ಕನ್ನಡ ಮಾಧ್ಯಮಲೋಕದ ತರುಣ್ ತೇಜ್‌ಪಾಲ್‌ಗಳು…


– ರವಿ ಕೃಷ್ಣಾರೆಡ್ದಿ


 

ಈ ದೇಶದಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ನಡೆದ ಅನೇಕ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆದಿದ್ದ, ಒಂದು ಹಂತದಲ್ಲಿ ಈ ದೇಶದ ಪ್ರಗತಿಪರ ಚಿಂತನೆಗೆ ಸಾಕ್ಷಿಯಾಗಿದ್ದ, ಆ ಮೂಲಕ ದೇಶಕ್ಕೆ ಒಂದಿಷ್ಟು ಸೇವೆಯನ್ನೂ ಸಲ್ಲಿಸಿದ್ದ tehelka-tarun-tejpal“ತೆಹಲ್ಕ” ಪತ್ರಿಕೆ ಇಂದು ತಲೆತಗ್ಗಿಸಿ ಬೀದಿಯಲ್ಲಿ ನಿಂತಿದೆ. ಅದರ ಪ್ರಮುಖ ಸಂಪಾದಕ ತರುಣ್ ತೇಜ್‌ಪಾಲ್ ತನ್ನ ಪತ್ರಿಕೆಯಲ್ಲಿ ಕೆಲಸ ಮಾಡುವ ಯುವ ಸಹೋದ್ಯೋಗಿಯೊಬ್ಬರನ್ನು ಗೋವಾದಲ್ಲಿ ತನ್ನ ಕಾಮತೃಷೆಗೆ ಬಳಸಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ ಮತ್ತು ಎಷ್ಟೇ ದೊಡ್ಡವರಾಗಿರಲಿ ನ್ಯಾಯಾಂಗ ವಿಚಾರಣೆ ಮತ್ತು ಶಿಕ್ಷೆಗೆ ಗುರಿಯಾಗಬೇಕು ಎಂದು ಹೇಳುತ್ತ ಬಂದಿದ್ದ ಪತ್ರಿಕೆ ತನ್ನ ನೌಕರನೊಬ್ಬ ತಪ್ಪು ಮಾಡಿದಾಗ ಆತನನ್ನು ಅದರಿಂದ ತಪ್ಪಿಸುವ ಕಳ್ಳದಾರಿಗಳನ್ನು, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳನ್ನು ಮಾಡಬಾರದು. ಪ್ರಕರಣ ಹೊರಜಗತ್ತಿಗೆ ಬಯಲಾಗಿ ಮುಚ್ಚಿಡಲಾಗದು ಎನ್ನುವ ಹಂತದಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡಿರುವ ಮನುಷ್ಯನ ಮೇಲೆ ಪೋಲಿಸ್ ಕೇಸು ದಾಖಲಾಗಿ ನ್ಯಾಯಾಲಯದಲ್ಲಿ ಸೂಕ್ತ ವಿಚಾರಣೆ ಆಗಬೇಕಾದ ಕ್ರಮವೇ ನ್ಯಾಯಯುತವಾದದ್ದು.

ಲೈಂಗಿಕ ಕಿರುಕುಳ ಎನ್ನುವುದು ಬಹುತೇಕರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಅನುಭವಿಸುವ, ಅನುಭವಿಸಿರುವ ಕೆಟ್ಟ ಅನುಭವಗಳು. ಇವು ಬಹಳಷ್ಟು ಬಾರಿ ಪರಿಚಿತರಿಂದ, ನೆಂಟರಿಂದಲೇ ನಡೆದಿರುತ್ತವೆ. ನೌಕರಿ ಮಾಡುವ ಜಾಗಗಳಲ್ಲೂ ಇವು ಇರುತ್ತವೆ. ಅದರಲ್ಲೂ ಒಬ್ಬ/ಒಬ್ಬಳು ಕಾಮುಕ ಮನಸ್ಸಿನ ವ್ಯಕ್ತಿ ತನ್ನ ಕೆಳಗೆ ನೌಕರಿ ಮಾಡುವವರ ಆರ್ಥಿಕ/ನೌಕರಿ ಅಭದ್ರತೆಯನ್ನು ಗುರಿಯಾಗಿಸಿಕೊಂಡು ಅವರನ್ನು ದುರುಪಯೋಗಪಡಿಸಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಆರ್ಥಿಕ ಭದ್ರತೆ ಮತ್ತು ಸಮಾಜ ಬೆಂಬಲದಿಂದ ಮಾತ್ರ ಶೋಷಿತರು ಇಂತಹ ಸಂದರ್ಭಗಳನ್ನು ಎದುರಿಸುವುದು ಸಾಧ್ಯ. ತೆಹಲ್ಕದ ಸಂಪಾದಕ ಎಸಗಿರುವ ಈ ಕೃತ್ಯ ಮಾಧ್ಯಮ ಲೋಕದಲ್ಲಿಯೂ ಕೆಲವರು ಎಷ್ಟು ಬೇಜವಾಬ್ದಾರಿಯಿಂದ ಮತ್ತು ಸಿಕ್ಕಿಬೀಳುವುದಿಲ್ಲ ಎನ್ನುವ ಅಹಂಕಾರದಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಎತ್ತಿ ತೋರಿಸಿದೆ.

ತರುಣ್ ತೇಜ್‌ಪಾಲ್ ಕೃತ್ಯವನ್ನು ಟಿವಿ ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಂಡು ಹಿಂಬಾಲಿಸಿದ್ದರಿಂದ ಇಂದು Corruption-in-News-Mediaಅದು ಚರ್ಚೆಗೆ ಬಂದಿದೆ ಮತ್ತು ಆರೋಪಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾನೆ. ಆದರೆ ಇಂತಹುದೇ ಒಂದು ಕೃತ್ಯ ಕನ್ನಡದ ಮಾಧ್ಯಮ ಲೋಕದಲ್ಲಿ ಜರುಗಿದ್ದರೆ ಅದು ಸುದ್ದಿಯಾಗುತ್ತಿತ್ತೇ ಮತ್ತು ಕರ್ನಾಟಕದ ಮಟ್ಟಿಗಾದರೂ ಅದು ಚರ್ಚೆಯಾಗುತ್ತಿತ್ತೆ ಎನ್ನುವುದರ ಬಗ್ಗೆ ನನಗೆ ಸಂದೇಹಗಳಿವೆ. ಒಂದು ಪತ್ರಿಕೆ ಯಾವುದೋ ಒಂದು ಹಗರಣದ ಹಿಂದೆ ಬಿದ್ದು ಅದನ್ನು ಬಯಲುಗೊಳಿಸಿದರೆ ಅದನ್ನು ನಾವು ತೆಗೆದುಕೊಳ್ಳಬಾರದು ಎನ್ನುವ ಬಾಲಿಶ ಮತ್ತು ವೃತ್ತಿಧರ್ಮಕ್ಕೆ ವ್ಯತಿರಿಕ್ತವಾದ ನಿಲುವು ತೆಗೆದುಕೊಳ್ಳುವ ನಮ್ಮ ಮಾಧ್ಯಮ ಸಂಸ್ಥೆಗಳು ಇಂತಹ ವಿಚಾರದಲ್ಲಿ ಇನ್ನೂ ಹುಷಾರಿನಿಂದ ವರ್ತಿಸುತ್ತವೆ. ಅವರು ನಮ್ಮ ಬಗ್ಗೆ ಮಾತನಾಡುವುದಿಲ್ಲ, ನಾವು ಅವರ ಬಗ್ಗೆ ಮಾತನಾಡುವುದು ಬೇಡ ಎನ್ನುವಂತಹ ಅವಕಾಶವಾದಿ, ಅಪ್ರಾಮಾಣಿಕ ಜನರೇ ಇಲ್ಲಿ ಆಯಕಟ್ಟಿನ ಜಾಗಗಳಲ್ಲಿ ತುಂಬಿಕೊಂಡಿದ್ಡಾರೆ. ಮಾಧ್ಯಮಗಳನ್ನು ನಡೆಸುವವರು ಪ್ರಭಾವಿ ಖಾಸಗಿ/ಸಾರ್ವಜನಿಕ ವ್ಯಕ್ತಿಗಳಾಗಿರುವುದು ಮತ್ತು ಎಲ್ಲಾ ಸಂಪಾದಕೀಯ ನಿಲುವುಗಳನ್ನು ಕೇವಲ ಒಬ್ಬರೇ ತೆಗೆದುಕೊಳ್ಳುವುದು ನಮ್ಮ ಮಾಧ್ಯಮಗಳ ಅಪ್ರಾಮಾಣಿಕತೆಗೆ ಮೂಲಕಾರಣ. ಪ್ರಜಾಸತ್ತಾತ್ಮಕವಾದ ಮತ್ತು ವಿಭಿನ್ನ ಹಿನ್ನೆಲೆಯ ಜನರು ಇರುವ ಸಂಪಾದಕೀಯ ಮಂಡಳಿಗಳೇ ನಮ್ಮ ಮಾಧ್ಯಮಗಳಿಲ್ಲ. ಒಬ್ಬ ಯಜಮಾನ, ಮಿಕ್ಕವರೆಲ್ಲ ಜೀ ಹುಜೂರ್‌ಗಳು. ಇಂತಹ ಪರಿಸ್ಥಿತಿಯಲ್ಲಿ ಹಕ್ಕುಗಳ ಮತ್ತು ವ್ಯಕ್ತಿ ಸ್ವಾತಂತ್ರ್ಯದ ದಮನ ಆಗುತ್ತಲೇ ಇರುತ್ತದೆ. ತಮ್ಮ ಹಕ್ಕುಗಳನ್ನೇ ರಕ್ಷಿಸಿಕೊಳ್ಳಲಾಗದವರು, ಮತ್ತು ಹಾಗೆ ದಮನ ಮಾಡುವವರು, ಜನತೆಗೆ ಎಲ್ಲಾ ವಿಷಯಗಳ ಬಗ್ಗೆ ಉಪದೇಶಗಳನ್ನು ಕೊಡುತ್ತಿರುತ್ತಾರೆ. ಅಷ್ಟು ಮಾತ್ರವಲ್ಲ, ನ್ಯಾಯಾಧೀಶರೂ ಆಗಿಬಿಡುತ್ತಾರೆ.

ಒಂದಿಷ್ಟು ಕನಸು ಮತ್ತು ಆದರ್ಶಗಳನ್ನಿಟ್ಟುಕೊಂಡು ಹೊಸದಾಗಿ ಕೆಲಸಕ್ಕೆ ಸೇರುವವರನ್ನು ಮೆದುಗೊಳಿಸುವ ಅಥವ ಭ್ರಷ್ಟಗೊಳಿಸುವ ಅಥವ ಎದೆಗುಂದಿಸುವ ವಾತಾವರಣ ಕನ್ನಡದ ಮಾಧ್ಯಮ ಜಗತ್ತಿನಲ್ಲಿದೆ. ಕೆಲವರು ಹೇಳುವ ಗಾಸಿಪ್‌ಗಳನ್ನು ನಂಬುವುದಾದರೆ ಇಲ್ಲಿಯೂ ಲೈಂಗಿಕ ಕಿರುಕುಳ ಇದೆ. sexual-harassmentಹೆಣ್ಣುಮಕ್ಕಳನ್ನು ಎದುರಿಗೆ ಕೂರಿಸಿಕೊಂಡು ಅವರ ಕೈನೇವರಿಸುವುದರಿಂದ ಹಿಡಿದು, ಅವರನ್ನು ಹೇಗೆಂದರೆ ಹಾಗೆ ಬಳಸಿಕೊಳ್ಳುವ ತನಕ ಇದು ಇದೆ. ಕಛೇರಿಗಳಲ್ಲೇ ತಮ್ಮ ವಿಕೃತ ಕಾಮದಾಟ ಆಡುವವರ ಬಗ್ಗೆ ಅನೇಕ ಕತೆಗಳಿವೆ. ಇವುಗಳಲ್ಲಿ ಹಲವರು ಸಜ್ಜನರ ಸೋಗು ಹಾಕಿದ್ದರೆ, ಮತ್ತೆ ಕೆಲವರು ತಮ್ಮ ಅಪಾರ ಹಣ-ಪ್ರಭಾವದಿಂದ ಯಾವುದನ್ನೂ ಜಯಿಸಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಮತ್ತೆ ಕೆಲವರು ದುಷ್ಟರೂ ಕ್ರಿಮಿನಲ್‌ಗಳೂ ಇದ್ದಾರೆ. ಈ ಕಾರಣಗಳಿಂದಾಗಿಯೇ ಎಲ್ಲೆಲ್ಲಿ ಈ ಶೋಷಣೆ ನಡೆಯುತ್ತಿದೆಯೋ ಅಲ್ಲೆಲ್ಲ ಇದು ಅಬಾಧಿತವಾಗಿ ಮುಂದುವರೆಯುತ್ತಿದೆ. ನೀಚರನ್ನು ಧೈರ್ಯದಿಂದ ಎದುರಿಸುವಂತ ವಾತಾವರಣ ನಿರ್ಮಿಸುವುದು, ಮಾನಸಿಕ ಸಿದ್ಧತೆ ಮಾಡಿಕೊಳ್ಳುವುದು, ಮತ್ತು ಅಂತಹವರನ್ನು ಕಾಲಕಾಲಕ್ಕೆ ಅಧಿಕಾರ ಸ್ಥಾನದಿಂದ ತೊಲಗಿಸುವ ಪ್ರಯತ್ನಗಳನ್ನು ಮಾಡುವುದರಿಂದ ಮಾತ್ರ ಇದು ಒಂದು ಮಟ್ಟಿಗೆ ಹತೋಟಿಗೆ ಬರುತ್ತದೆ. ಆದರೆ, ಕನ್ನಡ ಮಾಧ್ಯಮಲೋಕದಲ್ಲಿ ಒಬ್ಬ ಶೋಷಿತ ಪತ್ರಕರ್ತ/ಪತ್ರಕರ್ತೆಯ ಬೆಂಬಲಕ್ಕೆ ಕನಿಷ್ಟ ಪತ್ರಕರ್ತ ಸಮುದಾಯದವರಾದರೂ ಬರುತ್ತಾರೆ ಎನ್ನುವ ವಿಚಾರಕ್ಕೇ ನನಗೆ ಸಂದೇಹಗಳಿವೆ. ಕೆಲವು ಪ್ರಾಮಾಣಿಕರು ಮತ್ತು ಬದ್ಧತೆಯ ಪತ್ರಕರ್ತರು ವೈಯಕ್ತಿಕ ನೆಲೆಯಲ್ಲಿ ಬೆಂಬಲಿಸಲು ಶಕ್ಯರಿದ್ದಾರೆಯೇ ಹೊರತು ಇಲ್ಲಿ ಸಾಂಸ್ಥಿಕ ಬೆಂಬಲ ಇಲ್ಲ. ಪರಿಸ್ಥಿತಿ ಬದಲಾಗಲಿ.

ಸತ್ಯ, ಪ್ರಾಮಾಣಿಕತೆ, ಆದರ್ಶದ ಧ್ವಜ ಎತ್ತಿಕೊಂಡು ಓಡಾಡುವವರಲ್ಲಿಯೇ ಕೆಲವರು ಹೀಗೆ ತಮ್ಮ ಕುಕೃತ್ಯಗಳ ಕಾರಣಕ್ಕೆ ಸಿಕ್ಕಿಬೀಳುತ್ತಿರುವುದು ಇದೇ ಮೊದಲೇನಲ್ಲ, ಮತ್ತು ಕೊನೆಯದೂ ಆಗುವುದಿಲ್ಲ. ಆದರೆ, ಇಡೀ ಗುಂಪೇ ಅಂತಹ ಕುಕೃತ್ಯಗಳಿಗೆ ಪೂರಕವಾಗಿ, ಬೆಂಬಲವಾಗಿ ನಿಲ್ಲುವುದು ಮಾತ್ರ ಅಪಾಯಕಾರಿ. ತೆಹಲ್ಕ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲದೆ, ಅಲ್ಲಿ ಕೆಲಸ ಮಾಡುವವರ ಮತ್ತು ಅದರ ಓದುಗರ ನಂಬಿಕೆಯನ್ನೂ ಉಳಿಸಿಕೊಳ್ಳಬೇಕಿದೆ. ಮಾಧ್ಯಮ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ಘಟನೆ ಈ ಸಂದರ್ಭದ ಎಚ್ಚರಿಕೆಯ ಗಂಟೆ.

4 thoughts on “ಕನ್ನಡ ಮಾಧ್ಯಮಲೋಕದ ತರುಣ್ ತೇಜ್‌ಪಾಲ್‌ಗಳು…

  1. ಜೆ.ವಿ.ಕಾರ್ಲೊ, ಹಾಸನ

    ‘ತೆಹೆಲ್ಕಾ’ದಿಂದ sting operation ಗೆ ಒಳಗಾದವರಿಗಂತೂ ಮೃಷ್ಠಾನ್ನ ಉಂಡಂತಾಗಿದೆ. ನ್ಯಾಯಾಂಗದ ಉನ್ನತ ಸ್ತರದಲ್ಲಿದ್ದವರು ಇಂತದನ್ನು ನಡೆಸಿದಾಗಲೂ ಆಶ್ಚರ್ಯವಾಗಿರಲಿಲ್ಲ.

    Reply
  2. Srini

    his true colors are coming out now…same with Tehelka team…if his logic holds good, all Asaram needs to do is -“Dont go to his Ashram for 6 months”. He should be arrested….Crook, rapist journalist….

    Reply

Leave a Reply

Your email address will not be published. Required fields are marked *