ಸೌಜನ್ಯ ಕೊಲೆಯ ತನಿಖೆ ಬಗೆಗಿನ ಕೆಲವು ಸಂದೇಹಗಳು

– ಆನಂದ ಪ್ರಸಾದ್

ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆಯ ಆರೋಪಿಯಾಗಿ ಮಾನಸಿಕ ಅಸ್ವಸ್ಥ ಸಂತೋಷ್ ರಾವ್ ಎಂಬಾತನನ್ನು ಕೊಲೆ ನಡೆದ ಕೆಲವು ದಿನಗಳ ನಂತರ ಬಂಧಿಸಲಾಗಿದೆ. ಈ ಘಟನೆಯಲ್ಲಿ ಸಂತೋಷ್ ರಾವ್ ಒಬ್ಬನೇ ಕೊಲೆ ನಡೆಸಿದ್ದಾನೆ ಎಂಬುದು ಪೋಲೀಸರ ಆರೋಪ. ಸೌಜನ್ಯ ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಹೆಣ್ಣುಮಗಳು. ಆಕೆಯನ್ನು ಸಂತೋಷ್ ರಾವ್ ಒಬ್ಬನೇ ಹಿಡಿದು ಕಟ್ಟಿ ಹಾಕಿ ಅತ್ಯಾಚಾರ ನಡೆಸಿ ಕೊಲ್ಲುವುದು ಸಾಧ್ಯವೇ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಹಿಡಿದರೆ ಆತನ ಕೈಯನ್ನು ಕೊಸರಿ ಅಥವಾ ಕಚ್ಚಿ ಓಡಿ ಹಾಗೂ ಬೊಬ್ಬೆ Sowjanya-Rape-Murderಹಾಕಿ ಪಾರಾಗಲು ಸೌಜನ್ಯಳಂಥ ಗಟ್ಟಿಮುಟ್ಟಾಗಿರುವ ಹೆಣ್ಣುಮಗಳಿಗೆ ಸಾಧ್ಯ ಎಂಬುದು ಸ್ಪಷ್ಟವಾಗಿ ತೋರುತ್ತದೆ. ಅತ್ಯಾಚಾರ ಹಾಗೂ ಕೊಲೆ ನಡೆಸಲು ಒಂದಕ್ಕಿಂತ ಹೆಚ್ಚಿಗೆ ಜನ ಭಾಗಿಯಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಒಬ್ಬ ಹೆಣ್ಣುಮಗಳನ್ನು ಬಲಾತ್ಕಾರವಾಗಿ ಹಿಡಿದುಕೊಂಡರೆ ಆಕೆ ರಕ್ಷಣೆಗಾಗಿ ಬೊಬ್ಬೆ ಹಾಕುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಬೊಬ್ಬೆ ಹಾಕದಂತೆ ಬಾಯಿಯನ್ನು ಬಲವಂತವಾಗಿ ಮುಚ್ಚಿರುವ ಮತ್ತು ಹೀಗೆ ಮಾಡಲು ಒಂದಕ್ಕಿಂಥ ಹೆಚ್ಚು ಜನ ಬೇಕಾಗುತ್ತದೆ. ಒಬ್ಬನೇ ಹಿಡಿದು ಒಬ್ಬ ಹೆಣ್ಣಿನ ಬಾಯಿ ಮುಚ್ಚಿಸುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಆಕೆ ಕೈಯನ್ನು ಕಚ್ಚಿ ಓಡಿ ತಪ್ಪಿಸಿಕೊಂಡು ಬೊಬ್ಬೆ ಹಾಕುವ ಸಾಧ್ಯತೆ ಇರುತ್ತದೆ. ಸೌಜನ್ಯಳ ಶವ ಒಂದು ಕಾಲು ಹಾಗೂ ಒಂದು ಕೈಯನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ರೀತಿ ಒಬ್ಬ ಗಟ್ಟಿಮುಟ್ಟಾದ ಹೆಣ್ಣನ್ನು ಒಬ್ಬನೇ ಕಟ್ಟಿಹಾಕಲು ಸಾಧ್ಯವಿದೆಯೇ? ಇಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ನಿಟ್ಟಿನಿಂದ ಯೋಚಿಸಿದಾಗಲೂ ಇದು ಒಬ್ಬನೇ ನಡೆಸಿದ ಕೃತ್ಯ ಅಲ್ಲವೆಂದು ಕಂಡುಬರುತ್ತದೆ.

ಪೊಲೀಸರು ಸಂತೋಷ್ ರಾವ್ ಎಂಬ ವಿಕೃತ ಕಾಮಿ ಕೊಲೆ ಮಾಡಿದ್ದಾನೆ ಎಂದು ಆತನಿಗೆ ವಿಕೃತ ಕಾಮಿಯ ಪಟ್ಟ ಕಟ್ಟಿದ್ದಾರೆ. ಈ ಸಂತೋಷ್ ರಾವ್ ಎಂಬಾತ ಯಾರು, ಆತನ ಊರು, ಮನೆ, ತಂದೆ ತಾಯಿ, ಬಂಧು ಬಳಗದ ಅಧ್ಯಯನ ಮಾಡಿ ಮಾಧ್ಯಮಗಳು ವರದಿ ಕೊಡಬೇಕಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿನ ವರದಿ ಬಂದ ಹಾಗೆ ಇಲ್ಲ. ಸಂತೋಷ್ ರಾವ್ ವಿಕೃತ ಕಾಮಿ ಆಗಿದ್ದರೆ ಅವನು ಇದಕ್ಕಿಂಥ ಮೊದಲು ಎಷ್ಟು ಅತ್ಯಾಚಾರ ಮಾಡಿದ್ದಾನೆ ಮತ್ತು ಎಷ್ಟು ಕೊಲೆ ಮಾಡಿದ್ದಾನೆ ಎಂದು ಆತನ ಊರಿನ ಜನರನ್ನು ವಿಚಾರಿಸಬೇಕಾದ ಅಗತ್ಯ ಇದೆ. ಇದಕ್ಕಿಂಥ ಮೊದಲು ಆತ sowjanya-murderedವಿಕೃತ ಕಾಮಿಯ ರೀತಿಯಲ್ಲಿ ನಡೆದುಕೊಂಡಿದ್ದಾನೆಯೇ ಎಂದು ಕೂಡ ಆತನ ಊರಿನ ಸುತ್ತಮುತ್ತ ವಿಚಾರಿಸಿ ಕಂಡುಕೊಳ್ಳಬೇಕಾಗಿದೆ. ಪೊಲೀಸರು ಸಿಐಡಿ ವರದಿಯಲ್ಲಿ ಸೌಜನ್ಯ್ಲ ಮೇಲೆ ಅತ್ಯಾಚಾರ ನಡೆದಿಲ್ಲ, ಸಂತೋಷ್ ರಾವ್ ಫಿಮೊಸಿಸ್ ಎಂಬ ಶಿಶ್ನದ ಚರ್ಮ ಬಿಗಿಯಾಗಿರುವ ಹಾಗೂ ಹಿಂದಕ್ಕೆ ಸರಿಯದಿರುವ ದೈಹಿಕ ತೊಂದರೆಯನ್ನು ಹೊಂದಿದ್ದ ಎಂದು ವರದಿಯಲ್ಲಿ ಹೇಳಿದ್ದಾರೆ. ಫಿಮೊಸಿಸ್ ತೊಂದರೆ ಇರುವವರು ಸಂಭೋಗ ನಡೆಸಲು ಅಸಮರ್ಥರೇನೂ ಅಲ್ಲ ಎಂದು ಇಂಟರ್ನೆಟ್ ಮಾಹಿತಿಯಿಂದ ತಿಳಿದುಬರುತ್ತದೆ. ಹೀಗಾಗಿ ಸಂತೋಷನೇ ಅಪರಾಧಿಯಾಗಿದ್ದರೆ ಆತನು ಅತ್ಯಾಚಾರ ಮಾಡಿರುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಅತ್ಯಾಚಾರ ನಡೆದಿಲ್ಲ ಎಂಬುದು ಸುಳ್ಳು ಎಂದು ಕಂಡುಬರುತ್ತದೆ. ಸೌಜನ್ಯಳ ಯೋನಿಯೊಳಗೆ ಮಣ್ಣು ಹಾಕಿದ್ದಾರೆ ಎಂದು ಹೇಳಲಾಗುತ್ತದೆ. ಯೋನಿಯೊಳಗೆ ಮಣ್ಣು ತುಂಬಿಸಿ ಅತ್ಯಾಚಾರದಿಂದ ಅಲ್ಲಿ ಸಿಗಬಹುದಾದ ವೀರ್ಯಾಣುಗಳು ಸಿಗದಂತೆ ಮಾಡಲು ಅತ್ಯಾಚಾರಿಗಳು ಮಣ್ಣು ತುಂಬಿಸುತ್ತಾರೆ ಎಂದು ಹೇಳಲಾಗುತ್ತದೆ. ಮಾನಸಿಕ ಅಸ್ವಸ್ಥನಿಗೆ ಈ ರೀತಿಯ ವಿವೇಕ ಇರುವ ಸಾಧ್ಯತೆ ಇಲ್ಲ. ಹಾಗಾಗಿ ಇದು ಸ್ಪಷ್ಟವಾದ ವೈಜ್ಞಾನಿಕ ಮಾಹಿತಿ ಇರುವ ವ್ಯಕ್ತಿಗಳೇ ಮಾಡಿದ ಅತ್ಯಾಚಾರ ಎಂಬ ಸಂಶಯ ಬರುತ್ತದೆ. ಅತ್ಯಾಚಾರ ಮಾಡಿದ ನಂತರ ಯೋನಿಯೊಳಗೆ ಮಣ್ಣು ತುಂಬಿಸಿದರೂ ವೀರ್ಯಾಣುಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ಮಾಡಿ ಅಪರಾಧಿಯ ಪತ್ತೆ ಹಚ್ಚಿ ನಿಖರ ಸಾಕ್ಷ್ಯ ಒದಗಿಸಲು ಸಾಧ್ಯವಿದೆ. ಪೊಲೀಸರು ಈ ಕೆಲಸವನ್ನು ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಪೊಲೀಸರು ಉತ್ತರಿಸಬೇಕಾಗುತ್ತದೆ.

ಇನ್ನೂ ಒಂದು ಅಂಶವಿದೆ. ಸಂತೋಷನ ಮುಖ ಹಾಗೂ ಬೆನ್ನಿನ ಮೇಲೆ ಗಾಯದ ಗುರುತು ಇದೆ. ಈ ಗಾಯ ಅತ್ಯಾಚಾರ ಮಾಡುವಾಗ ಅತ್ಯಾಚಾರಕ್ಕೊಳಗಾದ ಹೆಣ್ಣು ಅತ್ಯಾಚಾರಿಯನ್ನು ಪರಚುವುದರಿಂದ ಉಂಟಾದದ್ದು ಎಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಹೀಗಿರುವಾಗ ಆರೋಪಿಯ ರಕ್ತ ಸೌಜನ್ಯಳ ಕೈಯ ಉಗುರುಗಳಲ್ಲಿ ಹಾಗೂ ಬೆರಳುಗಳಿಗೆ ಅಂಟಿಕೊಂಡಿರಲೇಬೇಕು. ಈ ಅಂಟಿಕೊಂಡ ರಕ್ತದಿಂದಲೇ sowjanya-rape-murderಡಿಎನ್ಎ ಪರೀಕ್ಷೆ ಮಾಡಿ ಅಪರಾಧಿ ಸಂತೋಷ್ ಎಂದು 100% ನಿಖರವಾಗಿ ಹೇಳಲು ಸಾಧ್ಯವಿರುವಾಗ ಪೊಲೀಸರು ಆ ರಕ್ತದ ಕಲೆಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಯಾಕೆ ಕಳುಹಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಈ ಪರೀಕ್ಷೆ ಮಾಡಿದ್ದರೆ ಕೋರ್ಟುಗಳಲ್ಲಿ ಇದನ್ನು ಬಲವಾದ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಪೋಲೀಸರ ತನಿಖೆ ಸರಿಯಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ರಕ್ತದ ಕಲೆ ಅಲ್ಲದೆ ಕಿತ್ತು ತೆಗೆದ (ರೋಮಕೂಪ ಇರುವ) ಕೂದಲುಗಳಿಂದಲೂ ಡಿಎನ್ಎ ಪರೀಕ್ಷೆ ನಡೆಸಿ ಅಪರಾಧಿಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯ. ಸಂತೋಷನ ಮುಖ, ಬೆನ್ನಿಗೆ ಪರಚಿದ ಗಾಯ ಆಗಿದೆ ಎಂದರೆ ಆತನ ಕೂದಲನ್ನೂ ಅತ್ಯಾಚಾರಕ್ಕೊಳಗಾದ ವ್ಯಕ್ತಿ ಕಿತ್ತುಹಾಕುವ ಸಂಭವ ಇದೆ. ಇಂಥ ಕಿತ್ತ ಕೂದಲುಗಳಿಂದಲೂ ಡಿಎನ್ಎ ಪರೀಕ್ಷೆ ಮಾಡಲು ಸಾಧ್ಯವಿರುವಾಗ ಇಂಥ ಸಾಕ್ಷ್ಯಗಳನ್ನು ಪೊಲೀಸರು ಏಕೆ ಸಂಗ್ರಹಿಸಿಲ್ಲ ಎಂದು ತನಿಖೆ ನಡೆಸಿದವರನ್ನು ಪ್ರಜ್ಞಾವಂತರು ಕೇಳಬೇಕಾಗಿದೆ. ಪೊಲೀಸರು ಅತ್ಯಾಚಾರ ಹಾಗೂ ಕೊಲೆ ನಡೆದದ್ದು ಮೃತದೇಹ ಸಿಕ್ಕಿದ ಜಾಗದಲ್ಲೇ ಎಂದು ಹೇಳುತ್ತಾರೆ. ಸೌಜನ್ಯಳ ಕೊಲೆ ಆದ ದಿನ ಜೋರು ಮಳೆ ಬಂದಿದೆ. ಹೀಗಿದ್ದರೂ ಸೌಜನ್ಯಳ ಮೃತ ದೇಹ ಪತ್ತೆಯಾದಾಗ ದೇಹ ಹಾಗೂ ಕೈಚೀಲ ಹಾಗೂ ಪುಸ್ತಕಗಳು ಒದ್ದೆಯಾಗಿರಲಿಲ್ಲ ಎಂದು ಸೌಜನ್ಯ ಪೋಷಕರು ಹೇಳುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ತನಿಖೆ ನಡೆಸಿದ ತಜ್ಞ ಪೋಲೀಸರ ಉತ್ತರ ಏನು ಎಂದು ಜನರಿಗೆ ತಿಳಿಯಬೇಕಾಗಿದೆ.

Leave a Reply

Your email address will not be published.