಿರುವುದು ಸ್ವತಹ: ಗಾಂಧೀಜಿಯವರ ಅನುಯಾಯಿಯಾಗಿದ್ದ ಪಟೇಲರ ಸರಳ ಜೀವನ ಪದ್ಧತಿಗೆ ವಿರುದ್ಧವಾದದ್ದು. ಇಷ್ಟು ಅಪಾರ ಪ್ರಮಾಣದ ಹಣ ದುಂದು ವೆಚ್ಚ ಮಾಡಿ ಪ್ರತಿಮೆ ನಿರ್ಮಾಣ ಮಾಡುವುದು ಅತಿರೇಕದ ಪರಮಾವಧಿ. ಇದು ಜನರ ಅವಶ್ಯಕತೆಯೂ ಅಲ್ಲ, ಜನರ ಬೇಡಿಕೆಯೂ ಅಲ್ಲ. ಸರ್ದಾರ್ ಪಟೇಲರು ತಮ್ಮ ಕಾರ್ಯಗಳು ಹಾಗೂ ಹೋರಾಟಗಳ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರಿಗೆ ಇಂಥ ದುಂದು ವೆಚ್ಚದ ಪ್ರತಿಮೆಗಳ ಅಗತ್ಯವೇ ಇಲ್ಲ. ಬಿಜೆಪಿಯ ಮುಖಂಡರಿಗೆ ಜನರ ಆದ್ಯತೆಗಳೇನು, ಅವಶ್ಯಕತೆಗಳೇನು ಎಂಬ ಬಗ್ಗೆ ಗಮನವೇ ಇಲ್ಲ. ಮೊದಲು ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರದ ಹೆಸರಿನಲ್ಲಿ ರಕ್ತಪಾತಕ್ಕೆ ಕಾರಣರಾದರು. ಇದು ಸರ್ದಾರ್ ಪಟೇಲರ ತತ್ವಗಳಿಗೆ ವಿರುದ್ಧವಾದದ್ದು. ಅದೇ ರೀತಿ ಗುಜರಾತ್ ಗಲಭೆಗಳನ್ನು ನಿಯಂತ್ರಿಸದೆ ಅದಕ್ಕೆ ತುಪ್ಪ ಸುರಿದು ಅದರ ರಾಜಕೀಯ ಲಾಭ ಪಡೆದು ಗದ್ದುಗೆ ಏರಿ ಈಗ ಪಟೇಲರ ಬೃಹದಾಕಾರದ ಪ್ರತಿಮೆ ನಿರ್ಮಿಸುವ ಸೋಗಲಾಡಿತನ ನೋಡಿದರೆ ಇವರು ರಾಜಕೀಯಕ್ಕಾಗಿ ಏನನ್ನು ಮಾಡಲೂ ಹೇಸುವವರಲ್ಲ ಎಂಬುದು ಸ್ಪಷ್ಟವಾಗುತ್ತದೆ.

    Reply
  5. Manohar Naik

    Bullshit article, purely biased, I think these people are followers of Congress, in fact congress paid intellectuals..this article is third grade in its quality, i am not follower of Modi, but criticism against anybody or anything that should be constructive. See Congress ruled India for more than 6 decades, then, why there is still poverty, many social problems exist in India. That means congress need more and more poverty to come in to power..

    This article is not based on facts rather based on bias…

    Reply
    1. Sanjyothi V K

      The data provided in the article is based on CAG report, Human rights commission report and HDI report. You can please refer for some more astonishing facts.The same CAG revealed Coal gate and 2G scams of UPA government. Please provide any reliable data to prove that my article is biased. Instead of attacking anybody who questions credibility of MODI as congress agent, it is better to have healthy discussion. Because all of us are responsible citizens and thinking from the point of view of nation.

      Reply
  6. ಗಿರೀಶ್

    ಮೋದಿಯ ಬಗ್ಗೆ ದ್ವೇಶ ಕಾರುವ ಎಲ್ಲರಲ್ಲೂ ಮನವಿ, ಪರ್ಯಾಯ ನಾಯಕನನ್ನು ಮುಂದೆ ತನ್ನಿ. ನ್ಯಾಯಾಲಯಗಳಿಗೆ ಗೌರವ ಕೊಡಿ ನಿಮ್ಮ ದ್ವೇಷವನ್ನು ಬೇರೆಯವರಿಗೆ ಹರಡ ಬೇಡೀ……

    Reply
  7. Basavaraj

    Modi was unquestionable chief minister of Gujarat for 12 years. Still, Gujarat is lagging behind many states in terms of several social development indicators. It is in the 11th place in terms of HDI.

    When Modi is not able to achieve overall development of a single state ( that too already economically developed ) being an unquestionable CM for 12 years, how can anybody believe that Modi can develop such a big and diverse country like India?

    Modi did not bother to appoint Lokayukta for 10 years and ultimately amended lokayukta bill according to his wish ( On the other hand, he says that he supports Anna hazare movement for appointing Lokpal ). Then what is the credibility he is having to talk about corruption of UPA government? Then, On what basis, he assures that he can control corruption and provides corruption free government?
    Being responsible citizens, let our opinion on any politician be based on facts and relevant statistics instead of blindly following someone because of the media glorification. Just being LOUD to suppress the truth will not stand for long.

    Reply
  8. Kodava

    ಕಲ್ಲು ಹುಡುಕುವವರು ಮೊಸರಲ್ಲೂ ಹುಡುಕುತ್ತಾರೆ .. ಹಾಗೆ ೨೦೭೦ ಕೋಟಿ ವೆಚ್ಚದ ಪಟೇಲರ ಪ್ರತಿಮೆ ಕೆಲವರಿಗೆ ಭಾರವಾಗುತ್ತದೆ . ಅಲ್ಲಿ UPA ಸಾವಿರಾರು ಕೋಟಿ ತಿಂದು ತೇಗುತ್ತಿದೆ.ಅದರ ಬಗ್ಗೆ ಲೇಖನಗಳನ್ನು ಬರೆದು ಜನರನ್ನು ಎಚ್ಚರಿಸಬೇಕಾದ ಮಾದ್ಯಮಗಳು , ನಾಚಿಕೆ ಮರ್ಯಾದೆಗಳನ್ನು ಬಿಟ್ಟು, ದಿನಬೆಳಗಾದರೆ ಆ ಮೋದಿಯ ಬಗ್ಗೆ ಇಲ್ಲ ಸಲ್ಲದ ಲೇಖನಗಳನ್ನು ಪ್ರಕಟಿಸಿ ಮೋದಿಯನ್ನು ಪ್ರತ್ಯಕ್ಷವಾಗಿ -ಪರೋಕ್ಷ ವಾಗಿ ಹೀರೋ ಮಾಡಿವೆ – ಮಾಡುತ್ತಲೂ ಇವೆ . ಇಂದು ಮೋದಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ ಅಂದರೆ ಅದಕ್ಕೆ ಕಾರಣ ಮಾಧ್ಯಮದವರು . ಇನ್ನಾದರೂ ಮೋದಿಯನ್ನು ಬಿಟ್ಟು ಸರ್ಕಾರದ ಅಂಕು ಡೊಂಕುಗಳ ಬಗ್ಗೆ , ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಗಮನ ಹರಿಸಿ .

    Reply
  9. Ananda Prasad

    ಸರ್ದಾರ್ ಪಟೇಲರು ಸರಳ ಜೀವನವನ್ನು ಪಾಲಿಸಿದವರು, ಗಾಂಧೀಜಿಯವರ ಅನುಯಾಯಿಯಾಗಿದ್ದವರು. ಅವರೆಂದೂ ದುಂದು ವೆಚ್ಚವನ್ನು ಪ್ರೋತ್ಸಾಹಿಸಿದವರಲ್ಲ. ಮೋದಿಯವರು ರಾಜಕೀಯ ಕಾರಣಗಳಿಗಾಗಿ ಇಂಥ ಸರಳ ಜೀವಿಯ ಹೆಸರಿನಲ್ಲಿ ದುಂದು ವೆಚ್ಚದ ಪ್ರತಿಮೆ ನಿರ್ಮಾಣ ಮಾಡುವುದು ಪಟೇಲರಿಗೆ ಮಾಡುವ ಅವಮಾನವೂ ಹೌದು. ಪಟೇಲರ ತತ್ವಗಳನ್ನು ಪಾಲಿಸದವರು ಅವರ ಪ್ರತಿಮೆ ನಿರ್ಮಿಸುವುದೇ ಬಹಳ ದೊಡ್ಡ ವ್ಯಂಗ್ಯವೂ ಹೌದು. ದೇಶದಲ್ಲಿ ಲಕ್ಷಾಂತರ ಬಡವರು ಅರೆಹೊಟ್ಟೆ ಉಂಡು ಮಲಗುತ್ತಿರುವಾಗ ಈ ರೀತಿ ದುಂದು ವೆಚ್ಚದ ಪ್ರತಿಮೆ ನಿರ್ಮಿಸಲು ಹೊರಡುವುದು ಸ್ವಾಮಿ ವಿವೇಕಾನಂದರ ತತ್ವಗಳಿಗೂ ವಿರುದ್ಧವಾದದ್ದು. ವಿವೇಕದ ಮಾತಿಗೆ ಬೆಲೆ ಕೊಡದ ಇವರಿಗೆ ಬುದ್ಧಿ ಹೇಳುವವರು ಯಾರು?

    Reply

Leave a Reply to anamika Cancel reply

Your email address will not be published. Required fields are marked *