ವರದಕ್ಷಿಣೆಯ ದಾಹ.. ಗಂಟೆಗೊಂದು ಸಾವು..!


– ಡಾ.ಎಸ್.ಬಿ. ಜೋಗುರ


 

ಕೇವಲ ಎರಡು ದಶಕಗಳ ಹಿಂದೆ ಗಂಡು ಹೆತ್ತವರ ಮಾತಿನಲ್ಲೊಂದು ಧಿಮಾಕಿರುತ್ತಿತ್ತು . ಕನ್ಯಾನ್ವೇಷಣೆಯ ಸಂದರ್ಭದಲ್ಲಿ ಹುಡುಗನಿಗೆ ಹುಡುಗಿ ಇಷ್ಟವಾಗದಿದ್ದರೆ ವರನ ತಂದೆ-ತಾಯಿಗಳು ಹೆಣ್ಣಿಗೇನು ಧಾಡಿ..? ನಾ ಮುಂದ ನೀ ಮುಂದ ಅಂತಾರ ಅನ್ನೋ ಮಾತು ಸಾಮಾನ್ಯವಾಗಿತ್ತು. ಈಗ ಗಂಡು ಹೆತ್ತವರಿಗೆ ಎರಡು ದಶಕಗಳ ಹಿಂದಿನ ಆ ಧಿಮಾಕಿನ ಮಾತಾಡಲು ಧೈರ್ಯ ಸಾಕಾಗುತ್ತಿಲ್ಲ. ಒಂದೆಡೆಗೆ ನಿರಂತರವಾಗಿ ನಡೆಯುತ್ತಿರುವ ಭ್ರೂಣ ಹತ್ಯೆ, ಇನ್ನೊಂದೆಡೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಲಿಂಗ ಪ್ರಮಾಣ ಪರಿಣಾಮವಾಗಿ ಕೆಲವು ಉಪಜಾತಿಗಳಲ್ಲಿ Hindu_Bride,_Ahmedabad,_Gujaratಮದುವೆಗೆ ಕನ್ಯೆಗಳೇ ಸಿಗದಂತಹ ಸ್ಥಿತಿ ನಿರ್ಮಾಣವಾಗಿ ಮೊದಲಿನ ಕಾಲದಲ್ಲಿಯ ಹಾಗೆ ತೆರವು ಕೊಡುವ ಹಾಗೆ ಕನ್ಯೆಯ ಕಡೆಯವರಿಗೆ ಉಡುಗೊರೆಗಳನ್ನು ಕೊಟ್ಟು ಮಡುವೆಯಾಗುವ ಪ್ರಸಂಗಗಳು ಎದುರಾಗುತ್ತಿವೆ. ನೀವು ಬರೀ ಮದುವೆಗೆ ಹುಂ ಅನ್ನಿ ಸಾಕು ಮದುವೆಯನ್ನೂ ನಾವೇ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಸಂಬಂಧ ಕುದುರಿಸುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ.

ಗಂಡು ಮತ್ತು ಹೆಣ್ಣಿನ ಲಿಂಗ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಮಾತನಾಡುವುದಾದರೆ ಕೆಲವು ರಾಜ್ಯಗಳಲ್ಲಿ ತೀರಾ ಅಸಹಜವಾದ ಅಂತರಗಳು ಲಿಂಗ ಪ್ರಮಾಣದಲ್ಲಿ ಕಾಣುತ್ತಿವೆ ದೇಶದ ಒಟ್ಟು ಲಿಂಗ ಪ್ರಮಾಣ 943 ರಷ್ಟಿದ್ದರೆ, ರಾಜಧಾನಿ ದೆಹಲಿಯಲ್ಲಿ ಮಾತ್ರ 1000 ಪುರುಷರಿಗೆ 868 ರಷ್ಟು ಲಿಂಗ ಪ್ರಮಾಣವಿದೆ. ಕರ್ನಾಟಕದಲ್ಲಿ ಆ ಸಂಖ್ಯೆ 973 ರಷ್ಟಿದೆ. ಕೇರಳದಲ್ಲಿ ಮಾತ್ರ ಮಹಿಳೆಯರ ಲಿಂಗ ಪ್ರಮಾಣ 1084 ರಷ್ಟಿದೆ. ಚಂಡಿಗಡದಲ್ಲಿ ಮಹಿಳೆಯರ ಲಿಂಗ ಪ್ರಮಾಣ 818 ರಷ್ಟಿದ್ದರೆ ದಮನ್ ಮತ್ತು ದ್ಯು ದಂತಹ ಕಡೆಗಳಲ್ಲಿ ಕೇವಲ 618 ರಷ್ಟಿದೆ. ಪರಿಣಾಮವಾಗಿ ಅದಾಗಲೇ ಕೆಲವು ರಾಜ್ಯಗಳಲ್ಲಿ ಕೊಂಡು ತಂದ ಹೆಂಡತಿಯರ ಪ್ರಕರಣಗಳೂ ಕೇಳಿಬರುತ್ತಿವೆ. ಲಿಂಗ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಇಳಿಮುಖತೆಯನ್ನು ಗಮನಿಸಿದರೆ ಈ ಸ್ಥಿತಿ ಹೀಗೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ಬಹುಪತ್ನಿತ್ವ ವಿವಾಹ ಪದ್ಧತಿ ಸಾಮಾಜಿಕ ಅನುಮತಿಯೊಂದಿಗೆ ಜನಪ್ರಿಯವಾದರೆ ಅಚ್ಚರಿ ಪಡಬೇಕಿಲ್ಲ.

ಮಹಿಳೆಯರ ಲಿಂಗ ಪ್ರಮಾಣದಲ್ಲಿಯ ಇಳಿಮುಖತೆಯಿಂದಾಗಿ ಸಾಂಪ್ರದಾಯಿಕ ಜಾತಿ ಪದ್ಧತಿಯ ಬೇರುಗಳು ಕೊಂಚ ಸಡಿಲುಗೊಂಡಿವೆ. ಇದು ಲಂಬರೂಪದ ಸಂಚಲನೆಗೆ ಕಾರಣವಾಗಲಾರದಾದರೂ ಸಮಾನಾಂತರ ಸಂಚಲನೆಗೆ ಮಾತ್ರ ಅನುವು ಮಾಡಿ ಕೊಟ್ಟಿದೆ. ಹಿಂದೆ ಪ್ರತಿಯೊಂದು ಜಾತಿಯು ತನ್ನ ಒಳಜಾತಿ, ಪಂಗಡ, ಕುಲದ ಕನ್ಯೆಯನ್ನೇ ಅರಸಿ ಮದುವೆಯಾಗುವಂತೆ ಪೂತ್ಕರಿಸುತ್ತಿತ್ತು. ಈಗ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ. ಪರಿಣಾಮವಾಗಿ ಭಿನ್ನ ಭಿನ್ನ ಉಪಜಾತಿಗಳಲ್ಲಿ ಈಗ ಮದುವೆಗಳು ತೀರಾ ಸಾಮಾನ್ಯ ಎನ್ನುವಂತಾಗಿದೆ. ಹಿಂದೆ ವಿಭಿನ್ನ ಜಾತಿಗಳು ಏಣಿಶ್ರೇಣಿಯ ಸ್ತರಗಳನ್ನು ಆಧರಿಸಿ ಕನ್ಯಾನ್ವೇಷಣೆಯಲ್ಲಿ ತೊಡಗುತ್ತಿದ್ದವು ಈಗ ಅಲ್ಲಿ ರಿಯಾಯತಿಗಳು ಆರಂಭವಾಗಿವೆ. dowry-hierarchyಇದು ಜಾತಿ ಪದ್ಧತಿಯಲ್ಲಿಯ ಬದಲಾವಣೆಗೆ ಪರೋಕ್ಷವಾಗಿ ನೆರವಾಗುತ್ತದೆ.

ಹೀಗೆ ಲಿಂಗ ಪ್ರಮಾಣದಲ್ಲಿ ಇಳಿಮುಖತೆಯ ಪರಿಣಾಮವಾಗಿ ಹೆಣ್ಣಿಗೇನು ಧಾಡಿ..? ಎನ್ನುವ ಮಾತು ಈಗ ಗಂಡಿಗೇನು ಧಾಡಿ..? ಎಂದು ಬದಲಾಗುವ ಸಂದರ್ಭದ ನಡುವೆಯೂ ಪ್ರತಿ ಅರ್ಧ ಘಂಟೆಗೆ ಒಂದು ಅತ್ಯಾಚಾರ ಹಾಗೂ ಪ್ರತಿ ಒಂದು ಘಂಟೆಗೆ ಒಂದು ವರದಕ್ಷಿಣೆಯ ಸಾವುಗಳು ಜರುಗುತ್ತವೆ ಎನ್ನುವುದನ್ನು ಗಮನಿಸಿದಾಗ ಅನಿಷ್ಟಗಳನ್ನು ಹೊಟ್ಟೆಯೊಳಗಿಟ್ಟೇ ಬದಲಾವಣೆಯ ಬಗ್ಗೆ ನಾವು ಮಾತನಾಡುತ್ತೇವೆ ಎಂದೆನಿಸುತ್ತದೆ. ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಹಿಂದೆಂದಿಗಿಂತಲೂ ಈಗ ಹೆಚ್ಚಿಗಿದೆ, ಸಾಕ್ಷರತೆಯ ಪ್ರಮಾಣದಲ್ಲಿಯೂ ಸಾಕಷ್ಟು ಸುಧಾರಣೆಗಳಾಗಿವೆ, ಕಾನೂನು ಮತ್ತು ಹಕ್ಕುಗಳ ಬಗ್ಗೆ ಸಾಕಷ್ಟು ತಿಳುವಳಿಕೆಯಿದೆ ಹೀಗಿರುವಾಗಲೂ ಗಂಟೆಗೊಂದು ವರದಕ್ಷಿಣೆ ಸಾವು ನಮ್ಮಲ್ಲಿ ಘಟಿಸುತ್ತದೆ ಎನ್ನುವದೇ ಈ ಕಾಲದ ಬಹುದೊಡ್ಡ ವ್ಯಂಗ್ಯ ಮತ್ತು ವಿಷಾದ. ಜಾತಿ, ಕುಲದಲ್ಲಿ ಫ಼ರಕ್ ಆದರೂ ಸರಿ ಮದುವೆಗೊಂದು ಕನ್ಯೆ ಬೇಕು, ಒಳ್ಳೆಯ ಮನೆತನದ ಹುಡುಗಿ ಇದ್ದರೆ ಸಾಕು ಎಂದು ಹಂಬಲಿಸುವವರ ನಡುವೆಯೇ ಹೀಗೆ ವರದಕ್ಷಿಣೆಯ ಸಾವುಗಳು ಹೆಚ್ಚುತ್ತ ನಡೆದಿರುವುದು ವಿಚಿತ್ರ..!

ರಾಷ್ಟ್ರೀಯ ಅಪರಾಧಿ ಮಾಹಿತಿ ವಿಭಾಗ ಹೊರಹಾಕಿರುವ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 2006 ರಲ್ಲಿ rape-illustrationಜರುಗಿದ ಒಟ್ಟು ವರದಕ್ಷಿಣೆಯ ಸಾವುಗಳ ಸಂಖ್ಯೆ 7618. 2008 ರಲ್ಲಿ ಆ ಪ್ರಮಾಣ 8172 ರಷ್ಟಾಯಿತು. 2010 ರಲ್ಲಿ ಅದು 8391 ರಷ್ಟಾದರೆ, 2012 ರಲ್ಲಿ ಆ ಪ್ರಮಾಣ 8233 ರಷ್ಟಾಗಿದೆ. ಈ ಬಗೆಯ ವರದಕ್ಷಿಣೆಗೆ ಸಂಬಂಧಿಸಿದ ಸಾವಿನ ಪ್ರಮಾಣ ಸರಾಸರಿ 32 ಪ್ರತಿಶತದಷ್ಟಿದೆ ಎಂದು ಇಲಾಖೆ ವರದಿ ಮಾಡಿದೆ.

ವರದಕ್ಷಿಣೆಯ ಹಪಾಪಿತನ ಮದುವೆಯ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಮಸುಕಾಗಿದ್ದರೂ ಮದುವೆಯಾದ ನಂತರ ಅದು ಜಾಗೃತವಾಗುವ ಸ್ಥಿತಿಯಿದೆ. ಕೆಲ ಪುರುಷರಲ್ಲಿಯ ಧನಪಿಶಾಚಿಯ ಗುಣ ಈ ಬಗೆಯ ಸಾವುಗಳಿಗೆ ಕಾರಣ. ಕೇವಲ ಪುರುಷ ಮಾತ್ರವಲ್ಲ, ಬಹುತೇಕ ವರದಕ್ಷಿಣೆಯ ಸಾವುಗಳಲ್ಲಿ ಅತ್ತೆ ಎನ್ನುವ ಅಂತಸ್ತಿನ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ವರದಕ್ಷಿಣೆ ಎನ್ನುವುದು ಒಂದು ಬಗೆಯ ಅನೈತಿಕ ಮತ್ತು ಭ್ರಷ್ಟ ಕಮಾಯಿ. ಅನಾಮತ್ತಾಗಿ ಬರುವ ಹಣ, ಸಂಪತ್ತಿಗಾಗಿ ತಹತಹಿಕೆ ಶುರುವಾದದ್ದೇ ಕಿರುಕುಳ ಶುರುವಾಗುತ್ತದೆ. ಮದುವೆಯಾದ ಹೊಸತರಲ್ಲಿಯ ಪ್ರೀತಿ, ಅನ್ಯೋನ್ಯತೆ, ಬಂಧುತ್ವ ಗಳೆಲ್ಲಾ ಬರಬರುತ್ತಾ ವರದಕ್ಷಿಣೆಯ ಕಾರಣ ಬುರುಗಾಗಿ ಕರಗಲು ಆರಂಭಿಸುತ್ತವೆ. ಎಷ್ಟೇ ಶಿಕ್ಷಣ ಪಡೆದಿರಲಿ, ಎಂಥದೇ ಸಂದರ್ಭದಲ್ಲಿ ಮದುವೆಯಾಗಿರಲಿ, ಎಷ್ಟೇ ಸ್ಥಿತಿವಂತಿಕೆಯಿರಲಿ ವರದಕ್ಷಿಣೆಯ ದಾಹದ ಎದುರು ಎಲ್ಲವೂ ಗೌಣವಾಗುತ್ತವೆ. ಪುರುಷ ಎನ್ನುವ ಲಿಂಗದ ನೈತಿಕತೆಯನ್ನೇ ಹರಾಜಿಗಿಡುವ ಈ ವರದಕ್ಷಿಣೆ ಎಂಬ ಹರಾಮಿ ಸಂಪತ್ತು ಕಾನೂನಿನ ಕಣ್ಣಿಗೆ ಮಣ್ಣೆರಚುವ ಭಂಡತನವನ್ನೂ ಮೈತುಂಬಿಕೊಡಿದೆ.

ಲಿಂಗಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸವಾದಾಗಲೂ ವರದಕ್ಷಿಣೆಯ ವ್ಯಸನದಿಂದ ಮುಕ್ತಿ ಸಾಧ್ಯವಿಲ್ಲವೆಂತಾದರೆ ಅದನ್ನು ಪೋಷಿಸುವ, ಪೊರೆಯುವವರ ಪರಮ ಭ್ರಷ್ಟತೆಯ ಮುಂದೆ ನೈತಿಕತೆ ಸಲ್ಲುವುದಾದರೂ ಹೇಗೆ..?

Leave a Reply

Your email address will not be published. Required fields are marked *