ಕಂಚಿ ಸ್ವಾಮೀಜಿ ಮತ್ತು ಪ್ರಜಾಪ್ರಭುತ್ವ : ಒಂದು ನೈತಿಕ ಬಿಕ್ಕಟ್ಟು

– ಬಿ.ಶ್ರೀಪಾದ ಭಟ್

2004 ರಲ್ಲಿ ಕಂಚಿ ಕಾಮಕೋಟಿ ಪೀಠದ ಉದ್ಯೋಗಿಯಾಗಿದ್ದ ಶಂಕರರಾಮನ್ ಕೊಲೆಯಾಗಿದ್ದ. ನಂತರ ಅದೇ ಮಠದ ಪೀಠಾದಿಪತಿಯಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಯಿತು. kanchi-seer-arrestedಆಗ ಈ ದಿಟ್ಟ ನಿರ್ಣಯವನ್ನು ಕೈಗೊಂಡಿದ್ದು ಬ್ರಾಹ್ಮಣ ಮುಖ್ಯಮಂತ್ರಿ ಜಯಲಲಿತ. ಆಗ ಬ್ರಾಹ್ಮಣ್ಯದ ಜಾತೀವಾದವನ್ನು, ಶೋಷಣೆಯನ್ನು ವಿರೋಧಿಸುತ್ತಲೇ ಬಂದಿದ್ದ ಡಿಎಂಕೆ ಪಕ್ಷ ಈ ಬಂಧನವನ್ನು ರಾಜಕೀಯ ಕಾರಣಗಳಿಗಾಗಿ ಟೀಕಿಸಿದರೆ ಸಂಘ ಪರಿವಾರ ವರ್ಣಾಶ್ರಮದ ಬದ್ಧತೆಯ ಕಾರಣಗಳಿಗಾಗಿ ಈ ಬಂಧನವನ್ನು ತೀವ್ರವಾಗಿ ಖಂಡಿಸಿ ಸದರಿ ಸ್ವಾಮಿಯ ಬೆಂಬಲಕ್ಕೆ ನಿಂತಿತ್ತು. ಕಾಂಗ್ರೆಸ್ ಎಂದಿನಂತೆ ಮುಗುಮ್ಮಾಗಿತ್ತು. 2005 ರಲ್ಲಿ ಇದೇ ಸ್ವಾಮಿ ಜಾಮೀನಿನ ಮೇಲೆ ಹೊರಬಂದಿದ್ದಾಯಿತು. ನಂತರ ಇಡೀ ಪ್ರಕರಣದ ವಿಚಾರಣೆಯನ್ನು ನಿಷ್ಪಕ್ಷಪಾತದ ತನಿಖೆಗಾಗಿ ಪಾಂಡಿಚೆರಿಗೆ ವಗಾಯಿಸಲಾಯಿತು. ಒಟ್ಟು 181 ಸಾಕ್ಷಿಗಳ ಹೇಳಿಕೆ ಪಡೆಯಲಾಯಿತು. ಅದರಲ್ಲಿ 80 ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿ ಇಡೀ ತನಿಖೆಯನ್ನು ಹಾದಿ ತಪ್ಪಿಸುವಲ್ಲಿ ಯಶಸ್ವಿಯಾದರು. ಏಳು ವರ್ಷಗಳ ಬಳಿಕ ಈಗ ಕೋರ್ಟ್ ತೀರ್ಪು ಪ್ರಕಟಗೊಂಡಿದೆ.

ಯಾವುದೇ ಸಾಕ್ಷಾಧಾರಗಳಿಲ್ಲದ ಕಾರಣ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಆರೋಪಮುಕ್ತಗೊಳಿಸಲಾಗಿದೆ. ಏಕೆಂದರೆ ಈ ಪ್ರಕರಣದ ಪ್ರಮುಖ ಸಾಕ್ಷಿಗಳೆಲ್ಲವೂ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಪೋಲೀಸರಿಗೆ ತಿರುಗಿಬಿದ್ದವು. ಆಗಲೇ ಈ ಪ್ರಕರಣದ ಹಣೆಬರಹ ಗೊತ್ತಾಗಿತ್ತು. ಇಂದು ಬ್ರಾಹ್ಮಣರ ವಲಯದಲ್ಲಿ ಹರ್ಷೋಲ್ಲಾಸವು ತುಂಬಿ ತುಳುಕಾಡುತ್ತಿದ್ದರೆ ನಾವೆಲ್ಲ ಗೌರವಿಸುವ, ಪ್ರೀತಿಸುವ “ದ ಹಿಂದೂ” ದಿನಪತ್ರಿಕೆ ಇಂದಿನ (28/11/2013) ತನ್ನ ದಿನಪತ್ರಿಕೆಯಲ್ಲಿ ಈ ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿ ತನ್ನ ವಿಜಯವನ್ನು ಕೊಚ್ಚಿಕೊಂಡಿರುವ ಒಂದು ಪುಟದ ಜಾಹಿರಾತನ್ನು ಪ್ರಕಟಿಸಿದೆ. ಇದು ನಿಜಕ್ಕೂ ಖೇದಕರ.

ಈ ಶಂಕರರಾಮನ್ ಕೊಲೆಯ ಹಿಂದಿನ ಕೆಲವು ಸೂಕ್ಷ್ಮ ಸಂಗತಿಗಳು:

  • ಕಂಚಿ ಕಾಮಕೋಟಿ ಪೀಠದಲ್ಲಿ ಉದ್ಯೋಗಿಯಾಗಿದ್ದ ಈ ಶಂಕರರಾಮನ್ ಜಯೇಂದ್ರ kanchi-seer-acquittedಸರಸ್ವತಿ ಸ್ವಾಮಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ. ಅದರ ಹಿಂದಿನ ರಹಸ್ಯ ಆತನ ಕೊಲೆಯೊಂದಿಗೆ ಮುಚ್ಚಿಹೋಯಿತು. ಒಂದು ವೇಳೆ ಆತನ ಬ್ಲಾಕ್‌ಮೇಲ್ ಹಿಂದಿನ ರಹಸ್ಯವನ್ನು ಬೇಧಿಸಿದ್ದರೆ ಇಡೀ ಕೊಲೆ ಪ್ರಕರಣ ಮತ್ತೊಂದು ಆಯಾಮಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ ಈ ದಿಕ್ಕಿನಲ್ಲಿ ತನಿಖಾ ಸಂಸ್ಥೆಗಳು ಗಮನ ಹರಿಸಲಿಲ್ಲ.
  • 181 ಸಾಕ್ಷಿಗಳ ಪೈಕಿ ಸುಮಾರು 80 ಸಾಕ್ಷಿಗಳು ವಿಚಾರಣೆಯ ಸಂದರ್ಭದಲ್ಲಿ ಪೋಲೀಸರ ವರದಿಗಳಿಗೆ ವ್ಯತಿರಿಕ್ತ ಹೇಳಿಕೆಗಳನ್ನು ದಾಖಲಿಸಿ ಇಡೀ ಪ್ರಕರಣವೇ ದಾರಿತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರ ಹಿಂದಿನ ತಂತ್ರಗಳನ್ನು ತನಿಖೆಗೆ ಒಳಪಡಿಸಲು ತನಿಖಾ ಸಂಸ್ಥೆಗಳು ಆಸಕ್ತಿ ತೋರಲಿಲ್ಲ.
  • ಶಂಕರರಾಮನ್ ಅವರ ಕುಟುಂಬ ಇಡೀ ಪ್ರಕರಣದ ಆರಂಭದಲ್ಲಿ ಜಯೇಂದ್ರ ಸ್ವಾಮಿಯನ್ನು ಕೊಲೆಯ ಆರೋಪಿಯೆಂದು ಹೇಳಿಕೆ ನೀಡಿ ಕೆಲವು ವರ್ಷಗಳ ನಂತರ ಇದೇ ಸ್ವಾಮಿ ನಿರ್ದೋಷಿಯೆಂದು ಹೇಳಿಕೆ ನೀಡಿ ತನಿಖೆಯನ್ನು ದಿಕ್ಕುತಪ್ಪಿಸಿದರು.
  • ಕೆಲವು ತಿಂಗಳುಗಳ ಹಿಂದೆ ಅಂದರೆ 21 ನೇ ಮಾರ್ಚ 2013 ರಂದು ಶಂಕರರಾಮನ್ ಹತ್ಯೆಯ ಆರೋಪಿಗಳಲ್ಲೊಬ್ಬನಾದ ಕಾಥೀವರನ್ನನ್ನು ಚೆನ್ನೈನಲ್ಲಿ ಮರ್ಡರ್ ಮಾಡಲಾಗುತ್ತದೆ.
  • ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತಿರುವ ಜಡ್ಜ್ ಅವರ ಮೊಬೈಲ್ ಫೋನ್‌ಗೆ ಬೆದರಿಕೆ ಕರೆಗಳು ಬಂದಿತ್ತು ಎಂದು ಸಹ ಆಗ ಸುದ್ದಿಯಾಗಿತ್ತು.

2004 ರಂದು (ಆದರ ಹಿಂದಿನ ಉದ್ದೇಶಗಳೇನೆ ಇರಲಿ) ಅಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತ ಈ ಜಯೇಂದ್ರ ಸರಸ್ವತಿ ಸ್ವಾಮಿಯಂತಹ ಪ್ರಭಾವಶಾಲಿಯನ್ನು ಬಂಧಿಸುವ ದಿಟ್ಟತನ ತೋರಿದ್ದರು. ಸರಿಯಾಗಿ ಒಂಬತ್ತು ವರ್ಷಗಳ ನಂತರ ಇಂದುjayalalitha ಜಯಲಲಿತ ಅವರು ಮತ್ತೆ ಮುಖ್ಯಮಂತ್ರಿಯಾಗಿರುವಂತಹ ಸಂದರ್ಭದಲ್ಲಿಯೇ ಈ ಕಂಚಿಪೀಠದ ಸ್ವಾಮಿಯನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಜಯಲಲಿತ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವರೇ?? ಆ ಮೂಲಕ 2004 ರ ತಮ್ಮ ನಿರ್ಣಯವನ್ನು ಎತ್ತಿ ಹಿಡಿಯುವರೇ?? ಈ ಪ್ರಶ್ನೆ ಇಂದು ಹೊರಳು ದಾರಿಯಲ್ಲಿ ನಿಂತಿದೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ಜಯಲಲಿತ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಕೈಗೊಂಡರೆ ಸದ್ಯಕ್ಕೆ ಈ ಕಂಚಿ ಸ್ವಾಮಿ ನಿಟ್ಟುಸಿರುಬಿಡಬಹುದು.

ಆದರೆ ಮಠಗಳು ಅದರ ಸ್ವಾಮಿಗಳು ಈ ರೀತಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಆರೋಪಮುಕ್ತಗೊಂಡರೆ ಪ್ರಜಾಪ್ರಭುತ್ವದ ಆಶಯಗಳು ಭಗ್ನಗೊಳ್ಳುತ್ತವೆ. ಏಕೆಂದರೆ ಪವರ್ ಪಾಲಿಟಿಕ್ಸ್‌ನಲ್ಲಿ ಪಳಗಿದ ಈ ಜಯೇಂದ್ರ ಸರಸ್ವತಿ ಸ್ವಾಮೀಜಿ ಈ ತೀರ್ಪಿನಿಂದ ಮರಳಿ ಅಖಾಡಕ್ಕೆ ಇಳಿಯುವ ಸಾಧ್ಯತೆಗಳಿವೆ. ಆರೆಸಸ್ ಮತ್ತು ಬಿಜೆಪಿಗೆ ಹತ್ತಿರದಲ್ಲಿರುವ ಈ ಸ್ವಾಮಿ ಮುಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳು ಇವೆ. ಮಸಲ 2014 ರ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದ ಪಕ್ಷದಲ್ಲಿ ಈ ಜಯೇಂದ್ರ ಸರಸ್ವತಿ ಸಂಘಪರಿವಾರದ ಪರವಾಗಿ ಸಂಧಾನಕಾರನಾಗಿ ನಿಯೋಜಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ 1999 ರಿಂದ 2004 ರವರೆಗೆ ಈ karunanidhi_dynastyಸ್ವಾಮಿಯ ದೆಹಲಿಯ ಹಾರಾಟಗಳನ್ನು ಒಮ್ಮೆ ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಆಗ ವಾಜಪೇಯಿ ಮತ್ತು ಅಡ್ವಾನಿ ಮತ್ತು ಸುಷ್ಮಾ ಸ್ವರಾಜ್‌ರಂತಹ ಪ್ರಮುಖ ರಾಜಕಾರಣಿಗಳಿಗೆ ಹತ್ತಿರವಾಗಿದ್ದ ಈ ಸ್ವಾಮಿ ಆ ದಿನಗಳಲ್ಲಿ ಅನೇಕ ಬಗೆಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಕಡೆಗೆ ಧರ್ಮನಿರಪೇಕ್ಷಿತ, ಸೆಕ್ಯುಲರ್ ರಾಷ್ಟ್ರವಾದ ಇಂಡಿಯಾದಲ್ಲಿ ಈ ಬ್ರಾಹ್ಮಣ ಹಿಂದುತ್ವದ ಶಕ್ತಿಗಳು ಮರಳಿ ವ್ಯವಸ್ಥೆಯ ಕೇಂದ್ರಕ್ಕೆ ಬಂದು ತಲುಪುತ್ತಿವೆ. ಮತ್ತೊಂದು ಕಡೆ ಫ್ಯಾಸಿಸಂ ಹೂಂಕರಿಸುತ್ತಿದೆ. ಈ ಎರಡೂ ದುಷ್ಟ ಶಕ್ತಿಗಳು ಮೇಳೈಸುವ ದಾರಿಗಳು ಮಾತ್ರ ಇಂದಿಗೂ ತೊಡಕಿನದಾಗಿದ್ದು ಅಷ್ಟರ ಮಟ್ಟಿಗೆ ಈ ದೇಶ ಸೇಫ್.

[ಈ ಹಿನ್ನೆಲೆಯಲ್ಲಿ ಚಿಂತಕ ಕಂಚ ಐಲಯ್ಯನವರು 29 ನೇ ಜನವರಿ, 2005 ರಂದು ’ತೆಹೆಲ್ಕ’ ಪತ್ರಿಕೆಗೆ ಬರೆದ ಲೇಖನವನ್ನು ಇಂದಿಗೂ ಪ್ರಸ್ತುತವೆನ್ನುವ ಕಾರಣಕ್ಕಾಗಿ ಇಲ್ಲಿ ಅನುವಾದಿಸಿ ಕೊಡಲಾಗಿದೆ. ಇದು ಜಯೇಂದ್ರ ಸರಸ್ವತಿ ಸ್ವಾಮಿಯ ಬಂಧನದ ಹಿನ್ನೆಲೆಯಲ್ಲಿ ಬರೆದ ಲೇಖನ:]

– ಕಂಚ ಐಲಯ್ಯ

ಹಿಂದೂ ಬ್ರಾಹ್ಮಣತ್ವ ಇಂದು ಆಳವಾದ ನೈತಿಕ ಮತ್ತು ಆಧ್ಯಾತ್ಮಿಕ ಬಿಕ್ಕಟ್ಟಿನಲ್ಲಿದೆ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ (1999-2004) ಕಂಚಿ ಪೀಠದ ಸ್ವಾಮಿ ಜಯೇಂದ್ರ ಸರಸ್ವತಿಗಳು ಬಿಜೆಪಿಯೊಂದಿಗಿನ ಪ್ರಭಾವಳಿಯನ್ನು ಬಳಸಿಕೊಂಡು ಸಾಮಾಜಿಕ-ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ನಡೆಸಿದರೆನ್ನಲಾದ ಅನೇಕ misdeeds ಇಂದು ಅವರ ಕೊರಳಿಗೇ ಗಂಟಾಗುತ್ತಿದೆ. ಆಗಿನ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಈ ಕಂಚಿ ಜಯೇಂದ್ರ ಸ್ವಾಮಿಗಳು ಪ್ರಧಾನ ಮಂತ್ರಿಗಳ ಕಛೇರಿಯೊಂದಿಗೆ ಮತ್ತು ಗೃಹ ಇಲಾಖೆಯೊಂದಿಗೆ ನೇರ ಸಂಪರ್ಕವಿರಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ದೆಹಲಿಯ power centre ಈ ಕಂಚಿ ಸ್ವಾಮಿಗಳಿಗೆ ಅತ್ಯಂತ ಅಪ್ತವಾಗಿತ್ತು. ಆಗಿನ ಸಂದರ್ಭದಲ್ಲಿ ಈ ಕಂಚಿ ಸ್ವಾಮಿಗಳು advani-kanchi-seerಹಿಂದುತ್ವ ಮತ್ತು ಮುಸ್ಲಿಂ ನಾಯಕರ ನಡುವೆ ಸಂಪರ್ಕ ಸೇತುವೆಯಾಗಿದ್ದರು ಮತ್ತು ಆ ಸಂಧಾನಕಾರನ ಅನಭಿಷಿಕ್ತ ಪಟ್ಟವನ್ನು ಸಂಪೂರ್ಣವಾಗಿ ಅನುಭವಿಸಿದ್ದರು. ಆದರೆ ಶಂಕರರಾಮನ್ ಕೊಲೆ ಆರೋಪದ ಮೇಲೆ ಈ ಕಂಚಿ ಸ್ವಾಮಿಗಳ ಬಂಧನ ಮತ್ತು ಸದರಿ ಸ್ವಾಮಿಗಳ ಅಧಿಕಾರದೊಂದಿಗೆ ಅಪವಿತ್ರ ಸಂಬಂಧಗಳು ಇಂದು ಹಿಂದೂ ಸ್ವಾಮಿಗಳು ಶತಮಾನಗಳಿಂದ ಕೊಚ್ಚಿಕೊಳ್ಳುತ್ತಿರುವ ಸೋ ಕಾಲ್ಡ್ ನೈತಿಕತೆಯನ್ನೇ ನಾಶಮಾಡಿದ್ದಲ್ಲದೆ ಈ ಹಿಂದೂ ಸ್ವಾಮಿಗಳನ್ನು ಬೆಂಬಲಿಸುತ್ತಿರುವ ಆರೆಸಸ್ / ಬಿಜೆಪಿ / ವಿಎಚ್‌ಪಿ ಪಕ್ಷಗಳ ನೈತಿಕತೆಯೂ ಅಧ%ಪತನಕ್ಕೀಡಾಗಿದೆ. ಇಂದು ಇವರ ಮಾತುಗಳನ್ನು ತಮಿಳುನಾಡಿನಲ್ಲಾಗಲೀ ಅಥವಾ ಇಂಡಿಯಾದಲ್ಲಿ ಯಾರೂ ನಂಬುತ್ತಿಲ್ಲ.

ಸತ್ಯ ಸಾಯಿಬಾಬ ಅಥವಾ ಮಾತಾ ಅಮೃತಾನಂದಮಯಿರಂತಹವರ ಆಶ್ರಮಗಳಲ್ಲಿ ಯಾವುದೇ ಬಗೆಯ ಬಿಕ್ಕಟ್ಟುಗಳು ತಲೆದೋರಿದರೂ ಅದು ಇಡೀ ಹಿಂದೂ ಧರ್ಮದ ಬಿಕ್ಕಟ್ಟೆಂದು ಪರಿಗಣಿಸುವುದಿಲ್ಲ. ಆದರೆ ಬ್ರಾಹ್ಮಣರ ಕಂಚಿ ಕಾಮಕೋಟಿ ಪೀಠದಲ್ಲಿ ತಲೆದೋರಿರುವ ಬಿಕ್ಕಟ್ಟುಗಳಿಂದ ಇಡೀ ಬ್ರಾಹ್ಮಣ ಹಿಂದುತ್ವಕ್ಕೆ ತೀವ್ರ ಹಿನ್ನಡೆಯುಂಟಾಗಿದೆ .ಇಲ್ಲಿ ಜಯೇಂದ್ರ ಸರಸ್ವತಿಗಳು ಲಕ್ಷಾಂತರ ಭಕ್ತರನ್ನು ನಿಯಂತ್ರಿಸುವ ಅತ್ಯಂತ ಪ್ರಭಾವಶಾಲಿ ಪೀಠವನ್ನು ಅಲಂಕರಿಸಿದ್ದಾರೆ. ಆದಿಶಂಕರರು ಸ್ಥಾಪಿಸಿದ ಐದು ಶಂಕರ ಪೀಠಗಳಲ್ಲಿ ಈ ಕಂಚಿ ಕಾಮಕೋಟಿ ಪೀಠವು ಅತ್ಯಂತ ಕನ್ಸರ್ವೇಟಿವ್ ಆಗಿದೆ. ಆದರೆ ಇಂದು ಈ ಪೀಠ ತೀವ್ರ ಬಿಕ್ಕಟ್ಟಿನಲ್ಲಿದೆ.

ಮತ್ತೊಂದು ಮುಖ್ಯವಾಗಿ ನಮ್ಮನ್ನು ಕಾಡುವುದೇನೆಂದರೆ ಪರಸ್ಪರ ಉತ್ತಮ ಭಾಂಧವ್ಯವನ್ನು ಹೊಂದಿದ್ದ ಈ ಕಂಚಿ ಸ್ವಾಮಿಗಳು ಮತ್ತು ಜಯಲಲಿತರ ನಡುವೆ ಭಿನ್ನಾಭಿಪ್ರಾಯವೇತಕೆ ತಲೆದೋರಿತು? ಆದರೆ ಇದಕ್ಕಿಂತಲೂ ಪ್ರಮುಖವಾದ ಸಮಸ್ಯೆಯೆಂದರೆ ಈ ಕಂಚಿ ಸ್ವಾಮಿಗಳು ಅಧಿಕಾರದ ಶಕ್ತಿಕೇಂದ್ರಗಳ ಬಳಿ, ಅಧಿಕಾರದಲ್ಲಿರುವ ರಾಜಕಾರಣಿಗಳ ಬಳಿ ಪದೇ ಪದೇ ಒಡನಾಡುವುದೇತಕ್ಕೆ? ಈ ದೇಶದ ದೇವಸ್ಥಾನಗಳು ಮತ್ತು ಮಠಗಳು ಇನ್ನೆಷ್ಟು ದಿನಗಳ ಕಾಲ ಈ ಬಗೆಯ ಕೈಮ್‌ಗಳಿಗೆ ಸಾಕ್ಷಿಯಾಗಬೇಕು?

ಈ ಕಂಚಿ ಕಾಮಕೋಟಿ ಪೀಠವನ್ನು ಹಿಂದುತ್ವದ ವ್ಯಾಟಿಕನ್ ಎಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ನರಲ್ಲಿ ಇರುವಂತಹ ಕ್ಯಾಥೋಲಿಕ್ಸ್ ಮತ್ತು ಪ್ರೊಟೆಸ್ಟಂಟ್ ಪಂಗಡಗಳಂತೆಯೇ ಈ ಬ್ರಾಹ್ಮಣರಲ್ಲಿಯೂ ಶೈವರು ಮತ್ತು ವೈಷ್ಣವರು ಎನ್ನುವ ಎರಡು ವಿಭಿನ್ನ ಕುಲಗಳಿವೆ. ಈ ಕಂಚಿ ಸ್ವಾಮಿಗಳ ಬಂಧನವನ್ನು ಬಿಜೆಪಿ ಪಕ್ಷವು ರಾಜಕೀಯಗೊಳಿಸುತ್ತಿದೆ (2005 ರಲ್ಲಿ). kanchi-seer-jayalalithaಏಕೆಂದರೆ ಈ ಕಂಚಿ ಜಯೇಂದ್ರ ಸ್ವಾಮಿಗಳು ಹಿಂದುತ್ವ ಐಡಿಯಾಲಿಜಿಯ ಪ್ರತಿಪಾದಕರು. ಮೊನ್ನೆಯವರೆಗೂ ಜಯಲಲಿತರನ್ನು ಹಿಂದೂ ಧರ್ಮದ ರಕ್ಷಕಿ ಎಂದು ಹೊಗಳುತ್ತಿದ್ದ ಬಿಜೆಪಿ ಪಕ್ಷ ಇಂದು ಈ ಸ್ವಾಮಿಗಳನ್ನು ಬಂಧಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಿದೆ. ಮನುವಾದವು ಬ್ರಾಹ್ಮಣನನ್ನು ಕಾನೂನಿಗಿಂತಲೂ ಮಿಗಿಲಾದ, ಕಾನೂನನ್ನು ಮೀರಿದ ದೈವಾಂಶವುಳ್ಳವನು ಎಂದು ಪ್ರತಿಪಾದಿಸತ್ತದೆ. ಇಂದು ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಬೆಂಬಲಿಸುವುದರ ಮೂಲಕ ಬಿಜೆಪಿ ಪಕ್ಷವೂ ಸಹ ಈ ಮನುವಾದವನ್ನು ಅನುಮೋದಿಸುತ್ತದೆ. ಈ ಬಿಜೆಪಿಯಂತಹ ಪ್ರಮುಖ ರಾಜಕೀಯ ಪಕ್ಷವು ಬ್ರಾಹ್ಮಣತ್ವದ, ಮನುಧರ್ಮ ಪ್ರತಿಪಾದಿಸುವ ಪಕ್ಷವಾಗಿ ಹೊರಹೊಮ್ಮಿದರೆ ಇಂಡಿಯಾದ ಸಂವಿಧಾನದ ಹಿತಾಸಕ್ತಿಗಳೇ ನಾಶಗೊಳ್ಳುತ್ತವೆ.

ಐತಿಹಾಸಿಕವಾಗಿ ಹಿಂದೂ ಧರ್ಮದ ಶಂಕರ ಪೀಠಾದಿಪತಿಗಳು ತಮ್ಮನ್ನು ಆದರ್ಶಪುರುಷರೆಂದೇ ಬಿಂಬಿಸಿಕೊಳ್ಳುತ್ತಾರೆ. ಆದರೆ ಇಂದು ಕೊಲೆ ಆಪಾದನೆಗೊಳಗಾಗಿರುವ ಕಂಚಿ ಜಯೇಂದ್ರ ಸ್ವಾಮಿಗಳ ನಡತೆಗಳು ಬೇರೆಯದನ್ನೇ ಮನವರಿಕೆ ಮಾಡಿಕೊಡುತ್ತವೆ. ಅಷ್ಟೇಕೆ ಮನುವಾದವನ್ನು ಉಸಿರಾಡುತ್ತಿರುವ ಇಂಡಿಯಾದ ವ್ಯವಸ್ಥೆಯೂ ಸಹ ಈ ಶಂಕರಾಚಾರ್ಯರು ಮತ್ತು ಅವರ ಪೀಠಗಳು ಪ್ರಶ್ನಾತೀತರು ಎಂದೇ ಜನತೆಗೆ ಬೋಧಿಸುತ್ತಿದ್ದರು. ಹಾಗಿದ್ದಲ್ಲಿ ಇಂದು ಕೊಲೆ ಆರೋಪಕ್ಕೆ ಒಳಗಾಗಿರುವ ಸ್ವಾಮಿಗಳ ಪರವಾಗಿ ಮೃದು ಧೋರಣೆ ವ್ಯಕ್ತಪಡಿಸುತ್ತಿರುವ ಇಲ್ಲಿನ ವ್ಯವಸ್ಥೆ ಮುಂದಿನ ತಲೆಮಾರಿಗೆ ಯಾವ ಸಂದೇಶವನ್ನು ರವಾನಿಸುತ್ತಿದೆ?

ಉದಾಹರಣೆಗೆ ಈ ಮಠಗಳ ಸಾಂಸ್ಕೃತಿಕ ಪರಂಪರೆಯನ್ನೇ ಗಮನಿಸಿ. ಸಮುದ್ರವನ್ನು ದಾಟಬಾರದೆಂದು ಇವರ ಒಂದು ಕಟ್ಟುಪಾಡು. ಒಂದು ಶಾಸನ. ಆದರೆ 2001 ರಲ್ಲಿ ಪುರಿ ಪೀಠದ ಸ್ವಾಮಿಗಳು ಸಮುದ್ರವನ್ನು ದಾಟಿ ಅಮೇರಿಕಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಹಿಂದೂ ಧರ್ಮದ ಪರವಾಗಿ ಉಪನ್ಯಾಸಗಳನ್ನು ನೀಡಿದ್ದರು. ಇಂದು ಈ ಕಂಚಿ ಸ್ವಾಮಿಗಳು ಕೊಲೆ ಆರೋಪ ಎದುರಿಸುತ್ತಿದ್ದಾರೆ. ಆದರೆ ಸಮಾಜ ಮಾತ್ರ ಇಂದು ಇವರ ಬೆಂಬಲಕ್ಕಿದೆ!! ತಮಗೆ ಅನುಕೂಲವಾಗುವ ಹಾಗಿದ್ದಲ್ಲಿ ಧರ್ಮದ ಕಟ್ಟುಪಾಡುಗಳನ್ನು ಬದಲಾಯಿಸಬಲ್ಲ ಈ ವ್ಯವಸ್ಥೆ ಅಸ್ಪೃಶ್ಯತೆ ಮತ್ತು ಸ್ತ್ರೀ ವಿಮೋಚನೆ ಕುರಿತಾಗಿ ಮಾತ್ರ ಧರ್ಮಶಾಸ್ತ್ರದ ನೀತಿನಿಯಮಗಳನ್ನು ಬೋಧಿಸುತ್ತದೆ. ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ಹಟ ಹಿಡಿಯುತ್ತದೆ. ಇದೆಂತಹ ವಿಪರ್ಯಾಸ!

1 thought on “ಕಂಚಿ ಸ್ವಾಮೀಜಿ ಮತ್ತು ಪ್ರಜಾಪ್ರಭುತ್ವ : ಒಂದು ನೈತಿಕ ಬಿಕ್ಕಟ್ಟು

  1. J P

    sakalikavada Lekhana. Brahmanyada bikkattannu Deshada Bikkattu antha boodhisikonde bandiruvudu hosathalla. Adre jana buddhivantharagabekaste.

    Reply

Leave a Reply

Your email address will not be published.