ಇಂಥಾ ಪ್ರಗತಿಪರರು ವಿರಳವಾಗಲಿ


– ಡಾ.ಎಸ್.ಬಿ. ಜೋಗುರ


 

ಒಂದು ಸಂಸ್ಥೆಯನ್ನು ಕಟ್ಟುವಲ್ಲಿ, ಅದರ ಹೆಸರು ಹಸನಾಗಿಡುವಲ್ಲಿ ಅನೇಕರು ಹಗಲಿರುಳು ಶ್ರಮಿಸಿರುತ್ತಾರೆ. ಸಮುದಾಯದಲ್ಲಿ ಈಗಾಗಲೇ ಕುಲಗೆಟ್ಟ ಇತರೆ ಸಂಸ್ಥೆಗಳನ್ನು ಶುಭ್ರವಾಗಿರುವ ಸಂಸ್ಥೆಯೊಂದಿಗೆ ಹೋಲಿಸಿ ಇದ್ದರೆ ಹಾಗಿರಬೇಕು ಎಂದು ನಿರೀಕ್ಷೆ ಮಾಡುವ ಹಂತ ತಲುಪಿದ ವೇಳೆಯಲ್ಲಿಯೇ ಮಕಾಡೇ ಮಲಗುವ, ಒಟ್ಟೂ ಮೌಲಿಕ ಮರ್ಯಾದೆಯನ್ನು ಸಾಸಿವೆಯಷ್ಟು ಸುಖಕ್ಕೆ ಹರಾಜು ಹಾಕುವ ಕ್ರಮವೇ ಅತ್ಯಂತ ತುಛ್ಚವಾದುದು. ಗಾಜಿನ ಮನೆಯಲ್ಲಿರುವವರು ತುಂಬಾ ಹುಷಾರಾಗಿರಬೇಕು. tehelka-tarun-tejpalತೆಹಲ್ಕಾ ದಂತಹ ಪ್ರಗತಿಪರ ಪತ್ರಿಕೆಯೊಂದರ ಸಂಪಾದಕನಾಗಿದ್ದ ತರುಣ ತೇಜಪಾಲ್ ಮಾಧ್ಯಮ ಜಗತ್ತಿನಲ್ಲಿ ತನ್ನದೇಯಾದ ಒಂದು ವಿಶೇಷ ಇಮೇಜನ್ನು ಆ ಪತ್ರಿಕೆಯ ಮೂಲಕವೇ ಗಳಿಸಿಕೊಂಡವನು. ಇಂದು ಯಾವುದೇ ಒಬ್ಬ ವ್ಯಕ್ತಿ ತುಂಬಾ ಪ್ರಗತಿಪರನೆಂದು ಹೇಳುತ್ತಾ ಆತ ಮಾಡುವುದನ್ನೆಲ್ಲಾ ಸಹಿಸಿಕೊಳ್ಳುವ ಸಹನಿಕೆ ಒಟ್ಟು ಸಮಷ್ಟಿಗಿರುವುದಿಲ್ಲ. ಆತ ಪ್ರಗತಿಪರ ಮಣ್ಣ್ನು..ಮತ್ತೊಂದು ಅದೆಲ್ಲಾ ನಮ್ಮ ನೈತಿಕತೆ ಚೆನ್ನಾಗಿರುವಾಗ ಮಾತ್ರ. ಆತ ತನ್ನ ತಂದೆಯ ಸಮಾನ, ಅವನ ಮಗಳು ಮತ್ತು ತಾನು ಸ್ನೇಹಿತೆಯರು. ಹೀಗಿರುವುದು ಗೊತ್ತಿದ್ದೂ… ಇದು ಆ ಯುವತಿಯ ಮಾತು. ತರುಣ ತೇಜಪಾಲ್ ಆ ಯುವತಿಯನ್ನು ತನ್ನ ಲೈಂಗಿಕ ಕಾಮನೆಗಾಗಿ ಬಳಸಿಕೊಂಡದ್ದು ತಪ್ಪು ಎನ್ನುವುದು ಖಡಾಖಂಡಿತ. ಅದೇ ವೇಳೆಗೆ ಈ ಬಗೆಯ ಲೈಂಗಿಕ ಹಗರಣಗಳು ಹಿಂದೆಂದೂ ನಡೆದಿಲ್ಲವೇ..? ಎಂದು ಕೇಳುವವರಿಗೆ ಇಲ್ಲಿ ಅವಕಾಶವಿಲ್ಲ. ಯಾಕೆಂದರೆ ತೇಜಪಾಲ್ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸದಾ ಜಾಗೃತವಾಗಿ ಉಳಿದು ಕಾಯಬೇಕಾದವನು. ಮನೆ ಕಾಯುವವನೇ ಕಳ್ಳತನ ಮಾಡುವ ಕ್ರಮವಿದೆಯಲ್ಲ, ಅದು ನಿಜವಾಗಿಯೂ ಅನೈತಿಕವಾದುದು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಇಂಥಾ ವರ್ತನೆಯಿಂದ ತೆಹಲ್ಕಾ ದಂತಹ ಒಂದು ಪತ್ರಿಕೆಯ ಇಮೆಜನ್ನೇ ಋಣಾತ್ಮಕವಾಗಿ ಬದಲಾಯಿಸಿದ ಅಪಕೀರ್ತಿ ತೇಜಪಾಲಗಲ್ಲದೇ ಇನ್ನಾರಿಗೂ ಅಲ್ಲ. ಆರು ತಿಂಗಳು ತಾನು ಸಂಪಾದಕ ಹುದ್ದೆಯಿಂದ ಕೆಳಗಿಳಿಯುವ ಕ್ರಮ, ಹಾಗೆಯೇ ಏನೋ ಘಟಿಸಬಾರದ್ದು ಘಟಿಸಿತು ಅದಕ್ಕೆ ಕ್ಷಮೆಯಾಚಿಸುವ ರೀತಿ ತರುಣನನ್ನು ಬಾಲಕನಾಗಿಸುವಂತೆ ಮಾಡಿವೆ. ಬೇರೆಯವರು ಈ ಬಗೆಯ ಕೃತ್ಯಗಳಲ್ಲಿ ತೊಡಗಿದಾಗ ಏರು ಧ್ವನಿಯಲ್ಲಿ ಮಾತನಾಡುವವರೇ ಈಗ ಮೆಲುದನಿಯಲ್ಲಿ ಕೆಳಗೆ ಮುಖ ಮಾಡಿ ಮಾತನಾಡುವ ಪ್ರಸಂಗ ಬಂದದ್ದು ದೊಡ್ದ ವಿಪರ್ಯಾಸ. ಕೊನೆಗೂ ಇಲ್ಲಿ ಯಾರೂ ನೆಟ್ಟಗಿಲ್ಲ ಎನ್ನುವ ಭಾವನೆ ತೆಹಲ್ಕಾ ಪತ್ರಿಕೆಯ ಧೊರಣೆಯನ್ನು ಒಪ್ಪಿಕೊಂಡು ಓದುವ ಅನೇಕರಲ್ಲಿ ಬಂದಿರಲಿಕ್ಕೆ ಸಾಕು.

ಕಾಮ ಎನ್ನುವುದು ನಮ್ಮನ್ನು ಮತಿಭ್ರಷ್ಟರನ್ನಾಗಿಸುತ್ತದೆ ಅದಕ್ಕೆ ಸಾಕ್ಷಿಯಾಗಿ, ಈ ಬಗೆಯ ಅನೇಕ ಘಟನೆಗಳು ನಮಗೆ ಮತ್ತೆ ಮತ್ತೆ ಸಾಬೀತು ಪಡಿಸಿದ ಮೇಲೆಯೂ ನಮ್ಮ ಮಾನಸಿಕ ಸ್ಥಿತಿ ಬದಲಾಗಲಿಲ್ಲ ಎಂತಾದರೆ ನಮ್ಮ ಸಮರ್ಥನೆಗೆ, ಪಶ್ಚಾತ್ತಾಪಕ್ಕೆ ಯಾವ ಅರ್ಥವೂ ಇರುವುದಿಲ್ಲ. ದೇಶದ ಬೇರೆ ಬೇರೆ ಕಡೆಗಳಲ್ಲಿ ಥಿಂಕ್ ಟ್ಯಾಂಕ್ ಅನ್ನೊ ಕಾರ್ಯಕ್ರಮ ಸಂಘಟಿಸುವ ತೆಹಲ್ಕಾ ಸಮೂಹಕ್ಕೆ ತನ್ನ ಬುಡದಲ್ಲಿಯೇ ಒಂದು ಮುಳ್ಳಿದೆ ಎನ್ನುವ ಅರಿವಿರಲಿಲ್ಲವೇ..? ಅಥವಾ ಜಾಣ ಕುರುಡು.. ಕಿವುಡು ಇಲ್ಲೂ ಕೆಲಸ ಮಾಡಿದೆಯೋ ಹೇಗೋ ಗೊತ್ತಿಲ್ಲ. ತೀರ ಇತ್ತೀಚೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಯವರ ಮೇಲೆ ಇದೇ ಬಗೆಯ ಲೈಂಗಿಕ ಕಿರುಕುಳದ ಆರೋಪದ ಧ್ವನಿ ಎದ್ದಿರುವುದಿತ್ತು.sexual_harassment_work ಆಗ ಈ ತರುಣ ತೀರಾ ಪ್ರಗತಿಪರನಂತೆ ಮಾತನಾಡಿರುವುದು ಸುಳ್ಳಂತೂ ಅಲ್ಲ. ಈಗ ತನ್ನಿಂದಲೇ ಆ ಬಗೆಯ ಪ್ರಮಾದ ಜರುಗಿದಾಗ ಪ್ರಗತಿಪರತೆಯ ಧ್ವನಿಯೇ ಉಡುಗಿ ಹೋಗಿದ್ದು ವಿಷಾದನೀಯ. ಆ ತರುಣಿಯ ಕ್ಷಮೆ ಕೋರಿದ್ದು, ತನ್ನಿಂದ ತಪ್ಪಾಗಿದೆ ಎಂದು ಹೇಳಿದ್ದನ್ನೂ ಕೂಡಾ ಪ್ರಗತಿಪರತೆಯ ಲಕ್ಷಣವೇ ಎಂದು ಬಿಂಬಿಸುವ ಅಗತ್ಯವಿಲ್ಲ. ಒಬ್ಬ ಸಾಮಾನ್ಯ ಮನುಷ್ಯ ಈ ಬಗೆಯ ಲೈಂಗಿಕ ಕಿರುಕುಳದಲ್ಲಿ ಸಿಲುಕಿಬೀಳುವುದಕ್ಕೂ ಮಹತ್ತರವಾದ ಸಾಧನೆ ಮಾಡಿ, ದೇಶದ ಆಗು ಹೋಗುಗಳ ಬಗ್ಗೆ ನೈಜವಾಗಿ ಬಿಂಬಿಸುವ ಹೊಣೆಗಾರಿಕೆಯುಳ್ಳ ಒಂದು ಪ್ರತಿಷ್ಟಿತ ಪತ್ರಿಕೆಯ ಸಂಪಾದಕನಾಗಿ ಹೀಗೆ ಮಾಡುವುದಕ್ಕೂ ತುಂಬಾ ಅಂತರಗಳಿವೆ. ಒಬ್ಬ ಸಾಮಾನ್ಯನ ಆ ಬಗೆಯ ಕೃತ್ಯ ಆತನನ್ನು ವ್ಯಕ್ತಿಗತವಾಗಿ ಮಾತ್ರ ಬಾಧಿಸುತ್ತದೆ. ಆದರೆ ತರುಣ ತೇಜಪಾಲ್ ಕೃತ್ಯ ಹಾಗಲ್ಲ. ಇದು ಆತನ ವ್ಯಕ್ತಿಗತ ಬಾಧೆಗಿಂತಲೂ ಮುಖ್ಯವಾಗಿ ಒಂದು ಸಂಸ್ಥೆಯ ಬುಡವನ್ನೇ ಪೊಳ್ಳು ಮಾಡಿದ ಕೆಲಸ. ಇದು ಅತ್ಯಂತ ಅಪಾಯದ್ದು.

ಇನ್ನು ತೇಜಪಾಲ್ ಎಸಗಿದ ಈ ಕೃತ್ಯವನ್ನು ಒಂದು ಸಮಾಜದ ಆರೋಗ್ಯದ ನಿಟ್ಟಿನಲ್ಲಿ ನೀಡಬಹುದಾದ ಚಿಕಿತ್ಸೆಯಂತೆ ಪರಿಗಣಿಸಿ ವ್ಯವಹರಿಸಬೇಕು. ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಮಾತ್ರ ಇಲ್ಲಿ ಸರಿಯಲ್ಲ. ಉರಿವ ಮನೆಯ ಗಳ ಹಿರಿಯುವ, ಇಲ್ಲವೇ ಬೆಂಕಿ ಬಿದ್ದ ಗಳಿಗೆಯಲ್ಲಿಯೇ ಮೈ ಕಾಯಿಸಿಕೊಳ್ಳುವ ಚಪಲ ರಾಜಕೀಯ ವಲಯದಲ್ಲಿದ್ದವರಿಗೆ ತುಸು ಜಾಸ್ತಿ. ಅದಾಗಬಾರದು. ಯಾವುದೇ ಹಳೆಯ ಕಾಲದ ಜೀರ್ಣವಾಗಿ ಹೋದ ಸಂಗತಿಗಳಿಗೆ ತಾಜಾ ನೆನಪು ತಂದು ಕೊಡುವ, ಸೇಡು ತೀರಿಸಿಕೊಳ್ಳುವ ಕಸರತ್ತನ್ನು ಮಾತ್ರ ಇಲ್ಲಿ ಮಾಡಬಾರದು. ತರುಣ ತೇಜಪಾಲ್ ಮಾಡಿರುವ ಈ ಕೃತ್ಯವನ್ನು ಒಂದು ಅಪವರ್ತನೆಯನ್ನಾಗಿ ಪರಿಗಣಿಸಿ ತನಿಖೆಯಾಗುವುದು ಸೂಕ್ತ. ಆ ತರಣಿ ಈ ತರುಣ ತೇಜಪಾಲ್ ಬಗ್ಗೆ ಕಂಪ್ಲೇಂಟ್ ಫ಼ೈಲ್ ಮಾಡದಿರುವ ಬಗ್ಗೆಯೂ ಪ್ರಬಲವಾದ ಕಾರಣಗಳಿರಬಹುದು. ಅದು ಆಕೆಯ ತೀರ್ಮಾನಕ್ಕೆ ಬಿಡುವುದು ಉತ್ತಮ. sexual_harassmentಅವಳ ಮೇಲೆ ಒತ್ತಡ ಹೇರುವುದು ಎರಡೂ ಕಡೆಯಿಂದ ನಡೆಯಬಾರದು. ಈ ತೇಜಪಾಲ್ ತುಂಬಾ ಪ್ರಗತಿಪರ ಮನುಷ್ಯ. ಹಾಗೆ ಬರೆಯುವ, ಮಾತನಾಡುವ ಕ್ರಮದಿಂದಲೇ ಅವನು ಹಾಗೆ ಗುರುತಿಸಿಕೊಂಡದ್ದು. ಅದನ್ನು ಅನುಲಕ್ಷಿಸಿಯೇ ತೇಜಪಾಲನನ್ನು ಪ್ರಸಾರ ಭಾರತಿಯ ಕಮಿಟಿಯ ಸದಸ್ಯನನ್ನಾಗಿ ಕಳೆದ ಬುಧುವಾರವಷ್ಟೇ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ನೇಮಕ ಮಾಡಿರುವುದಿತ್ತು. ಆತನ ಈ ಬಗೆಯ ಘನಂಧಾರಿ ಕೆಲಸದಿಂದ ಆ ಸದಸ್ಯತ್ವವನ್ನು ಕೈ ಬಿಡಲಾಯಿತು.

ಬೇರೆ ಯಾವುದೋ ಒಂದು ಅಪವರ್ತನೆಯಾದರೂ ತೇಜಪಾಲನನ್ನು ಈ ಮಟ್ಟಕ್ಕೆ ಇಳಿಸುತ್ತಿರಲಿಲ್ಲ. ಅದೇ ಒಂದೊಮ್ಮೆ ಆ ತರುಣಿಯ ಸಮ್ಮತಿಯಿದ್ದು, ಈ ಘಟನೆ ಜರುಗಿದ್ದರೆ ಈ ರೀತಿಯ ತಿರುವು ಪಡೆಯುತ್ತಿರಲಿಲ್ಲ. ದೇಶದಲ್ಲಿ ದೆಹಲಿಯ ಅತ್ಯಾಚಾರದ ಘಟನೆಯ ನಂತರ ನಿರಂತರವಾಗಿ ನಡೆಯುತ್ತಿರುವ ಈ ಬಗೆಯ ಲೈಂಗಿಕ ದೌರ್ಜನ್ಯಗಳ ಬಗ್ಗೆ ಸಾಕಷ್ಟು ವಸ್ತುನಿಷ್ಟ ವರದಿ ಮಾಡಿ, ಆ ಬಗ್ಗೆ ತುಂಬಾ ಪ್ರಗತಿಪರ ನಿಲುವನ್ನು ಪ್ರದರ್ಶಿಸಿ ಈಗ ಇದ್ದಕ್ಕಿದ್ದಂತೆ ತನ್ನಿಂದ ತಪ್ಪಾಗಿದೆ, ಆರು ತಿಂಗಳು ತಾನು ಮನೆಯಲ್ಲಿ ಉಳಿಯುವೆ ಎನ್ನುವ ಮಾತೇ ಬಾಲಿಶವಾದುದು. ಎಲ್ಲ ವಿಷಯಗಳಲ್ಲೂ ಜನರ ಮೆಮೊರಿ ಶಾರ್ಟ್ ಆಗಿರುವುದಿಲ್ಲ. ತೆಹಲ್ಕಾ ಬಳಗವನ್ನೂ ತೇಜಪಾಲ್ ನ ಈ ಕೃತ್ಯ ಬಾಧಿಸುವಲ್ಲಿ ಎರಡು ಮಾತಿಲ್ಲ. ಈಗಾಗಲೇ ತರುಣ ಮೇಲೆ ಎಫ಼್.ಆಯ್.ಆರ್.ದಾಖಲಾಗಿದೆ. ಬಂಧನದ ಸಾಧ್ಯತೆ ಸನ್ನಿಹಿತವಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ತಡಕಾಡುವಂತಾದದ್ದು ವಿಪರ್ಯಾಸ. ಕಿರುಕುಳವನ್ನು ಅನುಭವಿಸಿದ ಯುವತಿ ಅದಾಗಲೇ ತೆಹಲ್ಕಾ ತೊರೆದದ್ದೂ ಆಯಿತು. ಇಂಥಾ ಪ್ರಗತಿಪರರು ವಿರಳವಾಗುವುದರಲ್ಲಿಯೇ ಸಮಾಜದ ಯೋಗಕ್ಷೇಮ ಅಡಗಿದೆ.

2 thoughts on “ಇಂಥಾ ಪ್ರಗತಿಪರರು ವಿರಳವಾಗಲಿ

  1. sanjeeva

    ನಿಮ್ಮ ಮಾತು ನೂರಕ್ಕೆ ನೂರು ನಿಜ. ಎಂಥ ಕೆಲಸವನ್ನು ಬೇಕಾದರೂ ಮಾಡಿ ಸಮರ್ಥಿಸಿಕೊಳ್ಳುವ ವರ್ಗವಿದ್ದರೆ ಅದು ರಾಜಕೀಯ ಮಾತ್ರ. ಆದರೆ ಜನರಿಗೆ ನೀತಿ ಹೇಳಬೇಕಾದ ಒಂದು ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥ ಹೀಗೆ ಮಾಡಿದಾಗ ಜನರ ದೃಷ್ಟಿಯೇ ಬದಲಾಗಿ ಬಿಡುತ್ತದೆ. ಅದರಲ್ಲೂ ತೇಜಪಾಲ್ ಬೇಲ್ ಗಾಗಿ ಅರ್ಜಿ ಸಲ್ಲಿಸುವಾಗ ಆ ಯುವತಿಯ ಬಗ್ಗೆ ಮಾತನಾಡಿದ್ದು ಅವರು ಪುರುಷ ಸಂಸ್ಕೃತಿಯನ್ನು ತೋರುತ್ತವೆ ಅಷ್ಟೇ ಸತ್ಯ ಅಲ್ಲವೇ. ಆಗಿರುವ ತಪ್ಪಿಗೆ ಜೈಲಿನ ಬಾಗಿಲಲ್ಲಿ ನಿಂತಿದ್ದರೆ ತೇಜ್ಪಾಲ್ ಗೂ ಒಂದು ಘನತೆ ಇರುತ್ತಿತ್ತು. ಇದಷ್ಟೇ ಅಲ್ಲ, ಇಡೀ ಪ್ರಕರಣವನ್ನು ತೆಹೆಲ್ಕಾ ಪತ್ರಿಕೆ ನಡೆಸಿಕೊಂಡ ರೀತಿಯೂ ಸರಿಯಲ್ಲ. ಇದರಲ್ಲಿ ಸಂಪೂರ್ಣವಾಗಿ ಶೋಮಾ ಚೌಧರಿ ಕೂಡ ಎಡವಿದರು ಎಂಬುದು ಅಷ್ಟೇ ಸತ್ಯ. ನಿಮ್ಮ ಲೇಖನ ಇಷ್ಟವಾಗುವುದಕ್ಕೆ ಕಾರಣಗಳೂ ಇವೆ. ಹೇಳೋದು ಒಂದು, ಮಾಡೋದು ಒಂದು ಎಂಬುದು ಪ್ರಗತಿಪರ ವರ್ಗದ ಧ್ಯೇಯವಾಗಬಾರದು. ಹೀಗಾಗಿ ತೇಜ್ಪಾಲ್ ರಂಥ ಪ್ರಗತಿಪರರು ವಿರಳವಾಗಬೇಕು ಎಂಬ ನಿಮ್ಮ ಮಾತು ನೂರಕ್ಕೆ ನೂರು ಸತ್ಯ.

    Reply
  2. prasadraxidi

    ನಮ್ಮ ನಿಜವಾದ ಕಷ್ಟ ಅಡಗಿರುವುದು ಇಂಥಲ್ಲಿಯೇ, ಇಂದು ದೇಶದ ರಾಜಧಾನಿಯಿಂದ ಹಿಡಿದು ಹಳ್ಳಿಯವರೆಗಿನ ಕೋಮುವಾದಿಗಳನ್ನೋ ಭ್ರಷ್ಟರನ್ನೋ ಗುರುತಿಸುವುದು ಸುಲಭ, ಪ್ರಗತಿಪರರಂತೆ, ಸಜ್ಜನರಂತೆ ಸೋಗುಹಾಕುವವರನ್ನು ನಾವು ಗುರುತಿಸುವ ಹೊತ್ತಿಗೆ ಅವರು ತುಂಬಬೆಳೆದು ಬಿಟ್ಟಿರುತ್ತಾರೆ, ಮತ್ತು ಅವರ ಮುಖವಾಡ ಕಳಚಿದಾಗ ಅದರ ಎಲ್ಲ ದುರ್ಲಾಭ ಪಡೆಯುವವರು ಮತ್ತೆ ಜನ ವಿರೋದಿಗಳೇ…… ಇಂತ ಮುಖವಾಡ ಹೊತ್ತ ಮಂದಿಗಳಲ್ಲಿ ಸಾಹಿತಿಗಳು, ಪರಿಸರವಾದಿಗಳು, ಪತ್ರಕರ್ತರು, ಸಮಾಜಸೇವಕರು ಮಾತ್ರವಲ್ಲ, ಹಲವಾರು ವೇದಿಕೆಗಳಲ್ಲಿ ಮಿಂಚುವ ಹೋರಾಟಗಾರರೂ ಇದ್ದಾರೆ..ಇವರ ಕಾರ್ಯಕ್ಷೇತ್ರ ಹಳ್ಳಿಗಳವರೆಗೂ ವ್ಯಾಪಿಸಿದೆ

    Reply

Leave a Reply to prasadraxidi Cancel reply

Your email address will not be published. Required fields are marked *