ಫ್ಯಾಸಿಸ್ಟರ ಕೈಯಲ್ಲಿ ಮಕ್ಕಳಾಟಿಕೆಯಂತಾಗಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

15 ನೇ ಅಕ್ಟೋಬರ್ 2013 ರಂದು ’ದ ಹಿಂದೂ’ ದಿನಪತ್ರಿಕೆಯ ಸಹ ಸಂಪಾದಕಿ ’ವಿದ್ಯಾ ಬಾಲಸುಬ್ರಮಣ್ಯಂ’ ಅವರು ನವದೆಹಲಿಯ ಪೋಲಿಸ್ ಠಾಣೆಯಲ್ಲಿ ” ತಾವು ‘The forgotten promise of 1949′ ಲೇಖನವನ್ನು ಬರೆದ ನಂತರ ದಿನನಿತ್ಯ ನನ್ನ ಮೊಬೈಲ್‌ಗೆ ಬೆದರಿಕೆ ಕರೆಗಳು ಬರುತ್ತಿವೆ. 15 ಮತ್ತು 16 ನೇ ಅಕ್ಟೋಬರ್ 2013 ರಂದು ಸುಮಾರು 250 ಬೆದರಿಕೆ ಕರೆಗಳು ಬಂದಿವೆ. ಈ ಬೆದರಿಕೆ ಕರೆಗಳನ್ನು ಮಾಡುತ್ತಿರುವುವರು ತಾವು ಆರೆಸಸ್ ಮತ್ತು ವಿಎಚ್‌ಪಿ ಸಂಘಟನೆಗಳಿಗೆ ಸೇರಿದ್ದೇವೆ ಎಂದು ಬೆದರಿಸುತ್ತಿದ್ದಾರೆ,” ಎಂದು ದೂರು ದಾಖಲಿಸಿದ್ದಾರೆ. (ದ ಹಿಂದೂ, 1 ನವೆಂಬರ್, 2013)

ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ, ಜನರಿಂದ ಚುನಾಯಿತರಾಗಿ ಅಧಿಕಾರಕ್ಕೆ ಬರುವ ಸರ್ಕಾರಗಳು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗಗಳೆಂಬ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ಆಧಾರದೊಂದಿಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಈ ಸರ್ಕಾರ ಹಾಗೂ ಈ ನಾಲ್ಕೂ ಸ್ತಂಭಗಳು ಭಾರತದ ಸಂವಿಧಾನಕ್ಕೆ ಬದ್ಧರಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸಬೇಕು. BJP-RSS-Gadkariಇಲ್ಲಿ ಯಾವುದೇ ಧರ್ಮಕ್ಕೂ ಮತ್ತು ಧರ್ಮಗ್ರಂಥಗಳಿಗೂ ಅಧಿಕೃತವಾಗಿ, ಸಾರ್ವಜನಿಕವಾಗಿ, ಕಾನೂನಿನ ಚೌಕಟ್ಟಿನಲ್ಲಿ ಮಾನ್ಯತೆ ಇಲ್ಲವೇ ಇಲ್ಲ. ಕಡೆಗೆ ಸಂವಿಧಾನವೇ ಅಂತಿಮ. ಇಂದು ಫ್ಯಾಸಿಸ್ಟ್ ಸಂಘಟನೆಯಾದ ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ಭಾರತವನ್ನು ಕಬ್ಜಾ ಮಾಡಲು ದೇಶಾದ್ಯಾಂತ ದಂಡಯಾತ್ರೆಯನ್ನು ನಡೆಸುತ್ತಿದ್ದಾರೆ. ಹಾಗಿದ್ದಲ್ಲಿ ಪ್ರಜಾಪ್ರಭುತ್ವದ, ಸಂವಿಧಾನದ ವಿರೋಧಿಯಾದ ಈ ಫ್ಯಾಸಿಸಂನ ಗುಣಗಳೇನು?

ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನದ ಸಾರಾಂಶ:

1920 ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್‌ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ

  • ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  • ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾಣವನ್ನು ಕಟ್ಟಬೇಕೆಂಬ ಸಿದ್ಧಾಂತ
  • ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  • ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  • ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸುವುದು

ಹಾಗಾದರೆ ಆರೆಸಸ್ ಮತ್ತು ಅದರ ಅಂಗಪಕ್ಷಗಳಾದ ಬಿಜೆಪಿ, ವಿಎಚ್‌ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ? ಉತ್ತರ, ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ.

ಆರೆಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ “ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರ ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ.” ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು “ಪ್ರಾಚೀನ ಕಾಲದ ಭರತವರ್ಷ”ವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ savarkar-gowalkarಈ ಆರೆಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಬ್ರೈನ್‌ವಾಶ್ ಮಾಡುತ್ತಾರೆ. ಮರಳಿ ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್‌ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯನ್ಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಆರೆಸಸ್ ನಡೆಸುವ ಬೈಠಕ್‌ಗಳಿಗೆ, ಸಮಾವೇಶಗಳಿಗೆ ಒಮ್ಮೆ ಭೇಟಿ ಕೊಡಿ. ಅಲ್ಲಿ ಸ್ವಯಂಸೇವಕರು ಉಗುಳುವ ಬೆಂಕಿಯನ್ನು ದಯವಿಟ್ಟು ಆಲಿಸಿ. ಆರೆಸಸ್‌ನ ಸಂಸ್ಥಾಪಕ ನಾಯಕರಾದ ಗೋಳ್ವಲ್ಕರ್, ಸಾವರ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಇವರು ಬರೆದ ಪುಸ್ತಕಗಳನ್ನು, ಲೇಖನಗಳನ್ನು ದಯವಿಟ್ಟು ಓದಿ. ಮೇಲೆ ಹೇಳಿದ ಎಲ್ಲಾ ಚಿಂತನೆಗಳು ಅಲ್ಲಿ ಇನ್ನೂ ಉಗ್ರ ಸ್ವರೂಪದಲ್ಲಿವೆ.

ಇದು ಹಳೆಯ ಕಾಲದ ಮಾತಾಯ್ತು ಎನ್ನುವಿರಾ? ಸಾಧ್ಯವೇ ಇಲ್ಲ. ಸಂಘ ಪರಿವಾರಕ್ಕೆ ಈ ನಾಯಕರು ಇಂದಿಗೂ ಆದರ್ಶಪ್ರಾಯರು. ಇಂದಿಗೂ ಇವರ ಚಿಂತನೆಗಳೇ ಸಂಘ ಪರಿವಾರಕ್ಕೆ ವೇದವಾಕ್ಯ.

ಆರೆಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸಸ್ ಮುಖ್ಯಸ್ಥನನ್ನು “ಸರಸಂಚಾಲಕ”ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸ್ವರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸಸ್‌ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಹೆಗಡೇವಾರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಇವರಿಬ್ಬರಿಗೂ ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್‌ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಶಿವಸೇನೆಯ ಬಾಳಾ ಠಾಕ್ರೆಯನ್ನು ಮತ್ತೊಬ್ಬ ಸಾಮಂತ ರಾಜನಂತೆ ಗೌರವಿಸುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ.

(ಆಧಾರ : ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನಗಳು.)

ರಾಷ್ಟ್ರೀಯ ಸ್ವಾವಲಂಬನೆಯನ್ನು ಸಾಧಿಸಲು ಸ್ವದೇಶಿ ಮಂತ್ರವನ್ನು ದೇಶಾದ್ಯಾಂತ ಹರಡಲು ಹುಟ್ಟಿಕೊಂಡಿದ್ದೇ “ಸ್ವದೇಶಿ ಜಾಗರಣ ಮಂಚ್” ಎನ್ನುವ ಸಂಘಟನೆ. ಇದೂ ಸಹ ಆರೆಸಸ್‌ನ ಅಂಗಪಕ್ಷ. ಈ ಸಂಘಟನೆಯು ಪಶ್ಚಿಮ ರಾಷ್ಟ್ರಗಳ ಪರಮೋಚ್ಛತೆಯನ್ನು ತೀವ್ರವಾಗಿ ಖಂಡಿಸುತ್ತದೆ. ಅದರಲ್ಲೂ ಅಮೇರಿಕಾದ ನೀತಿಗಳು ದೇಶಕ್ಕೇ ಮಾರಕವೆಂದೇ ಈ “ಸ್ವದೇಶಿ ಜಾಗರಣ ಮಂಚ್” ಸಾರುತ್ತಾ ಬಂದಿದೆ. ಇದನ್ನು ವಸಾಹತು ನೆಲೆಯಲ್ಲಿ, ಕಲೋನಿಯಲ್ ನೆಲೆಯಲ್ಲಿ ವಿಶ್ಲೇಷಿಸದೆ ಬದಲಾಗಿ “ಹಿಂದೂ ರಾಷ್ಟ್ರೀಯತೆ”ಯ ನೆಲೆಯಲ್ಲಿ ವಿರೋಧಿಸುತ್ತಿದೆ ಆರೆಸಸ್. Globalizationಅಂದರೆ ಈ ಪಶ್ಷಿಮ ರಾಷ್ಟ್ರಗಳಿಂದ ನಮ್ಮ ವೈವಿಧ್ಯಮಯವಾದ ಜೀವನಕ್ರಮ, ನಮ್ಮ ಗ್ರಾಮೀಣ ಬದುಕು ಅಳಿಸಿಹೋಗುತ್ತಿರುವುದು, ನಮ್ಮ ನೆಲದ ಜೀವತೋರಣಗಳು, ಈ ಮಣ್ಣಿನ ಅವೈದಿಕ ಸಂಸ್ಕೃತಿ ನಾಶವಾಗುತ್ತಿವೆ ಎನ್ನುವ ಮಾನವೀಯ, ಜೀವಪರ ನೆಲೆಯಿಂದ ಮಾತನಾಡುತ್ತಿಲ್ಲ. ಬದಲಾಗಿ ಇವರ ವಿರೋಧವಿರುವುದು ಈ ಪಶ್ಚಿಮ ರಾಷ್ಟ್ರಗಳ ಆಕ್ರಮಣತೆಯಿಂದ ಹಿಂದೂ ಸಂಸ್ಕೃತಿ ನಾಶವಾಗುತ್ತಿದೆ ಎಂಬುದಾಗಿ ಮಾತ್ರ. ಆದರೆ ಇವರ ನಾಯಕ ಮೋದಿ ಒಂದು ಕಡೆ ತಾನು ಹಿಂದೂ ರಾಷ್ಟ್ರೀಯವಾದಿ ಎಂದು ಎದೆ ತಟ್ಟಿ ಹೇಳುತ್ತಾನೆ. ಮತ್ತೊಂದು ಕಡೆ ವಿದೇಶಿ ಬಂಡವಾಳ ಹೂಡಿಕೆಯೇ ಬಾರತದ ಮುಂದಿನ ಭವಿಷ್ಯ ಎಂದು ಪಕ್ಕಾ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಕಂಡಲೆಲ್ಲಾ ಭಾಷಣ ಬಿಗಿಯುತ್ತಾನೆ.

ಇಂದು ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯ ಈ ಮೋದಿಗೆ ಬೆಂಬಲಿಸುತ್ತಿರುವುದು ಈ ಆರ್ಥಿಕ ನೀತಿಗಾಗಿ ಮಾತ್ರ. ಈ ಮೋದಿಯ ಬಂಡವಾಳಶಾಹಿಗಳ, ಶ್ರೀಮಂತರ ಪರವಾದ ಆರ್ಥಿಕ ನೀತಿಗಳು ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ಗುಂಪನ್ನು ಪುಳಕಿತಗೊಳಿಸುತ್ತಿದೆ. ಅದನ್ನೇ ಈ ಗುಂಪು ಬದಲಾವಣೆಗಾಗಿ ಎಂದು ಅನೈತಿಕತೆಯಿಂದ ಸಮರ್ಥಿಸಿಕೊಳ್ಳುತ್ತಿವೆ. ಹಾಗಿದ್ದರೆ ಆರೆಸಸ್‌ನ ಮೂಲ ಸಿದ್ಧಾಂತ “ಸ್ವದೇಶಿ ಜಾಗರಣ ಮಂಚ್”ನ ಕತೆ ಏನು?? ಈ ಮೋದಿ ಸಮರ್ಥಕರಿಗೆ ಆರೆಸಸ್ ಮತ್ತು ಮೋದಿಯ ಈ ಎರಡಂಚಿನ ಕತ್ತಿಯ ನಡಿಗೆ ಪರಿಣಾಮ ಇನ್ನೂ ಅನುಭವಿಸಿದಂತಿಲ್ಲ. ಒಮ್ಮೆ ಕತ್ತಿಯ ಅಲುಗಿನ ಎರಡೂ ಕಡೆಯಿಂದ ಹೊಡೆತಕ್ಕೆ ಸಿಕ್ಕಾಗ ಮಾತ್ರ ಅದರ ಪರಿಣಾಮದ ತೀವ್ರತೆ ಅನುಭವಕ್ಕೆ ಬುರುವುದು. ಇದು ಫ್ಯಾಸಿಸಂನ ನಾಲ್ಕನೇ ಅಂಶವನ್ನು ಧೃಡೀಕರಿಸುತ್ತದೆ.

ಮತ್ತೊಂದು ಕಡೆ ಬಿಹಾರನ ಪಾಟ್ಣಾದಲ್ಲಿ ಭಾಷಣ ಮಾಡುತ್ತಾ ಮೋದಿ “ಯದುವಂಶದ ಮೂಲಪುರುಷ ಕೃಷ್ಣ ಪರಮಾತ್ಮನು ಗುಜರಾತನ ದ್ವಾರಕೆಯಿಂದ ಬಂದಿದ್ದಾನೆ. ಹೀಗಾಗಿ ಯಾದವರ ಮೂಲಸ್ಥಾನ ಗುಜರಾತ್” ಎಂದೆಲ್ಲ ಮಾತನಾಡಿದ್ದಾನೆ. ಅಂದು ರಾಮನನ್ನು ಬಳಸಿಕೊಂಡಿದ್ದಾಯಿತು. ಇಂದು ಕೃಷ್ಣನ ಸರದಿ. ಇದು ಯಾವ ಬಗೆಯ ಓಲೈಕೆ?? ಧರ್ಮ ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಬಳಸಿಕೊಳ್ಳುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಆದರೆ ಆರೆಸಸ್ ಮತ್ತು ಮೋದಿಗೆ ಸಂವಿಧಾನ ಕುರಿತಾಗಿ ಯಾವುದೇ ಬಗೆಯ ಗೌರವವಿಲ್ಲ. ಇದು ಪ್ರತಿ ದಿನ ಸಾಬೀತಾಗುತ್ತಿದೆ.

ಅಲ್ಲದೆ ಬಿಹಾರಿಗಳ ಮತವನ್ನು ಪಡೆಯಲು ಇತಿಹಾಸವನ್ನು ತಿರುಚಿ ಸುಳ್ಳುಗಳನ್ನು ಹೇಳಲೂ ನಾಚಲಿಲ್ಲ ಈ ಮೋದಿ. ಔಟ್‌ಲುಕ್, 11 ನೇ ನವೆಂಬರ್, 2013 ರ ವರದಿಯ ಪ್ರಕಾರ ಮೋದಿಯ ಪಾಟ್ಣಾ ಉವಾಚಗಳು:

ಅಲೆಕ್ಸಾಂಡರ್‌ನನ್ನು ಧೈರ್ಯಶಾಲಿ ಬಿಹಾರಿಗಳು ಗಂಗಾ ನದಿಯ ದಂಡೆಯ ಮೇಲೆ ಸೋಲಿಸಿದರು.” : (ವಾಸ್ತವದಲ್ಲಿ ಅಲೆಕ್ಸಾಂಡರ್‌ನನ್ನು ಪಂಜಾಬಿನಿಂದಲೇ ವಾಪಸ್ಸು ಕಳುಹಿಸಲಾಯಿತು.)

ತಕ್ಷಶಿಲಾ ಬಿಹಾರಿನಲ್ಲಿತ್ತು.” : (ವಾಸ್ತವವಾಗಿ Taksasilaತಕ್ಷಶಿಲಾ ಪಾಕಿಸ್ತಾನದಲ್ಲಿದೆ)

ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 8.4 ರಷ್ಟಿತ್ತು.” : (ವಾಸ್ತವವಾಗಿ ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 6 ಕ್ಕಿಂತಲೂ ಕಡಿಮೆ ಇತ್ತು.)

ನೆಹರೂ ಅವರು ಸರ್ದಾರ್ ಪಟೇಲರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. “: (ವಾಸ್ತವವಾಗಿ ಡಿಸೆಂಬರ್ 15, 1950 ರಂದು ಜರುಗಿದ ಅಂತ್ಯಕ್ರಿಯೆಯಲ್ಲಿ ಪ್ರಧಾನಮಂತ್ರಿ ನೆಹರೂ ಮತ್ತು ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಭಾಗವಹಿಸಿದ್ದರು.)

ಮೋದಿಯು ಗುಜರಾತ್‌ನಲ್ಲಿ ಮುಸ್ಲಿಂ ಶಾಲೆಯ ವಿಧ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಅನ್ನು ನಿರಾಕರಿಸಿದ್ದಾನೆ. ಅಲ್ಲಿ ಅಂತರ್ಜಾತಿ ವಿವಾಹವಾಗಬೇಕಾದರೆ, ಮತಾಂತರಗೊಳ್ಳಬೇಕಾದರೆ ಕಠಿಣ ಕಾನೂನುಗಳನ್ನು ಪಾಲಿಸಬೇಕು. ಅಲ್ಲಿ ಮತಾಂತರಗೊಳ್ಳಬೇಕಾದರೆ ಮೊದಲು ಸರ್ಕಾರದ ಅನುಮತಿ ಪಡೆದಕೊಳ್ಳಬೇಕು.

— (ಕೃಪೆ : ಔಟ್‌ಲುಕ್, 11 ನೇ ನವೆಂಬರ್, 2013)

ಉತ್ತರಪ್ರದೇಶದಲ್ಲಿ ಮಾತನಾಡುತ್ತ ರಾಹುಲ್ ಗಾಂಧಿ “ಮುಝಫರ್ ನಗರದಲ್ಲಿ ಹತಾಶಗೊಂಡ ಮುಸ್ಲಿಂ ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲು ಐಎಸ್‌ಐ ಸಂಚು ನಡೆಸಿದೆ” ಎಂದು ಹೇಳಿದಾಗ ಇದೇ ಮೋದಿ ರಾಹುಲ್ ಗಾಂಧಿಯ ವಿರುದ್ಧ ಹಿಗ್ಗಾಮುಗ್ಗಾ ದಾಳಿ ನಡೆಸಿ ಇದು ಅಲ್ಪಸಂಖ್ಯಾತರಿಗೆ ಮಾಡಿದ ಅವಮಾನ ಎಂದು ಕೂಗಾಡಿದ. ಇದು ಯಾವ ಬಗೆಯ ಓಲೈಕೆ?? ಇದು ಆರೆಸಸ್ ಅನ್ನು ಕೋಪಗೊಳಿಸಿತ್ತು ಸಹ. ನಂತರ ಮೋದಿ ಈ ವಿಷಯದ ಕುರಿತಾಗಿ ಬಾಯಿ ಬಿಚ್ಚಲಿಲ್ಲ.
ಮಂದಿರಕ್ಕಿಂತಲೂ ಶೌಚಾಲಯಗಳ ಅವಶ್ಯಕತೆ ಇದೆ ಎಂದು ಬಾಯಿತಪ್ಪಿ ಮೊದಲ ಬಾರಿಗೆ ನಿಜ ನುಡಿದ ನರೇಂದ್ರ ಮೋದಿಗೆ ಆರೆಸಸ್ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದೆ. ನಂತರ ಇದರ ಕುರಿತಾಗಿ ಮೋದಿ ಎಲ್ಲಿಯೂ ಮಾತನಾಡಿಲ್ಲ. ಮತ್ತೆ ಹಿಂದೂ ರಾಷ್ಟ್ರೀಯತೆಗೆ ಮರಳಿದ್ದಾನೆ.

ಕಳೆದ ತಿಂಗಳು ಬಿಜೆಪಿ ಪಕ್ಷದ ನಾಯಕರು ತಮ್ಮಲ್ಲೂ ಒಳಗೊಳ್ಳುವಿಕೆಯ ತತ್ವವಿದೆ ಎಂದು ಮಾರ್ಕೆಟಿಂಗ್ ಮಾಡಲು ರ್‍ಯಾಲಿಗಳಲ್ಲಿ ಮುಸ್ಲಿಂರನ್ನು ಕರೆದುತಂದು ಅವರಿಗೆ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಹಂಚಿದರು. ಇದು ಆರೆಸಸ್ ಅನ್ನು ಕೆಂಗಣ್ಣಾಗಿಸಿತು. ನಂತರ ಈ ಪ್ರಾಜೆಕ್ಟ್ ಅನ್ನೇ ಕೈಬಿಡಲಾಯಿತು. ಅಷ್ಟೇಕೆ ಮೊನ್ನೆ ಭೂಪಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂರನ್ನು ಒಳಗೆ ಬಿಡಲೇ ಇಲ್ಲ. ಪ್ರವೇಶದ್ವಾರದಿಂಲೇ ಹಿಂದಕ್ಕೆ ಕಳುಹಿಸಲಾಯಿತು.

ಆರೆಸಸ್ ಮೋದಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸಿದರೆ ಈ ಮೋದಿ ಬಂಡವಾಳ ಹೂಡಿಕೆಯ ಮಾರ್ಕೆಟ್ ತತ್ವ, ಕೇವಲ ಕೈಗಾರಕೋದ್ಯಮಿಗಳಿಗೆ ಮಾತ್ರ ರತ್ನಗಂಬಳಿ ಹಾಸುವ ಆರ್ಥಿಕ ತತ್ವ ಮತ್ತು ಹಿಂದುತ್ವ ಎನ್ನುವ ಎರಡು ಕುದುರೆಯನ್ನೇರಲು ಹೊರಟಿದ್ದಾನೆ. ಇನ್ನು ಬಿಜೆಪಿ ಎನ್ನುವ ರಾಜಕೀಯ ಪಕ್ಷದ ಸ್ಥಿತಿ ಕರಣಾಜನಕ. ಇಂದು ಅದು ರಾಜಕೀಯ ಪಕ್ಷವಾಗಿ ತನ್ನ ಇರುವಿಕೆಯೇ ಪ್ರಶ್ನಾರ್ಹವಾಗಿರುವುದು ನಿಜಕ್ಕೂ ಒಂದು ದುರಂತ.

ಇನ್ನೂ ಸಂಪೂರ್ಣವಾಗಿ ತನ್ನ ಸಿದ್ಧಾಂತಗಳ ಮೆಟ್ಟಿಲುಗಳ ಮೇಲೆ ಅಧಿಕಾರ ಹಿಡಿಯಲು ಆರೆಸಸ್ ವಿಫಲಗೊಂಡಿರುವುದರಿಂದ ಅದರ ವಿದೇಶಾಂಗ ನೀತಿಗಳ ಕುರಿತಾಗಿ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ. ಸದ್ಯಕ್ಕೆ ಅದು ಓಬಿರಾಯನ ಕಾಲದ ವಾಜಪೇಯಿಯವರ ಮುತ್ಸದ್ದಿತನದ ರಾಜಕಾರಣವನ್ನೇ ನೆಚ್ಚಿದಂತಿದೆ. ಆದರೆ ನೆರೆಯ ಮುಸ್ಲಿಂ ರಾಷ್ಟ್ರಗಳ ಕುರಿತಾಗಿ ಮಾತ್ರ ಇವರ ವಿದೇಶಾಂಗ ನೀತಿ ಸ್ಪಷ್ಟವಾಗಿದೆ. ಅದು ಹಿಂದಿನ ಕಾಲದ ರಾಜ್ಯಾಡಳಿತದ ಮಾದರಿ. ಅಂದರೆ ಮೋದಿ ಕ್ಷತ್ರಿಯ ರಾಜ. ಬಿಜೆಪಿ ಕ್ಷತ್ರಿಯ ವಂಶ. ವಿಎಚ್‌ಪಿ, ಭಜರಂಗದಳ ಈ ಕ್ಷತ್ರಿಯ ವಂಶದ ಸೇನಾಪಡೆಗಳು. bhagvat-gadkari-modiಸಾವಿರಾರು ವರ್ಷಗಳ ಹಿಂದಿನ ಕಾಲದಂತೆಯೆ ಈ ಕಾಲದಲ್ಲೂ ಕಾಲಾನುಕಾಲಕ್ಕೆ ಶತೃಗಳೊಂದಿಗೆ ಯುದ್ಧಗಳನ್ನು ನಡೆಸುತ್ತಾ ಅವರ ಸಾಮ್ರಾಜ್ಯಗಳನ್ನು ಕಬಳಿಸುತ್ತಾ “ಅಖಂಡ ಹಿಂದೂ ರಾಷ್ಟ್ರ”ದ ಸ್ಥಾಪಿಸುವುದು. ಶತೃರಾಷ್ಟ್ರಗಳನ್ನು ಸದಾಕಾಲ ಭೀತಿಯಲ್ಲಿಡಲು ನಿಯಮಿತವಾಗಿ ಅಣುಪರೀಕ್ಷೆಯನ್ನು ನಡೆಸುತ್ತಿರುವುದು ಮತ್ತೊಂದು ಮಹತ್ವದ ನೀತಿಯಾಗಿರುತ್ತದೆ.

ದೇಶದ ಭವಿಷ್ಯದ ನಾಯಕನೆಂದು ಅಭಿಮಾನಿಗಳಿಂದ ಹೊಗಳಿಸಿಕೊಳ್ಳುತ್ತಿರುವ ಮೋದಿಯ ಬಾಲಿಶ, ತರ್ಕರಹಿತ, ಅನಾಯಕತ್ವದ ಉದಾಹರಣೆಗಳ ನಿದರ್ಶನಕ್ಕಾಗಿ ಮೇಲಿನ ಘಟನೆಗಳನ್ನು ಬರೆಯಬೇಕಾಯಿತು.

ಮಾನವೀಯತೆ, ಸೆಕ್ಯುಲರಿಸಂ ಕುರಿತಾಗಿ ಬಿಟ್ಟುಬಿಡಿ, ಕನಿಷ್ಟ ಮಟ್ಟದ ಆದರ್ಶಗಳು, ದೂರದರ್ಶತ್ವ, ಕನಸುಗಳು ಇಲ್ಲದ ಈ ಮೋದಿಯೆಂಬ ರಾಜಕಾರಣಿಯ ದರ್ಪ ಮತ್ತು ಬಾಲಿಶತನ ಮುಂದೊಂದು ದಿನ ಆತನಿಗೇ ಮುಳುವಾಗಲಿದೆ. ಇದು ದೇಶವನ್ನಾಳ ಬಯಸುವ ಆರೆಸಸ್ ಮತ್ತು ಮೋದಿಯವರ ಡೇಂಜರಸ್ ಆದ ಹುಚ್ಚು ಅವತಾರಗಳು. ಈ ಫ್ಯಾಸಿಸ್ಟರು ದೇಶವನ್ನು ಒಂದು ಮಕ್ಕಳಾಟಿಕೆ ಎಂದು ಭಾವಿಸಿದಂತಿದೆ.

ಇವಕ್ಕೆಲ್ಲ ಮೋದಿಯ ಸಮರ್ಥಕರು ಬಳಿ ಉತ್ತರಗಳಿವೆಯೇ ??

ಆರೆಸಸ್ ಮೋದಿಯನ್ನು ಹೇಗೆ ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳುತ್ತದೆ? ಕಡೆಗೆ ಈ ಮೋದಿ ಎರಡು ಧ್ರುವಗಳಂತಿರುವ ಆರೆಸಸ್ ಮತ್ತು ತನ್ನ ಜಾಗತೀಕರಣದ ಮಾರ್ಕೆಟ್ ಸಿದ್ಧಾಂತವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ?? ಕಡೆಗೆ ಪ್ರಜಾಪ್ರಭುತ್ವವನ್ನು ಗೌರವಿಸುತ್ತೇವೆ ಎಂದೇ ವಚನ ನೀಡಿ ಇಂಡಿಯಾದಲ್ಲಿ ರಾಜಕಾರಣ ಮಾಡುತ್ತಿರುವ ಈ ಬಿಜೆಪಿ ಪಕ್ಷ ಆರೆಸಸ್ ಮತ್ತು ಮೋದಿಯನ್ನು ಹೇಗೆ ನಿಭಾಯಿಸುತ್ತದೆ?? ಇದು ಯಕ್ಷಪ್ರಶ್ನೆ.

ಆದರೆ ದೇಶ ಈ ಫ್ಯಾಸಿಸ್ಟ್ ಗುಂಪನ್ನು ಹೇಗೆ ನಿಭಾಯಿಸುತ್ತದೆ ?? ನಾವೆಲ್ಲಾ ಬಿಜೆಪಿ ಮತ್ತು ಮೋದಿಯ ಗುಮ್ಮನನ್ನು ತೋರಿಸಿ ಸಧ್ಯಕ್ಕೆ ಕಾಂಗ್ರೆಸ್ ಮಾತ್ರ ಇವರಿಗೆ ಪರ್ಯಾಯವೆಂದುಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಹೊಸ ನುಡಿಕಟ್ಟು, ಹೊಸ ಚಿಂತನೆಗಳನ್ನು, ಪರ್ಯಾಯ ಸಾಂಸ್ಕೃತಿಕ ಮಾದರಿಗಳನ್ನು ರೂಪಿಸಲು ಪ್ರಯತ್ನಿಸಿದರೆ ಇದು ಕ್ಲಿಷ್ಟಕರವೂ ಅಲ್ಲ. ಜಟಿಲವೂ ಅಲ್ಲ.

3 thoughts on “ಫ್ಯಾಸಿಸ್ಟರ ಕೈಯಲ್ಲಿ ಮಕ್ಕಳಾಟಿಕೆಯಂತಾಗಿರುವ ಇಂಡಿಯಾ

  1. Ananda Prasad

    ಮೋದಿಯನ್ನು ಹಾಗೂ ಸಂಘ ಪರಿವಾರವನ್ನು ಬೆಂಬಲಿಸುವವರ ಪ್ರಧಾನ ಲಕ್ಷಣ ಎಂದರೆ ಇವರೆಲ್ಲರೂ ಪುರೊಹಿತಶಾಹೀ ವ್ಯವಸ್ಥೆಯ ಮೇಲೆ ಒಲವನ್ನು ಹೊಂದಿರುವವರು. ಇವರು ಕುರುಡಾಗಿ ಪುರೋಹಿತಶಾಹೀ ಮೌಲ್ಯಗಳಿಗಾಗಿ ಸಂಘ ಪರಿವಾರವನ್ನು ಹಾಗೂ ಅದರ ರಾಜಕೀಯ ಅಂಗವಾದ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಹೀಗಾಗಿ ಪುರೋಹಿತಶಾಹೀ ಮೌಲ್ಯಗಳನ್ನು ದೇಶದಲ್ಲಿ ನಾಶ ಮಾಡದ ಹೊರತು ಪ್ರಜಾಪ್ರಭುತ್ವ ಯಶಸ್ವಿಯಾಗಿ ಬೆಳೆದು ಕಾರ್ಯಾಚರಿಸಲು ಸಾಧ್ಯವಿಲ್ಲ. ಪುರೊಹಿತಶಾಹೀ ವ್ಯವಸ್ಥೆಯೇ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿ ಬೆಳೆಯದಂತೆ ತಡೆಯುತ್ತಿರುವುದು. ಇಂದು ಪುರೋಹಿತಶಾಹೀ ವ್ಯವಸ್ಥೆಯನ್ನು ನಾನಾ ವಿಧಗಳಲ್ಲಿ ಬಲಪಡಿಸಲು ಸಂಘ ಪರಿವಾರ ಶ್ರಮಿಸುತ್ತಿದೆ. ಸಾರ್ವಜನಿಕ ಗಣೇಶೋತ್ಸವಗಳು, ಸಾರ್ವಜನಿಕ ವರಮಹಾಲಕ್ಷಿ ಪೂಜೆ, ಸಾಮೂಹಿಕ ಗೋಪೂಜೆ ಇತ್ಯಾದಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ಇವುಗಳ ಹಿಂದಿರುವ ಪ್ರೇರಕ ಶಕ್ತಿ ಸಂಘ ಪರಿವಾರವೇ ಆಗಿದೆ. ಅದೇ ರೀತಿ ಅಲ್ಲಲ್ಲಿ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶ ಕಾರ್ಯಗಳು ಭರದಿಂದ ನಡೆಯುತ್ತಿವೆ. ಇವುಗಳ ಮೂಲ ಉದ್ಧೇಶ ಜನರ ವಿಚಾರಶಕ್ತಿಯನ್ನು ಕೊಂದು ಪುರೋಹಿತಶಾಹೀ ವ್ಯವಸ್ಥೆಗೆ ಜನರನ್ನು ಗುಲಾಮರನ್ನಾಗಿಸುವುದು. ಇತ್ತೀಚೆಗೆ ಟಿವಿ ವಾಹಿನಿಗಳಲ್ಲಿ ವಿವಿಧ ಹಬ್ಬಗಳಂದು ಪುರೋಹಿತಶಾಹೀ ಪೂಜೆ ಪುನಸ್ಕಾರಗಳ ನೇರ ಪ್ರಸಾರ ಹೆಚ್ಚುತ್ತಿದೆ. ಇದು ಜನರನ್ನು ಪುರೋಹಿತಶಾಹೀ ವ್ಯವಸ್ಥೆಯ ಗುಲಾಮರಾಗಿಸಲು ನಡೆಯುತ್ತಿರುವ ಅತ್ಯಂತ ವ್ಯವಸ್ಥಿತ ಪ್ರಯತ್ನವೇ ಆಗಿದೆ. ವಾಸ್ತು, ಜ್ಯೋತಿಷ್ಯ, ಪುನರ್ಜನ್ಮ ಕುರಿತಾದ ಕಟ್ಟುಕಥೆಗಳನ್ನು ಅತ್ಯಂತ ರಂಜನೀಯವಾಗಿ ಟಿವಿ ವಾಹಿನಿಗಳಲ್ಲಿ ಬಿತ್ತರಿಸುವುದು ಜನರ ವಿಚಾರಶಕ್ತಿಯನ್ನು ಕೊಲ್ಲುವ ಹಾಗೂ ಜನರನ್ನು ಗುಲಾಮರನ್ನಾಗಿಸುವ ಸಂಚಿನ ಒಂದು ಭಾಗವೇ ಆಗಿದೆ. ಇವುಗಳಿಗೆ ಗುಲಾಮರಾದ ಮನುಷ್ಯರು ಸಹಜವಾಗಿಯೇ ಬಿಜೆಪಿಗೆ ಓಟು ಹಾಕುವ ವೋಟು ಬ್ಯಾಂಕುಗಳಾಗುತ್ತಾರೆ. ಹೀಗೆ ಮತದಾನದ ಮೂಲಕವೇ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನವಾಗುತ್ತದೆ ಮತ್ತು ಪುರೋಹಿತಶಾಹೀ ನಿಯಂತ್ರಣದ ನಿರಂಕುಶ ರಾಜಪ್ರಭುತ್ವದ ಮಾದರಿಯ ವ್ಯವಸ್ಥೆಗೆ ಮರಳುತ್ತದೆ. ಈಗಾಗಲೇ ಇಂಥ ಪ್ರಕ್ರಿಯೆ ನಡೆಯುತ್ತಿದೆ, ಮೋದಿ ಅಧಿಕಾರಕ್ಕೆ ಬಂದರೆ ಇದು ಅತ್ಯಂತ ವೇಗವಾಗಿ ಹಾಗೂ ಆಕ್ರಮಣಕಾರಿ ರೀತಿಯಲ್ಲಿ ಮುನ್ನಡೆಯುವ ಸಂಭವ ಇದೆ. ಪುರೋಹಿತಶಾಹೀ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಇವೆರಡೂ ಪರಸ್ಪರ ವಿರುದ್ಧ ಧ್ರುವಗಳು. ಎಲ್ಲಿ ಪುರೊಹಿತಶಾಹೀ ವ್ಯವಸ್ಥೆ ಇರುತ್ತದೋ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಜವಾದ ಅರ್ಥದಲ್ಲಿ ಯಶಸ್ವಿಯಾಗುವುದಿಲ್ಲ. ಪುರೋಹಿತಶಾಹೀ ವ್ಯವಸ್ಥೆಯ ಕಬಂಧ ಬಾಹುಗಳಿಂದ ಜನಸಾಮಾನ್ಯರನ್ನು ಬಿಡಿಸದೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲಾರದು.

    Reply
  2. g.n.nagaraj

    ಅರೆಸ್ಸೆಸ್ ನ ,ಬಿಜೆಪಿಯ ಫಾಸಿಸ್ಟ್ ನೀತಿಗಳಿಗೆ ಬದಲಾಗಿ ಕಾಂಗ್ರೆಸ್ ಎನ್ನುವ ಬದಲು ಹೊಸ ನುಡಿಕಟ್ಟು , ಹೊಸ ಚಿಂತನೆ, ಪರ್ಯಾಯ ಸಾಂಸ್ಕೃತಿಕ ಮಾದರಿ ಬೇಕು ಎಂಬ ಮಾತು ಸರಿ . ಅಂತಹ ಮಾದರಿ ಜಾಗತೀಕರಣ, ಖಾಸಗೀಕರಣಕ್ಕೆ ಒಂದು ಕಡೆ, ಫ್ಯಾಸಿಸಂ ಎಲ್ಲ ರೀತಿಯ ಕೋಮುವಾದ ಮತ್ತೊಂದು ಕಡೆ ಎರಡಕ್ಕೂ ಪರ್ಯಾಯವಾದ ದಾರಿಯನ್ನು ರೂಪಿಸಿಕೊಳ್ಳಬೇಕು. ಆದರೆ ಆರೆಸ್ಸೆಸ್ ಹಾಗೂ ಜಾಗತೀಕರಣ ಿವು ಎರಡು ವಿರುದ್ಧ ಧ್ರುವಗಳು ಎಂಬುದು ಜನರನ್ನು ಮರುಳು ಮಾಡಲು ಅವರು ನೀಡುವ ಹೇಳಿಕೆಗಳು ಮೂಡಿಸುವ ಭ್ರಮೆಯ ಫಲ. ಾರೆಸ್ಸೆಸ್ ನ ಕೋಮುವಾದಿ, ಫ್ಯಾಸಿಸ್ಟ್ ನೀತಿಗಳು ಜಾಗತೀಕರಣ, ಖಾಸಗೀಕರಣ ನೀತಿಗಳ ಮುಖವಾಡ ಮಾತ್ರ. ಭಾರತದಲ್ಲಿ ಯಾವಾಗಲೂ ಜಾಗತೀಕರಣ, ಖಾಸಗೀಕರಣ ಪರ ಸರ್ಕಾರವೇ ಇರಬೇಕು ಎಂದು ಮಾಡುವ ಕುತಂತ್ರಗಳ ಒಂದು ಭಾಗ. ಒಂದು ಪಕ್ಷ ಜಾತ್ಯಾತೀತತೆಯನ್ನು ತಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡು ಮತ್ತೊಂದು ಕೋಮುವಾದವನ್ನು ಅಸ್ತ್ರವನ್ನಾಗಿ ಮಾಡಿಕೊಂಕೊಂಡು ಆಡಳಿತಕ್ಕೆ ಬರಬೇಕು. ಎರಡೂ ಅದೇ ಜಾಗತೀಕರಣ,ಖಾಸಗೀಕರಣ ನೀತಿಗಳನ್ನೇ ಅನುಸರಿಸುತ್ತಾ ಕಾರ್ಪೋರೇಟ್ ವಲಯಕ್ಕೆ ಅಧೀನವಾಗಿರಬೇಕು ಇದೇ ಈ ಎರಡೂ ಪಕ್ಷಗಳ, ಅವರ ಹಿಂದಿರುವ ಧೂರ್ತ ಬಹುರಾಷ್ಟ್ರೀಯ ಹಾಗೂ ದೇಶೀಯ ಕಾರ್ಪೋರೇಟ್ ವಲಯದ ನೀತಿ. ಇದನ್ನು ಅರ್ಥ ಮಾಡಿಕೊಂಡಾಗಲೇ ಸರಿಯಾದ ಪರ್ಯಾಯ ರೂಪುಗೊಳ್ಳಲು ಸಾಧ್ಯ

    Reply
  3. Ananda Prasad

    ಖಾಸಗಿ ರಂಗದಲ್ಲಿ ಇಂದು ಉದ್ಯಮಗಳನ್ನು ಬೆಂಬಲಿಸಿ ಬೆಳೆಸುವುದು ಒಂದು ರಾಷ್ಟ್ರದ ಅಭಿವೃದ್ಧಿಗೆ ಅವಶ್ಯಕ. ಇದನ್ನು ಎಡ ಪಕ್ಷಗಳು ಅರ್ಥ ಮಾಡಿಕೊಳ್ಳದಿದ್ದರೆ ಎಡಪಕ್ಷಗಳ ಬೆಳವಣಿಗೆ ಸಾಧ್ಯವಿಲ್ಲ. ಉದ್ಯಮಗಳನ್ನು ಬೆಂಬಲಿಸುವಾಗ ಅನೈತಿಕ ಮಾರ್ಗಗಳ ಮೂಲಕ ಉದ್ಯಮಗಳು ಬೆಳೆಯದಂತೆ ನೋಡಿಕೊಂಡರೆ ಸಾಕು. ಕೃಷಿಯಲ್ಲಿ ಸಾಕಷ್ಟು ಕಠಿಣವಾದ ದೈಹಿಕ ದುಡಿಮೆ ಅಗತ್ಯ. ಇಂದಿನ ಯುವಜನಾಂಗ ದೈಹಿಕ ದುಡಿಮೆಗೆ ಒಲವು ಹೊಂದಿಲ್ಲ. ಹೀಗಾಗಿ ಯುವಜನಾಂಗ ಹೊಸ ಉದ್ಯೋಗವಕಾಶಗಳನ್ನು ಅರಸಿ ನಗರಗಳಿಗೆ ಹೋಗುವ ವಾತಾವರಣ ಇಂದು ಎಲ್ಲೆಡೆ ಕಂಡುಬರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಹೊಸ ಉದ್ಯೋಗಾವಕಾಶಗಳನ್ನು, ಆರ್ಥಿಕ ಬೆಳವಣಿಗೆಯ ಅವಕಾಶಗಳನ್ನು ದೇಶದಲ್ಲಿ ಸೃಷ್ಟಿಸದಿದ್ದರೆ ಯುವಜನಾಂಗದ ಬೆಂಬಲ ಎಡಪಕ್ಷಗಳಿಗೆ ಸಿಕ್ಕಲಾರದು. ಆದರೆ ಎಡ ಪಕ್ಷಗಳು ಹೊಂದಿರುವ ಆರ್ಥಿಕ ನೀತಿ ಇಂದಿನ ದಿನಗಳಿಗೆ ಹೊಂದಿಕೆಯಾಗುತ್ತಿಲ್ಲ. ಎಡ ಪಕ್ಷಗಳು ಎಡವುತ್ತಿರುವುದು ಇಲ್ಲೇ. ದೇಶದಲ್ಲಿ ಬಂಡವಾಳ ಹೂಡಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರಕುವಂತೆ ಮಾಡಬೇಕಾದರೆ ಖಾಸಗಿ ಉದ್ಯಮಿಗಳ ಹಾಗೂ ವಿದೇಶಿ ಬಂಡವಾಳದ ಅಗತ್ಯ ಇದ್ದೇ ಇದೆ ಏಕೆಂದರೆ ದೇಶದಲ್ಲಿ ಬಂಡವಾಳ ಹೂಡಲು ಸರ್ಕಾರದ ಬಳಿ ಬಂಡವಾಳ ಇಲ್ಲ ಮಾತ್ರವಲ್ಲ, ಬಂಡವಾಳ ಹೂಡಿ ಅದನ್ನು ಲಾಭಕರವಾಗಿ ಮುನ್ನಡೆಸುವುದು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ರಂಗದ ಉದ್ಯಮಗಳು ಲಾಭಕರವಾಗಿ ಬೆಳೆಯಬೇಕಾದರೆ ಖಾಸಗಿ ರಂಗದವರು ಅಳವಡಿಸುವ ನೀತಿಗಳನ್ನೇ ಸಾರ್ವಜನಿಕ ರಂಗದ ಉದ್ಯಮಗಳು ಅಳವಡಿಸಿಕೊಳ್ಳಬೇಕು ಇಲ್ಲದಿದ್ದರೆ ಸಾರ್ವಜನಿಕ ರಂಗದ ಉದ್ಯಮಗಳು ನಷ್ಟ ಹೊಂದುವುದು ಅಥವಾ ಬೆಳವಣಿಗೆ ಹೊಂದದೆ ಯಥಾಸ್ಥಿತಿಯಲ್ಲಿಯೇ ಇರುವುದನ್ನು ತಡೆಯಲು ಸಾಧ್ಯವಿಲ್ಲ.

    Reply

Leave a Reply to g.n.nagaraj Cancel reply

Your email address will not be published. Required fields are marked *