Daily Archives: November 8, 2013

ಆತಂಕ ಸೃಷ್ಟಿಸಿ ವಿ.ವಿ. ತಡೆಯುವ ಹುನ್ನಾರ

– ಸುಧಾಂಶು ಕಾರ್ಕಳ

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ “ಟಿಪ್ಪು ವಿವಿ: ಮತ್ತೊಂದು ಅಲಿಗಡ ವಿವಿ ಆಗಬಹುದೆ?” ಎಂಬ ತಮ್ಮ ಬರಹದಲ್ಲಿ ಲೇಖಕ ಡಾ.ಜಿ.ಬಿ.ಹರೀಶ್ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ವರದಿ ನೀಡಿರುವ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರ ವರದಿಯನ್ನು ಒಪ್ಪಿಕೊಳ್ಳುತ್ತಲೇ ಮುಸ್ಲಿಮರ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಲು ಉದ್ದೇಶಿಸಿರುವ ವಿಶ್ವವಿದ್ಯಾನಿಲಯಗಳ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ. ಒಂದೆಡೆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದಂತಾಗಬಾರದು, ಮತ್ತೊಂದೆಡೆ ವರದಿಯ ಶಿಫಾರಸ್ಸುಗಳು ಜಾರಿಯೂ ಆಗಬಾರದು. ಅದು ಅವರ ಜಾಣತನದ ಅಭಿಪ್ರಾಯ. ಒಟ್ಟಿನಲ್ಲಿ ಅಲ್ಪಸಂಖ್ಯಾತರು ಇದ್ದಲ್ಲೇ ಇರಬೇಕು.

ತಮ್ಮ ವಾದ ಮಂಡಿಸುವ ಧಾಟಿಯಲ್ಲಿ ಅಲಿಗಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೋಮುಗಲಭೆಗಳಲ್ಲಿ Aligarh-muslim-univeristyಭಾಗವಹಿಸಿ ಅಲಿಗಡದ ನಿವಾಸಿಗಳಾದ ಹಿಂದೂಗಳನ್ನು ಆತಂಕಕ್ಕೆ ಒಳಪಡಿಸಿದರು ಎಂದು ಆರೋಪಿಸಿದ್ದಾರೆ. ಅಷ್ಟಕ್ಕೆ ಅವರ ವಾದ ನಿಲ್ಲುವುದಿಲ್ಲ. ಮುಂದೊಂದು ದಿನ ಉದ್ದೇಶಿತ ಟಿಪ್ಪು ವಿ.ವಿ ವಿದ್ಯಾರ್ಥಿಗಳಿಂದ ಅಂತಹದೊಂದು ವಾತಾವರಣ ಸೃಷ್ಟಿಯಾದರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ಕಾಲೇಜು ಶಿಕ್ಷಣ ಪಡೆದುಬಿಟ್ಟರೆ ಅಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎನ್ನುವ ಆಲೋಚನೆ ತೀರಾ ಸಂಕುಚಿತ ಮನಸ್ಸಿನ ಅಭಿವ್ಯಕ್ತಿ. ಒಂದು ಕೋಮಿನ ಯುವಕರನ್ನು ಹಿಂಸೆ, ಗಲಭೆ, ಭಯೋತ್ಪಾದಕ ಕೃತ್ಯಗಳಿಗೆ ಕಾರಣಕರ್ತರೆಂದು ನೋಡುವ ಜಾಗತಿಕ ದೃಷ್ಟಿಕೋನದ ಭಾಗವಾಗಿ ಹರೀಶ್ ಅವರ ಬರಹ ಕಾಣುತ್ತಿದೆ.

ಕೆಲ ವರ್ಷಗಳಿಂದ ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಸೋಕಾಲ್ಡ್ ಸಂಸ್ಕೃತಿ ಉಳಿಸುವ ನೆಪದಲ್ಲಿ ಪಬ್ ದಾಳಿ ನಡೆಯಿತು. ಹೋಮ್ ಸ್ಟೇ ದಾಳಿ ನಡೆಯಿತು. ಈ ಪ್ರಕರಣಗಳಲ್ಲಿ ದಾಳಿ ಮಾಡಿ ಹಿಂಸೆಗೆ ಕಾರಣರಾದವರು ಓದಿದ ಶಾಲೆ, ವಿಶ್ವವಿದ್ಯಾನಿಲಯಗಳು ಯಾವುವು? ಅಷ್ಟೇ ಅಲ್ಲ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಅಲ್ಪಸಂಖ್ಯಾತ ಕೋಮುಗಳನ್ನು ಹೀಯಾಳಿಸುವ, ಸಮಾಜ ಸುಧಾರಕರನ್ನು ಅವಮಾನಿಸುವ ಬರಹಗಳನ್ನು ಬರೆದುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಸಣ್ಣ ಮನಸಿನ ವ್ಯಕ್ತಿಗಳು ಓದಿದ್ದು ಯಾವ ಕಾಲೇಜುಗಳಲ್ಲಿ ಎನ್ನುವುದನ್ನೂ ಒಮ್ಮೆ ನೋಡಬೇಕಲ್ಲವೆ?

ಸೂಕ್ಷ್ಮವಾಗಿ ಗಮನಿಸಿದರೆ ವ್ಯಕ್ತಿ ಪೂಜೆ, ಅಂಧ ಶ್ರದ್ಧೆ, ಪಂಕ್ತಿ ಬೇಧಗಳನ್ನು ಅನೂಚಾನವಾಗಿ ಅನುಸರಿಸಿಕೊಂಡು ಬಂದಿರುವ ಅನೇಕ ಮಠ, ದೇವಸ್ಥಾನ, ಆಶ್ರಮಗಳು ನಡೆಸುವ ಶಾಲೆ, ಕಾಲೇಜುಗಳಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಇಂತಹ ಕೋಮು ಭಾವನೆಗಳನ್ನು ಹೊತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಆ ನಂತರವೂ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅದೇ ಚಾಳಿಯನ್ನು ಮುಂದುವರಿಸಿ, ತಮ್ಮ ಸಂಕುಚಿತ ಅಭಿಪ್ರಾಯಗಳನ್ನು ಸಾರ್ವತ್ರಿಕ ಅಭಿಪ್ರಾಯಗಳೇನೋ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. bghareesh-tumkur-univeristyಆ ಬಗ್ಗೆಯೂ ಹರೀಶ್ ಅವರು ಒಮ್ಮೆ ಕಣ್ಣು ಹಾಯಿಸಲಿ.

ಹಿಂದೊಮ್ಮೆ ಹರೀಶ್ ಅವರು ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ವಿಷಕಾರಕ ಕಾದಂಬರಿ “ಆವರಣ”ವನ್ನು ಬಲವಾಗಿ ಸಮರ್ಥಿಸುತ್ತ ಮಾತನಾಡುವಾಗ ’ಹಿಂದೂಗಳು ಇದುವರೆಗೆ ತಾಳ್ಮೆ, ಸಹನೆ ಕಾಪಾಡಿಕೊಂಡು ಬಂದಿದ್ದೇ ನಮ್ಮ ಇಂದಿನ ಸ್ಥಿತಿಗೆ ಕಾರಣ’ ಎಂದು ತಮ್ಮ ವ್ಯಥೆ ವ್ಯಕ್ತಪಡಿಸಿದ್ದರು. ಆ ಮೂಲಕ ಅವರು ಬಹುಸಂಖ್ಯಾತ ಸಮುದಾಯವನ್ನು ರೊಚ್ಚಿಗೇಳಿಸುವ ಪ್ರಯತ್ನ ಮಾಡಿದ್ದರು ಎಂದೇ ಹೇಳಬೇಕು. ಇವರು ಮುಂದೆ ಕೆಲವು ಕಾಲ ಒಂದು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದರು ಎಂದು ಕೇಳಿದ್ದೇನೆ. ಹಾಗಾದರೆ ಒಂದು ಕೋಮಿನ ಬಗ್ಗೆ ದ್ವೇಷದ ಭಾವನೆ ಇಟ್ಟುಕೊಂಡಿರುವ ಮನುಷ್ಯ ತನ್ನ ವಿದ್ಯಾರ್ಥಿಗಳಿಗೆ ಏನು ಪಾಠ ಮಾಡಿರಬಹುದು ಎನ್ನುವುದು ನನ್ನ ಆತಂಕ.

ಹರೀಶ್ ಅವರು ಇಂತಹ ಮಾತುಗಳಿಂದ ಅಲ್ಪಸಂಖ್ಯಾತರಿಗೆ avarana-slbವಿ.ವಿ.ಯ ಅಗತ್ಯವಿಲ್ಲ ಮತ್ತು ಆ ಮೂಲಕ ಅವರಿಗೆ ಉನ್ನತ ಶಿಕ್ಷಣ ಬೇಡ ಎನ್ನುವ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೊರಹಾಕಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ವಿ.ವಿ.ಗಳು ಅಲ್ಪಸಂಖ್ಯಾತರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಗಣನೀಯವಾಗಿ ಸೋತಿರುವ ಕಾರಣ ಮುಸ್ಲಿಮರಿಗೆ ಹೆಚ್ಚಿನ ಅವಕಾಶ ಇರುವ ವಿಶ್ವವಿದ್ಯಾನಿಲಯದ ಅಗತ್ಯ ಎದ್ದುಕಾಣುತ್ತಿದೆ. ಸಾಚಾರ್ ವರದಿಯ ಅಂಶಗಳನ್ನು ಒಪ್ಪುವ ನೀವು, ಸದ್ಯ ಚಾಲ್ತಿಯಲ್ಲಿರುವ ವಿ.ವಿಗಳು ಅಲ್ಪಸಂಖ್ಯಾತರಿಗೆ ಶಿಕ್ಷಣ ಕೊಡಿಸುವಲ್ಲಿ ಸೋತಿವೆ ಎನ್ನುವುದನ್ನೂ ಒಪ್ಪಲೇಬೇಕಲ್ಲ. ಈಗಲಾದರೂ ಈ ಚಾರಿತ್ರಿಕ ಅನ್ಯಾಯವನ್ನು ಸರಿದೂಗಿಸಲು ವಿಶೇಷ ಪ್ರಯತ್ನ ಅಗತ್ಯ ಎಂಬ ಸಂಗತಿಯನ್ನು ಒಪ್ಪಿಕೊಳ್ಳಲು ಏನಡ್ಡಿ?