ಅಸಮಾನತೆಯ ಬಣ್ಣಗಳು : ‘ಮಗು ಮಾರಾಟ’ದ ಪ್ರಕರಣ

[ಇದು ಶಿವಮೊಗ್ಗದ “ಅಹರ್ನಿಶಿ ಪ್ರಕಾಶನ”ದವರು “ನಾವು-ನಮ್ಮಲ್ಲಿ” ಬಳಗದ ಜೊತೆಗೂಡಿ ಪ್ರಕಟಿಸುತ್ತಿರುವ ಹರ್ಷ ಮಂದರ್‌ರ “ಅಸಮಾನತೆಯ ಬಣ್ಣಗಳು” ಪುಸ್ತಕದ ಒಂದು ಅಧ್ಯಾಯ. ಇದೇ ತಿಂಗಳ 16-17 ರಂದು ಹಾಸನದಲ್ಲಿ ನಡೆಯಲಿರುವ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ.

ಈ ಪುಸ್ತಕ ಕುರಿತು ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಫೇಸ್‌ಬುಕ್‌ನಲ್ಲಿ ಬರೆದಿರುವ ಟಿಪ್ಪಣಿ ಹೀಗಿದೆ:

“ದಯಾನಂದ ಟಿ .ಕೆ, ಸತೀಶ ಶಿಲೆ, ದಿನೇಶ್ ಕುಮಾರ್, ರಾಜಲಕ್ಷ್ಮಿ ಕೋಡಿಬೆಟ್ಟು, ಪೂರ್ಣಿಮ ಬಳಗುಳಿ, harsh-mandar-kannada-bookಶಶಿಧರ್ ಹೆಮ್ಮಾಡಿ, ಭಾರತಿದೇವಿ, ಶ್ರೀಷ, ಸಂವರ್ಥ ಸಾಹಿಲ್, ಚಂದ್ರಶೇಖರ್ ಐಜೂರ್, ಸುನಿಲ್ ರಾವ್, ವರುಣ್ ನಾಯ್ಕರ್, ಹೆಚ್.ಎಸ್. ಅನುಪಮ, ಹರ್ಷ ಕುಗ್ವೆ, ಅರುಣ್ ಕಾಸರಗುಪ್ಪೆ, ಬಿ.ಶ್ರಿಪಾದ್ ಭಟ್, ಕಿರಣ್ ಗಾಜನೂರ್, ವಿನ್ಯಾಸ್ ಹೆಗ್ಡೆ , ತಾರಕೇಶ್ವರ್ ವಿ.ಬಿ, ಕುಮಾರ್ ಬುರಡಿಕಟ್ಟಿ, ವ್ರಂದಾ, ವಾಸುದೇವಮೂರ್ತಿ , ನಾರಾಯಣ ಸ್ವಾಮಿ, ಭೂಮಿಕಾ ರಾಜನ್, ವಿಜಯ್ ಕುಮಾರ್, ದೀಪಾ ಹಿರೇಗುತ್ತಿ, ಚಿತ್ರ ಸಂತೋಷ್, ವೀರೇಂದ್ರ , ರಾಜು ಬಿ.ಎಲ್, ಹೀಗೆ 29 ಜನ ಯುವ ಲೇಖಕರಿಂದ ಅನುವಾದಗೊಂಡಿರುವ… ದಿನೇಶ ಅಮೀನ್ ಮಟ್ಟು ಅವರ ಬೆನ್ನುಡಿಯ… ಜಿ. ರಾಜಶೇಖರ್ ಮತ್ತು ಕೆ. ಫಣಿರಾಜ್ ಅವರ ಸಂಪಾದಕತ್ವವಿರುವ , ನಾಡು ಕಂಡ ನಿಜದ ಪತ್ರಕರ್ತ ವದ್ದರ್ಸೆ ರಘುರಾಮ ಶೆಟ್ಟರಿಗೆ ಅರ್ಪಣೆಯಾಗಿರುವ… ಈ ಹೊತ್ತಿನ ಭಾರತದ ಜನಪರ ದನಿಯಾಗಿರುವ ಹರ್ಷ ಮಂದೆರ್ ಅವರ ವಿಚಾರಧಾರೆ ಅಂಕಣ ಬರಹಗಳ ಸಂಕಲನ `ಅಸಮಾನತೆಯ ಬಣ್ಣಗಳು’ ಕೃತಿಯನ್ನು ಜನಪರ ವಿಚಾರಧಾರೆಯ ಗೆಳೆಯರ ಬಳಗ “ನಾವು-ನಮ್ಮಲ್ಲಿ” ಮತ್ತು “ಅಹರ್ನಿಶಿ” ಕೂಡಿ ಪ್ರಕಟಿಸಿವೆ.”]

– ಹರ್ಷ ಮಂದರ್
– ಕನ್ನಡಕ್ಕೆ : ಶ್ರೀಷ ಜಿ.

ಮಗುವನ್ನು ಮಾರಿದ ಘಟನೆ ಬೆಳಕಿಗೆ ಬಂದಾಗ ತಂದೆ ಶ್ಯಾಮ್‌ಲಾಲ್ ಮತ್ತು ತಾಯಿ ಲಲಿತಾ ಟಂಡಿ ಅವರ ಹೆಸರು ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡವು. ಆದರೆ, ಆ ದಂಪತಿಗಳ ದೃಷ್ಠಿಯಲ್ಲಿ ನಡೆದದ್ದೇನು?

ಅದು ಒರಿಸ್ಸಾದ ಬೋಲಂಗಿರ್ ಜಿಲ್ಲೆಯಲ್ಲಿರುವ ಕುಂಡಪುಟುಲ ಎಂಬ ಹಳ್ಳಿ. ಬಡತನದಲ್ಲಿ ಜೀವನ ನಡೆಸುತ್ತಿದ್ದ shyam-lalದಲಿತ ದಂಪತಿಗಳಾದ ಲಲಿತಾ ಮತ್ತು ಶ್ಯಾಮ್‌ಲಾಲ್ ಟಂಡಿ ದೇಶದಲ್ಲೇ ಸುದ್ದಿಯಾದರು. ಇವರು ಅಲ್ಪ ಹಣಕ್ಕಾಗಿ ಹೇಗೆ ತಮ್ಮ ಮಗಳಾದ ಹೇಮಾಳನ್ನೇ ಮಾರಿದರು ಎಂದು ಮಾದ್ಯಮಗಳು ರೋಚಕವಾಗಿ ಬಿತ್ತರಿಸಿದವು. ಈ ಸುದ್ದಿ ಜನರನ್ನು ಕೆರಳಿಸಿತು. ಸದನದಲ್ಲಿ ಪ್ರತಿಪಕ್ಷವು ರಾಜ್ಯ ಸರ್ಕಾರದ ಮೇಲೆ ವಾಗ್ಧಾಳಿ ನಡೆಸುವಷ್ಟರ ಮಟ್ಟಿಗೆ ಸುದ್ದಿ ಹರಡಿತು. ಮುಖಭಂಗಕ್ಕೊಳಗಾದ ಆಡಳಿತ ಪಕ್ಷವು ‘ಮಗು ಮಾರಾಟ’ದ ಪ್ರಕರಣವನ್ನು ‘ತನಿಖೆ’ಗೊಳಪಡಿಸುವುದಾಗಿ ಪ್ರತಿಕ್ರಿಯಿಸಿತು. ಮಂತ್ರಿಗಳು ಜಿಲ್ಲೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಲವೇ ದಿನಗಳಲ್ಲಿ ಅಧಿಕಾರಿಗಳ ಗೂಟದ ಕಾರು ಸೈರನ್ ಮಾಡುತ್ತಾ, ದೂಳನ್ನೆಬ್ಬಿಸುತ್ತಾ ಕುಂಡಪುಟುಲ ಎಂಬ ಆ ಹಳ್ಳಿಗೆ ಧಾವಿಸಿದವು. ಸಭಾದ್ಯಕ್ಷರು, ಶಾಸಕರು, ಅಧಿಕಾರಿಗಳು ಮತ್ತು ಸ್ಥಳೀಯ ರಾಜಕಾರಣಿಗಳನ್ನೊಳಗೊಂಡ ಒಂದು ತಂಡ ಅಪರಾಧಿ ಸ್ಥಾನದಲ್ಲಿದ್ದ ಶ್ಯಾಮ್‌ಲಾಲ್ ಮತ್ತು ಲಲಿತಾ ಅವರ ಮಣ್ಣಿನ ಗುಡಿಸಲಿಗೆ ಬಂದರು. ಎಲ್ಲರೂ ದಂಪತಿಗಳನ್ನು ಏಕಾಏಕಿ ಪ್ರಶ್ನಿಸತೊಡಗಿದರು. “ಏಕೆ ಮಗುವನ್ನು ಮಾರಿದಿರಿ?” ಎಂದು ಆರೋಪಿಸುವ ರೀತಿಯಲ್ಲೇ ಇದ್ದವು ಅವರ ಪ್ರಶ್ನೆಗಳು. ಗುಡಿಸಲಿನ ಒಂದು ಬದಿಯಲ್ಲಿ ಭಯದಿಂದ, ಹತಾಶನಾಗಿ ಕುಳಿತಿದ್ದ ಶ್ಯಾಮ್‌ಲಾಲ್‌ಗೆ ಏನನ್ನೂ ಮಾತನಾಡಲು ತೋಚಲಿಲ್ಲ. lalita“ನಾವು ಹೇಮಾಳನ್ನು ಮಾರದಿದ್ದರೆ ನಾವೂ ಉಳಿಯುತ್ತಿರಲಿಲ್ಲ, ಅವಳೂ ಉಳಿಯುತ್ತಿರಲಿಲ್ಲ” ಎಂದು ಲಲಿತ ಅಳುತ್ತಲೇ ವಿವರಿಸಲು ಪ್ರಯತ್ನಿಸಿದಳು. “ನಮಗೆ ಬೇರೆ ದಾರಿಯೇ ಇರಲಿಲ್ಲ” ಎಂದು ಮತ್ತೆ ಮತ್ತೆ ಹೇಳಿದಳು ಲಲಿತಾ.

ಆದರೆ ಇದ್ಯಾವುದೂ ‘ಪರಿಶೀಲನೆ’ಗೆ ಎಂದು ಬಂದ ಅಧಿಕಾರಿಗಳನ್ನು ತೃಪ್ತಿಪಡಿಸಲಿಲ್ಲ. “ನೀವು ಬಡವರು ಎಂದ ಮಾತ್ರಕ್ಕೆ, ಮಕ್ಕಳನ್ನೇ ಮಾರುತ್ತೀರಾ? ಯಾವ ಸೀಮೆಯ ತಂದೆ-ತಾಯಿ ನೀವು?” ಎಂದು ಗುಡುಗಿದರು. “ನಾವು ನಮ್ಮ ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಕಾರಣಕ್ಕೇ ನಾವು ಅವಳನ್ನು ಮಾರಿದೆವು. ಅರ್ಥವಾಯಿತಾ? ಅವಳನ್ನು ಮಾರಿದೆವು, ಯಾಕೆಂದರೆ ಅವಳನ್ನು ಪ್ರೀತಿಸುತ್ತಿದ್ದೆವು” ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು ಲಲಿತಾ. ಆದರೆ ಅಲ್ಲಿದ್ದ ಯಾರೂ ಕೂಡ ಲಲಿತಾಳ ಮಾತು ಕೇಳಿ ತಬ್ಬಿಬ್ಬಾಗಲಿಲ್ಲ. ಆ ಬಡ ಕುಟುಂಬದ ಸ್ಥಿತಿ ಅರ್ಥವಾಗಲಿಲ್ಲ. ಕೊನೆಯ ಪಕ್ಷ ಅರ್ಥ ಮಾಡಿಕೊಳ್ಳಬಹುದಿತ್ತು.

***

ಶ್ಯಾಮ್‌ಲಾಲ್ ಕುಟುಂಬಕ್ಕೆ ಸ್ವಂತ ಜಮೀನು ಇರಲಿಲ್ಲವೆಂದೇನೂ ಅಲ್ಲ. ಸುಮಾರು ಅರ್ಧ ಎಕರೆಯಷ್ಟು ನೀರಾವರಿ ಇಲ್ಲದ ಒರಟು ಭೂಮಿ ಇತ್ತು. ಆ ಭೂಮಿ ಕೆಲವೇ ಕೆಲವು ತಿಂಗಳಾದರೂ ಕುಟುಂಬದವರ ಹೊಟ್ಟೆ ತುಂಬಿಸುತ್ತಿತ್ತು. ಆದರೆ ಬರಗಾಲದ ದಿನಗಳು ಆ ಜೀವನಾಧಾರವನ್ನೂ ಕಸಿದುಕೊಂಡಿತು. ಕೂಲಿ ಕೆಲಸ ಮಾಡಲು ಹಳ್ಳಿಯಲ್ಲಿ ಎಲ್ಲಾ ಸಮಯದಲ್ಲೂ ಕೆಲಸವಿರುತ್ತಿರಲಿಲ್ಲವಾದ್ದರಿಂದ ಶ್ಯಾಮ್‌ಲಾಲ್ ಕುಟುಂಬ ಪಟ್ಟಣದ ದಾರಿ ಹಿಡಿಯಬೇಕಾಯಿತು. ಅವರು ಪಕ್ಕದ ರಾಜ್ಯವಾದ ಛತೀಸ್‌ಘಡದ ‘ಸ್ಟೀಲ್ ಸಿಟಿ’ ಎಂದೇ ಪರಿಚಿತವಾದ ಬಿಲಾಯಿ ಎಂಬ ನಗರಕ್ಕೆ ವಲಸೆ ಹೋದರು. ಬೇರೆ ದಾರಿಯೇ ಇಲ್ಲದೆ ನಗರಕ್ಕೆ ಬಂದ ಶ್ಯಾಮ್‌ಲಾಲ್ ಮತ್ತು ಲಲಿತಾ ಕಟ್ಟಡ ನಿರ್ಮಿಸುವ ಕಾರ್ಮಿಕರಾಗಿ ದುಡಿಯತೊಡಗಿದರು. ಇಟ್ಟಿಗೆ ಮತ್ತು ಪ್ಲಾಸ್ಟಿಕ್ ಶೀಟ್‌ನಿಂದ ನಿರ್ಮಿಸಿದ ತಾತ್ಕಾಲಿಕ ಗುಡಿಸಲೇ ಬಿಲಾಯಿಯಲ್ಲಿ ಅವರ ಮನೆ. ಆ ಸಮಯದಲ್ಲಿ ಹೇಮಾ ತುಂಬಾ ಚಿಕ್ಕ ಮಗು. ಲಲಿತಾ ಮತ್ತು ಶ್ಯಾಮ್‌ಲಾಲ್ ಕೂಲಿ ಕೆಲಸ ಮಾಡುತ್ತಾ ತಮ್ಮ ಮೂರು ಮಂದಿ ಮಕ್ಕಳ ಹಸಿವು ನೀಗಿಸುತ್ತಿದ್ದರು. ಅಂತೆಯೇ ಸ್ವಲ್ಪ ಹಣವನ್ನು ಉಳಿಸುವಲ್ಲಿ ಶ್ರಮಿಸುತ್ತಿದ್ದರು.

ಅವರ ಹಿರಿಯ ಮಗ ನಾಲ್ಕು ವರ್ಷದ ಹರೇಂದ್ರ ಅನಾರೋಗ್ಯದಿಂದ ಬಳಲತೊಡಗಿದ. ಅವನ ತಲೆ ವಿಚಿತ್ರ ರೀತಿಯಲ್ಲಿ ಊದಿಕೊಳ್ಳತೊಡಗಿತು. ಆದರೆ ವಲಸೆ ಕಾರ್ಮಿಕರಿಗೆ ಬಿಲಾಯಿ ಸ್ಟೀಲ್ ಪ್ಲಾಂಟ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತಿರಲಿಲ್ಲ ಮತ್ತು ಖಾಸಗೀ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುವಷ್ಟು ಶಕ್ತಿ ಇವರಿಗಿರಲಿಲ್ಲ. ಹಾಗಾಗಿ ಮತ್ತೆ ಅವರು ಅನಿವಾರ್ಯವಾಗಿ ತಮ್ಮ ಹಳ್ಳಿಗೆ ಬರಬೇಕಾಯಿತು. ತಿತ್ಲಾಗಡ ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಹರೇಂದ್ರನಿಗೆ ಆಪರೇಷನ್ ಮಾಡಬೇಕಾಗಿ ಸೂಚಿಸಿದರು. ಆಪರೇಷನ್ ಹೆಸರಿನಲ್ಲಿ ಸುಲಿಗೆಯನ್ನೇ ಮಾಡಿದರು. ಆದರೂ, ಹರೇಂದ್ರ ತನ್ನ ಶ್ರವಣ ಶಕ್ತಿಯನ್ನೇ ಕಳೆದುಕೊಂಡ. ಹಾಗೆಯೇ, ತಮ್ಮ ಉಳಿತಾಯದಿಂದ ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡರು.

ಮಕ್ಕಳ ಹಸಿವನ್ನು ನೀಗಿಸಲು ಲಲಿತಾ ಮತ್ತು ಶ್ಯಾಮ್‌ಲಾಲ್‌ಗೆ ಪಟ್ಟಣಕ್ಕೆ ಹೋಗಿ ದುಡಿಯುವ ಅನಿವಾರ್ಯತೆ ಇತ್ತು. ಬಿಲಾಯಿ ನಗರಕ್ಕೆ ಮರಳಿ ಹಿಂದಿನಂತೆ ಕೆಲಸ ಪ್ರಾರಂಭಿಸಿದರು. ಆದರೆ ಈ ಭಾರಿ ಶ್ಯಾಮ್‌ಲಾಲ್ ಅವರಿಗೆ ನಿಮೋನಿಯಾ ತಗಲಿಕೊಂಡಿತು. ಅಪೌಷ್ಠಿಕತೆ ಎಷ್ಟಿತ್ತೆಂದರೆ ಅವರ ಕಣ್ಣಿನ ರೆಪ್ಪೆ ಮತ್ತು ಬಾಯಿಯ ಸುತ್ತ ಹುಣ್ಣುಗಳಾದವು. ಕಣ್ಣನ್ನು ಮುಚ್ಚುವುದಕ್ಕೂ ಸಾದ್ಯವಿರಲಿಲ್ಲ. ನಿಮೋನಿಯಾ ಜ್ವರ ವಿಪರೀತವಾಯಿತು. ದೇಹ, ತೂಕ ಕಳೆದುಕೊಂಡಿತು. ಲಲಿತಾಳಿಗೆ ತನ್ನ ಗಂಡನ್ನು ಕಳೆದುಕೊಳ್ಳುವ ಭಯ. ಶ್ಯಾಮ್‌ಲಾಲ್‌ಗಾಗಿ ತಿತ್ಲಾಗಡದ ಸರ್ಕಾರಿ ವೈದ್ಯರ ಬೊಕ್ಕಸ ಭರಿಸುವುದಕ್ಕೂ ಸಿದ್ಧಳಿದ್ದಳು ಲಲಿತ. ಶ್ಯಾಮ್‌ಲಾಲ್ ಗುಣಮುಖರಾಗಲು ಪ್ರತಿದಿನ ಹಲವಾರು ಚುಚ್ಚುಮದ್ದುಗಳನ್ನು ಕೊಡುವ ಅವಶ್ಯಕತೆ ಇತ್ತು. ವೈದ್ಯರು ಪ್ರತಿ ಚುಚ್ಚುಮದ್ದಿಗೂ ತಲಾ 100 ರೂಪಾಯಿಗಳ ಲಂಚ ಕೇಳಿದರು. ಆದರೆ ಲಲಿತಾ ಕಾಡಿಬೇಡಿ ಅದನ್ನು 60 ರೂಪಾಯಿಗೆ ಇಳಿಸುವಂತೆ ಮಾಡಿದಳು.

ಶ್ಯಾಮ್‌ಲಾಲ್ ಬದುಕುಳಿದರು. ಆದರೆ ರೋಗ ಅವರ ದೇಹವನ್ನು ಕ್ಷೀಣಗೊಳಿಸಿತ್ತು. ಸತತವಾಗಿ ಬೆನ್ನು ನೋವಿನಿಂದ ಬಳಲುತ್ತಿದ್ದ ಶ್ಯಾಮ್‌ಲಾಲ್‌ಗೆ ಮೊದಲಿನ ಹಾಗೆ ಕೂಲಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಆಸ್ಪತ್ರೆಗೆ ಸುಮಾರು 12000 ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು. ಹನ್ನೆರಡು ಸಾವಿರ ಆ ಕುಟುಂಬಕ್ಕೆ ‘ಕೇವಲ’ ಆಗಿರಲಿಲ್ಲ. ಸುಮಾರು ಆರು ವರ್ಷಗಳ ಸತತ ಪರಿಶ್ರಮದಿಂದ ಉಳಿಸಿದ್ದ ಅಲ್ಪ ಸ್ವಲ್ಪ ಹಣವೂ ಆ ಹೊತ್ತಿಗಾಗಲೇ ಸಂಪೂರ್ಣ ಖಾಲಿಯಾಗಿತ್ತು. ಆಸ್ಪತ್ರೆ ವೆಚ್ಚ ಭರಿಸುವುದಕ್ಕೂ ಸಾದ್ಯವಿರಲಿಲ್ಲ. ಲಲಿತಾಳಿಗೆ ರಾಮ್‌ಪ್ರಸಾದ್ ಎಂಬ ಸಂಬಂಧಿಕರೊಬ್ಬರಿದ್ದರು. ಸರ್ಕಾರಿ ಕಛೇರಿಯೊಂದರಲ್ಲಿ ಕೆಲಸ ಮಾಡಿತ್ತಿದ್ದ ದಲಿತರೇ ಆದ ರಾಮ್‌ಪ್ರಸಾದ್ ಅವರಿಂದ ಸಾಲ ಪಡೆದು ಆಸ್ಪತ್ರೆಯ ವೆಚ್ಚ ಭರಿಸಿದರು.

ಲಲಿತಾ ಮತ್ತು ಶ್ಯಾಮ್‌ಲಾಲ್ ಕುಂಡಪುಟುಲ ಎಂಬ ಆ ಪುಟ್ಟ ಹಳ್ಳಿಯಲ್ಲಿಯೇ ಕೆಲಸ ಹುಡುಕಬೇಕಾಯಿತು. ಗದ್ದೆ ಕೊಯ್ಲು, ಮಣ್ಣಿನ ಕೆಲಸ, ಮರ ಕಡಿಯುವುದು, ಜಾನುವಾರು ಮೇಯಿಸುವುದು ಇವೇ ಮುಂತಾದ ಕೆಲಸಗಳಿಗೆ ಅವರನ್ನು ಕರೆಯುತ್ತಿದ್ದರು. ಆದರೆ ಹಳ್ಳಿಯಲ್ಲಿ ಪ್ರತಿದಿನ ನಿರಂತರವಾದ ಕೆಲಸವೇನು ಇರುತ್ತಿರಲಿಲ್ಲ. ತಿಂಗಳಲ್ಲಿ ಸುಮಾರು8-10 ದಿನ ಕೆಲಸವಿದ್ದರೆ, ಉಳಿದವು ಖಾಲಿ ದಿನಗಳು. ವರ್ಷದ ಎರಡು ಮೂರು ತಿಂಗಳಂತೂ ಏನೂ ಕೆಲಸವೇ ಇರುತ್ತಿರಲಿಲ್ಲ. ಸಂಬಳದ ಕಥೆಯೂ ಅದೇ, ಪಟ್ಟಣದಲ್ಲಿ ಸಿಗುತ್ತಿದ್ದ ಸಂಬಳದ ಅರ್ಧದಷ್ಟೇ ಸಿಗುತ್ತಿತ್ತು. ಆ ಸಂಬಳದಲ್ಲಿ ಹಸಿವು ನೀಗಿಸುವುದೇ ಕಷ್ಟ, ಇನ್ನು ರಾಮ್‌ಪ್ರಸಾದ್ ಅವರಿಂದ ಪಡೆದ ಹಣ ಹಿಂತಿರುಗಿಸುವುದು ಸಾದ್ಯವೇ ಇರಲಿಲ್ಲ.

ಇಂದಿನ ಕಾಲದಲ್ಲೂ ಅವರು ಹೇಗೆ ಬದುಕಿದರು ಎಂದು ಆಶ್ಚರ್ಯವಾಗುತ್ತದೆ. ಅತ್ಯಲ್ಪ ಆದಾಯದಲ್ಲೂ ಕುಟುಂಬವನ್ನು ಹೇಗೆ ನಿಭಾಯಿಸಿದರೋ ಗೊತ್ತಿಲ್ಲ. ಅವರು ವಿವರಿಸುವಾಗ ‘control’ ಮಾಡಿಕೊಂಡೆವು ಎಂದರು. “control ಮಾಡಿಕೊಂಡು ಬದುಕಿದೆವು”. ಸಂಪಾದನೆ ಇದ್ದಾಗ ಊಟ, ಇಲ್ಲದಿದ್ದಾಗ ಇಲ್ಲ. ಹೊಟ್ಟೆತುಂಬಾ ಊಟವೇನಾದರು ಸಿಕ್ಕಿದರೆ ಅದು ‘ದೇವರ ವರ’ವೇ ಸರಿ ಎನ್ನಬಹುದೇನೋ. ಆದರೆ ದೇವರ ವರವೂ ಅವರ ಪಾಲಿಗೆ ಇರಲಿಲ್ಲ. ಕಷ್ಟಕರವಾದ ದಿನಗಳಲ್ಲಿ ಒಂದು ಹಿಡಿ ಮುಷ್ಠಿ ಅಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನಸಿಟ್ಟು ತಿನ್ನುತ್ತಿದ್ದರು. ಅದೇ ಮನೆಯವರಿಗೆಲ್ಲರಿಗೂ ಅಂದಿನ ಊಟ.

ಊಟಕ್ಕೇ ಕಷ್ಟಕರವಾದ ದಿನಗಳಲ್ಲಿ ರಾಮ್‌ಪ್ರಸಾದ್ ಅವರಿಂದ ಪಡೆದ ಹಣ ಹಿಂದಿರುಗಿಸುವ ಮಾತೇ ಇರಲಿಲ್ಲ. ಅದನ್ನರಿತ ರಾಮ್‌ಪ್ರಸಾದ್ ಮೂರು ವರ್ಷದ ಕಿರಿಯ ಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದ, ಬದಲಾಗಿ ಸಾಲವನ್ನು ವಜಾ ಮಾಡುವುದಾಗಿಯೂ ಸೂಚಿಸಿದ. ಮಕ್ಕಳೇ ಇಲ್ಲದ ರಾಮ್‌ಪ್ರಸಾದ್ ಪ್ರೀತಿಯ ಮಗಳಾದ ಹೇಮಾಳನ್ನು ಸ್ವಂತ ಮಗಳಂತೆಯೇ ಸಾಕುತ್ತಾನೆ ಎಂದೆಣಿಸಿದಳು ಲಲಿತಾ. ತಂದೆ ಶ್ಯಾಮ್‌ಲಾಲ್ ಇನ್ನೂ ರೋಗದಿಂದ ಬಳಲುತ್ತಿದ್ದ. ಲಲಿತಾಳೇ, ತನ್ನ ಸಂಬಂಧಿಕರಾದ ರಾಮ್‌ಪ್ರಸಾದ್ ಅವರಿಗೆ ಮಗಳನ್ನು ಕೊಡುವುದೇ ಒಳಿತೆಂದು ನಿರ್ಧರಿಸಿದಳು.

ಅದು ಮಾರಾಟದ ದಿನ. ವಹಿವಾಟು ಸ್ಟ್ಯಾಂಪ್ ಪೇಪರಿನಲ್ಲಿ ದಾಖಲಾಗಿತ್ತು. ಲಲಿತಾ ಮತ್ತು ಶ್ಯಾಮ್‌ಲಾಲ್‌ಗೆ ಅದರಲ್ಲಿ ಏನಿದೆ ಎಂದೂ ಗೊತ್ತಿರಲಿಲ್ಲ. ಹಾಗೆಯೆ ಹೆಬ್ಬೆಟ್ಟು ಒತ್ತಿದರು. ಹೇಮಾಳ ಮಾರಾಟ ಮುಗಿದಿತ್ತು. ಪ್ರೀತಿಯ ಮಗಳು ಮನೆ ಬಿಟ್ಟಳು.

ಆ ಊರಿನಲ್ಲಿ ಈ ವಿಷಯ ಹೆಚ್ಚು ದಿನ ಗುಟ್ಟಾಗಿರಲಿಲ್ಲ. ಕೆಲವೇ ದಿನಗಳಲ್ಲಿ ಅವರ ಮನೆ ಬಾಗಿಲಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದ. ನೋಡಲು ದಪ್ಪಗೆ, ಕಪ್ಪಗೆ ಇದ್ದ ಆ ವ್ಯಕ್ತಿ ಅವರ ಮಗಳ ಬಗ್ಗೆ ವಿಚಾರಿಸಿದ. ನಂತರ ಗೊತ್ತಾಯಿತು ಆ ವ್ಯಕ್ತಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತ ಎಂದು. ‘ಮಗು ಮಾರಾಟ’ದ ವಿಷಯ ಮಾಧ್ಯಮಗಳಿಗೆ ರೋಚಕ ಸುದ್ದಿಯೂ ಹೌದು. ಈ ಸುದ್ದಿ ರಾಜಧಾನಿಯನ್ನು ತಲುಪಲು ತುಂಬಾ ಸಮಯ ತೆಗೆದುಕೊಳ್ಳಲಿಲ್ಲ. ದೇಶದ ವಿವಿಧ ಮಾಧ್ಯಮಗಳೂ ‘ಮಗು ಮಾರಾಟ’ದ ಸುದ್ದಿಯನ್ನು ರೋಚಕವಾಗಿಯೇ ಮಾರಾಟ ಮಾಡಿದವು. ಕೆಲವೇ ದಿನಗಳಲ್ಲಿ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಅವರ ಮನೆಗೆ ಧಾವಿಸಿದರು. ಮಗುವನ್ನು ಮಾರಿದ್ದೇಕೆ ಎಂದು ಕಟುವಾಗೇ ಪ್ರಶ್ನಿಸಿದರು. ಲಲಿತ ವಿವರಿಸಲು ಹರಸಾಹಸ ಪಟ್ಟಳು, ಆದರೆ ಅಲ್ಲಿದ್ದವರಿಗೆ ಕೇಳುವ ಸಂಯಮವಿರಲಿಲ್ಲ. ಕಟುವಾಗಿ ಮಾತನಾಡಿ ಅಲ್ಲಿಂದ ಹೊರಟು ಹೋದರು.

ನಂತರ, ಕಾನೂನುಬಾಹಿರವಾಗಿ ಮಗು ಮಾರಾಟದಲ್ಲಿ ತೊಡಗಿಕೊಂಡಿದ್ದರು ಎಂದು ರಾಮ್‌ಪ್ರಸಾದ್ ಅವರನ್ನು 15 ದಿನ ಜೈಲಿನಲ್ಲಿಟ್ಟರು. ಜೈಲಿನಿಂದ ಮರಳಿದ ನಂತರ ಊರಿನ ಮುಖಂಡರು ಶ್ಯಾಮ್‌ಲಾಲ್ ಜೊತೆಯಲ್ಲಿ ರಾಮ್‌ಪ್ರಸಾದ್ ಮನೆಗೆ ಹೋಗಿ ಮಗುವನ್ನು ಹಿಂದಿರುಗಿಸುವಂತೆ ತಾಕೀತು ಮಾಡಿದರು. ಆ ಮೂರು ವರ್ಷದ ಕಂದಮ್ಮಳನ್ನು ತನ್ನ ಸ್ವಂತ ಮಗಳಂತೆ ಪ್ರೀತಿಯಿಂದ ಸಾಕುತ್ತಿದ್ದ ರಾಮ್‌ಪ್ರಸಾದ್ ಹಿಂದಿರಿಗಿಸಲು ನಿರಾಕರಿಸಿದರು. ಆದರೆ ಊರಿನ ಮುಖಂಡರು ಪೋಲಿಸರನ್ನು ಕರೆಯಿಸಿದರು. ಒಲ್ಲದ ಮನಸ್ಸಿನಿಂದಲೇ ರಾಮ್‌ಪ್ರಸಾದ್ ಹೇಮಾಳನ್ನು ಬಿಟ್ಟು ಕೊಟ್ಟರು.

***

ಈ ಘಟನೆ ನಡೆದು ವರ್ಷಗಳೇ ಕಳೆದವು. ಮಗುವನ್ನು ಹಿಂಪಡೆದ ನಂತರ ಅಲ್ಲಿ ಏನಾಯಿತು ಎಂದು ತಿಳಿದುಕೊಳ್ಳಲು ನಿರ್ಧರಿಸಿದೆ. ಅಂತೂ ಇಂತೂ ಆ ಗುಡಿಸಲು ಸಿಕ್ಕಿತು. ಆ ದಮನಿತ ಕುಟುಂಬದಲ್ಲಿ ಭಗ್ನಗೊಂಡ ಕನಸುಗಳೇ ಇದ್ದವು. ದುಃಖ ಹೆಪ್ಪುಗಟ್ಟಿತ್ತು.

ಹೇಮಾ ಮರಳಿಬಂದು ವರ್ಷ ಕಳೆಯುವ ಮೊದಲೇ ಕಾಮಲೆ ರೋಗ ಅವಳನ್ನು ಆವರಿಸಿತ್ತು. ಅಪೌಷ್ಠಿಕತೆಯಿಂದಾಗಿ ಅವಳಲ್ಲಿ ರೋಗ ನಿರೋಧಕ ಶಕ್ತಿಯೂ ಇರಲಿಲ್ಲ. ಮೂರು ವರ್ಷದ ಹೇಮಾ ಸತ್ತಳು. “ಅವರು ಮಗುವನ್ನು ರಾಮ್‌ಪ್ರಸಾದ್ ಅವರಲ್ಲಿಯೇ ಇರಲು ಬಿಟ್ಟಿದ್ದರೆ, ಅವಳು ಇಂದು ಬದುಕಿರುತ್ತಿದ್ದಳೇನೋ. ರಾಮ್‌ಪ್ರಸಾದ್ ಅವರಲ್ಲಿ ಅವಳನ್ನು ಸಾಕುವ ಶಕ್ತಿಯಿತ್ತು. ನಮ್ಮಹತ್ತಿರ ಇರಲಿಲ್ಲ” ಎಂದು ಹತಾಶೆಯಿಂದ ಹೇಳಿದಳು ಲಲಿತಾ.

ಸಾವಿನ ಸುದ್ದಿ ತಿಳಿದು ಅಲ್ಲಿಯ ಸ್ಥಳೀಯ ಪೋಲೀಸರನ್ನು ಬಿಟ್ಟರೆ ಬೇರಾರೂ ಬರಲಿಲ್ಲ. ಅಲ್ಲಿ ಆ ಪೋಲಿಸರಿಗೆ ಕಾಣಸಿಕ್ಕಿದ್ದು, ಸತ್ತ ಮಗುವಿನ ಕಳೇಬರ ಮತ್ತು ದುಃಖತಪ್ತ ಮನೆಯವರು. ಮಾತನಾಡಲು ಅವರಲ್ಲಿ ಏನೂ ಉಳಿದಿರಲಿಲ್ಲ… ತಲೆ ತಗ್ಗಿಸಿ ಅಲ್ಲಿಂದ ಹೊರಟು ಹೋದರು…

4 thoughts on “ಅಸಮಾನತೆಯ ಬಣ್ಣಗಳು : ‘ಮಗು ಮಾರಾಟ’ದ ಪ್ರಕರಣ

  1. ASHOK KUMAR VALADUR

    ಹೃದಯ ಕಲುಕುವ ವಾಸ್ತವತೆ. ಮಾನವೀಯತೆಯಿಲ್ಲದ ಕಾನೂನು ನಮಗೆ ಬೇಕಾ? ಕಾನೂನು ವ್ಯವಸ್ಥೆ ಮಾನವನ ಹಸಿವು ನೀಗಿಸಲು ಅಸಹಾಯಕವಾಗಿವೆ. —

    Reply
  2. Ananda Prasad

    ದೇಶದಲ್ಲಿ ಇಂಥ ಭಯಾನಕ ಮಾನವೀಯ ಸಂಕಟದ ಪರಿಸ್ಥಿತಿ ಇನ್ನೂ ಇರುವಾಗ ಕೆಲವು ರಾಜಕಾರಣಿಗಳು ಒಂದೊಂದು ರ್ಯಾಲಿಗಳಿಗೆ 10 -15 ಕೋಟಿಯಂತೆ ದುಂದು ವೆಚ್ಚ ಮಾಡಿ ದೇಶಾದ್ಯಂತ ನೂರಾರು ಚುನಾವಣಾ ರ್ಯಾಲಿಗಳನ್ನು ಮಾಡುವುದು ಎಂಥ ವಿಪರ್ಯಾಸ. ಇನ್ನು ಕೆಲವರು 2070 ಕೋಟಿ ವೆಚ್ಚದಲ್ಲಿ ಪಟೇಲರ ಪ್ರತಿಮೆಯನ್ನು ರಾಜಕೀಯ ಉದ್ಧೇಶಕ್ಕೋಸ್ಕರ ನಿರ್ಮಿಸುವುದು ಮತ್ತು ಸ್ವಾಮೀ ವಿವೇಕಾನಂದರ ವಾರಸುದಾರರು ತಾವೆಂದು ಹೇಳಿಕೊಂಡು ಅಬ್ಬರಿಸುವುದು ಕಂಡಾಗ ನಮ್ಮ ದೇಶ ಎತ್ತ ಹೋಗುತ್ತಿದೆ ಎಂದು ಯೋಚಿಸುವುದು ಅಗತ್ಯ.

    Reply
  3. ಜೆ.ವಿ.ಕಾರ್ಲೊ, ಹಾಸನ

    ವಿಶ್ವ ಕುಬೇರರ ಪಟ್ಟಿಯಲ್ಲಿ ಆರನೇ ಸ್ಥಾನ!
    ಭಾರತದಲ್ಲಿ 103 ಶತಕೋಟಿ ವೀರರು.
    ಮಾರ್ಸ್ ಆರ್ಬಿಟರ್ ಯಶಸ್ವಿ ಉಡಾವಣೆ!..
    ಥತ್ ಇದೊಂದು ಅಪಸ್ವರ..
    ಹೆತ್ತ ಮಕ್ಕಳು ಸುಖವಾಗಿ ಬದುಕಲಿ ಎಂದು ಮಾರುವ ತಂದೆ ತಾಯಿಗಳು. ಓ ನನ್ನ ಭಾರತ!

    Reply
  4. Shrisha Ji

    ಇದೇ ರೀತಿಯ ಮಗು ಮಾರಾಟದ ‘ಪ್ರಕರಣ’ ನಮ್ಮ ಕರಾವಳಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು… ಆಗ, ಆ ಬಡ ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲೂ ಹೋಗದ ಮಂಗಳೂರಿನ ಸ್ಟಾರ್ ಪತ್ರಕರ್ತ ಮಹಾಶಯರೊಬ್ಬರು ‘ಮಧಿರೆಗಾಗಿ ಮಗು ಮಾರಿದ ಮಹಾತಾಯಿ’ ಎನ್ನುವ ತಲೆಬರಹದೊಂದಿಗೆ ವರದಿ ಮಾಡಿದ್ದರು ಎಂದು ಕೇಳಿದ್ದೆ…

    Reply

Leave a Reply

Your email address will not be published. Required fields are marked *