Daily Archives: November 23, 2013

ಸಂಗಯ್ಯ ಹಿರೇಮಠರಿಗೆ ಧನ್ಯವಾದಗಳನ್ನು ತಿಳಿಸುತ್ತಾ…


– ರವಿ ಕೃಷ್ಣಾರೆಡ್ದಿ


 

ಹಿಂದಿನ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಗಣಿ ಹಗರಣಗಳ ವಿರುದ್ಧವಾಗಿ, ಹಾಗೂ ಬಿಜೆಪಿ ಮತ್ತದರ ಸಹಪಕ್ಷಗಳ ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣದ ವಿರುದ್ಧದ ಜನತೀರ್ಪಿನಿಂದಾಗಿ ಆರೇಳು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಕೊನೆಗೂ ಸಂತೋಷ್ ಲಾಡ್ ಹೊರ ನಡೆದಿದ್ದಾರೆ. KPN photoಇದು ಸಿದ್ಧರಾಮಯ್ಯ ಮತ್ತವರ ಪಕ್ಷದವರು ನೈತಿಕತೆ ಮೆರೆಯೋಣ ಎಂದು ಭಾವಿಸಿದ ಕಾರಣಕ್ಕೆ ಅಲ್ಲವೇ ಅಲ್ಲ. ಸಂಗಯ್ಯ ಹಿರೇಮಠ್ ಎಂಬ ಸುಮಾರು ಎಪ್ಪತ್ತು ವರ್ಷದ ಹೋರಾಟಗಾರ ಮತ್ತು ಎಚ್.ಎಸ್.ದೊರೆಸ್ವಾಮಿ ಎಂಬ ತೊಂಬತ್ತೈದು ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಹೋರಾಟದ ಫಲವಾಗಿ ಮಾತ್ರ ಸಂತೋಷ್ ಲಾಡ್ ಎಂಬ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೊತ್ತ ವ್ಯಕ್ತಿ ಈ ರಾಜ್ಯದ ಸಚಿವ ಸಂಪುಟದಿಂದ ಹೊರ ನಡೆಯುವಂತಾಗಿದೆ.

ಅಣ್ಣಾ ಹಜಾರೆಯವರು ತಮ್ಮ ಭಾಷಣಗಳಲ್ಲಿ ಸಂದರ್ಭ ಸಿಕ್ಕಾಗಲೆಲ್ಲ ತಾವು ಮಹಾರಾಷ್ಟ್ರ ಸರ್ಕಾರದ ಎಷ್ಟು ಭ್ರಷ್ಟ ಸಚಿವರ ರಾಜೀನಾಮೆಗೆ ಕಾರಣನಾಗಿದ್ದೇನೆ ಎಂದು ಹೇಳುತ್ತಿರುತ್ತಾರೆ. ವರ್ಷದ ಹಿಂದೆ ನಡೆದ ಕೇಂದ್ರ ಸರ್ಕಾರದ ಸಂಪುಟ ಪುನರ್‌ರಚನೆಯ ಸಂದರ್ಭದಲ್ಲಿ ಆರು ಸಚಿವರನ್ನು ಕೈಬಿಟ್ಟ ಸಂದರ್ಭದಲ್ಲೂ “ನಾನು ಆರು ಸಚಿವರ ವಿಕೆಟ್ ಪಡೆದಿದ್ದೇನೆ” ಎಂದು ಹೇಳಿದ್ದರು. ಆ ದೃಷ್ಟಿಯಲ್ಲಿ ಯೋಚಿಸುವುದಾದರೆ ನಮ್ಮ ರಾಜ್ಯದ ಸಮಾಜ ಪರಿವರ್ತನಾ ಸಮುದಾಯanna-hazareಎಸ್.ಆರ್.ಹಿರೇಮಠರು ರಾಜ್ಯದ ಜನತೆಯ ಪರ ತಮ್ಮ ಹೋರಾಟದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ವಿಕೆಟ್‌ಗಳನ್ನು ಪಡೆಯುತ್ತಲೇ ಬಂದಿದ್ದಾರೆ ಮತ್ತು ಭ್ರಷ್ಟರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಈ ರಾಜ್ಯದ ಸಾರ್ವಜನಿಕ ಹಿತಾಸಕ್ತಿ ಮತ್ತು ನೈಜ ಪ್ರಜಾಪ್ರಭುತ್ವದ ಉಳಿವಿಗಾಗಿ ಅವರು ಮಾಡುತ್ತಿರುವ ಹೋರಾಟಕ್ಕೆ ನಮ್ಮ ಅಭಿನಂದನೆಗಳಲ್ಲ, ಬದಲಿಗೆ ಧನ್ಯವಾದ ಮತ್ತು ಕೃತಜ್ಞತೆಗಳನ್ನು ತಿಳಿಸಬೇಕಿದೆ.

ಅಂದ ಹಾಗೆ, ಸಂತೋಷ್ ಲಾಡ್‌ರವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಅವರ ವಿರುದ್ಧ ಯಾವ ಆರೋಪಗಳು ಇದ್ದವೊ ಮತ್ತು ಯಾವ ದಾಖಲೆಗಳು ಲಭ್ಯವಿದ್ದವೊ, ಅದಕ್ಕಿಂತ ತೀರಾ ಹೆಚ್ಚಿನ ಮಾಹಿತಿಗಳೇನೂ ಕಳೆದ ಐದಾರು ತಿಂಗಳಿನಲ್ಲಿ ಹೊರಬಂದಿರಲಿಲ್ಲ. ಲಾಡ್‌ರನ್ನು ಅಕ್ರಮಗಳ ಆರೋಪದ ಮೇಲೆ ಕೈಬಿಡಬೇಕೆಂದಿದ್ದರೆ ಎಂದೋ ಕೈಬಿಡಬಹುದಿತ್ತು. ಇಷ್ಟು ದಿನಗಳ ಕಾಲ ಸ್ವತಃ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಲಾಡ್‌ರನ್ನು ಸಮರ್ಥಿಸಿಕೊಳ್ಳುತ್ತಲೆ ಬಂದರು ಮತ್ತು ತಾವೆ ಅವರಿಗೆ ಕ್ಲೀನ್ ಚಿಟ್ ಕೊಡುತ್ತಿದ್ದರು. ಆದರೆ, ಹಿರೇಮಠರು ಮತ್ತು ದೊರೆಸ್ವಾಮಿಯವರ ಸಂಘಟಿತ ಪ್ರಯತ್ನದ ಫಲವಾಗಿ ಈ ಪ್ರಸ್ತಾಪ ಮತ್ತು ಹೋರಾಟವನ್ನು ಚಾಪೆಯ ಕೆಳಗೆ ಹುದುಗಿಸಿಡಲಾಗದು ಮತ್ತು ಕ್ರಮ ತೆಗೆದುಕೊಳ್ಳುವುದನ್ನು ಹೆಚ್ಚು ದಿನ ಮುಂದೂಡಲಾಗದು ಎನ್ನುವ ಕಾರಣಕ್ಕೆ ತಮಗೆ ಅನುಕೂಲಕರವಾದ ಸಮಯ ಸಂದರ್ಭ ನೋಡಿಕೊಂಡು ಮುಖ್ಯಮಂತ್ರಿಗಳು ಸಂತೋಷ್ ಲಾಡ್‌ರ ರಾಜೀನಾಮೆ ಪಡೆದಿದ್ದಾರೆ.

ಬೆಳಗಾವಿಯ ಅಧಿವೇಶನ ಮತ್ತು ಅಲ್ಲಿ ವಿಪಕ್ಷಗಳು ಈ ವಿಷಯ ಎತ್ತಬಹುದಾದ ಸಾಧ್ಯತೆಯಿಂದಾಗಿಯೂ santosh-ladಈಗ ರಾಜೀನಾಮೆ ಪಡೆದಿರಬಹುದು. ಆದರೆ, ವಿಪಕ್ಷಗಳ ಇಂತಹ ಎಷ್ಟು ಒತ್ತಡಗಳನ್ನು ನಮ್ಮ ಆಡಳಿತ ಪಕ್ಷಗಳು ಮೆಟ್ಟಿ ನಿಂತಿಲ್ಲ ಮತ್ತು ಕಡೆಗಣಿಸಿಲ್ಲ? ಇನ್ನು, ಈ ವಿಷಯ ಇರಲಿ, ಇಲ್ಲದಿರಲಿ, ಸದನದ ಕಲಾಪಗಳು ಸುಸೂತ್ರವಾಗಿ ನಡೆಯುವ ಯಾವ ಖಾತರಿ ಇದೆ? ವಿರೋಧಿಸುವುದೇ, ಬಾಯಿ ಮಾಡುವುದೇ ಕಲಾಪದಲ್ಲಿ ಪಾಲ್ಗೊಳ್ಳುವ ವಿಧಾನ ಎಂದು ವಿಪಕ್ಷಗಳ ಸದಸ್ಯರು ಅಂದುಕೊಂಡರೆ, ಇದೊಂದು ಅನಗತ್ಯ ಕಸರತ್ತು, ಸಮಯ ಹಾಳು ಎಂಬ ಭಾವನೆಯಲ್ಲಿ ಆಳುವ ಪಕ್ಷದ ಸದಸ್ಯರು ಮತ್ತು ಸಚಿವರು ಭಾವಿಸುತ್ತಾರೆ. ಅವರು ಸದನದಲ್ಲಿ ಪಾಲ್ಗೊಳ್ಳಲು ತೋರಿಸುವ ಉತ್ಸಾಹದಿಂದಲೇ ಇದನ್ನೆಲ್ಲ ಅಳೆಯಬಹುದು. ಹಾಗಾಗಿ, ವಿಪಕ್ಷಗಳಿಗೆ ಹೆದರಿ ಮತ್ತು ಅವರ ಒತ್ತಡಕ್ಕೆ ಮಣಿದು ಸಿದ್ಧರಾಮಯ್ಯನವರು ಲಾಡ್‌ರ ರಾಜೀನಾಮೆ ಪಡೆದಿದ್ದಾರೆ ಎನ್ನುವುದು ಅಷ್ಟೇನೂ ಸರಿಯಲ್ಲ. (ನಾವು ಪ್ರತಿನಿಧಿಸುವ ಲೋಕ್‌ಸತ್ತಾ ಪಕ್ಷದ ವತಿಯಿಂದ ನಾನು ಮತ್ತು ನನ್ನ ಸಹೋದ್ಯೋಗಿಗಳು ಒಮ್ಮೆ ಪತ್ರಿಕಾಗೋಷ್ಟಿ ಕರೆದು ಸಂತೋಷ್ ಲಾಡ್‌ರ ರಾಜೀನಾಮೆ ಪಡೆಯಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದೆವು. ನಮ್ಮ ಒತ್ತಾಯದ ಕಾರಣಕ್ಕಾಗಿಯೆ ಅವರ ರಾಜೀನಾಮೆ ಪಡೆಯಲಾಯಿತು ಎನ್ನುವುದು ಎಷ್ಟು ಬಾಲಿಶವಾಗುತ್ತದೊ, ಅದಕ್ಕಿಂತ ಸ್ವಲ್ಪ ಕಮ್ಮಿ ಬಾಲಿಶತನದ್ದು ಬಿಜೆಪಿಯವರ ಒತ್ತಡದಿಂದಾಗಿ ಮತ್ತು ಅವರು ಸದನದಲ್ಲಿ ಮಾಡಬಹುದಾದ ಕಿರಿಕಿರಿಯ ಕಾರಣಕ್ಕಾಗಿ ಲಾಡ್‌ರ ರಾಜೀನಾಮೆ ಪಡೆಯಲಾಯಿತು ಎನ್ನುವುದು.)

ಇನ್ನು, ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿವೆ, parameshwara-roshanbeg-dkshivakumarಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮನಸ್ಸಿಲ್ಲದ ಮುಖ್ಯಮಂತ್ರಿಗಳು, ಲಾಡ್‌ರವರು ರಾಜೀನಾಮೆ ನೀಡುವಂತೆ ಮಾಡುವುದರ ಮೂಲಕ ತಮಗಿಷ್ಟವಿಲ್ಲದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಆಗದಂತಹ ವಾತಾವರಣ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಒಂದಷ್ಟು ವಾಸ್ತವಾಂಶ ಇರಬಹುದು. ಸಂಪುಟ ವಿಸ್ತರಣೆ ಎಂದರೆ ಅದು ಭಿನ್ನಮತವನ್ನು ಉಂಟು ಹಾಕಿದಂತೆ ಎನ್ನುವ ವಾತಾವರಣ ನಮ್ಮಲ್ಲಿದೆ. ಹಾಗಾಗಿ ಸಂಪುಟ ವಿಸ್ತರಣೆಯನ್ನು ಮುಂದೂಡಲು ಅಥವ ಹಾಗೆ ವಿಸ್ತರಣೆ ಮಾಡಲೇಬೇಕಾದ ಸಂದರ್ಭ ಬಂದಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಬಹುದಾದಂತಹ ಕೆಲವರನ್ನು ಹೊರಗಿಡಲು ಸಿದ್ದರಾಮಯ್ಯನವರು ಹೀಗೆ ಮಾಡಿರಲೂಬಹುದು. ಆದರೆ, ಹಾಗೆ ಆದಲ್ಲೂ ಅದು ನೈತಿಕವಾದ ನಡೆಯಲ್ಲ. ಅದು “ರಾಜಕಾರಣ” ಯಾವೆಲ್ಲ ಕೆಟ್ಟ ಅಧಿಕಾರ್ಥಗಳನ್ನು (connotations) ಕೊಡುತ್ತದೆಯೊ ಅದಕ್ಕೆ ತಕ್ಕನಾದ ನಡವಳಿಕೆಯೇ ಆಗಿದೆ. ರಾಜ್ಯ ಈ ಮುಖ್ಯಮಂತ್ರಿಯಿಂದ ಇನ್ನೂ ಹೆಚ್ಚಿನ ನೈತಿಕತೆ ಮತ್ತು ಪ್ರಬುದ್ಧತೆಯನ್ನು ಬಯಸುತ್ತದೆ.

ಸಂತೋಷ್ ಲಾಡ್‌ರ ರಾಜೀನಾಮೆಯ ಸಂದರ್ಭ ಏನೇ ಇರಲಿ, ಎಸ್.ಆರ್.ಹಿರೇಮಠರು ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತ, ಸುಪ್ರೀಮ್‌ ಕೋರ್ಟ್‌ನಲ್ಲಿ ದಾವೆಗಳನ್ನು ನಡೆಸುತ್ತ, sr-hiremath-hansrajದೆಹಲಿಯ ಕಾಂಗ್ರೆಸ್ ವರಿಷ್ಠರಿಗೂ ಈ ಬಗ್ಗೆ ಮಾಹಿತಿಯನ್ನು ತಲುಪಿಸುವಂತಹ, ಮತ್ತು ಮಾಧ್ಯಮಗಳಲ್ಲಿ ಈ ವಿಷಯ ಕಾಲಕಾಲಕ್ಕೆ ಚರ್ಚೆಯಾಗುವಂತೆ ಮಾಡದೇ ಹೋಗಿದ್ದಿದ್ದರೆ, ಈ ಸಂದರ್ಭವೂ ಬರುತ್ತಿರಲಿಲ್ಲ. ಬಹುಶಃ ದೊರೆಸ್ವಾಮಿಯವರು ಐವತ್ತು ಪೈಸೆಯ ಅಂಚೆ ಕಾಗದದ ಮೇಲೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯದೆ ಇದ್ದಿದ್ದರೆ ಇನ್ನೂ ಒಂದಿಬ್ಬರು ಕಳಂಕಿತರು ಈ ಸಂಪುಟದಲ್ಲಿ ಇರುತ್ತಿದ್ದರು. ನಾಡು ಈ ಹಿರಿಯರಿಬ್ಬರ ಹೋರಾಟಕ್ಕೆ ಎಂದೂ ಕೃತಜ್ಞರಾಗಿರಬೇಕಿದೆ.

ಕೊನೆಯದಾಗಿ, ಸಂತೋಷ್ ಲಾಡ್‌ರ ರಾಜೀನಾಮೆಯ ನಂತರ ಎಸ್.ಆರ್.ಹಿರೇಮಠರು ಪ್ರತಿಕ್ರಿಯಿಸಿರುವ ಮಾತುಗಳಲ್ಲಿರುವ ಘನತೆ ಮತ್ತು ದೊಡ್ಡತನವನ್ನು ರಾಜ್ಯದ ಜನತೆ ಗಮನಿಸಬೇಕಿದೆ. “ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ನಮ್ಮ ಹೋರಾಟವಲ್ಲ. ಆತ ಎಷ್ಟೇ ಪ್ರಭಾವಶಾಲಿಯಿದ್ದರೂ, ಯಾವುದೇ ಪಕ್ಷವಿದ್ದರೂ ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಹೋರಾಟ ಅವಿರತ, ನಿಶ್ಚಲ. ಅದೇ ನಮ್ಮ ಧ್ಯೇಯ. ಸಿದ್ದರಾಮಯ್ಯ ಅವರು ಸಚ್ಚಾರಿತ್ರ್ಯ ಹೊಂದಿದ್ದವರು. ಇಂತಹ ಕೆಲವರು ಸೇರಿಕೊಂಡು ಮುಜುಗರ ತಂದಿದ್ದರು. ಕಾಂಗ್ರೆಸ್ ಪಕ್ಷ ಕೂಡ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದಾಗಿ ರಾಜ್ಯದ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೇರಿತ್ತು. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕೇ ವಿನಃ ಇಂತಹ ಕ್ಷುಲ್ಲಕ ಸಂಗತಿಗಳು ಚರ್ಚೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ಅಧಿವೇಶನಕ್ಕೆ ಮೊದಲೇ ಈ ವಿಷಯಕ್ಕೆ ಅಂತ್ಯ ಹಾಡಿದ್ದಾರೆ. ಇದು ರಾಜ್ಯದ ಜನತೆಗೆ, ನ್ಯಾಯಕ್ಕೆ ಸಿಕ್ಕ ಜಯ.” ಹೀಗೆಂದಿರುವ ಹಿರೇಮಠರ ರೀತಿಯಲ್ಲಿಯೇ ನಮ್ಮ ರಾಜ್ಯದ ಬಹುಸಂಖ್ಯಾತ ಜನರೂ ನಮ್ಮ ಜನಪ್ರತಿನಿಧಿಗಳಿಂದ ಹೆಚ್ಚಿನ ಉತ್ತರದಾಯಿತ್ವ ಮತ್ತು ನೈತಿಕತೆಯನ್ನು ಆಗ್ರಹಿಸಿದಾಗ ಮಾತ್ರ ಅವರಂತಹವರ ಹೋರಾಟಗಳಿಗೂ ಒಂದು ಅರ್ಥ ಮತ್ತು ತಾರ್ಕಿಕ ಅಂತ್ಯ ಇರುತ್ತದೆ. ಇಲ್ಲದಿದ್ದರೆ, ಇವೆಲ್ಲ ಈ ಸಂದರ್ಭದ ಕ್ಷಣಿಕ ಗೆಲುವುಗಳಾಗುತ್ತವೆ. ಅದು ನಾವು ಹಿರೇಮಠರಂತಹವರಿಗೆ ಕೃತಜ್ಞತೆಯ ಬದಲಿಗೆ ಕೃತಘ್ನತೆ ತೋರಿಸಿದಂತೆ. ಈ ರಾಜ್ಯದ ಸಮಷ್ಟಿ ಪ್ರಜ್ಞೆ ಹಾಗೆ ಇಲ್ಲ ಎನ್ನುವ ಆಶಾವಾದ ಮತ್ತು ಕ್ರಿಯಾಶೀಲತೆ ನಮ್ಮದಾಗಲಿ.

ಪ್ರಜಾಪ್ರಭುತ್ವಕೆ ದಾರಿ ತೋರಿಸುವವರಾರು? ದಾರಿ ಯಾವುದಯ್ಯಾ?

– ಬಿ.ಶ್ರೀಪಾದ ಭಟ್

ಕಾಂಗ್ರೆಸ್ ಪಕ್ಷ 2014 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಯಾವ ಬಗೆಯ ಪೂರ್ವ ತಯಾರಿ ನಡೆಸಿದೆ? ಆ ಪಕ್ಷದ ಅಂತರಿಕ ಸಿದ್ಧತೆಗಳು, ಚಿಂತನೆಗಳು ಹಾಗೂ ಪಕ್ಷವೊಂದರ Internal Organisation Structure ಇಂದು ಚುನಾವಣೆಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಅದರ ಸಾಮರ್ಥ್ಯ ಯಾವ ಮಟ್ಟದಲ್ಲಿದೆ? 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನಂತಹ ಪ್ರಮುಖ ಪಕ್ಷವೊಂದು ಸತತವಾಗಿ ಮೂರನೇ ಬಾರಿಗೆ ಮರು ಆಯ್ಕೆ ಬಯಸಿದಾಗ ಮೇಲಿನ ಈ ಅಂಶಗಳು ಬಹಳ ಮುಖ್ಯವಾಗುತ್ತವೆ.

ಇವೆಲ್ಲವನ್ನೂ ಕಾಂಗ್ರೆಸ್‌ನ ಇಂದಿನ ಸ್ಥಿತಿಯಲ್ಲಿ ಪರಸ್ಪರ ಹೋಲಿಕೆಯಲ್ಲಿಟ್ಟು ವಿಮರ್ಶಿಸಿದಾಗ ಕಂಡುಬರುವುದೇನೆಂದರೆ ಅಪಾರ ನಿರಾಶೆ. narender_modi_rssಏಕೆಂದರೆ ಫ್ಯಾಸಿಸ್ಟ್ ಗುಂಪು ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ರಾಜಕೀಯದ ಮುಂಚೂಣಿಗೆ ಧುಮುಕಿದ್ದು ದೇಶದ ಇಂದಿನ ಇಡೀ ರಾಜಕೀಯ ಚಟುವಟಿಕೆಗಳು ಮತ್ತು ಚುನಾವಣಾ ಪ್ರಚಾರವನ್ನು ಸಂಪೂರ್ಣ ಶಕ್ತಿ ಪ್ರದರ್ಶನ ವೇದಿಕೆಗಳಾಗಿ ಪರಿವರ್ತಿಸಿದ್ದಾರೆ. ಫ್ಯಾಸಿಸ್ಟರು ಅಧಿಕಾರಕ್ಕಾಗಿ ಎಲ್ಲಾ ಬಗೆಯ ತಂತ್ರ ಕುತಂತ್ರಗಳಲ್ಲಿ ನಿರತರಾಗಿದ್ದಾರೆ. ಮಾಧ್ಯಮಗಳು ಏಕಪಕ್ಷೀಯವಾಗಿ, ಕುರುಡಾಗಿ ಈ ಫ್ಯಾಸಿಸ್ಟರ ಪರವಾಗಿ ಪ್ರಚಾರ ಮಾಡುತ್ತಿವೆ. ಮತೀಯ, ಕೋಮುವಾದಿ ರಾಷ್ಟ್ರೀಯವಾದವು ಮುನ್ನುಗ್ಗುತ್ತಿರುವಂತಹ ಹೊರಳು ದಾರಿಗೆ ತಿರುಗಿರುವ ಇಂಡಿಯಾದ ಇಂದಿನ ಆತಂಕಭರಿತ ರಾಜಕೀಯ ಸ್ಥಿತಿಯಲ್ಲಿ ಅಪಾರ ಅನುಭವವುಳ್ಳ, ಅತ್ಯಂತ ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಕಾಂಗ್ರೆಸ್ ಪಕ್ಷ ಹವ್ಯಾಸಿ ರಾಜಕೀಯ ಪಕ್ಷದಂತೆ ವರ್ತಿಸುತ್ತ ಈ ಬಿರುಗಾಳಿಗೆ ತತ್ತರಿಸುತ್ತಿದೆ. ಇಂದು ದೇಶದಲ್ಲಿ ಕಾಂಗ್ರೆಸ್‌ನಷ್ಟು ನೈತಿಕವಾಗಿ ದಿವಾಳಿಯೆದ್ದ ಪಕ್ಷ ಮತ್ತೊಂದಿಲ್ಲ.

ರಾಜಕೀಯ ಪಂಡಿತರ ಪ್ರಕಾರ ಅದರ ಬಹಿರಂಗ ಪ್ರಚಾರದ ವರದಿಗಳು ಮತ್ತು ನಾಯಕರ ಭಾಷಣಗಳನ್ನು ಹೊರತುಪಡೆಸಿದರೆ 2004 ಮತ್ತು 2009 ರ ಚುನಾವಣೆಗಳ ಸಂದರ್ಭಕ್ಕೆ ನಡೆಸಿದ ತಯಾರಿಗಳಿಗೆ ಹೋಲಿಸಿದರೆ 2014 ರ ಚುನಾವಣೆಗಾಗಿ ಕಾಂಗ್ರೆಸ್‌ನ ಪೂರ್ವ ತಯಾರಿ ಯೋಜನೆಗಳು ಸಂಪೂರ್ಣ ಭಿನ್ನವಾಗಿವೆ ಮತ್ತು ಸೂತ್ರ ಹರಿದ ಗಾಳಿಪಟದಂತಿದೆ. ಕಳೆದ ಹದಿನೈದು ವರ್ಷಗಳಲ್ಲಿ ಅಂದರೆ 1997 ರಿಂದ 2012 ರವರೆಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಸೋಲು ಮತ್ತು ಗೆಲವುಗಳು ಸೋನಿಯಾ ಗಾಂಧಿಯವರ ನಿರ್ಧಾರಗಳು, ಚಿಂತನೆಗಳು, ಮತ್ತು ಮೇಡಂರ ರಾಜಕೀಯ ಕಾರ್ಯದರ್ಶಿ sonia-ahmad-patelಅಹ್ಮದ್ ಪಟೇಲ್‌ರ ರಾಜಕೀಯ ಚಾಣಾಕ್ಷತೆ ಮತ್ತು ಸಮ್ಮಿಶ್ರ ಸರ್ಕಾರವೊಂದರ ಸಹಯೋಗಿ ಪಕ್ಷಗಳೊಂದಿಗೆ ನಿರಂತರವಾಗಿ ಕಾಯ್ದುಕೊಂಡುಬರುವ ಪರಸ್ಪರ ಸಹಕಾರದ ಮಟ್ಟ ಇವುಗಳನ್ನು ಅವಲಂಬಿಸಿತ್ತು. ಸೋನಿಯಾ ಗಾಂಧಿ ಅವರ ನಾಯಕತ್ವದ ದೂರದರ್ಶತ್ವ ಮತ್ತು ಮಿತಿಗಳು ಮತ್ತು ಅಹ್ಮದ್ ಪಟೇಲ್‌ರ ರಾಜಕೀಯ ಕಾರ್ಯದರ್ಶಿಯ ಕಾರ್ಯಕ್ಷಮತೆಯ ಫಲವಾಗಿ ಕಳೆದ ಹದಿನೈದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಅಂತರಿಕ ಚಟುವಟಿಕೆಗಳು ಮತ್ತು ನಿರ್ಧಾರಗಳು ಈ ಕೆಳಗಿನಂತಿತ್ತು:

  • ವೈಯುಕ್ತಿಕ ಮಟ್ಟದಲ್ಲಿನ ರಾಜಕೀಯ ಸಂಬಂಧಗಳನ್ನು ಮತ್ತು ಅವರ ಪ್ರಭಾವ ಮಟ್ಟವನ್ನು ಆಧರಿಸಿ ಯೋಜನೆಗಳನ್ನು ರೂಪಿಸುವುದು ಮತ್ತು ರಾಜಕೀಯ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು. ಅಂದರೆ ಅಹ್ಮದ್ ಪಟೇಲರ ಕೆಲಸವೇ ರಾಜಕೀಯ ಬಿಕ್ಕಟ್ಟುಗಳನ್ನು ಸರಿಪಡಿಸುವದಕ್ಕಿಂತಲೂ ಹೆಚ್ಚಾಗಿ “ನಿಭಾಯಿಸುವುದು” ಮುಖ್ಯವಾಗಿತ್ತು.
  • ಚರ್ಚೆಗಳು, ಸಂಧಾನಗಳು, ಮತ್ತು ಕಾದು ನೋಡುವ ತಂತ್ರ ಸೋನಿಯಾ ಗಾಂಧೀಯವರ ರಾಜಕೀಯ ಗುಣಲಕ್ಷಣಗಳು ಮತ್ತು ಪ್ರಧಾನ ಚೌಕಟ್ಟಾಗಿದ್ದರೆ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಇಳಿಸಿದ್ದು ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಈ ಅಹ್ಮದ್ ಪಟೇಲ್.
  • ಮೇಲ್ನೋಟಕ್ಕೆ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವ ಜಾರಿಯಲ್ಲಿದೆ ಎಂದು ಕಂಡುಬರುತ್ತಿದ್ದರೂ ಆಳದಲ್ಲಿ ಕಾಂಗ್ರೆಸ್ ಪಕ್ಷವು ಮೈಗೂಡಿಸಿಕೊಂಡಿರುವುದು ರಾಜವಂಶದ ಆಡಳಿತ ಮಾದರಿಯನ್ನು. ಅಂದು ಇಂದಿರಾ ರಾಜಮಾತೆಯಾಗಿದ್ದರೆ ಇಂದು ಸೋನಿಯಾ ಗಾಂಧಿ. ಪಕ್ಷದ ಅಂತರಿಕ ಆಡಳಿತ ವ್ಯವಸ್ಥೆಯಲ್ಲಿ ಏನೂ ವ್ಯತ್ಯಾಸವಿಲ್ಲ. ಜೀ ಹುಜೂರ್ ಶೈಲಿಗೆ ಮಾತ್ರ ಮಣೆ ದೊರಕುತ್ತದೆ.
  • ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಈ ಭೇಟಿಗಳನ್ನು ಆದಷ್ಟು ಪಕ್ಷದ “ಒಳಿತಿಗೆ” ಅನುಗುಣವಾಗುವಂತೆ ರೂಪಿಸುವುದು (ಅಹ್ಮದ್ ಪಟೇಲ್ ಇದರಲ್ಲಿ ಸಂಪೂರ್ಣ ಪಳಗಿದ ಕೈ). ಸೋನಿಯಾ ಗಾಂದಿಯವರ ರಾಜಕೀಯ ಕಾರ್ಯದರ್ಶಿಯಾಗಿ ಕಳೆದ ಹದಿನೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಹ್ಮದ್ ಪಟೇಲ್ ಮೇಡಂರವರ ನಿರ್ಧಾರಗಳಿಗೆ, ಚಿಂತನೆಗಳಿಗೆ ಪೂರಕವಾಗುವಂತೆ ಇಡೀ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳನ್ನು, ಕಾರ್ಯಕಾರಿ ಸಭೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದದ್ದು ಈ ಅಹ್ಮದ್ ಪಟೇಲ್‌ರ ಯಶೋಗಾಥೆಗಳಲ್ಲೊಂದು.
  • ಸೋನಿಯಾ ಗಾಂಧಿಯವರು ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಆ ಸಂದರ್ಭಕ್ಕೆ ಅನುಗುಣವಾಗಿ ಸಂಬಂಧಪಟ್ಟಂತಹ ಪಕ್ಷದ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ರಾಜ್ಯಗಳ ನಾಯಕರ, ಆಪ್ತರ ಸಾಮೂಹಿಕ ನಿರ್ಧಾರಗಳಿಗೆ, ಅಭಿಪ್ರಾಯಗಳ ಅಭಿವ್ಯಕ್ತಿಗೆ ಮಾನ್ಯತೆ ನೀಡುತ್ತಿದ್ದರು. ನಂತರ ಅಳೆದೂ ತೂಗಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದರು. ಅದರ ಪರಿಣಾಮಗಳು ಅನೇಕ ಬಾರಿ ಗೆಲುವು ನೀಡಿವೆ. ಹಲವಾರು ಬಾರಿ ಮರೆಯಲಾರದಂತಹ ಬಲವಾದ ಪೆಟ್ಟನ್ನು, ಕಂಡರಿಯದಂತಹ ಸೋಲನ್ನು ನೀಡಿವೆ. ಸೋನಿಯಾರ ಅಧ್ಯಕ್ಷತೆಯಲ್ಲಿ ಪಕ್ಷದ ನೇತಾರರನ್ನು ಆರಿಸುವಾಗ, ಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವಾಗ ಆತನ ಪ್ರಾಮಾಣಿಕತೆ, ಪಕ್ಷನಿಷ್ಠತೆ, ವೈಯುಕ್ತಿಕ ಪರಿಶುದ್ಧತೆಯೇ ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದೆಂದು ಬಹಿರಂಗವಾಗಿ, ಕಾರ್ಯಕಾರಿಣಿ ಸಭೆಗಳಲ್ಲಿ ಹೇಳಲಾಗುತ್ತಿದ್ದರೂ, ವಾಸ್ತವದಲ್ಲಿ ಮುಖ್ಯವಾಗಿ ಆತ ಗೆಲ್ಲುವ ಕುದುರೆಯಾಗುವ ಸಾಧ್ಯತೆಗಳನ್ನು ಆಧರಿಸಿಯೇ ರಾಜ್ಯಗಳ ನಾಯಕರಾಗಿ ಆರಿಸುತ್ತಿದ್ದರು. ಅಲ್ಲಿ ಭ್ರಷ್ಟತೆಯ, ಜಾತೀಯತೆಯ ಆರೋಪಗಳು ಹಿನ್ನೆಲೆಗೆ ಸರಿಯಲ್ಪಡುತ್ತಿದ್ದವು. ಗೆಲುವಿನ ಸಾಧ್ಯತೆ ಮಾತ್ರ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಕಡೆಗೆ ಭವಿಷ್ಯದ ಆಶೋತ್ತರಗಳು ಗೌಣಗೊಂಡು ಹಣಬಲ, ತೋಳ್ಬಲ ಮೇಲುಗೈ ಸಾಧಿಸುತ್ತಿತ್ತು. ಇದು ಇಂದಿರಾ ಗಾಂಧಿಯವರ ರಾಜಕೀಯ ಶೈಲಿ. ಇದನ್ನು ಸೋನಿಯಾ ಅವರೂ ಸಹ ಇದನ್ನು ಮುಂದುವರೆಸಿಕೊಂಡು ಹೋದರು. sonia-kharge-dksಅಂದಿನ ಮುಖ್ಯಮಂತ್ರಿ ಗುಂಡೂರಾಯರಿಂದ ಹಿಡಿದು ಇಂದಿನ ಡಿ.ಕೆ.ಶಿವಕುಮಾರ್‌ವರೆಗಿನ ರಾಜಕೀಯ ವಿದ್ಯಾಮಾನಗಳನ್ನು ಅವಲೋಕಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೆ ಇಂದಿರಾ ಗಾಂಧಿಯವರ ಕಾಲಘಟ್ಟದ ರಾಜಕೀಯ ಚಿತ್ರಣಗಳ ಸ್ವರೂಪ ಮತ್ತು ಸೋನಿಯಾ ಗಾಂಧಿಯವರ ಕಾಲಘಟ್ಟದ ರಾಜಕೀಯ ನಿರ್ಧಾರಗಳ ಸ್ವರೂಪಕ್ಕೂ ಅಪಾರವಾದ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಸೋನಿಯಾ ಗಾಂಧಿಯವರ ಅನೇಕ ರಾಜಕೀಯ, ಸಾಮಾಜಿಕ ನಿರ್ಧಾರಗಳು ಇಂದಿರಾ ಅವರಂತೆ ಜನಪ್ರಿಯ ಶೈಲಿಯನ್ನೇ ಹೋಲುತ್ತಿದ್ದರೂ ಅನೇಕ ಸಂದರ್ಭಗಳಲ್ಲಿ ಸೋನಿಯಾ ಗಾಂಧಿಯವರು ತಮ್ಮ ಅತ್ತೆಗಿಂತಲೂ ಭಿನ್ನವಾಗಿ ವರ್ತಿಸಿದ್ದಾರೆ. ಅನೇಕ ಬಾರಿ ರಾಜಕೀಯವಾಗಿ ಮುಗ್ಗರಿಸಿದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಸೋನಿಯಾ ಗಾಂಧಿಯವರ ಜಾತ್ಯಾತೀತ, ಸೆಕ್ಯುಲರ್ ವ್ಯಕ್ತಿತ್ವ ನಿಜಕ್ಕೂ ಇಂದು ನಮಗೆಲ್ಲ ಮಾದರಿಯಾಗಿದೆ. ಸೋನಿಯಾ ಅವರು ಇಂಡಿಯಾದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿಯೇ, ಸಂವಿಧಾನಕ್ಕೆ ಬದ್ಧರಾಗಿಯೇ ತಮ್ಮ ಸೆಕ್ಯುಲರ್ ವ್ಯಕ್ತಿತ್ವವನ್ನು ರೂಪಿಕೊಂಡಿದ್ದು ಅಭೂತಪೂರ್ವವೆನಿಸುತ್ತದೆ. ಇದರಲ್ಲಿ ಇಂದಿರಾ ಗಾಂಧಿಯವರು ಸೋಲುತ್ತಾರೆ.

ಆದರೆ 2004 ರಲ್ಲಿ ಯುಪಿಎ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಪಕ್ಷದ ಉನ್ನತಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ಅಧ್ಯಕ್ಷೆಯಾಗಿ, Manmohan-Sonia-Rahulಯುಪಿಎ ಕೂಟದ ಛೇರ್ಮನ್ ಆಗಿ ಸೋನಿಯಾ ಗಾಂಧಿಯವರು ಯುಪಿಎ ತಂಡದ ರಾಜಕೀಯದ ಹೊಣೆಗಾರಿಕೆ ಹೊತ್ತರೆ ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಅವರು ಯುಪಿಎ ಸರ್ಕಾರವನ್ನು ಸಮತೋಲನವಾಗಿ ನಡೆಸುವ ಜವಾಬ್ದಾರಿ ಹೊತ್ತರು. ಆದರೆ ದುರಂತವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಆ ಮೂಲಕ ಯುಪಿಎ ತಂಡವನ್ನು ರಾಜಕೀಯವಾಗಿ ನಿಭಾಯಿಸಲು ಸಂಪೂರ್ಣವಾಗಿ ಸೋತಿದ್ದಾರೆ. ಒಂದು ವೇಳೆ ಯುಪಿಎ ಗುಂಪು 2014 ರ ಚುನಾವಣೆಯಲ್ಲಿ ದಯನೀಯವಾಗಿ ಸೋತರೆ (130 ರಿಂದ 140 ಸೀಟುಗಳನ್ನು ಗೆದ್ದರೆ) ಬಹುಶಃ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಹೊರತುಪಡಿಸಿ ಮತ್ತಾವ ಪಕ್ಷವು 2014 ರ ನಂತರ ಯುಪಿಎದೊಂದಿಗೆ ಉಳಿಯುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ವಿವಿಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾನ ತತ್ವಗಳ ಅಡಿಯಲ್ಲಿ ಸಾಮರಸ್ಯ ಸಾಧಿಸಲು ಸೋನಿಯಾ ಗಾಂಧಿಯವರ ಸೋಲು ಇಂದು ನಿಚ್ಛಳವಾಗಿ ಕಾಣುತ್ತಿದೆ.

ಮತ್ತೊಂದು ಕಡೆ ಕಳೆದ ಹತ್ತು ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಸೌಹಾರ್ದಯುತ ಸಂಬಂಧ ಸಂಪೂರ್ಣ ಹಳಸಿಹೋಗಿದ್ದು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರಷ್ಟೇ ಸಮನಾಗಿ ಸೋನಿಯಾ ಗಾಂಧಿಯವರೂ ಸಹ ಇದಕ್ಕೆ ಜವಾಬ್ದಾರರು. ಏಕೆಂದರೆ ಸದಾ ಒಳಸಂಚು ಮತ್ತು ಕಾಲೆಳೆಯುವ ಪ್ರವೃತ್ತಿಯೇ ಇಂಡಿಯಾ ರಾಜಕೀಯದ ಮುಖ್ಯಲಕ್ಷಣವಾಗಿರುವಂತಹ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ಇಮೇಜ್ ಮತ್ತು ತಮ್ಮ ಕುಟುಂಬದ ಸಾರ್ವಭೌಮತ್ವಕ್ಕೆ ಅಪಾರ ಮಹತ್ವ ನೀಡಿದರೇ ಹೊರತಾಗಿ ಸದಾ Sonia-UPAನಿರಂತರ ಜನಸಂಪರ್ಕ ಮತ್ತು ಜನತೆ ಮತ್ತು ಮಾಧ್ಯಮಗಳೊಂದಿಗೆ ಸಂವಾದವನ್ನು ನಡೆಸುವುದರ ಮೂಲಕವೇ ತಮ್ಮನ್ನು ಸದಾ ಸಾಮಾಜಿಕ ಸಂವೇದನಶೀಲ ವ್ಯಕ್ತಿತ್ವವುಳ್ಳವರಾಗಿ ರೂಪಿಸಿಕೊಳ್ಳುವ ಸಾಧ್ಯತೆಗಳನ್ನು, ಒಂದು ಸ್ಪೇಸ್ ಅನ್ನು ಹುಟ್ಟುಹಾಕದೇ ಹೋದರು ಸೋನಿಯಾ ಗಾಂಧಿ.

ಯುಪಿಎ ಸರ್ಕಾರದ ಛೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ಸೋನಿಯಾ ಗಾಂಧಿಯವರು ವಿರೋಧ ಪಕ್ಷಗಳೊಂದಿಗೆ ನೇರಾನೇರ ಮುಖಾಮುಖಿಯಾಗುವಂತಹ ರಾಜಕೀಯ ವಾಗ್ವಾದಗಳನ್ನು ನಡೆಸುತ್ತಲೇ ಪಕ್ಷಾಧಾರಿತ ರಾಜಕಾರಣವನ್ನು ನಡೆಸುತ್ತಲೇ, ಸಮಾನಾಂತರವಾಗಿ ರಾಜಕೀಯ ಮುತ್ಸದ್ದಿತನ ಮತ್ತು ರಾಜಕೀಯ ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಾ ವಿರೋಧಪಕ್ಷಗಳೊಂದಿಗೆ ಸಾಮರಸ್ಯವನ್ನು ಸಾಧಿಸುವ ಅವಕಾಶಗಳನ್ನು ಕಲ್ಪಿಸುವುದು ಮೊದಲ ಆದ್ಯತೆಯಾಗಬೇಕಿತ್ತು. ಆದರೆ ಇದನ್ನು ಸೋನಿಯಾ ಗಾಂದಿಯವರು ಸಾಧಿಸಲೇ ಇಲ್ಲ. ರಾಜಕೀಯ ಪಂಡಿತರ ಪ್ರಕಾರ ಒಂದು ವೇಳೆ ಸೋನಿಯಾ ಅವರು ಮೇಲ್ಕಾಣಿಸಿದ ರಾಜಕೀಯ ಮುತ್ಸದ್ದಿನವನ್ನು ಪ್ರದರ್ಶಿಸಿದ್ದರೆ ಈ ಕೋಲ್‌ಗೇಟ್, 2-ಜಿ ಸ್ಪೆಕ್ಟ್ರಮ್‌ದಂತಹ ಹಗರಣಗಳು ಇಂದಿನ ತೀವ್ರ ಸ್ವರೂಪಕ್ಕೆ ತಿರುಗುತ್ತಿರಲಿಲ್ಲ. ಕಾಂಗ್ರೆಸ್‌ನ ಕೊರಳಿಗೆ ಉರುಳಾಗುತ್ತಿರಲಿಲ್ಲ. ಇದು ಸೋನಿಯಾರ ಬಲು ದೊಡ್ಡ ರಾಜಕೀಯ ಸೋಲು.

ಕಾಂಗ್ರೆಸ್ ಪಕ್ಷದ ಇಂದಿನ ಬಿಕ್ಕಟ್ಟು ಸದರಿ ಪಕ್ಷವನ್ನು ಮರಳಿ 1997 ರ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಆಗ ಅಧ್ಯಕ್ಷರಾಗಿ ಸಂಪೂರ್ಣವಾಗಿ ಸೋತಿದ್ದ ಅವಸರದ ಮುದುಕ ಸೀತಾರಾಮ್ ಕೇಸರಿಯವರನ್ನು ಅಧಿಕಾರದಿಂದ ಕೆಳಗಿಳಿಸಿ ಪಕ್ಷದ ಪುನರುಜ್ಜೀವನದ ಕಾರ್ಯವನ್ನು ತಮ್ಮ ಕೈಗೆತ್ತಿಕೊಂಡ ಸೋನಿಯಾ ಗಾಂಧಿಯವರು ನಂತರ 2004 ರವರೆಗೂ ಏಳು ವರ್ಷಗಳ ಕಾಲ ನುರಿತ, ಅಪಾರ ಅನುಭವವುಳ್ಳ ರಾಜಕಾರಣಿಯಂತೆ ಇಡೀ ಪಕ್ಷವನ್ನು ನಿಭಾಯಿಸಿದರು. ಆ ಕಾಲಘಟ್ಟದಲ್ಲಿ ತಮ್ಮ ಹೆಗಲೇರಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ, ಘನತೆಯಿಂದ ನಿರ್ವಹಿಸಿದ ಸೋನಿಯಾ ಗಾಂಧಿ 2004 ರಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದರು. rahul-robert-priyankaಹದಿನೈದು ವರ್ಷಗಳ ನಂತರ ತಮ್ಮ ತಾಯಿಯವರು ಕೈಗೆತ್ತುಕೊಂಡ ಜವಾಬ್ದಾರಿಯನ್ನು ಇಂದು ತಮ್ಮ ಹೆಗಲಗೇರಿಸಿಕೊಂಡಿರುವ “ಯುವರಾಜ” ರಾಹುಲ್ ಗಾಂಧಿ ರಾಜಕೀಯವಾಗಿ ಯಾವ ಬಗೆಯ ಧೃವೀಕರಣಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ?? ಕಳೆದ ವರ್ಷಗಳ ಅವರ ನಡೆನುಡಿಗಳ ಮಾತು ಬಿಡಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷನ ಪದವಿಯನ್ನು ವಹಿಸಿಕೊಂಡ ನಂತರ ಇಂದಿನ ರಾಹುಲ್ ಗಾಂಧಿಯ ವರ್ತನೆ ಹೇಗಿದೆ? ಬೌದ್ಧಿಕವಾಗಿ ಅನೇಕ ವೇಳೆ ಭಾವುಕರಾಗಿ, ಕೋಮುವಾದಿ ರಾಷ್ಟ್ರೀಯತೆಗೆ ಪರ್ಯಾಯವೇನೋ ಎಂಬಂತೆ ಸದಾ ಒತ್ತಡದಲ್ಲಿ ಮಾತನಾಡುವ ರಾಹುಲ್ ವಾಸ್ತವದಲ್ಲಿ ದಿವಾಳಿಯೆದ್ದ ಇಡೀ ಪಕ್ಷವನ್ನು ಹೇಗೆ ನಿಭಾಯಿಸುತ್ತಿದ್ದಾರೆ?? ಹಳ್ಳಿಯಿಂದ ದಿಲ್ಲಿಯವರೆಗೆ ಎನ್ನುವ ನುಡಿಕಟ್ಟು ಈ ಕಾಂಗ್ರೆಸ್ ಉಪಾಧ್ಯಕ್ಷನಿಗೆ ಯಾವ ಬಗೆಯಲ್ಲಿ ಅರ್ಥವಾಗಿದೆ?? ಸದಾ ಮ್ಯಾಜಿಕ್ ಅನ್ನು ಬಯಸುವ ಕಾಂಗ್ರೆಸ್‌ನ ಸೋಮಾರಿ, ನಿಸ್ತೇಜಗೊಂಡ, ಬೇಜವಬ್ದಾರಿ ನಾಯಕಮಣಿಗಳಗೆ ಈ ರಾಹುಲ್ ಯಾವ ಬಗೆಯ ಮ್ಯಾಜಿಕ್ ತರಬಲ್ಲರು??

ಅನೇಕ ಬಾರಿ ತನ್ನ ಬಳಿ ಅಂತಹ ಮಂತ್ರದಂಡವಿದೆಯೆಂಬಂತೆಯೇ ವರ್ತಿಸುತ್ತಿರುವ ಆಶಾವಾದದ ರಾಹುಲ್ ಮತ್ತೊಂದು ಕ್ಷಣದಲ್ಲಿಯೇ ತೀರಾ ಎಲ್ಲವನ್ನೂ ಕಳೆದಕೊಂಡ ತಬ್ಬಲಿಯಂತೆ, ಅಮೆಚೂರ್ ರಾಜಕಾರಣಿಯಂತೆ ವರ್ತಿಸುವುದರಲ್ಲಿ ನಿಸ್ಸೀಮ. ಉದಾಹರಣೆಗೆ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವುದು, ಕಾಂಗ್ರೆಸ್‌ಗೆ ಶಿಸ್ತುಬದ್ಧ ನಡುಳಿಕೆಯನ್ನು ಕಲಿಸುತ್ತೇನೆ, ಕೇಡರ್ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಮರಳಿ ಕಟ್ಟುತ್ತೇನೆ ಎಂದು ಮಹಾತ್ವಾಕಾಂಕ್ಷೆಯಿಂದ ನುಡಿಯುವ ರಾಹುಲ್ ತನ್ನ rahul_priyanka_soniaಆಶಯಗಳಿಗೆ ಅನುಗುಣವಾಗಿಯೇ ಯುವ ಕಾರ್ಯಕರ್ತರ ನೇಮಕಾತಿಗೆ ಚಾಲನೆ ನೀಡುತ್ತಾರೆ. ಅಪಾರ ಭರವಸೆಯೊಂದಿಗೆ ದೇಶಾದ್ಯಾಂತ ಈ ನೇಮಕಾತಿಗಳು ನಡೆಯುತ್ತವೆ.ಈ ನೇಮಕಾತಿ ಪ್ರಕ್ರಿಯೆಯು ಅಪ್ಪಟ ಕಾರ್ಪೋರೇಟ್ ಮಾದರಿಯಲ್ಲಿರುವಂತೆ ರೂಪಿಸಿದ್ದಾರೆ ರಾಹುಲ್. ಅಂದರೆ ಕಾಂಗ್ರೆಸ್ ಪಕ್ಷದ ಸದಸ್ಯರಾಗ ಬಯಸುವವರು ಮೊದಲು ತಮ್ಮ ಬಯೋಡಾಟವನ್ನು ಮಂಡಿಸಬೇಕು. ನಂತರ ರಾಹುಲ್ ಆಯ್ಕೆ ಮಾಡಿದ ಸಂದರ್ಶಕರ ಮುಂದೆ ಸಂದರ್ಶನಕ್ಕೆ ಹಾಜರಾಗಬೇಕು. ಒಮ್ಮೆ ಆಯ್ಕೆಗೊಂಡ ನಂತರ ದಿನನಿತ್ಯ ಪಕ್ಷದ ಕಛೇರಿಗೆ ಹಾಜರಾಗಬೇಕು. ಹೀಗೆ ಸೋಮಾರಿಗಳ, ಬೇಜವ್ದಾರಿಗಳ ಆಡೊಂಬಲವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಶಿಸ್ತುಬದ್ಧ ಒಂದು ಕಾರ್ಪೋರೇಟ್ ಸಂಸ್ಥೆಯ ರೂಪ ಕೊಡಲು ಶ್ರಮಿಸುತ್ತಿರುವ ರಾಹುಲ್ ಗಾಂಧಿಯ ಈ ಪ್ರಯತ್ನ ಮತ್ತು ಯೋಜನೆ ಶ್ಲಾಘನೀಯವೇ. ಅನುಮಾನವೇ ಇಲ್ಲ. ಮತೀಯವಾದದ ವಿರುದ್ಧ ಹೋರಾಡಲು, ಸರ್ವಾಧಿಕಾರದ ವಿರುದ್ಧ ಪ್ರತಿರೋಧ ತೋರಲು ಕಾಂಗ್ರೆಸ್ ಪಕ್ಷಕ್ಕೆ ಸೆಕ್ಯುಲರ್ ತತ್ವದ ಮಾನವೀಯ ಮುಖವನ್ನು, ಸಮತಾವಾದದ ನುಡಿಕಟ್ಟನ್ನು ತೊಡಿಸಲು ಶ್ರಮಿಸುತ್ತಿರುವ ರಾಹುಲ್ ಅವರ ಕಾರ್ಯಕ್ಷಮತೆಗೆ, ಆಶಯಗಳಿಗೆ ಭಾರತೀಯರೆಲ್ಲರಿಗೂ ಸಹಮತವಿದೆ. So far so good. ನಂತರ ಮುಂದೇನು?? ಮುನ್ನುಗ್ಗುವ ದಿನಗಳು ಮುಗಿದ ನಂತರ ತಮ್ಮನ್ನು ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಬೇಕಾದಂತಹ ಕಾಲಘಟ್ಟದಲ್ಲಿಯೇ ಈ ಯುವ ನಾಯಕ ಮುಗ್ಗರಿಸಲಾರಂಬಿಸುತ್ತಾರೆ. ಎಲ್ಲವೂ ಟೋಕನಿಸಂನ ಮಟ್ಟಕ್ಕೆ ತಂದು ಬಿಡುವ ರಾಹುಲ್ ಅನೇಕ ವೇಳೆ ನಗೆಪಾಟಲಗೀಡಾಗುತ್ತಾರೆ. ಇದ್ದಕ್ಕಿದ್ದಂತೆಯೇ ಬದಲಾಗುವ, ದಿನನಿತ್ಯ ಪಲ್ಲಟಗೊಳ್ಳುವ ರಾಜಕೀಯದ ವಿದ್ಯಾಮಾನಗಳಿಗೆ ಡೈನಮಿಕ್ ಆಗಿ ಉತ್ತರಿಸಬೇಕಾದ ರಾಹುಲ್ ತೀರಾ ತಣ್ಣಗೆ ಪ್ರತಿಕ್ರಿಯಿಸಲಾರಂಬಿಸುತ್ತಾರೆ. Rahul_Gandhi_Ajay_Makenಅನೇಕ ಬಾರಿ ದಿಗಿಲು ಬೀಳುವಂತಿರುತ್ತಾರೆ. ಅಸಹಾಯಕತೆ ಪ್ರದರ್ಶಿಸುತ್ತಾರೆ. ಇನ್ನು ನಮಗೆ ಅಧಿಕಾರ ಇಲ್ಲದಿದ್ದರೆ ಪರವಾಗಿಲ್ಲ, ನಾನು ಮುಂದಿನ ಹೊಸ ತಲೆಮಾರಿಗೆ ರಾಜಕೀಯ ಕಟ್ಟುತ್ತೇನೆ, ಎಂದು ಹಾಡುತ್ತಿದ್ದ “ಯುವರಾಜ” ಚುನಾವಣಾ ಪ್ರಕ್ರಿಯೆ ಶುರುವಾಗುತ್ತಿರುವಂತೆಯೇ ಮರಳಿ ಹಳೇ ಜಾಡಿಗೆ ಜಾರಿಬಿಡುತ್ತಾರೆ. ಮತ್ತದೇ ಹಳೇ ತಲೆಗಳು, ಅನುಭವಸ್ಥರು, ಗೆಲ್ಲುವ ಕುದುರೆಗಳು, ಸಧ್ಯಕ್ಕೆ ಬೇರಾವ ದಾರಿಯಿಲ್ಲ ಎನ್ನುವ ಅದೇ ಹಳೆ ರಾಗಗಳ, ಸವೆದ ನಿರ್ದಿಷ್ಟ ಬಗೆಯ ರಾಜಕೀಯ ಶೈಲಿಗೆ ಶರಣಾಗುವ ರಾಹುಲ್ ತಾವೇ ಉದ್ಘಾಟಿಸಿದ ಹೊಸ ಬಗೆಯ ಪ್ರಯೋಗಕ್ಕೆ ತಿಲಾಂಜಲಿ ನೀಡಲಾರಂಬಿಸುತ್ತಾರೆ. ಇನ್ನು ಅವರ ಆರಂಭಶೂರತ್ವವನ್ನು ನಂಬಿದವರ ಗತಿ?? ಸ್ವತಃ ಮನೆಮಂದಿಯೇ ಕಂಗಾಲಾಗುವಂತಹ ಗೊದಲದ ವಾತಾವರಣ ಸೃಷ್ಟಿಸುವುದರಲ್ಲಿ ರಾಹುಲ್ ನಿಸ್ಸೀಮರು. ನಾಯಕನೊಬ್ಬ ಗೊಂದಲಕ್ಕೆ ಈಡಾಗುವುದೆಂದರೆ ಕೊರಳಿಗೆ ಕಲ್ಲನ್ನು ಕಟ್ಟಿಕೊಂಡು ಬಾವಿಗೆ ಬಿದ್ದಂತೆ!! ಇಂತಹ ಗೋಜಲು ಸ್ಥಿತಿಯಲ್ಲಿ ಕಾಂಗ್ರಸ್ ಪಕ್ಷದ ಹಳೆ ತಲೆಗಳು ಸಂಪೂರ್ಣ ಗೊಂದಲದಲ್ಲಿದ್ದರೆ, ಹೊಸದನ್ನು ಸಾಧಿಸುವ ಬಯಕೆಯೊಂದಿಗೆ ಪಕ್ಷಕ್ಕೆ ಸೇರಿಕೊಂಡ ಹೊಸ ತಲೆಮಾರು ಕಂಗಾಲಾಗಿದ್ದಾರೆ.

ಯಾರ ಬಳಿಯೂ ಉತ್ತರವಿಲ್ಲ, ಸ್ವತಃ ಯುವರಾಜನ ಬಳಿಯೂ!! ಇದು ರಾಹುಲ್ ಗಾಂಧಿಯ ರಾಜಕೀಯ ಶೈಲಿ! ಅದೆಲ್ಲ ಹಾಳಾಗಿ ಹೋಗಲಿ, ಕನಿಷ್ಠ ಒಬ್ಬ ಸಂಸದೀಯಪಟುವಾಗಿ ರಾಹುಲ್ ಗಾಂಧಿಯ ಸಾಧನೆ ಏನು? ಶೂನ್ಯ ! ದೊಡ್ಡ ಶೂನ್ಯ! Rahul-Gandhiಈ ಯುವರಾಜರು ಸಂಸತ್ತಿಗೆ ಹಾಜರಾತಿ ಹಾಕಿದ್ದೇ ಕೇವಲ ಎರಡು ಅಥವಾ ಮೂರು ಬಾರಿ. ಅಲ್ಲಿ ಮಾತನಾಡಿದ್ದಕ್ಕೆ ದಾಖಲೆಯೂ ಇಲ್ಲ. ಪಾರ್ಲಿಮೆಂಟ್ ವ್ಯವಸ್ಥೆಯ ಕುರಿತಾಗಿ ಈ ಮಟ್ಟದ ನಿರ್ಲಕ್ಷ್ಯ ಪ್ರದರ್ಶಿಸುವ ರಾಹುಲ್ ಗಾಂಧಿ ತನ್ನ ಅನುಯಾಯಿಗಳಿಗೆ ಪ್ರಜಾಪ್ರಭುತ್ವದ ಆಶಯಗಳನ್ನು ಹೇಗೆ ವಿವರಿಸುತ್ತಾರೆ?

ಒಟ್ಟಿನಲ್ಲಿ ಈ ಹಾಲುಗೆನ್ನೆಯ, ಹಸುಕೂಸಿನಂತಿರುವ, ರಾಜಕಾರಣಿಯಾಗಿ ಇನ್ನೂ ಅಪ್ರೈಂಟಿಸ್ ಮಟ್ಟದಲ್ಲಿರುವ, ಅಪಕ್ವ ರಾಜಕಾರಣಿ ರಾಹುಲ್ ಗಾಂಧಿ ವಾತಾಪಿ ಜೀರ್ಣೋಭವಕ್ಕೆ ಹೆಸರುವಾಸಿಯಾದ ಭಾರತದ ರಾಜಕೀಯ ಒಡಲಿಗೆ ಬಲಿಯಾಗದಿರಲಿ.

ಕೋಮುವಾದಿ ರಾಷ್ಟ್ರೀಯವಾದವನ್ನು ಬೆಳಸುತ್ತಿರುವ ಆರೆಸಸ್ ಮತ್ತು ಮೋದಿ ಒಂದು ಕಡೆಗೆ ಕ್ರಿಯಾಶೀಲವಾಗುತ್ತಿದ್ದರೆ ಕನಿಷ್ಠ ಈ ಕೋಮುವಾದಿ ರಾಜಕಾರಣಕ್ಕಾದರೂ ಪ್ರತಿರೋಧವೇನೋ ಎಂಬಂತಿದ್ದ ಕಾಂಗ್ರೆಸ್‌ನ ಹಣೆಬರಹ ಹೆಚ್ಚೂ ಕಡಿಮೆ ಮೇಲಿನಂತೆ ನಿರ್ಧಾರವಾಗಿ ಹೋಗಿದೆ. ಇಂದಿನ ಭಾರತದ ರಾಜಕೀಯ ಅಪಾರ ನಾಟಕೀಯತೆಯೊಂದಿಗೆ ವರ್ತಿಸುತ್ತಿದೆ. ದಿನನಿತ್ಯ ಜಟಿಲತೆಯತ್ತ ವಾಲುತ್ತಿದೆ. ಮೇಲುನೋಟಕ್ಕೆ ಸರಳವಾಗಿ ಕಂಡರು ಆಳದಲ್ಲಿ ಸಂಕೀರ್ಣವಾಗಿದೆ. ಭವಿಷ್ಯದ ಕ್ರೌರ್ಯದ ಮುನ್ಸೂಚನೆಗಳಿಗೆ, ಮತೀಯವಾದಿ ಶಕ್ತಿಗಳು ಸೃಷ್ಟಿಸುವ ಹಿಂಸಾಚಾರಕ್ಕೆ ಎಚ್ಚರಿಕೆ ಅವಶ್ಯಕತೆಯೇ ಇಲ್ಲ. ವರ್ತಮಾನದಲ್ಲಿಯೇ ತಾಂಡವವಾಡುತ್ತಿದೆ.