“ಮುಗಿಲ ಮಾಯೆಯ ಕರುಣೆ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ಪಿ. ಮಂಜುನಾಥ

ಅದು ಮುಂಗಾರಿನ ಹಗಲಾದರೂ ಸೈತ ಸೂರ್‍ಯ ಕರುಣೆಯಿಲ್ಲದಾಂವಾಗಿ ನೆತ್ತಿ ಮ್ಯಾಲ ಸುಡೊ ಕೆಂಡದ್ಹಂಗ ದುಮುಗುಡುತ್ತಿದ್ದ. ಜಿದ್ದಿಗಿ ಬಿದ್ದಂಗ ಗಾಳಿ ’ಭರ್ರೋ…’ ಅಂತ ಕತ್ತಿ ಬೀಸಿ, ಆಗಾಗ ಅಲ್ಲೊಂದು ಇಲ್ಲೊಂದು ಕಾಣಿಸೋ ಮೋಡದ ತುಣಕುಗಳನ್ನ ಚೂರು ಚೂರು ಮಾಡಿ ತೇಲಿಸಿ ಹಾಕುತ್ತಿತ್ತು. drought-in-our-land-4444-jessie-meierಗಾಳಿಯ ಹೊಡತಕ್ಕ ಸಿಕ್ಕ ಸಣ್ಸಣ್ಣ ಮೋಡೆಲ್ಲಾ ರೂಪಾ ಪಡೆಯೋ ಮೊದಲಽಽ ಇಲ್ಲವಾಗೋ ಭ್ರೂಣಗಳ ತರ ಮರೆಯಾಗಿ ಹೊಂಟಿದ್ದವು. ಊರು ಕೇರಿಯ ತುಂಬೆಲ್ಲ ಸುಡುಬಿಸಿಲ ಮತ್ತು ಬಾರದ ಮಳೆಯದ್ದೆ ಮಾತು-ಕತಿಗಳು ವ್ಯಾಪಿಸಿ ಜೀವಿಗಳ ಕಣ್ಣು, ತಲಿ ಮೊದಲಾಗಿ ಇಡೀ ದೇಹವೆಂಬೋ ದೇಹವೇ ಮುಗಿಲಿನ ಕಡಿಗಿ ದಿಗಿಲುಗೊಂಡು ದಿಟ್ಟಿಸೋ ಕಾಯಕದೊಳಗ ತೊಡಗಿದ್ಹಂಗಾಗಿತ್ತು. ಆ ಹೊತ್ತಿಗೆಲ್ಲ ಹತ್ತಾರು ಕಾರ್ಯಚಟುವಟಿಕೆಗಳ ಗದ್ದಲದಾಗ ಹುಗಿದು ನಿರತರಾಗಿರಬೇಕಾಗಿದ್ದ ಮಂದಿ ನೀರಿನ ಅಪರಂಪಾರ ವ್ಯಾಮೋಹಕ್ಕ ಈಡಾಗಿ ದಿಕ್ಕುಗಾಣದ ಹುಚ್ಚರಾಗಿದ್ದರು. ನೀರಽಽ ಒಂದು ಕನಸಾಗಿ ಅಥವ ಕನಸೆಲ್ಲ ನೀರಿನ್ಹಂಗಾಗಿ ಜೀವಜಲದ ತಪನವೊಂದು ಶಾಶ್ವತ ತೊಡಕಾಗಿಬಿಡೊ ಆತಂಕದೊಳಗ ಹೈರಾಣಾಗಿದ್ದರು. ಮಣ್ಣೆತ್ತಿನ ಅಮಾಸಿ ಸರದು ಏರಡನೇ ಗುಳ್ಳವ್ವ ಸಡಗರವಿಲ್ಲದ ಬಂದು ಕುಂತಿದ್ದಳು. ಮುಂಗಾರು ಬಂಗಾರದ್ಹಂಗ ತುಟ್ಟಿಯಾಗಿತ್ತು. ಮುಗಿಲ ಕಣ್ಣುಗಳು ರೆಪ್ಪಿ ಬಿಡಿಸಾಕ ಲೆಕ್ಕ ಹಾಕಿದ್ದವು. ಬೊಗಸೀಲೆ ಪ್ರೀತಿ ಸುರಿಸೊ ಮಿರಗಾ ಮಳಿಯ ಮೆರಗು ಸಿಗಲಾರದ ಭೂಮಿ ಲೂಟಿಯಾದ ಕ್ವಾಟಿಯ್ಹಂಗ ಭಣಭಣ ಅಂತಿತ್ತು. ನೆಲದವ್ವನ ಮಾರಿಮ್ಯಾಲ ಹಸಿರಿನ ನಗಿನವಿಲ ಕುಣಿತದ ಕನಸನ್ನ ಈ ಊರಿನ ಮಂದಿ ಮರತು ನೂರಾರು ವರ್ಷ ಕಳದ್ಹಂಗ ಕುಂತಿದ್ದರು. ಬೆಳಿಯೋ ಬೆಳಿಗಿ ನೀರಿಲ್ಲದಿದ್ದರೂ ನೆಡೆದೀತು ಆದರಽಽ ಹೇಲು, ಉಚ್ಚಿ, ಬೆವರು, ಪಿಸುರು, ಪಿಚ್ಚು, ಸಂಭೋಗ ಮೊದಲಾದ ದೇಹ ಜಂಜಡಗಳಿಂದ ಕೊಳಕಾಗೊ ಮೈಯನ್ನ ತೊಳೆಯೂತ ತಮ್ಮ ಮತ್ತು ದನಕರುಗಳ ದಾಹ ತೀರಿಸೊ ಈ ನೀರೆಂಬ ಸರಕನ್ನ ಎಲ್ಲಿಂದ ಹೆಂಗ ಶೋಧಿಸಿ ತರೋದು? ಎನ್ನೊ ಚಿಂತಿ ಇದಿಯಾಗಿ ಕಾಡಿ ಜಡಗೊಂಡಿದ್ದರು.

ಮಳಿ ಬರದಿದ್ದಾಗ ಪ್ರತಿಸಲ ಮಾಡುವಂಗ ಕತ್ತಿ ಮದುವಿ ಮಾಡಿ ಮೆರವಣಿಗಿ ಮಾಡಿದ್ದಾತು. ವಾರಾ ಹಿಡಿದು ವೃತ ಆಚರಿಸಾಕೂ ಸುರುವಾಗಿತ್ತು. ಸ್ವಾಮಾರಕ್ಕೊಮ್ಮೆ ಊರು-ಕೇರಿಯ ಎಲ್ಲ ಮನಿಯಾಗೂ ರೊಟ್ಟಿ ಬಡಿಯೋದು ನಿಲ್ಲಿಸಿ, ದಗದ-ಕೆಲಸಗಳಿಗಿ ಹೋಗದಽ ಪಾಲಿಸೋ ಕ್ರಿಯೆಯೊಳಗ ಬಿದ್ದು ಬಸವಣ್ಣ, ಅರಣ್ಯಸಿದ್ದ, ಲಗುಮವ್ವ, ಯಲ್ಲವ್ವ, ಕರೆವ್ವ ಮೊದಲಾದ ದೇವರ donkeys_wedding_rainsಗುಡಿಗಳೊಳಗ ದೈವದ ಚಾಕರಿಗಿ ನಿಂತರು.

ಹೀಂಗ ಎಲ್ಲಾ ಖಟಿಪಿಟಿಗೋಳು ಮುಗಿಲಿನ ಕರುಣಿಗಿ ದಕ್ಕದ ಇರೋ ಆ ಸುಡುಬಿಸಿಲ ಹಗಲೊಳಗ ’ನಿಜಗುಣಿ’ ಎಂಬಾಂವ ಮಳಿಗಿ ಕುಂಡತಾನ ಅಂಬೋ ಸುದ್ದಿ ಬೀಸೋ ಗಾಳಿಗೂಡಿ ಊರೆಲ್ಲ ಸುತ್ತಿ ಸುಳದಾಡಿತು. ಅದು ಓಣಿಗೊಂದು-ಕೇರಿಗೊಂದು, ಹಾದಿಗೊಂದು-ಬೀದಿಗೊಂದು ಕತಿಗಳಾಗಿ ಚಿಮ್ಮಿ ಅಗಸಿಕಟ್ಟಿ ಮ್ಯಾಲ ಕುಂಡಿಯೂರಿಕೊಂಡು ಕುಂತಾವರ ಕಿವಿ ಮುಟ್ಟೋ ವ್ಯಾಳ್ಯಾಕ್ಕ ’ಯಾವ ನಿಜಗುಣಿ?’ ಎಂಬೋದು ಗೊಂದಲಕ ಬಿದ್ದಾಂಗಾತು.

ಅಗಸಿಕಟ್ಟಿಯ ಬಸರಿಗಿಡದ ನೆಳ್ಳಿಗಿ ಕುಂತ ಹೂಗಾರ ರಾಮಜ್ಜ, ಸಿಂಗಳೇರ ನಿಂಗಪ್ಪಜ್ಜ ಮತ್ತು ತಳವಾರ ಭೀಮಪ್ಪಜ್ಜರಂತ ಹತ್ತಾರು ಹಿರೇರು ತಮ್ಮ ಕಾಲದಾಗಿನ ಮಳಿಯ ವರ್ಣನಿಯ ಕತಿಗಳನ್ನ ಬಿಚ್ಚಿ ಹರಿವಿಕೊಂಡ ಅವುಗಳ ರೆಕ್ಕಿಪಕ್ಕಗಳ ಮ್ಯಾಲ ಕುಂತು ಹಾರಾಟಕ್ಕಿಳಿದ್ಹಂಗ ಮಾತಾಡ್ತಿದ್ದರು. ಅಂದಿನ ಹಸಿರು, ಹರಿಯೊ ಮಡ್ಡಿಹಳ್ಳ, ಅದರಚಿಕಡಿಯ ಅಗಮ್ಯವೆನಿಸೋ ಸಂಪವ್ವನ ಮಾಳ, ಮಾಳದಾಗಿನ ಹಣ್ಣು ಹಂಪಲಗಳ ಮತ್ತು ತಮ್ಮ ಶ್ರಮದ ದಣಿವಿರದ ಕತಿಗಳನ್ನ ಮೆಲಕಾಡಿಸುತ ಹೊಸ ತೆಲೆಮಾರಿನ ಹುಡಗೋರಿಗಿ ದಾಟಿಸುತ್ತಿದ್ದರು. ಅವರು ಹೇಳಾಕ್ಹತ್ತಿದ್ದ ಸಂಗತಿಗೋಳು ಬಸರಿಗಿಡದ ನೆಳ್ಳಿನೊಳಗ ಕೂಡಿ ತಂಪೆನಿಸಿದ್ದವು. ಐನಾರ ರಾಚ, ದಡ್ಡ್ಯಾರ ರಾಯಪ್ಪ, ಬದನಿಕಾಯಿ ಬಾಳೂ ಮತ್ತು ದಗದಿಲ್ಲದ ಕುಂತಿದ್ದ ಊರುಕೇರಿಯ ಒಂದಿಷ್ಟು ಹುಡುಗೋರು ಹಿರೇರ ಕತಿ ಕೇಳತಾ ಗುಟಕಾ, ತಂಬಾಕು, ಬೀಡಿಗಳ ತಲುಬು ತೀರಿಸ್ಕೋಂತಿದ್ದರು. ಇದನ್ನೆಲ್ಲ ನೋಡತಾ ಅಗಸಿಕಟ್ಟಿಯ ಮೂಲಿಗಿ ಕುಂತಿದ್ದ ಹೊಟ್ಟಿ ಅಣ್ಣಪ್ಪ ಸ್ಟೈಲ್‌ಶೀರ್ ಸಿಗರೇಟ್ ಹಚ್ಚಿ ಸೇದಕೋಂತ, ಇತ್ತ ಇವರಕಡಿ ಕಿವಿಕೊಟ್ಟು ಅತ್ತ ಅಗಸಿಕಟ್ಟಿಗಿ ಹತ್ತಿಕೊಂಡಿದ್ದ ಹಾದಿಯಚಿಕಡಿಯ ಹೊಲಗೇರಿಯ ಕರೆವ್ವನ ಗುಡಿಯ ಬಾಜೂಕಿನ ಸಂದ್ಯಾಗ ಕಾಣತ್ತಿದ್ದ ಶೆರೇದ ಇಮಲವ್ವನ ಮನಿ ಕಡೇನ ದಿಟ್ಟಿಸೋದರೊಳಗ ಮಗ್ನ ಆಗಿದ್ದ.

ಅಂತಾ ಯೆಳೆದಾಗ ಮೋಡಕಾ ಸೈಕಲ್ಲನ್ನ ಧಢಾಡಿಸುತ್ತ ಬಂದ ಗಿಡ್ಡ ಮಾರೂತಿ ಗದ್ದ ಕೆರಕೋಂತ “ನಿಜಗುಣಿ ಮಳೀಗಿ ಕುಂಡರತಾನಂತರ್‍ಯೋ…” ಅಂದು ಹಲ್ಲು ಕಿಸಿದಿದ್ದ. ಅವನ ಸುದ್ದಿಗಿ ಅಗಸಿಕಟ್ಟಿ ಒಂಚಣ ಶಬುದ ಕಳಕೊಂಡಂಗ ನಿಂತು ಮರುಚಣದಾಗ ಕೌತುಕದ ಜತಿಗೂಡಿ ಚಲನಗೊಂಡಿತು.

ನಿಂಗಪ್ಪಜ್ಜ “ಯಾ ನಿಜಗುಣೀನೋ?” ಅಂತ ಮಾರಿ ಅಡಾಗಲ ಮಾಡಿ ಕೇಳಿದ್ದ.

ಮಾರೂತಿ ತನ್ನ ಹರಕು ಬರಕು ದನಿಯಾಗ “ನಿಜಗುಣಿ ಅಂದರ ನಿಜಗುಣೀನಽಽ…” ಅಂದು ಸೈಕಲ್ಹತ್ತಿ ಆವಾಜ್ ಮಾಡತ ಹೊಂಟ.

ಹೊಟ್ಟಿ ಅಣ್ಣಪ್ಪ “ಆ ಹಡಬಿಟ್ಟೀನಽ ಕೇಳ್ ಕಾಕಾ…! ಹುಲ್ಲಾಗ ನಾಯಿ ಹೇತಂಗ ಮಾತಾಡತಾನ” ಅಂದ. ಮಂದಿ ಗೊಳ್ಳೆಂದು ನಕ್ಕರು. ಸುಳಿದಾಡಿದ ನಗಿ ಮಳಿಗಿ ಕುಂಡರಾವನ ಗೂಢಾಚಾರದಾಗ ಕರಗಿತು.

ರಾಮಜ್ಜ “ಗೌನ್ನಾರ ನಿಜಗುಣಿಯಂತೂ ಕುಂದರೊ ಮನಸ್ಯಾ ಅಲ್ಲ. ಮನ್ನಿ ಅಂವ ಮಾಡಿದ ಕತೀನಽ ಹೆಚ್ಚಿನದೇತಿ…” ಅಂದ.

“ಅಂವಾ ಮೂಗಬಟ್ಟಿನ ನಾದಕ್ಕ ಬಿದ್ದಾಂವ, ಅಂವೇನ ಕುಂಡತಾನ ಖೋಡಿ. ಊರಿಗೆಲ್ಲ ಮೂಲಾದಾಂವ. ಅದ್ಯಾವಾಕಿ ಮ್ಯಾಲ ಮನಸ್ ಮಾಡ್ಯಾನ್ಯಾಂಬಲ್ಲ? ಆ ಟ್ಯಾಂಕರನ ಡ್ರೈವರ್ ಅಕೀನಽ ಯಾಕ್ ನೋಡಿದ್ನೋ? ಯಾಂಬಲ್ಲ…” ಎಂದ ಹುಚ್ಚ್ಯಾಗೋಳ ಬರಮಪ್ಪ ಗೌನ್ನಾರ ನಿಜಗುಣಿಯ ಮ್ಯಾಲ ಸಿಡಕ ಮಾಡಿದ್ದ.

ಮತ್ತ್ಯಾರೋ “ನೋಡಿರ ಏನಾತು? ಇಂವ್ಯಾಕ್ ಆ ಡ್ರೈವರ್‍ನ ದನಾ ಬಡದಂಗ ಬಡೀಬೇಕು? ನಾಕ್ ದಿವಸಕ್ಕೊಮ್ಮ್ಯರೆ ನೀರಿನ ಗಾಡಿ ಬರತಿತ್ತು. drought-kelly-stewart-sieckಬಡದದ್ದ ನೆವಾ ಆಗಿ ಈಗದೂ ಬರವಲ್ತು” ಅಂದರು.

ಹುಡುಗರು ಗೌನ್ನಾರ ನಿಜಗುಣಿಯ ಗಿರಾಕಿ ಚಂಪಿಯ ಕುರಿತೂ, ಟಾಕಿ ನೀರ ತುಂಬೋವಾಗ ಅಕೀನ ಮಳಮಳ ನೋಡಿ ನಿಜಗುಣಿಯಿಂದ ಖಡತಾ ತಿಂದ ಪಾಪದ ಡ್ರೈವರನ ಸಂಗತೀನೂ, ಅದರ ದೆಸಿಂದ ಸಂತಿಯೂರಿಂದ ನೀರಿನ ಗಾಡಿ ಬರೋದನ್ನ ನಿಲ್ಲಿಸಿದ ವಿಚಾರನೂ ಮಾತಾಡತಾ ಮುಳುಗಿದರು. ಹಿರಿತಲಿಗಳಂತೂ ಮಳೀಗಿ ಕುಂಡ್ರಾಂವನ ವಿಚಾರದಾಗಽ ಇದ್ದವು!

ಅಗಸಿಕಟ್ಟಿಯ ಇನ್ನೊಂದಂಡಿಗಿ ತೆರಕೊಂಡ ರಸ್ತಾ ಹೊಲಗೇರಿಯನ್ನು ಕೂಡುತ್ತಿತ್ತು. ಅದರ ಬಾಜೂಕಿನ ಮ್ಯಾಲಿನಕೇರಿಯ ಹಾದಿ ಹಿಡಿದು ಯಾರ ಜತಿಗೋ ಮೊಬಾಯಿಲಿನ್ಯಾಗ ಮಾತಾಡಿ ಮುಗಿಸುತ ಪಂಚಾಯ್ತಿ ಮೆಂಬರ್ ಅಕ್ಕ್ಯಾರ ಅಪ್ಸೂ ಸಾಹುಕಾರ ಬಂದು ಹಿರೇರು ಕುಂತಿದ್ದ ಜಾಗಕ್ಕ ಸನೇ ಮಾಡುತ್ತಿದ್ಹಂಗ ಭೀಮಪ್ಪಜ್ಜ ಮುದುಡಿ, “ನಮಸ್ಕಾರ್ರೀ…” ಅಂತ ಕೈಮುಗಿದ. ಸಾಹುಕಾರ ಎಲ್ಲಾರಿಗೂ ವಂದಿಸಿದ. ಹಿರೇರು ತುಸು ಸರದು ಅಂವಗ ಕುಂಡ್ರಾಕ ಜಾಗಾ ಮಾಡಿ ಕೊಟ್ಟರು. ಅಪ್ಸೂ ಸಾಹುಕಾರ ಇಜಾರ ಇಳಿಬಿಟ್ಟುಕೊಂಡು ಕುಂತು ನಿಂಗಪ್ಪಜ್ಜನಿಗೆ “ಕಾಕಾ ಸುದ್ದಿ ಗೊತ್ತಾತೇನ?” ಅಂತ ಕೇಳಿದ.

ನಿಂಗಜ್ಜ “ಯಾವುದಪಾ ತಮ್ಮ್ಯಾ?” ಅಂದ.

“ಅದಽ ಮಳೀಗಿ ಕುಂದ್ರಾಕ ನಿಜಗುಣಿ…” ಅಂತಿರುವಾಗ ಅಪ್ಸೂ ಸಾಹುಕಾರನ ಮಾತು ತಡದು,

“ಸುದ್ದಿ ಮುಟ್ಟೇತಿ. ಊರಾಗ ಮೂರ್ನಾಕ್ ಮಂದಿ ನಿಜಗುಣಿಗೋಳ ಅದಾರು. ಅದರಾಗ ಯಾ ನಿಜಗುಣಿ ಅನ್ನೋದಽಽ ಗೊತ್ತಾಗಲಿಲ್ಲ” ಅಂದು ನಿಂಗಪ್ಪಜ್ಜ ನಕ್ಕ.

“ತಳವಾರ್ರ ನಿಜಗುಣಿ!” ಅಂತ ಸಾಹುಕಾರ ಉಸುರಿದಾಗ ಅಗಸಿಕಟ್ಟಿಯ ಮಂದಿಗಿ ನಿಚ್ಚಳಾತು. ಅದಕ್ಕೆಲ್ಲಾರು ಗುಜುಗುಜು ಸುರುಮಾಡಿದರು. ಭೀಮಪ್ಪಜ್ಜ ಕೆಳಗ ತೆಲಿ ಮಾಡಿ ನೆಲ ನೋಡಾಕ ಹತ್ತಿದ. ಹೊಲಗೇರಿಯ ಮನಿಶ್ಯಾ ಮಳಿಗಿ ಕುಂಡ್ರೊ ವಿಷಯ ಮಂದಿಯ ಮಾತಿನ ಹೊಟ್ಟಿಗಿ ಅನ್ನ ಸಿಕ್ಕಂಗಾತು.

ಅಪ್ಸೂ ಸಾಹುಕಾರ “ನಾನೂ ಕುಂಡ್ರು ಛೊಲೋ ಆಗಲಿ ಅತ ಹೇಳೇನಿ. ನಮ್ಮ ಕೈಲೆ ಏನ್ ಯವಸ್ಥಾ ಆಕ್ಕೈತಿ ಮಾಡ್ತೇವು ಅಂದೇನಿ” ಅಂದ.

“ಛೊಲೋ ಆತು ಬಿಡ್…” ಅಂತಂದ ನಿಂಗಪ್ಪಜ್ಜನ ಮಾತು ಮುಗಿಯೋ ಮೊದಲಽ ರಾಮಜ್ಜ “ಒಂದ್ಮಾತು ಊರಾವರಾನೂ ಕೇಳೋದಿತ್ತು” ಅನ್ನುತ ಮಕ ಹಿಗ್ಗಿಸಿದ

ಇದಕ್ಕ ಪುಸುಲಾಯಿಸಿದಂಗ ಹೊಟ್ಟಿ ಅಣ್ಣಪ್ಪನೂ ಅಪ್ಸೂ ಸಾಹುಕಾರಗ “ಹೌಂದೋ ಮಾವ, ಒಂದ ಸಲಿ ದೈವದ ಮುಂದ ಇಡಬೇಕಿತ್ತಲ್ಲ” ಅಂದ. ಅಪ್ಸೂ ಸಾಹುಕಾರಗ ಸಿಟ್ಟು ಬಂತು. ಅದನ್ನ ಒಳಗಽ ನುಂಗಿ “ದೈವನ್ನ ಏನ ಕೇಳೋದು? ಅಂವೇನ ಊರಿಗಿ ಕೆಟ್ಟ ಮಾಡಾಕ ಹೊಂಟಾನ. ಊರಿಗಿ ಛೊಲೊ ಆಗೋದಾದರ ಕೆಳಗಿನ ಜಾತಿಯಾಂವೇನು? ಮ್ಯಾಲಿನ ಜಾತಿಯಾಂವೇನು?” ಎಂದು ಕೇಳಿದ.

ಈ ನಡುವ ಅಲ್ಲಿದ್ದ ಉಳದ ಮಂದಿ ಇವರನ ನೋಡತಾ ಮಾತಿನ ಅರ್ಥ ಹುಡುಕತಾ ಕುಂತರು. ಹ್ವಾದ ವಾರ ಅಣ್ಣಪ್ಪ ಕತ್ತಿ ಮದುವೀನ ಮುಂದ ನಿಂತು ಮಾಡಿಸಿದ್ದ. ಈಗ ಅಪ್ಸೂ ಸಾಹುಕಾರನಽಽ ನಿಜಗುಣೀನ ಎಬ್ಬಿಸಿ ಕುಂಡಿಸಿರಬೇಕು. ಅಣ್ಣಪ್ಪಗೂ ಅಪ್ಸೂಗೂ ಆಗಿ ಬರಂಗಿಲ್ಲ. ಊರಾಗ ಏನಾರ ನಡದ್ರರ ಇಬ್ಬರೂ ಜಿದ್ದಿಗಿ ಬಿದ್ದಾಂಗ ಮಾಡತಾರು. ಒಬ್ಬರ ಕೆಲಸಕ್ಕಿನ್ನೊಬ್ಬರು ಅಡ್ಡಗಾಲು ಹಾಕುತ್ತಿದ್ದರು.

ಹಿಂದಕ ಪಂಚಾಯತಿ ಎಲೆಕ್ಷನ್ನಿಗಿ ಅಪ್ಸೂ ಸಾಹುಕಾರ ನಿಂತಿದ್ದ. ಅವನ ಇದಿರಾಗಿ ಅಣ್ಣಪ್ಪನೂ ನಿಂತಿದ್ದ. ಬಾಜೂಕಿನ ಊರಿಲ್ಲಿನ ಮೂರು ವಾರ್ಡುಗಳನ್ನು ಬಿಟ್ಟರೆ ಈ ಊರಿಗಿದ್ದದ್ದು ಎರಡಽ ವಾರ್ಡಗಳು. ಒಂದ ವಾರ್ಡಿನ್ಯಾಗ ಸಾಹುಕಾರನ ಬಲಗೈಯ್ಹಂಗಿದ್ದ ದಡ್ಡ್ಯಾರ ಕೆಂಚಪ್ಪನಿದಿರಿಗ್ಯಾರೂ ಇಲ್ಲದ ಆಯ್ಕಿಯಾಗಿದ್ದ. ಇತ್ತ ಇನ್ನೊಂದು ಕಡೆ ಅಣ್ಣಪ್ಪ ಎಂಥಾ ಸರ್ಕಸ್ ಮಾಡಿದರೂ ಸುದ್ದಾ ಲಗಾಟಿ ಹೊಡೆದಿದ್ದ. ಇದರ ದೆಸಿಂದ ಈರ್ಷೇಕ ಬಿದ್ದು ಬಾರಾಭಾನಗಡಿ ನಡದು ಊರೊಳಗ ದೋಪಾರ್ಟಿ ಆಗಿತ್ತು.

ಅಪ್ಸೂ ಸಾಹುಕಾರ ಆರಿಸಿಬಂದ ಮ್ಯಾಲ ಅಣ್ಣಪ್ಪ ಇಟಕೊಂಡಿದ್ದ ಶೆರೇದ ಇಮಲವ್ವನ ಶೆರೆ ಮಾರೋ ದಂಧೆಕ್ಕ ಧಾಢಿ ಬಂತು. ತುಡುಗಿನಿಂದ ಶೆರೆ ಮಾರೋ ಆ ಹೆಂಗಸ್ಸನ್ನ ಸಾಹುಕಾರನಽ ಹಿಡಿಸಿಕೊಟ್ಟ ಅಂತ ಹುಟ್ಕೊಂಡ ಕತೀನೂ, ಸಾಹುಕಾರನ ಮಗಳು ಶಾಂತಾನ ಹಿಂದ ಬಿದ್ದ ಮುಸಲ್ಲರ ಗುಲ್ಲನಿಗಿ ಅಣ್ಣಪ್ಪ ಸಪೋರ್ಟ ಮಾಡೋ ಸುದ್ದೀನೂ ಮತ್ತ್ಯಾವವೋ ಕತಿಯುಪಕತಿಗಳ ಗದ್ದಲದಾಗ ಭಾಳೊತ್ತು ಸಿಕ್ಕ ಮಂದಿ ಎಲ್ಲಾನೂ ಮರೆತ್ಹಂಗಿತ್ತು. ಕೊನಿಗಿ ಅಪ್ಸೂ ಸಾಹುಕಾರ “ಆದ್ರ ಆತು ಹೊತ್ತು ಮುಣಗಿಸಿ ಮಂದೀನ ಕೂಡಿಸಿ ನಿಜಗುಣಿ ಮಳೀಗಿ ಕುಂಡ್ರೊ ವಿಷಯ ತಿಳಿಸಿದರಾತು” ಅಂದಾಗ ಮಂದಿ ನಿಶ್ಯಬ್ದದ ಪಾದಕ ಶರಣೆಂದರು.

***

ಗಡ್ಡ ಬಿಟಕೊಂಡ ನಿಜಗುಣಿ ಗೆದ್ದಲ್ಹತ್ತಿದ್ದ ಕಂಬಕ್ಕೊರಗಿ ನಿವಾಂತ ಕುಂತಿದ್ದ. ಅದನಿದನ ದಗದಾ ಮಾಡತಾ ವಟಾಡಸತಾ ಶಾಣವ್ವ ಆಗಾಗ ಗಂಡನ ಕಡಿ ನೋಡತಾ ನೂರೆಂಟು ಇಚಾರದಾಗ ಬಿದ್ದಿದ್ದಳು. ಮೈದುನ ಪರಸೂ ನಿಜಗುಣಿಯ ಲೋಕಕಲ್ಯಾಣದ ಸಂಗತೀನ ಪೋನ ಮಾಡಿ ತಿಳಿಸಿದ್ದ. ತವರೂರು ಕೊಟಬಾಗಿಗಿ ದನಗೋಳನೆಲ್ಲ ಬಿಟ್ಟು ಒಂದು ವಾರ ಇದ್ದು ಜಾತ್ರಿ ಮುಗಿಸ್ಕೊಂಡು ಬಂದರಾತು ಎಂದು ಹ್ವಾದಾಕಿ ಪರಸೂನ ಪೋನ್ ಬರೂತ್ಲೆ ನಿತ್ರಾಟಿಗೀಲೆ ನಿಂತ ಹೆಜ್ಜಿ ಮ್ಯಾಲ ಹೊಂಟ್ಟೆದ್ದು ಬಂದಿದ್ದಳು.

ಜಾತ್ರಿಗಿ ನಿಲ್ಲಲಾಗದ ಸಿಟ್ಟಿಗೋ, ಗಂಡ ಏನರೆ ಅಪರಾ-ತಪರಾ ಮಾಡಿಕೊಂಡಾನನ್ನೋ ಚಿಂತಿಗೋ ಆಯಾಸಾದ ಮನಸ್ಸಿನಿಂದ ಶಾಣವ್ವ ಗಂಡನಿಗಿ ಸೊಲ್ಪ ಸಿಡುಕಿಲೆ, “ಅಲ್ಲೋ ಮಾರಾಯನ ನೀನಽ ಮಳೀಗಿ ಕುಂಡ್ರಬೇಕಂತ ಏನೈತಿ? ಮುಂದಿನವಾರ ಪಂಚಮಿ ತಿಥಿ ಬಂದ ಕುಂತೈತಿ. ಮಗಳನ ಪಂಚಮಿಗಿ ಗಂಡನ ಮನಿಯಿಂದ ಕರಕೊಂಡ ಬರಬೇಕ. ಅಕೀಗಿ ಸೀರಿ ತರಬೇಕ. ಮೊಮ್ಮಕ್ಕಳ ಕೈಯಾಗ ಅಳ್ಳಾ ಉಂಡ್ಯೆರೆ ಬ್ಯಾಡ? ಅದಕ್ಕೆಲ್ಲಾ ರೊಕ್ಕಾ ಹೆಂಗ ಹೊಂದ್ಸೋದತ ನಾ ಕುಂತ್ಯಾನು. ನೀ ನೋಡಿರ ಬಾತಿಗಿ ಬಾರದ ದಗದಾ ಮಾಡಾಕ ಕುಂತಿ” ಅಂತ ಮಾತಿಗೆಳೆದಳು.

ಅಂವ ” ನಾನಽ ಯದಕ ಕುಂಡಬೇಕಂದರ ಈರ ಕನಸಿನ್ಯಾಗ ಬಂದು ಹೇಳಿದಾನು ಅದಕ” ಅಂದು ಸಣ್ಣಗ ನಕ್ಕ.

ನಿಜಗುಣಿಯ ಮ್ಯಯಾಗ ಈರ ಆಡುತ್ತಿದ್ದ. ಹೊಲಗೇರಿಯೊಳಗ ಯಾರ ಮನಿಯಾಗರೆ ಮದುವಿ ಕಾರ್‍ಯೆ ನಡೀತಂದರ ಈರಮಾಕನ ಅಟದಾಗ ಈರನಾಗಿ ಇಂವಾ ಇರಾಕಬೇಕು. ಸುತ್ತಾಗಿ ಬಡಗಿಗೋಳನ ಆಡೋ ಹುಡಗೋರ ಜತಿ ತಾಳಶೀರ್ ಬಾರ್‍ಸೊ ಹಲಗಿಯ ಗತ್ತಿಗಿ ತಕ್ಕಂಗ ಹೆಜ್ಜಿ ಹಾಕತಾ ಏಕದಂ ರಾವ್ ಅಗಿ ಕುಣೀತಿದ್ದ. ಸಂಭಾಳಿಸಾಕ ತಾಂಡ್ತಾಂಡ್ ಹುಡುಗೋರು ಬೇಕಾಗತ್ತಿದ್ದರು. ಕುಣೀತ ಕುಣೀತ ಮೈದುಂಬಿದ ಈರದ್ಯಾವರು ಸಮಾಧಾನ ಆಗೋದು ಬ್ಯಾಟಿ ಬಿದ್ದು ರಗತದ ಬಟ್ಟು ಹಚ್ಚಿದ ಮ್ಯಾಲನಽ.

ಮುಹೂರ್ತಗೋಳೆಲ್ಲ ಮುಗಿಯಾಕ ಬಂದಿದ್ದವು. ಮದುವಿ ನೇಮಿಸಿ ಪಾವಣೇರ-ಪೈ ಬಂದರ ಅವರಿಗಿ ನೀರಿನ ವ್ಯವಸ್ಥಾ ಆಗದ ಇರೋ ಅಂಜಿಕಿಯೊಳಗ ಯಾರೂ ಮದುವಿ ಕಾರ್‍ಯೇನ ಠರಾಸೋ ಗೋಳಿಗಿ ಹೋಗಿರಲಿಲ್ಲ. ಮದುವಿ ಠರಾಸಿದರೂ ಈರಮಾಕದ ದೇವ್ಕಾರ್‍ಯೇನ ಮುಂದಕ್ಕ ಮಾಡಿದರಾತು ಅಂತ ಮುಂದ ಹಾಕುತ್ತಿದ್ದರು. ಇಂತಾ ಸಿತಿಯಾಗ ಗಂಡ ಹೊಸಾ ಆಟ ಹೂಡಿದಾ ಯಾಂಬಲ್ಲ ಅಂತ ಶಾಣವ್ವ ಅಂದುಕೊಂಡಳು. ಈರದ್ಯಾವರು ಅವನ ಕನಸಿನ್ಯಾಗ ಖರೆಖರೇನ ಬರತಾನೋ ಇಲ್ಲ ಹುಸೀನೋ ಅಂತ ಸಂಶ್ಯಾ ಬಂತು. ’ಅಂವಾ ಬರತ್ತಿದ್ದರ ಗಂಡನಿಗ್ಯಾಕ ಒಂದ ಮನಿ ಕಟ್ಕೋರೋ ಬುದ್ಧಿ ಕೊಡವಾಲ್ಲ, ಹಾಳ ಗುಡಲಾಗ ಹುಗದ್ದಾನು. ಹರತಾಟ ತಪ್ಪವೊಲ್ದು’ ಎಂದು ಒಳಗೊಳಗ ನೊಂದಳು.

ಸಂಜಿಯಾಗತ್ತಿದ್ದಂಗ ಮುಸಲ್ಲರ ಗುಲ್ಲ ಮತ್ತೊಂದಿಬ್ಬರನ್ನ ಮುಂದ ಮಾಡಿಕೊಂಡು ಅಣ್ಣಪ್ಪ ನಿಜಗುಣಿಯ ಗುಡ್ಲಕ್ಕ ಬಂದು ಮಳೀಗಿ ಕುಂಡ್ರಬಾರದು ಅಂತ ಏನೋ ಬೇತಾ ಹೂಡಾಕ ಹ್ವಾತ್ವಾರಿಸಿದ. ನಿಜಗುಣಿ ನಿಚ್ಚಳಾಗಿ ಈರದ್ಯಾವರ ಕನಸಿನ ವಿಚಾರ ತಿಳಿಸಿ ತಾ ಮಾಡೊ ಕೆಲಸ ನಕ್ಕೀನಽ ಅಂತ ಅವರನ್ನ ಕಳಿಸಿದ್ದ.

ಶಾಣವ್ವಗ ಇದೆಲ್ಲ ಒಣ ಉಸಾಬರಿಯ್ಹಂಗ ಕಂಡು ನಿಜಗುಣಿಗಿ “ಖಮ್ಮಗ ನಾಕ ದಿವಸ ಎಲ್ಲ್ಯೆರೆ ದಗದಕ್ಕ ಹೋಗಬಾರದೇನ? ಕೈಯಾಗ ಒಂದೀಟ ರೊಕ್ಕಾಗತ್ತಿದ್ದೂ” ಅಂದಳು. ನಿಜಗುಣಿ ಹೆಗಲ ಮ್ಯಾಲಿನ ಟವಲನ್ನ ಝಾಡಿಸಿ ಎದ್ದು ಏನೂ ಹೇಳದ ಹೊಸಲಾ ದಾಟಿ ಹೊರನಡದು ಕಟ್ಟಿಗಿ ಕುಂತ. ಹಾದೀಲೆ ಹೋಗ್ಬರಾವರೆಲ್ಲ ಇವನಽ ನೋಡಾವರು; ಮಾತಾಡೋರು. ಇಂವ ಒಂದೀಟ ಕುಂತ್ಹಂಗ್ಮಾಡಿ ಅಗಸಿಕಟ್ಟಿಯತ್ತ ನಡೆದ.

ಕತ್ತಲಿ ಹನುಮಂತನ ಬಳ್ಳಿಯಾಗಿ ಹಬ್ಬುತ ನಡೆದಿತ್ತು. ಮುದಕ್ಯಾರ ಬತ್ತಿದ ಮಲಿಯ್ಹಂಗ ಬಲ್ಬುಗಳು ಲೈಟ್ಕಂಬಗಳ ತುದಿಗಿ ಉರೀತಿದ್ದವು. ಅಗಸಿಕಟ್ಟೀಗಿ ಜನ ಒಬ್ಬೊಬ್ಬರಾಗಿ ಬರಾತಿದ್ದರು. ಒಂದ್ಕಡಿ ಅಣ್ಣಪ್ಪ ಲಿಂಗಾಯತರು, ಕುರುಬರು, ಮುಸಲ್ಲರು ಮತ್ತು ಕೇರಿಯ ಒಂದಿಷ್ಟು ಹುಡುಗೋರ್‍ನ ಗ್ವಾಳೆ ಹಾಕ್ಕೊಂಡು ಕುಂತಿದ್ದ. ಮತ್ತೊಂದ್ಕಡಿ ಅಪ್ಸೂ ಸಾಹುಕಾರ ಕುಂತಿದ್ದ. ಅವನ ಆಜೂಬಾಜೂನೂ ಮಂದಿಯಿದ್ದರು.

ಸಾಲ್ಹಚ್ಚಿದ ಇರವಿಗಳಂಗ ಊರು-ಕೇರಿಯ ಮಂದಿ ಹಗುರಕ ಬಂದು ತಳಾ ಊರುತ್ತಿದ್ದರು. ಇಮಲವ್ವನ ಮನೀಗಿ ಹೋಗಿ ಕಳ್ಳ ತುಂಬ ದಾರೂ ಇಳಿಸಿ ಬರುತ್ತಿದ್ದ ಕೆಲವರು ಅನುಕೂಲವಾದಲ್ಲಿ ಕುಂಡ್ರುತ್ತಿದ್ದರು. ನಿಜಗುಣಿ ಕೇರಿಯ ಮಂದಿ ಕುಂತಲ್ಲಿ ಬಂದು ಸೇರಿದ. ಬುದುಬುದು ಕೂಡುಬಿದ್ದ ಮಂದಿ ಬಾಯ್ಬಿಚ್ಚಿ ಮಾತಗಳನುದುರಿಸುತ್ತಿದ್ದರು.

“ಭೂಮಿ ಮ್ಯಾಲ ಪಾಪ ತುಂಬಿ ಮಳಿಬೆಳಿ ಬರದ್ಹಂಗಾತು” ದಡ್ಡ್ಯಾರ ರಾಯಪ್ಪ ದೊಡ್ಡ ದನೀಲೆ ನುಡಿದ.

ಅದಕ್ಕ ಸಾಹುಕಾರ “ಮಂದಿ, ಹಗಲ್ಹೊತ್ತು ಮಾಡೊ ಕೆಲಸಾನ ರಾತ್ರಿ ಮಾಡತಾರು… ಮತ್ತ, ರಾತ್ರಿ ಮಾಡೋ ಕೆಲಸಾನ ಹಗಲ್ಹೊತ್ತು ಮಾಡತಾರು… ಹಿಂಗಾದರ ಪಾಪ ತುಂಬದ ಏನಾಗತೈತಿ?!” ಅಂದ. ಇದನ್ನು ಕೇಳಿಸಿಕೊಂಡ ಅಣ್ಣಪ್ಪ ತನಗಽ ಅಂದಂತ ಕುಂತಲ್ಲೆ ಕುಂಡಿ ಹೊಸಕಿ ಕುತ್ತುಸುಲು ಬಿಟ್ಟ.

ಅಟ್ಟರಾಗ ನಿಂಗಪ್ಪಜ್ಜ ಮಾತು ಸುರು ಮಾಡಿ “ಏನ್ರಪಾ, ಇವತ್ತ ದೈವನ್ನ ಯಾಕ ಕೂಡಿಸಿದೇವತ್ತ ಗೊತ್ತೈತೇನು?” ಕೇಳಿದ.

ಒಂದ್ಸೊಲ್ಪ್ಮಂದಿ ಹೂಂವನ್ನೂವಂಗ ಪ್ರತಿಕ್ರಿಯಿಸಿದರು.

ಬಸರಿಗಿಡದಚಿಕಡಿಗಿದ್ದ ಮ್ಯಾಲಿನಕೇರಿ ಹೆಂಗಸರ ಹಂತೇಕ್ಕುಂತಿದ್ದ ಗಿಡ್ಡ ಮಾರೂತಿ ಅಗಸಿಕಟ್ಟಿ ತುಂಬೋವಟ್ಟು ಅವಾಜ್ ಮಾಡಿ ಹೂಸ್ ಬಿಟ್ಟ. ಮಂದಿ ನಕ್ಕರು. ಹುಚ್ಚ್ಯಾಗೋಳ ಬರಮಪ್ಪ ಮಾರೂತಿನ ಬೆದರಿಸಿದ.

ಹೂಗಾರ ರಾಮಜ್ಜ “ತಳವಾರ್ರ ನಿಜಗುಣಿ ಮಳೀಗಿ ಕುಂಡ್ರಾಕ್ಹತ್ತಾನ…! ಅದಕ್ಕೆಲ್ಲಾರದೂ ಒಪ್ಪಿಗೈತಿಲ್ಲೊ?” ಗಟ್ಟ್ಯಾಗಿ ಕೇಳಿದ.

ಅಣ್ಣಪ್ಪನ ಮಗ್ಗಲಾಗಿದ್ದ ಗೂಳಿ ಹನುಮ ಯಾಕೋ ಮಿಸುಕಾಡಿದ. ಅವನ ಹೆಗಲ ಮ್ಯಾಲ ಕೈಯಿಟ್ಟು ಕುಂತಿದ್ದ ಐನಾರ ರಾಚ ಒಮ್ಮಿ ಅಣ್ಣಪ್ಪನ್ಕಡಿ ನೋಡಿ ಮತ್ತ ಮಂದೀಕಡಿ ಮಾರಿಮಾಡಿ ಏನೋ ಹೇಳಬೇಕಂದ. ಧೈರ್‍ಯಾ ಸಾಲದ ಸುಮ್ಮನಾದ. ಆಗ ಅಣ್ಣಪ್ಪನಽ “ನಮ್ ಸಿದಗೇರಿ ಮಲ್ಲಯ್ಯಸಾಮಿನೂ ಕುಂಡ್ರತಾನಂತಿದ್ದರು…” ಅಂದ. ತಿಳಿಯಾಗಿದ್ದ ನೀರಿನ್ಯಾಗ ಕಲ್ಲೊಗದ್ಹಂಗಾತು. ಕೆಲವರು ಹಿಂಗಽಽ ಆಗತದ ಅಂತ ಅನಕೊಂಡಿದ್ದರು.

“ಕಚ್ಚರಕ್ ಸ್ವಾಮ್ಯೇನ?” ಬರಮಪ್ಪ ಸಿಟ್ಟಿನೊಳಗ ಕುದ್ದು ಕೇಳಿದ್ದ.

“ಮಲ್ಲಯ್ಯಸಾಮಿ ಕುಂಡ್ರಬಾರದಽ?” ಗುಲ್ಲ ಸವಾಲ್ಹಾಕಿದ.

“ಏ ಹುಡುಗಾ… ಹಂಗೆಲ್ಲ ಸಿಕ್ಕ್ಸಕ್ಕ್ಹಂಗ ಮಾತಾಡ್ಬ್ಯಾಡ. ತಪಕ್ಕ ಕುಂಡಾವರಿಗಿ ನೇಮ ನೀತಿ ಅತ ಇರತಾವ್… ಆ ಸ್ವಾಮಿಗೆ ಏನದ?” ಅಂದ ಸಾಹುಕಾರನ ಮಾತಿಗಿ ಗುಲ್ಲನಾಗಲೀ, ಅಣ್ಣಪ್ಪನ ಹುಡುಗೋರಾಗಲಿ ಯಾವ ಉತ್ತರಾನೂ ಕೊಡಲಿಲ್ಲ.

ಮಲ್ಲಯ್ಯಸ್ವಾಮಿ ಅನ್ನೋ ಮನುಸ್ಯಾ ಯಾತಾಳ ಸಿದ್ದಿಯಂತ ತಿರಗಾಂವಾಗಿದ್ದ. ಮ್ಯಾಲಿನ ಕೇರಿಯವನಾದರೂ ಊರ ಬಿಟ್ಟು ಸೀಮಿಯಚಿಕಡೆ ಮಠ ಕಟಕೊಂಡು ಇದ್ದ. ಸೀರಿ ಕಂಡ್ರ ಸಾಕು ಬೆದರ ಬೆಚ್ಚಕ್ಕೂ ತೆಕ್ಕಿ ಹಾಯೋ ಗಿರಾಕಿ ಅಂವ. ಮಾಟ, ಮಂತ್ರ, ನಿಧಿಯ ಶೋಧ ಅನಕೊಂತ ಮಂದಿ ತೆಲಿ ಕೆಡಸ್ತಿದ್ದ. ಮನ್ಮನ್ನಿ ಅದ್ಯಾಕೋ ಟೇಶನದಾಗೂ ಬಿದ್ದು ಬಂದಿದ್ದ. ಹಿಂತಾವನ ಒಪ್ಪಕೊಳ್ಳಾಕ ಊರ್‍ಮಂದಿ ತಯಾರಿರಲಿಲ್ಲ.

ಮಾತಿಗಿ ಮಾತು ಬೆಳೀತಿದ್ದಂಗ ಕುಂತ ಮಂದಿಗಿ ಏನಾಗತೈತೋ ಅನ್ನೊ ಚಿಂತಿ ಹತ್ತಿತು. ಮಲ್ಲಯ್ಯ ಸ್ವಾಮಿನೋ ನಿಜಗುಣಿನೋ ಅಂಬೋ ಧಡಂದುಡಕಿಯಾಟದಾಗ ನಿಜಗುಣಿ ಕಡೇನಽಽ ಬಹುತೇಕರು ಒಲವು ತೋರಿಸಿದರು. ಇದನ್ನೆಲ್ಲ ಶಾಂತಲಿಂದಽ ಗಮನಿಸಿದ ನಿಜಗುಣಿಯ ತುಟಿ ಪಿಟಕ್ಕನ್ನಲಿಲ್ಲ.

ಇನ್ನೇನು ಎಲ್ಲಾ ಮುಗಿದಂಗ ಅಂತ ಮಂದಿ ತಿಳಕೊಳ್ಳೊ ವ್ಯಾಳ್ಯಾಕ್ಕ ಇಮಲವ್ವ ಮ್ಯಯನ್ನ ಮುದ್ದಾಂ ಹೊಳಿಸ್ಯಾಡುತಾ ಕೇರಿ ಮಂದಿ ಕಡೆ ಬಂದು ಕುಂತಳು. ಅಕಿ ಚಾಳದ ಸಪ್ಪಳ ಎಷ್ಟೋ ಗಂಡಸರ ಎದ್ಯಾಗ ರಿಂಗಣ ಮೂಡಿಸಿತು. ಅಕಿ ಕಣ್ಣು ಅಂಥಾ ಮಕತಲ್ಯಾಗೂ ಚೂರಿಯಂಗ ಮಿಂಚಿ ಇರಿತಿದ್ದವು. ಹೆಂಗಸರು ಅಕಿನ್ನ ’ಊರು ಕೆಡಸೊ ಹೆಣ್ಣು’ ಅಂತಾ ಶರಾಪಿಸಿದರು. ಒಂದಿಟ್ಮಂದಿ ಅಕ್ಕೀನೂ ಅಣ್ಣಪ್ಪನೂ ನೋಡದರಾಗ ಮುಳಗಿದರು.

ಕೊನಿಗಿ ಹಿರೇರೆಲ್ಲ ಮಾತಾಡಕೊಂಡು ನಿಜಗುಣಿ ಕುಂಡ್ರೋದು ನಕ್ಕಿ ಮಾಡಿದರು. ಇದೆಲ್ಲ ಮುಗಿದ ನಂತರ ಅಂವಾ ಎಲ್ಲಿ ತಪಕ್ಕ ಕುಂಡಬೇಕನ್ನೋದೊಂದು ಸಮಸ್ಯೆ ಹುಟ್ಕೋಂತು.

ಯಾರೋ “ಬಸವನಗುಡಿಯ ಪೌಳಿ” ಅಂದರ ಮ್ಯಾಲಿನಕೇರಿಯ ಮಂದಿ ಬ್ಯಾಡ ಅಂದ್ರು. ಮತ್ತ್ಯಾರೊ “ಲಗಮವ್ವನ ಗುಡಿಯ ಕಟ್ಟಿ” ಅಂತ ಸಲಹೆ ಕೊಟ್ಟರು. ಅದಕ್ಕ ಆರೇರ ಮಂದಿ ತಕರಾರು ಮಾಡಿದರು. ಇದನ್ನಲ್ಲ ಕೇಳಿ ತೆಲಿಚಿಟ್ ಹಿಡಿದ ನಿಜಗುಣಿ ಎದ್ದು ನಿಂತು “ನಾ ಕ್ವಾಣೇರಿ ದಿಬ್ಬದಾಗ ಅರಣ್ಯಸಿದ್ದನ ಗುಡಿ ಬಾಜೂಕಿನ ಪಟಂಗಳದಾಗ ಕುಂಡಬೇಕಂತ ತಾಳೆ ಮಾಡಿನಿ” ಅಂದು ಕೈ ಮುಗಿದು ಕುಂತ. ಅರ್ಧಕ್ಕರ್ಧ ಮಂದಿ ತೆಲಿದೂಗಿದರು. ಕುರುಬರ ಹುಡುಗುರು “ಕುಂತರ ಕುಂಡ್ಲಿ, ಖರೆ ಅಂವಾ ಗುಡ್ಯಾಗ ಹೋಗೋದು ಬ್ಯಾಡ” ಅಂತ ಮಾತಿಟ್ಟರು. ನಿಜಗುಣಿಯ ಆಜೂಬಾಜೂದಾಗಿನ ಒಂದಿಷ್ಟು ಹುಡುಗುರು ಕಣ್ಣು ಕೆಂಪು ಮಾಡಿದರು. ರಾಮಜ್ಜ ಅವರನ್ನ ಕಣ್ಣ ಸನ್ನಿ ಮಾಡಿ ಸಮಾಧಾನ ಮಾಡಿದ.

ಅಪ್ಸೂ ಸಾಹುಕಾರನ ಮಾರಿಮ್ಯಾಗ ನಗಿ ಕುಣಿದಾಡಿತು. ಅಣ್ಣಪ್ಪ ಸೋತಂಗಾದ. ಸಿಟ್ಟಲೆ ಎದ್ದು ಹೆಜ್ಜಿ ಹಾಕುತ ಕರೆವ್ವನ ಗುಡಿಯ ಸಂದ್ಯಾಗ ಕರಗಿ ಹೋದ. ಅವನ ಮ್ಯಾಳದ ಹುಡುಗೋರು ಕೈ ಕೈ ಹಿಚಕೊಂಡು ಅಲ್ಲೆ ಕುಂತರು.

ಕೂಡಿದ ವಿಚಾರ ಸುಸೂತ್ರಲೇ ಮುಗಿದರೂ ಏನೋ ಹುಣಾರ ಕಾದ ಕುಂತೈತೇನೊ ಅನ್ನೊಹಂಗ ಮಂದಿ ಎದ್ದು ಮೈಯೊಜ್ಜೆಯಾದಂಗ ಮೆಲ್ಲಕ ನಡಕೋಂತ ಹೊಂಟರು. ಆದರೂ ಎಷ್ಟೋ ಮಂದಿಯ ಕಣ್ಣಾಗ ಮುಗಿಲ ಕಾರುಣ್ಯದ ದೆಸಿ ಮಳಿಯಾಗಿ ಸುರಿಯೋ ಕನಸು ನೂರಾರು ನಮೂನಿಯ ಚಿತ್ರಪಟಗಳಾಗಿ ತೆರಕೋಂತಿದ್ದವು.

***

ಬೆಳಗಾಗೂತ್ಲೆ ಊರ ಮಂದಿ ತೆಂಬಗಿ ತಗೊಂಡು ಮಢ್ಡಿಹಳ್ಳದ ಕಡಿ ಹೋಗಿ ಬರೋದು ನಡೆಸಿದ್ದರು. ಅತ್ತ ಫೈಸಕ್ಕ ಊರ ಹೊರಗಿನ ಕ್ವಾಣೇರಿ ದಿಬ್ಬದ ಬಯಲಿನ್ಯಾಗ ಹಾರಿ, ಗುದ್ಲಿ, ಗಳಾ ಹೊತ್ತುಕೊಂಡು ಹ್ವಾದವರು ಹಂದರದ ಚಟುವಟಿಕ್ಯಾಗ ಮಗ್ನರಾಗಿದ್ದರು. ಅದರಾಗ ಅಪ್ಸೂ ಸಾಹುಕಾರನ ಆಳಮಕ್ಕಳಽ ಭಾಳಿದ್ಹಂಗಿತ್ತು. ಸರ್ವೊತ್ತನ್ಯಾಗ ಕೆಲಸಕ್ಕ ನಿಂತಾರೆನೋ ಅನ್ನೊವಂಗ ನೋಡನೋಡತಾನಽ ಗಳಾ ಬಿಗಿದು ತಪ್ಪಲಾ ಹಾಕಿ ಹಂದರಾ ತಯಾರ ಮಾಡಿದರು.

ರಾತ್ರೆಲ್ಲ ಕಣ್ಣಿಗಿ ಕಣ್ಣಚ್ಚದ ಹೊಳ್ಳ್ಯಾಡೆದ್ದ ನಿಜಗುಣಿ ಮಡಿಯಾಗಿ ಬಿಳಿ ಧೋತ್ರಾ ಮುಂಡಾ ತೊಟ್ಟು ತಳವಾರಕಿ ಹೊಲದಾಗಿನ ಈರದ್ಯಾವರಿಗಿ ಕಾಲಬಿದ್ದು ಗುಡ್ಲಕ್ಕ ಬಂದು ಗಳಗಳ ನೀರು ಕುಡದು ಕುಂತ. ಶಾಣವ್ವ “ರೊಟ್ಟಿ ತಿಂತಿಯೇನ?” ಅಂತಾ ಮಾಯೆ ಮಾಡಿ ಕೇಳಿದಳು. ಅಂವಾ “ಬ್ಯಾಡ, ಇನ್ ನಾನು ಮುಗಿಲ ಹರಕೊಂಡ ಬಿದ್ದ ಮ್ಯಾಲ ಹೊಟ್ಟಿಗಿ ತಗೋತಿನಿ. ಅಲ್ಲೀತಕ ಅನ್ನ ನೀರಂಬೋದಽಽ ಇಲ್ಲ” ಅಂದ. ಅವನ ಮಾರಿ ನಿಚ್ಚಳಾಗಿತ್ತು.

ಹೊತ್ತಗಳದ್ಹಂಗ ಅಪ್ಸೂ ಸಾಹುಕಾರ ತಾನಽ ಖುದ್ದಾಗಿ ಒಂದಿಷ್ಟು ಮಂದೀನ ಕರಕೊಂಡು ನಿಜಗುಣಿಯ ಗುಡ್ಲದ ಕಡಿ ಬಂದ; ಜತಿಗಿ ಸನಾದಿಯವರೂ ಇದ್ದರು. ಕೇರ್‍ಯಾಗಿನ ಮಂದೀನೆಬ್ಬಿಸಿ ಲಗೂ ಲಗೂ ಅಂತಾ ಹ್ವಾತ್ವಾರ ಮಾಡಿದ. ಸಣ್ಣ್ಸಣ್ಣ ಪೋರಿಗೊಳು ಆರತಿ ತಾಟ ಹಿಡಕೊಂಡು ನಿಜಗುಣಿಯ ಅಂಗಳಕ ಬಂದವು. ನಿಜಗುಣಿ ಉಟ್ಟ ಅರವಿ ಮ್ಯಾಲ ಮತ್ತೊಂದು ಕೊಡ ನೀರು ಸುರುವಿಕೊಂಡು ನಿಂತ. ಸನಾದಿಯವರು ತಮ್ಮ ಕಾಯಕ ಸುರು ಮಾಡಿದರು. ಜನ ಗ್ವಾಳೆ ಬಿದ್ದರು. ಮೆರವಣಿಗಿ ಸುರುವಾಗಿ ಅಗಸಿಕಟ್ಟಿ ಮುಟ್ಟುತಿದ್ದಂಗ ಮ್ಯಾಲಿನಕೇರಿಯ ತ್ವಾಡೆ ಮಂದೀನೂ ಸೇರಿದರು.

ಇಮಲವ್ವ ಮಿಂಚೊ ಸೀರಿವುಟಕೊಂಡು ವಯ್ಯಾರ ಬೀರತಾ ಗುಂಪಿನೊಳಗ ಒಂದಾದಳು. ಅಣ್ಣಪ್ಪನ ಮ್ಯಾಳದ ಹುಡುಗೋರು ಬಂದರಾದರೂ ಅವನಽ ಕಾಣಲಿಲ್ಲ. ಗಿಡ್ಡ ಮಾರೂತಿ ಚಂಪವ್ವನ ಬಾಜೂಕ ಹಲ್ಕಿಸಿದು ಸನಾದಿಯವರ ಬಾರ್‍ಸೂಣಕಿಗಿ ಚಪ್ಪಾಳಿ ಬಡೀತ ನಡೆದಿದ್ದ. ಸಾಹುಕಾರನ ಮಗಳು ಶಾಂತಾ ಚಂಪವ್ವನ ಮಗ್ಗಲಕ ಹೆಜ್ಜಿ ಇಡುತ ಹೊಂಟಿದ್ದ. ಚಂಪವ್ವ ಗೌನ್ನಾರ ಹುಡುಗನ ಗರಕಿನ್ಯಾಗ ಘಮ್ಮನ್ನುತ್ತಿದ್ದಳು. ಹುಚ್ಚ್ಯಾಗೋಳ ಬರಮಪ್ಪ ಎಲ್ಲಾರ ಕಡಿ ಗಮನಕೊಟ್ಟು ಅವಘಡ ತರೋ ಮಂದಿಯೇನರ ಅದಾರೇನೋ ಅಂತಾ ಹುಡುಕುತ್ತಿದ್ದ. ಮುಂದ ಮುಂದ ಮ್ಯಾಲಿನಕೇರಿಯ ಮಂದಿ ಅವರ ಹಿಂದ್ಹಿಂದ ಕೇರಿಯವರು. ಹೀಂಗ ಮೆರವಣಿಗಿಯ ಮಂದಿ ನಿದಾನಕ ದೇವರುಗಳ ಹೆಸರು ಹೇಳತಾ ಜೈಕಾರ ಹಾಕತಾ ಮಡ್ಡಿಹಳ್ಳ ದಾಟಿ ಮುಟುರಾದ ಬಳ್ಳಾರಿ ಜಾಲಿಯ ಕಂಟಿಗಳನ್ನು ಹಾದು ಕ್ವಾಣೇರಿ ದಿಬ್ಬದ ಬಯಲಿಗಿ ನೆಡೆದಿದ್ದರು.

ಬರದಾಗಿನ ಹೆಣ ಸಿಂಗಾರಗೊಂಡ್ಹಂಗ ಕ್ವಾಣೇರಿ ದಿಬ್ಬದ ಬಯಲು ಕಾಣಾಕ್ಹತ್ತಿತ್ತು. ಹಾಕಿದ ಹಂದರದ ಬಾಜೂಕ ಅಪ್ಸೂ ಸಾಹುಕಾರ ಕೈಮುಕ್ಕೊಂಡು ನಿಂತ ಹೋರ್ಡಿಂಗ ಹಾಕಿದ್ದರು. ನಾಕೈದು ಬೈಕುಗಳು ಬಂದು ನಿಂತಿದ್ದವು.

ಮೆರವಣಿಗಿ ಬ್ಯಾಟಿ ನುಂಗಿದ ಹಾವು ತೆವಳೊ ತರ ಹಗುರಕ ಹಾದಿ ಸಾಗಿಸಿ ದಿಬ್ಬದಾಗಿನ ಅರಣ್ಯಸಿದ್ದನ ಗುಡಿಗಿ ಬಂತು. ನಿಜಗುಣಿ ಗುಡಿ ಹೊರಗ ನಿಂತು ದೇವರಿಗಿ ಕೈಮುಗಿದು ಹಿಂತಿರುಗಿ ನೆರೆದ ದೈವಕ್ಕೆಲ್ಲಾ ಶರಣೆಂದು ಹಂದರದಾಗ ಹಾಸಿದ ಮಡಿತಟ್ಟಿನ ಮ್ಯಾಲ ಕುಂತ. ಜನ ದೇವರ ಹೆಸರಿಲೆ ಜೈಕಾರ ಹಾಕಿದರು.

ಮತ್ತೊಂದೆರಡು ಬೈಕ್‌ಗಳು ಬಂದವು. ಅದರಿಂದಿಳಿದವರು ಟಿ.ವಿ ಚಾನಲ್‌ನವರಾಗಿದ್ದರು. ಹಿಂದಿಂದ ಕಾರಿನ್ಯಾಗ ಮಂತ್ರಿಕಡಿಯ ಮನುಶ್ಯಾ ಲಕ್ಕಪ್ಪ ಬಂದಿದ್ದ. ಅಂವ ಸೊಟ್ಟಮಾರಿಯ ಹೂವಿನಮಾಲಿ ತಂದು ನಿಜಗುಣಿಯ ಕೊಳ್ಳಿಗಿ ಹಾಕಿದ. ಜೈಕಾರ ಮೊಳಗಿತು. ಚಾನಲ್‌ನವರು ತಿರಗ್ಯಾಡಿ ದೃಶ್ಯ ಸೆರೆ ಹಿಡೀತಿದ್ದರು. ಲಕ್ಕಪ್ಪ ಮತ್ತು ಚಾನೆಲ್‌ದವರ ಕೈಯಾಗ ಬಿಸ್ಲೇರಿ ನೀರಿನ ಬಾಟಲಿಗಳಿದ್ದವು. ಲಕ್ಕಪ್ಪ ಅದ ನೀರಿನಿಂದ ಮಾರಿ ತೊಳೆದು ಬಾಯಿ ಮುಕ್ಕಳಿಸುತ್ತಿದ್ದ. ಗಿಡ್ಡ ಮಾರೂತಿಗಿ ನೀರಡಿಕಿ ಹೊಕ್ಕಳದಿಂದ ಸುರುವಾಗಿ ಗಂಟಲಮಟ ಬಂದು ಕುಂತಿತ್ತು. ಅವ್ಹಾ ಚಾನಲ್‌ದವನ ಹಂತೇಕ ಹೋಗಿ ನೀರು ಕೇಳಿ ಇಸಕೊಂಡ. ಗಟಾಗಟಾ ಕುಡಿದು ಎಲ್ಲ ಮುಗಿಸಿ ಚಾನಲ್‌ದವನ ಕೈಗೆ ಖಾಲಿ ಬಾಟಲಿ ಕೊಟ್ಟ. ಮಾರೂತಿಯ ಮುಖದಾಗ ಪರಮಾನಂದ. ಚಾನಲ್‌ದವಾ ಮಂಗ್ಯಾ ಆಗಿದ್ದ.

ಕ್ಯಾಮರಾ ತಮ್ಮ ಕಡಿ ತಿರುಗಿದಾಗ ಮಂದಿ-ಮಕ್ಕಳೆಲ್ಲ ಮಾರಿ ಅಡಾಗಲ ಮಾಡಿ ನಿಲ್ಲುತ್ತಿದ್ದರು. ಇಮಲವ್ವ ಸೆರಗ ಸರಿಮಾಡ್ಕೊಂಡು ನಕ್ಕಳು. ಚಾನಲ್‌ದವ ಚಂಪವ್ವ-ಶಾಂತಾರ ಕಡೇನ ತಿರುತಿರುಗಿ ಹೋಗುತಿದ್ದ. ಗೌನ್ನಾರ ಹುಡಗನಿಗಿ ಸಿಟ್ಟು ಬರುತಿತ್ತು.

ಸಾಹುಕಾರನು ಲಕ್ಕಪ್ಪನನ್ನು ಮಂತ್ರಿಸಾಹೇಬರ ಛೊಲೋ-ಕೆಟ್ಟ ವಿಚಾರಿಸುತ್ತಿದ್ದ. ಲಕ್ಕಪ್ಪ “ಸಾಹೇಬರು ಬೆಂಗಳೂರಿನ್ಯಾಗ ಅದಾರ. ಮತ್ತ್ಯಾರೋ ಹೊಸದಾಗಿ ಸಿ.ಎಂ ಆಗಾಕ ಕುಂತಾರ. ಇವರಕಡೆ ಮನಶ್ಯಾನ ಆಗಬೇಕಂತ ಸಾಮೂಹಿಕ ರಾಜೀನಾಮಿ ಕೊಡೊ ವಿಚಾರದಾಗಿದ್ದಾರ” ಅಂತೆಲ್ಲ ಹೇಳಿದ್ದ. ಲಕ್ಕಪ್ಪನ ಯಾವ ಸಂಗತಿಗಳೂ ಮಂದಿಗೆ ಬೇಕಾಗಿರಲಿಲ್ಲ. ಅವರೆಲ್ಲರ ಲಕ್ಷ್ಯ ಕ್ಯಾಮರಾ ಕಡೆಗಿತ್ತು.

ಭಾಳ್ಹೊತ್ತಿನ ಮ್ಯಾಲ ಚಾನೆಲ್‌ನವರು ಮತ್ತು ಲಕ್ಕಪ್ಪ ಹ್ವಾದರು. ದಿಬ್ಬದ ಬಯಲನ್ನ ತುಂಬಿದ್ದ ಮಂದಿ ಬಯಲಾದರು. ಹತ್ತಹದಿನೈದು ಮಂದಿಯಷ್ಟ ಉಳದರು.

ಸಂಜಿಹೊತ್ತು ಊರು-ಕೇರಿಯ ಮಂದಿ ಟಿವಿ ಮುಂದ ಕುಂತು ತಮ್ಮೂರಿನ ಸುದ್ದಿ ಬರೋದನ್ನ ಕಾಯುತಿದ್ದರು. ದಗದ-ಬಗಸಿ ಬಿಟ್ಟು ಹಂಗ ಕುಂತಾವರಿಗಿ ಬರೀ ಮಂತ್ರಿಗಳ ಸುದ್ದಿ ನೋಡಿನೋಡಿ ಬ್ಯಾಸರಾಗಿತ್ತು. ಯಾವ ಚಾನಲ್ ಹಚ್ಚಿದರೂ ಸಾಮೂಹಿಕ ರಾಜೀನಾಮಿ, ಪಕ್ಷದಾಗಿನ ಬಿಕ್ಕಟ್ಟು, ಹೊಸ ಸಿ. ಎಂ, ಡಿಸಿಎಂಗಳದ್ದೆ ಭರಾಟಿ. ಅಣ್ಣಪ್ಪ ಇಮಲವ್ವನ ಮನಿಯಾಗ ನಾಕಾರು ಕುಡುಕ ಗಿರಾಕಿಗಳ ಜತಿ ತಾನೂ ಒಂದಾಗಿ ಟಿ.ವಿ ನೋಡುತಿದ್ದ. ರಾಜಕಾರಣಿಗಳ ಸುದ್ದೀನ ಹರೀತ ಹ್ವಾದಂಗ “ಇವರೇನಪಾ ಹಳಿ ಎಮ್ಮಿಗಿ ಕ್ವಾಣ ಹತ್ತಿಬಿದ್ದಂಗ ಬಿದ್ದಾರಲ್ಲೊ ಮಾರಾಯಾ…!” ಅಂದಿದ್ದ.

ತಮ್ಮೂರ ಸುದ್ದಿ ಆಗ ಬಂದೋತು ಈಗ ಬಂದೋತು ಅಂತಾ ಕಾದು ಕುಂತೊರು ಕರಂಟ್ ಹ್ವಾದಮ್ಯಾಲ ತಣ್ಣಗಾದರು.

ಕತ್ತಲಿ ತನ್ನ ಚಾದರ ಜಾಡಿಸಿದಾಗ ದಿಬ್ಬದ ಮ್ಯಾಲ ಹಿಲಾಲುಗಳು ಹೊತ್ತಿಕೊಂಡವು. ಲೈಟಿನ ವ್ಯವಸ್ಥೆಯಿತ್ತಾದರೂ ಯಾವಾಗ ಕೈ ಕೊಡತೈತಂತ ಹೇಳಾಕ ಬರತಿರಲಿಲ್ಲ. ಬಾಜೂದೂರಿನಿಂದ ಭಜನಾ ಮ್ಯಾಳ ಬಂದಿತ್ತು. ಸರ್ವೊತ್ತಿನತನಕ ಅವರು ಪದಾ ಹೇಳತಾ ಹ್ವಾದರು. ಭಜನಿ ಪದಗಳು ಅಲೆಯಾಗಿ ಊರಮಟ ಮುಟ್ಟಿ ಮಳಿಯ ಕನಸಿನ್ಯಾಗ ಹೊಳ್ಕೊಂಡಾವರನ ತೇಲಿಸುತ್ತ ಹೋಗುತ್ತಿದ್ದವು.

***

ನಿಜಗುಣಿ ಅನ್ನ ನೀರು ಬಿಟ್ಟು ತಪಕ್ಕ ಕುಂತು ಬರೊಬ್ಬರಿ ನಾಕ್ ದಿವಸಾಗಿದ್ದವು. ಮಳಿಯ ಕಾತರದಾಗ ಊರು ಸಾವಿರಾರು ಕನಸುಗಳನ್ನು ಹೊಟ್ಟಿಯೊಳಗಿಟ್ಟುಕೊಂಡು ದುಗುಡದಾಗ ಕಾಲದ ರೆಕ್ಕಿಗಳನ್ನ ಬಡೀತಿತ್ತು. ಮಂದಿ ನೆತ್ತಿಮ್ಯಾಲ ಕಣ್ಣೇರಿಸಿ ಏಕಾದ್ಹಂಗ ಚಿಂತಿಯ ಗರ ಬಡಕೊಂಡು ಉಸಿರಾಡುತ್ತಿದ್ದರು. ದಿನ ಕಳೆದಂಗೆಲ್ಲ ನಿಜಗುಣಿ ಕುಸೀತಿದ್ದ. ಅಣ್ಣಪ್ಪನ ಕಡೆಯ ಹುಡಗೋರು ನಿಜಗುಣಿ ಅನ್ನ-ನೀರನ್ನ ಎಲ್ಲೆರೆ ಸೇವಿಸ್ತಾನೇನೋ ಅಂತಾ ಕಾವಲಕ್ಕ ಕುಂತಿದ್ದರು.

ಮಳಿ ಬರಲಾರದಕ್ಕ ಐನಾರ ರಾಚ ನಿಜಗುಣಿನ ಕೇಳಿದ್ದ. “ಯಾಕಪಾ ಶರಣ, ಇನ್ನಾ ಮಳೀನ ಬರವಲ್ಲದಲ್ಲ?” ಅಂತ.

ನಿಜಗುಣಿ “ಮ್ಯಾಲ್ತ ತಳದಾಗ ಮೋಡ ತಳಕ್ ಹಾಕ್ಕೊಂಡಾವು. ತಳಕಿನ ಗಂಟು ಬಿಡಬೇಕಂದರ ಊರಮಂದಿಯಲ್ಲ ಆಚಾರ ಪಾಲಿಸಬೇಕು” ಅಂದಿದ್ದ. ಇದಕ್ಕ ಅಣ್ಣಪ್ಪನ ಹುಡುಗೋರು ನಕ್ಕಿದ್ದರು.

ಆವತ್ತಿನ ಮಟಮಟ ಮಧ್ಯಾಣದಾಗ ಊರವರಿಗಿ ಸುದ್ದಿಯೊಂದು ಹಾರಿಬಂದು ಸಿಡಿದಿತ್ತು. ಅಣ್ಣಪ್ಪನ ಕಡೆಗಿದ್ದ ಬದನಿಕಾಯಿ ಬಾಳೂ ಸಾಲಿಬಸ್ಸಿನ್ಯಾಗ ನಿಜಗುಣಿಯ ಜಾತಿಯ ಹೆಸರಿಡಿದು ಆ ಜಾತಿಯ ಸ್ವಾಮಿ ಮಳಿಗಿ ಕುಂತರೂ ಮಳಿ ಬರಲಿಲ್ಲಂತ ಟಿಂಗಲ್ ಮಾಡಿದ್ದ. ಅದಕ್ಕ ಕೇರಿಯ ಹುಡುಗೋರೆಲ್ಲ ಬಾಳೂನ ದನಾ ಬಡಿದಂಗ ಬಡಿದಿದ್ದರು. ಇದು ಊರಾಗಿನ ದೋಪಾರ್ಟಿ ಮಂದಿಗೆ ಚೀಕ್ ಹಾಕಿದಂಗಾತು.

ಅಣ್ಣಪ್ಪ ಮಸಲತ್ತು ಚಾಲೂ ಮಾಡಿದ್ದ. ಆ ರಾತ್ರಿ ಅಂವಾ ಇಮಲವ್ವನ ಹಂತೇಕಿದ್ದಾಗ ಅಕಿ ಮನಿಮ್ಯಾಲ ಕಲ್ಲು ಬಿದ್ದವು. ಇದೆಲ್ಲ ಸಾಹೂಕಾರನ ಹುಣಾರ ಅಂತಾ ಯಾರೋ ಪಿತೂರಿ ಮಾಡಿದರು. ನೀರಿಲ್ಲದ ತಾಪದಾಗ ದಣಿದ ಊರಿನ ಹೊಟ್ಟಿಗಿ ಬೆಂಕಿ ಬೀಳಾಕ ಸುರುವಾತು. ಅಣ್ಣಪ್ಪ ಕುಂಡಿಸುಟ್ಟ ಬೆಕ್ಕಿನಂಗ ಚಡಪಡಿಸಾಕ ಹತ್ತಿದ. ರಾಚ, ಬಾಳೂ, ಗುಲ್ಲ, ಈರಗಾರರ ಹುಡುಗೋರನ ಕೂಡಿಸಿ “ನಾಳಿಗಿ ದಿಬ್ಬದಾಗ ಆ ಜಗಳ ತಗದ ಹುಡುಗೋರು ಬರತಾರು. ಅವರನ್ನ ಹುಟ್ಟಲಿಲ್ಲ ಅನ್ನೊಹಂಗ ಜಡೀರಿ” ಅಂತಂದ. ಅವನ ಮ್ಯಾಳ ಬಡಗಿ ಕುಡುಗೋಲುಗಳ ತಯಾರಿ ಮಾಡಿತು. ಸುದ್ದಿ ಹ್ಯಾಂಗೋ ಸಾಹುಕಾರನ ಕಿವಿಗಿ ಬಿತ್ತು. ಗುಲ್ಲನ ಮ್ಯಾಲ ಸಾಹುಕಾರನ ಸಿಟ್ಟಿತ್ತು. ಸಾಹೂಕಾರನೂ ಬರಮಪ್ಪನ ಮುಂದಮಾಡಿ ದಾಳಿಗಿ ಬೇತಾ ಹೂಡಿದ.

ಹೊತ್ತು ಮುಳುಗುತ್ತಿತ್ತು. ಗುಳ್ಳವ್ವನ ತರೋ ಗದ್ದಲದಾಗಿದ್ದ ಮಕ್ಕಳು ಊರ ತುಂಬ ತಳವಾರರ ಹಾಡಿನ ಅಲೆಯನ್ನು ತುಂಬಿಸಿಬಿಟ್ಟಿದ್ದರು. ಕತ್ತಲು ಮೆಲ್ಲಕ ಮುಸುಕು ಬಡಿಯುತ್ತ ನೆಡೆದಿತ್ತು. ಮುಂದ ಅಮಾಸಿ ಇದ್ದದ್ದರಿಂದ ಅದರ ಕಾಳವು ಬೆಳಕಿನ ಸುಳಿವಿರದಂಗ ಹೊಡೆದಟ್ಟುತ್ತಿತ್ತು. ಕ್ವಾಣೇರಿ ದಿಬ್ಬದ ಬಯಲಿನ್ಯಾಗ ಮಿಣಕಮಿಣುಕಾಗಿ ಲೈಟ್ ಹತ್ತಿಕೊಂಡಿತ್ತು. ದೀವಟಗಿ ಹಚ್ಚಾಕ ನಿಂತಿದ್ದ ಗಿಡ್ಡ ಮಾರೂತಿ ಬೆಂಕಿಕಡ್ಡಿಯ ತಲಾಶನ್ಯಾಗ ಹಚ್ಚೋದನ್ನ ಮರತಿದ್ದ.

ಐದು ದಿವಸಾದ್ದರಿಂದ ನಿಜಗುಣಿ ಕಸುವು ಇಲ್ಲದಾಗಿ ಸುಸ್ತಾಗಿದ್ದ. ಶಾಣವ್ವ ದಿಗಿಲು ಬಡಿದಿದ್ದಳು. ಮನ್ಯಾಗ ಪಂಚಮಿಗಿ ಮಗಳು ಬಂದು ಕುಂತಿದ್ದಳು. 1824-constable_seascape_study_with_rain_cloudನೆತ್ತಿ ಮ್ಯಾಲ ಮೋಡಗಳಿದ್ದರೂ ಮಳಿ ಹನಿ ತಪ್ಪಿ ಸೈತ ಬಿದ್ದಿರಲಿಲ್ಲ. “ಸಿವನ ನನ್ನ ಗಂಡನ ಉಳಿಸಾಕರೆ ಮುಗಿಲು ಹರಕೊಂಡು ಬೀಳಬಾರದೇನು?” ಅಂತ ಮ್ಯಾಲ ಮಾರಿ ಮಾಡಿದಳು. ಪರಸೂ ಸಹ ಆಕಿ ಜತೀಗೆ ದಿಬ್ಬದೊಳಗಽ ಜಾಂಡಾ ಊರಿದ್ದ. ಅಂವಾ ’ಮಳಿ ಬರಲಿ ಬಿಡಲಿ ಅಣ್ಣ ನಿಜಗುಣಿನ ಎಬ್ಬಿಸಿ ದವಾಖಾನಿಗೆ ಹಾಕಬೇಕು. ಅನ್ನ ನೀರಿಲ್ಲದ ಅಂವಾ ನಮ್ಮ ಕೈ ಬಿಡತಾನ’ ಅಂತಾ ತಾಳೆ ಮಾಡಿ ಯಾರಿಗೂ ಗೊತ್ತಿಲ್ಲದಂಗ 108 ಅಂಬ್ಯುಲೆನ್ಸ್ ಗಾಡಿಗಿ ಪೋನ್ ಮಾಡಿದ್ದ.

ಚಿಣಗಿ ಹಾವಿನಂಗ ಸುಳಿದಾಡ್ತಿದ್ದ ಹಾರ್‍ಸುದ್ದಿಗಳನ್ನ ಕೇಳಿಸ್ಕೋಂತ, ವಯಸ್ಸಿನವರ ಹಾರಾಟಗಳನ ನೋಡತಾ ’ಏನ ಘಟಿಸತದೋ’ ಅಂತ ಭೀಮಪ್ಪಜ್ಜ ನಿಂಗಪ್ಪಜ್ಜರೆಲ್ಲ ದುಗುಡದ ನೆರಳಿನ್ಯಾಗ ಜೀವಾ ಹಿಡದು ಕುಂತಿದ್ದರು.

ಅತ್ತ ಅಣ್ಣಪ್ಪನ ಮ್ಯಾಳ ಅರಣ್ಯಸಿದ್ದನ ಗುಡಿ ಹಿಂದಿನ ಕವನೆಳ್ಳಾಗ ತಂಗಾಗಿ ಕುಂತಿದ್ದರ ಸಾಹುಕಾರನ ಮಂದೀನೂ ಹಂದರದ ಮುಂದಿದ್ದ ಕುರುಬರ ಹೊಲದ ಎತ್ತರದ ಬದುವಿನ ಮರಿಯೊಳಗ ಸಿದ್ದಗೊಂಡಿದ್ದರು.

ಗಾಳಿ ಯಾಕೋ ಇದ್ದಕಿದ್ದಂಗ ಅರ್ಭಟ ಮಾಡಿತು, ಏಕಾಯೇಕಿ ಹಂದರದ ಗಳ ಅಳಗಾಡಲು ಹತ್ತಿದವು. ಹಂದರದಾಗ ಕುಂತಿದ್ದ ಐದಾರು ಮಂದಿ ಅಂಜಿ ಮೈ ಹಿಡಿಮಾಡ್ಕೊಂಡು ಕುಂತರು. ತಟ್ಟಿಗೊರಗಿ ಕುಂತಿದ್ದ ನಿಜಗುಣಿ “ಸಿವಾ ಕಣ್ ಬಿಡಾತಾನು…” ಅಂದ. ಅಲ್ಲಿನ ಜನಕ್ಕ ಖುಷಿಯಾತು. ಅಷ್ಟರೊಳಗ ಕರಂಟ್ ಹೋಗಿ ಇದ್ದ ಮಿಣುಕು ಲೈಟೂ ಆರಿತು. ಗಿಡ್ಡ ಮಾರೂತಿ ಹಿಲಾಲ ಹಚ್ಚಾಕ ಕಡ್ಡಿ ಡಬ್ಬಿ ಸಿಗಲಾರದ ತಡಬಡಿಸಿದ. ಗಾಳಿ ಕಡಿಮೆಯಾಗಿ ಒಂದೆರಡು ಹನಿ ಉದುರಿದವು. ಹಂದರದಾಗಿನ ಮಂದಿ ಬೆಳಕನ್ನ ಮರೆತು ’ಹೋ..’ ಅಂದರು. ಗುಡಿ ಹಿಂದಿನವರು ’ಹರಹರ ಮಹಾದೇವ’ ಅನ್ನತಾ ಎದ್ದರ, ಬದುವಿನ ಮರೆಯಾಗಿದ್ದವರು ’ಚಾಂಗಭಲೇ’ ಅಂತ ಧಾವಿಸಿದರು. ಬಡಿಗಿ ಕುಡುಗೋಲುಗಳು ಮಾತಾಡಿದವು. ನೋಡನೋಡತಾನ ನೆತ್ತರದೋಕುಳಿ!

’ಹಾ ಹಾ ಅಯ್ಯೋ..’ ಅನ್ನೊ ಹಾಹಾಕಾರ!

ಬಿದ್ದಿನೋ ಸತ್ತಿನೋ ಅಂತ ಶಾಣವ್ವ ಗಂಡನ ತೆಕ್ಕಿ ಬಡಿದು ಪರಸೂನ ಕರಕೊಂಡು ಗುಡಿ ಹಿಂದಕ ಹೋದಳು.

ಅಸಲಿಗಿ ಮಳಿಹನಿ ಜೋರಾಗಿ ಬೀಳಲಿಲ್ಲ. ಗಾಳಿ ಮೋಡಗಳನ್ನ ಹೊತ್ತೊಯ್ಯುತ್ತಿತ್ತು. ಸ್ವಲ್ಪೊತ್ತು ಬಿಟ್ಟು ಬರಮಪ್ಪ ಸದ್ದು ಮಾಡದ ನಿಧಾನಕ್ಕ ಹಂದರದ ಕಡಿಗಿ ಬಂದ. ಎಲ್ಲೆಲ್ಲ ಕತ್ತಲು. ಕತ್ತಲಿನ್ಯಾಗ ಯಾರೂ ಕಾಣುತಿರಲಿಲ್ಲ. ಅವನ ಕಾಲಿಗಿ ಏನೋ ತಡಕಿದಂಗಾತು. ಮೊಬೈಲಿನ ಬ್ಯಾಟರಿ ಹಚ್ಚಿ ನೋಡಿದ…

ಗಿಡ್ಡ ಮಾರೂತಿ ರಕ್ತದ ನಡುವ ಬಿದ್ದಿದ್ದ. ಬರಮಪ್ಪ ಅವನ ಮೂಗಿಗೆ ಕೈ ಹಚ್ಚತಾನ. ಉಸಿರಾಡುತ್ತಿದ್ದ.

ಬರಮಪ್ಪ ಯಾರಿಗೋ ಫೋನ್ ಮಾಡಬೇಕಂತಾನ ಆಗ ಕೆಂಪು ದೀಪದ ಗಾಡಿ ’ಟೋಂಯ್ ಟೋಂಯ್’ ಅನ್ನೂತ ಬರುತಿತ್ತು. ಸದ್ದು ಕೇಳೋದ ತಡ ಬರಮಪ್ಪನಾದಿಯಾಗಿ ಎಲ್ಲ ಮಂದಿ ಪೋಲೀಸರು ಅಂತ ಕತ್ತಲಿನ್ಯಾಗ ಕರಗಿ ಹ್ವಾದರು.

ಬಂದ ಅಂಬ್ಯುಲನ್ಸಿಗಿ ಪರಸೂ ನಿಜಗುಣೀನೂ ಶಾಣವ್ವನ್ನೂ ಹತ್ತಿಸಿ ತಾನೂ ಹತ್ತಬೇಕು ಅನ್ನೋಟರಾಗ ಗಾಡಿ ಬಿಟ್ಟಿತ್ತು. ಹೊಡಮಳ್ಳಿ ಬಂದ ಬರಮಪ್ಪ ಅದ್ಹೆಂಗೊ ಓಡಿ ಗಾಡಿ ಹೊಕ್ಕಿದ್ದ.

ದಿಬ್ಬದಾಗಿನ ಅಪಸ್ವರದ ನಾದ ಊರು ಸ್ಪರ್ಶಿಸಿ ಕತ್ತಲೆಯೊಳಗ ಉಸಿರಾಡುತ್ತಿದ್ದವರನ್ನ ಆತಂಕಕ್ಕ ನುಗ್ಗಿಸಿತು. ಎಲ್ಲಾ ಘಟಿಸಿ ತಾಸಾಗಿತ್ತು. horror_rainy_artಯಾರಿಗೂ ಯಾವೊಂದು ಸುದ್ದೀನೂ ಸರ್‍ಯಾಗಿ ಮುಟ್ಟಿರಲಿಲ್ಲ. ಸಾಹುಕಾರನು ಬರಮಪ್ಪನ ಮೋಬೈಲಿಗೆ ಪೋನ್ ಹಚ್ಚೇ ಹಚ್ಚುತ್ತಿದ್ದ. ನಾಟ್ ರಿಚೇಬಲ್ ಆಗಿತ್ತು. ಆಣ್ಣಪ್ಪಗ ಅದ್ಹೆಂಗೋ ಅಷ್ಟಿಷ್ಟು ಸುದ್ದಿ ಮುಟ್ಟಿ ಅಂವಾ ಇಮಲವ್ವನ ಮನಿಯತ್ತ ನಡೆದಿದ್ದ.

ಊರಿಗಿ ಊರಽ ಜಡಗೊಂಡು ನರಳಾಡುವಾಗ ಸರ್ರಂತ ಇದ್ದಕ್ಕಿದ್ದಂಗ ಮಳಿಯ ಸರುವು ಗಾಳಿಯ ಜತಿಗೂಡಿ ಬೀಸಿ ಬಂತು. ರಪರಪ ಹನಿಯಾಕ ಸುರುವಾತು. ಮೋಡಗಳ ಅಡಿಯಿಂದ ದೊಡ್ಡ ದೊಡ್ಡ ಹನಿಗಳು ಜಡಿಯತೊಡಗಿದಾಗ ನರಸತ್ತ ಭೂಮಿ ತೇವದ ಒಲವಿಗೆ ಶರಣೆಂದಿತು. ಮಳಿಯ ಬೀಸು ಜೋರಾಗಿತ್ತು. ದಿಬ್ಬದೊಳಗ ಉಳದು ಮಳಿಯ ನಡುವ ಸಿಕ್ಕ ಪರಸೂ ಸಣ್ಣ ಜಾಲಿಯ ಕಂಟಿಯ ಕೆಳಗ ಕುಂತು, ಸುರಿವ ಮಳಿಯ ಸುದ್ದಿಯನ್ನು ನಿಜಗುಣಿಗೆ ಮುಟ್ಟಿಸಲು ಹವಣಿಸಿ ಖುಷಿಯಿಂದ ಮೊಬೈಲ್ ತೆಗೆದು ಬರಮಪ್ಪಗ ಫೋನ್ ಹಚ್ಚಿ ಆ ಕಡಿಂದ ಬರೋ ಮಾತಿಗಾಗಿ ಕಾಯುತ್ತ ತೋಯಿಸ್ಕೋಂತ ನಿಂತಿದ್ದ.

ಬಿಸಿಲ ಧಗಿಯೊಳಗ ನಖಶಿಖಾಂತ ಮುಳಗಿ ಬೇಸತ್ತಿದ್ದ ಊರವರೂ, ದಿಬ್ಬದ ಕತ್ತಲಲ್ಲಿ ಕರಗಿದವರೂ, ಇಮಲವ್ವನ ತೆಕ್ಕೆಯಲ್ಲಿ ಬೆಚ್ಚಗಾಗುತ್ತಿದ್ದ ಅಣ್ಣಪ್ಪನೂ ಮನಸ್ಸಿನ ವ್ಯಾಪಾರದ ಚಟುವಟಿಕಿಯೊಳಗ ತೊಡಗಿಕೊಂಡರು.

ಮಳಿಯಂತೂ ಊರು-ಕೇರಿ, ಹಾದಿ-ಬೀದಿ, ದಿಬ್ಬ-ಇಳವು, ನೆಲ-ಮುಗಿಲು ಯಾವೊಂದು ಭೇದವಿಲ್ಲದೆ ಏಕವಾಗಿ ಸುರೀತ್ತಿತ್ತು.

2 thoughts on ““ಮುಗಿಲ ಮಾಯೆಯ ಕರುಣೆ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

  1. ಹನುಮಂತ ಹಾಲಿಗೇರಿ

    ನಮ್ಮ ಬೆಳಗಾವಿ ಭಾಷೆ ಬಳಸಕೊಂಡು ಬಾಳ ಚಂದ ಕಥಿ ಬರೆದಿರಿ ಮಂಜು, ಇಂದಿನ ಗ್ರಾಮೀಣ ಬದುಕಿನ ಹಾಸ್ಯ ಇರ್ಷೆಗಳು ಚಲೋ ನರುಪಿತಗೊಂಡಿವೆ. ಇನ್ನಷ್ಟು ಬರಿರಿ

    Reply

Leave a Reply to MANJUNATH.P Cancel reply

Your email address will not be published. Required fields are marked *