Daily Archives: November 13, 2013

ಮೂಢನಂಬಿಕೆ ನಿಷೇಧ ಕಾನೂನು – ವಿರೋಧ ಪಕ್ಷಗಳ ಅಪಪ್ರಚಾರ

– ಆನಂದ ಪ್ರಸಾದ್

ಭಾರತದಲ್ಲಿ ಸರ್ಕಾರ ವೇಶ್ಯಾವಾಟಿಕೆಯನ್ನು ನಿಷೇಧಿಸಿದೆ. ವೇಶ್ಯಾವಾಟಿಕೆಗೆ ಹೋಗುವುದು ಜನರಿಗೆ ನೆಮ್ಮದಿ ಹಾಗೂ ಸಂತೋಷ ಕೊಡುತ್ತದೆ ಮತ್ತು ಜನ ತಮ್ಮ ಇಚ್ಛೆಯಿಂದಲೇ ವೇಶ್ಯಾವಾಟಿಕೆಗಳಿಗೆ ಹೋಗುತ್ತಾರೆ ಹಾಗಾಗಿ ಇದನ್ನು ನಿಷೇಧಿಸಬೇಡಿ, ಇದು ಜನರ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕಿದರೆ ಇದನ್ನು ನಿಷೇಧಿಸುವುದು ಸಾಧ್ಯವಿತ್ತೇ? ಅದೇ ರೀತಿ ಭಾರತದಲ್ಲಿ ಮಾದಕ ದ್ರವ್ಯಗಳನ್ನು drugsಮಾರಾಟ ಮಾಡುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ತಮ್ಮ ದುಡ್ಡಿನಲ್ಲಿ ಮಾದಕ ಪದಾರ್ಥ ಸೇವಿಸಿ ಜನ ನೆಮ್ಮದಿ ಹಾಗೂ ಸಂತೋಷ ಪಡೆಯುವುದಾದರೆ ಅದನ್ನು ತಡೆಯಲು ನೀವು ಯಾರು ಎಂದು ರಾಜಕಾರಣಿಗಳು ಅಬ್ಬರಿಸಿದ್ದಿದ್ದರೆ ಇಂಥ ಕಾನೂನು ತರುವುದು ಸಾಧ್ಯವಿತ್ತೇ? ಅಥವಾ ಭಾರತದಲ್ಲಿ ಥಿಯೇಟರುಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನೀಲಿ ಚಿತ್ರ ತೋರಿಸುವುದನ್ನು ನಿಷೇಧಿಸಲಾಗಿದೆ. ಜನ ತಮ್ಮ ದುಡ್ಡಿನಲ್ಲಿ ಥಿಯೇಟರಿಗೆ ಹೋಗಿ ನೀಲಿ ಚಿತ್ರ ನೋಡಿ ಸಂತೋಷ ಪಡೆಯುವುದಾದರೆ ಅದನ್ನು ತಡೆಯುವುದು ಜನರ ಸ್ವಾತಂತ್ರ್ಯ ಹರಣ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆದಿದ್ದರೆ ಹೀಗೆ ಮಾಡಲು ಸಾಧ್ಯವಾಗುತ್ತಿತ್ತೇ?

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವ ಕಾನೂನು ಮಾಡುವುದು ಬೇಡ, ಜನ ಜಾಗೃತಿ ಮಾಡಿ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಒಳ್ಳೆಯದು ಎಂದು ಹೇಳಿದರೆ ಅದನ್ನು ಒಪ್ಪಬಹುದೇ? ಅಮಾಯಕ ಜನರಿಗೆ ರುಚಿ ಹಿಡಿಸಿ ಅವರನ್ನು ಮಾದಕ ದ್ರವ್ಯಗಳ ಗುಲಾಮರಾಗುವಂತೆ ಮಾಡಿ ತಮ್ಮ ವ್ಯಾಪಾರ ಕುದುರಿಸಿಕೊಂಡು ದುಡಿಯದೆ ದುಡ್ಡು ಮಾಡಿ ಐಶಾರಾಮದಲ್ಲಿ ಮೆರೆಯುವ ಮಂದಿಯನ್ನು ತಡೆಯುವ, ಅಂಥವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸದೆ ಕೇವಲ ಜಾಗೃತಿಯಿಂದ ಇದನ್ನು ತಡೆಯಬೇಕು ಎಂದು ಹೇಳುವುದು ಎಷ್ಟು ಅಸಂಗತವೋ ಅದೇ ರೀತಿ ಮೂಢ ನಂಬಿಕೆಗಳನ್ನು ತಡೆಯುವ ಶಾಸನ ಮಾಡುವುದು ಬೇಡ, ಅವುಗಳನ್ನು ಜಾಗೃತಿ ಮೂಡಿಸಿ ತಡೆಯಬೇಕು ಎಂದು superstitionsಹೇಳುವುದೂ ಅಷ್ಟೇ ಅಸಂಗತ ಧೋರಣೆಯಾಗುತ್ತದೆ. ಯೋಚನಾಶಕ್ತಿಯಿಲ್ಲದ ಅಮಾಯಕ ಜನರನ್ನು ಪರೋಕ್ಷವಾಗಿ ದೇವರು, ಧರ್ಮ, ಗ್ರಹಚಾರ, ಜ್ಯೋತಿಷ್ಯ, ವಾಸ್ತುಗಳ ಹೆಸರಿನಲ್ಲಿ ನಂಬಿಸಿ ತಾವು ಐಶಾರಾಮದಲ್ಲಿ ಮೆರೆಯುವ ವ್ಯಕ್ತಿಗಳ ನಡವಳಿಕೆ ಮಾದಕ ದ್ರವ್ಯಗಳ ವ್ಯಸನ ಹಿಡಿಸಿ ತಮ್ಮ ಸರಕನ್ನು ಮಾರಿ ಹಣ ಮಾಡುವ ವ್ಯಕ್ತಿ ಗಳಂತೆ ಸಮಾಜದ ಹಾಗೂ ದೇಶದ ಹಿತಕ್ಕೆ ಮಾರಕವಾಗಿದೆ.

ಅಮಾಯಕ ಜನರಿಗೆ ತಿಳುವಳಿಕೆ ಕೊಡಬೇಕಾದ ವಿದ್ಯಾವಂತರು ಇಂದು ಮೂಢನಂಬಿಕೆಗಳ ದಾಸರಾಗಿ ಇತರರನ್ನೂ ವಾಸ್ತು, ಜ್ಯೋತಿಷ್ಯ, ಅರ್ಥಹೀನ ಆಚರಣೆಗಳ ದಾಸರನ್ನಾಗಿ ಮಾಡಲು ಹವಣಿಸುತ್ತಿದ್ದಾರೆ. ಮೂಢನಂಬಿಕೆಗಳನ್ನು ಹಬ್ಬಿಸುವ ಹಾಗೂ ಸಮರ್ಥಿಸುವ ಕೆಲಸದಲ್ಲಿ made-snanaಕೆಲವು ರಾಜಕೀಯ ಪಕ್ಷಗಳು ಹಾಗೂ ದೇಶಭಕ್ತ ಎಂದು ಹೇಳುವ ಸಂಘಟನೆಗಳು ಹೆಚ್ಚಿನ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದು ದೇಶದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿಯ ಮೂಲೋತ್ಪಾಟನೆ ಮಾಡಿ ಎಂದು ಕರೆ ನೀಡಿದ್ದರೆ ಇಂದು ಅದಕ್ಕೆ ತದ್ವಿರುದ್ಧವಾಗಿ ವಿವೇಕಾನಂದರ ವಾರಿಸುದಾರರು ತಾವೇ ಎಂದು ಬೊಬ್ಬೆ ಹೊಡೆಯುವ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪುರೋಹಿತಶಾಹೀ ವ್ಯವಸ್ಥೆಯನ್ನು ಬಲಪಡಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ? ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ಸಮಾಜದಲ್ಲಿ ಪುರೋಹಿತಶಾಹಿ ಹಿಡಿತವನ್ನು ದುರ್ಬಲಗೊಳಿಸುವುದು ಅನಿವಾರ್ಯ. ಸಮಾಜದಲ್ಲಿ ಪುರೋಹಿತಶಾಹಿ ಹಿಡಿತ ಬಲವಾಗಿದ್ದರೆ ಅಲ್ಲಿ ಊಳಿಗಮಾನ್ಯ ವ್ಯವಸ್ಥೆ ಹಾಗೂ ಪಾಳೇಗಾರಿ ವ್ಯವಸ್ಥೆಗಳು, ದಬ್ಬಾಳಿಕೆ ನೆಲೆಯೂರುತ್ತದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳವಣಿಗೆ ಆಗಬೇಕಾದರೆ ಪುರೋಹಿತಶಾಹೀ ಹಿಡಿತವನ್ನು ಸಮಾಜದಲ್ಲಿ ದುರ್ಬಲಗೊಳಿಸ ಬೇಕಾಗಿರುವುದು ಅತೀ ಅಗತ್ಯ. ಇಂದು ಜ್ಯೋತಿಷ್ಯ, ವಾಸ್ತು, ಪವಾಡಗಳ ಹೆಸರಿನಲ್ಲಿ ಮಾಧ್ಯಮಗಳ ಮೂಲಕ ಪುರೋಹಿತಶಾಹಿ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಆಧುನಿಕ ದೇಶದ ನಿರ್ಮಾಣಕ್ಕೆ ಬಹಳ ದೊಡ್ಡ ಅಡ್ಡಿಯಾಗಿದೆ.

ಇತ್ತೀಚಿಗೆ ಒಂದು ಟಿವಿ ವಾಹಿನಿಯ ಜ್ಯೋತಿಷ್ಯ ಸಲಹೆ ಕಾರ್ಯಕ್ರಮದಲ್ಲಿ ಒಬ್ಬ ರೈತರು ತಾವು ಎಷ್ಟೇ ಪ್ರಯತ್ನಪಟ್ಟು ಬೆಳೆ ಬೆಳೆದರೂ ಸೂಕ್ತ ಉತ್ಪನ್ನ ಬರುತ್ತಿಲ್ಲ ಎಂದು ಅದನ್ನು ಸರಿಪಡಿಸಲು ತನ್ನ ಜನ್ಮ ದಿನಾಂಕ ಹಾಗೂ ಹುಟ್ಟಿದ ವೇಳೆಯನ್ನು ತಿಳಿಸಿ ಸೂಕ್ತ ಸಲಹೆಯನ್ನು ಕೇಳಿದರು. ಅದಕ್ಕೆ ಪಂಡಿತರು ಎಂದು ಕರೆಯಲ್ಪಡುವ ಜ್ಯೋತಿಷಿಗಳು ನೀವು ಎಷ್ಟೇ ಪ್ರಯತ್ನ ಪಟ್ಟರೂ ಬೆಳೆ ಚೆನ್ನಾಗಿ ಬರದೆ ಇರಲು ನಿಮ್ಮಲ್ಲಿ ಇರುವ idiotic-brahmandaದೋಷ ಹಾಗೂ ದೇಶದ ಆಳುವವರ ದೋಷ ಎರಡೂ ಕಾರಣ. ಇದರಲ್ಲಿ ನಿಮ್ಮ ದೋಷವನ್ನು ಸರಿಪಡಿಸಲು ಭೂವರಾಹ ಪೂಜೆ ಮಾಡಿಸಿ ಎಂದು ಸಲಹೆ ಕೊಟ್ಟರು. ವಾಸ್ತವವಾಗಿ ಇಲ್ಲಿ ಪ್ರಶ್ನೆ ಕೇಳಿದ ರೈತನಿಗೆ ಅನುಭವೀ ಪ್ರಗತಿಪರ ಕೃಷಿಕರಿಗೆ ತನ್ನ ಭೂಮಿಯನ್ನು ತೋರಿಸಿ ಬೆಳೆ ಬರದೆ ಇರಲು ಇರಬಹುದಾದ ಕಾರಣಗಳನ್ನು ತಿಳಿದುಕೊಂಡು ಅವರಿಂದ ಸಲಹೆ ಪಡೆಯಲು ತಿಳಿಸುವುದು ಸೂಕ್ತವಾಗುತ್ತಿತ್ತು ಅಥವಾ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಕೊರತೆಯನ್ನು ಸರಿಪಡಿಸಲು ಕೃಷಿ/ತೋಟಗಾರಿಕೆ ತಜ್ಞರಿಂದ ಮಾಹಿತಿ ಪಡೆಯಲು ತಿಳಿಸುವುದು ವೈಜ್ಞಾನಿಕ ಸಲಹೆಯಾಗುತ್ತಿತ್ತು. ಅಂಥ ಸಲಹೆ ಕೊಡದೆ ಭೂವರಾಹ ಪೂಜೆ ಮಾಡಿದರೆ ರೈತನ ಕೃಷಿ ವಿಧಾನದಲ್ಲಿರುವ ನ್ಯೂನತೆ ಅಥವಾ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಕೊರತೆ ನೀಗುತ್ತದೆಯೇ? ಇಂಥ ಸಲಹೆ ಕೊಡುವುದರಿಂದ ಪುರೋಹಿತಶಾಹಿಗಳ ವ್ಯಾಪಾರ ಹೆಚ್ಚಿ ಅವರಿಗೆ ಹೆಚ್ಚಿನ ಲಾಭ ಆಗಬಹುದೇ ಹೊರತು ಕೃಷಿಕನಿಗೆ ಮೂರು ಕಾಸಿನ ಪ್ರಯೋಜನವೂ ಆಗಲಿಕ್ಕಿಲ್ಲ ಬದಲಿಗೆ ಪೂಜೆ ಪುನಸ್ಕಾರ ಎಂದು ಹೆಚ್ಚಿನ ಹಣ ಕೈಬಿಡಬಹುದು ಅಷ್ಟೇ. ಮಾಧ್ಯಮಗಳು ಅಮಾಯಕ ಜನರಿಗೆ ಯಾವ ರೀತಿ ಜ್ಯೋತಿಷ್ಯದ ಹೆಸರಿನಲ್ಲಿ ಮೋಸ ಮಾಡುತ್ತಿವೆ ಎಂಬುದಕ್ಕೆ ಇದು ಒಂದು ಉದಾಹರಣೆ. ಟಿವಿ ಮಾಧ್ಯಮ ಇಂದು ಮೂಢ ನಂಬಿಕೆಗಳನ್ನು ಮಾರುವ ಜ್ಯೋತಿಷಿಗಳಿಗೆ, ವಾಸ್ತು ಹೆಸರಿನಲ್ಲಿ ವ್ಯಾಪಾರ ನಡೆಸಿ ಹಣ ದೋಚುವ ಕಪಟಿಗಳಿಗೆ ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವುದು ದೇಶದ ಹಿತದೃಷ್ಟಿಯಿಂದ ಅತೀ ಅಗತ್ಯವಾಗಿದೆ.

ಇತ್ತೀಚಿಗೆ ಮಾಜಿ ಪ್ರಧಾನಿ ಗೌಡರು ನಾನು ನಾಸ್ತಿಕರ ಬಗ್ಗೆ ಮಾತಾಡುವುದಿಲ್ಲ , ಅವರಿಗೆ ಹೇಳಿ ಪ್ರಯೋಜನ ಇಲ್ಲ ಎಂದು ನಾಸ್ತಿಕರು ಎಂದರೆ ಕೀಳು, ನಾಸ್ತಿಕತೆ ಎಂದರೆ ಅಪರಾಧ ಎಂಬ ಅರ್ಥವನ್ನು ಧ್ವನಿಸುವ ರೀತಿಯಲ್ಲಿ ಹೇಳಿದ್ದಾರೆ. ಗೌಡರ ಈ ಅಭಿಪ್ರಾಯ ಒಪ್ಪತಕ್ಕದ್ದಲ್ಲ. 12Fir16.qxpನಾಸ್ತಿಕರು ಅಪರಾಧಿಗಳೇನೂ ಅಲ್ಲ. ದೇವರನ್ನು ನಂಬದವರು ಕೀಳೇನೂ ಅಲ್ಲ. ದೇವರನ್ನು ನಂಬದೆ ವಾಸ್ತವವನ್ನು ಎದುರಿಸಿ ಬದುಕುವ ನಾಸ್ತಿಕರಾಗಲು ಹೆಚ್ಚಿನ ಮನೋಸ್ಥೈರ್ಯ ಬೇಕಾಗುತ್ತದೆ. ಹೀಗಾಗಿ ನಾಸ್ತಿಕರನ್ನು ಕೀಳಾಗಿ ಕಾಣುವುದು ಸಮಂಜಸವಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ವಾಸ್ತವವನ್ನು ಎದುರಿಸಿ ಯಾವುದೇ ನಂಬಿಕೆಗಳಿಗೆ ಜೋತು ಬೀಳದೆ ವೈಚಾರಿಕತೆಯಿಂದ ಸಮಸ್ಯೆಯನ್ನು ಎದುರಿಸುವ ನಾಸ್ತಿಕರ ಸಂಖ್ಯೆ ಬೆಳೆಸುವುದು ಅಗತ್ಯ ಕೂಡ ಹೌದು. ರಾಜ್ಯದಲ್ಲಿ ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತರುವ ಪ್ರಗತಿಪರ ಹೆಜ್ಜೆಗೆ ವಿರೋಧ ಪಕ್ಷಗಳು ಅನಗತ್ಯವಾಗಿ ಜನರನ್ನು ಕೆರಳಿಸುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿರುವುದು ಸಮಂಜಸವಲ್ಲ. ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ತಂದರೆ ಜನರ ನಂಬಿಕೆಗೆ ಯಾವ ರೀತಿಯಲ್ಲಿಯೂ ತೊಂದರೆ ಆಗಲಾರದು. ದೇವರನ್ನು ನಂಬಲು ಎಲ್ಲರೂ ಸ್ವತಂತ್ರರು. ನಂಬಿಕೆಗಳ ಹೆಸರಿನಲ್ಲಿ ಜ್ಯೋತಿಷ್ಯ, ವಾಸ್ತುವಿನಂಥ ಅವೈಚಾರಿಕ ಆಚರಣೆಗಳು ಮಾನವನನ್ನು ದುರ್ಬಲನನ್ನಾಗಿ ಮಾಡುತ್ತವೆ. ದೇವರನ್ನು ನಂಬಿ ಯಾವುದೇ ಕೆಲಸ ಮಾಡುವುದು ದುರ್ಬಲ ಮನಸ್ಸಿಗೆ ಧೈರ್ಯ ತುಂಬಲು ಧಾರಾಳ ಸಾಕಾಗಿರುವಾಗ ಜ್ಯೋತಿಷ್ಯ, ವಾಸ್ತುವಿನಂಥ ಅವೈಜ್ಞಾನಿಕ ಅಂಶಗಳನ್ನು ಟಿವಿ ಮಾಧ್ಯಮದಲ್ಲಿ ವೈಭವೀಕರಿಸಿ ಜನರನ್ನು ಅವುಗಳಿಗೆ ದಾಸರನ್ನಾಗಿ ಮಾಡುವುದು ದೇಶ ಹಿತದೃಷ್ಟಿಯಿಂದ ಮಾರಕ. ಹೀಗಾಗಿ ನೀಲಿ ಚಿತ್ರಗಳ ಪ್ರಸಾರವನ್ನು tv-mediaಯಾವ ರೀತಿಯಲ್ಲಿ ಟಿವಿ ಮಾಧ್ಯಮದಲ್ಲಿ ದೇಶದ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆಯೋ ಅದೇ ರೀತಿ ಜ್ಯೋತಿಷ್ಯ, ವಾಸ್ತುವಿನಂಥ ದೌರ್ಬಲ್ಯ ಅಥವಾ ಗೀಳನ್ನು ಜನರಲ್ಲಿ ಬೆಳೆಸುವುದನ್ನು ತಡೆಯಲು ಟಿವಿ ಮಾಧ್ಯಮದಲ್ಲಿ ಜ್ಯೋತಿಷ್ಯ, ವಾಸ್ತು ಸಂಬಂಧಿ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಕಾನೂನಿನ ಮೂಲಕ ನಿಷೇಧಿಸಬೇಕಾದ ಅಗತ್ಯ ಇದೆ. ಇವುಗಳಲ್ಲಿ ಶ್ರದ್ಧೆ ಇರುವವರು ಖಾಸಗಿಯಾಗಿ ಹೋಗಿ ಸಂಬಂಧಪಟ್ಟ ಜ್ಯೋತಿಷಿಗಳನ್ನು ಕಂಡು ಮಾತಾಡಿದರೆ ಸಾಕು. ಇವುಗಳನ್ನು ಸಾರ್ವಜನಿಕವಾಗಿ ಟಿವಿ ಮಾಧ್ಯಮದಲ್ಲಿ ಬಿತ್ತರಿಸಿ ಅಮಾಯಕ ಜನರಲ್ಲಿ ಗೀಳನ್ನು ಬೆಳೆಸಬೇಕಾದ ಅಗತ್ಯವಿಲ್ಲ.