Daily Archives: November 10, 2013

“ಹುಲಿ ಸಾಕಣೆ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

ಗೋಪಿನಾಥ ರಾವ್

ವಿಶ್ವದಲ್ಲಿ ಹುಲಿ ಸಂತತಿ ನಾಶವಾಗುತ್ತಿದೆ ಅನ್ನುವುದನ್ನು ಹಲವರ ಬಾಯಿಯಿಂದ ಕೇಳಿದ್ದ ವಾಸು. ಸರ್ಕಸ್ ಕಂಪೆನಿಯಲ್ಲಿದ್ದಾಗ ಪ್ರದರ್ಶನದ ಮೊದಲು ಮೆನೆಜರ್ ಮಾತು ಆರಂಭಿಸುತ್ತಿದ್ದದ್ದೇ ಹಾಗೆ. “ಇಡೀ ಭಾರತದಲ್ಲಿ ಸಾವಿರದೈನೂರು ಹುಲಿಗಳಿವೆ ಅಂತಾರೆ.. ಅದು ಹೇಗೆ ಎಣಿಸಿದರೋ ದೇವರೇ ಬಲ್ಲ.. ಬರೇ ಕಾಡಿನಲ್ಲಿರೋ ಹುಲಿಗಳನ್ನು ಎಣಿಸಿದ್ದಾರೋ ಅಥವಾ ನಮ್ಮಂತಹ ಸರ್ಕಸ್ಸುಗಳಲ್ಲಿಯೂ ಹೋಗಿ ಹುಲಿಗಳನ್ನು ಎಣಿಸಿದ್ದಾರೋ ಗೊತ್ತಿಲ್ಲ. ನಮ್ಮಲ್ಲಿ ಹುಲಿ ಎಣಿಸುತ್ತೇವೆ ಎಂದು ಯಾರೂ ಬಂದಿಲ್ಲ. ಹಾಗೆ ಎಣಿಕೆಗೆ ಸಿಗದೇ ಇರಬಹುದಾದ ಹುಲಿಗಳಿಲ್ಲಿವೆ ನೋಡಿ.. ಇಲ್ಲಿ ನೋಡಿ.. ಬರುತ್ತಿದೆ ಹುಲಿ ನಂಬರ್ 1501, ಹುಲಿ ನಂಬರ್ 1502, 1503…. 1510” ಅಂತ ಹತ್ತು ಹುಲಿಗಳನ್ನು ಅಖಾಡಾಕ್ಕೆ ಕರೆಸುತ್ತಿದ್ದರು. circus-tigerಅವುಗಳ ಹಿಂದೆಯೇ ವಾಸುವೂ ಬರುತ್ತಿದ್ದ. “ಈಗ ಬಂತು ನೋಡಿ.. ನಮ್ಮ ಸಾವಿರದೈನೂರ ಹನ್ನೊಂದನೇ ಹುಲಿ” ಅಂತ ವಾಸು ಬರುವಾಗ ಹೇಳಿ ಮೆನೇಜರ್ ಭರ್ಜರಿ ಚಪ್ಪಾಳೆಯನ್ನೂ ಗಿಟ್ಟಿಸಿಕೊಳ್ಳುತ್ತಿದ್ದ.

ಹತ್ತು ಹುಲಿಗಳ ಆರೈಕೆಯ ಸಮಯದಲ್ಲಿ ರಿಂಗ್ ಮಾಸ್ಟರ್ ಹೇಳಿದ್ದು ಇನ್ನೂ ಕಿವಿಯಲ್ಲಿ ಜಿಡ್ಡಿನಂತೆ ಅಂಟಿಕೊಂಡಿತ್ತು. “ನೇರವಾಗಿ ಅವುಗಳನ್ನು ದಿಟ್ಟಿಸಿ ನೋಡು.. ಅವುಗಳ ಕ್ರೂರ ದೃಷ್ಟಿಗಿಂತಲೂ ಕ್ರೂರ ದೃಷ್ಟಿ ನಿನ್ನದಾಗಿರಬೇಕು.. ಒಂಚೂರು ಹೆದರಿಕೊಂಡರೂ ನಿನ್ನ ಕಣ್ಣುಗಳಿಂದಲೇ ಅವಕ್ಕೆ ತಿಳಿದುಹೋಗುತ್ತದೆ. ಅವು ನಿನ್ನ ಮೇಲೆ ಎರಗುತ್ತವೆ. ಹುಟ್ಟಾ ಮಾಂಸಾಹಾರಿಗಳು.. ಮೊದಲು ಏನಾದರೂ ತಿನ್ನಲು ಕೊಟ್ಟೇ ಅವುಗಳ ಹತ್ತಿರ ಹೋಗು.. ಹಸಿದ ಹೊಟ್ಟೆಯ ಹುಲಿ ಅಂದ್ರೆ ನಿನ್ನ ಪಾಲಿನ ಯಮನೇ ಅಂತ ತಿಳ್ಕೋ..”

ಎರಡು ವರ್ಷಗಳಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿ ವಾಸುವಿನ ಮೇಲೆ ಈ ಹುಲಿಗಳು ಆಕ್ರಮಣ ಮಾಡಿದ್ದವು. ಜಾಗ್ರತೆ ವಹಿಸಿದ್ದರಿಂದ ಹೆಚ್ಚೇನೂ ಗಾಯಗಳಿಲ್ಲದೆ ಪಾರಾಗಿದ್ದ. ಆದಷ್ಟು ಬೇಗ ಅಲ್ಲಿಂದ ತಪ್ಪಿಸಿಕೊಳ್ಳಲು ತವಕಿಸುತ್ತಿದ್ದರೂ ಬೇರೆ ಉದ್ಯೋಗ ಇಲ್ಲದೆ ಹೇಗೆ ಅನ್ನುವ ಚಿಂತೆಯಲ್ಲಿದ್ದ. ಅವಾಗಲೇ ಒಂದು ದಿನ ಸರ್ಕಸ್ ಟೆಂಟಿನ ಹೊರಗೆ ನರಸಪ್ಪ ಅನ್ನುವವರೊಬ್ಬರು ಹತ್ತಿರ ಕರೆದು “ಇಲ್ಲಿ ನೀನೇನು ಕೆಲಸಮಾಡ್ತಿ?” ಅಂತ ಕೇಳಿದ್ದರು. “ಹುಲಿ ಆರೈಕೆ ಸಾರ್” ಅಂದಿದ್ದ ವಾಸು. “ಸಂಬಳ ಎಷ್ಟು ಕೊಡ್ತಾರೆ?” ಆತ ಪುನಃ ಕೇಳಿದಾಗ ಯಾರೋ ಬೇರೆ ಸರ್ಕಸ್ಸಿನ ಏಜೆಂಟ್ ಇರಬೇಕು, ಅವರಿಗೆ ಜನ ಬೇಕು ಅದಕ್ಕೇ ಕೇಳುತ್ತಿದ್ದಾನೆ ಅನ್ನಿಸಿತ್ತು. ಸಿಗುತ್ತಿದ್ದುದು ಎರಡು ಸಾವಿರವಾದರೂ “ಊಟ, ಕಾಫಿ ಕೊಟ್ಟು ಮೂರು ಸಾವಿರ ಸಾರ್..” ಅಂದಿದ್ದ.

“ಝೂನಲ್ಲಿ ನಾಲ್ಕು ಸಾವಿರದ ಒಂದು ಕೆಲಸ ಐತಿ, ಬರ್ತೀಯಾ?” ಅಂದ ಅವನ ಹಿಂದೆಯೇ ಹೋಗಿದ್ದ ವಾಸು. “ಹುಲಿ ಸಿಂಹಗಳ ಆರೈಕೆ.. ಅಹಾರ ಕೊಡೋದು.. ಕೋಣೆಗಳ ಕ್ಲೀನ್ ಮಾಡೋದು… ನೀನು ಅಲ್ಲಿ ಮಾಡೋ ಕೆಲಸಾನೇ.. ಟೈಮ್ ಟೈಮಿಗೆ ಕೆಲಸ. ಊರೂರು ತಿರುಗಬೇಕಿಲ್ಲ..ಒಂದೇ ಕಡೆ ಆರಾಮ… ನಾನು ಹೇಳಿದ ಹಾಗೆ ಕೆಲಸ ಮಾಡ್ತಾ ಇದ್ರೆ ಸರಿ” ಅಂದಿದ್ದ ನರಸಪ್ಪ. ಹಾಗೆ ಮೃಗಾಲಯದಲ್ಲಿ ಹತ್ತು ಹುಲಿಗಳು, ಹತ್ತು ಚಿರತೆಗಳು ಮತ್ತು ಆರು ಸಿಂಹಗಳ ಆರೈಕೆಯ ಕೆಲಸಕ್ಕೆ ಸೇರಿದ್ದ. ಸರಕಾರಿ ರಿಕಾರ್ಡಿನ ಪ್ರಕಾರ ನರಸಪ್ಪ ಹುಲಿ ಚಿರತೆ ಸಿಂಹಗಳ ಆರೈಕೆಯ ನೌಕರ. ಅವನಿಗೊಂದು ಸಹಾಯಕನನ್ನು ದಿನಗೂಲಿನೆಲೆಯಲ್ಲಿ ನೇಮಿಸಿಕೊಳ್ಳುವ ಅವಕಾಶವಿತ್ತು. ವಾಸುವಿಗೆ ಹಾಗೆ ಕೊಟ್ಟದ್ದು ದಿನಗೂಲಿ ನೌಕರನ ಕೆಲಸ. ದಿನಕ್ಕೆ ನೂರೈವತ್ತರ ಸಂಬಳ. ಆದಿತ್ಯವಾರವೂ ಕೆಲಸಕ್ಕೆ ಹಾಜರಾಗಬೇಕಿತ್ತು. ಲೆಕ್ಕ ಪ್ರಕಾರ ತಿಂಗಳಿಗೆ ನಾಲ್ಕು ಸಾವಿರದೈನೂರು ಸಿಗಬೇಕು. ಆದರೆ ನರಸಪ್ಪನೇ ಆಫೀಸಿಗೆ ಹೋಗಿ ಹಣ ತರುತ್ತಿದ್ದ. ನಾಲ್ಕು ಸಾವಿರ ವಾಸುವಿಗೆ ಕೊಟ್ಟು ಉಳಿದದ್ದನ್ನು ತಾನೇ ನುಂಗುತ್ತಿದ್ದ. ಆ ವಿಭಾಗಕ್ಕೆ ದಿನಕ್ಕೆ ಇನ್ನೂರು ಕೇಜಿ ಮಾಂಸ ಮಂಜೂರಾಗಿತ್ತು. ಆದರೆ ಅಲ್ಲಿಗೆ ಬರುತ್ತಿದ್ದುದು ನೂರಿಪ್ಪತ್ತು ಕೇಜಿ ಮಾಂಸ ಮಾತ್ರ. ವಾಸುವಿನ ಪ್ರಕಾರ ಆ ಪ್ರಾಣಿಗಳಿಗೆಲ್ಲ ದಿನಕ್ಕೆ ಕನಿಷ್ಠ ನೂರೈವತ್ತು ಕೇಜಿ ಮಾಂಸವಾದರೂ ಬೇಕಿತ್ತು. ಅರೆ ಹೊಟ್ಟೆಯ ಹುಲಿ, ಚಿರತೆ, ಸಿಂಹಗಳ ಬಳಿ ಹೋಗಿ ಆತ ಕೆಲಸ ಮಾಡಬೇಕಿತ್ತು. ಹುಲಿಗಳ ಸ್ವಭಾವ ಅರಿತಿದ್ದ ವಾಸು ಹೆದರಿಕೊಂಡೇ ಜಾಗ್ರತೆಯಿಂದ ಕೆಲಸ ಮಾಡುತ್ತಿದ್ದ. ಮಾಂಸ ತರುವ ಅಂಗಡಿಗಳಿಂದ ಸಂಸ್ಕರಿಸುವಾಗ ಸಿಗುವ ತ್ಯಾಜ್ಯಗಳನ್ನು ತರಿಸಿ ಪ್ರಾಣಿಗಳ ಹಸಿವೆ ನೀಗಿಸುವಲ್ಲಿ ಕೈಲಾದ ಪ್ರಯತ್ನ ಕೂಡ ಆಗಾಗ ಮಾಡುತ್ತಿದ್ದ. ನರಸಪ್ಪ ಮಾತ್ರ ಹಣವನ್ನೂ ಮಾಂಸವನ್ನೂ ತಿನ್ನುತ್ತಾ ಆರಾಮವಾಗಿದ್ದ.

ಪ್ರಾಣಿಗಳ ಆಹಾರದಿಂದಲೂ ಕಿತ್ತುತಿನ್ನುವ ಇಲ್ಲಿಂದ ಕಾಲ್ತೆಗೆಯಬೇಕು ಎಂದು ವಾಸು ಯೋಚಿಸುತ್ತಿದ್ದಾಗಲೇ ಒಂದು ದಿನ ಆಹಾರಕ್ಕಾಗಿ ಜಗಳವಾಡಿ ಸಿಂಹಗಳೆರಡು ಸತ್ತು ಬಿದ್ದಿದ್ದವು. ತನಿಖೆಯಾಗಿ ಕರ್ತವ್ಯಚ್ಯುತಿ ಆರೋಪ ಹೊರಿಸಿ ನರಸಪ್ಪನನ್ನು ಸಸ್ಪೆಂಡ್ ಮಾಡಿದರು. ಅದರೊಂದಿಗೇ ವಾಸುವಿನ ದಿನಗೂಲಿ ನೌಕರಿಯನ್ನು ಕೂಡ ಬರ್ಖಾಸ್ತು ಮಾಡಲಾಯಿತು.

ಮುಂದೇನು ಎಂದು ದಾರಿಕಾಣದ ವಾಸು ಪುನಃ ಸರ್ಕಸ್ಸನ್ನೇ ಸೇರುವುದೆಂದು ತನ್ನ ಸರ್ಕಸ್ ಕಂಪೆನಿ ಹುಡುಕಿ ಹೊರಟ. ಮಳೆಗಾಲಕ್ಕೆ ಬಿಡುವೆಂದು ದೊಡ್ಡ ಚಪ್ಪರ ಹಾಕಿ, ಎಲ್ಲ ಪ್ರಾಣಿಗಳನ್ನು ಮೆನೆಜರರ ಮನೆಯ ಹಿತ್ತಿಲಿನಲ್ಲಿ ಕಟ್ಟಿ ಹಾಕಿದ್ದರು. ವಾಸುವನ್ನು ನೋಡಿ ಹುಲಿಗಳು ಗುರ್ರ್..ಗುರ್ರ್ ಅಂದಾಗ ತನ್ನ ಗುರುತು ಹಿಡಿದವೆಂದೇ ಭಾವಿಸಿ ಉತ್ಸಾಹದಲ್ಲಿಯೇ ಮೆನೆಜರರನ್ನು ಭೇಟಿಯಾದ. “ಈಗ ಎಲ್ಲ ಕಡೆ ಸಮಸ್ಯೆಗಳು.. ಪ್ರಾಣಿದಯಾ ಸಂಘಗಳು.. ಪೋಲೀಸರು, ಪುಢಾರಿಗಳು, ಅರಣ್ಯ ವಿಭಾಗ ನೌಕರರ ಸಮಸ್ಯೆಗಳು.. ಇವರನ್ನೆಲ್ಲ ಹೇಗೆ ಸುಧಾರಿಸುವುದು ಅಂತಲೇ ತಿಳಿಯುತ್ತಿಲ್ಲ. ಸರ್ಕಸ್ಸಿನ ಸಹವಾಸವೇ ಸಾಕು ಅನ್ನಿಸುತ್ತಿದೆ, ಯಾವುದಕ್ಕೂ ಮಳೆಗಾಲ ಮುಗಿದು ಸರ್ಕಸ್ಸು ಶುರುವಾಗುವಾಗ ಬಾ, ನೋಡೋಣ” ಎಂದು ಹಾರಿಕೆಯ ಉತ್ತರ ಹೇಳಿ ಸಾಗಹಾಕಿದ್ದರು ಮೆನೆಜರ್.

ಅನಿಶ್ಚಿತತೆಯ ಭಾರ ಹೊತ್ತು ಮನೆಗೆ ಬಂದಾಗ ಮನೆಯಲ್ಲಿ ಅಪ್ಪ ಅಮ್ಮ ವಾಸುವನ್ನೇ ಕಾಯುತ್ತ ಕುಳಿತಿದ್ದರು. ಅವರ ಮನೆಯಿದ್ದ ಪ್ರದೇಶ ಅರಣ್ಯ ಇಲಾಖೆಗೆ ಒಳಪಟ್ಟಿತ್ತು. ಸರಕಾರ ಅಲ್ಲಿ ಸೇವ್ ಟೈಗರ್ ಯೋಜನೆ ಹಾಕಿ ಕಾಡಿನ ಒಳಗಿದ್ದ ಇಪ್ಪತ್ತು ಮನೆಯವರನ್ನೂ ಕಾಡಿನಿಂದ ಹೊರಗೆ ಸ್ಥಳಾಂತರಕ್ಕೆ ಆದೇಶಿಸಿದ್ದರು. ಕಾಡಿನ ಹೊರಮೈಯಲ್ಲಿ ಎಲ್ಲ ಕುಟುಂಬಗಳಿಗೂ ಅರ್ಧರ್ಧ ಎಕರೆ ಜಾಗ, ಮನೆಕಟ್ಟಲು ಮೂರು ಲಕ್ಷ ರುಪಾಯಿ ಕೊಟ್ಟಿದ್ದರಿಂದ ಹೆಚ್ಚೇನೂ ಯೋಚಿಸದೆ ಬಹುತೇಕ ಎಲ್ಲರೂ ಗಂಟು ಮೂಟೆ ಕಟ್ಟಿ ಹೊರಟು ನಿಂತಿದ್ದರು. “ಎರಡೋ ಮೂರೋ ಯೋಗ್ಯತೆ ಸರಿಹೊಂದುವ ಹುಡುಗರಿಗೆ ಯೋಜನೆಯಲ್ಲಿ ಉದ್ಯೋಗ ಕೂಡ ಕೊಡ್ತಾರಂತೆ, ಹೋಗಿ ಕೇಳೋ” ಅಂದಿದ್ದ ಅಪ್ಪ. ಹಾಗೆ ಆಫೀಸಿಗೆ ಹೋಗಿ ಅಲ್ಲಿ ಅಟೆಂಡರ್ ಹುದ್ದೆಗೆ ಮೊದಲೇ ಸೇರ್‍ಇ ಹಸಿರುಬಣ್ಣದ ಯುನಿಫಾರ್ಮಿನಲ್ಲಿ ಕಂಗೊಳಿಸುತ್ತಿದ್ದ ಮಾದನನ್ನು ಸಂಪರ್ಕಿಸಿದ್ದ. “ಪ್ರಾಜೆಕ್ಟ್ ಡೈರೆಕ್ಟರ್ ವೆಂಕಟೇಶ್ ಸರ್ ಅಂತ ಇದ್ದಾರೆ, ಅವರೇ ಇಲ್ಲಿಯ ಬಾಸು. ಅವರನ್ನು ಕೇಳ್ತೇನೆ. ನಿನಗೆ ಇಲ್ಲಿಯ ಕಾಡು, ಹುಲಿಗಳ ಬಗೆಗೆ ಎಲ್ಲ ಅನುಭವ ಇದೆ ಅಂತ ಹೇಳಿ ನೋಡ್ತೀನಿ” ಅಂದಿದ್ದ. ಅವರು “ಸೂಕ್ತ ಅಭ್ಯರ್ಥಿಗೆ ಪ್ರಾಜೆಕ್ಟ್ ಹೆಲ್ಪರ್ ಅಂತ ಒಂದು ಪೋಸ್ಟಿದೆ, ಅವನನ್ನು ಬಂದು ನನ್ನನ್ನು ಕಾಣಲು ಹೇಳು” ಅಂತ ಅಂದದ್ದು ತಿಳಿಯುತ್ತಲೇ ಹೋಗಿ ಅವರೆದುರು ಕೂತಿದ್ದ ವಾಸು.

ಡೈರೆಕ್ಟರ್ ವೆಂಕಟೇಶ್ ಸರ್ ಕೇಳಿದಾಗ ಹುಲಿಗಳ ಜೊತೆಗಿನ ತನ್ನ ಅನುಭವವನ್ನು ವಾಸು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದ. ಹುಲಿಗಳ ಚೆಹರೆ, ಆಹಾರ, ಗಂಡು ಹೆಣ್ಣು ಹುಲಿಗಳ ಆಕಾರ ವ್ಯತ್ಯಾಸ, ಬೆದೆಗೆ ಬರುವಾಗಿನ ಸಮಸ್ಯೆಗಳು.. ಹೀಗೆ ಹೇಳುತ್ತಲೇ ಹೋಗುವಾಗ ಅವರು ಇವನನ್ನೇ ನೋಡುತ್ತ ಕುಳಿತಿದ್ದರು. ವಾಸು ಮಾತು ಮುಗಿಸಿದಾಗ “ಇಲ್ಲಿ ಕಾಡಿನಲ್ಲಿ ಹುಲಿ ನೋಡಿದ್ದೀಯಾ?” ಕೇಳಿದರಾತ. ಚಿಕ್ಕಂದಿನಲ್ಲಿ tiger-painting“ಆಚೀಚೆ ಒಬ್ಬನೇ ಹೋಗಬೇಡ, ಹುಲಿಗಳಿವೆ” ಎಂದು ಹಿರಿಯರು ಹೆದರಿಸುತ್ತಿದ್ದುದು ವಾಸುವಿಗೆ ನೆನಪಾಯಿತಾದರೂ ಇದುವರೆಗೂ ಅಲ್ಲೆಲ್ಲೂ ಹುಲಿ ನೋಡಿರಲಿಲ್ಲ. ಇಂಟರ್ವ್ಯೂನಲ್ಲಿ ಈಗ ಏನು ಹೇಳಬೇಕು? ಒಂದು ಕ್ಷಣ ನಿಜಕ್ಕೂ ಸಮಸ್ಯೆಯೆನಿಸಿತ್ತು. “ನಾನು ನೋಡಿಲ್ಲ ಸರ್” ಧೈರ್ಯ ಮಾಡಿ ಸತ್ಯ ಹೇಳಿದ್ದ ವಾಸು. ಸಣ್ಣ ನಗೆ ನಕ್ಕಿದ್ದರು ವೆಂಕಟೇಶ್ ಸರ್.

“ಕಾಡು ಮೇಡು ಸುತ್ತಿ ಗೊತ್ತಿರುವ, ಹುಲಿಗಳ ಬಗೆಗೆ ಮಾಹಿತಿ ಇರುವ, ಅಲ್ಪಸ್ವಲ್ಪ ಇಂಗ್ಲಿಷ್ ಮತ್ತು ಹಿಂದಿ ತಿಳಿದ ಮತ್ತು ಜೀಪು ಓಡಿಸಲು ಗೊತ್ತಿರುವ ನಿನ್ನಂಥ ಒಬ್ಬ ಹುಡುಗ ನಮಗೆ ಬೇಕು. ಅಪ್ಲಿಕೇಶನ್ ಮಾಡಿ ಸಹಿ ಹಾಕಿಕೊಡು. ಡಿಪಾರ್ಟ್‌ಮೆಂಟಿಗೆ ಕಳುಹಿಸೋಣ, ಅಪ್ರೂವಲ್ ಬಂದರೆ ನಿನ್ನ ಅದೃಷ್ಟ, ತಿಂಗಳಿಗೆ ಎಂಟು ಸಾವಿರದ ಕೆಲಸ ನಿನಗೆ. ನಾನು ಹೇಳಿದ ಹಾಗೆ ಕೆಲಸ ಮಾಡಿಕೊಂಡಿದ್ದರಾಯಿತು” ಎಂದು ಹೇಳಿ ಆತನ ಅಪ್ಲಿಕೇಶನ್ನಿಗೆ ತಮ್ಮ ಸಹಮತಿಯ ಸಹಿ ಹಾಕಿ ಕಳುಹಿಸಿದ್ದರು.

ನೇಮಕಾತಿ ಪತ್ರ ಬಂತು. ಮರುದಿನವೇ ವೆಂಕಟೇಶ್ ಸರ್ ಎದುರು ಹಾಜರಾಗಿ ಸಲಾಮು ಹೊಡೆದಿದ್ದ ವಾಸು. “ಈಗ ಮೊದಲು ನಾವೆಲ್ಲ ಇಲ್ಲಿ ಏನು ಮಾಡುತ್ತಿದ್ದೇವೆ, ಅದರಲ್ಲಿ ನಿನ್ನ ಕೆಲಸ ಏನು ಅಂತ ವಿವರವಾಗಿ ಹೇಳುತ್ತೇನೆ. ಸರಿಯಾಗಿ ಗಮನವಿಟ್ಟು ಕೇಳು” ಅಂತ ತೊಡಗಿದ್ದರು ವೆಂಕಟೇಶ್ ಸರ್.

ಅವರು ಸ್ಥೂಲವಾಗಿ ಹೇಳಿದ್ದನ್ನು ಸಾಧ್ಯವಾದಷ್ಟು ಅರ್ಥ ಮಾಡಿಕೊಂಡ ವಾಸು. ಹುಲಿಗಳ ಸಂತತಿ ಉಳಿಸುವ ಗುರಿ ಹೊಂದಿದ ಯೋಜನೆ ಸೇವ್ ಟೈಗರ್. ವೆಂಕಟೇಶ್ ಸರ್ ಅವರ ಜೊತೆ ಕಾಡಿನಲ್ಲಿ ಹುಲಿಗಳ ರಕ್ಷಣಾ ಕೆಲಸಕಾರ್ಯಕ್ಕೆ ಸುತ್ತಾಡುವುದು ತನ್ನ ನಿತ್ಯದ ಕೆಲಸ. ಇದರ ಜೊತೆಗೆ ಸೇವ್ ಟೈಗರಿಗೆ ಧನ ಸಹಾಯ ಮಾಡುವ ಸಂಸ್ಥೆಗಳಿಂದ ಬರುವ ಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಕರೆದೊಯ್ದು ಸುತ್ತು ಹಾಕಿಸಿ ತರುವುದೂ ತನ್ನ ಕೆಲಸ ಎನ್ನುವುದನ್ನು ಅರಿತುಕೊಂಡ ವಾಸು. “ಹೋಗಿ ಜೀಪಲ್ಲಿ ಕುಳಿತುಕೋ, ಈಗ ಬಂದೆ” ಅಂತ ಹೇಳಿದ ವೆಂಕಟೇಶ್ ಸರ್ ಸ್ವಲ್ಪ ಹೊತ್ತಲ್ಲಿ ಬಂದು ಡ್ರೈವರ್ ಸೀಟಿನಿಂದ ವಾಸುವನ್ನು ಎಬ್ಬಿಸಿ ತಾನು ಕುಳಿತು ಆತನನ್ನು ಎಡಗಡೆಯ ಸೀಟಲ್ಲಿ ಕೂರಿಸಿಕೊಂಡು ಕಾಡಿನೊಳಕ್ಕೆ ಜೀಪು ಓಡಿಸಿದ್ದರು. ಎರಡೂ ಕಡೆ ಕಾಡನ್ನು ನೋಡುತ್ತ ಮೆಲ್ಲ ಮೆಲ್ಲಗೆ ಜೀಪು ಓಡಿಸುತ್ತಿದ್ದ ವೆಂಕಟೇಶ್ ಸರ್ ಕಾಡಿನ ಬಗೆಗೆ, ಹುಲಿಗಳ ಬಗೆಗೆ, ವಾಸುವಿನ ಬಾಲ್ಯದ ಬಗೆಗೆ, ಕಾಡುವಾಸಿಗಳ ಬಗೆಗೆ ಎಲ್ಲ ವಿವರಗಳನ್ನೂ ತಿಳಿದುಕೊಳ್ಳುತ್ತಿದ್ದರು.

ಕಾಡಲೆಯುವ ಜನಾಂಗದಲ್ಲೇ ಹುಟ್ಟಿದವನಾದರೂ ವಾಸು ಇದುವರೆಗೂ ಕಾಡಿನಲ್ಲಿ ಅಷ್ಟು ಒಳಗೆ ಹೋಗಿರಲಿಲ್ಲ. ದಟ್ಟ ಕಾಡು, ಆಕಾಶಕ್ಕೆ ಬೆಳೆದುನಿಂತ ಮರಗಳು, ಸಣ್ಣ ತೊರೆಗಳು, ವಿವಿಧ ಮರಗಿಡಬಳ್ಳಿಗಳು, ಬಣ್ಣಬಣ್ಣದ ಹೂಗಳು, ಪ್ರಾಣಿಪಕ್ಷಿಗಳು.. ನೋಡುತ್ತ ಹೋದಂತೆ ವಾಸುವಿಗೆ ಮನಸ್ಸು ತುಂಬಿ ಬಂದಿತ್ತು. ವೆಂಕಟೇಶ್ ಸರ್ ಕೂಡ ಮೈಮರೆತು “ಈ ಕಾಡು ನೋಡಿದ್ರೆ ಇಲ್ಲಿ ಹುಲಿ ಇರಬಹುದೆಂದೇ ಅನಿಸುತ್ತದೆ… ಏನಂತೀ? ” ಎಂದು ಉದ್ಗಾರ ತೆಗೆದಿದ್ದರು.

“ಇಲ್ಲಿಯ ಮುನ್ನೂರು ಚದರ ಕಿ ಮೀ ಪ್ರದೇಶದ ಅರಣ್ಯವೇ ನಮ್ಮ ಕಾರ್ಯಕ್ಷೇತ್ರ. ಇಲ್ಲೇ ಕಾಡಿನ ಒಳಗೇ ಇದ್ದು ಬೆಳೆದವನು ತಾನೆ ನೀನು? ಕಾಡು ಪ್ರಾಣಿಗಳ ಗುಹೆ, ವನ್ಯ ಮೃಗಗಳು ವಾಸವಿರುವ, ನೀರು ಕುಡಿಯಲು ಬರುವ, ಬೇಟೆಯಾಡುವ ಸ್ಥಳ, ನೋಡಲು ಸಿಕ್ಕುವ ಜಾಗ… ಅಂತೆಲ್ಲ ಆಯಕಟ್ಟಿನ ಪ್ರದೇಶಗಳನ್ನು ಗುರುತು ಹಾಕಿಕೋ, ಹಲವು ಕಡೆಯಿಂದ ಹಲವು ಪ್ರತಿನಿಧಿಗಳು, ಅಧಿಕಾರಿಗಳು ತನಿಖೆಗೆ ಬರುತ್ತಲೇ ಇರುತ್ತಾರೆ. ತಾವು ಕಳುಹಿಸಿಕೊಟ್ಟ ಅಥವಾ ಕೊಡಲಿರುವ ಹಣ ಹೇಗೆ ಉಪಯೋಗವಾಗಿದೆ, ಹೇಗೆ ಉಪಯೋಗವಾಗಲಿದೆ ಎನ್ನುವುದನ್ನು ಕಂಡುಕೊಳ್ಳಲು ಬರುವ ಅವರನ್ನು ಇಲ್ಲಿ ಸುತ್ತಾಡಿಸಿ ರಾಜಮರ್ಜಿಯಲ್ಲಿ ಸತ್ಕರಿಸಿ ಕಳುಹಿಸಬೇಕಾದ್ದು ನಮ್ಮ ಕರ್ತವ್ಯ. ಬಂದವರು ಸಂತೋಷದಿಂದ ಹಿಂದಿರುಗಿದರೆಂದರೆ ಪ್ರಾಜೆಕ್ಟುಗಳಿಗೆ ಹಣದ ಹೊಳೆ ಹರಿದು ಬರುವುದರಲ್ಲಿ ಸಂಶಯವಿಲ್ಲ.” ಕಾಡಿನಲ್ಲಿ ಸುತ್ತಾಡುವಾಗಲೆಲ್ಲ ವೆಂಕಟೇಶ್ ಸರ್ ಇದೇ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿ ವಾಸುವಿಗೆ ಮನದಟ್ಟು ಮಾಡಿಸುತ್ತಿದ್ದರು.

“ಎಲ್ಲ ಜವಾಬ್ದಾರಿಯನ್ನೂ ನಿನ್ನ ಹೆಗಲಮೇಲೆ ಹಾಕುತ್ತೇವೆ ಎಂದುಕೊಳ್ಳಬೇಡ, ನಾವೂ ನಿನ್ನೊಂದಿಗೆ ಇದ್ದೇವೆ. ಅತೀಮುಖ್ಯ ಎನ್ನಿಸುವ ಸಮಯದಲ್ಲೆಲ್ಲ ನಾವೂ ನಿನ್ನ ಜೊತೆಗೆ ಕಾಡಿಗೆ ಬರುತ್ತೇವೆ. ಹುಲಿ ಸಂತತಿ ಕಡಿಮೆಯಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಂದವರಾದರೆ ಕಾಡಿನ ಸುತ್ತುಹಾಕಿಸುತ್ತಾ ಮೊದಲೆಲ್ಲ ಇಲ್ಲಿ ಹುಲಿಗಳು ಮೈಲಿಗೊಂದರಂತೆ ಗೋಚರಿಸುತ್ತಿದ್ದವು, ಈಗ ನೋಡಿ.. ಹುಲಿಗಳೇ ಇಲ್ಲ ಅನ್ನಬೇಕು. ನಾವು ರೂಪಿಸಿರುವ ಪರಿಹಾರಕ್ರಮಗಳಿಗೆ ಪೂರಕವಾದ ನಾಲ್ಕು ಮಾತನ್ನೂ ಸಮಯಕ್ಕೆ ಹೊಂದಿಸಿ ಹೇಳಬೇಕು. ತಾವುಕೊಟ್ಟ ಹಣ ಏನು ಸುಧಾರಣೆ ತಂದಿದೆ ಎಂದು ತಿಳಿಯಲು ಬಂದವರಾದರೆ ಮೊದಲೆಲ್ಲ ಇಲ್ಲಿ ಹುಲಿ ಕಂಡುಬರುತ್ತಲೇ ಇರಲಿಲ್ಲ.. ಈಗ ಹಾಗಲ್ಲ, ಭಾಗ್ಯ ಇದ್ದರೆ ಹುಲಿ ನೋಡಲು ಸಿಗುತ್ತೆ. ಇಂದೂ ಸಿಕ್ಕೀತು ಅನ್ನುತ್ತ ಹಲವು ಮೂಲೆಗಳಿಗೆ ಕರೆದುಕೊಂಡು ಹೋಗಬೇಕು. ಜೇನುತುಪ್ಪ, ಕಾಡು ಹಣ್ಣು, ಹಲಸು, ಮದ್ದಿನಬೇರುಗಳು ಇವೆಲ್ಲವನ್ನು ಹೇಗೂ ನೀನು ತಿಳಿದಿದ್ದೀಯಾ.. ಅವುಗಳನ್ನೂ ತೋರಿಸು. ಕಾಡಿನ ಇತರ ಪ್ರಾಣಿಪಕ್ಷಿಗಳನ್ನೂ ತೋರಿಸು. ಒಟ್ಟಾರೆ ಅವರಿಗೆ ಬಂದದ್ದು ಸಾರ್ಥಕವಾಯಿತು ಅನಿಸಬೇಕು.” ವಾಸು ಹೇಗೆಲ್ಲ ಅತಿಥಿಗಳನ್ನು ಸತ್ಕರಿಸಿ ಸುಧಾರಿಸಬೇಕು ಅನ್ನುವುದನ್ನೂ ಸೂಚಿಸಿದ್ದರು.

“ಕೆಲವು ಬಾರಿ ಬಂದ ಅತಿಥಿಗಳಿಗೆ ಒಂದು ಬಾಟಲು ಜೇನೋ, ಇತರಕಾಡು ಉತ್ಪನ್ನಗಳೋ, ಹುಲಿಯುಗುರೋ, ಜಿಂಕೆ ಚರ್ಮವೋ ಕೊಡಬೇಕಾದೀತು. ಕೆಲವರು ಹಣ ಬಿಟ್ಟು ಬೇರೇನೂ ತೆಗೆದುಕೊಳ್ಳುವುದಿಲ್ಲ. ಪರದೇಶದಿಂದ ಬರುವವರು ಕಾಡು ಹಣ್ಣು, ಹೂವುಗಳು, ಮದ್ದಿನ ಬೇರುಗಳು.. ಇಂತಹ ಅಪರೂಪದ ವಸ್ತುಗಳನ್ನು ಕೊಟ್ಟರೆ ಇಷ್ಟಪಟ್ಟು ಪಡೆದುಕೊಳ್ಳುತ್ತಾರೆ. ಆದರೆ ಬಂದ ಕಾರ್ಯದಲ್ಲಿ ನಿಯತ್ತು ಬಿಟ್ಟುಕೊಡುವುದಿಲ್ಲ. ತಾವು ನೋಡಿದ್ದನ್ನೇ ರಿಪೋರ್ಟಿನಲ್ಲಿ ಬರೆಯುತ್ತಾರೆ. ಅವರೊಂದಿಗೆ ವರ್ತಿಸುವಾಗ ಜಾಗ್ರತೆ ಬೇಕು.” ಅಂತಲೂ ಸೇರಿಸಿ ವೆಂಕಟೇಶ್ ಸರ್ ಸೂಚನೆಗಳನ್ನು ಕೊಟ್ಟಿದ್ದರು.

“ಪರದೇಶದವರೆಲ್ಲ ನಮ್ಮ ಹುಲಿಗಳನ್ನು ಉಳಿಸುವುದಕ್ಕೆ ಯಾಕೆ ಧನ ಸಹಾಯ ಕೊಡುತ್ತಾರೆ ಸರ್?” ಅವಕಾಶ ಸಿಕ್ಕಾಗಲೊಮ್ಮೆ ತನ್ನ ಸಂದೇಹವನ್ನು ಅವರಲ್ಲಿ ಕೇಳಿದ್ದ ವಾಸು.

“ಪ್ರಾಣಿಗಳಲ್ಲಿ ಘನಗಾಂಭೀರ್ಯ ಮೆರೆಯುವ ಅತ್ಯಂತ ಸುಂದರ ಪ್ರಾಣಿಯಾದ ಹುಲಿಯ ಸಂತತಿ ನಾಶದತ್ತ ಸಾಗಿದೆ. ಹೇಗಾದರೂ ಮಾಡಿ ಹುಲಿಗಳನ್ನು ಉಳಿಸಬೇಕು ಅನ್ನುವುದು ವಿಶ್ವದ ಇಂದಿನ ಲಕ್ಷ್ಯ. ಹುಲಿಗಳು ಪ್ರಪಂಚದ ಯಾವ ಮೂಲೆಯಲ್ಲಿ ಉಳಿದುಕೊಂಡರೂ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಅಲ್ಲಿಗೆ ಹೋಗಿ ನೋಡಬಹುದಲ್ಲ ಅನ್ನುವ ಉತ್ಕಟವಾದ ಅಪೇಕ್ಷೆ ಅವರದ್ದು. ಅದಕ್ಕಾಗಿ ಕೋಟಿಗಟ್ಟಲೆ ಫಂಡಿಂಗ್ ನಮ್ಮಂತಹ ಹಲವು ಸಂಸ್ಥೆಗಳಿಗೆ ಅವರು ನೀಡುತ್ತಾ ಇದ್ದಾರೆ. ಆದರೆ ಹಣ ಪಡೆಯುವುದಕ್ಕೆ ಏಶಿಯಾದ ದೇಶಗಳಲ್ಲಿ, ಆಫ್ರಿಕಾದ ದೇಶಗಳಲ್ಲಿ ತೀವ್ರ ಪೈಪೋಟಿ ಇದೆ.” ವಿವರಿಸಿದ್ದರು ವೆಂಕಟೇಶ್ ಸರ್.

ಯೋಜನೆಯ ಹಲವು ಕೆಲಸ ಕಾರ್ಯಗಳಲ್ಲಿ ಒಟ್ಟಿಗೇ ಇದ್ದ ವಾಸು, ದಿನಗಳೆದಂತೆ ವೆಂಕಟೇಶ್ ಸರ್ ಅವರ ಭರವಸೆಯ ಸಹಾಯಕನಾಗಿದ್ದ. ಇಷ್ಟು ದಿನವೂ ಆನೆ, ಚಿರತೆ, ಕಾಡುಕೋಣ, ಕತ್ತೆಕಿರುಬ, ಕಾಡುಹಂದಿ, ಜಿಂಕೆ, ಮಂಗ, ನರಿ, ನವಿಲು.. ಹೀಗೆ ಹಲವು ಕಾಡು ಪ್ರಾಣಿಗಳು, ಪಕ್ಷಿಗಳನ್ನು ಕಾಡುಸುತ್ತಲು ಬಂದವರಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದರೂ ಇದುವರೆಗೂ ಒಂದೇ ಒಂದು ಹುಲಿ ವೆಂಕಟೇಶ್ ಸರ್ ಅಥವಾ ವಾಸುವಿನ ಕಣ್ಣಿಗೆ ಬಿದ್ದಿರಲಿಲ್ಲ. “ಸರ್, ಯಾರಿಗಾದರೂ ಯಾವಾಗಲಾದರೂ ತೋರಿಸಲಿಕ್ಕೆ ಈ ಮುನ್ನೂರು ಚದರ ಕಿ.ಮೀ ಜಾಗದಲ್ಲಿ ಒಂದಾದರೂ ಹುಲಿ ಉಂಟಾ?” ತಾವಿಬ್ಬರೇ ಕಾಡು ಸುತ್ತುತ್ತಿರುವಾಗ ಯಾವತ್ತೂ ಹುಲಿ ಎದುರಾಗದೇ ಇದ್ದುದನ್ನು ವಾಸು ಗಂಭೀರವಾಗಿ ತೆಗೆದುಕೊಂಡು ಒಮ್ಮೆ ಈ ಪ್ರಶ್ನೆ ಕೇಳಿದ್ದ.

“ಯಾರಿಗೊತ್ತು!” ಗಹಗಹಿಸಿ ನಕ್ಕಿದ್ದರು ಡೈರೆಕ್ಟರ್. “ಹಿಂದೆಲ್ಲ ಹುಲಿಗಳಿದ್ದವು ಅನ್ನುತ್ತವೆ ಸರಕಾರೀ ದಾಖಲೆಗಳು. ಎರಡುಸಾವಿರದ ಒಂದರಲ್ಲಿ ಹದಿನೈದು ಹುಲಿಗಳಿದ್ದುವು ಅಂತ ಇಲ್ಲಿನ ಯುನಿವರ್ಸಿಟಿ ಮತ್ತು ಅಮೆರಿಕಾದ ಸಂಸ್ಥೆಯೊಂದರ ಜಂಟಿ ಪ್ರಾಜೆಕ್ಟಿನಲ್ಲಿ ದಾಖಲಾಗಿದೆ. ರಾಜಕಾರಣಿಗಳ ಮತ್ತು ಅಧಿಕಾರಿಗಳ ಯಾವುದೋ ಲೆಕ್ಕಾಚಾರಗಳಲ್ಲಿ ಸೇವ್ ಟೈಗರ್ ಯೋಜನೆ ಇಲ್ಲಿ ಮಂಜೂರಾಗಿದೆ. ನನಗೆ, ನಿನಗೆ ಉದ್ಯೋಗ ಸಿಕ್ಕಿದೆ. ಮೊಟ್ಟಮೊದಲಾಗಿ ಎಷ್ಟು ಹುಲಿಗಳು ಈಗ ಇವೆ ಅಂತ ನಾವು ಸರಕಾರಕ್ಕೆ ಲೆಕ್ಕ ಮಾಡಿ ಹೇಳಬೇಕು. ಮೂರುತಿಂಗಳು ಟೈಮಿದೆ. ಹಾಗೆ ಮೂರು ತಿಂಗಳು ನಾನು ಮತ್ತು ನೀನು ಈ ಕಾಡಲ್ಲಿ ಸುತ್ತಬೇಕು. ಹಗಲಿರುಳು ಸುತ್ತೋಣ. ಹುಲಿ ಇರಲಿ, ಇರದೇ ಇರಲಿ, ನಮಗೆ ತೊಂದರೆ ಇಲ್ಲ. ಮೂರು ಹುಲಿಗಳಿವೆ ಎಂದು ರಿಪೋರ್ಟು ಕಳುಹಿಸುವುದು ಅಂತ ನಾನು ಈಗಾಗಲೇ ತೀರ್ಮಾನಿಸಿದ್ದೇನೆ. ಇಲ್ಲಿ ಹುಲಿಯೇ ಇಲ್ಲ ಅಂತ ಹೇಳಿ ಪುನಃ ಇಲ್ಲಿಂದ ಟ್ರಾನ್ಸ್‌ಫರ್ ಆಗಿ ಹೋಗುವ ಇರಾದೆ ನನಗಿಲ್ಲ” ಅನ್ನುತ್ತ ಪುನಃ ಮೊಂಡುನಗೆ ನಕ್ಕಿದ್ದರು ವೆಂಕಟೇಶ್. “ನಮ್ಮ ಸುತ್ತಾಟದಲ್ಲಿ ಈ ಕಾಡಿನಲ್ಲಿರುವ ಮರಮಟ್ಟುಗಳು, ಕಾಡುತ್ಪನ್ನಗಳು, ಬಿದಿರು, ಇತರ ಪ್ರಾಣಿಗಳು, ಪಕ್ಷಿಗಳು, ಇವೆಲ್ಲದರ ದಾಖಲೆ ಕೂಡ ಮಾಡಬೇಕು. ನಮ್ಮ ಸುಪರ್ದಿಗೆ ಬಂದ ಕಾಡಲ್ಲಿ ಏನೇನಿದೆ ಅಂತಲೂ ತಿಳಯಬೇಕಲ್ಲ..” ಅಂತಲೂ ಸೇರಿಸಿದ್ದರು.

ಜರ್ಮನಿಯಿಂದ ಫಿಲಿಪ್ ಹಾಗ್ ಬರುವವರೆಗೆ ಎಲ್ಲವೂ ಸುಸೂತ್ರವಾಗಿ ನಡೆದು ಹೋಗುತ್ತಿತ್ತು. ಆತ ಬರುವ ಸೂಚನೆ ಸಿಕ್ಕಿದಾಗಲೇ ವೆಂಕಟೇಶ್ ಸರ್ ನೆಟ್ಟಗಾಗಿದ್ದರು. “ಹುಲಿಗಳ ಬಗೆಗೆ ಅಸಾಮಾನ್ಯ ಮಾಹಿತಿಯುಳ್ಳ ಹಾಗ್ ಅವನೊಂದಿಗೆ ಜಾಗ್ರತೆಯಾಗಿರಬೇಕು.. ಅವನಲ್ಲಿ ಸುಳ್ಳು ಹೇಳುವ ಸಾಹಸ ಬೇಡವೇಬೇಡ. ಕೋಟಿಗಟ್ಟಲೆ ಹಣ ಕೊಟ್ಟಿದ್ದಾರೆ, ಮೂರು ಹುಲಿಗಳಿವೆ ಅಂತ ಅವರಿಗೆ ಬರೆದದ್ದು ನಾನು… ಗಂಡೆಷ್ಟು ಹೆಣ್ಣೆಷ್ಟು ಅಂತ ಕೇಳಿದ ಮೊದಲು.. ನಾವಷ್ಟು ಗಮನವಿಟ್ಟು ನೋಡಿಲ್ಲ ಅಂತ ಉತ್ತರಕೊಟ್ಟಿದ್ದೆ. ’ಮೂರರಲ್ಲಿ ಗಂಡೆಷ್ಟು ಹೆಣ್ಣೆಷ್ಟು ಅಂತ ತಿಳಿದುಕೊಳ್ಳಬೇಕು, tigers-fight-paintingಮೂರೂ ಗಂಡಾಗಿರುವ ಸಾಧ್ಯತೆ ಬಹಳ ಕಡಿಮೆ. ಎರಡು ಹೆಣ್ಣು ಒಂದು ಗಂಡು ಆಗಿದ್ದರೆ ಪರವಾಗಿಲ್ಲ, ಎರಡು ಗಂಡು ಒಂದು ಹೆಣ್ಣಾದರೆ ಕಷ್ಟ, ಬೆದೆಗೆ ಬರುವಾಗ ಜಗಳಮಾಡಿಕೊಂಡು ಸಾಯುತ್ತವೆ, ಒಂದು ಗಂಡು ಹುಲಿಯನ್ನು ಸ್ಥಳಾಂತರಿಸಬೇಕು. ಮೂರೂ ಹೆಣ್ಣಾದರೆ ತುರ್ತಾಗಿ ಒಂದು ಗಂಡು ಹುಲಿಯನ್ನು ಬೇರೆ ಕಡೆಯಿಂದ ತರಿಸಿ ಅವು ಸಂತಾನೋತ್ಪತ್ತಿಗೆ ತೊಡಗಿಕೊಳ್ಳುವಂತೆ ಅನುವು ಮಾಡಿಕೊಡಬೇಕು, ಅಲ್ಲಿ ಇರುವ ಹುಲಿಗಳ ಸಂತತಿ ವೃದ್ಧಿಯಾಗಬೇಕು, ಇದನ್ನೆಲ್ಲ ಪ್ಲಾನ್ ಮಾಡಬೇಕಾಗಿದೆ. ನಮಗೆ ಅತೀವ ಸಂತಸ ತರುವ ವಿಷಯ ಇದು.. ನಾನೇ ಅಲ್ಲಿ ಬರುತ್ತೇನೆ’ ಅಂತ ಬರೆದಿದ್ದಾನೆ. “ಹುಲಿಗಳ ಬಗೆಗೆ ವಿಶೇಷ ಅಧ್ಯಯನ ಮಾಡಿದಾತ, ಹುಲಿಯ ಹೆಜ್ಜೆ ನೋಡಿ ಹುಲಿಯ ವಯಸ್ಸು ಹೇಳುವಷ್ಟು ಪರಿಣತನಾತ.. ಹುಲಿಗಳೊಂದಿಗೇ ಇರುವ ಹುಲಿ ಆತ” ಎನ್ನುತ್ತ ತಲೆಕೆರೆದುಕೊಂಡಿದ್ದರು ವೆಂಕಟೇಶ್ ಸರ್.

“ಅವರಿಗೆ ಹುಲಿಗಳನ್ನು ತೋರಿಸುವುದೆಲ್ಲಿಂದ ಸರ್..” ವಾಸು ಗಲಿಬಿಲಿಗೊಂಡು ಹೇಳಿದ್ದ. “ಹಾಗ್ ಇಲ್ಲೆಷ್ಟು ದಿನ ಇರುತ್ತಾರೆ ಎಂಬುದು ಮೊದಲು ತಿಳಿದುಕೊಳ್ಳಬೇಕು. ಒಂದೆರಡು ದಿನವಾದರೆ ಸುಮ್ಮನೆ ಕಾಡುಸುತ್ತಿಸಿದರಾಯಿತು. ’ಒಂದು ವಾರವಾದರೂ ಪರವಾಗಿಲ್ಲ, ಹುಲಿಗಳ ಮಾಹಿತಿ ಪಡೆದೇ ಹೋಗುತ್ತೇನೆ’ ಅಂತ ಆತ ವಾಸಿ ಹಿಡಿದರೆ ಮಾತ್ರ ನಾವೇನು ಮಾಡುವುದು ಅಂತ ಯೋಚಿಸುತ್ತಿದ್ದೇನೆ.. ಇಲ್ಲಿ ಆತ ಒಂದು ತಿಂಗಳು ನಿಂತ ಪಕ್ಷದಲ್ಲಿ ಕನಿಷ್ಠ ಪಕ್ಷ ಒಂದು ಹುಲಿಯನ್ನಾದರೂ ತೋರಿಸಬೇಡವೇ?.. ಇಲ್ಲವಾದರೆ ಅವರಿಗೆ ಸಂದೇಹ ಬರುತ್ತದೆ.. ಫಂಡಿಂಗ್ ನಿಂತು ಹೋಗಬಹುದು.. ತನಿಖೆಯಾಗಬಹುದು.. ಇನ್ನೂ ಒಂದು ವಾರ ಇದೆ, ಸರಿಯಾಗಿ ಯೋಚಿಸಿ ಕಾರ್ಯಸಾಧಿಸುವುದು ಹೇಗೆ ಎಂದು ನಿರ್ಧಾರಕ್ಕೆ ಬರೋಣ. ನೀನೂ ಆಲೋಚಿಸು” ಎಂದಿದ್ದರು ವೆಂಕಟೇಶ್ ಸರ್. ಹಾಗ್ ಎರಡು ಮೂರುದಿನಗಳಲ್ಲಿ ಹಿಂದೆ ಹೋಗುವವನು ಎಂಬ ಸುದ್ದಿ ಸಿಕ್ಕಿದಾಗ ಇಬ್ಬರೂ ಸ್ವಲ್ಪ ನಿರಾಳರಾಗಿದ್ದರು.

ಅವತ್ತು ಹಾಗ್ ಭೇಟಿಯ ಮೊದಲದಿನ. ಬೆಳಿಗ್ಗೆ ಆರುಗಂಟೆಗೇ ಜೀಪು ಹತ್ತಿ ಹೊರಟಿದ್ದರು. ವೆಂಕಟೇಶ್ ಸರ್ ಮತ್ತು ಹಾಗ್ ಎದುರಲ್ಲಿ, ವಾಸು ಜೀಪಿನ ಹಿಂದಿನ ಸೀಟಿನಲ್ಲಿ. ಮಧ್ಯಾಹ್ನ ಒಂದು ಗಂಟೆಯ ವರೆಗೂ ಕಾಡು ಸುತ್ತಿದ್ದೇ ಬಂತು. ಪುನರ ಪುಳಿಯ ಮರದಿಂದ ಹಣ್ಣು ತೆಗೆದು ಹ್ಯಾಂಡಿ ಜೂಸರ್ ಮೆಶಿನಿನಲ್ಲಿ ಹಿಂಡಿ ಜೂಸ್ ಮಾಡಿ ಕುಡಿದದ್ದು ಬಿಟ್ಟರೆ ಬೇರೆ ಏನೂ ಕುಡಿಯಲಿಲ್ಲ, ತಿನ್ನಲಿಲ್ಲ. ಮಧಾಹ್ನ ಊಟ ಮಾಡಿ ಛಲಬಿಡದೆ ಸಂಜೆ ನಾಲ್ಕು ಗಂಟೆಗೆ ಪುನಃ ಹೊರಟರು. ಬೇರೆ ದಾರಿ, ಬೇರೆ ಜಾಗ.. ಆದರೂ ಫಲಿತಾಂಶ ಸೊನ್ನೆಯೇ. ಸಂಜೆ ಹಿಂತಿರುಗುವಾಗ “ನಾಳೆ ಹುಲಿಯ ಜಾಡು ಹುಡುಕುವಾ.. ಎಲ್ಲಿ ಹೆಜ್ಜೆಗುರುತಿದೆ ಅಂತ ಹುಡುಕುವಾ.. ನೀರು ಕುಡಿಯುವ ತೊರೆ, ಉಪ್ಪು ನೆಕ್ಕುವ ಸ್ಥಳ, ಜಿಂಕೆಗಳ ಹಿಂಡು ವಿರಮಿಸುವ ಜಾಗ ಇವುಗಳ ಬಳಿ ಸಾಮಾನ್ಯವಾಗಿ ಹುಲಿ ಹೆಜ್ಜೆ ಗುರುತಿರುತ್ತದೆ, ಅಲ್ಲಿ ನೋಡುವಾ” ಅಂದ ಹಾಗ್. ಈಗೇನು ಮಾಡೋಣ ಅನ್ನುವಂತೆ ವೆಂಕಟೇಶ್ ಸರ್ ವಾಸುವಿನ ಮುಖ ನೋಡಿದರು. “ರಾತ್ರಿ ಮಳೆ ಬರಬಹುದು ಅನ್ನಿ ಸರ್” ಅಂದ ವಾಸು. “ಈಗೀಗ ಇಲ್ಲಿ ರಾತ್ರಿ ಮಳೆಯಾಗುತ್ತೆ, ಮಳೆ ಬಂದ್ರೆ ಬಹುತೇಕ ಹೆಜ್ಜೆ ಗುರುತು ಅಳಿಸಿ ಹೋಗುತ್ತೆ” ಅಂತ ಅವನಿಗೆ ವಿವರಿಸಿದರು ವೆಂಕಟೇಶ್ ಸರ್. “ನೋಡೋಣ” ಅಂದ ಆತ.

ಎರಡನೇ ದಿನವೂ ಕಾಡು ಸುತ್ತಿದ್ದೇ ಬಂತು. “ಇಲ್ಲಿ ಕಾಡುಕೋಣ ಹೋಗಿದೆ ನೋಡಿ.. ಅಲ್ಲಿ ಆನೆಯ ಲದ್ದಿ ನೋಡಿ.. ಇಲ್ಲಿ ನೋಡಿ ಹಾವು ಹೋಗಿದೆ..ಇದು ಕತ್ತೆಕಿರುಬದ ಹೆಜ್ಜೆ.. ಅನ್ನುತ್ತ ಕಣ್ಣಗಲಿಸಿ ನೋಡುತ್ತಿದ್ದ ಹಾಗ್ ಕಾಡು ಪ್ರಾಣಿಗಳ ಹೆಜ್ಜೆಗುರುತು ಕಂಡಲ್ಲೆಲ್ಲ ಜೀಪು ನಿಲ್ಲಿಸಿ ಕೆಳಗಿಳಿದು ಭೂತ ಕನ್ನಡಿ ಹಿಡಿದು ಪರೀಕ್ಷಿಸುತ್ತಿದ್ದ. ಆತ “ಇದು ಚಿರತೆಯ ಹೆಜ್ಜೆ..” ಅಂದಾಗ ಬೇಕೆಂತಲೇ “ಚಿರತೆಯದ್ದಾ ಹುಲಿಯದ್ದಾ? ಸರಿಯಾಗಿ ನೋಡಿ ಮಿಸ್ಟರ್ ಹಾಗ್..” ಅಂದರು ವೆಂಕಟೇಶ್ ಸರ್. ಇಬ್ಬರನ್ನೂ ಕರೆದ ಹಾಗ್ ಅರ್ಧ ಗಂಟೆ ಚಿರತೆಯ ಹೆಜ್ಜೆ ಹೇಗೆ ಹುಲಿಯ ಹೆಜ್ಜೆಗಿಂತ ಭಿನ್ನವಾಗಿರುತ್ತದೆ, ಸಿಂಹದ ಹೆಜ್ಜೆ ಹೇಗೆ ಭಿನ್ನವಾಗಿರುತ್ತದೆ ಎಂದೆಲ್ಲ ವಿವರಿಸಿದ. ನೀವು ಇದನ್ನೆಲ್ಲ ತಿಳಿದುಕೊಳ್ಳಬೇಕು. ವಿಸ್ತಾರವಾದ ಕಾಡಿನಲ್ಲಿ ಹುಲಿಗಣನೆ ಹೇಗೆ ನಡೆಸುತ್ತಾರೆ, ಗಂಡು ಹುಲಿಗಳು, ಹೆಣ್ಣು ಹುಲಿಗಳು, ಹುಲಿ ಮರಿಗಳ ಲೆಕ್ಕ ಹೇಗೆ ತೆಗೆಯುತ್ತಾರೆ ಅಂತೆಲ್ಲ ವಿವರಿಸಿದ.

ಮೂರನೆಯದಿನವೂ ಕಾಡುಸುತ್ತಿದರು. ಜಿಂಕೆಯ ಹಿಂಡುಗಳ ಬಳಿ ಸಾಗಿ ಹುಲಿಗಳ ಹಾಗೆಯೇ ಶಬ್ದ ಹೊರಡಿಸಿದ. ಚಿರತೆಗಳ ಶಬ್ದ ಹೊರಡಿಸಿದ, ಕತ್ತೆಕಿರುಬದ ಶಬ್ದ ಹೊರಡಿಸಿದ.. ಸುಮಾರು ಎರಡು ಗಂಟೆ ಅಲ್ಲೇ ಮರದೆಡೆಗಳಲ್ಲಿ ಅಡಗಿ ಆಗಾಗ ಶಬ್ದ ಹೊರಡಿಸುತ್ತಾ ಏನೇನೋ ನೋಟ್ಸ್ ಬರೆದುಕೊಳ್ಳುತ್ತಾ, ಫೋಟೋ ವಿಡಿಯೋ ತೆಗೆದುಕೊಳ್ಳುತ್ತಾ ಇದ್ದ ಹಾಗ್ ಹಿಂದೆ ಬಂದು “ವೆಂಕಟೇಶ್, ಇಲ್ಲಿ ಹುಲಿಗಳು ಬಂದು ನಾಲ್ಕೈದು ವರ್ಷಗಳಾಗಿವೆ” ಅಂದು ಬಿಟ್ಟ! “ನಾನು ಹುಲಿಯ ಶಬ್ದ ಹೊರಡಿಸಿದಾಗ ವಯಸ್ಸಾದ ಜಿಂಕೆಗಳು ಮಾತ್ರ ಆತಂಕ ವ್ಯಕ್ತ ಪಡಿಸಿದವು. ನಾಲ್ಕೈದು ವರ್ಷದೊಳಗಿನ ಯುವಜಿಂಕೆಗಳು ಶಬ್ದ ಬಂದ ಕಡೆಗೆ ನೋಡಿದ್ದು ಮಾತ್ರ.. ಕಣ್ಣುಗಳಲ್ಲಿ ಯಾವ ಆತಂಕವೂ ಇರಲಿಲ್ಲ. ಅವುಗಳಿಗೆ ಆ ಶಬ್ದ ಹೊಸದು! ಅದೇ ನಾನು ಚಿರತೆಯ ಶಬ್ದ ಮಾಡಿದಾಗ ಎಲ್ಲವೂ ಹೆದರಿಕೊಂಡವು.. ಇಲ್ಲಿಯ ಯುವ ಜಿಂಕೆಗಳಿಗೆ ಹುಲಿಯ ಪರಿಚಯ ಇಲ್ಲ” ಅಂದ ಹಾಗ್.

“ಈ ಶಬ್ದ ಪತ್ತೆ ವಿಧಾನದ ಬಗೆಗೆ ನಾನು ಎಲ್ಲಿಯೂ ಓದಿಲ್ಲ..!” ಆಶ್ಚರ್ಯ ವ್ಯಕ್ತಪಡಿಸಿದರು ವೆಂಕಟೇಶ್.

“ಹೌದು, ಇದು ನಾನು ಡೆವಲಪ್ ಮಾಡಿಕೊಂಡು ಬಂದ ಹೊಸ ತಂತ್ರ. ಇನ್ನೂ ನೂರು ಪ್ರತಿಶತ ಸರಿ ಎಂದು ಹೇಳಲಾಗುವುದಿಲ್ಲ.. ಹಲವು ಕಡೆ ಈ ತಂತ್ರ ಉಪಯೋಗಿಸುತ್ತ ಬಂದಿದ್ದೇನೆ. ಇನ್ನೂ ಸೂಕ್ಷ್ಮವಾಗಿ ಅಭ್ಯಸಿಸಿ, ಉಪಯೋಗಿಸಿ, ಪರಿಷ್ಕರಿಸಿ ಹೊಸದಾಗಿ ಒಂದು ಸಂಶೋಧನಾ ವರದಿ ಮಾಡಿ ಪಿಎಚ್ ಡಿ ಪಡೆಯೋಣ ಎಂದುಕೊಂಡಿದ್ದೇನೆ” ಎಂದ ಹಾಗ್.

ಮೂರು ದಿನಗಳ ಪ್ರೋಗ್ರಾಮ್ ಹಾಕಿ ಬಂದಿದ್ದ ಹಾಗ್ ಹುಲಿಯ ಮುಖ ನೋಡದೆಯೇ ಹಿಂದೆ ಹೊರಟಿದ್ದ. ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ವೆಂಕಟೇಶ್ ಸರ್ “ಇನ್ನೊಮ್ಮೆ ಬನ್ನಿ ಹಾಗ್… ಮುನ್ನೂರು ಚದರ ಕಿಮೀ ವಿಸ್ತಾರದ ಕಾಡಿನಲ್ಲಿ ಹದಿನೆಂಟು ಇಪ್ಪತ್ತು ಗಂಟೆ ಮಾತ್ರ ಸುತ್ತಿದ್ದು ನಾವು. ಒಂದು ವಾರದ ಬಿಡುವು ಮಾಡಿಕೊಂಡು ಬನ್ನಿ, ಇನ್ನೂ ಸ್ವಲ್ಪ ವಿವರವಾಗಿ ಕೂಂಬಿಂಗ್ ಥರ ಹುಡುಕೋಣ” ಅಂದರು.

“ಖಂಡಿತವಾಗಿ ಬರುತ್ತೇನೆ. ಒಂದುವಾರ ಅಲ್ಲ.. ಮೂರ್ನಾಲ್ಕು ವಾರದ ಕಾರ್ಯಕ್ರಮ ಹಾಕಿ ಬರುವ ತಿಂಗಳೇ ಬರುತ್ತೇನೆ. ನನ್ನ ಶಬ್ದ ತಂತ್ರದ ರಿಸರ್ಚಿಗೂ ಇದು ಪ್ರಶಸ್ತ ಅವಕಾಶ ಅಂದ” ಆತ!

ಆತ ಹಿಂತಿರುಗಿದ ಮೇಲೆ ವೆಂಕಟೇಶ್ ಸರ್ ತೀರಾ ಉದ್ವಿಗ್ನರಾಗಿದ್ದರು. “ವಾಸು, ಇವನನ್ನು ಬರುವ ತಿಂಗಳು ಹೇಗೆ ಸುಧಾರಿಸುವುದು.. ನನಗೊಂದೂ ತಿಳಿಯುತ್ತಿಲ್ಲ. ಬರುವ ತಿಂಗಳು ಮಳೆಯೂ ಕಡಿಮೆಯಾಗುತ್ತದೆ. ಹುಲಿ ಬಿಡು, ಹೆಜ್ಜೆಗುರುತಾದರೂ ತೋರಿಸಬೇಕಲ್ಲ ನಾವು..” ವೆಂಕಟೇಶ್ ಸರ್ ತಲೆ ಚಚ್ಚಿಕೊಂಡಿದ್ದರು.

ವಾಸು ಮೂರ್ನಾಲ್ಕು ದಿನಗಳಿಂದ ಒಂದು ಉಪಾಯ ಆಲೋಚಿಸಿದ್ದ. “ಸರ್ ನನ್ನಲ್ಲಿ ಒಂದು ಉಪಾಯ ಇದೆ.. ಮಳೆಗಾಲದಲ್ಲಿ ಸರ್ಕಸ್ ಕಂಪೆನಿ ಮುಚ್ಚಿ ಹುಲಿಗಳು ಕೆಲಸವಿಲ್ಲದೆ ಇರುತ್ತವೆ. ಎರಡು ಹುಲಿಗಳನ್ನು ಒಂದು ವಾರಕ್ಕೆ ಬಾಡಿಗೆಗೆ…” ವಾಸು ಪೂರ್ತಿ ಹೇಳುವಮೊದಲೇ ಕೈಯೆತ್ತಿ ಹೈಫೈವ್ ಕೊಟ್ಟರು ವೆಂಕಟೇಶ್ ಸರ್.. “ನೀನು ಕಾಣುವಷ್ಟು ದಡ್ಡ ಅಲ್ಲ!”

“ಆದರೆ ಸಮಸ್ಯೆ ಇದೆ ಸರ್” ವಾಸು ಮುಂದುವರೆಸಿದ. “ಅಲ್ಲಿಂದ ಇಲ್ಲಿವರೆಗೆ ಬೋನಲ್ಲಿ ಹಾಕಿ ಲಾರಿಯಲ್ಲಿ ತರಿಸಬೇಕು, ಕಾಡಲ್ಲಿ ಅವನ್ನು ಬಿಟ್ಟಮೇಲೆ ನಿಗಾ ವಹಿಸಬೇಕು, ವಾರದ ನಂತರ ಅರಿವಳಿಕೆ ಮದ್ದುಶಾಟು ಕೊಟ್ಟು ಪುನಃ ಬೋನಲ್ಲಿ ಹಿಡಿಯಬೇಕಾದೀತು, ಲಾರಿಯಲ್ಲಿ ಹಿಂದೆ ಕಳಿಸಬೇಕು.. ಬಹಳಷ್ಟು ಮಂದಿ ಇದನ್ನೆಲ್ಲ ನೋಡ್ತಾರೆ.. ಗುಟ್ಟಾಗಿ ಮಾಡಲು ಸಾಧ್ಯವಿಲ್ಲ ಸರ್.. ಮತ್ತೆ ಫಾರಿನ್ನಿನವರಿಗೆ ಸರ್ಕಸ್ ಹುಲಿ ತೋರಿಸಿ ಚಳ್ಳೆಹಣ್ಣು ತಿನ್ನಿಸಿದರು ಅಂತ ನಿಮ್ಮ ಮೇಲೆ ಆಪಾದನೆ ಬರಬಾರದಲ್ಲ..” ಅಂದ ವಾಸು.

ತುಸು ಹೊತ್ತು ಎರಡು ಕೈಗಳನ್ನು ತಲೆಮೇಲೆ ಹೊತ್ತುಕೊಂಡಿದ್ದ ವೆಂಕಟೇಶ್ ಸರ್ ಆಮೇಲೆ “ವಿಷಯ ಹೌದು.. ರಿಸ್ಕ್ ತುಂಬ ಇದೆ.. ನನಗೆ ಆಲೋಚನೆಗೆ ಟೈಮ್ ಕೊಡು, ನಿನ್ನ ತಲೆಗೆ ಏನು ಹೊಳೆದರೂ ನನಗೆ ಹೇಳು..” ಅಂದಿದ್ದರು.

ಒಂದು ವಾರ ಇಡೀ ಇಬ್ಬರೂ ಈ ಉಪಾಯದ ಸಾಧ್ಯತೆ ಬಾಧ್ಯತೆಗಳ ಚರ್ಚೆ ಮಾಡಲೆಂದೇ ಕಾಡು ಸುತ್ತುತ್ತಿದ್ದರು. ಹುಲಿಗಳನ್ನು ತಂದು ಹಾಗ್ ಇರುವಷ್ಟು ಕಾಲವೂ ಕಾಡಿನಲ್ಲಿಟ್ಟುಕೊಳ್ಳುವುದೇ ಸರಿ, ಇಲ್ಲವಾದಲ್ಲಿ ಆತನನ್ನು ನಿಭಾಯಿಸುವುದು ಕಷ್ಟವಾದೀತು ಎಂಬುದು ಸಂಶಯಾತೀತ ಸತ್ಯವಾಗಿತ್ತು. ಬಹಳಷ್ಟು ಚಿಂತನೆಯ ಬಳಿಕ ಕಾಡಿನ ಹುಲಿ ಮತ್ತು ಪಳಗಿಸಿದ ಹುಲಿಗಳ ಬಗೆಗೆ ಅಧ್ಯಯನಕ್ಕಾಗಿ ಎರಡುಹುಲಿಗಳು ಬೇಕು ಅಂತ ಸರ್ಕಸ್ಸಿನವರಲ್ಲಿ ನೆಪ ಹೇಳಿ ಎರಡು ಹುಲಿಗಳನ್ನು ತರಿಸುವುದೆಂದು ನಿರ್ಧರಿಸಿದರು ವೆಂಕಟೇಶ್ ಸರ್. ಈ ಬಗ್ಗೆ ಸರ್ಕಸ್ ಮೆನೆಜರರನ್ನು ಭೇಟಿಯಾದಾಗ ಆತ ಬೇರೆಯೇ ರಾಗ ಹಾಡಿದ. “ಸರ್ಕಸ್ಸಿನಲ್ಲಿ ಉಡಾಫೆಯಲ್ಲಿ ವರ್ತಿಸಿ ಕಿರ್ಕಿರಿ ಮಾಡುವ ಎರಡು ಹುಲಿಗಳನ್ನು ಮಾರಿ ಆಫ್ರಿಕಾದಿಂದ ಒಂದು ಚಿಂಪಾಂಜ಼ಿಯನ್ನು ತರುವ ನಿರ್ಣಯ ಮಾಡಿದ್ದೇವೆ. ಬಾಡಿಗೆಗೆ ಕೊಡುವುದಿಲ್ಲ, ಬೇಕಿದ್ದರೆ ಹುಲಿಗಳನ್ನು ಖರೀದಿ ಮಾಡಿ ಕೊಂಡುಹೋಗಿ, ರೇಟು ಒಂದು ಹುಲಿಗೆ ಹತ್ತುಲಕ್ಷ” ಅಂದುಬಿಟ್ಟ.

“ಒಂದು ಹುಲಿಗೆ ಹತ್ತು ಲಕ್ಷ ರುಪಾಯಿಗಳು! ಅಷ್ಟು ಕ್ರಯವಾ? ಅಷ್ಟು ದುಡ್ಡಿನಲ್ಲಿ ದೊಡ್ಡ ಗೋಶಾಲೆ ಆರಂಭಿಸಬಹುದು!” ಅಂದ ವೆಂಕಟೇಶ್ ಸರ್ ಅವರಲ್ಲಿ “ಸಾರ್, ಹುಲಿ ಚರ್ಮಕ್ಕೆ ಹದಿನೈದು ಲಕ್ಷ ಸಿಗುತ್ತೆ. ಉಗುರೊಂದಕ್ಕೆ ಮೂರು ಸಾವಿರ ಸಿಗುತ್ತೆ. ಸಿಕ್ಕಿಬಿದ್ದಲ್ಲಿ ಕಾನೂನು ಎದುರಿಸುವ ಧೈರ್ಯಬೇಕು ಅಷ್ಟೇ.. ಆದ್ದರಿಂದ ಕೊಲ್ಲುವುದು ಬೇಡ, ಯಾರಿಗಾದರೂ ಮಾರೋಣ ಅಂತ ನಿರ್ಧರಿಸಿದ್ದು ನಾವು” ಅಂದ ಮೆನೆಜರ್.

ಹಿಂತಿರುಗುತ್ತಾ ಸಪ್ಪೆಯಾಗಿದ್ದ ವಾಸುವಿನೊಡನೆ “ಸುಳ್ಳುಗಳು ಇಲ್ಲಿವರೆಗೆ ಮುಟ್ಟಿದಮೇಲೆ ಅವನ್ನೇ ಸತ್ಯ ಮಾಡೋಣ. ಇಪ್ಪತ್ತು ಲಕ್ಷ ಬೇಕು ಅಷ್ಟೇ’ ಅಂತ ಹೇಳಿ ವೆಂಕಟೇಶ್ ಸರ್ ಮಾರ್ಮಿಕವಾಗಿ ನಕ್ಕಾಗ ಏನೂ ಅರ್ಥವಾಗದೆ ಅವರನ್ನೇ ಪಿಳಿಪಿಳಿ ನೋಡಿದ್ದ ವಾಸು.

ವೆಂಕಟೇಶ್ ಸರ್ ಬೆಂಗಳೂರಿಗೆಲ್ಲ ಹೋಗಿ ಬಂದರು. ಸದಾ ಆಲೋಚನೆಯಲ್ಲೇ ಕಳೆದು ಹೋದವರಂತೆ ಇರುತ್ತಿದ್ದ ಅವರು ಹಾಗ್ ಬರಲು ಒಂದು ವಾರವೇ ಬಾಕಿ ಉಳಿದಾಗ ವಾಸುವನ್ನು ಕರೆದು “ನಿನ್ನ ಎದೆ ಗುಂಡಿಗೆ ಗಟ್ಟಿ ಇದೆಯಾ? ಇಲ್ಲಿದೆ ಇಪ್ಪತ್ತು ಲಕ್ಷ. ನಾನೂ ನೀನೂ ಪಾಲುಗಾರಿಕೆಯಲ್ಲಿ ಸರ್ಕಸ್ಸಿನ ಹುಲಿಗಳನ್ನು ಖರೀದಿಸಿ ತರುವುದು. ಒಂದು ಗಂಡು ಒಂದು ಹೆಣ್ಣು. ಹುಲಿಗಳನ್ನು ನಾವು ಈ ಕಾಡಿನಲ್ಲೇ ಸಾಕುವುದು. ಹಾಗ್ ಬರಲಿ, ಬೇರೆ ಯಾರೇ ಬರಲಿ, ಇನ್ನು ಟೆನ್ಶನ್ ಇಲ್ಲ.. ಏನು ಹೇಳುತ್ತೀಯಾ” ಕೇಳಿದರು ವೆಂಕಟೇಶ್.

ವಾಸುವಿಗೆ ಒಂದೂ ಅರ್ಥವಾಗಲಿಲ್ಲ. “ಇದರಲ್ಲಿ ಪಾಲುಗಾರಿಕೆ ಎಲ್ಲಿ ಬಂತು ಸಾರ್? ನಮಗೇನು ಲಾಭ? ನೀವು ಹಾಕಿದ ಇಪ್ಪತ್ತು ಲಕ್ಷ ಹಿಂದೆ ತೆಗೆಯೋದು ಹೇಗೆ? ಅದಲ್ಲದೆ ಇನ್ನೂ ಬೇರೆ ಸಮಸ್ಯೆಗಳಿವೆ ಸರ್..” ಅಂದ ಆತ.

“ಏನೂ ಸಮಸ್ಯೆಯಿಲ್ಲ ವಾಸು.. ಇದೇ ಎಲ್ಲ ಸಮಸ್ಯೆಗಳಿಗೆ ಪರಿಹಾರ. ತಲೆನೋವಿಲ್ಲದೆ ಬದುಕಲು ಮಾರ್ಗ.chinese-tiger-painting ನನ್ನ ಸೀಟಿನಲ್ಲಿ ಕುಳಿತು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುವ ಅಧಿಕಾರ ನನಗಿದೆ. ಬರುವವರಿಗೆ ನಾನು ಇಲ್ಲಿ ಎರಡು ಹುಲಿ ತೋರಿಸಿದರೆ ಸಾಕು, ಹಣದ ಹೊಳೆ ಹರಿಯುತ್ತೆ. ಇಪ್ಪತ್ತು ಲಕ್ಷಕ್ಕೆ ತಲೆ ಕೆಡಿಸಿಕೊಳ್ಳಬೇಡ.. ಕಾಡಿನೊಳಗಿನ ಸಂಪತ್ತು ನೀನೇ ನೋಡಿದ್ದೀಯ.. ಬೇರೆಲ್ಲ ಬಿಡು.. ನೂರು ಕೇಜಿ ತರಕಾರಿ ಬೀಜ ತಂದು ಕಾಡಿನೊಳಗೆ ಬಿತ್ತಿದರೆ ಎರಡು ವರ್ಷದಲ್ಲಿ ನನ್ನ ಇಪ್ಪತ್ತು ಲಕ್ಷ ನಾನು ಹಿಂದೆ ತೆಗೆಯಲು ಸಾಧ್ಯವುಂಟು. ನೀನು ಲಾಭ ನಷ್ಟದ ಯೋಚನೆ ಬಿಡು. ಬೇರೆ ಸಮಸ್ಯೆ ಹೇಳಿದೆಯಲ್ಲ, ಅದೇನು ಹೇಳು..” ಅಂದಿದ್ದರು ಭಾವುಕರಾಗಿ.

“ಬೇರೆ ಸಮಸ್ಯೆಗಳು ಎರಡು ಮೂರಿವೆ. ಒಂದು, ಈ ಹುಲಿಗಳು ಹಾಕಿದ ಮಾಂಸ ತಿಂದು ಬದುಕಿದವು. ಬೇಟೆಯಾಡಿ ತಿನ್ನುತ್ತವೋ ಗೊತ್ತಿಲ್ಲ. ಇವು ಆಡು, ಕುರಿ, ದನದ ಮಾಂಸ ತಿನ್ನುತ್ತ ಇದ್ದ ಪ್ರಾಣಿಗಳು. ಜಿಂಕೆ, ಕಾಡುಹಂದಿ, ಮೊಲಗಳ ಮಾಂಸ ತಿನ್ನುತ್ತವೆಯೋ ಗೊತ್ತಿಲ್ಲ. ಮತ್ತೆ ಬೇಲಿ ಇಲ್ಲದ ವಿಶಾಲ ಅರಣ್ಯ, ಹುಲಿಗಳು ಇಲ್ಲೇ ಇರುತ್ತವೆ ಎನ್ನುವ ಭರವಸೆ ಏನು?” ವಾಸು ವಿವರಿಸಿದ.

ದೊಡ್ಡದಾಗಿ ನಕ್ಕರು ವೆಂಕಟೇಶ್ ಸರ್. “ಇವು ಮೂರೂ ನಿನ್ನ ಸಮಸ್ಯೆಗಳು.. ಕನಿಷ್ಠ ಮೊದಲನೆಯ ಎರಡು ನಿನ್ನ ಮೇಲೆ ಅವಲಂಬಿಸಿವೆ. ಅವು ಬೇಟೆಯಾಡಿ ತಿನ್ನುವುದಿಲ್ಲವಾದರೆ ನೀನು ಬೇಟೆಯಾಡಿ ಅವುಗಳಿಗೆ ತಿನ್ನಿಸು. ಅರ್ಧ ಹೊಟ್ಟೆ ತಿನ್ನುತ್ತಿದ್ದ ಹುಲಿಗಳು ಹೊಟ್ಟೆತುಂಬ ತಿನ್ನಲಿ, ನಿನಗೆ ತೃಪ್ತಿಯಾಗುವಷ್ಟು ತಿನ್ನಿಸು. ಆಡು, ಕುರಿ, ದನದ ಮಾಂಸ ಹುಡುಕಿ ಅವು ಕಾಡು ಬಿಟ್ಟು ನಾಡಿಗೆ ಬರದಿದ್ದರಾಯಿತು. ನೀನು ಹೊಟ್ಟೆತುಂಬಾ ಹಾಕುವ ಆಹಾರ, ತೋರಿಸುವ ಪ್ರೀತಿ ಅವುಗಳನ್ನು ಈ ಅರಣ್ಯ ಬಿಟ್ಟು ಹೊರಹೋಗದಂತೆ ಪ್ರೇರೇಪಿಸಬೇಕು. ಅದಲ್ಲದೆ ಬೇರೇನೇನು ಮಾರ್ಗ ಇದೆ ಅಂತ ಅರಿತುಕೋ.. ಹುಲಿಗಳು ಠಿಕಾಣಿ ಎಲ್ಲಿ ಮತ್ತು ಯಾಕೆ ಹೂಡುತ್ತವೆ ಎಂದು ನಿಮ್ಮ ಹಿರಿಯರಲ್ಲಿ ಕೇಳಿ ತಿಳಿದುಕೋ..” ಎಂದರು ವೆಂಕಟೇಶ್ ಸರ್.

“ಇನ್ನೂ ಒಂದು ಸಮಸ್ಯೆ ಇದೆ ಸಾರ್” ಎಂದ ವಾಸು. ” ಸರ್ಕಸ್ ಮೆನೆಜರ್ ಹೇಳಿದ ಹಾಗೆ ಹುಲಿಯ ಚರ್ಮಕ್ಕೇ ಹದಿನೈದು ಲಕ್ಷ ಬೆಲೆಯಿದೆಯಾದರೆ ಕಾಡುಗಳ್ಳರ ಸಮಸ್ಯೆಯೂ ಖಂಡಿತ ಇದೆ..”

ಅದುವರೆಗೂ ಆಚೀಚೆ ನಡೆಯುತ್ತಾ ಮಾತುಕತೆಯಲ್ಲಿ ತೊಡಗಿದ್ದ ವೆಂಕಟೇಶ್ ಸರ್ ಹತ್ತಿರಬಂದು ವಾಸುವಿನ ಹೆಗಲ ಮೇಲೆ ಮೆಲ್ಲನೆ ಕೈಯಿಟ್ಟರು. “ಧೈರ್ಯವಾಗಿರು… ಅರಣ್ಯ ಇಲಾಖೆಯ ಸೆಕ್ಯೂರಿಟಿ ಇದೆ, ಆದರೆ ಅದು ಎಷ್ಟಕ್ಕೂ ಸಾಲದು. ಬೇರೆ ಪರಿಹಾರ ಇಲ್ಲವೇ ಅಂತ ಕೇಳಿದರೆ ನನ್ನಲ್ಲಿ ಒಂದು ಪರಿಹಾರ ಇದೆ.. ನಿಮ್ಮವರನ್ನೆಲ್ಲ ಕಾಡಿನಿಂದ ಹೊರಗೋಡಿಸಿದ ನಾವು ಆಲದಮರದ ಬುಡದ ನಿಮ್ಮ ಬಂಡೆಕಲ್ಲು ಹುಲಿದೇವರನ್ನು ಅಲ್ಲೇ ಬಿಟ್ಟಿರುವುದು ಮತ್ಯಾಕೆ? ನಮ್ಮ ಹುಲಿಸಾಕಣೆಯಲ್ಲಿ ಅವನಿಗೂ ಒಂದು ಪಾಲು ಕೊಟ್ಟುಬಿಡೋಣ, ಅವನು ನೋಡಿಕೊಳ್ತಾನೆ.” ತಮ್ಮ ದಾಪುಗಾಲಿನ ನಡಿಗೆಯನ್ನು ಮುಂದುವರೆಸುತ್ತಾ ಶಾಂತರಾಗಿ ನುಡಿದರು ವೆಂಕಟೇಶ್ ಸರ್.

ಅಷ್ಟರಲ್ಲಿ ಆಫೀಸಿನ ಹೊರಗೆ ನವರಾತ್ರಿಯ ಹುಲಿವೇಷಗಳು ಬಂದು ಕುಣಿಯ ಹತ್ತಿದ್ದವು. ಹುಲಿವೇಷದವರಿಗೆ ಕೊಡಲು ಕಿಸೆಯಿಂದ ನೂರರ ನೋಟು ತೆಗೆದು ಮಾದು ಕೈಯಲ್ಲಿಡುತ್ತಾ “ವಾಸು, ಹಾಗ್ ಇನ್ನೊಮ್ಮೆ ಬರುವಾಗ ಇವರನ್ನು ಕರೆಸಿದರೆ ಹೇಗೆ!” ಅನ್ನುತ್ತ ದೊಡ್ಡದಾಗಿ ನಕ್ಕರು ವೆಂಕಟೇಶ್ ಸರ್!

ವಾಸುವಿಗೂ ನಗು ತಡೆಯಲಾಗಲಿಲ್ಲ!