ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದಿಗಳೇ ತುಂಬಿದ್ದಾರೆಯೆ?


– ರವಿ ಕೃಷ್ಣಾರೆಡ್ದಿ


 

ಹಾಸನದಲ್ಲಿ ಕಳೆದ ವಾರಾಂತ್ಯ ನಡೆದ “ನಾವು ನಮ್ಮಲ್ಲಿ”ಯ “ಅಭಿವ್ಯಕ್ತಿ ಕರ್ನಾಟಕ” ಕಾರ್ಯಕ್ರಮದಲ್ಲಿ ನಮ್ಮ ವರ್ತಮಾನ.ಕಾಮ್ ಬಳಗದ ಲೇಖಕರಲ್ಲೊಬ್ಬರಾದ ತೇಜ ಸಚಿನ್ ಪೂಜಾರಿಯವರು “ಅಭಿವ್ಯಕ್ತಿಯ ಬಹುರೂಪಿ ನೆಲೆ ಮತ್ತು ಅಭಿವ್ಯಕ್ತಿಯ ಆತಂಕಗಳು” ಗೋಷ್ಠಿಯಲ್ಲಿ “ಸಾಮಾಜಿಕ ಜಾಲತಾಣ” ವಿಷಯವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. sachin-teja-poojariಅವರ ಮಾತಿನ ನಂತರ ನಡೆದ ಸಂವಾದದಲ್ಲಿ ಅಲ್ಲಿ ಭಾಗವಹಿಸಿದ್ದ ಹಲವು ಸ್ನೇಹಿತರು “ಇವತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆಯನ್ನೇ ತುಂಬಿಕೊಂಡಿರುವ ಕೋಮುವಾದಿ ಚಿಂತನೆಯ ಜನರೇ ತುಂಬಿಕೊಂಡಿದ್ದಾರೆ. ನಾವು ಅವರಿಗೆ ಅಪಥ್ಯವಾದದ್ದೇನಾದರೂ ಬರೆದರೆ ಹಾಗೆಯೇ ಮುಗಿದು ಬೀಳುತ್ತಾರೆ. ನಮ್ಮಂತಹ ವಿಚಾರಧಾರೆಯ ಜನರ ಅಭಿಪ್ರಾಯಗಳಿಗೆ ಅಸಹ್ಯಕಾರಿಯಾಗಿ ವಾಗ್ದಾಳಿ ಮಾಡುತ್ತಾರೆ,” ಎಂದು ಆತಂಕದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇವರ ಅಭಿಪ್ರಾಯಕ್ಕೆ ನಾನು ನನ್ನ ಅನುಭವದ ಹಿನ್ನೆಲೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕನ್ನಡದ ಅಂತರ್ಜಾಲ ಜಗತ್ತು ಹೇಗಿತ್ತು ಮತ್ತು ಈಗ ಹೇಗಿದೆ ಎಂದು ಮಾತನಾಡುತ್ತ 2008 ರಲ್ಲಿ ನಾನು ನನ್ನ “ಅಮೆರಿಕದಿಂದ ರವಿ” ಬ್ಲಾಗಿನಲ್ಲಿ ಬರೆದಿದ್ದ “ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ…” ಲೇಖನವನ್ನು ನೆನಪಿಸಿ ಮಾತನಾಡಿದೆ.

ಇಂದು ಕನ್ನಡದ ಅಂತರ್ಜಾಲ ಜಗತ್ತು ಒಂದಷ್ಟು ಮಟ್ಟಿಗಾದರೂ ನಿಜ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಆದರೆ ಐದಾರು ವರ್ಷಗಳ ಹಿಂದಿನ ತನಕವೂ ಹಾಗೆ ಇರಲಿಲ್ಲ. ಸುಮಾರು 2007 ರ ನಂತರ ಈ ವಾತಾವರಣ ಬದಲಾಗುತ್ತ ಹೋಯಿತು. ಆ ಸಂದರ್ಭದಲ್ಲಿ ಅದನ್ನು ಗಮನಿಸಿ ಈ ಸ್ಥಿತ್ಯಂತರವನ್ನು ದಾಖಲಿಸಬೇಕು ಎಂದು ನಾನು ಈ ಲೇಖನ ಬರೆದಿದ್ದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕೋಮುವಾದಿ ಮತ್ತು ಜಾತಿವಾದಿಗಳಲ್ಲದ ಅನೇಕ ಪ್ರಗತಿಪರರು ಇಂದು ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಒಬ್ಬಂಟಿಗಳಲ್ಲ. ಬಹುಸಂಖ್ಯಾತರಲ್ಲದಿರಬಹುದು, ಆದರೆ ಕನ್ನಡ ಅಂತರ್ಜಾಲ ಲೋಕದಲ್ಲಿ ಹೆಚ್ಚಿಗೆ ಬರೆಯುತ್ತಿರುವವರು ಮತ್ತು ಸಕ್ರಿಯರಾಗಿರುವವರು ಅವರೇ. ಫೇಸ್‌ಬುಕ್‌ನಲ್ಲಿ ಅವರು ಕಾಮೆಂಟ್ ಹಾಕುವುದೊ, ಚರ್ಚೆ-ಸಂವಾದ ಮಾಡುವುದೋ, ಕಮ್ಮಿ ಇರಬಹುದು. ಆದರೆ ನಿಜವಾದ ಕಂಟೆಟ್ ಏರಿಸುತ್ತಿರುವವರಲ್ಲಿ ಅವರು ಮುಂಚೂಣಿಯಲ್ಲಿಯೇ ಇದ್ದಾರೆ.

ಹಾಗಾಗಿ, ನಮ್ಮ ಪ್ರಗತಿಪರ, ಜಾತ್ಯತೀತ, ಪ್ರಜಾಪ್ರಭುತ್ವವಾದಿ ಯುವಮಿತ್ರರಿಗೆ ನಾನು ಹೇಳುವುದೇನೆಂದರೆ, ಕಾಲ ಬದಲಾಗಿದೆ. ಜೋರು ಅಥವ ಒರಟು ಅಥವ ಅಸಹ್ಯ ಮಾತುಗಳಿಗೆ ಬೇಸರಿಸಿಕೊಂಡು ಇಲ್ಲಿ ಅವರೇ ಇದ್ದಾರೆ ಎಂದುಕೊಳ್ಳುವುದು ಬೇಡ. ಇನ್ನಷ್ಟು ಎಚ್ಚರಿಕೆಯಿಂದ, ಸಂಯಮದಿಂದ, ಸಕ್ರಿಯವಾಗಿ, ಪ್ರಾಮಾಣಿಕವಾಗಿ ನಿಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತ ಹೋಗಿ. ನೀವು ಒಬ್ಬಂಟಿಗಳಲ್ಲ. ಹಾಗೆಯೇ, ನೀವು ಬಹುಸಂಖ್ಯಾತರಾಗುವ ಸಮಯ ಬಂದಾಗ ಇಂದು ನೀವು ಯಾರನ್ನು ವಿಮರ್ಶಿಸುತ್ತಿದ್ದೀರೋ ಅವರಂತೆಯೇ ಅಹಂಕಾರ ಮತ್ತು ಅಸಹನೆ ಬೆಳೆಸಿಕೊಳ್ಳದೆ ವಿವೇಕ ಮತ್ತು ಸಜ್ಜನಿಕೆಯಿಂದ ವರ್ತಿಸಿ. ಮನುಷ್ಯ ಹಲವು ಎಡರುತೊಡರುಗಳ ನಡುವೆಯೂ ಪ್ರತಿದಿನವೂ ಒಳ್ಳೆಯ ದಿನಗಳನ್ನು ಕಟ್ಟಿಕೊಳ್ಳುವುದರತ್ತ ನಡೆಯುತ್ತಿದ್ದಾನೆ. ಭವಿಷ್ಯ ನಾವು ಕಟ್ಟಿಕೊಳ್ಳುವ ರೀತಿಯಲ್ಲಿರುತ್ತದೆ.

ಅಕ್ಟೋಬರ್ 6, 2008 ರಲ್ಲಿ ಬರೆದಿದ್ದ ಆ ಲೇಖನವನ್ನು ಪೂರಕ ಓದಿಗೆ ಇಲ್ಲಿ ಒದಗಿಸಲಾಗುತ್ತಿದೆ.

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ…

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು (ಜಾತಿವಾದಿಗಳೂ ಇದರಲ್ಲೆ ಬರುತ್ತಾರೆ) ಮತ್ತು ತಮ್ಮ ಗತಕಾಲದ ಹಿರಿಮೆಯ ಬಗ್ಗೆ (!) ನಾಸ್ಟಾಲ್ಜಿಕ್ ಆಗಿ ಬರೆಯುವ, ಅಂತಹುದನ್ನೆ ಓದುವವರು. ನಾನು ಬರೆಯಲು ಆರಂಭಿಸಿದ ದಿನಗಳಲ್ಲಂತೂ ಇದು ಎದ್ದು ಕಾಣುವ ಹಾಗೆ ಇತ್ತು. ಸಂಸ್ಕೃತಿ, ದೇಶ, ಜಾತಿ, ಮತ, ಮುಂತಾದವುಗಳ ಪರ ಭಾವಾವೇಶದಿಂದ ಬರೆಯುವವರೆ ಅಂತರ್ಜಾಲದಲ್ಲಿ ತುಂಬಿದ್ದ ಸಮಯ ಅದು. ಆ ಸಮಯದಲ್ಲಿ ಇವುಗಳಿಗೆ ಭಿನ್ನವಾಗಿ (ಸಂಕುಚಿತ ಭಾವನೆಗಳನ್ನು ವಿಮರ್ಶಿಸಿ) ಬರೆಯುವವರು ಬೆರಳೆಣಿಕೆ ಮಂದಿ ಮಾತ್ರ ಇದ್ದರು. ಈ “ಜನಪ್ರಿಯ ಸಿದ್ಧಮಾದರಿ”ಗಳಿಗಿಂತ ಬೇರೆಯದಾಗಿ ಬರೆಯಲಾರಂಭಿಸಿದ್ದ ನನಗೆ ಆ ಸಮಯದಲ್ಲಿ ಸಮಾನಮನಸ್ಕರು ಬಹಳ ಕಮ್ಮಿ ಇದ್ದರು. (ಆದರೆ, ಕನ್ನಡ ಬರಹಲೋಕ ಹಾಗೆ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೂ ಮತ್ತು ಅಂತರ್ಜಾಲದಲ್ಲಿನ ಕನ್ನಡಲೋಕಕ್ಕೂ ಅಪಾರವಾದ ವ್ಯತ್ಯಾಸಗಳಿದ್ದವು. ಕನ್ನಡ ಅಂತರ್ಜಾಲ ಲೋಕ ಕನ್ನಡದ ಚಿಂತನಾಲೋಕದ ಪ್ರತಿಬಿಂಬ ಆಗಿರಲಿಲ್ಲ ಆಗ.)

ಆಗೆಲ್ಲ ನನ್ನಲ್ಲಿ, ಈ ಪರಿಸ್ಥಿತಿ ಯಾವಾಗ ಬದಲಾಗುತ್ತದೆ, ಕನ್ನಡದ ಅಂತರ್ಜಾಲವೂ ನಿಜವಾದ ಕನ್ನಡ-ಪ್ರಪಂಚವನ್ನು ಪ್ರತಿಬಿಂಬಿಸುವುದು ಯಾವಾಗ ಎನ್ನುವ ಪ್ರಶ್ನೆಗಳು ಹುಟ್ಟುತ್ತಿದ್ದವು. ಆ ಪ್ರಶ್ನೆಗಳಿಗೆ ಮೇಲೆ ಹೇಳಿದ ವಿಶ್ವಾಸ ಉತ್ತರವಾಗುತ್ತಿತ್ತು. ಈ ಆರ್ಥಿಕ ಪ್ರಗತಿ ಕೊನೆಗೆ ಎಲ್ಲಾ ವರ್ಗಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಇಳಿಯಲೇಬೇಕು (ಇಲ್ಲಿ ನೋಡಿ), ಒಟ್ಟಾರೆ ಅದು ನಿಧಾನವಾಗಿ ಎಲ್ಲರನ್ನೂ ಮೇಲಕ್ಕೆತ್ತುತ್ತದೆ (ಇಲ್ಲಿ ನೋಡಿ), ಆಗ ಅದು ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತದೆ, ಎನ್ನುವ ಆಶಾವಾದ ಅದು.

ಬಹುಶಃ ಒಂದು-ಎರಡು ವರ್ಷಗಳಿಂದ ನನ್ನ ಆಶಾವಾದ ವಾಸ್ತವವಾಗುತ್ತಿರುವುದನ್ನು ನೋಡುತ್ತಿದ್ದೇನೆ. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕನ್ನಡ ಸಾಹಿತಿಗಳಿಗೆ (ಅದರಲ್ಲೂ ಪ್ರಗತಿಪರರೆಂದುಕೊಳ್ಳುವವರಿಗೆ) ’ಇಂಟರ್‍ನೆಟ್ ನೋಡುವುದಿಲ್ಲ, ಇಮೇಲ್ ಗೊತ್ತಿಲ್ಲ,’ ಎನ್ನುವುದು ಬಹಳ ಹೆಮ್ಮೆಯ ವಿಷಯವಾದಂತಿತ್ತು. ತಾವು ಬಡವರ, ದುರ್ಬಲರ, ದಲಿತರ, ಹಿಂದುಳಿದವರ ಪರ ಇದ್ದೇವೆ ಎಂದು ತೋರಿಸಿಕೊಳ್ಳಲು ತಮಗೆ ತಾವೆ ಮಾಡಿಕೊಳ್ಳುವ ಆತ್ಮದ್ರೋಹದಂತೆ ನನಗದು ಕಾಣಿಸುತ್ತಿತ್ತು. ಆದರೆ ಯಾವಾಗ ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್ affordable ಆಗುತ್ತಾ ಬಂತು, ಅವರಿಗೂ ಇದರಿಂದ ಆಚೆ ಉಳಿಯಲಾಗಲಿಲ್ಲ, ಆಗುತ್ತಿಲ್ಲ. ಅದರಲ್ಲೂ ವಿಭಿನ್ನ ಹಿನ್ನೆಲೆಯ ಯುವಕರು ಶಿಕ್ಷಣ ಮತ್ತು ನೌಕರಿಯ ಸಾಧ್ಯತೆಗಳಿಂದಾಗಿ ದಿನವೂ ಕಂಪ್ಯೂಟರ್‌ನೊಂದಿಗೇ ಕೆಲಸ ಮಾಡುವಂತಹ ಪರಿಸ್ಥಿತಿ ಉಂಟಾದುದರಿಂದ ಒಂದು ಬಹುದೊಡ್ಡ, ಬಹುಸಂಖ್ಯಾತ ಜನಸಮೂಹವೆ ಇವತ್ತು ಕಂಪ್ಯೂಟರ್‌ಗೆ ತೆರೆದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕನ್ನಡ ವೆಬ್‌ಲೋಕ ಬದಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಕು, ಇದು ಸ್ಪಷ್ಟವಾಗಿ ಕಾಣಿಸುತ್ತದೆ.

ಯಾವಾಗ ಬ್ಲಾಗುಗಳನ್ನು ಮಾಡಿಕೊಳ್ಳುವುದು ಮುಕ್ತವೂ, ಉಚಿತವೂ, ಸುಲಭವೂ ಆಯಿತೊ ಅಲ್ಲಿಂದೀಚೆಗೆ ನಾನಾ ಹಿನ್ನೆಲೆಯ ಜನ ಕನ್ನಡ ಅಂತರ್ಜಾಲ ಲೋಕಕ್ಕೆ ಅಡಿಯಿಟ್ಟಿದ್ದಾರೆ. ಮೊದಮೊದಲು ಇಲ್ಲಿಯೂ ಕೋಮುವಾದ ಅಥವ ಮತೀಯ ಬಲಪಂಥೀಯತೆಗೆ ಹತ್ತಿರ ಇರುವವರೆ ಹೆಚ್ಚಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತಿದೆ. ನಿಜವಾದ ಕನ್ನಡ ಪ್ರಪಂಚ ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತಿದೆ.

ಇದಕ್ಕೆ ಪೂರಕವಾಗಿ ಕೆಲವು ಬ್ಲಾಗುಗಳನ್ನು, ವೆಬ್‌ಸೈಟುಗಳನ್ನು ಉದಾಹರಿಸುತ್ತೇನೆ. ಅಬ್ದುಲ್ ರಷೀದರ “ಕೆಂಡಸಂಪಿಗೆ” ಕನ್ನಡದ ಅಂತರ್ಜಾಲ ಲೋಕಕ್ಕೆ ಪರಿಚಯ ಇಲ್ಲದಿದ್ದವರನ್ನೆಲ್ಲ (ಆದರೆ ಕನ್ನಡದ ಅತಿ ಪ್ರಮುಖ ಬರಹಗಾರರು) ಪರಿಚಯಿಸುತ್ತಿದೆ. ಕುಂ.ವೀ. ಕೆಂಡಸಂಪಿಗೆಗೆಂದೇ ಅಂಕಣ ಬರೆಯುತ್ತಿದ್ದಾರೆ. ಅನಂತಮೂರ್ತಿಯವರೂ ಸಹ. ಇನ್ನು ಸ್ವತಃ ಅಬ್ದುಲ್ ರಷೀದ್, ದೇವನೂರು ಮಹಾದೇವ, ಮೊಗಳ್ಳಿ ಗಣೇಶ್‌ರ ಕತೆ-ಕಾದಂಬರಿಗಳೂ ಪ್ರಕಟವಾಗುತ್ತಿವೆ. ಕವಿ-ಪತ್ರಕರ್ತ ಜಿ.ಎನ್. ಮೋಹನ್ ನಡೆಸುತ್ತಾರೆ ಎನ್ನಲಾದ (ಎಲ್ಲೋ ಓದಿದ್ದು, ಅಧಿಕೃತವಾಗಿ ನನಗೆ ಗೊತ್ತಿಲ್ಲ) “ಅವಧಿ” ಬ್ಲಾಗಿನಲ್ಲೂ ಇಂತಹುದನ್ನೆ ನಾವು ನೋಡುತ್ತೇವೆ. ಡಾ. ನಟರಾಜ್ ಹುಳಿಯಾರ್ ಅಂತರ್ಜಾಲದ ಓದುಗರಿಗೆ ಪರಿಚಯವಾಗಿದ್ದು ಇದೇ ಬ್ಲಾಗಿನಿಂದ.

ಇನ್ನು ಸಂಪದದ ಬಗ್ಗೆ. ಯು.ಆರ್. ಅನಂತಮೂರ್ತಿಯವರ ಋಜುವಾತು ಬ್ಲಾಗಿನಿಂದ ಹಿಡಿದು, ಉದಯವಾಣಿಯ ಇಸ್ಮಾಯಿಲ್‌ರ “ಬರೆವ ಬದುಕಿನ ತಲ್ಲಣ“, ಡಿ.ಎಸ್. ನಾಗಭೂಷಣರ “ನಾಗ ಸಂಪದ“, ಡಾ. ಕಕ್ಕಿಲಾಯರ “ಆರೋಗ್ಯ ಸಂಪದ“, ಇನ್ನೂ ಹಲವಾರು ಬರಹಗಾರರಿಂದ ವೈವಿಧ್ಯಗೊಳ್ಳುತ್ತಿರುವ ತಾಣ, ಸಂಪದ.

ಇವೆಲ್ಲದರ ನಡುವೆ, “ಪಂಚ-ಪಾಂಡವ”ರಿಂದ ನಡೆಸಲ್ಪಡುತ್ತದೆ ಎಂದು ಹೇಳಿಕೊಳ್ಳುವ ಇತ್ತೀಚಿನ “ಸುದ್ದಿ ಮಾತು“, ದಿನೇಶ್ ಕುಮಾರ್‌ರ “ದೇಸಿ ಮಾತು“, ಮಂಜುನಾಥ ಸ್ವಾಮಿಯವರ “ಹಳ್ಳಿ ಕನ್ನಡ“, ಇತ್ಯಾದಿ ಬ್ಲಾಗುಗಳು ಕೋಮುವಾದ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಮಾತನಾಡುವವರು ಅಂತರ್ಜಾಲದಲ್ಲಿ ಜಾಸ್ತಿಯಾಗುತ್ತಿರುವುದಕ್ಕೆ ನಿದರ್ಶನಗಳು. ಕೇವಲ ಎರಡು-ಮೂರು ವರ್ಷಗಳ ಹಿಂದೆ ಇಂತಹ ಕನ್ನಡ ಬರಹಗಳು ಮತ್ತು ಅಭಿಪ್ರಾಯಗಳು ಅಪರೂಪವಾಗಿದ್ದದ್ದನ್ನು ಸದ್ಯದ ಸ್ಥಿತಿಗೆ ಹೋಲಿಸಿಕೊಂಡರೆ ಬದಲಾವಣೆಯ ವೇಗವನ್ನೂ, Digital divide ಕುಗ್ಗಿದ್ದನ್ನೂ ಊಹಿಸಬಹುದು.

ನನ್ನ ಹಿಂದಿನ “ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ…” ಲೇಖನದಲ್ಲಿ ಬರೆದಂತೆ, ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಬದಲಾಗುತ್ತಿರುವ ಕನ್ನಡ ಅಂತರ್ಜಾಲ ಲೋಕ ಮತ್ತು ಆ ಬದಲಾವಣೆಗಳ ಮೂಲಕಾರಣ ಅದಕ್ಕೆ ಒಂದಷ್ಟು ಸಮರ್ಥನೆ (ನಮ್ಮ ಪರಿಧಿಯಲ್ಲಿ) ಒದಗಿಸುತ್ತದೆ.

ಆದರೆ, ಸದ್ಯದ ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಅಲ್ಲೋಲಕಲ್ಲೋಲಗಳು ಈ ಪ್ರಗತಿಯ ದೀರ್ಘಕಾಲೀನತೆಯ ಬಗ್ಗೆಯೇ ಒಂದಷ್ಟು ಸಂಶಯಗಳನ್ನು ಹುಟ್ಟಿಸಲಾರಂಭಿಸಿದೆ. ನಮ್ಮ ಐಟಿ-ಕೇಂದ್ರಿತ ನೌಕರಿಗಳಲ್ಲಿರುವ ಯುವಜನಾಂಗ ನೌಕರಿ ಕಳೆದುಕೊಳ್ಳಲು ಆರಂಭಿಸಿದಾಗ (ಅದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ), ಅಥವ ಐಟಿ ನೌಕರಿಗಳು ಸುಲಭವಾಗಿ ಸಿಗದೆ ಹೋದಾಗ ಸಹ, ಈ ಡಿಜಿಟಲ್ ಡಿವೈಡ್ ಹೀಗೆಯೆ ಕುಗ್ಗಲಿ ಎನ್ನುವ ಆಶಾಭಾವನೆ ನನ್ನದು.

(ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿತಿಯ ಬಗ್ಗೆ ಬರೆದಿದ್ದರಿಂದ, ಆರೇಳು ವರ್ಷಗಳ ಹಿಂದೆಯೆ ಪರ್ಯಾಯ ಧ್ವನಿಯಾಗಿ ಮೂಡಿಬಂದ ಕನ್ನಡಸಾಹಿತ್ಯ.ಕಾಮ್‌ನ ಬಗ್ಗೆ ಬರೆಯಲು ಹೋಗಿಲ್ಲ. ಅದಕ್ಕೆ ಕನ್ನಡ ಅಂತರ್ಜಾಲ ಲೋಕದಲ್ಲಿ ಅದರದೆ ಆದ ಸ್ಥಾನ ಮತ್ತು ಇತಿಹಾಸವಿದೆ. ಬದಲಾಗುತ್ತಿರುವ ಸ್ಥಿತಿಯನ್ನು ಗುರುತಿಸುವುದಕ್ಕಾಗಿ ಮತ್ತು ದಾಖಲು ಮಾಡುವುದಕ್ಕಾಗಿ ಈ ಲೇಖನ ಬರೆದಿದ್ದೇನೆ.)

3 comments

  1. ತೇಜ ಸಚಿನ್ ಪೂಜಾರಿ ಅವರ ವಿಚಾರಗಳು ಇತರೆಲ್ಲ ವಿಚಾರಗಳಿಗಿಂತ ಮಹತ್ವದ್ದಾಗಿದ್ದವು…

  2. ಪ್ರಗತಿಪರ ಮೌಲ್ಯಗಳನ್ನು ಪ್ರತಿಪಾದಿಸುವ ಲಂಕೇಶ್ ಪತ್ರಿಕೆ ಮುಖ್ಯವಾಗಿ ಗೌರಿ ಲಂಕೇಶ್ ಪತ್ರಿಕೆ ಅಂತರ್ಜಾಲದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕಾದ ಅಗತ್ಯ ಇದೆ. ಲಂಕೇಶ್ ಪತ್ರಿಕೆಯ ನಂತರ ಆರಂಭವಾದ (9 ವರ್ಷಗಳ ಹಿಂದೆ ಆರಂಭವಾದ) ‘ಈ ಭಾನುವಾರ’ (ಮಹಾದೇವಪ್ರಕಾಶ್ ಸಂಪಾದಕತ್ವ ಹಾಗೂ ಪ್ರಕಟಣೆಯಲ್ಲಿ ಬರುವ) ಅಂತರ್ಜಾಲದಲ್ಲಿ ಸಿಗುತ್ತಿರುವಾಗ (bhanuvara.com) ಗೌರಿ ಲಂಕೇಶ್ ಪತ್ರಿಕೆ ಅಂತರ್ಜಾಲದಲ್ಲಿ ಸಿಗದೇ ಇರುವುದು ಒಳ್ಳೆಯದಲ್ಲ. ಅಂತರ್ಜಾಲದಲ್ಲಿ ಪ್ರಗತಿಪರ ಮೌಲ್ಯಗಳು ಬೆಳೆಯಬೇಕಾದರೆ ಗೌರಿ ಲಂಕೇಶ್ ಪತ್ರಿಕೆಯಂಥ ಪತ್ರಿಕೆಗಳು ಅಂತರ್ಜಾಲದಲ್ಲಿ ಸಿಗುವ ವ್ಯವಸ್ಥೆ ಆಗಬೇಕು. ಇದರಿಂದ ವಿಶ್ವಾದ್ಯಂತ ಕನ್ನಡಿಗರಲ್ಲಿ ಪ್ರಗತಿಪರ ಮೌಲ್ಯಗಳನ್ನು ಬೆಳೆಸಲು ಅನುಕೂಲವಾಗಲಿದೆ. ಕನ್ನಡದಲ್ಲಿ ಪ್ರಗತಿಪರ ಮೌಲ್ಯಗಳಿಗೆ ಪ್ರಥಮವಾಗಿ ದೊಡ್ಡ ಧ್ವನಿಯನ್ನು ನೀಡಿದ ಲಂಕೇಶರ ಪತ್ರಿಕೆಯ ಇಂದಿನ ಪೀಳಿಗೆ ಪತ್ರಿಕೆಯನ್ನು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡುವುದು ಅಪೇಕ್ಷಣೀಯ.

Leave a Reply

Your email address will not be published.