“ನಾವು-ನಮ್ಮಲ್ಲಿ” ಸುಗತ ಶ್ರೀನಿವಾಸರಾಜು ಮಾತನಾಡಿದ್ದು…

“ವಿಜಯ ಕರ್ನಾಟಕ” ದಿನಪತ್ರಿಕೆಯ ಸಂಪಾದಕ ಸುಗತ ಶ್ರೀನಿವಾಸರಾಜು ಅವರು ಹಾಸನದಲ್ಲಿ ನಡೆದ ’ನಾವು-ನಮ್ಮಲ್ಲಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರ ಮಾತುಗಳು ಹಲವು ಚರ್ಚೆಗಳಿಗೆ ಕಾರಣವಾಯಿತು. ನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕಕೆ.ಫಣಿರಾಜ್ ಮತ್ತು ಇತರರು ಉದ್ಘಾಟನಾ ಕಾರ್ಯಕ್ರಮದ ನಂತರ ಸುಗತ ಜೊತೆ ವಾಗ್ವಾದಕ್ಕೆ ಇಳಿದರು. ಸುಗತ ತಮ್ಮ ಮಾತುಗಳಲ್ಲಿ ತಾನು ಜಗಳಕ್ಕೇ ಬಂದಿದ್ದೇನೆ ಎಂದಿದ್ದರು. ಆದರೆ, ಅವರು ಜಗಳಕ್ಕೆ ಅವಕಾಶ ಕೊಡದೇ ಕಾರ್ಯ ನಿಮಿತ್ತ ಬೇಗ ಬೆಂಗಳೂರಿಗೆ ಹೊರಟಿದ್ದು ಅನೇಕರಿಗೆ ನಿರಾಶೆಯೂ ಆಯಿತು. ಅದೇ ದಿನ ಸಂಜೆ ಮಾತನಾಡಿದ ಪ್ರೊ. ವಿ.ಎಸ್. ಶ್ರೀಧರ್, ಸುಗತ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ್ದರು. ಕಾರಣ ಸುಗತ ’ಮೂಢನಂಬಿಕೆ ವಿರುದ್ಧ ಬಿಲ್’ ಬಗ್ಗೆ ತುಸು ಖಾರವಾಗಿಯೇ ಮಾತನಾಡಿದ್ದರು.

ಇದು ಸುಗತರ ಭಾಷಣದ ಪೂರ್ಣ ಧ್ವನಿಸುರಳಿ:

ಇವು ಸುಗತ ಶ್ರೀನಿವಾಸರಾಜುರವರ ಮೇಲಿನ ಭಾಷಣದ ಕೆಲವು ಆಯ್ದ ಮಾತುಗಳ ಪಠ್ಯ:

  • ಇಂದು ಬೆಳಗ್ಗೆ ನಿಮ್ಮ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿ ತುಂಬಾ ಸಂತೋಷ ಆಯ್ತು. ಇವತ್ತು ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳು, ಫಿನಾಮಿನನ್ ಗಳ ಮಧ್ಯೆ ಇಂತಹದೊಂದು sugata-srinivasaraju-navu-nammalli-hassan-nov162013ಗುಂಪು ಬೆಳೆಯೋದು ಒಂದು ರಚನಾತ್ಮಕ ಕಾರ್ಯ ಅನ್ನೋದು ನನ್ನ ಆಶಯ.
  • ವಾಗ್ವಾದ, ಚರ್ಚೆ, ಸಂವಾದ ಸಮಾನ ಮನಸ್ಕರ ಮಧ್ಯೆ ಸಾಮಾನ್ಯ. ಆದರೆ ಇತ್ತೀಚೆಗೆ ಸಮಾನ ಮನಸ್ಕರ ಮಧ್ಯೆಯೇ ಕಳೆದು ಹೋಗುತ್ತಿರುವ ಗುಣ ಅಂದರೆ ಭಿನ್ನಮತವನ್ನು ಒಪ್ಪಿಕೊಳ್ಳುವ ಗುಣ. ಭಿನ್ನಮತ, ವಿರೋಧವನ್ನೂ ಒಪ್ಪಿಕೊಳ್ಳುವ ಗುಣ ಇರಬೇಕು. ಇಲ್ಲವಾದರೆ ಬುಷ್ ನ ಪ್ರಸಿದ್ಧ ಹೇಳಿಕೆ ’ವಿತ್ ಅಸ್ ಅಥವಾ ಅಗೇನ್ಸ್ಟ್ ಅಸ್’ (ನಮ್ಮ ಜೊತೆ ಅಥವಾ ನಮ್ಮ ವಿರೋಧ) ಕ್ಕೆ ಚರ್ಚೆಗಳು ಸೀಮಿತವಾಗಿಬಿಡುತ್ತವೆ.
  • ನಿಜವಾದ ಪ್ರಜಾಸತ್ತಾತ್ಮಕ ಮುಕ್ತ ವಾತಾವರಣವನ್ನು ಸೃಷ್ಟಿಮಾಡುವುದೇ ಸದ್ಯ ನಮ್ಮ ಎದುರು ಇರುವ ಚಾಲೆಂಜ್. ನಾನು ಯಾಕೆ ಮತ್ತೆ ಮತ್ತೆ ಡಿಸೆಂಟ್ ಒಪ್ಪುವ ವಾತಾವರಣ ಬೇಕು ಅಂತ ಹೇಳ್ತೀನಿ ಅಂದರೆ, ನಾವು ಯಾರನ್ನು ಲಿಬರಲ್ಸ್ ಅಂತ ಅಂದ್ಕೊಡಿದ್ದೇವೋ, ಅವರು ಕೂಡ ಇತ್ತೀಚೆಗೆ ನಮ್ಮನ್ನು ಅನುಮಾನದಿಂದ ನೋಡ್ತಿದಾರೆ. ಬೈಗಾಟ್, ಡೆಸ್ಪಾಟ್ಸ್, ಡಿಕ್ಟೇಟರ್ಸ್, ಓರಿಯೆಂಟಲಿಸ್ಟ್ಸ್.. ಬಳಸುವ ಭಾಷೆಯನ್ನೇ ಇವರೂ ಬಳಸೋಕೆ ಆರಂಭಿಸಿದ್ದಾರೆ.
  • ಲಿಬರಲ್ಸ್ ಕೂಡಾ ಒಂದು ತರಹದ ಸಿಂಪಲ್ ಕನ್ಸೆಪ್ಚುಯಲ್ ಆಪೋಸಿಟ್ಸ್‌ಗಳಲ್ಲಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಬಹು ಸಾಧ್ಯತೆಗಳಿರುವ ಸಂದರ್ಭದಲ್ಲಿ ಕೇವಲ ಎರಡು ಸಾಧ್ಯತೆಗಳು (ಪರ ಮತ್ತು ವಿರೋಧ) ಇವೆ.
  • ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವದ ಬಗ್ಗೆ ನಮಗೆಲ್ಲಾ ಮೆಚ್ಚುಗೆ ಇರಬಹುದು. ಆದರೆ ಅವರ ನೇತೃತ್ವದ ಸರಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಸರಿ ಅಂತ ಹೇಳೋಕಾಗೊಲ್ಲ. ಅನ್ನಭಾಗ್ಯ ಯೋಜನೆಯನ್ನು ಬೆಂಬಲಿಸಿ ಬರೆದ ಏಕೈಕ ಪತ್ರಿಕೆ ನಮ್ಮದು. ಆಗ ಇದು ಕಾಂಗ್ರೆಸ್ ಪತ್ರಿಕೆ ಅಂತ ಅನೇಕರು ಕರೆದರು. ಆದರೆ ಸಂತೋಷ್ ಲಾಡ್ ಸಂಪುಟದಿಂದ ಹೊರಹೋಗಬೇಕು ಅಂತ ಬರೆದಾಗ.. ಅನೇಕರು ಈ ಪತ್ರಿಕೆಯವರು ಯಾಕೋ ಉಲ್ಟಾ ಹೊಡೆದರು ಅಂತ ಮಾತನಾಡಿಕೊಂಡರು. ಲಿಬರಲ್ಸ್ ಅಂತ ಅಂದುಕೊಂಡವರೇ ಹೀಗೆ ಸರಳ ಪರ-ವಿರೋಧಗಳ ಭಾಷೆಯಲ್ಲಿ ಮಾತನಾಡೋದು ಅಪಾಯಕಾರಿ. ಈ ತರಹ ಮಾಡುವ ಮೂಲಕ ಒಂದು ಲಿಬರಲ್ಸ್ ಸ್ಪೇಸ್ ಕಡಿಮೆ ಮಾಡುತ್ತಿರುತ್ತೇವೆ.
  • ಬ್ಲಾಕ್ ಮತ್ತು ವೈಟ್ ಮಧ್ಯೆ ಸ್ಪೆಕ್ಟ್ರಮ್ ಆಫ್ ಕಲರ್‍ಸ್ ಇರುತ್ತೆ, ಗ್ರೇ ಏರಿಯಾ ಇರುತ್ತೆ. ಆದರೆ ಇವತ್ತು ಎಂಥ ಸೊಸೈಟಿಯಲ್ಲಿದ್ದೇವೆ ಅಂದ್ರೆ, ಲಿಬರಲ್ಸ್ ಕೂಡಾ ರಿಯಾಕ್ಷನರಿ ಯಾಗಿದ್ದಾರೆ. ಕೊನೆಗೆ ಎಲ್ಲಿ ಬಂದು ನಿಂತಿದ್ದೇವೆ ಅಂದರೆ ನಮ್ಮ ಬುದ್ಧಿಮತ್ತೆಯನ್ನು ಬದಿಗಿಟ್ಟು ಕೇವಲ ಸ್ಲೋಗನೇರಿಂಗ್‌ಗೆ ಸೀಮಿತ ಆಗಿಬಿಟ್ಟಿದ್ದೇವೆ. ಇದು ಮುಂದೆ ಹೇಗಾಗುತ್ತೆ ಅಂದರೆ ಯಾರ ಗಂಟಲು ಗಟ್ಟಿಯಾಗಿರುತ್ತೋ ಅವನು ಗೆಲ್ಲುತ್ತಾನೆ.
  • ಕರ್ನಾಟಕದಲ್ಲಿ ನಾನು ಬೆಳೆಯುತ್ತಿರುವ ಕಾಲದಲ್ಲಿ ಲಂಕೇಶ್, ದೇವನೂರು, ತೇಜಸ್ವಿ.. ಅನೇಕರನ್ನು ಓದುತ್ತಿದೆ. ಆಗ ನನ್ನ ತಂದೆ ಕಟ್ಟಿಕೊಂಡ ಜಗತ್ತು ಬಹಳ ವಿಶಾಲವಾಗಿತ್ತು ನನಗೆ. ಆದರೆ ಇಪ್ಪತ್ತು ವರ್ಷಗಳ ನಂತರ ಇಲ್ಲಿಗೆ ವಾಪಾಸ್ ಬಂದರೆ, ನಮ್ಮ ಆಡುಂಬೋಲ ಕ್ಷೀಣಿಸಿದೆ ಅಂತ ಅನ್ನಿಸುತ್ತಿತ್ತು. ಲಂಕೇಶ್ ಅವರನ್ನು ಓದಿಕೊಂಡು ವಿವಿಧ ದೇಶಗಳ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದೆ.
  • ನನಗೆ ಅನೇಕ ಬಾರಿ ಕೇಳುವ ಪ್ರಶ್ನೆ ನೀವು ಲೆಫ್ಟಾ, ರೈಟಾ? ಲೆಫ್ಟ್ ಮತ್ತು ರೈಟ್ ಮಧ್ಯೆ ವಿಶಾಲ ಸ್ಪೇಸ್ ಇದೆ. ಹಾಗೆಯೆ ಕೆಂಪು ಮತ್ತು ಕೇಸರಿ ಮಧ್ಯೆ ಕೂಡಾ ಹಲವು ಬಣ್ಣಗಳಿವೆ, ನಿಲುವುಗಳಿವೆ. ಇದನ್ನು ಇಂದಿನ ಪತ್ರಿಕೋದ್ಯಮ ಮತು ಬೌದ್ಧಿಕ ವಲಯ ಮರೆತಿದೆ ಅನ್ಸುತ್ತೆ. ಇಂದಿನ ಯುವ ಜನಾಂಗ, ನಾವು, ಆ ವಿಶಾಲ ಸ್ಪೇಸ್‌ನ್ನು ಮತ್ತೆ ನಮ್ಮ ವಶಕ್ಕೆ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.
  • ನಾನು ಈ ಪತ್ರಿಕೆಗೆ ಸಂಪಾದಕನಾದಾಗ ಈ ಸೋಶಿಯಲ್ ಮೀಡಿಯಾದಲ್ಲಿ, ಅದು ನಿಜವಾಗಿಯೂ ಎ-ಸೋಶಿಯಲ್ ಮೀಡಿಯಾ, ತುಂಬಾ ಕ್ಯಾಂಪೇನ್ ನಡೆಸಿದರು. ಇವರು ಲೆಫ್ಟ್ ಅಂತೆ, ಲೆಫ್ಟ್ ಅಂತೆ ಅಂತ ಪ್ರಚಾರ ಮಾಡಿದರು. ಲೆಫ್ಟ್ ಆಗಿರೋದು ಅಂದರೆ ಅದೇನೋ ಅಪರಾಧ ಏನೋ ಎಂಬಂತೆ. ಒಬಾಮ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಿಂತಾಗ ಅಮೆರಿಕಾ ಮೀಡಿಯಾ ಅವನು ಸಮಾಜವಾದಿ ಅಂತ ಕರೆಯಿತು. ಸಮಾಜವಾದಿ ಆಗಿರೋದು ಅಪರಾಧ ಅನ್ನೋ ಹಾಗೆ.
  • ಗೆಳೆಯ ಅನಂತ ಚಿನಿವಾರ್ ಜನಶ್ರೀ ಸಂದರ್ಶನದಲ್ಲಿ ಇದೇ ಪ್ರಶ್ನೆ ಕೇಳಿದ್ದರು. ಆಗ ನಾನು ಹೇಳಿದೆ.. ಹಾಗೆ ನನ್ನನ್ನು ಕರೆಯುವವರು ನಾನು ಹಿಂದೆ ಕೆಲಸ ಮಾಡುತ್ತಿದ್ದ ಔಟ್‌ಲುಕ್ ಪತ್ರಿಕೆಯಲ್ಲಿ, ಹಿಂದೂಸ್ಥಾನ್ ಟೈಮ್ಸ್‌ನಲ್ಲಿ ಅಥವಾ ಐರಿಷ್ ಟೈಮ್ಸ್ ಪತ್ರಿಕೆಗೆ ಬರೆದ ಯಾವುದನ್ನೂ ಓದಿಲ್ಲ ಎಂದೇ ಅರ್ಥ. ಅದನ್ನೆಲ್ಲಾ ಓದಿದ್ದರೆ ನಾನು ಲೆಫ್ಟ್‌ನಿಂದ ತುಂಬಾ ದೂರ ಅನ್ನೋದು ಗೊತ್ತಾಗುತ್ತಿತ್ತು. ಆದರೆ ನಾನು ಜನಪರ ಆಗಿದ್ದೀನೆ ಅನ್ನೋ ಕಾರಣಕ್ಕೆ ಲೆಫ್ಟ್ ಅಂತ ಕರೆಯೋದೆ ಆದರೆ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ.
  • ಈ ತರಹದ ಗೊಂದಲಗಳನ್ನು ಆಗಾಗ ಸೃಷ್ಟಿ ಮಾಡ್ತಾ ಇರ್ತಾರೆ. ದೇವನೂರು ಅವರ ಅನುಭವಕ್ಕೂ ಇದು ಬಂದಿರುತ್ತೆ. ನನಗೆ ಯಾರೋ ಹೇಳಿದ್ರು, ದೇವನೂರು ಅವರ ಲೇಖನ ಪ್ರಕಟ ಮಾಡಿದರೆ ಪತ್ರಿಕೆ ಪ್ರಸರಣ ಬಿದ್ದು ಹೋಗುತ್ತೆ. ನಾನು ಅವರ ಲೇಖನ ಮೂರು ಬಾರಿ ಪ್ರಕಟಿಸಿದೆ. ಪ್ರಸರಣ ಏನು ಬಿದ್ದು ಹೋಗಲಿಲ್ಲ. ಜಾಸ್ತಿ ಆಯಿತು.
  • ಈಚೆಗೆ ಆದ ಒಂದು ಅನುಭವ. ನಾವು ನಮ್ಮ ಪತ್ರಿಕೆಯಲ್ಲಿ ಮೂಢನಂಬಿಕೆ ವಿರುದ್ಧ ಬಿಲ್‌ಗೋಸ್ಕರ ಕ್ಯಾಂಪೇನ್ ಮಾಡಿದ್ವಿ. ಕರಡು ಸಿದ್ಧ ಗೊಂಡಾಗ ಅದರ ಪರಿಕಲ್ಪನಾ ಟಿಪ್ಪಣಿಯನ್ನು ನಮ್ಮ ಪತ್ರಿಕೆಗೆ ಕಳುಹಿಸಿಕೊಡಲಾಯ್ತು. ಅದರಲ್ಲಿ ನಮಗೆ ಕೆಲವು ಅನುಮಾನಗಳು ಇದ್ದವು. ಅವು ಯಾವುದೇ ಯೋಚಿಸುವ ವ್ಯಕ್ತಿಗೆ ಬರಬಹುದಾದ ಅನುಮಾನಗಳೆ. ಅದರಲ್ಲಿನ ಕೆಲವು ಅಂಶಗಳು ರ್‍ಯಾಡಿಕಲ್ ಆಗಿದ್ದವು. ಒಂದು ಸಣ್ಣ ಪತ್ರಿಕೆ ನಡೆಸುವಾಗ ಇಂತಹ ರಿಸ್ಕ್ ಬರೋಲ್ಲ. ಆದರೆ ಒಂದು ದೊಡ್ಡ ದಿನ ಪತ್ರಿಕೆ, ಅದರಲ್ಲೂ 200 ಕೋಟಿ ರೂಗಳ ಪ್ರಾಫಿಟ್ ಮಾಡುವ ಮತ್ತು 80 ಲಕ್ಷ ಓದುಗರಿರುವ ಪತ್ರಿಕೆ ನಡೆಸುವಾಗ ಬ್ಯಾಲೆನ್ಸ್‌ನ್ನು ಕಾಪಾಡಿಕೊಳ್ಳಬೇಕಾಗುತ್ತೆ ಮತ್ತು ಓದುಗರ ಪ್ರತಿಕ್ರಿಯೆ ಏನಾಗಿರುತ್ತೆ ಅಂತ ಒಂದ್ಹತ್ತು ಹೆಜ್ಜೆ ಮುಂದೆ ಹೋಗಿ ಅಂದಾಜು ಮಾಡಬೇಕಾಗುತ್ತೆ. ಇಲ್ಲಾ ಅಂದರೆ ನನ್ನ ಪತ್ರಿಕೆಯ ಸ್ಪೇಸ್ ಕೂಡಾ ನಿಮಗಾರಿಗೂ ಉಳಿಯೋಲ್ಲ.
  • ನಾವು ಒಂದು ಸಂಪಾದಕೀಯ ಬರೆದ್ವಿ. ನಂಬಿಕೆ ಮತ್ತು ಮೂಢ ನಂಬಿಕೆ ಅನ್ನೋದರ ಬಗ್ಗೆ ಮತ್ತಷ್ಟು ವಿಶ್ಲೇಷಣೆ, ಚರ್ಚೆ ಅಗತ್ಯ ಅನ್ನೋದು ನಮ್ಮ ವಾದ ಆಗಿತ್ತು. ಅದರಲ್ಲಿ ಬಿಲ್ ಅಗತ್ಯ ಅನ್ನೋದು ಮೊದಲ ಅಂಶವಾಗಿತ್ತು. ಮತ್ತೆ ಪರಿಶೀಲಿಸಬೇಕು, ಮತ್ತಷ್ಟು ಚರ್ಚೆಯಾಗಬೇಕು ಮತ್ತು ಜನರ ನಂಬಿಕೆಗೆ ಧಕ್ಕೆ ತರುವಂತೆ ಇರಬಾರದು, ಸಮಾಜವನ್ನು ಈ ಸಂದರ್ಭದಲ್ಲಿ ಕದಡುವಂತಿರಬಾರದು ಎನ್ನೋದು ನಮ್ಮ ಅಭಿಪ್ರಾಯವಾಗಿತ್ತು. ಯಾಕೆಂದರೆ ನಿಮಗೆ ಗೊತ್ತು, ಚುನಾವಣೆ ಹತ್ತಿರದಲ್ಲಿದೆ. ಪೊಲರೈಸಿಂಗ್ ಚರ್ಚೆಗಳು ನಡಿತಿವೆ… ಮತ್ತು ಬಹಳ ಕಷ್ಟ ಪಟ್ಟು ಯಾವುದೋ ಒಂದು ಒಂದು ಲಿಬರಲ್ ರೆಜೀಮ್ ಅಧಿಕಾರಕ್ಕೆ ಬಂದಿದೆ. ಅಷ್ಟೆ ಬರೆದದ್ದು. ಆಮೇಲೆ ನನ್ನನ್ನು ಒಬ್ಬ ವಿಲನ್ ಅಂತೆ ನೋಡಲಾರಂಭಿಸದರು. ಯಾರು ನನ್ನ ಜೊತೆ ಚರ್ಚೆ ನಡೆಸಿದ್ದರೋ.. ಅವರೇ ನನ್ನನ್ನು ವಿಲನ್ ಅಂತೆ ಕಂಡರು. ನನಗೆ ಅನೇಕ ಎಸ್ಸೆಮ್ಮೆಸ್ಸುಗಳ ಬಂದವು. ’ನೀವು ಕೊನೆಗೂ ಚಡ್ಡಿ ಅಂತ ತೋರಿಸ್ಕಂಡ್ರಿ..’ ಅಂತ ಕಾಮೆಂಟ್‌ಗಳು ಬಂದವು. ನನಗೆ ನೋವಾಯಿತು.
  • ಅಣ್ಣಾ ಹಜಾರೆಯ ಲೋಕಪಾಲ್ ಬಿಲ್‌ನಲ್ಲಿ ಇದ್ದ ಸರ್ವಾಧಿಕಾರಿ ಟೆಂಡೆನ್ಸಿಗಳಿವೆ ಅಂತ ನಾವೆಲ್ಲಾ ವಿರೋಧ ಮಾಡಿದ್ವಿ. ಲೋಕಪಾಲ್ ನ ಬಿಲ್ ಅನ್ನೂ, ಈ ಬಿಲ್ ಅನ್ನು ಅಕ್ಕ-ಪಕ್ಕ ಇಟ್ಟುಕೊಂಡು ನೀವು ನೋಡಿ. ನಾನ್ಯಾಕೆ ಇಷ್ಟೆಲ್ಲಾ ಹೇಳ್ತಿದೀನಿ ಅಂದರೆ, ನನಗೆ ಬಿಲ್ ಬೇಕು.

5 thoughts on ““ನಾವು-ನಮ್ಮಲ್ಲಿ” ಸುಗತ ಶ್ರೀನಿವಾಸರಾಜು ಮಾತನಾಡಿದ್ದು…

  1. Ahamed

    ನನಗೆ ವಿಜ್ಞಾನಕ್ಕೆ ನಿಮ್ಮಲ್ಲಿ ಒಂದು ಕೋಣೆ ಅಂದರೆ ಅಥವ ಕಿಂಡಿ ಮೀಸಲಿಟ್ಟರೆ ಚೆನ್ನ ೆಂದೆನಿಸುತ್ತದೆ. ಆಲೋಚಿಸಿ ಉತ್ತಮವಾದ ಭೂಮಿಯ ಬಗ್ಗೆ ಬರೆದು ಚಿತ್ರೀಕರಿಸಿಸದ್ದೀರಿ. ವಿಜ್ಞಾನ ಸಾಹಿತ್ಯದ ರೂಪದಲ್ಲಿ ಹೊರಬರಲು ಶ್ರಮಿಸಬೇಕಿದೆ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಸಾಹಿತಿಗಳು ಕಡಿಮೆ ಹಾಗಾಘಿ ಈ ಸಲಹೆ.

    Reply
  2. Ananda Prasad

    ಬೇರೆ ಹಲವು ಸಮಸ್ಯೆಗಳಿಂದ ರಾಜ್ಯವು ಬಳಲುತ್ತಿರುವಾಗ ಮೂಢ ನಂಬಿಕೆ ನಿಷೇಧ ಕಾಯ್ದೆ ತರಲು ರಾಜ್ಯ ಸರಕಾರ ಯೋಚಿಸುತ್ತಿರುವುದು ಕೆಲವು ಪ್ರತಿಗಾಮಿಗಳಿಗೆ ಭಾರೀ ದೊಡ್ಡ ಅಪರಾಧವಾಗಿ ಕಾಣುತ್ತಿದೆ. ಇವರ ಅಪಪ್ರಚಾರ ನೋಡಿದರೆ ರಾಜ್ಯ ಸರಕಾರ ಮೂಢ ನಂಬಿಕೆ ನಿಷೇಧ ಕಾನೂನಿನ ಬಗ್ಗೆ ಪ್ರಯತ್ನಿಸುತ್ತಿರುವುದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದೇ ತಿಳಿಯಬೇಕು. ಮುಖ್ಯವಾಗಿ ಇಂಥ ಅಪಪ್ರಚಾರದಲ್ಲಿ ತೊಡಗಿರುವವರು ಪುರೋಹಿತಶಾಹೀ ಹಿನ್ನೆಲೆಯ ಮಾಧ್ಯಮಗಳ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತಿರುವ ಪ್ರತಿಗಾಮಿ ಮನುಷ್ಯರು. ಮಾಧ್ಯಮಗಳು ಇಂಥ ಪ್ರತಿಗಾಮಿ ಚಿಂತನೆ ಉಳ್ಳ ಮನುಷ್ಯರನ್ನು ಮುಖ್ಯಸ್ಥರನ್ನಾಗಿ ಮಾಡಿದರೆ ದೇಶವು ಮುನ್ನಡೆಯಲಾರದು. ಯಥಾಸ್ಥಿತಿವಾದಿ ಹಾಗೂ ಪ್ರತಿಗಾಮಿ ಹಿನ್ನೆಲೆಯ ಮನುಷ್ಯರನ್ನು ಮಾಧ್ಯಮಗಳ ಮುಖ್ಯಸ್ಥರನ್ನಾಗಿ ಮಾಡಬಾರದು. ಮಾಧ್ಯಮಗಳಿಗೆ ಜನತೆಯನ್ನು ಮುನ್ನಡೆಸುವ, ಉದಾರವಾದಿ ಹಾಗೂ ಪ್ರಗತಿಶೀಲ ಚಿಂತನೆ ಇರುವ ಯೋಚನಾಶೀಲ ವ್ಯಕ್ತಿಗಳನ್ನು ಮುಖ್ಯಸ್ಥರನ್ನಾಗಿ ಮಾಡಬೇಕಾದುದು ಅಗತ್ಯ. ಇದನ್ನು ಮಾಡದೆ ಹೋದರೆ ದೇಶವು ಇನ್ನೂ ಹಲವು ಶತಮಾನ ಕಳೆದರೂ ಪುರೋಹಿತಶಾಹೀ ಚಿಂತನೆಗಳಿಂದ ಹೊರಬರಲು ಸಾಧ್ಯವಿಲ್ಲ.

    Reply
  3. Naveen_H

    ರೀ ಆನಂದ್ ಪ್ರಸಾದ್ ಈಗ ಸುಗತ ಶ್ರೀನಿವಾಸರ ಮಾತುಗಳನ್ನು ನೀವು ಒಪ್ಪಿಕೊಳ್ತೀರೂ ಅಥವಾ ಅವರನ್ನು ಪುರೋಹಿತಶಾಹಿ, ಪ್ರತಿಗಾಮಿ, ಮೊಂತಾದ ಲಿಸ್ಟ್ ಗೆ ಸೇರಿಸಿದ್ರೋ ಅನ್ನೋದನ್ನು ದಯಾಳುಗಳಾದ ತಾವು ಸ್ವಲ್ಪ ಜನಸಾಮಾನ್ಯರಿಗೆ ಅರ್ಥವಾಗೋ ಶಬ್ದಗಳನ್ನು ಬಳಸಿ ಪುರೋಹಿತಶಾಹಿ, ಪ್ರತಿಗಾಮಿ ಮುಂತಾದ ಶಬ್ದಗಳನ್ನು ಬಳಸದೇ ತಿಳಿಸಿ ಕೃಪೆ ತೋರಬೇಕಾಗಿ ವಿನಂತಿ.

    Reply
  4. Ananda Prasad

    ಸುಗತ ಶ್ರೀನಿವಾಸರಾಜು ಅವರನ್ನು ನಾನು ಪ್ರತಿಗಾಮಿ, ಪುರೋಹಿತಶಾಹಿ ಎಂದು ಹೇಳಿಲ್ಲ. ಮಾಧ್ಯಮಗಳ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತಿರುವ ಪುರೋಹಿತಶಾಹಿ, ಪ್ರತಿಗಾಮಿ ಚಿಂತನೆಯ ಜನ ಮೂಢನಂಬಿಕೆಗಳ ನಿಷೇಧ ಕಾನೂನಿನ ಕುರಿತು ಅಪಪ್ರಚಾರದಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಯಾವ ಯಾವ ಮಾಧ್ಯಮಗಳಲ್ಲಿ ಇಂಥ ಪುರೋಹಿತಶಾಹಿ, ಪ್ರತಿಗಾಮಿ ಚಿಂತನೆಯ ಜನ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತಿದ್ದಾರೆ ಎಂಬುದು ಆ ಮಾಧ್ಯಮಗಳು ಯಾವುದಕ್ಕೆ ಆದ್ಯತೆ ಕೊಟ್ಟು ಮುಖಪುಟದಲ್ಲಿ ಅಬ್ಬರಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ನೋಡಿದರೆ ಗೊತ್ತಾದೀತು.

    Reply

Leave a Reply

Your email address will not be published. Required fields are marked *