ದೆಹಲಿಯಲ್ಲಿ ಮೌಲ್ಯಾಧಾರಿತ ರಾಜಕೀಯದ ಸತ್ವಪರೀಕ್ಷೆ

– ಆನಂದ ಪ್ರಸಾದ್

ದೆಹಲಿಯಲ್ಲಿ ಡಿಸೆಂಬರ್ 4 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೌಲ್ಯಾಧಾರಿತ ರಾಜಕೀಯಕ್ಕಾಗಿ ಜನ್ಮ ತಳೆದ ಆಮ್ ಆದ್ಮಿ ಪಕ್ಷವು ಮೊದಲನೆಯ ಬಾರಿಗೆ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೂ ಸ್ಪರ್ಧಿಸುತ್ತಿದೆ. ಬಲಿಷ್ಠ ಲೋಕಪಾಲ್ ಮಸೂದೆಯ ಜಾರಿಗೆ ಆಂದೋಲನ ನಡೆಸಿದ ಅಣ್ಣಾ ಅವರ ಹೋರಾಟದ ತಂಡದಲ್ಲಿ ಪ್ರಧಾನ ಆಧಾರಸ್ಥಂಭವಾಗಿದ್ದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ AAP-manifesto-PTIಮೊದಲಾದವರು ಅಂದೋಲನದ ಮೂಲಕ ನಡೆಸಿದ ಭ್ರಷ್ಟಾಚಾರ ವಿರೋಧಿ ಹೋರಾಟ ಗುರಿ ತಲುಪಲು ವಿಫಲವಾದಾಗ ಹಾಗೂ ಸರ್ಕಾರವು ಹೋರಾಟಕ್ಕೆ ಸಮರ್ಪಕವಾಗಿ ಸ್ಪಂದಿಸದೇ ಇರುವ ಕಾರಣ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡು ಆಮ್ ಆದ್ಮಿ ಪಕ್ಷವನ್ನು ಕಟ್ಟಿದ್ದು ಅದು ಈಗ ಪ್ರಥಮ ಹೆಜ್ಜೆಯಾಗಿ ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಈ ಪಕ್ಷವು ಬಹಳ ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿ ಜನರಿಂದಲೇ ಚುನಾವಣೆಗೆ ಸ್ಪರ್ಧಿಸಲು ಬೇಕಾಗುವ ಹಣವನ್ನು ಪಾರದರ್ಶಕವಾಗಿ ಪಡೆದುಕೊಂಡಿದೆ. ಚುನಾವಣಾ ವೆಚ್ಚ ಹಾಗೂ ಪಕ್ಷ ಕಟ್ಟುವ ವೆಚ್ಚವಾಗಿ 20 ಕೋಟಿ ರೂಪಾಯಿಗಳನ್ನು ಜನರ ದೇಣಿಗೆಯಿಂದಲೇ ಸಂಗ್ರಹಿಸುವ ಗುರಿಯನ್ನು ಪಕ್ಷ ಹಾಕಿಕೊಂಡಿತ್ತು. ಈ ಗುರಿಯನ್ನು ಪಕ್ಷವು ತಲುಪಿದ್ದು ಇದೀಗ ಪಕ್ಷವು ಹಣಸಂಗ್ರಹವನ್ನು ನಿಲ್ಲಿಸಿದೆ. ಪಕ್ಷವು ಪಡೆದ ಹಣದಲ್ಲಿ 14 ಕೋಟಿ ರೂಪಾಯಿ ಭಾರತದ ವಿವಿಧ ಭಾಗಗಳ ಜನರು ನೀಡಿದ್ದರೆ 2.17 ಕೋಟಿ ರೂಪಾಯಿ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹಾಂಗ್‌ಕಾಂಗ್ ಅನಿವಾಸಿ ಭಾರತೀಯರು 1. 1 4 ಕೋಟಿ, ಯುನೈಟೆಡ್ ಅರಬ್ ಎಮಿರೇಟ್ಸ್ ಅನಿವಾಸಿ ಭಾರತೀಯರು 62 ಲಕ್ಷ, ಸಿಂಗಾಪುರದ ಅನಿವಾಸಿ ಭಾರತೀಯರು 58 ಲಕ್ಷ, ಇಂಗ್ಲೆಂಡ್ ಅನಿವಾಸಿ ಭಾರತೀಯರು 38 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದು ಈ ಎಲ್ಲ ವಿವರಗಳನ್ನೂ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಇದು ಭಾರತದಲ್ಲಿ ಇದುವರೆಗೆ ನಡೆದ ಅತ್ಯಂತ ಪಾರದರ್ಶಕವಾದ ಪಕ್ಷಕ್ಕೆ ನಿಧಿ ಜನರಿಂದಲೇ ಪಡೆದಿರುವ ನೈತಿಕ ರಾಜಕೀಯದ ಹೆಜ್ಜೆಯಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಮಾಜವಾದಿ ಶಾಂತವೇರಿ ಗೋಪಾಲಗೌಡರಿಗೆ ಚುನಾವಣೆಗೆ ಸ್ಪರ್ಧಿಸಲು ಜನರೇ ಹಣ ನೀಡಿದ್ದರು. ಹೀಗಾಗಿಯೇ ಅವರು ಜನರ ಪರವಾಗಿ ವಿಧಾನಸಭೆಯಲ್ಲಿ ಪ್ರಬಲವಾಗಿ ಮತ್ತು ಜನಪರವಾಗಿ ಹೋರಾಡಲು ಸಾಧ್ಯವಾಯಿತು. kejriwal_aap_pti_rallyಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಜನರ ಪಾಲುದಾರಿಕೆ ಅತಿ ಮುಖ್ಯ. ಜನರಿಂದಲೇ ಯಾವುದೇ ಅನೈತಿಕ ಶರತ್ತುಗಳಿಲ್ಲದೆ ಒಂದು ಪಕ್ಷವು ಹಣ ಪಡೆದು ಸ್ಪರ್ಧಿಸಿ ಗೆದ್ದಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಆನೆಬಲ ಸಿಗುತ್ತದೆ. ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆದ ಹಣ , ವಿವಿಧ ಲಾಬಿಗಳ ಮೂಲಕ ರಾಜಕೀಯ ನಾಯಕರು ಪಡೆದ ಹಣ (ಉದಾಹರಣೆಗೆ ಅಬಕಾರಿ ಲಾಬಿ, ಗ್ರಾನೈಟ್ ಲಾಬಿ, ಅಕ್ರಮ ಗಣಿ ಲಾಬಿ, ಕ್ಯಾಪಿಟೇಶನ್ ಲಾಬಿ, ಸಕ್ಕರೆ ಕಾರ್ಖಾನೆಗಳ ಲಾಬಿ ಇತ್ಯಾದಿ) , ಅಧಿಕಾರಿಗಳು ಜನರಿಂದ ಲಂಚವಾಗಿ ಸುಲಿದ ಹಣದಲ್ಲಿ ರಾಜಕೀಯ ನಾಯಕರು ಪಾಲು ಪಡೆದು ಪಕ್ಷದ ವೆಚ್ಚ ಭರಿಸುವ ಹಣ ಮೊದಲಾದ ಅನೈತಿಕ ಮಾರ್ಗಗಳಿಂದ ಪಡೆದ ಹಣದ ಮೂಲಕ ರಾಜಕೀಯ ನಡೆಸುವ ಪಕ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷವು ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದೆಡೆಗೆ ಇಟ್ಟಿರುವ ಈ ಹೆಜ್ಜೆ ಅತ್ಯಂತ ಮಹತ್ವಪೂರ್ಣವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಳಷ್ಟು ಮೇಲ್ಮಟ್ಟಕ್ಕೆ ಎತ್ತುವ ಸಂಭವ ಸ್ಪಷ್ಟವಾಗಿ ಕಂಡುಬರುತ್ತದೆ.

ದೆಹಲಿ ವಿಧಾನಸಭಾ ಚುನಾವಣೆಗಳ ವಿವಿಧ ಚುನಾವಣಾಪೂರ್ವ ಸಮೀಕ್ಷೆಗಳು ವಿವಿಧ ರೀತಿಯ ಫಲಿತಾಂಶವನ್ನು ನೀಡಿವೆ. ಆಮ್ ಆದ್ಮಿ ಪಕ್ಷವು ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ Arvind_Kejriwal_party_launchಆಮ್ ಆದ್ಮಿ ಪಕ್ಷವು 32% ಮತಗಳನ್ನು ಪಡೆಯುವ ಸಾಧ್ಯತೆಯನ್ನು ಹೇಳಿದೆ. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 28% ಮತ ಪಡೆಯುವ ಸಂಭವ ಇದೆ. ಹಿಂದೂಸ್ತಾನ್ ಟೈಮ್ಸ್ – ಸಿ ಫೋರ್ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 20% ಮತಗಳನ್ನು ಪಡೆಯುವ ಸಂಭವವಿದೆ. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 16% ಮತಗಳನ್ನು ಪಡೆಯುವ ಸಂಭವವಿದೆ. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 15% ಮತಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇವುಗಳಲ್ಲಿ ಆಮ್ ಆದ್ಮಿ ಪಕ್ಷ -ಸಿಸ್ರೋ ಅಸೋಸಿಯೇಟ್ಸ್ ಜೊತೆಗೂಡಿ ನಡೆಸಿದ ಸಮೀಕ್ಷೆ ಹೆಚ್ಚು ವ್ಯಾಪಕ ಹಾಗೂ ವೈಜ್ಞಾನಿಕ ಸಮೀಕ್ಷೆಯಾಗಿದ್ದು ಖ್ಯಾತ ಚುನಾವಣಾ ವಿಶ್ಲೇಷಕ ಹಾಗೂ ಪಕ್ಷದ ಪ್ರಮುಖ ನೇತಾರರೂ ಆದ ಯೋಗೇಂದ್ರ ಯಾದವ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ನಡೆಸಿದ ಸಮೀಕ್ಷೆಯ ಸಂಪೂರ್ಣ ವಿವರವು ಆಮ್ ಆದ್ಮಿ ಪಕ್ಷದ ವೆಬ್ ಸೈಟಿನಲ್ಲಿ ಸಾರ್ವಜನಿಕರಿಗೆ ನೋಡಲು ಲಭ್ಯವಿದೆ. ಇವುಗಳಲ್ಲಿ ಕಡಿಮೆ ಪ್ರತಿಶತ ಮತ ಗಳಿಸಬಹುದಾದ 15% ಅನ್ನು ತೆಗೆದುಕೊಂಡರೂ ಪ್ರಥಮವಾಗಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಸಾಧನೆ ಉತ್ತಮವಾಗಿ ಮೂಡಿಬರುವ ಸಂಭವ ಇದೆ. ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ವಿಧಾನಸಭಾ ಸಂಖ್ಯೆಯ ಲೆಕ್ಕದಲ್ಲಿ ಹೇಳುವುದಾದರೆ ಇಂಡಿಯಾ ಟುಡೇ- ಒಆರ್ಜಿ ನವೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 6 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಪಕ್ಷವು 7 ಸ್ಥಾನಗಳನ್ನು ಗೆಲ್ಲಬಹುದು. ಇಂಡಿಯಾ ಟಿವಿ – ಸಿ ವೋಟರ್ – ಟೈಮ್ಸ್ ನೌ ಸೆಪ್ಟೆಂಬರಿನಲ್ಲಿ ನಡೆಸಿದ ಜಂಟಿ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 7ರಿಂದ 12 ಸ್ಥಾನ ಗೆಲ್ಲಬಹುದು. ಎಬಿಪಿ ನ್ಯೂಸ್ – ಏಸಿ ನೀಲ್ಸನ್ ಜಂಟಿಯಾಗಿ ಸೆಪ್ಟೆಂಬರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 18 ಸ್ಥಾನ ಗೆಲ್ಲಬಹುದು. ಸಿಎನ್ನೆನ್-ಐಬಿಎನ್, ದ ವೀಕ್ ಪತ್ರಿಕೆ, ಸಿಎಸ್ಡಿಎಸ್ ಜಂಟಿಯಾಗಿ ಅಕ್ಟೋಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷ 19ರಿಂದ 25 ಸ್ಥಾನ ಗೆಲ್ಲಬಹುದು. ಟೈಮ್ಸ್ ನೌ – ಸಿ ವೋಟರ್ ನವೆಂಬರಿನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಕ್ಷವು 18 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಆಮ್ ಆದ್ಮಿ-ಸಿಸ್ರೋ ಅಸೋಸಿಯೇಟ್ಸ್ ಕೈಗೊಂಡ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆಯನ್ನು ವೆಬ್‌ಸೈಟಿನಲ್ಲಿ ನಮೂದಿಸಿಲ್ಲ.

ಆಮ್ ಆದ್ಮಿ ಎಷ್ಟೇ ಮತ ಪ್ರತಿಶತ ಹಾಗೂ ಸ್ಥಾನಗಳನ್ನು ಪಡೆದರೂ ಅದು ಪ್ರಥಮವಾಗಿ ಸ್ಪರ್ಧಿಸುತ್ತಿರುವ ಕಾರಣ ಅದು ಉತ್ತಮ ಸಾಧನೆಯೇ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿ ಪಕ್ಷದ ನರೇಂದ್ರ ಮೋದಿಯ ಒಂದೊಂದು ರ್‍ಯಾಲಿಗೆ ಖರ್ಚು ಮಾಡುವ 15-20 ಕೋಟಿ ರೂಪಾಯಿ ಹಣದಲ್ಲಿ ಆಮ್ ಆದ್ಮಿ ಪಕ್ಷವು ಇಡೀ ದೆಹಲಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ ಎಂಬುದು ಬಹಳ ಮುಖ್ಯ ಅಂಶ. anna-kejriwalಅಣ್ಣಾ ಅವರಿಂದ ಬೇರ್ಪಟ್ಟು ಕೇಜ್ರೀವಾಲ್ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ತೆಗೆದುಕೊಂಡ ನಂತರ ಕೇಜ್ರೀವಾಲರನ್ನಾಗಲೀ, ಅವರ ನೂತನ ಪಕ್ಷವನ್ನಾಗಲೀ, ಅದು ಎತ್ತಿ ಹಿಡಿಯಲು ಹೊರಟಿರುವ ಸಾರ್ವಕಾಲಿಕ ಮೌಲ್ಯಗಳನ್ನಾಗಲೀ ಮಾಧ್ಯಮಗಳು ಕಡೆಗಣಿಸಿರುವ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು 6 ಸ್ಥಾನಗಳನ್ನು ಪಡೆದರೂ ಉತ್ತಮ ಸಾಧನೆಯೇ ಆಗುತ್ತದೆ. ತಮ್ಮ ಹಾದಿಗಳು ಬೇರ್ಪಟ್ಟ ನಂತರ ಅಣ್ಣಾ ಹಜಾರೆಯವರು ಕೂಡ ಆಮ್ ಆದ್ಮಿ ಪಕ್ಷದ ಬಗ್ಗೆ ಹಾಗೂ ಕೇಜ್ರೀವಾಲಾರ ಬಗ್ಗೆ ಅತ್ಯಂತ ಕಠಿಣವಾಗಿ ವರ್ತಿಸುತ್ತಿರುವುದು ಕಂಡುಬರುತ್ತಿದ್ದು ಇದರಿಂದ ಅಣ್ಣಾ ಹಜಾರೆಯವರು ಸಣ್ಣವರಾಗುತ್ತಿದ್ದಾರೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೇಜ್ರೀವಾಲ್ ಹಾಗೂ ಸಂಗಡಿಗರು ಪಕ್ಷ ಕಟ್ಟಲು, ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಕಠಿಣ ಪರಿಶ್ರಮ ಪಡುತ್ತಿರುವುದು ಶ್ಲಾಘನೀಯ. ನಮ್ಮ ದೇಶದ ರಾಜಕೀಯಕ್ಕೆ ಇಂದು ಇಂಥ ಪ್ರತಿಭಾವಂತರ ಅಗತ್ಯ ಇದೆ. ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ಆಮ್ ಆದ್ಮಿ ಪಕ್ಷದ ಹೆಸರನ್ನು ಅಮೀರ್ ಆದ್ಮಿ ಪಾರ್ಟಿ (ಶ್ರೀಮಂತ ಜನರ ಪಕ್ಷ) ಎಂದು ಬದಲಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಆಮ್ ಆದ್ಮಿ ಪಕ್ಷದ ಕೆಲವು ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳಲ್ಲಿ ತಮ್ಮ ನಿಜವಾದ ವಿವರಗಳನ್ನು ನೀಡಿದ್ದು ಇರಬಹುದು. ಉಳಿದ ಪಕ್ಷಗಳ ಅಭ್ಯರ್ಥಿಗಳಂತೆ ಸುಳ್ಳು ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಅವರು ನೀಡಿರಲಾರರು. ಹೀಗಾಗಿ ಪಕ್ಷದಲ್ಲಿ ಕೆಲವರು ಕೋಟ್ಯಾಧೀಶರೆಂದು ಕಂಡು ಬರಬಹುದು. ಕೋಟ್ಯಾಧೀಶರಿಗೆ ಜೀವನೋಪಾಯಕ್ಕೆ ಬೇಕಾದ ಗಟ್ಟಿಯಾದ ಆದಾಯ ಮೂಲ ಇರುವ ಕಾರಣ ಅವರು ಚುನಾವಣೆಗೆ ಸ್ಪರ್ಧಿಸುವುದು ಒಳ್ಳೆಯದೇ, ಆದರೆ ಅವರು ತಮ್ಮ ಶಾಸಕ ಸ್ಥಾನವನ್ನು ತಮ್ಮ ಉದ್ಯಮ ಅಥವಾ ಆಸ್ತಿಪಾಸ್ತಿ ಬೆಳೆಸಿಕೊಳ್ಳಲು ಬಳಸಬಾರದು ಅಷ್ಟೇ. ಜೀವನೋಪಾಯಕ್ಕೆ ದಿನನಿತ್ಯ ದುಡಿದೇ ಹಣ ಗಳಿಸಬೇಕಾದವರು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವೇ. ಹೀಗಾಗಿ ಜನತೆಗೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ಮನೋಭಾವ ಇರುವ ಶ್ರೀಮಂತರು ಚುನಾವಣೆಗೆ ಸ್ಪರ್ಧಿಸುವುದನ್ನು ಸ್ವಾಗತಿಸಬೇಕು. ಇದನ್ನು ವ್ಯಂಗ್ಯ ಮಾಡಬೇಕಾದ ಅಗತ್ಯ ಇಲ್ಲ ಎಂದು ಸುಷ್ಮಾ ಸ್ವರಾಜ್ ಅವರಂಥ ನಾಯಕರಿಗೆ ಹೇಳಬೇಕಾಗಿದೆ.

ಆಮ್ ಆದ್ಮಿ ಪಕ್ಷವು ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದ ಹೆಚ್ಚೆಂದರೆ ಐದಾರು ಕೋಟಿ ರೂಪಾಯಿಗಳ ದೇಣಿಗೆ ಪಡೆದಿರಬಹುದು, ಅದೂ ಪಾರದರ್ಶಕವಾಗಿ, ಅದನ್ನು ಅದು ತನ್ನ ವೆಬ್‌ಸೈಟಿನಲ್ಲಿ ಸ್ಪಷ್ಟವಾಗಿ ತೋರಿಸಿದೆ. AAP-websiteಆಮ್ ಆದ್ಮಿ ಪಕ್ಷದ ವ್ಯವಹಾರಗಳು ತೆರೆದ ಪುಸ್ತಕದಂತೆ ಇರುವಾಗ ಅದು ಪಡೆದ ಅನಿವಾಸಿ ಭಾರತೀಯರ ಹಣದ ಬಗ್ಗೆ ತನಿಖೆ ನಡೆಸುವುದು ನಿಜಕ್ಕೂ ದೊಡ್ಡ ಕುಚೋದ್ಯ. ಇಂಥ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸುಮ್ಮನೆ ತಗಾದೆ ತೆಗೆಯುವುದು ನೀಚತನವಲ್ಲದೆ ಮತ್ತೇನೂ ಅಲ್ಲ ಎನ್ನದೆ ವಿಧಿಯಿಲ್ಲ. ಇತ್ತೀಚೆಗೆ ಅಣ್ಣಾ ಹಜಾರೆಯವರನ್ನು ಕೇಜ್ರೀವಾಲ್ ವಿರುದ್ಧ ಎತ್ತಿ ಕಟ್ಟಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತದೆ. ಮುಖ್ಯವಾಗಿ ಅಣ್ಣಾ ಹೆಸರನ್ನು ಕೇಜ್ರಿವಾಲ್ ಚುನಾವಣೆಗೆ ಹಾಗೂ ಪಕ್ಷ ಕಟ್ಟಲು ಬಳಸುತ್ತಿದ್ದಾರೆ ಎಂದು, ಅಣ್ಣಾ ಹಜಾರೆ ಹೋರಾಟದ ಸಮಯದಲ್ಲಿ ಸಂಗ್ರಹವಾದ ಹಣವನ್ನು ಕೇಜ್ರೀವಾಲ್ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಇತ್ಯಾದಿ ಅಪಪ್ರಚಾರವೂ ನಡೆಯುತ್ತಿದೆ ಮತ್ತು ಇದಕ್ಕೆ ಕೇಜ್ರಿವಾಲ್ ಪಕ್ಷದ ವೆಬ್ ಸೈಟಿನಲ್ಲಿ ಹಾಗೂ ಪತ್ರಿಕಾಗೋಷ್ಠಿ ನಡೆಸಿ ಇಂಥ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಬೇಕಾದರೆ, ಆರೋಗ್ಯಕರವಾಗಿ ಬೆಳೆಯಬೇಕಾದರೆ ಆಮ್ ಆದ್ಮಿ ಪಕ್ಷವನ್ನು ಹಾಗೂ ಅದು ಎತ್ತಿ ಹಿಡಿಯುತ್ತಿರುವ ಮೌಲ್ಯಗಳನ್ನು ಗೆಲ್ಲಿಸುವುದು ಅಗತ್ಯ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವು ಗೆದ್ದು ಸರ್ಕಾರ ರಚಿಸುವ ಸಾಮರ್ಥ್ಯ ಪಡೆದರೆ ಭಾರತದ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಅದು ಕಾರಣವಾಗಬಹುದು. ಅಲ್ಲಿ ಅದು ಗೆಲುವನ್ನು ಸಾಧಿಸಿದರೆ ಆ ಪಕ್ಷವನ್ನು ಮತ್ತು ಅದು ಪ್ರತಿನಿಧಿಸುವ ಮೌಲ್ಯಾಧಾರಿತ ರಾಜಕೀಯವನ್ನು ದೇಶಾದ್ಯಂತ ಬೆಳೆಸಲು, ವಿಸ್ತರಿಸಲು ಪ್ರೋತ್ಸಾಹ ದೊರೆಯಲಿರುವುದು ಖಚಿತ. ಹೀಗಾಗಿ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವಂತೆ ದೇಶದ ಪ್ರಖ್ಯಾತ ಚಿಂತಕರು, ವಿಜ್ಞಾನಿಗಳು, ಸಮಾಜ ಸುಧಾರಕರು, ಸಮಾಜ ಸೇವಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಜನರನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯ.

Leave a Reply

Your email address will not be published. Required fields are marked *